ಪರಿಹಾರವಿಲ್ಲದ ಸಮಸ್ಯೆಗಳಿವೆಯೇ?

Update: 2017-10-31 18:48 GMT

ನನ್ನ ಮಕ್ಕಳು ಬಾಲವಾಡಿಯಿಂದ ತೊಡಗಿ ಹೈಸ್ಕೂಲು ಸೇರುವ ಹಂತಕ್ಕೆ ಬಂದಾಗ ಕೃಷ್ಣಾಪುರದ ನಮ್ಮ ವಾಸ್ತವ್ಯಕ್ಕೂ ಒಂದು ದಶಕವಾಯಿತು. ನನ್ನ ಮಕ್ಕಳಂತೆಯೇ ನಮ್ಮ ಸುತ್ತಮುತ್ತಲ ಮನೆಯ ಮಕ್ಕಳೂ ಹಾಗೆಯೇ ಬೆಳೆದು ದೊಡ್ಡವರಾದರು. ಅನೇಕ ಹೆಣ್ಣು ಮಕ್ಕಳು ಪ್ರಾಥಮಿಕ ಶಾಲೆಯ ವಿದ್ಯೆಯೊಂದಿಗೆ ಶಾಲೆಗೂ ವಿದಾಯ ಹೇಳಿ ತಾಯಿ, ಅಕ್ಕಂದಿರೊಂದಿಗೆ ಬೀಡಿ ಸುತ್ತುವ, ಬೀಡಿ ಕಟ್ಟುವ ಕಲಿಕೆಗೆ ಸಿದ್ಧರಾದರು. ಮನೆಯಲ್ಲೇ ದುಡಿಯುವ ಬಾಲ ಕಾರ್ಮಿಕರಾದರು. ಯಾಕೆಂದರೆ ಅವರ ಹೆಸರಲ್ಲಿ ಬೀಡಿಯ ಪಾಸ್ ಪುಸ್ತಕ ಮಾಡಿಸಲು ಸಾಧ್ಯವಿಲ್ಲದ್ದರಿಂದ ಅವರ ಈ ಸಂಪಾದನೆಯ ಹಂತ ಒಂದರ್ಥದಲ್ಲಿ ಟ್ರೈನಿಂಗ್ ಎಂದರೂ ಸರಿಯೇ. ಆದ್ದರಿಂದ ಅವರನ್ನು ಬಾಲ ಕಾರ್ಮಿಕರೆಂದು ನಿಷೇಧಿಸುವುದೂ ಕೂಡಾ ತಪ್ಪಾಗುತ್ತದೆ.

ಇದರೊಂದಿಗೆ ಮನೆಯ ಗೃಹಕೃತ್ಯಗಳನ್ನೂ ಮುಖ್ಯವಾಗಿ ಅಡುಗೆ ಕಲಿಯುವುದೂ ಅಗತ್ಯವೇ ಅಲ್ಲವೇ? ನಾಳಿನ ದಿನಗಳಲ್ಲಿ ಮದುವೆಯಾಗಿ ಹೋಗಬೇಕಾದವರು ಇದಕ್ಕೂ ತಯಾರಿ ನಡೆಸಬೇಕು. ಜೊತೆಗೆ ಆಚೆ ಈಚೆ ಮನೆಯ ಹಿರಿಯ ಮಹಿಳೆಯರ ಪಟ್ಟಾಂಗಕ್ಕೆ ಈಗ ಇವರೂ ಹಾಜರಾಗಿ ಲೋಕ ಜ್ಞಾನದ ಪಾಠಗಳೂ ಇವರಿಗೆ ಪುಕ್ಕಟೆಯಾಗಿ ಸಿಗುವ ಸಮಯವೆಂದರೂ ಸರಿಯೇ. ಹೀಗೆ ಸಿಕ್ಕಿದ ಅನುಭವಗಳನ್ನು ಬದುಕು ಕಟ್ಟಿಕೊಳ್ಳುವುದಕ್ಕೆ ಸರಿಯಾದ ರೀತಿಯಲ್ಲಿ ಬಳಸಿಕೊಂಡು ಯಶಸ್ವಿಯಾದ ಎಷ್ಟೋ ಹೆಣ್ಣು ಮಕ್ಕಳನ್ನು ನೋಡಿದಾಗ ಶಾಲೆ ಕಾಲೇಜು ಕಲಿತು ಲೋಕ ಜ್ಞಾನವಿಲ್ಲದೆ ಬದುಕಿನಲ್ಲಿ ಸೋಲುವವರನ್ನು ಕಂಡಾಗ ನಮ್ಮ ಶಿಕ್ಷಣ ಎಲ್ಲಿ ತಪ್ಪಿದೆ ಎಂಬ ಪ್ರಶ್ನೆ ಕಾಡುತ್ತಿರುವುದೂ ನಿಜವೇ! ಹಿಂದೆಯೇ ಹೇಳಿದಂತೆ ಮೇಲ್ಜಾತಿಯ ಮನೆಯ ಮಕ್ಕಳು, ಹೈಸ್ಕೂಲಿಗೆ ಸೇರಿದರು, ಹೈಸ್ಕೂಲು ಮುಗಿಸಿದವರು ಕಾಲೇಜಿಗೆ ಸೇರಿದರು. ವಿದ್ಯಾವಂತ ಅಬ್ರಾಹ್ಮಣರ ಮನೆಯ ಮಕ್ಕಳಿಗೂ ಈ ಭಾಗ್ಯ ದೊರಕಿತ್ತು. ಇವರಲ್ಲಿ ಹೆಚ್ಚಿನವರು ವಿದ್ಯಾದಾಯಿನಿ ಹೈಸ್ಕೂಲಿಗೆ, ಮುಂದೆ ಗೋವಿಂದ ದಾಸ ಕಾಲೇಜಿಗೆ ಸೇರಿದರೆ, ಬಡವರ ಮನೆಯ ಬೆರಳೆಣಿಕೆಯ ಮಕ್ಕಳು ಕಾಟಿಪಳ್ಳದ 7ನೆ ಬ್ಲಾಕಿನಲ್ಲಿದ್ದ ಹೈಸ್ಕೂಲಿಗೆ ಹಾಗೂ ಅಲ್ಲಿಯೇ ಇದ್ದ ಪದವಿ ಪೂರ್ವ ಕಾಲೇಜಿಗೆ ಸೇರುತ್ತಿದ್ದರು. ಇಂತಹವರಲ್ಲಿ ಒಬ್ಬಾಕೆಯ ಬಗ್ಗೆ ಈಗಾಗಲೇ ಹೇಳಿದ್ದೇನೆ.

ಹೈಸ್ಕೂಲ್ ಹಾಗೂ ಪದವಿಪೂರ್ವ ಕಾಲೇಜಿಗೆ ಹೋಗುವ ಹೆಣ್ಣು ಮಕ್ಕಳು ಜೈವಿಕವಾಗಿ ವೇಗವಾಗಿ ಬೆಳೆಯುವ ಹಾಗೆಯೇ ಹೊರ ನೋಟಕ್ಕೆ ಅವರ ದೈಹಿಕ ಬದಲಾವಣೆಗಳು ನೋಡುವ ಹುಡುಗರಿಗೆ ಕುತೂಹಲದ ವಿಷಯಗಳು. ಅವರ ಕುತೂಹಲದ ಕಣ್ಣುಗಳಿಂದ ತಪ್ಪಿಸಕೊಳ್ಳುವುದು ಅಥವಾ ತಪ್ಪಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಹೆಣ್ಣು ಮಕ್ಕಳಿಗೆ ಮುಜುಗರದ ವಿಷಯಗಳೆಂದರೆ ಇಂದಿನ ತಾಯಂದಿರಿಗೆ ಮತ್ತು ಅವರ ಹೆಣ್ಣು ಮಕ್ಕಳಿಗೆ ಅರ್ಥವಾಗದು ಎಂದರೆ ಹೆಚ್ಚು ಸರಿ. ಯಾಕೆಂದರೆ ಕಾಲ ಸಮಾಜವನ್ನು ಬದಲಾಯಿಸಿದೆಯೋ ಅಥವಾ ಸಮಾಜವೇ ಕಾಲವನ್ನು ಹೀಗೇ ಎಂದು ನಿರ್ಧರಿಸಿದೆಯೇ ಎನ್ನುವುದು ತರ್ಕದ ಸತ್ಯಕ್ಕೆ ಹೊಳೆಯದ ವಿಷಯವಾದರೂ ಹೆಣ್ಣು ಮಕ್ಕಳ ಅನುಭವದ ಸತ್ಯ. ಇಂತಹ ಕಾರಣಗಳಿಂದಲೇ ಹಿಂದೆ ಹೆಣ್ಣು ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸಿದ ಇತಿಹಾಸದ ದಿನಗಳಲ್ಲಿಯೂ ಆಕೆ ಹೆಣ್ಣಿನಿಂದ ಹೆಂಗಸು ಎಂಬ ಹಂತಕ್ಕೆ ಬದಲಾವಣೆಗೊಂಡಾಗ ಆಕೆಯ ವಿದ್ಯೆಗೆ ಕೊನೆಯಾದುದನ್ನು ಕಾಣುತ್ತೇವೆ. ಇಂತಹ ಸಂದರ್ಭಗಳು ಆ ಕಾಲದ ಹೆತ್ತವರ ಆತಂಕ ತಲ್ಲಣಗಳಿಂದಲೇ ಆಗುತ್ತಿದ್ದುದು ಎಂದರೂ ಸರಿಯೇ. ಹಾಗಿದ್ದರೂ ಅಂತಹ ಆತಂಕಗಳನ್ನು ಮೆಟ್ಟಿ ನಿಲ್ಲುವ ಹೆಣ್ಣು ಮಕ್ಕಳ ಆತ್ಮವಿಶ್ವಾಸ, ಅವರ ಮೇಲೆ ಹೆತ್ತವರು ಇಟ್ಟಿರುವ ಭರವಸೆಯಿಂದ ಇಂದು ಹೆಣ್ಣು ಸಾಧಿಸಿದ ಸಾಧನೆಗಳು ಅಪಾರವಾದುದು. ಆದರೂ ಕುಟುಂಬದ ಒಬ್ಬ ಹೆಣ್ಣು ಕಟ್ಟುಪಾಡುಗಳನ್ನು ಮೀರಿದರೆ ಆಗ ಆ ಕುಟುಂಬದ ಇತರ ಸಂಬಂಧಿ ಹೆಣ್ಣು ಮಕ್ಕಳಿಗೆ ಮುಂದಿನ ಶಿಕ್ಷಣ ಇಲ್ಲವಾಗುವುದು ಕೂಡಾ ಸತ್ಯ.

ಹಾಗೆಯೇ ನಮ್ಮ ನೆರೆಹೊರೆಯಲ್ಲಿ ಯಾರಾದರೂ ಹೆಣ್ಣು ಮಗಳು ದಾರಿ ತಪ್ಪಿದರೆ ಪಕ್ಕದ ಮನೆಯ ಹೆತ್ತವರಿಗೆ ತಮ್ಮ ಹೆಣ್ಣು ಮಕ್ಕಳ ಬಗ್ಗೆ ಅನುಮಾನ ಶುರುವಾಗುವುದು ಕೂಡಾ ನಿಜವೇ. ಆದ್ದರಿಂದ ಹೆಣ್ಣು ತನ್ನ ಹಿಂದಿನ ಕಟ್ಟುಪಾಡುಗಳನ್ನು ಮೀರುವಾಗ ಇತರ ಹೆಣ್ಣು ಮಕ್ಕಳಿಗೆ ಆತ್ಮವಿಶ್ವಾಸ ಹೆಚ್ಚಿಸುವಂತೆ ಹೆಜ್ಜೆ ಇಡಬೇಕಾಗುವುದು ಸಾಮಾಜಿಕ ನೆಲೆಯಿಂದಲೂ, ಕೌಟುಂಬಿಕ ನೆಲೆಯಿಂದಲೂ ಮುಖ್ಯವಾಗಿರುತ್ತದೆ ಎಂದು ನಾನು ಒಪ್ಪಿಕೊಂಡವಳೇ. ಹಾಗಿದ್ದರೂ ಒಬ್ಬ ಹೆಣ್ಣು ಮಗಳು ಕಟ್ಟುಪಾಡುಗಳನ್ನು ಮೀರಿದಾಗ ಅವಳ ಬದುಕು ದುರಂತವಾಗದೆ ಆಕೆ ಬದುಕು ಕಟ್ಟಿಕೊಳ್ಳುವುದಕ್ಕೆ ನೆರವಾಗುವುದು ಮಾನವೀಯತೆಯೊಂದಿಗಿನ ಸಹೋದರಿತ್ವ ಎಂದು ಭಾವಿಸುವವಳು ಕೂಡಾ. ಈ ನನ್ನ ಆಲೋಚನೆಗಳೊಂದಿಗೆ ಹದಿಹರೆಯ ಎನ್ನುವುದು ಹೆಣ್ಣು ಮಕ್ಕಳು ತಮ್ಮ ಭವಿಷ್ಯವನ್ನು ನಿರ್ಧರಿಸುವ ಕಾಲಘಟ್ಟವೂ ಹೌದು ಎನ್ನುತ್ತೇನೆ. ಈ ಹಂತದಲ್ಲಿ ಕೆಲವೊಮ್ಮೆ ಸಾಮಾಜಿಕವಾದ ರೂಢಿಗಳ ಹಿನ್ನೆಲೆಯಲ್ಲಿ ತಪ್ಪು ಎನ್ನುವುದನ್ನು ಜೈವಿಕವಾಗಿ ತಪ್ಪು ಎನ್ನಲಾಗುವುದಿಲ್ಲ.

ಜೊತೆಗೆ ಇಂತಹ ತಪ್ಪುಗಳಿಗೆ ಮನೆಯ ಹಿನ್ನೆಲೆಯೂ ಕಾರಣವಾಗಿರುತ್ತದೆ. ಇನ್ನು ಯಾರ ದೃಷ್ಟಿಯಿಂದ ಅದು ತಪ್ಪು ಎನ್ನುವುದು ಕೂಡಾ ಆಲೋಚಿಸಬೇಕಾದ ವಿಷಯವೇ ಆಗಿರುತ್ತದೆ. ಜೊತೆಗೆ ಹದಿಹರೆಯದ ಹುಚ್ಚು ಖೋಡಿ ಮನಸ್ಸಿಗೆ ಕಡಿವಾಣ ಇಲ್ಲದಿರುವುದು ನಿಜವೇ ತಾನೇ? ಹಾಗೆಯೇ ಸುತ್ತಮುತ್ತಲಿನ ಪರಿಸರದ ಪ್ರಭಾವವೂ ಪರೋಕ್ಷವಾಗಿ ಇರುತ್ತದೆ. ನನ್ನೂರಿನ ಸಾಮಾಜಿಕ ಕಟ್ಟಳೆಗಳನ್ನು ಮೀರಿದ ಅಸಮ, ವಿಷಮ, ವಿವಾಹ ಸಂಬಂಧಗಳ ಜೊತೆಗೆ ಸಮರಸದ ಜೀವನ ಸಂಗಾತಿಗಳ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದ್ದೇನೆ. ಇದನ್ನೇ ಪರಿಸರದ ಪ್ರಭಾವ ಎಂದಿರುವುದು.

ಮುಂಬೈಯಲ್ಲಿದ್ದು ಗಂಡನನ್ನು ಕಳೆದುಕೊಂಡ ಹೆಣ್ಣು ಮಗುವಿನ ತಾಯಿ ಸಣ್ಣ ಪ್ರಾಯದವರು ಊರಿಗೆ ಹಿಂದಿರುಗಿದಾಗ ತನ್ನ ಪಣಂಬೂರು ಇಲ್ಲವಾಗಿ ಕಾಟಿಪಳ್ಳದ ಕೃಷ್ಣಾಪುರದಲ್ಲಿ ತನ್ನ ಕುಟುಂಬದ ಖಾಲಿ ಸೈಟನ್ನು ಪಡೆದುಕೊಂಡರು. ಗಂಡ ಬ್ಯಾಂಕ್ ಉದ್ಯೋಗಿಯಾದುದರಿಂದ ಅನುಕಂಪದ ನೆಲೆಯಲ್ಲಿ ಪಣಂಬೂರಿನಲ್ಲಿದ್ದ ಬ್ಯಾಂಕಲ್ಲಿ ಸಣ್ಣ ಹುದ್ದೆಯೊಂದು ದೊರಕಿತ್ತು. ಆ ಹಿನ್ನೆಲೆಯಲ್ಲೇ ಬ್ಯಾಂಕಿನ ಸಾಲದಲ್ಲಿ ಸಣ್ಣ ಮನೆಯೊಂದನ್ನು ಕಟ್ಟಿಕೊಂಡು ಒಂಟಿ ಜೀವನ ನಡೆಸುತ್ತಿದ್ದರು. ಮಗಳು ಪ್ರಾಥಮಿಕ ಶಾಲೆ ಓದುತ್ತಿದ್ದಳು. ಮುಂಬೈ ಎಂಬ ಊರಿನಲ್ಲಿ ಕೆಲವೇ ವರ್ಷಗಳಿದ್ದುದಾದರೂ, ವಿದ್ಯೆ ಹೆಚ್ಚಿಲ್ಲದಿದ್ದರೂ ಲೋಕಜ್ಞಾನವಿತ್ತು.

ತನಗೆ ವಿದ್ಯಾಭ್ಯಾಸವಿಲ್ಲದ ಕೊರತೆಯನ್ನು ಅರಿತವಳಾಗಿ ಮಗಳನ್ನು ವಿದ್ಯಾವಂತಳನ್ನಾಗಿ ಮಾಡಿ ಅವಳೊಂದು ಕೆಲಸಕ್ಕೆ ಸೇರಿ ಆರ್ಥಿಕವಾಗಿ ಸ್ವತಂತ್ರಳಾಗಬೇಕೆಂದು ಹೇಳಿಕೊಳ್ಳುತ್ತಿದ್ದರು. ಪ್ರಾಥಮಿಕ ಶಾಲೆ ಮುಗಿಸಿದ ಮಗಳು ಕಾಟಿಪಳ್ಳದ ಸರಕಾರಿ ಪ್ರೌಢ ಶಾಲೆಗೆ ಸೇರಿದಳು. ಕಲಿಯುವುದರಲ್ಲಿ ಚುರುಕಾಗಿದ್ದ ಆಕೆಗೆ ಪಾಸಾಗುವುದೇನೂ ಕಷ್ಟವಾದ ವಿಚಾರವಾಗಿರಲಿಲ್ಲ. ಆದರೆ ಎಸೆಸೆಲ್ಸಿಯಲ್ಲಿರುವಾಗ ಮುಖ್ಯವಾಗಿ ಗಣಿತ ಹಾಗೂ ಇಂಗ್ಲಿಷ್ ವಿಷಯಗಳ ಕಷ್ಟದ ಪಾಠಗಳನ್ನು ಕೇಳಲು ನಮ್ಮ ಮನೆಗೆ ಬರುತ್ತಿದ್ದಳು. ಎಸೆಸೆಲ್ಸಿಯಲ್ಲಿ ಉತ್ತಮ ಅಂಕಗಳೊಂದಿಗೆ ಪಾಸಾದ ಆಕೆಯನ್ನು ಅಲ್ಲೇ ಇದ್ದ ಪದವಿಪೂರ್ವ ಕಾಲೇಜಿಗೂ ಸೇರಿಸಿದ್ದಾಯಿತು. ನಮ್ಮ ಮನೆಯ ದಾರಿಯಲ್ಲೇ ಅವಳ ಮನೆಯೂ ಇದ್ದುದು. ಅದೇ ದಾರಿಯಲ್ಲಿ ಮುಖ್ಯ ರಸ್ತೆಯ ಸಮೀಪ ಪುಟ್ಟಪ್ಪಯ್ಯನವರ ಅಂಗಡಿಯೂ ಇತ್ತು. ಆ ಅಂಗಡಿಯ ಕಟ್ಟಡದಲ್ಲಿ ಮಹಡಿಯೂ ಇತ್ತು. ಆ ಮಹಡಿಯಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ಮೂವರು ಉಪನ್ಯಾಸಕರು ಜೊತೆಯಾಗಿ ಬಿಡಾರ ಮಾಡಿಕೊಂಡಿದ್ದರು. ನಾನು ಕೂಡಾ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿದ್ದರೂ ಅವರ ಪರಿಚಯ ಮಾಡಿಕೊಳ್ಳುವ ಅವಕಾಶಗಳೇ ಇರಲಿಲ್ಲ.

ಆದರೆ ಅವರೆಲ್ಲ ನನಗಿಂತ ಕಿರಿಯರು ಎಂದು ತಿಳಿದಿತ್ತು. ಈ ಉಪನ್ಯಾಸಕರ ಶಿಷ್ಯೆಯಾಗಿರುವ ಬ್ಯಾಂಕ್ ಉದ್ಯೋಗಿಯ ಮಗಳು ಈಗಲೂ ನಮ್ಮಲ್ಲಿ ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದಳು. ಪರೀಕ್ಷೆಯ ಮೊದಲಿನ ಓದಿನ ದಿನಗಳಲ್ಲಿ ಸಂಜೆಯ ಸಮಯ ನಮ್ಮವರಿಗೆ ಅನುಕೂಲವಾಗದ್ದರಿಂದ ಬೆಳಗ್ಗೆ 5:30ರ ವೇಳೆ ನಿಗದಿಯಾಯಿತು. ಈ ವೇಳೆಗೆ ಊರಿಗೆ ಊರೇ ಎದ್ದು ಆ ದಿನದ ಪ್ರಾರಂಭವಾಗುತ್ತಿತ್ತು. ಸರಿಯಾಗಿ ಬೆಳಗಾಗುವವರೆಗೆ ಬೀದಿ ದೀಪಗಳೂ ಉರಿಯುತ್ತಿತ್ತು. ಆದ್ದರಿಂದ ಭಯ ಎನ್ನುವುದಕ್ಕೆ ಅವಕಾಶವಿರಲಿಲ್ಲ. ಜೊತೆಗೆ ಅವಳೇನೂ ಎಲ್ಲಾ ದಿನಗಳಲ್ಲಿ ಬರಬೇಕಾಗಿಯೂ ಇರಲಿಲ್ಲ. ಬರುತ್ತಲೂ ಇರಲಿಲ್ಲ. ಆದ್ದರಿಂದ ಅವಳು ಬಾರದ ದಿನಗಳ ಬಗ್ಗೆ ನಮಗೆ ಯಾವ ಆತಂಕವೂ ಇರುತ್ತಿರಲಿಲ್ಲ. ಆದರೆ ಅವಳು ನಮ್ಮ ಪಾಠಕ್ಕೆ ಬಂದಂತೆಯೇ ಕಾಮರ್ಸ್ ವಿಷಯಗಳ ಪಾಠಕ್ಕೆ ಉಪನ್ಯಾಸಕರ ಮನೆಗೆ ಹೋಗುತ್ತಿದ್ದಳು ಎನ್ನುವುದೂ ತಿಳಿದಿತ್ತು. ಇದರೊಂದಿಗೆ ಒಂದು ದಿನ ನಮ್ಮ ಮನೆಗೆ ಬರುತ್ತಿದ್ದ ಅದೇ ಕ್ಯಾಂಪಸ್‌ನಲ್ಲಿದ್ದ ಪ್ರೌಢ ಶಾಲೆಯಲ್ಲಿ ಓದುತ್ತಿದ್ದ ಹುಡುಗಿ ಕಾಲೇಜಿನಲ್ಲಿ ಓದುವ ಹುಡುಗಿಯ ಬಗ್ಗೆ ಆರೋಪದ ಮಾತುಗಳನ್ನು ಆಡಿದಳು. ನಾವು ಅದನ್ನು ಆ ಹುಡುಗಿಯಲ್ಲೂ ವಿಚಾರಿಸಲಿಲ್ಲ. ಅವಳ ತಾಯಿಯಲ್ಲೂ ಆ ಬಗ್ಗೆ ಮಾತನಾಡಲಿಲ್ಲ. ಮಕ್ಕಳು ಹೇಳುವ ವಿಷಯಗಳಲ್ಲಿ ಸತ್ಯ ಇದ್ದರೂ ಇರಬಹುದು, ಇಲ್ಲದೆಯೂ ಇರಬಹುದು.

ಆದರೆ ಒಂದು ದಿನ ಕಾಲೇಜಿನ ಉಪನ್ಯಾಸಕರು ಹಾಗೂ ಈ ಮನೆ ಪಾಠದ ಹುಡುಗಿ ಕಾಣೆಯಾಗಿದ್ದಾರೆ ಎನ್ನುವ ಸುದ್ದಿ ತಿಳಿದಾಗ ಮಾತ್ರ ಆಘಾತವೇ ಆಯಿತು. ಆ ತಾಯಿಯನ್ನು ಹೇಗೆ ಸಮಾಧಾನಪಡಿಸಲಿ? ಏನೆಂದು ಸಮಾಧಾನಪಡಿಸಲಿ ಎನ್ನುವುದು ತಿಳಿಯದಿದ್ದರೂ ಮನೆಗೆ ಹೋಗಿ ಅದೇನು ಸಾಂತ್ವನದ ಮಾತನಾಡಿದೆ ಎಂಬುದು ಈಗ ನೆನಪಲ್ಲಿ ಇಲ್ಲದೆ ಇದ್ದರೂ ಅವರಿಗೆ ಧೈರ್ಯ ತುಂಬಿದೆ. ನಾನು ಧೈರ್ಯ ತುಂಬಿದರೂ ಆ ಸಮಸ್ಯೆಗೆ ಪರಿಹಾರ ಹುಡುಕಲು ಹೊರಟವರು ಊರಿನ ಹಿಂದೂ ಯುವಕರು. ಹಿಂದೂ ಯುವಕರು ಎನ್ನುವುದಕ್ಕೆ ಕಾರಣವಾದುದು ಅವಳು ಕಾಣೆಯಾಗಿರುವುದರ ಜೊತೆಗೆ ಕಾಣೆಯಾದ ಉಪನ್ಯಾಸಕರು ಮುಸ್ಲಿಮ ರಾದುದರಿಂದ. ಈ ಸಮಸ್ಯೆ ಆ ಒಂಟಿ ತಾಯಿಯ ಸಮಸ್ಯೆಯಾಗಿ ಉಳಿಯದೆ ಅದು ಊರಿನ ಹಾಗೂ ಯುವಕರ ಪ್ರತಿಷ್ಠೆಯಾಗಿ ಸಾರ್ವಜನಿಕವಾಯಿತು.

ಉಪನ್ಯಾಸಕರು ಬಿಡಾರವಿದ್ದ ಕಟ್ಟಡದ ಗೋಡೆಗಳಲ್ಲಿ ಉಪನ್ಯಾಸಕರ ಹೆಸರನ್ನು ವಾಚಾಮಾಗೋಚರವಾಗಿ ಬೈದು ಭಂಗಿಸಿ ನಿಂದಿಸಿ ಬರೆಯಲಾಗಿತ್ತು. ತಾಯಿಯನ್ನು ಕಂಡು ಸಮಾಧಾನ ಹೇಳುವವರಿಲ್ಲದೆ ಉಪನ್ಯಾಸಕರನ್ನು ಹುಡುಕಿ ಸೊಂಟ ಮುರಿಯುವ, ಕಾಲು ಕಡಿಯುವ ಪ್ರತಿಜ್ಞೆಗಳು ದಿನ ದಿನವೂ ಕೇಳಿ ಬರುತ್ತಿತ್ತು. ಈ ಯುವಕರ ಗುಂಪಿನಲ್ಲಿ ಬಸ್ಸು ಪ್ರಕರಣದ ಸಂದರ್ಭದಲ್ಲಿ ನನ್ನ ರಕ್ಷಣೆಯ ನೆಪದಲ್ಲಿ ನನ್ನ ಮನೆಗೆ ಬಂದವರೇ ಮುಖ್ಯರಾಗಿದ್ದರು. ಈ ಉಪನ್ಯಾಸಕರು ಮುಸ್ಲಿಮರಾಗಿದ್ದರೂ ಅವರು ನಮ್ಮ ಊರಿನವರೂ, ಜಿಲ್ಲೆಯವರೂ ಆಗಿರದೆ ದೂರದ ಉತ್ತರ ಕರ್ನಾಟಕ ಜಿಲ್ಲೆಯವರಾಗಿದ್ದುದರಿಂದ ಊರಿನ ಮುಸ್ಲಿಮರಿಗೂ ಅವರ ಪರಿಚಯವೂ ಹೆಚ್ಚಾಗಿ ಇರಲಿಲ್ಲ ಎನ್ನುವುದು ಅವರು ಮುಸ್ಲಿಮರೆನ್ನುವುದು ಈಗ ಹೆಚ್ಚು ಜನರಿಗೆ ತಿಳಿಯುವಂತಾಯ್ತು. ಊರಿನ ಯುವಕರು ಕಾಲೇಜಿಗೆ ಹೋಗಿ ಆ ಉಪನ್ಯಾಸಕರ ಊರು ಕೇರಿಗಳ ಮಾಹಿತಿ ಸಂಗ್ರಹಿಸಿಕೊಂಡು ಅವರೇ ಹೋದರೋ ಪೊಲೀಸರೊಂದಿಗೆ ಹೋದರೋ ತಿಳಿಯದು. ಈ ಕಡೆ ತಾಯಿಗೆ ಪೊಲೀಸರು ಠಾಣೆಯಲ್ಲಿ ಮಗಳು ಕಾಣೆಯಾದ ಬಗ್ಗೆ ಮತ್ತು ಹುಡುಕಿ ಕೊಡುವಂತೆ ಅರ್ಜಿ ಸಲ್ಲಿಸುವಂತೆ ನಾನು ಹೇಳಿದಂತೆ ಉಳಿದವರೂ ಹೇಳಿ ಕೇಸು ದಾಖಲಾಯಿತು.

ಕೊನೆಗೂ ಅವರು ಸಿಕ್ಕಿದರು ಎನ್ನುವ ಸುದ್ದಿ ತಿಳಿಯಿತು. ತಾಯಿಗೆ ಅವರು ಜೀವಂತವಾಗಿ ಇದ್ದಾರೆ ಎನ್ನುವುದು ಸಂತೋಷದ ವಿಷಯವಾದರೂ ಅವರಿಬ್ಬರೂ ರಿಜಿಸ್ಟರ್ಡ್ ವಿವಾಹ ಮಾಡಿಕೊಂಡಿದ್ದಾರೆ ಎಂದೂ ತಿಳಿಯಿತು. ತಾಯಿಗೆ ಈಗ ಧರ್ಮ ಸಂಕಟ. ಯುವಕರೆಲ್ಲ ಅವನು ಊರಿಗೆ ಬಂದರೆ ತಲೆ ಉರುಳಿಸುತ್ತೇವೆ ಎಂದು ಹೇಳುತ್ತಾ ತಿರುಗುತ್ತಿದ್ದುದು ಮತ್ತಷ್ಟು ಭಯವನ್ನುಂಟು ಮಾಡಿತ್ತು. ಈ ವಿಷಯ ತಿಳಿದ ನಾನು ತಾಯಿಗೆ ಸಮಾಧಾನ ಹೇಳುತ್ತಾ ವಾಸ್ತವದ ಅರಿವು ಮೂಡಿಸುವ ಪ್ರಯತ್ನ ಮಾಡಿದೆ. ಇದೀಗ ದಿನಗಳಲ್ಲ ತಿಂಗಳುಗಳೇ ಕಳೆದು ಹೋಗಿದೆ. ಈಗ ಅವಳನ್ನು ಅವನಿಂದ ಬೇರ್ಪಡಿಸಿ ತರುವುದು ಸಾಧ್ಯವಿಲ್ಲ. ಒಂದು ವೇಳೆ ಅದು ಸಾಧ್ಯವಾದರೂ ನಿಮ್ಮ ಮಗಳನ್ನು ಮದುವೆಯಾಗುವ ಯುವಕ ಈ ಗುಂಪಿನಲ್ಲಿ ಯಾರಾದರೂ ಇದ್ದಾನೆಯೇ? ಖಂಡಿತಾ ಯಾರೂ ಇರಲಾರರು.

ಪ್ರತೀ ದಿನ ಬಂದು ನಿಮ್ಮ ತಲೆ ತಿನ್ನುವ ಯುವಕರಲ್ಲಿ ಈ ಪ್ರಶ್ನೆ ಹಾಕಿ, ಅವರಲ್ಲಿ ಯಾರಾದರೂ ಒಪ್ಪಿದರೆ ಅವಳಿಗೆ ಬಾಳು ಕೊಡುವುದಕ್ಕೆ ಸಿದ್ಧರಾಗುವ ಮೂಲಕ ಧರ್ಮವನ್ನು ರಕ್ಷಿಸುವ ಕಾರ್ಯ ಮಾಡುತ್ತಾರಾದರೆ ಮುಂದೇನು ಮಾಡಬಹುದು ಎಂದು ಯೋಚಿಸೋಣ ಎಂದು ಹೇಳುತ್ತಾ ಅವರು ಮತ್ತೆ ಕೆಲಸಕ್ಕೆ ಹೋಗುವಂತೆ ಒತ್ತಾಯಿಸಿದ್ದಾಯಿತು. ಹಾಗೆಯೇ ನೀವು ಒಬ್ಬ ಮಗಳ ತಾಯಿಯಾಗಿ ನಿಮ್ಮ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಬಹುದು ಎನ್ನುವುದನ್ನು ನೀವು ಒಬ್ಬರೇ ಕುಳಿತು ಆಲೋಚಿಸಿ. ಇಲ್ಲಿ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬಂತಹ ಸೂಕ್ಷ್ಮವಾದ ವಿಚಾರಗಳಿವೆ. ಅವರಿಬ್ಬರ ಮದುವೆ ಕಾನೂನಿನ ರಕ್ಷಣೆಯಲ್ಲಿದೆ. ಆದ್ದರಿಂದ ಉಳಿದವರು ಹೇಳಿದಂತೆ ಆಕೆಯನ್ನು ಕರೆತರುವುದರಲ್ಲಿ ಯಾವ ದೊಡ್ಡ ಸಾಧನೆಯೂ ಇಲ್ಲ. ನಿಮ್ಮ ಮಗಳು ಹೀಗೆ ಮಾಡಿರುವುದು ದುಃಖದ ವಿಚಾರವಾದರೂ ಅದನ್ನು ನಿಮ್ಮ ಮರ್ಯಾದೆಯ ಪ್ರಶ್ನೆ ಎಂದು ತಿಳಿದು ಅವಳ ಬಾಳು ಹಾಳು ಮಾಡಬೇಡಿ ಎಂದು, ನೀವು ಆಕೆಯನ್ನು ಕ್ಷಮಿಸಿ. ನಿಮಗೆ ಅವಳಲ್ಲದೆ ಬೇರೆ ಯಾರು ಇಲ್ಲ ಎನ್ನುವ ಸಾಂತ್ವನದ ಮಾತುಗಳಲ್ಲಿ ಕಾಲ ಸರಿದು ಹೋಗುತ್ತಾ ಇತ್ತು.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News

ಸಂವಿಧಾನ -75