ಹೃದಯಸ್ಪರ್ಶಿ ಕಥೆಗೆ, ಭಾವುಕ ಅಭಿನಯದ ಮೆರುಗು ಸೀಕ್ರೆಟ್ ಸೂಪರ್‌ಸ್ಟಾರ್

Update: 2017-10-29 06:29 GMT

ಕನಸುಗಳನ್ನು ಕಟ್ಟಿಕೊಳ್ಳುವುದು ಸುಲಭ. ಆದರೆ ಅದನ್ನು ನನಸುಗೊಳಿಸುವುದು ಮಾತ್ರ ಕಲ್ಲುಮುಳ್ಳಿನ ದಾರಿಯಲ್ಲಿ ನಡೆದಷ್ಟು ಕಠಿಣ. ಅದ್ವೈತ್ ಚಂದನ್ ನಿರ್ದೇಶನದ ‘ಸಿಕ್ರೇಟ್ ಸೂಪರ್‌ಸ್ಟಾರ್’, ಬಾಲಕಿಯೊಬ್ಬಳು ತನ್ನ ಕನಸನ್ನು ಸಾಕಾರಗೊಳಿಸಿದ ಕಥೆಯನ್ನು ಹೇಳುತ್ತದೆ. ಅಸಾಧಾರಣವಾದ ಪ್ರತಿಭೆಯನ್ನು ಯಾವತ್ತೂ ಬಚ್ಚಿಡಲು ಅಥವಾ ಹತ್ತಿಕ್ಕಲು ಸಾಧ್ಯವಿಲ್ಲ. ಒಂದಲ್ಲ ಒಂದು ದಿನ ಅದು ಬೆಳಕಿಗೆ ಬಂದೇ ಬರುವುದೆಂಬ ಅದ್ಭುತವಾದ ಸಂದೇಶವನ್ನು ನಮ್ಮ ಹೃದಯಕ್ಕೆ ತಲುಪಿಸಿದೆ.

 ಬಾಲಿವುಡ್‌ನ ‘ಮಿಸ್ಟರ್ ಪರ್‌ಫೆಕ್ಟ್’್ಟ ಆಮಿರ್‌ಖಾನ್ ನಿರ್ಮಾಣದ ಚಿತ್ರಗಳೆಂದರೆ ಪ್ರೇಕ್ಷಕರು ಬಹಳಷ್ಟು ನಿರೀಕ್ಷೆಗಳನ್ನು ಕಟ್ಟಿಕೊಂಡಿರುತ್ತಾರೆ. ಅದರಲ್ಲೂ ಆತ ಚಿತ್ರದಲ್ಲಿ ನಟಿಸಿದ್ದರೆ, ನಿರೀಕ್ಷೆಗಳೂ ಇನ್ನೂ ಹೆಚ್ಚಾಗಿರುತ್ತವೆ. ಸೀಕ್ರೆಟ್ ಸೂಪರ್‌ಸ್ಟಾರ್ ಪ್ರೇಕ್ಷಕರ ಆಶೋತ್ತರಗಳನ್ನು ಪ್ರಾಮಾಣಿಕವಾಗಿ ಈಡೇರಿಸಿದೆಯೆಂಬುದರಲ್ಲಿ ಎರಡು ಮಾತಿಲ್ಲ. ಅಷ್ಟೇ ಅಲ್ಲ, ಈ ವರ್ಷದ ಬಾಲಿವುಡ್‌ನ ಅತ್ಯಂತ ಶ್ರೇಷ್ಠ ಚಿತ್ರಗಳಲ್ಲಿ ಸೂಪರ್‌ಸ್ಟಾರ್ ಕೂಡಾ ಒಂದೆಂಬುದಾಗಿ ನಿಸ್ಸಂದೇಹವಾಗಿ ಹೇಳಬಹುದು

 ತನ್ನ ಕನಸನ್ನು ನನಸುಗೊಳಿಸಲು ಹೊರಟಾಗ ಅಡ್ಡಿ ಆತಂಕಗಳನ್ನು ಎದುರಿಸುವ ಬಾಲ ಗಾಯಕಿಯೊಬ್ಬಳ ಕಥೆಯನ್ನು ಸೀಕ್ರೆಟ್ ಸೂಪರ್‌ಸ್ಟಾರ್ ಅತ್ಯಂತ ಮನೋಹರವಾಗಿ ತೆರೆಯಮುಂದಿಟ್ಟಿದೆ. ಇನ್ಸಿಯಾ (ಝೈರಾ ವಾಸಿಂ) ವಡೋದರಾದ ಓರ್ವ ಮಧ್ಯಮವರ್ಗದ ಶಾಲಾ ಬಾಲಕಿ. ಮಧುರ ಕಂಠದ ಈ ಬಾಲಕಿ ತಾನೋರ್ವ ಶ್ರೇಷ್ಠ ಗಾಯಕಿಯಾಗುವ ಕನಸನ್ನು ಕಟ್ಟಿಕೊಂಡಿರುತ್ತಾಳೆ. ತಾಯಿ ನಜ್ಮಾ (ಮೆಹೆರ್ ವಿಜ್) ಇನ್ಸಿಯಾಳ ಕನಸಿಗೆ ಬೆಂಬಲವಾಗಿ ನಿಲ್ಲುತ್ತಾಳೆ. ಆದರೆ ಆಕೆಯ ತಂದೆ ಫಾರೂಖ್ (ರಾಜ್ ಅರ್ಜುನ್) ಕಟ್ಟಾ ಸಂಪ್ರದಾಯವಾದಿ. ಗಾಯಕಿಯಾಗಬೇಕೆಂಬ ಮಗಳ ಆಕಾಂಕ್ಷೆಯನ್ನು ಖಂಡತುಂಡವಾಗಿ ವಿರೋಧಿಸುತ್ತಿರುತ್ತಾನೆ. ಬಲಪ್ರಯೋಗದಿಂದ ಹಿಡಿದು ಇನ್ಸಿಯಾಳ ಗಿಟಾರ್‌ನ್ನು ಒಡೆದುಹಾಕುವ ತನಕ ಎಲ್ಲ ರೀತಿಯಲ್ಲೂ ಅಡ್ಡಿಪಡಿಸುತ್ತಾನೆ. ಆದಾಗ್ಯೂ, ಇನ್ಸಿಯಾ ಹಿಂಜರಿಯದೆ ತನ್ನ ಸಾಧನೆಯ ಹಾದಿಯಲ್ಲಿ ಸಾಗುತ್ತಾಳೆ.
 ಇನ್ಸಿಯಾ ಇಂಟರ್‌ನೆಟ್ ಬಳಸಿಕೊಂಡು, ತನ್ನ ಗಾಯನದ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾಳೆ. ತನ್ನ ಗುರುತನ್ನು ಮರೆಮಾಚಲು ಕೇವಲ ಕಣ್ಣುಗಳು ಮಾತ್ರವೇ ಕಾಣುವಂತೆ ಬುರ್ಖಾ ಧರಿಸಿ, ಹಾಡುತ್ತಾಳೆ. ಆದರೆ ಅಚ್ಚರಿಯೆಂಬಂತೆ ಆಕೆಯ ಹಾಡಿನ ವೀಡಿಯೊಗಳು ವೈರಲ್ ಆಗಿಬಿಡುತ್ತವೆ. ಇಷ್ಟು ಹೊತ್ತಿಗೆ ಇನ್ಸಿಯಾಗೆ, ಯಶಸ್ವಿ ಸಂಗೀತ ನಿರ್ದೇಶಕ ಶಕ್ತಿ ಕುಮಾರ್ (ಆಮಿರ್‌ಖಾನ್)ನನ್ನು ಭೇಟಿಯಾಗುವ ಸಂದರ್ಭ ದೊರೆಯುತ್ತದೆ. ಆನಂತರ ಏನಾಗುತ್ತದೆ, ಇನ್ಸಿಯಾಳ ಕನಸು ನನಸಾಗುವುದೇ ಎಂಬುದೇ ಚಿತ್ರದ ಇನ್ನುಳಿದ ಕತೆಯಾಗಿದೆ.

  ಚಿತ್ರ ಮುಂದೆ ಸಾಗುತ್ತಾ ಇದ್ದಂತೆ, ಸೀಕ್ರೆಟ್ ಸೂಪರ್‌ಸ್ಟಾರ್ ಪ್ರೇಕ್ಷಕನನ್ನು ತನ್ನಿಂತಾನೆ ಆವರಿಸಿಕೊಳ್ಳುತ್ತಾ ಹೋಗುತ್ತದೆ. ಕೆಲವು ಸನ್ನಿವೇಶಗಳು ನಗೆಯ ಹೊನಲನ್ನು ಹರಿಸಿದರೆ, ಇನ್ನು ಕೆಲವು ದೃಶ್ಯಗಳು ನಿಮ್ಮ ಕಣ್ಣುಗಳನ್ನು ತೇವಗೊಳಿಸುತ್ತವೆ. ಎರಡೂವರೆ ತಾಸುಗಳ ಅವಧಿಯ ಈ ಚಿತ್ರದಲ್ಲಿ ವೈವಿಧ್ಯಮಯ ಭಾವನೆಗಳ ಮೂಲಕ ನೀವು ಹಾದುಹೋಗುವುದಂತೂ ಖಂಡಿತ. ಇಂದಿನ ದಿನಗಳಲ್ಲಿ 2 ತಾಸಿಗಿಂತಲೂ ಕಡಿಮೆ ಅವಧಿಯೊಂದಿಗೆ ತ್ವರಿತವಾಗಿ ಸಾಗುವ ಚಿತ್ರಗಳನ್ನು ಇಷ್ಟಪಡುವ ಪ್ರೇಕ್ಷಕರೇ ಹೆಚ್ಚು. ಆದಾಗ್ಯೂ ಸೀಕ್ರೆಟ್ ಸೂಪರ್‌ಸ್ಟಾರ್, ಅತ್ಯಂತ ವೇಗದಲ್ಲೂ ಸಾಗದೆ, ಹಾಗೆಂದು ತುಂಬಾ ಎಳೆಯಲ್ಪಡದೆ, ಲವಲವಿಕೆಯೊಂದಿಗೆ ಮುನ್ನಡೆಯುತ್ತದೆ.

  ನಿರ್ದೇಶಕ ಅದ್ವೆತ್ ಎಲ್ಲಾ ಪಾತ್ರಗಳನ್ನು ಅತ್ಯಂತ ಚೊಕ್ಕವಾಗಿ ನಿರೂಪಿಸಿದ್ದಾರೆ. ಪಾತ್ರಗಳಿಗೆ ಪ್ರಾಶಸ್ತ್ಯ ನೀಡುವುದಕ್ಕಿಂತಲೂ ಹೆಚ್ಚಾಗಿ ಕಥಾವಸ್ತುವಿಗೆ ತನ್ನ ನಿಷ್ಠೆಯನ್ನು ಪ್ರದರ್ಶಿಸಿದ್ದಾರೆ. ಇನ್ಸಿಯಾಳ ಮುಂಗೋಪಿ ತಂದೆಯ ಪಾತ್ರದಲ್ಲಿ ರಾಜ್‌ಅರ್ಜುನ್ ಅಭಿನಯ ಎಷ್ಟು ಪರಿಣಾಮಕಾರಿಯಾಗಿದೆಯೆಂದರೆ, ಪ್ರೇಕ್ಷಕರಲ್ಲೂ ಉದ್ವಿಗ್ನತೆಯ ಭಾವ ಸೃಷ್ಟಿಯಾಗಿಬಿಡುತ್ತದೆ. ಕ್ಲೈಮಾಕ್ಸ್‌ಗಿಂತ ಮೊದಲಿನ 20-25 ನಿಮಿಷಗಳು ಅತ್ಯದ್ಭುತವಾಗಿದ್ದು, ಪ್ರೇಕ್ಷಕರನ್ನು ಸೀಟಿನ ಅಂಚಿನಲ್ಲಿ ಕೂರಿಸಿಬಿಡುತ್ತದೆ. ತಾಯಿ-ಮಗಳ ಬಾಂಧವ್ಯವನ್ನು ಕೂಡಾ ನಿರ್ದೇಶಕರು ಕಣ್ಣಿಗೆ ಕಟ್ಟುವಂತೆ ನಿರೂಪಿಸಿದ್ದಾರೆ. ಝೈರಾ ಹಾಗೂ ಆಕೆಯ ಸಹಪಾಠಿ ತೀರ್ಥ್ ಅವರ ಸುಮಧುರ ಸ್ನೇಹ ಕೂಡಾ ಅತ್ಯಂತ ಚೊಕ್ಕವಾಗಿ ಮೂಡಿದೆ.

ನಿರ್ದೇಶಕ ಅದ್ವೈತ್‌ಗೆ ಇದು ಚೊಚ್ಚಲ ಚಿತ್ರವಾದರೂ, ಪ್ರತಿಯೊಂದು ಸನ್ನಿವೇಶಗಳನ್ನು ಅತ್ಯಂತ ಸಂವೇದನೆಯೊಂದಿಗೆ ನಿಭಾಯಿಸಿದ್ದಾರೆ. ನಮ್ಮ ಸಮಾಜದಲ್ಲಿ ಆಳವಾಗಿ ಬೇರುಬಿಟ್ಟಿರುವ ಕರ್ಮಠ ಸಂಪ್ರದಾಯವಾದಿ ಮನಸ್ಥಿತಿಗೆ ಈ ಚಿತ್ರ ಕನ್ನಡಿ ಹಿಡಿದಿದೆ ಮಾತ್ರವಲ್ಲ, ಸ್ತ್ರೀ ಸಬಲೀಕರಣದ ಬಗ್ಗೆಯೂ ಧ್ವನಿಯೆತ್ತಿದೆ.

ಯಾವುದೇ ಗೊಂದಲಕ್ಕೂ ಎಡೆಯಿಲ್ಲದ ಚಿತ್ರಕಥೆ, ಸರಳವಾದ ಸಂಭಾಷಣೆ ಹಾಗೂ ಹೃದಯಸ್ಪರ್ಶಿ ಹಾಡುಗಳಿಂದ ಸೀಕ್ರೆಟ್ ಸೂಪರ್‌ಸ್ಟಾರ್ ನಮ್ಮನ್ನು ಮಂತ್ರಮುಗ್ಧ ಗೊಳಿಸುತ್ತದೆ.

 ಹಾಗೆಂದು ಈ ಚಿತ್ರದಲ್ಲಿ ಲೋಪಗಳೇ ಇಲ್ಲವೆಂದಲ್ಲ. ಉತ್ತರಾರ್ಧದ ಮಧ್ಯದಲ್ಲಿ ಕೆಲವು ಸನ್ನಿವೇಶಗಳನ್ನು ಅನಗತ್ಯವಾಗಿ ಎಳೆದಾಡಿದಂತೆ ಭಾಸವಾಗುತ್ತದೆ.

ಅಭಿನಯದ ವಿಷಯಕ್ಕೆ ಬಂದಾಗ ಬಾಲನಟಿ ಝೈರಾಗೆ ಫುಲ್‌ಮಾರ್ಕ್ಸ್ ನೀಡಲೇಬೇಕು. ದಂಗಲ್‌ನಲ್ಲಿ ದಂಗುಬಡಿಸುವ ಅಭಿನಯ ನೀಡಿದ್ದ ಈಕೆ ಈ ಚಿತ್ರದಲ್ಲೂ ತನ್ನ ಅಭಿನಯ ಸಾಮರ್ಥ್ಯವನ್ನು ಮೆರೆದಿದ್ದಾಳೆ ಮುಂದಿನದಿನಗಳಲ್ಲಿ ಈಕೆ ಬಾಲಿವುಡ್‌ಗೆ ಬಹುದೊಡ್ಡ ಆಸ್ತಿಯಾಗುವುದಂತೂ ಖಂಡಿತ. ಚಿತ್ರದ ಕ್ಲೈಮಾಕ್ಸ್‌ಗೆ ಮೊದಲಿನ ಸನ್ನಿವೇಶವೊಂದಲ್ಲಿ ಆಕೆಯ ಭಾವಾವೇಶದ ಅಭಿನಯವು ಆಕೆ, ಪ್ರತಿಭೆಯ ಅಗರವೆಂಬುದನ್ನು ಸಾಬೀತುಪಡಿಸಿದೆ. ಝೈರಾಳ ಸಾಧನೆಯ ಪಥದಲ್ಲಿ ಮಾರ್ಗದರ್ಶಕನಾಗಿ ಆಮಿರ್‌ಖಾನ್ ಅತ್ಯಂತ ಲೀಲಾಜಾಲದ ಅಭಿನಯ ನೀಡಿದ್ದಾರೆ.

ಝೈರಾ ತಾಯಿಯ ಪಾತ್ರಕ್ಕೆ ಮೆಹೆರ್ ಜೀವತುಂಬಿದ್ದಾರೆ. ರಾಜ್ ಅರ್ಜುನ್ ಅಭಿನಯವಂತೂ ಪ್ರತ್ಯೇಕವಾಗಿ ಗಮನಸೆಳೆಯುತ್ತದೆ. ಚಿತ್ರದ ಇನ್ನೋರ್ವ ಬಾಲನಟ ತೀರ್ಥ್ ಕೂಡಾ ಅತ್ಯಂತ ಸಹಜವಾಗಿ ನಟಿಸಿದ್ದಾನೆ. ಬಡಿ ಅಪ್ಪಾ ಪಾತ್ರದಲ್ಲಿ ಫಾರೂಕ್ ಜಾಫರ್ ಮಿಂಚಿದ್ದಾರೆ. ಇನ್ಸಿಯಾ ಸಹೋದರ ಗುಡ್ಡು ಆಗಿ ಕಬೀರ್ ಸಾಜಿದ್, ಇಷ್ಟವಾಗುತ್ತಾನೆ.

 ಅಮಿತ್ ತ್ರಿವೇದಿ ಅವರ ಸಂಗೀತ ಅತ್ಯಂತ ಹೃದಯ ಸ್ಪರ್ಶಿಯಾಗಿದೆ ಹಾಗೂ ಚಿತ್ರದ ಅಂದವನ್ನು ಹೆಚ್ಚಿಸಿದೆ. ಹಾಡುಗಳ ಪೈಕಿ ’ಮೈ ಕೌನ್ ಹೂನ್’ ನೆನಪಿನಲ್ಲುಳಿಯುವಂತಿದ್ದರೆ, ‘ಮೇರಿ ಪ್ಯಾರಿ ಅಮ್ಮಿ’ ಚೇತೋಹಾರಿಯಾಗಿದೆ. ಅನಿಲ್ ಮೆಹ್ತಾ ಛಾಯಾಗ್ರಹಣ ಚಿತ್ರದ ಸೊಬಗನ್ನು ಹೆಚ್ಚಿಸಿದೆ. ಬಿಗಿಯಾದ ಚಿತ್ರಕಥೆ,ತಾಜಾತನದ ಕಥೆ ಹಾಗೂ ಕಲಾವಿದರ ಅದ್ಭುತ ಅಭಿನಯ ಹಾಗೂ ಹೃದಯಸ್ಪರ್ಶಿ ಸಂಗೀತ ಇವೆಲ್ಲವೂ ಹದವಾಗಿ ಮೇಳೈಸಿರುವ ಸೀಕ್ರೆಟ್ ಸೂಪರ್‌ಸ್ಟಾರ್ ನಿಜಕ್ಕೂ ಸೂಪರ್.

Writer - ಮುಸಾಫಿರ್

contributor

Editor - ಮುಸಾಫಿರ್

contributor

Similar News