ಇವುಗಳ ಮೂಲಕ ಸರಕಾರ ಟಿಪ್ಪುವಿನ ಆಶಯ ಈಡೇರಿಸಲಿ

Update: 2017-11-18 09:23 GMT

ಭಾರೀ ವಿವಾದ ಮತ್ತು ಪರ-ವಿರೋಧಗಳ ನಡುವೆ ಮೂರನೇ ವರ್ಷದ ಟಿಪ್ಪು ಜಯಂತಿಯೂ ಮುಗಿದು ಹೋಯಿತು. ಈ ಬಾರಿಯ ಟಿಪ್ಪು ಜಯಂತಿಯಂತೂ ಹೆಚ್ಚಿನೆಡೆಯಲ್ಲಿ ಕಾಟಾಚಾರದ  ಕಾರ್ಯಕ್ರಮವೆಂಬಂತೆ ಜರಗಿತು. ಪೋಲೀಸ್ ಬಿಗಿಭದ್ರತೆಯಡಿಯಲ್ಲಿ ನಡೆದ, ಕೇವಲ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು  ಮಾತ್ರ ಭಾಗವಹಿಸಲು ಸಾಧ್ಯವಾದ ಟಿಪ್ಪು ಜಯಂತಿಯಿಂದ ಸರಕಾರ ಸಾಧಿಸಿದ್ದಾದರೂ ಏನು?, ಈ ರೀತಿಯ ವಿವಾದಾತ್ಮಕ ಕಾರ್ಯಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಯಿತೇ ಹೊರತು ಕಿಂಚಿತ್ತೂ ಲಾಭವಾಗಲಿಲ್ಲ.

ಟಿಪ್ಪು ಜಯಂತಿಯನ್ನು ವಿರೋಧಿಸಿದವರದ್ದು ಮತ್ತು ಆಚರಿಸಿದವರದ್ದು ಬರೀ ಮತಬ್ಯಾಂಕ್ ರಾಜಕೀಯದ ಲೆಕ್ಕಾಚಾರವಷ್ಟೆ. ಟಿಪ್ಪು ಜಯಂತಿಯನ್ನು ವಿರೋಧಿಸಿದವರು ರಾಜಕೀಯ ಕಾರಣಗಳಿಗಾಗಿಯಷ್ಟೆ ವಿರೋಧಿಸಿದರು ಎಂಬುವುದು ನಿರ್ವಿವಾದ.

ಒಂದು ಉದಾಹರಣೆ ನೋಡಿ " ನಾನು ಮುಖ್ಯಮಂತ್ರಿಯಾಗಿದ್ದಾಗ ನನಗೆ ತೊಡಿಸಲಾಗಿದ್ದ ಪೇಟ ಟಿಪ್ಪು ಪೇಟ ಎಂದು ನನಗೆ ಗೊತ್ತಿರಲಿಲ್ಲ. ಅದೊಂದು ಸಾಂಪ್ರದಾಯಿಕ ಪೇಟ ಎಂದು ನಾನದನ್ನು ತೊಡಿಸಿದ್ದೆ" ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಅದೇ ಶೆಟ್ಟರ್ ಅವಧಿಯಲ್ಲಿ ಟಿಪ್ಪುವಿನ ಕುರಿತಂತೆ "ಟಿಪ್ಪು ಸುಲ್ತಾನ್: ಕ್ರುಸೇಡರ್ ಫಾರ್ ಚೇಂಜ್" ಎಂಬ ಒಳ್ಳೆಯ ಆಂಗ್ಲ ಗ್ರಂಥವನ್ನು ಸರಕಾರವೇ ಪ್ರಕಟಿಸಿತ್ತು. ಆ ಗ್ರಂಥಕ್ಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೇ ಮುನ್ನುಡಿ ಬರೆದಿದ್ದರು.

ಈ ನಾಡಿನ ಜನತೆಗೆ ಬೇಕಿರುವುದು ಟಿಪ್ಪು ಜಯಂತಿಯಲ್ಲ. ಟಿಪ್ಪುವಿನ ಜನಪರ, ಕಾರ್ಮಿಕ ಪರ ನೀತಿಗಳು ಮತ್ತು ಸುಧಾರಣಾ ಕಾರ್ಯಕ್ರಮಗಳು.
ಒಂದೆಡೆ ಟಿಪ್ಪು ಎಂಬ ಜನಪರ ರಾಜನ ಜನ್ಮ ಜಯಂತಿ ನಡೆಯುತ್ತಿದ್ದರೆ ಇನ್ನೊಂದೆಡೆ‌ ರಾಜ್ಯದ ಭೂಮಿ ಮತ್ತು ವಸತಿಹೀನ ಜನತೆ ಭೂಮಿ ಮತ್ತು ವಸತಿಗಾಗಿ ಹೋರಾಟ  ನಡೆಸುತ್ತಿದ್ದಾರೆ. ಫ್ರೆಂಚ್ ಕ್ರಾಂತಿಯನ್ನು ಹೊರತುಪಡಿಸಿದರೆ ಜಗತ್ತಿನಲ್ಲೇ ಪ್ರಪ್ರಥಮ ಬಾರಿಗೆ ದುಡಿಯುವ ಕೈಗಳಿಗೆ ಭೂಮಿಯ ಒಡೆತನವನ್ನು ಕೊಟ್ಟವರು ಟಿಪ್ಪು. ಭೂ ರಹಿತರಿಗೆ ಭೂಮಿಯ ಹಕ್ಕು ನೀಡುವುದು ಟಿಪ್ಪುವಿಗೆ ನೀಡಬಹುದಾದ ಶ್ರೇಷ್ಠ ಗೌರವ.

ಮದ್ಯಪಾನದಿಂದಾಗಿ ಅದೆಷ್ಟೋ ಕುಟುಂಬಗಳು ಪ್ರತಿನಿತ್ಯ ಬೀದಿಗೆ ಬೀಳುತ್ತಿವೆ. ಇದರ ಅಪಾಯವನ್ನರಿತು ತನ್ನ ಜನರ ನೈತಿಕ ಒಳಿತಿಗಾಗಿ ಎರಡು ಶತಮಾನಗಳ ಹಿಂದೆಯೇ ಟಿಪ್ಪು ಮದ್ಯಪಾನ ನಿಷೇಧಿಸಿದ್ದರು. ಆ ಕಾಲದಲ್ಲೂ ಮದ್ಯದಿಂದ ತನ್ನ ಖಜಾನೆಗೆ ಅಪಾರ ಲಾಭವಿದ್ದರೂ ಅದನ್ನು ಲೆಕ್ಕಿಸದೆ ತನ್ನ ಜನತೆಯ ಒಳಿತಿಗಾಗಿ ಟಿಪ್ಪು ಸಂಪೂರ್ಣ ಪಾನನಿಷೇಧ ಕಾನೂನು ಜಾರಿಗೆ ತಂದಿದ್ದರು. ಇಂತಹ ಕಾನೂನು ಜಾರಿಗೆ ತರುವುದೇ ಟಿಪ್ಪುವಿಗೆ ನೀಡಬಹುದಾದ ದೊಡ್ಡ ಗೌರವ.

ಇಂದಿಗೂ ರಾಜ್ಯದಲ್ಲಿ ಕಾರ್ಮಿಕ ವರ್ಗಕ್ಕೆ ನ್ಯಾಯಸಮ್ಮತ ವೇತನ ಸಿಗುತ್ತಿಲ್ಲ. ಕಾರ್ಮಿಕರ ಬೆವರಿನ ಫಲವನ್ನು ಉಳ್ಳವರು ಉಣ್ಣುತ್ತಿದ್ದಾರೆ. ಟಿಪ್ಪು ತನ್ನ ಆಡಳಿತಾವಧಿಯಲ್ಲಿ ಕಾರ್ಮಿಕರ ಶೋಷಣೆಯನ್ನು ತಡೆಗಟ್ಟಿದರು. ಕಾರ್ಮಿಕರ ಶೋಷಣೆಯ ವಿರುದ್ಧ ಕಾನೂನನ್ನು ಜಾರಿ ಮಾಡಿದರು. ಇಂದು ನಮ್ಮ ಸರಕಾರ ಕಠಿಣವಾದ ಕಾರ್ಮಿಕ ಪರ ಕಾನೂನನ್ನು ಜಾರಿಗೆ ತಂದು ದುಡಿವ ಕೈಗಳಿಗೆ ನ್ಯಾಯಸಮ್ಮತ ವೇತನ ನೀತಿಯನ್ನು ಜಾರಿಗೆ ತರುವುದು ಟಿಪ್ಪುವಿಗೆ ನೀಡಬಹುದಾದ ಒಳ್ಳೆಯ ಗೌರವ.

ಟಿಪ್ಪುವನ್ನು ವಿಜ್ಞಾನ ಜಗತ್ತೇ 'ರಾಕೆಟ್ ತಂತ್ರಜ್ಞಾನದ ಪಿತಾಮಹ' ಎಂದು ಅಂಗೀಕರಿಸಿದೆ. ನಾಸಾದ ಕೇಂದ್ರ ಕಚೇರಿಯಲ್ಲಿಯೇ ಜಗತ್ತಿಗೆ ಟಿಪ್ಪು ಪರಿಚಯಿಸಿದ ರಾಕೆಟ್ ನ ಪ್ರತಿಕೃತಿಯನ್ನಿಟ್ಟು ಗೌರವಿಸಲಾಗುತ್ತದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯು.ಪಿ.ಎ. ಸರಕಾರವಿದ್ದಾಗ ಟಿಪ್ಪು ಹೆಸರಿನಲ್ಲಿ ವಿಶ್ವವಿದ್ಯಾನಿಲಯ ಸ್ಥಾಪಿಸುವ ಯೋಜನೆ ಹಾಕಿತ್ತು. ಬಲಪಂಥೀಯ, ಮತೀಯವಾದಿ ಮತ್ಸರಿಗಳ ವಿರೋಧಕ್ಕೆ ಬೆದರಿಯೋ ಏನೋ ಆಗಿನ ಸರಕಾರ ಯೋಜನೆಯನ್ನು ಕೈಬಿಟ್ಟಿತು.

ವಿಶ್ವ ವಿದ್ಯಾನಿಲಯ ಸ್ಥಾಪಿಸುವುದು ರಾಜ್ಯ ಸರಕಾರಕ್ಕೆ ಸಾಧ್ಯವಿದೆಯಾದರೂ ವಿಶ್ವವಿದ್ಯಾನಿಲಯಕ್ಕೆ ಅನುದಾನ ನೀಡುವ ಯುಜಿಸಿಯು ಕೇಂದ್ರ ಸರಕಾರದ ಅಧೀನದಲ್ಲಿರುವುದಾದ್ದರಿಂದ ಬಿಜೆಪಿಯು ಟಿಪ್ಪು ವಿ.ವಿ.ಯನ್ನು ವಿರೋಧಿಸುವುದರಿಂದ ಈಗಿನ ಸರಕಾರ ಅನುದಾನ ನೀಡದಿರಬಹುದು.‌ ಆದುದರಿಂದ ರಾಜ್ಯ ಸರಕಾರ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗೆ ಒತ್ತುಕೊಟ್ಟ ಟಿಪ್ಪುವಿನ ಹೆಸರಲ್ಲಿ ಕನಿಷ್ಠ ಒಂದು ತಾಂತ್ರಿಕ ಮಹಾವಿದ್ಯಾಲಯವನ್ನಾದರೂ ಸ್ಥಾಪಿಸಿ ಬಡ ಪ್ರತಿಭಾವಂತ ಮಕ್ಕಳಿಗೆ ಉಚಿತ ತಾಂತ್ರಿಕ ಶಿಕ್ಷಣ ನೀಡಿದರೆ ಅದು ಟಿಪ್ಪುವಿಗೆ ಕೊಡಬಹುದಾದ ಬಹುದೊಡ್ಡ ಗೌರವ.

ಟಿಪ್ಪು ತನ್ನ ಮದುವೆಯ ಸಂದರ್ಭದಲ್ಲಿ ತನ್ನ ತಂದೆ ಹೈದರಾಲಿಯಿಂದ ಕೇಳಿ ಪಡೆದ ಉಡುಗೊರೆ ಬೃಹತ್ ಗ್ರಂಥಾಲಯ. ಟಿಪ್ಪು ತನ್ನ ಆಡಳಿತಾವಧಿಯಲ್ಲಿ ಜಗತ್ತಿನಾದ್ಯಂತದ  ಬೇರೆ ಬೇರೆ ಭಾಷೆಗಳ ಶ್ರೇಷ್ಠ ಗ್ರಂಥಗಳನ್ನು ಸಂಗ್ರಹಿಸಿದ್ದರು. ಸಾಹಿತ್ಯ ಮತ್ತು ತತ್ವಜ್ಞಾನದ ಬಗ್ಗೆ ಟಿಪ್ಪು ಅಪಾರ ಒಲವನ್ನು ಹೊಂದಿದ್ದರು.

ಇಂದು ಟಿಪ್ಪುವಿನ ಹೆಸರಿಗೆ ಮಸಿ ಬಳಿಯುವಂತಹ ವಿಕೃತ, ತಿರುಚಲ್ಪಟ್ಟ ಚರಿತ್ರೆಗಳೇ ರಾರಾಜಿಸುತ್ತಿವೆ. ನಮ್ಮ ಸರಕಾರಕ್ಕೆ ಟಿಪ್ಪುವಿನ ಬಗ್ಗೆ ನಿಜಕ್ಕೂ ಕಾಳಜಿಯಿದ್ದರೆ ಕನಿಷ್ಠ ಪಕ್ಷ ಟಿಪ್ಪುವಿನ ತವರು ನಗರ ಮೈಸೂರಿನಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ " ಟಿಪ್ಪು ಸುಲ್ತಾನ್ ಅಧ್ಯಯನ ಪೀಠ" ವನ್ನು ಸ್ಥಾಪಿಸಬೇಕು.ಅದು ಟಿಪ್ಪುವಿಗೆ ಕೊಡಬಹುದಾದ ಬಹುದೊಡ್ಡ ಗೌರವ. ಸಿದ್ದರಾಮಯ್ಯ ಅವರ ಸರಕಾರ ಈ ನಿಟ್ಟಿನಲ್ಲಿ ಯೋಚಿಸಿ ಮುಂದಡಿಯಿಟ್ಟು ಟಿಪ್ಪುವಿನ ಕನಸು ನನಸಾಗಿಸಲಿ, ಆಶಯ ಈಡೇರಿಸಲಿ.

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News