ಪ್ರೊ. ಬಿ.ಸಿ.-ಮರೆತುಹೋದ ಮಹನೀಯ
ನಾಟಕಕಾರರಾಗಿ, ನಿರ್ದೇಶಕರಾಗಿ ಇಪ್ಪತ್ತನೆಯ ಶತಮಾನದ ಕನ್ನಡ ಹವ್ಯಾಸಿ ರಂಗಭೂಮಿಯ ಇತಿಹಾಸದಲ್ಲಿ ಒಂದು ಮುಖ್ಯ ಕೊಂಡಿಯಾದ ಪ್ರೊ. ಬಿ.ಚಂದ್ರಶೇಖರ್ ಅವರ ಜನ್ಮ ಶತಾಬ್ದಿ ಸದ್ದಿಲ್ಲದೆ ಸಂದುಹೋದುದನ್ನು ಕಂಡಾಗ ಕನ್ನಡಿಗರ ಜ್ಞಾಪಕ ಶಕ್ತಿ ಇಷ್ಟು ಕ್ಷಣಭಂಗುರವಾದುದೇ ಎನ್ನುವಂತಾಗುತ್ತದೆ. ಕರ್ನಾಟಕ ನಾಟಕ ಅಕಾಡಮಿಗೂ ಪ್ರೊ.ಬಿ.ಸಿಯವರ ಜನ್ಮ ಶತಾಬ್ದಿ ಗಮನಕ್ಕೆ ಬಂದಂತಿಲ್ಲ. ಇಷ್ಟು ಬೇಗ ಪ್ರೊ. ಬಿ.ಸಿ.ಯವರನ್ನು ನಮ್ಮ ನೆನಪಿನಂಗಳದಿಂದ ನೇಪಥ್ಯಕ್ಕೆ ನೂಕಿಬಿಟ್ಟವೆ.
ಕನ್ನಡ ಹವ್ಯಾಸಿ ರಂಗಭೂಮಿ ಜನ್ಮತಾಳಿದ್ದು ಹತ್ತೊಂಬತ್ತನೆ ಶತಮಾನದ ಕೊನೆಯಲ್ಲಿ. ಮೊತ್ತಮೊದಲ ಹವ್ಯಾಸಿ ನಾಟಕ ತಂಡ, ‘ಪ್ರಾಚ್ಯ ಕ್ರೀಡಾ ಸಂವರ್ಧನ ಮಂಡಳಿ’, 1899ರಲ್ಲಿ ಧಾರವಾಡದ ಸಮೀಪ ಮಡಿಹಾಳದಲ್ಲಿ ಗಣಪತಿ ಉತ್ಸವದಲ್ಲಿ ಪೌರಾಣಿಕ ನಾಟಕಗಳನ್ನು ಅಭಿನಯಿಸುವ ಮೂಲಕ ಕನ್ನಡ ಹವ್ಯಾಸಿ ರಂಭೂಮಿಯ ಚರಿತ್ರೆಗೆ ನಾಂದಿ ಹಾಡಿತು. 1905ರಲ್ಲಿ ಮುದವೀಡು ಕೃಷ್ಣರಾಯರ ನೇತೃತ್ವದಲ್ಲಿ ‘ಭಾರತ ಕಲೋತ್ತೇಜಕ ಸಂಗೀತ ಸಮಾಜ’ ತಲೆ ಎತ್ತಿ ಹವ್ಯಾಸಿ ರಂಗಭೂಮಿ ಹೊಸ ಹುರುಪನ್ನು ಪಡೆದುಕೊಂಡಿತು. ಇದರೊಂದಿಗೆ ಗಣಪತಿ ಹಬ್ಬ ಸಾಲಿನ ನಾಟಕಗಳ ಶಕೆ ಪ್ರಾರಂಭವಾಯಿತು. ನಂತರ ಹವ್ಯಾಸಿ ರಂಗಭೂಮಿ ಶಾಲಾ ಕಾಲೇಜುಗಳಿಗೆ ದಾಂಗುಡಿ ಇಟ್ಟಿತು. ವರ್ಷದ ಬೇರೆ ಬೇರೆ ಕಾಲದಲ್ಲೂ ಹವ್ಯಾಸಿ ನಾಟಕಗಳ ಪ್ರದರ್ಶನಗಳು ಶುರುವಾದವು. ಕಾಲಕ್ರಮೇಣ ಮಂದಗತಿಯಲ್ಲಿ ಬೆಳೆಯತೊಡಗಿದ್ದ ಹವ್ಯಾಸಿ ರಂಗಭೂಮಿಗೆ ನವಚೈತನ್ಯ ಬಂದದ್ದು, ಹೊಸ ರಕ್ತ ಪೂರಣವಾದದ್ದು ಇಪ್ಪತ್ತನೆಯ ಶತಮಾನದ ದ್ವಿತೀಯಾರ್ಧದಲ್ಲಿ.
1909ರಲ್ಲಿ ಶುರುವಾದ ಅಮೆಚೂರ್ ಡ್ರಮ್ಯಾಟಿಕ್ ಅಸೋಸಿಯೇಶನ್ನಿನ ಪಾಲನೆಪೋಷಣೆಯಲ್ಲಿ ಬೆಳೆದ ಹವ್ಯಾಸಿ ರಂಗಭೂಮಿಯಲ್ಲಿ ಕೈಲಾಸಂ ಅವರ ಪ್ರವೇಶದಿಂದ (1919-ನಂಕಂಪ್ನಿ)ಸಂಚಲನ ಉಂಟಾಯಿತು.ಮುಂದೆ ಶ್ರೀರಂಗ, ಶಿವರಾಮ ಕಾರಂತ, ಲಕ್ಷ್ಮಣ ರಾವ್ ಬೇಂದ್ರೆ, ಪರ್ವತವಾಣಿ, ಕ್ಷೀರಸಾಗರ, ದಾಶರಥಿ ದೀಕ್ಷಿತ್, ಎ.ಎಸ್.ಮೂರ್ತಿ ಮೊದಲಾದವರ ನಾಟಕಗಳು ಮತ್ತು ರಂಗಪ್ರಯೋಗಗಳಿಂದ ಹವ್ಯಾಸಿ ರಂಗಭೂಮಿ ಡ್ರಾಯಿಂಗ್ ರೂಮ್ ಥಿಯೇಟರಿನಲ್ಲಿ ಭದ್ರ ನೆಲೆಯನ್ನು ಕಂಡುಕೊಂಡಿತು. ಡ್ರಾಯಿಂಗ್ ರೂಮಿನಲ್ಲೇ ತೆವಳುತ್ತಿದ್ದ ಹವ್ಯಾಸಿ ರಂಗಭೂಮಿಯನ್ನು ಕಾಲೇಜು ರಂಗದ ಮೂಲಕವೇ ಪ್ರೊಸೀನಿಯಂ ಅಟ್ಟಕ್ಕೇರಿಸಿದ ಕೀರ್ತಿ ಪ್ರೊ.ಬಿ.ಸಿ.ಚಂದ್ರಶೇಖರ್ ಅವರದು. ಯಾರು ಈ ಚಂದ್ರಶೇಖರ್ ಎಂದು ಇಂದಿನ ಪೀಳಿಗೆ ಹುಬ್ಬೇರಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ.
ಕನ್ನಡ ರಂಗಭೂಮಿಯಲ್ಲಿ ಪ್ರೊ.ಬಿ.ಸಿ. ಎಂದೇ ಚಿರಪರಿಚಿತರಾದ ಬಿ.ಚಂದ್ರಶೇಖರ್ ಹುಟ್ಟಿದ್ದು ಹಾಸನದಲ್ಲಿ ನೂರು ವರ್ಷಗಳ ಹಿಂದೆ-ಮೇ 16,1916. ಪ್ರೌಢ ಶಾಲೆಯವರೆಗೆ ಹಾಸನದಲ್ಲಿ ವಿದ್ಯಾಭ್ಯಾಸ. ಮುಂದೆ ಬೆಂಗಳೂರಿನ ಇಂಟರ್‌ಮೀಡಿಯಟ್ ಕಾಲೇಜಿನಲ್ಲಿ ಹಾಗೂ ಮೈಸೂರು ಮಹಾರಾಜ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಬಿ.ಎ. (ಆನಸ್‌ರ್ -1935) ಪಾಸುಮಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ. ಪಾಸುಮಾಡಿ ಸ್ನಾತಕೋತ್ತರ ಪದವೀಧರರಾದರು. ಉನ್ನತ ಶಿಕ್ಚಣದಲ್ಲಿ ಓದಿ ಕಲಿತದ್ದು ಸಾಹಿತ್ಯ. ಬೆಂಗಳೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ 1939ರಲ್ಲಿ ವೃತ್ತಿಜೀವನ ಆರಂಭ. ಮೂರು ದಶಕಗಳಿಗೂ ಹೆಚ್ಚುಕಾಲ ಪದವಿ ಮತ್ತು ಸ್ನಾತಕೋತ್ತರ ವಿದಾರ್ಥಿಗಳಿಗೆ ಭಾಷೆ-ಕಲೆ-ಸಾಹಿತ್ಯಗಳನ್ನು ಬೋಧಿಸಿದ ಪ್ರೊ. ಬಿ.ಸಿ 1976ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಸಂಗೀತ-ನೃತ್ಯ-ನಾಟಕ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೋಂದಿದರು.
ವೃತ್ತಿಯಿಂದ ಅಧ್ಯಾಪಕರೂ ಪ್ರವೃತ್ತಿಯಿಂದ ರಂಗಕರ್ಮಿಯೂ ಆಗಿದ್ದ ಪ್ರೊ. ಬಿ.ಸಿ.ಯವರು ಅಧ್ಯಾಪನ ವೃತ್ತಿಯಿಂದ ನಿವೃತ್ತಿಹೊಂದಿದರೂ ಕೊನೆಯುಸಿರವರೆಗೆ ರಂಗಭೂಮಿಯಲ್ಲಿ ಕ್ರಿಯಾಶೀಲರಾಗಿದ್ದರು. ಅಭಿನಯ, ನಾಟಕ ರಚನೆ, ನಾಟಕ ನಿರ್ದೇಶನ ಈ ಮೂರೂ ಪ್ರತಿಭೆಗಳೂ ಸಂಗಮಿಸಿದ್ದ ಬಿ.ಸಿ.ಯವರಿಗೆ ರಂಗಭೂಮಿ ವಿದ್ಯಾರ್ಥಿ ದಿನಗಳಿಂದಲೇ ಅಂಟಿಕೊಂಡ ಗೀಳು. ಶಾಲೆಯ ವಾರ್ಷಿಕೋತ್ಸವ ಇತ್ಯಾದಿ ಸಂದರ್ಭಗಳ ನಾಟಕಗಳಲ್ಲಿ ಪಾತ್ರಮಾಡಿ ನಾಟಕದ ಹುಚ್ಚು ಬೆಳೆಸಿಕೊಂಡಿದ್ದ ಬಿ.ಸಿ.ಯವರನ್ನು ಗಾಢವಾಗಿ ಪ್ರಭಾವಿಸಿದ್ದು ವೃತ್ತಿ ರಂಗಭೂಮಿ.
ವರದಾಚಾರ್ ಕಂಪೆನಿ, ಗುಬ್ಬಿ ಕಂಪೆನಿ, ಶಿರಹಟ್ಟಿ ಕಂಪೆನಿ, ಚಾಮುಂಡೇಶ್ವರಿ ಕಂಪೆನಿ, ಪೀರ್ ಸಾಹೇಬರ ಕಂಪೆನಿ-ಹೀಗೆ ಇಪ್ಪತ್ತನೆ ಶತಮಾನದ ದ್ವಿತೀಯಾರ್ಧದವರೆಗೆ ಜೀವಂತವಾಗಿದ್ದ ಕನ್ನಡ ವೃತ್ತಿ ರಂಗಭೂಮಿಯ ಪ್ರಮುಖ ಕಂಪೆನಿಗಳ ನಾಟಕಗಳನ್ನು ತಪ್ಪದೆ ನೋಡುತ್ತಿದ್ದ ಬಿ.ಸಿ.ಯವರು ಅವುಗಳಿಂದ ಪ್ರಭಾವಿತರಾದುದರಲ್ಲಿ ಆಶ್ಚರ್ಯವೇನಿಲ್ಲ. ಜೊತೆಗೆ ಇಂಗ್ಲಿಷ್ ಸಾಹಿತ್ಯ ಬೋಧನೆಯ ವೃತ್ತಿಯಿಂದಾಗಿ ಇಂಗ್ಲಿಷ್-ಸಂಸ್ಕೃತ ನಾಟಕ ಸಾಹಿತ್ಯ ಹೃದ್ಗತವಾಗಿತ್ತು. ಪಾಠ ಹೇಳುತ್ತಿದ್ದ ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಕನ್ನಡ-ಇಂಗ್ಲಿಷ್ ನಾಟಕಗಳನ್ನು ಆಡಿಸುತ್ತ ಕಾಲೇಜು ರಂಗಭೂಮಿ ಕಟ್ಟಿದರು.
ಕನ್ನಡ ರಂಗಭೂಮಿ ಮತ್ತು ಕನ್ನಡ ಸಾಹಿತ್ಯಕ್ಕೆ ನಾಟಕಕಾರ ಬಿ.ಸಿ.ಯವರ ಕೊಡುಗೆ ಗಮನಾರ್ಹವಾದದ್ದು. ಬಿ.ಸಿ.ಯವರು ಸುಮಾರು ಇಪ್ಪತ್ತೊಂದು ನಾಟಕಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಐದು ಮಕ್ಕಳ ನಾಟಕಗಳು, ಐದು ಭಾಸನ ಏಕಾಂಕ ನಾಟಕಗಳ ಕನ್ನಡ ಅವತರಣಿಕೆಗಳು. ‘ಪರಹಿತ ಪಾಷಾಣ’ ಜೋಸೆಫ್ ಕ್ಲೆೆಸ್ಸರಿಂಗ್‌ನ ‘ಆರ್ಸೆನಿಕ್ ಆ್ಯಂಡ್ ಓಲ್ಡ್‌ಲೇಸ್’ನ ಕನ್ನಡ ಅನುವಾದ. ‘ಅಪಕಾರಿಯ ಕಥೆ’ ಡೇವಿಡ್ ಹಾರ್ಸ್‌ಬರೋನ ‘ದಿ ಅನ್‌ಗ್ರೇಟ್‌ಫುಲ್ ಮ್ಯಾನ್’ನ ಅನುವಾದ. ತಲೆಮಾರುಗಳು, ವಿಶ್ವಾಮಿತ್ರನ ತಪಸ್ಸು, ಸಂಚಯನ, ಚಿರಸ್ಮರಣೆ, ಮಣ್ಣಿನ ಬಂಡಿ ಇತರ ನಾಟಕಗಳು.
ಚಿರಸ್ಮರಣೆ ನಿರಂಜನರ ಜನಪ್ರಿಯ ಕಾದಂಬರಿಯ ನಾಟಕ ರೂಪಾಂತರವಾದರೆ ‘ಮಣ್ಣಿನ ಬಂಡಿ’ ಮೃಚ್ಛಕಟಿಕದ ಅನುವಾದ. ಬಹುತೇಕ ಈ ಎಲ್ಲ ನಾಟಕಗಳೂ ಬಿ.ಸಿ.ಯವರ ನಿರ್ದೇಶನದಲ್ಲೇ ರಂಗದ ಮೇಲೆ ಪ್ರಯೋಗಗೊಂಡು ಯಶಸ್ವಿಯಾಗಿರುವುದು ಹಾಗೂ ರಂಗಕೃತಿ ಗಳಾಗಿ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿರುವುದು ಒಂದು ವಿಶೇಷ. ಅಭಿನಯದಲ್ಲಿ ಬಿ.ಸಿ.ಯವರ ರಂಗ ಪ್ರವೇಶವಾದದ್ದು ಸ್ತ್ರೀ ಪಾತ್ರಗಳ ಮೂಲಕ.
ಶಾಲಾ ಕಾಲೇಜು ನಾಟಕಗಳಲ್ಲಿ ಹೆಣ್ಣು ಪಾತ್ರಗಳನ್ನು ಮಾಡಿ ಮೆಚ್ಚುಗೆ ಪಡೆದ ಬಿ.ಸಿ.ಮುಂದೆ ವಿಭಿನ್ನ ಬಗೆಯ ಪಾತ್ರಗಳಲ್ಲಿ ತಮ್ಮ ಅಭಿನಯ ಪ್ರತಿಭೆಯನ್ನು ಪ್ರದರ್ಶಿಸಿ ಒಳ್ಳೆಯ ನಟನೆಂಬ ಪ್ರಶಂಸೆಗೆ ಪಾತ್ರರಾದರು. ಬಿ.ವಿ.ಕಾರಂತರ ನಿರ್ದೇಶನದ ಲಂಕೇಶರ ‘ದೊರೆ ಈಡಿಪಸ್’(1972), ಪ್ರಸನ್ನ ನಿರ್ದೇಶನದ ಬ್ರೆಕ್ಟನ ‘ತಾಯಿ’(1976), ಆರ್.ನಾಗೇಶ್ ನಿರ್ದೇಶನದ ಧರ್ಮವೀರ ಭಾರತಿಯವರ ‘ಅಂಧಯುಗ’, ಅಬ್ಬೂರು ಜಯತೀರ್ಥ ನಿರ್ದೇಶನದ ಡೇವಿಡ್ ಹಾರ್ಸ್‌ಬರೋನ ‘ಅಪಕಕಾರಿಯ ಕಥೆ’ ಮೊದಲಾದ ನಾಟಕಗಳಲ್ಲಿ ಬಿ.ಸಿ.ಯವರ ಮನೋಜ್ಞ ಅಭಿನಯ ಈಗಲೂ ಅರವತ್ತರ ದಶಕದ ಹವ್ಯಾಸಿ ರಂಗಭೂಮಿಯ ಒಂದು ದಾಖಲೆಯಾಗಿ ಉಳಿದಿದೆ.
ನಾಟಕಕಾರರಾಗಿ, ನಟರಾಗಿ, ನಿರ್ದೇಶಕರಾಗಿ ಕನ್ನಡ ಹವ್ಯಾಸಿ ರಂಗಭೂಮಿ ಪುರೋಭಿವೃದ್ಧಿ ಹೊಂದುತ್ತಿದ್ದ ದಿನಗಳಲ್ಲೇ ದೊಡ್ಡ ಹೆಸರಾಗಿದ್ದ ಪ್ರೊ. ಬಿ.ಸಿ.ಯವರ ಹೆಗ್ಗಳಿಕೆಯೆಂದರೆ ಅವರು ಸಾಹಿತ್ಯದ ಮೇಷ್ಟ್ರಾಗಿ ವಿದ್ಯಾರ್ಥಿಗಳಲ್ಲಿ ನಾಟಕಾಭಿರುಚಿಯನ್ನು ಮೂಡಿಸಿದ್ದು ಹಾಗೂ ರಂಗ ನಿರ್ದೇಶಕರಾಗಿ ವಿದ್ಯಾರ್ಥಿ ಪ್ರತಿಭೆಗಳನ್ನು ಗುರುತಿಸಿ ಅವರನ್ನು ರಂಗಭೂಮಿಯಲ್ಲಿ ತೊಡಗಿಸಿದ್ದು. ಕನ್ನಡ ಹವ್ಯಾಸಿ ರಂಗಭೂಮಿಗೆ ಪ್ರೊ. ಬಿ.ಸಿ.ಯವರ ಕೊಡುಗೆ ಗುರುತಿಸುವಾಗ ಈ ಎರಡು ಅಂಶಗಳು ಮುಖ್ಯವಾಗಿ ನಮ್ಮ ಗಮನ ಸೆಳೆಯುತ್ತವೆ.
1960ರಲ್ಲಿ ಹುಟ್ಟಿದ ಬೆಂಗಳೂರು ಲಿಟ್ಲ್ ಥಿಯೇಟರ್(ಬಿ.ಎಲ್.ಟಿ) ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ಬಿ.ಸಿ.ಯವರು, ಅದಕ್ಕೂ ಮೊದಲೇ ನಾಟ್ಯ ಸಂಘ-ಥಿಯೇಟರ್ ಸೆಂಟರ್ ನಡಸುತ್ತಿದ್ದ ಉಳ್ಳಾಲ್ ಶೀಲ್ಡ್ ವಾರ್ಷಿಕ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಕಾಲೇಜು ವಿದ್ಯಾರ್ಥಿಗಳನ್ನು ಹುರಿದುಂಬಿಸುವುದರಲ್ಲಿ ಹಾಗೂ ವಿದ್ಯಾರ್ಥಿಗಳಿಗೆ ತಾಲೀಮು ನೀಡುವುದರಲ್ಲಿ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡ ಮೇಷ್ಟ್ರಾಗಿದ್ದರು. ಉಳ್ಳಾಲ್ ಶೀಲ್ಡ್ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸುವುದೆಂದರೆ ಆ ದಿನಗಳಲ್ಲಿ ಅಭಿನಯ- ನಿರ್ದೇಶನಗಳಲ್ಲಿ ಪರೀಕ್ಷೆ ತೆಗೆದುಕೊಂಡಂತೆಯೇ ಎಂದು ಭಾವಿಸಲಾಗಿತ್ತು. ಈ ಪರೀಕ್ಷೆ ಮೂಲಕ ರಂಗ ಪ್ರವೇಶದ ಅರ್ಹತಾ ಪತ್ರ ಪಡೆಯುತ್ತಿದ್ದ ವಿದ್ಯಾರ್ಥಿಗಳು ಮುಂದೆ ಬಿ.ಎಲ್.ಟಿ.ಯಲ್ಲೋ ಅಥವಾ ಹವ್ಯಾಸಿ ತಂಡ ಕಟ್ಟಕೊಂಡೋ ಬಣ್ಣದ ಗೀಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದರು.
ಹೀಗೆ ಮುಂದುವರಿಸಿಕೊಂಡು ಹೋಗಿ ಪ್ರಸಿದ್ಧರಾದ ಆರ್.ನಾಗೇಶ್, ಎಚ್.ವೆಂಕಟಸುಬ್ಬಯ್ಯ, ಬಿ.ವಿ.ರಾಜಾರಾಮ್, ಸಿ.ಆರ್.ಸಿಂಹ, ಕಪ್ಪಣ್ಣ ಸೇರಿದಂತೆ ಅನೇಕರು ಪ್ರೊ. ಬಿ.ಸಿ. ಗರಡಿಯಲ್ಲಿ ತರಬೇತಾದವರು. ಎಪ್ಪತ್ತರ ದಶಕ ಕನ್ನಡ ಹವ್ಯಾಸಿ ರಂಗಭೂಮಿಯ ಉತ್ಕರ್ಷದ ಕಾಲಘಟ್ಟ. ಬಿ.ವಿ. ಕಾರಂತರ ಅಗಮನದಿಂದ ಹವ್ಯಾಸಿ ರಂಗಭೂಮಿಯ ವಾತಾವರಣದಲ್ಲಿ ಹೊಸ ಗಾಳಿ ಬೀಸತೊಡಗಿತು. ಕಾರಂತರು ಹವ್ಯಾಸಿ ರಂಗಭೂಮಿಯಲ್ಲಿ ಪ್ರಯೋಗಶೀಲತೆಯ ಜೊತೆಗೆ ವೃತ್ತಿರಂಗಭೂಮಿಯ ವೃತ್ತಿಪರತೆಯನ್ನೂ ಕಸಿಮಾಡಿದರು. ಜಾನಪದ ರಂಗಭೂಮಿಯ ನೃತ್ಯ ಸಂಗೀತಗಳನ್ನು ಅಳವಡಿಸಿಕೊಂಡರು. ನಾಟಕ ಕೇವಲ ಬೌದ್ಧಿಕ ಕಸರತ್ತಲ್ಲ, ಮನರಂಜನಾ ಪ್ರಧಾನವಾದ ಪ್ರದರ್ಶನ ಕಲೆ ಎಂಬುದನ್ನು ತೋರಿಸಿಕೊಟ್ಟರು. 1971ರ ಶುರುವಿಗೇ ರವೀಂದ್ರ ಕಲಾಕ್ಷೇತ್ರದ ಬಯಲಿನಲ್ಲಿ ಬಿ.ವಿ.ಕಾರಂತರ ನಿರ್ದೇಶನದಲ್ಲಿ ನಡೆದ ನಾಟಕೋತ್ಸವದಲ್ಲಿ ಪ್ರದರ್ಶನಗೊಂಡ ‘ದೊರೆ ಈಡಿಪಸ್’, ‘ಸಂಕ್ರಾಂತಿ’ ಮತ್ತು ‘ಜೋಕುಮಾರಸ್ವಾಮಿ’ ಪ್ರಯೋಗಗಳು ಹೊಸದಿಗಂತವೊಂದನ್ನು ತೆರೆದು ಕನ್ನಡ ಹವ್ಯಾಸಿ ರಂಗಭೂಮಿಯ ಪುನರ್ನವಕ್ಕೆ ಕಾರಣವಾದವು. ಈ ಪುನರ್ನವ ಏಕಾಏಕಿ ಕಾರಂತರ ಮಾಂತ್ರಿಕಸ್ಪರ್ಶ ಮಾತ್ರದಿಂದಲೇ ಸಂಭವಿಸಿದ್ದಲ್ಲ ಎಂಬುದನ್ನು ನಾವು ಮರೆಯುವಂತಿಲ್ಲ.
ಇದಕ್ಕೂ ಮೊದಲೇ ಪ್ರೊ.ಬಿ.ಸಿ.ಯವರು ತಮ್ಮದೇ ಮಿತಿಯಲ್ಲಿ ಹವ್ಯಾಸಿ ರಂಗಭೂಮಿಗೆ ನವಚೈತನ್ಯತುಂಬುವ ಪ್ರಯತ್ನಗಳನ್ನು ಮಾಡಿದ್ದರು. ಈ ಮಾತಿಗೆ ನಿದರ್ಶನವಾಗಿ ಬಿ.ಸಿ.ಯವರ ನಿರ್ದೇಶನದ ಪಿ.ಲಂಕೇಶರ ‘ತೆರಗಳು’(1966), ಪೂಚಂತೇಯವರ ‘ಯಮಳಪ್ರಶ್ನೆ’, ಕಾರ್ನಾಡರ ‘ಹಿಟ್ಟಿನ ಹುಂಜ, ಸುಮತೀಂದ್ರ ನಾಡಿಗರ ‘ಬಕ್ಕತಲೆ ನರ್ತಕಿ’ ಮೊದಲಾದ ಪ್ರಯೋಗಗಳನ್ನು ಗಮನಿಸಬಹುದು. ನಾಟಕ ಪ್ರದರ್ಶನದಲ್ಲಿ ಹೊಸ ಮಾರ್ಗವೊಂದನ್ನು ಕಂಡುಕೊಳ್ಳುವ ಬಿ.ಸಿ.ಯವರ ಹಂಬಲ-ತೊಳಲಾಟಗಳು ಈ ರಂಗ ಪ್ರಯೋಗಗಳಲ್ಲಿ ಸ್ಪಷ್ಟವಾಗಿ ಕಂಡುಬಂದವು. ಇದು ಪೂರ್ಣವಾಗಿ ಕೈಗೂಡಿದ್ದು ಕಾರ್ನಾಡರ ‘ತುಘಲಕ್’(1968) ಪ್ರಯೋಗದಲ್ಲಿ. ರಂಗಭೂಮಿ ನಿರ್ದೇಶಕನ ಮಾಧ್ಯಮವೆಂಬುದರ ಸ್ಪಷ್ಟಹೊಳಹನ್ನು ಬಿ.ಸಿ. ಈ ನಾಟಕದಲ್ಲಿ ತೋರಿಸಿಕೊಟ್ಟಿದ್ದರು.
‘ತುಘಲಕ್’ನ ಸಂಕೀರ್ಣ ವ್ಯಕ್ತಿತ್ವವನ್ನು ರಂಗಭೂಮಿ ಪರಿಭಾಷೆಯಲ್ಲಿ ಪರಿಣಾಮಕಾರಿಯಾಗಿ ಅನಾವರಣಗೊಳಿಸಿದ್ದರ ಜೊತೆಗೆ ಬಿ.ಸಿ.ಯವರು ಈ ನಾಟಕದ ಮೂಲಕ ಸಿ.ಆರ್.ಸಿಂಹ ಮೊದಲಾದ ಪ್ರತಿಭಾನ್ವಿತ ನಟರನ್ನೂ ಕಪ್ಪಣ್ಣ ಅವರಂಥ ಬೆಳಕು ತಜ್ಞರನ್ನು ಪರಿಚಯಿಸಿದ್ದರು. ಇದಲ್ಲದೆ ವಸ್ತುವಿಷಯಗಳಲ್ಲಿ ತೀರ ಭಿನ್ನವಾದ ‘ತೆರೆಗಳು’, ‘ಯಮಳಪ್ರಶ್ನೆ’, ‘ಹಿಟ್ಟಿನ ಹುಂಜ’, ‘ಬೊಕ್ಕತಲೆ ನರ್ತಕಿ’, ‘ತುಘಲಕ್’ ಇಂಥ ನಾಟಕಗಳನ್ನು ರಂಗದ ಮೇಲೆ ತರಲು ಆಯ್ಕೆ ಮಾಡಿಕೊಳ್ಳುವ ಮೂಲಕ ಬಿ.ಸಿ. ಪ್ರಹಸನಗಳಲ್ಲಿ ಹೂತುಹೋಗಿದ್ದ ಪ್ರೇಕ್ಷಕರ ಮನಸ್ಸುಗಳಲ್ಲಿ ಹೊಸ ಅಭಿರುಚಿ-ಹೊಸ ಸಂವೇದನೆಗಳಿಗೆ ಅಂಕುರಾರ್ಪಣ ಮಾಡಿದ್ದರು. ಹೀಗೆ, ಈ ನಾಟಕಗಳ ಮೂಲಕ, ಬಿ.ವಿ.ಕಾರಂತರ ಪ್ರಯೋಗಗಳಿಗೆ ಪೂರ್ವಭಾವಿ ಅಗತ್ಯವಾಗಿದ್ದ ಭೂಮಿಕೆಯೊಂದು ಸಿದ್ಧಗೊಂಡಿತ್ತು. ಎಂದೇ ಎಪ್ಪತ್ತರ ದಶಕದಲ್ಲಿ ಕನ್ನಡ ಹವ್ಯಾಸಿ ರಂಗಭೂಮಿ ಕಾರಂತರ ಪ್ರಯೋಗಗಳ ಮೂಲಕ ಪುನರ್ನವಕ್ಕೆ ತೆರೆದುಕೊಂಡದ್ದಕ್ಕೆ ಭೂಮಿಕೆಯನ್ನು ಹದಗೊಳಿಸಿದ ಕೀರ್ತೀ ಪ್ರೊ.ಬಿ.ಸಿ.ಯವರಿಗೆ ಸಲ್ಲಬೇಕು.
ನಾಟಕಕಾರರಾಗಿ, ನಿರ್ದೇಶಕರಾಗಿ ಇಪ್ಪತ್ತನೆಯ ಶತಮಾನದ ಕನ್ನಡ ಹವ್ಯಾಸಿ ರಂಗಭೂಮಿಯ ಇತಿಹಾಸದಲ್ಲಿ ಒಂದು ಮುಖ್ಯ ಕೊಂಡಿಯಾದ ಪ್ರೊ. ಬಿ.ಚಂದ್ರಶೇಖರ್ ಅವರ ಜನ್ಮ ಶತಾಬ್ದಿ ಸದ್ದಿಲ್ಲದೆ ಸಂದುಹೋದುದನ್ನು ಕಂಡಾಗ ಕನ್ನಡಿಗರ ಜ್ಞಾಪಕ ಶಕ್ತಿ ಇಷ್ಟು ಕ್ಷಣಭಂಗುರವಾದುದೇ ಎನ್ನುವಂತಾಗುತ್ತದೆ. ಕರ್ನಾಟಕ ನಾಟಕ ಅಕಾಡಮಿಗೂ ಪ್ರೊ.ಬಿ.ಸಿಯವರ ಜನ್ಮ ಶತಾಬ್ದಿ ಗಮನಕ್ಕೆ ಬಂದಂತಿಲ್ಲ. ಇಷ್ಟು ಬೇಗ ಪ್ರೊ. ಬಿ.ಸಿ.ಯವರನ್ನು ನಮ್ಮ ನೆನಪಿನಂಗಳದಿಂದ ನೇಪಥ್ಯಕ್ಕೆ ನೂಕಿಬಿಟ್ಟವೆ? ‘ಭಾಗವತರು’ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಪ್ರೊ. ಬಿ.ಸಿ.ಯವರನ್ನು ಕನ್ನಡದ ಅಷ್ಟ ದಿಗ್ಗಜರ ಸಾಲಿನಲ್ಲಿ ನಿಲ್ಲಿಸಿ ಸ್ಮರಿಸಿರುವುದು ಒಂದು ಪುಟ್ಟ ಸಮಾಧಾನ.