ಮೌನದ ಕಣಿವೆಯ ಬದಲು ಮಾತಿನ ಸೇತುವೆ

Update: 2017-11-14 18:44 GMT

ನನ್ನೂರಿನ ಕಾಲೇಜಿನ ಉಪನ್ಯಾಸಕರು ಹಾಗೂ ಅವರ ಶಿಷ್ಯೆ ನನ್ನ ಮನೆಯ ದಾರಿಯ ಹುಡುಗಿ ಕಾಣೆಯಾದುದು ಮತ್ತೆ ಪತ್ತೆಯಾದುದು, ಅವರಿಬ್ಬರೂ ಸತಿಪತಿಗಳಾಗಿ ಕಾನೂನಿನ ರಕ್ಷಣೆಯಲ್ಲಿದ್ದಾರೆ ಎಂದು ತಿಳಿದಾಗ ಇಂದಿನ ಪರಿಭಾಷೆಯ ಮರ್ಯಾದಾ ಹತ್ಯೆಗೆ ಮುಂದಾಗಿದ್ದ ಯುವಕರಿಗೆ ಈ ದೇಶದ ಕಾನೂನಿನ ಪರೋಕ್ಷ ಪರಿಚಯವಾದಂತಾಯಿತು. ತಾಯಿ ತನ್ನ ಮಗಳು ದೂರವಾದ ಚಿಂತೆಯನ್ನು ನಿಧಾನವಾಗಿ ದೂರವಾಗಿಸುತ್ತಿದ್ದಂತೆಯೇ ಎಲ್ಲರೂ ಆ ವಿಷಯವನ್ನು ಮರೆಯದಿದ್ದರೂ ಅದು ಊರಿನ ಜನರ ಬಾಯಿಯ ಕವಳವಾಗಿದ್ದು ಕೆಲವರು ಅದನ್ನು ನುಂಗಿಕೊಂಡು ಸುಮ್ಮನಿದ್ದು ಊರಿನ ಆರೋಗ್ಯಕ್ಕೆ ಕಾರಣರಾದರು. ಈ ನಡುವೆ ಮಗಳು ತಾಯಿಯನ್ನು ಭೇಟಿಯಾಗಿದ್ದೂ ಆಯಿತು. ಆದರೆ ಮಗಳು ಈ ಊರಿಗೆ, ಮನೆಗೆ ಬಂದಿರಲಿಲ್ಲ. ಅವಳ ಪತಿ ಬೇರೆ ಕಾಲೇಜಿಗೆ ವರ್ಗಾಯಿಸಿಕೊಂಡು ನಮ್ಮ ಜಿಲ್ಲೆಯಲ್ಲೇ ಇದ್ದರು.

ಕಾಲ ಎಲ್ಲವನ್ನೂ ಮೆರಸುತ್ತದೆ ಎನ್ನುವುದು ಹಾಗೆಯೇ ಮರೆವು ವರವಾಗುವುದೂ ಇಂತಹ ಸಂದರ್ಭಗಳಲ್ಲಿ ಬಸುರಿಯಾದ ಮಗಳ ಬಾಣಂತನಕ್ಕೆ ತಾಯಿ ಅಳಿಯನ ಮನೆಗೇ ಹೋಗಿ ಕರ್ತವ್ಯ ನಿರ್ವಹಿಸಿದರು. ಬಳಿಕ ತೊಟ್ಟಿಲ ಮಗುವನ್ನು ಎತ್ತಿಕೊಂಡು ಮಗಳೂ ತಾಯಿ ಮನೆಗೆ ಬಂದವಳು ಮುಂದೆ ಆಗಾಗ ಬಂದು ಹೋಗುತ್ತಿರುವುದು ಸಾಮಾನ್ಯವಾದ ವಿಷಯವೇ ಆಯ್ತು. ಅಳಿಯ ಮಾತ್ರ ಬರುತ್ತಿರಲಿಲ್ಲ. ನನಗೂ ಕಾಣಸಿಕ್ಕಿದ ಆ ಮಗಳಲ್ಲಿ ಅವಳ ಓದು ಅರ್ಧಕ್ಕೇ ನಿಂತುದನ್ನು ಪ್ರಸ್ತಾಪಿಸಿ ಪದವಿ ಪೂರ್ಣಗೊಳಿಸು ಎಂದು ಒತ್ತಾಯದ ಮಾತನ್ನು ಆಡಿ ಅವಳ ಬದುಕಿಗೆ ಶುಭಹಾರೈಸಿದೆ. ನಾನು ಸುಮಾರು ಮೂವತ್ತು ವರ್ಷಗ ಬಳಿಕ ಪ್ರಾಂಶುಪಾಲೆಯಾಗಿದ್ದಾಗ ನಮ್ಮ ಜಿಲ್ಲೆಯ ಒಂದು ಸರಕಾರಿ ಪದವಿ ಪೂರ್ವ ಕಾಲೇಜಿಗೆ ಮುಖ್ಯ ಅತಿಥಿಯಾಗಿ ಹೋದಾಗ ಆ ಉಪನ್ಯಾಸಕರು ಅಲ್ಲಿ ಪ್ರಾಂಶುಪಾಲರಾಗಿ ಪದೋನ್ನತಿಗೊಂಡು ಕಾರ್ಯ ನಿರ್ವಹಿಸುತ್ತಿದ್ದರು. ನನ್ನನ್ನು ಅವರೇ ಗುರುತು ಹಿಡಿದು ತನ್ನ ಪರಿಚಯ ಹೇಳಿಕೊಂಡರು. ಅವರ ಮಡದಿಯ ಬಗ್ಗೆ ವಿಚಾರಿಸಿದೆ. ಮಕ್ಕಳಿಬ್ಬರು ಕಾಲೇಜಿಗೆ ಹೋಗುತ್ತಿರುವುದನ್ನು ತಿಳಿಸಿದರು. ಅಲ್ಲೇ ಸಮಿಪದಲ್ಲಿ ಮನೆ ಮಾಡಿ ಕೊಂಡಿದ್ದೇನೆ ಎಂದು ನನ್ನನ್ನು ಅವರ ಮನೆಗೂ ಆಹ್ವಾನಿಸಿದರು. ಅವರ ಸುಖೀ ಬದುಕನ್ನು ಕಂಡು ನಿಜಕ್ಕೂ ಸಂತೋಷವಾಯಿತು.

ಹರೆಯದ ಹುಚ್ಚು ಜೋಡಿ ಮನಸ್ಸುಗಳ ಅಭಿವ್ಯಕ್ತಿ ವರ್ತನೆ ಹೀಗೇ ಇರಬೇಕೆಂಬ ನಿರ್ಧಾರ ಯಾರಿಂದಲೂ ಸಾಧ್ಯವಿಲ್ಲ ಎನ್ನುವುದು ಅನೇಕ ಉದಾಹರಣೆಗಳಿಂದ ವ್ಯಕ್ತವಾಗುತ್ತದೆ. ಸುಸಂಸ್ಕೃತರೆನ್ನುವವರು, ಸಂಸ್ಕಾರ ಹೀನರೆನ್ನುವವರು ಎಂಬ ಭೇದವಿಲ್ಲದೆ ಅಥವಾ ಶ್ರೀಮಂತರು ಬಡವರು ಎಂಬುದನ್ನೂ ಲೆಕ್ಕಿಸದೆ, ಜಾತಿ ಧರ್ಮಗಳ ಕಟ್ಟುಪಾಡುಗಳಿಗೂ ಒಳಗಾಗದೆ, ವಿದ್ಯಾವಂತರು ಅವಿದ್ಯಾವಂತರು ಎಂಬ ತಾರತಮ್ಯವಿಲ್ಲದೆ ಗಂಡು ಹೆಣ್ಣುಗಳ ಕಾಮುಕ ಬದುಕೋ ಅಥವಾ ದಾಂಪತ್ಯವೋ ಅಥವಾ ಇನ್ನಷ್ಟು ಗೌರವಯುತವಾಗಿಸಿ ಕರೆಯಿಸಿಕೊಳ್ಳುವ ಸಮರಸದ ಜೀವನ ಸಂಗಾತಿಗಳು ಎನ್ನುವವರ ಬದುಕಿಗೆ ಪ್ರೇರಣೆಗಳೇನು ಎನ್ನುವುದರ ಶೋಧನೆಗೆ ಹೊರಟರೆ ಸಿಗುವ ಉತ್ತರಗಳು ಹತ್ತು ಹಲವು. ಸಾಮಾಜಿಕವಾಗಿ ನೀತಿಗೆಟ್ಟ ಎಂದು ಅನ್ನಿಸಿದ ಬದುಕುಗಳು ಕೂಡಾ ಅವರ ಬದುಕಿನ ರೀತಿಯಿಂದ, ಮಾನವೀಯತೆಯಿಂದ ಯಶಸ್ವಿಗೊಂಡು ಕಾಲಾಂತರದಲ್ಲಿ ಸಾಮಾಜಿಕವಾಗಿ ಸ್ವೀಕಾರಾರ್ಹವಾದಾಗ ಕಾಲ ಒಂದಿಷ್ಟು ಮುಂದೆ ಚಲಿಸಿದೆ ಎನ್ನುವುದು ಗ್ರಹೀತವಾಗುತ್ತದೆ. ಆದರೆ ಹಳ್ಳಿಯ ಮಂದಿಗೆ ಇಂತಹ ಬುದ್ಧಿ ಪೂರ್ವಕ ನೆಲೆಗಳಿರಲಾರದು. ಈ ಹಿನ್ನೆಲೆಯಲ್ಲಿ ನಮ್ಮ ಮನೆಯ ಪಕ್ಕದ ಮನೆಯಲ್ಲಿ ಬಿಡಾರ ಇದ್ದ ತಾಯಿ ಮಗಳ ವಿಚಾರ ನನ್ನ ಅನುಭವ ಕೋಶಕ್ಕೆ ಹೊಸ ವಿಷಯವನ್ನು ತುಂಬಿತು.

ತಾಯಿ ಮಧ್ಯವಯಸ್ಸಿನವಳಾಗಿದ್ದು ಗಂಡನನ್ನು ಕಳಕೊಂಡಿದ್ದರು. ಮಗಳು ವಯಸ್ಸಿಗೆ ಬಂದ ಹದಿ ಹರೆಯದವಳು. ಈ ತಾಯಿ ಗಂಡಸೊಬ್ಬನೊಂದಿಗೆ ಕೂಡಿಕೆ ಸಂಬಂಧವಿಟ್ಟು ಕೊಂಡಿದ್ದಾಳೆ ಎನ್ನುವುದು ಮಗಳಿಗೆ ಗೊತ್ತಿದ್ದರೂ ಆತ ಇವರ ಜತೆಯಲ್ಲಿ ವಾಸಿಸುತ್ತಿರಲಿಲ್ಲ. ಇದಿಷ್ಟು ಹಿನ್ನ್ನೆಲೆ. ಇವರಿರುವ ಮನೆಯಿಂದ ಅಮಾವಾಸ್ಯೆಗೋ ಹುಣ್ಣಿಮೆಗೋ ಎನ್ನುವಂತೆ ರಾತ್ರಿಯಲ್ಲಿ ಅರಚಾಟ, ಕಿರಿಚಾಟ, ನರಳಾಟಗಳು ಕೇಳಿ ಬರುತ್ತಿತ್ತು. ಮೊದಲ ಬಾರಿ ಹೀಗಾದಾಗ ನಾವು ಕಿಟಕಿ ತೆರೆದು ನೋಡಿದರೆ ಮನೆಯ ಧಣಿಗಳು ಅಂಗಳದಲ್ಲಿದ್ದವರು ‘‘ಏನಿಲ್ಲ, ನೀವು ಮಲಗಿ, ತೊಂದರೆ ಏನಿಲ್ಲ’’ ಎಂದು ಹೇಳಿದಾಗ ನನಗೆ ಏನೂ ಅರ್ಥವಾಗಲಿಲ್ಲ. ಬಿಡಾರದೊಳಗೆ ಚಿಕ್ಕ ಚಿಮಿಣಿ ಬೆಳಕು ತಾಯಿ ಮಗಳಲ್ಲಿ ಬಹಳ ದೈನ್ಯದಿಂದ ಬೇಡಿಕೊಳ್ಳುವಂತಿರುವ ಸ್ವರ ಕೇಳುತ್ತಿತ್ತು. ಅದು ಮಗಳನ್ನು ಸಮಾಧಾನ ಪಡಿಸುವಂತಹುದೂ ಹೌದು, ನಮ್ಮವರು ಹಳ್ಳಿಯಲ್ಲೇ ಹುಟ್ಟಿ ಬೆಳೆದವರಾದ್ದರಿಂದ ಅವರಿಗೆ ಅರ್ಥವಾಗಿ ಯಾರದೋ ಮೈ ಮೇಲೆ ಯಾರೋ ಬಂದಿರಬೇಕು ಎಂದರು. ಮೈ ಮೇಲೆ ಬರುವ ಅಂದರೆ ಸತ್ತವರು ಜೀವ ಇದ್ದವರ ದೇಹದೊಳಗೆ ಸೇರಿ ಇವರು ಅವರಾಗುವ ಸಂದರ್ಭವನ್ನು ನಾನೂ ನೋಡಿದ್ದೇನೆ. ಆದರೆ ಅದು ಜೀವದಲ್ಲಿರುವವರ ಗುಪ್ತ ಮನಸ್ಸಿನ ಸ್ಥಿತಿ ಎಂದೂ ಅರಿತಿದ್ದೆ. ಹಾಗೆಯೇ ಆ ಗುಪ್ತ ಮನಸ್ಸು ಕೂಡಾ ಅದಕ್ಕೆ ಅಡ್ಡಿ ಮಾಡುವವರಿದ್ದರೆ ಹೆದರಿ ಮತ್ತೆ ಎಂದೂ ಬಾರದೆ ಇರುವುದನ್ನು ಗಮನಿಸಿದ್ದೇನೆ. ಆದರೆ ಅದು ಏನು ಎತ್ತ ಯಾಕೆ ಎಂಬ ಪ್ರಶ್ನೆಗಳು ಆ ಚಿಕ್ಕ ವಯಸ್ಸಿಗೆ ಹೊಳೆದಿರಲೂ ಇಲ್ಲ. ಉತ್ತರದ ಅಗತ್ಯವೂ ಆಗ ಇರಲಿಲ್ಲ.

ಇದೀಗ ಮರುದಿನ ಬೆಳಗ್ಗೆ ನೋಡಿದಾಗ ತಾಯಿಯೂ ಚೆನ್ನಾಗಿದ್ದಾಳೆ. ಮಗಳೂ ಚೆನ್ನಾಗಿದ್ದಾಳೆ. ರಾತ್ರಿ ಏನಾಗಿತ್ತು ಎಂದು ಕೇಳಿದಾಗ ಅವಳಿಗೆ ಮೈಯಲ್ಲಿ ಸಿರಿ ಬರುತ್ತಾಳೆ. ನಾಡದು ಕವತ್ತಾರಿನಲ್ಲಿ ನಡೆಯುವ ಸಿರಿ ಜಾತ್ರೆಗೆ ಕರೆದುಕೊಂಡು ಹೋಗಬೇಕು. ಎಂದರು. ಈ ಸಿರಿಜಾತ್ರೆಯೆನ್ನುವುದು ವಿಶಿಷ್ಟವಾದ ಜಾತ್ರೆ. ತುಳುವರ ಆರಾಧನಾ ಪ್ರಪಂಚದಲ್ಲಿ ಇದಕ್ಕಿರುವ ಮಹತ್ವ ನಂಬಿಕೆಯ ಹಿನ್ನೆಲೆಯದ್ದು. ಮದುವೆಯಿಲ್ಲದ ಹೆಣ್ಣು ಮಕ್ಕಳಿಗೆ, ದಾಂಪತ್ಯದಲ್ಲಿ ಅತೃಪ್ತಳಾದ ಮಹಿಳೆಯರಿಗೆ ಹೀಗೆ ಮೈಮೇಲೆ ಆವೇಶ ಬರುವುದು, ಆ ಆವೇಶಕ್ಕೆ ಸಿರಿಜಾತ್ರೆಗೆ ಹೋಗಿ ಬಂದ ಬಳಿಕ ಅವರು ಒಂದಿಷ್ಟು ಕಾಲ ಸಾಂತ್ವನ ಸಮಾಧಾನದಲ್ಲಿರುವುದನ್ನು ನೋಡಬಹುದು.

ಹಳ್ಳಿಯ ಹೆಣ್ಣು ಮಕ್ಕಳು ಹೆಚ್ಚು ವಿದ್ಯಾವಂತರಲ್ಲದವರು ತಮ್ಮ ಮಾನಸಿಕ ತುಮುಲ, ದುಗುಡಗಳನ್ನು ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಇಂತಹ ಆವೇಶಕ್ಕೊಳಗಾಗಿ ತಮ್ಮ ಸುಪ್ತ ಬಯಕೆಗಳ ಪ್ರಕಟವಾಗಿಸುವುದು ಸಹಜವಾದರೂ ಅದರ ಚಿಕಿತ್ಸೆ ಸಿರಿಯ ಜಾತ್ರೆಯಲ್ಲಿ ಕಂಡುಕೊಳ್ಳುವುದು ಆ ಕಾಲಕ್ಕೆ ಸರಿಯಾಗಿರಬಹುದಾದರೂ ಇದೊಂದು ಮಾನಸಿಕ ಖಾಯಿಲೆ ಎಂದು ಔಷಧಿ ಮಾಡುವ ಸಾಧ್ಯತೆಗಳು ಇಂದು ಇರುವುದನ್ನು ನಾವು ತಿಳಿಯಬೇಕಾಗಿದೆ. ಜತೆಗೆ ಆ ಆವೇಶ ಅಥವಾ ಮೈಮೇಲೆ ಬರುವ ಕಾಯಿಲೆ ಕೇವಲ ಮಹಿಳೆಯರಿಗೆ ಮಾತ್ರ ಯಾಕೆ ಬರುತ್ತದೆ ಎಂಬ ಪ್ರಶ್ನೆ ಕೂಡಾ ಬಹಳ ಮುಖ್ಯವಾಗುತ್ತದೆ. ಪುರುಷರ ಅಂಕೆಯೊಳಗೆ ಇದ್ದು ತಮ್ಮ ಆಸೆ ಆಕಾಂಕ್ಷೆಗಳಿಗೆ ಬೆಲೆ ಇಲ್ಲದೆ ಇದ್ದಾಗ ಮಹಿಳೆಯರ ಸುಪ್ತ ಮನಸ್ಸು ಕಂಡುಕೊಂಡ ಅವರಿಗೆ ಅರಿವು ಇಲ್ಲದೆ ಬಂದು ಹೋಗುವ ಆಗಾಗ ಒಂದಿಷ್ಟು ಸಾಂತ್ವನ ಸಮಾಧಾನ ಪಡೆದುಕೊಳ್ಳುವ ಸ್ಥಿತಿಯೂ ಆಗಿರಬಹುದು. ತಂದೆಯಿಲ್ಲದ ಅಭದ್ರತೆಯ ಭಾವ ಆ ಹೆಣ್ಣು ಮಗಳಿಗೆ ಇದ್ದಿರಬಹುದು. ಜತೆಗೆ ತಾಯಿಯ ಪ್ರೀತಿಯಲ್ಲೂ ಕೊರತೆಯನ್ನು ಭಾವಿಸಿರಬಹುದು. ಮಲತಾಯಿಯ ನಡುವೆ ಇರುವ ಹೆಣ್ಣು ಮಕ್ಕಳೂ ಈ ಆವೇಶಕ್ಕೆ ಬಲಿಯಾದುದನ್ನು ನೋಡಿರುವುದೂ ಇದೆ.

ಇಂತಹದೇ ಆವೇಶದ ಕತೆಯ ಬದುಕಿಗೆ ಸೇರ್ಪಡೆಯಾದ ಹೆಣ್ಣಿನ ಕತೆಯೂ ಇದೇ ಊರಿನದ್ದು. ಆದರೆ ಕಾರಣ ಬೇರೆ. ನಮ್ಮ ನೆರೆಯ ಮನೆಯೊಂದರಲ್ಲಿ ತಾಯಿ ಮಗಳು ಮಾತ್ರ ಇದ್ದು ತಂದೆ ತೀರಿಕೊಂಡ ಆ ಮಗಳಿಗೆ ಮದುವೆಯಾಗಿತ್ತು. ಆದರೆ ಆಕೆ ಇಲ್ಲಿ ತಾಯಿಯೊಂದಿಗೇ ಇದ್ದಳು. ಅಪರೂಪಕ್ಕೆ ನನಗೆ ಕಾಣಸಿಕ್ಕಿದಾಗ ನಗುಮುಖದ ಆಕೆಯ ಮಾತುಗಳೂ ಅಷ್ಟೇ ಆತ್ಮೀಯವಾಗಿರುತ್ತಿತ್ತು. ಇಂತಹ ಹುಡುಗಿ ಗಂಡನಿಂದ ಯಾಕೆ ದೂರ ಇದ್ದಾಳೆ ಎಂಬ ನನ್ನ ಪ್ರಶ್ನೆಗೆ ಯಾವಾಗಲೋ ಯಾರಿಂದಲೋ ದೊರೆತ ಉತ್ತರ ಆಕೆಗೆ ಮಾನಸಿಕ ಸಮಸ್ಯೆ ಇದೆ ಎಂದು. ಆದ್ದರಿಂದ ಅವಳು ಗಂಡನ ಮನೆಗೆ ಹೋದವಳು ಆರು ತಿಂಗಳಲ್ಲೇ ಇಲ್ಲಿ ಬಂದು ಉಳಿದಿದ್ದಾಳೆ. ಅವಳ ಗಂಡ ಆಗಾಗ ಬಂದು ಹೋಗುತ್ತಿರುತ್ತಾನೆ ಎಂದು ತಿಳಿಯಿತು.

ಒಂದು ದಿನ ಸಂಜೆ ಮಂಗಳೂರಿನಲ್ಲಿದ್ದ ನನ್ನ ಮನೆಯ ಪಕ್ಕದ ಹುಡುಗ ಸುಮಾರಾಗಿ ನನ್ನ ವಯಸ್ಸಿನವನೇ ಆಗಿದ್ದ ಪರಿಚಿತನೂ ಆಗಿದ್ದವನು ನನ್ನ ಬಸ್ಸಿನಲ್ಲಿ ಇದ್ದುದನ್ನು ನೋಡಿದೆ. ನನ್ನ ಬಸ್ಸು ನಿಲ್ದಾಣದಲ್ಲೇ ಇಳಿದು ನನಗಿಂತ ಮುಂದೆ ನನ್ನ ಮನೆಯ ರಸ್ತೆಯಲ್ಲೇ ಹೋಗುತ್ತಿದ್ದ. ನಾನು ಹಿಂದಿನಿಂದ ಕರೆದು ಮಾತನಾಡಿಸಿದಾಗ ಅವನಿಗೂ ನನ್ನ ಪರಿಚಯ ಸಿಕ್ಕಿ ಮಾತಾಡುತ್ತಾ ಜತೆಗೆ ನಡೆದೆವು. ಆತನಿಗೆ ಇಲ್ಲಿನ ಯುವತಿಯೊಂದಿಗೆ ಮದುವೆಯಾಗಿ ಆಕೆ ಇಲ್ಲಿ ತಾಯಿಯೊಂದಿಗೆ ಇದ್ದಾಳೆ ಎಂದು ತಿಳಿಸಿದ. ಹಾಗೆಯೇ ನನ್ನ ಮನೆಗೆ ಜತೆಯಾಗಿ ಬರಲು ತಿಳಿಸಿದೆ. ಮರುದಿನ ಅವರಿಬ್ಬರೂ ಜತೆಯಾಗಿ ಬಂದಾಗ ತಿಳಿಯಿತು ಅವನ ಹೆಂಡತಿಯೇ ಊರವರು ತಿಳಿದಂತೆ ಮಾನಸಿಕ ಸಮಸ್ಯೆಯ ಯುವತಿ ಎಂದು. ಆಗ ನನಗೆ ಇಪ್ಪತ್ತು ವರ್ಷಗಳ ಹಿಂದಿನ ನನ್ನ ನೆರೆಮನೆಯ ಈ ಹುಡುಗನ ಮನೆಯ ಕೆಲವು ವಿಷಯಗಳು ನೆನಪಾದುವು.

ಈ ಹುಡುಗ ತಂದೆ ತಾಯಿಗೆ ಒಬ್ಬನೇ ಮಗ. ತಂದೆ ತಾಯಿ ಇಬ್ಬರೂ ತುಂಬಾ ಸಾಧು ಸ್ವಭಾವದವರು. ತಾಯಿ ಮನೆಯಲ್ಲೇ ಇದ್ದು ಬೀಡಿ ಕಟ್ಟುತ್ತಿದ್ದರೆ, ತಂದೆ ಪೇಟೆಯಲ್ಲಿ ಅಂಗಡಿಯೊಂದರಲ್ಲಿ ಕೆಲಸಮಾಡುತ್ತಿದ್ದರು. ಇವರು ಇದ್ದುದು ತುಂಬಾ ಬಾಡಿಗೆ ಮನೆಗಳಿರುವ ವಠಾರದಲ್ಲಿ. ಆ ವಠಾರದ ಎಲ್ಲಾ ಜನ ಬಡವರು, ಕೂಲಿ ಕಾರ್ಮಿಕರು. ಯಾರಿಗೂ ಯಾವ ದುಶ್ಚಟಗಳೂ ಇರಲಿಲ್ಲ. ಅಂತಹ ವಾತಾವರಣದಲ್ಲಿ ಒಂದೊಂದು ರಾತ್ರಿ ಆ ವಠಾರದ ಮನೆಯೊಂದರಿಂದ ಕಿರುಚಾಟ, ನರಳಾಟಗಳೆಲ್ಲಾ ಕೇಳುತ್ತಿತ್ತು. ಮರುದಿನ ಅದು ಇವನ ತಾಯಿಯ ಮೈಯಲ್ಲಿ ಆವೇಶ ಬರುತ್ತಿದ್ದುದು ಎಂದು ತಿಳಿಯುತ್ತಿತ್ತು. ಆಗ ಆ ತಾಯಿಯ ಮೈಯಲ್ಲಿ ಸೇರಿಕೊಳ್ಳುತ್ತಿದ್ದುದು ಚಿಕ್ಕ ವಯಸ್ಸಿನಲ್ಲಿ ತೀರಿ ಹೋದ ಅವರ ಮಗಳು. ಈ ಹುಡುಗನ ಅಕ್ಕ. ಅವಳು ಮೈಮೇಲೆ ಬಂದು ತನಗೆ ಮದುವೆ ವಯಸ್ಸಾಗಿದೆ, ಮದುವೆ ಮಾಡಿಸಬೇಕು ಎಂದು ಹೇಳುತ್ತಿದ್ದಳಂತೆ. ಆಕೆ ಬಂದು ಹೇಳುತ್ತಿದ್ದುದರ ಸತ್ಯಾಸತ್ಯತೆಯ ಬಗ್ಗೆ ಏನೇ ವಾದ ಇದ್ದರೂ ಈ ತಾಯಿಯ ಸುಪ್ತ ಮನಸ್ಸು ಅವಳನ್ನು ಗಾಢವಾಗಿ ನೆನಪಿಸಿಕೊಳ್ಳುತ್ತಿದ್ದುದು ಹಾಗೆಯೇ ಅವಳು ಮದುವೆ ಇಲ್ಲದವಳಾಗಿದ್ದಾಳೆ ಎಂಬ ಬಗ್ಗೆ ಕೊರಗುತ್ತಿರುವುದಂತೂ ಸತ್ಯ.

ಹೀಗೆ ಸತ್ತವರಿಗೂ ಮದುವೆ ಮಾಡಿಸುವುದಿದೆ ಎಂದು ನನಗೆ ತಿಳಿದುದು ಆಗಲೇ. ಅದನ್ನು ಪ್ರೇತ ಮದುವೆ ಎನ್ನುತ್ತಾರಂತೆ. ಈ ವಿಶಿಷ್ಟ ಆಚರಣೆ ತುಳುವರಲ್ಲಿ ಇದೆ ಎಂದೂ ಬಹಳ ಅಪರೂಪದ ಮದುವೆ; ಜೀವ ಇದ್ದವರಿಗೆ ಗಂಡು ಹೆಣ್ಣು ಹುಡುಕುವುದು ಸುಲಭದ ಕೆಲಸ ಅಲ್ಲವಾಗಿರುವಾಗ ಸತ್ತವರಿಗೆ ಸಂಬಂಧ ಹುಡುಕುವುದು ಇನ್ನೆಷ್ಟು ಕಷ್ಟದ ಕೆಲಸ. ಕೊನೆಗೂ ಈ ಮದುವೆಗೆ ಅವಳಿಗೆ ಅನುರೂಪನಾದ ಅಂದರೆ ಜಾತಿಯ ಕಟ್ಟುಪಾಡುಗಳಿಗನುಸಾರವಾಗಿ ಅವಳ ವಯಸ್ಸಿಗಿಂತ ದೊಡ್ಡವನಾಗಿದ್ದು ಸತ್ತ ಹುಡುಗನ ಪತ್ತೆಯಾಯಿತು. ಅವರ ಮನೆಯವರಿಗೆ ಇಂತಹ ನಂಬಿಕೆ ಇರಬೇಕಲ್ಲಾ ಅದು ಮುಖ್ಯವೇ? ಅವರಿಗೆ ಸತ್ತವನಿಂದ ತೊಂದರೆ ಇಲ್ಲದಿದ್ದರೆ ಈ ಮದುವೆ ಅವರಿಗೆ ಬೇಕೇ? ಈ ಬಗ್ಗೆ ಏಳುವ ಪ್ರಶ್ನೆಗಳು ಹತ್ತು ಹಲವು. ಆದರೆ ಒಪ್ಪಿಗೆ ದೊರೆತು ಮದುವೆಯಾಗುವ ಸಾಧ್ಯತೆ ಉಂಟಾದರೆ ಎರಡೂ ಮನೆ ಮಂದಿ ಲಗ್ನ ನಿಶ್ಚಯದ ಕಟ್ಟಳೆ ಮಾಡಬೇಕು.

ಮದುವೆಗೆ ದಿನ ನಿಶ್ಚಯವಾಗಬೇಕು. ದಿನ ಅಲ್ಲ ರಾತ್ರಿಯನ್ನು ನಿಶ್ಚಯಿಸಬೇಕು. ಯಾಕೆಂದರೆ ಈ ಎಲ್ಲ ಕಾರ್ಯಕ್ರಮಗಳು ರಾತ್ರಿಯೇ ನಡೆಯುವುದು. ಅಂತೂ ಹೊಸ ಬಟ್ಟೆಬರೆ ಖರೀದಿಸಿ ಮದುವೆಯ ರಾತ್ರಿ ಎರಡು ಮಣೆಯ ಮೇಲಿಟ್ಟು ಅವುಗಳನ್ನೇ ಗಂಡು ಹೆಣ್ಣು ಭಾವಿಸಿ ಎರಡೂ ಮನೆಯವರು ಮದುವೆ ಮಾಡುವಾಗಿನ ಮಾತುಗಳನ್ನಾಡಿ ಸಂಬಂಧ ಬೆಳೆಸಿಕೊಳ್ಳುತ್ತಾರೆ. ಹಾಗೆಯೇ ಮದುವೆಯ ಊಟ ಮುಗಿಸಿಕೊಂಡು ಹೋಗುತ್ತಾರೆ. ಹೀಗೆ ಆ ಹುಡುಗನ ಮನೆಯಲ್ಲಿ ಅವನ ಅಕ್ಕನಿಗೆ ಪ್ರೇತ ಮದುವೆ ಆಗಿದ್ದುದು ನನಗೆ ಗೊತ್ತಿತ್ತು. ಆದ್ದರಿಂದ ಈ ಹಿನ್ನೆಲೆಯಲ್ಲಿ ಅಂದು ಸಮಾಧಾನಗೊಂಡಿದ್ದ ತಾಯಿಯ ಮನಸು ಮತ್ತೆ ಸೊಸೆಯನ್ನು ಮನೆ ತುಂಬಿಸಿಕೊಂಡಾಗ ಪುನಃ ಮಗಳಿಲ್ಲದ ದುಃಖವನ್ನು ಅನುಭವಿಸುವ ಮೂಲಕ ಸೊಸೆಗೆ ಒಳ್ಳೆಯ ಅತ್ತೆಯಾಗಿರದೆ ಇದ್ದಿರಬೇಕು. ಮತ್ತೆ ಅವರ ಮಾನಸಿಕ ಸಮಸ್ಯೆ ಪ್ರಾರಂಭವಾಗಿರಬೇಕು ಎಂದು ಭಾವಿಸಿಕೊಂಡೆ. ಅದನ್ನು ಈ ಊರವರು ತಪ್ಪಾಗಿ ತಿಳಿದು ಸೊಸೆಗೆ ಸಮಸ್ಯೆ ಇದೆ ಎಂದಿರಬೇಕು ಎಂದು ನಾನು ತಿಳಿದೆ.

ಇರಲಿ ಆಕೆ ಇಲ್ಲಿ ಒಬ್ಬಳೇ ತಾಯಿಯೊಂದಿಗೆ ಇರುವುದು ಅವರಿಬ್ಬರಿಗೂ ಕ್ಷೇಮ. ಹೇಗೊ ಸ್ವಂತ ಮನೆ. ಒಬ್ಬಳೇ ಮಗಳು. ಮನೆ ಅಳಿಯನಾಗಿ ಇವನು ಇಲ್ಲೇ ಇದ್ದರೂ ತಪ್ಪಲ್ಲ. ಆದರೆ ಸದ್ಯ ಅವನ ಅಪ್ಪ ಅಮ್ಮ ಇರುವವರೆಗೆ ಅವರ ಜವಾಬ್ದಾರಿಯನ್ನು ಹೊರಬೇಕಾದುದು ಸರಿ. ಅದರಂತೆ ಎರಡೂ ಮನೆಗಳನ್ನು ನಿಭಾಯಿಸುತ್ತಿದ್ದ ಅವನನ್ನು ಕಂಡು ಸಮಾಧಾನವಾಯಿತು. ಇದರ ಜತೆಗೆ ಮನಸು ಎಷ್ಟು ಸೂಕ್ಷ್ಮ. ಅದರ ರಹಸ್ಯಗಳು ನಿಗೂಢ. ಜತೆಗೆ ಅಂದಿನ ಆ ಮೈಮೇಲೆ ಬರುವ ಆವೇಶದ ಸ್ಥಿತಿ ಒಂದರ್ಥದಲ್ಲಿ ಮಾನಸಿಕವಾದ ಚಿಕಿತ್ಸೆಯೇ. ಎದೆಯೊಳಗಿನ ತುಮುಲಕ್ಕೆ ಆಗಾಗ ಒಂದಿಷ್ಟು ಭರವಸೆ, ಸಾಂತ್ವನಗಳು ಸಿಕ್ಕು ಬದುಕು ಸಾಗುತ್ತಿರುತ್ತದೆ. ಜತೆಗೆ ಔಷಧೋಪಚಾರವೂ ಅಗತ್ಯ. ಇಂದು ಇಂತಹ ಅನೇಕ ಸಣ್ಣ ಪುಟ್ಟ ವಿಷಯಗಳು ಖಿನ್ನತೆಗೆ ಕಾರಣವಾಗಿ ಅವು ಆತ್ಮಹತ್ಯೆಯಲ್ಲಿ ಅಂತ್ಯವಾಗುವುದನ್ನು ಕಾಣುತ್ತೇವೆ. ಇಂದಿನ ಖಿನ್ನತೆ ಗಂಡು ಹೆಣ್ಣುಗಳಿಗಿಬ್ಬರಿಗೂ ಸಮಾನವಾದುದಾಗಿದೆ.

ಆದರೆ ಆವೇಶ ಎನ್ನುವುದು ಹೆಂಗಸರಿಗೆ ಮಾತ್ರ ಬರುತ್ತಿದ್ದದು ಯಾಕೆ ಎಂಬ ನನ್ನ ಪ್ರಶ್ನೆಗೆ ನಾನೇ ಭಾವಿಸಿದ ಉತ್ತರ ಪುರುಷರಿಗೆ ತಮ್ಮ ಅಸ್ಮಿತೆ ಮೆರೆಯುದಕ್ಕೆ ಅವಕಾಶಗಳು ಹತ್ತು ಹಲವು, ತಮ್ಮ ಅತೃಪ್ತಿಗಳನ್ನು ಪೂರೈಸಲು ಕಳ್ಳ ಹಾದಿಗಳೂ ಇದ್ದವು ಎನ್ನುವುದು ನಿಜವಲ್ಲವೇ? ಆದರೆ ಇದು ಸಮಾನತೆಯ ಕಾಲ. ಕುಟುಂಬದೊಳಗೂ ಹಕ್ಕು ಜವಾಬ್ದಾರಿಗಳನ್ನು ಸಮಾನವಾಗಿ ನಿಭಾಯಿಸುವುದರೊಂದಿಗೆ ಪರಸ್ಪರ ನಂಬಿಕೆ, ವಿಶ್ವಾಸಗಳೊಂದಿಗೆ ತಮ್ಮ ಆತಂಕ, ತಲ್ಲಣಗಳನ್ನು ಹಂಚಿಕೊಳ್ಳುವ ಸಂಗಾತಿಗಳಾದಾಗ ಮಾತ್ರ ದಾಂಪತ್ಯ ಸುಖವಾಗುವುದು. ಇದಕ್ಕೆ ಅಹಂ ಭಾವವನ್ನು ಬಿಡಬೇಕು, ನಾಚಿಕೆಯನ್ನು ಅಥವಾ ಕೀಳರಿಮೆಯನ್ನು ತ್ಯಜಿಸಬೇಕು ವೌನದ ಕಣಿವೆಯ ಬದಲು ಮಾತಿನ ಸೇತುವೆ ಅನೇಕ ಸಮಸ್ಯೆಗಳನ್ನು ಪರಿಹರಿಸಬಲ್ಲದು.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News

ಸಂವಿಧಾನ -75