ಜನ ಅರಿವಿಲ್ಲದೆ ಸ್ವಾಗತಿಸಿದ ಕೈಗಾರಿಕೆಗಳು

Update: 2017-11-21 18:24 GMT

ಕಾಟಿಪಳ್ಳದ ಊರು ಭೌಗೋಳಿಕವಾಗಿ ಕಾಡು ಗುಡ್ಡಗಳ ಪ್ರದೇಶವೇ ಆಗಿದ್ದು ಗುಡ್ಡಗಳ ನಡುವಿನ ತಗ್ಗಿನಲ್ಲಿ ಪಳ್ಳಗಳು ಇದ್ದುದು ಆ ನೀರಿನ ಪಳ್ಳಗಳಲ್ಲಿ ಕಾಟಿಗಳು ಅಂದರೆ ಕಾಡು ಕೋಣಗಳು ಇರುತ್ತಿದ್ದುವು ಎನ್ನುವುದು ಊಹೆಯಲ್ಲ. ಕುತ್ತೆತ್ತೂರು, ಬಾಳ, ಕಾನ, ಕಳವಾರು, ಸೂರಿಂಜೆಗಳಲ್ಲಿದ್ದ ನಿವಾಸಿಗಳ ಅನುಭವದ ಸತ್ಯಗಳು. ಬರೇ ಕಾಟಿಗಳಲ್ಲ, ಹುಲಿ ಚಿರತೆಗಳೂ ಇದ್ದುವು ಎನ್ನುವುದರಲ್ಲಿ ಆ ಕಾಡಿನ ದಾರಿಯಲ್ಲಿ ವಿದ್ಯಾದಾಯಿನಿಗೆ ಬರುತ್ತಿದ್ದ ಈಗ ಮುಂಬೈ ನಿವಾಸಿಯಾಗಿರುವ ತುಳು ಕನ್ನಡದ ಸಾಹಿತಿ ಡಾ. ಸುನೀತಾ ಎಂ. ಶೆಟ್ಟಿ ತನ್ನ ಬರಹಗಳಲ್ಲಿ ದಾಖಲಿಸಿದ್ದಾರೆ. ಅಂತಹ ಗುಡ್ಡ ಜನವಸತಿಯ ವಲಯವಾದಾಗ ಪ್ರಾಣಿಗಳು ಎಲ್ಲಿ ಗುಳೇ ಹೋದುವು ಗೊತ್ತಿಲ್ಲ.

ನಾವಿರುವಾಗ ದೂರದಲ್ಲಿ ರಾತ್ರಿ ನರಿಗಳು ಕೂಗುವುದು ಕೇಳುತ್ತಿತ್ತು. ಜನವಸತಿಯ ಈ ಸ್ಥಳ ಹಳ್ಳಿಯ ಊರಾಗಿದ್ದುದು ಜನರಿಗೆ ಬೇಕಾದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ವಿದ್ಯುದ್ದೀಪ, ರಸ್ತೆ ಸಾರಿಗೆ, ಶಾಲೆಗಳಿಂದ ನಗರ ಅನ್ನಿಸಿಕೊಳ್ಳುತ್ತಿದ್ದಂತೆಯೇ ರಾಷ್ಟ್ರೀಯ ಹೆದ್ದಾರಿಯಿಂದ ಒಂದಿಷ್ಟು ಒಳಗಡೆ ಇದ್ದ ಊರಿಗೆ ಮಂಗಳೂರು ಮುಂಬೈ ರೈಲು ಪ್ರಯಾಣದ ರೈಲು ನಿಲ್ದಾಣ ಸಮೀಪದಲ್ಲೇ ನಿರ್ಮಾಣವಾಗುವ ಯೋಗ ಬಂತು. ಮಂಗಳೂರಿನಿಂದ ಮುಂಬೈಗೆ ರೈಲು ಸಂಪರ್ಕದ ಬೇಡಿಕೆ ಸ್ವಾತಂತ್ರೋತ್ತರದ ಪ್ರಾರಂಭದ ದಿನಗಳಲ್ಲೇ ಇತ್ತು. ಅವಿಭಜಿತ ದ.ಕ. ಜಿಲ್ಲೆಯ ಸಂಸದ ಟಿ.ಎ.ಪೈ ಅವರು ರೈಲ್ವೆ ಮಂತ್ರಿಯಾದಾಗ ಇದು ಸಿಕ್ಕಿಯೇ ಸಿಗುತ್ತದೆ ಎನ್ನುವ ಭರವಸೆಯಿದ್ದುದು ಸುಳ್ಳಾಗಿತ್ತು. ಮುಂದೆ ಮಂಗಳೂರು ಮೂಲದ ಮುಂಬೈ ನಿವಾಸಿ ಕಾರ್ಮಿಕ ಮುಖಂಡ ಜಾರ್ಜ್ ಫೆರ್ನಾಂಡಿಸ್ ರೈಲ್ವೆ ಮಂತ್ರಿಯಾದಾಗ ಇದು ಈಡೇರುವ ಕಾರ್ಯ ಪ್ರಾರಂಭವಾಯಿತು. ಆ ಹಿನ್ನೆಲೆಯಲ್ಲಿ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಕಂಕನಾಡಿ, ಪಡೀಲ್, ಕಣ್ಣೂರು, ಜೋಕಟ್ಟೆ, ಹೊನ್ನಕಟ್ಟೆ, ಸುರತ್ಕಲ್, ಮುಲ್ಕಿಯಾಗಿ ಸಾಗುವ ರೈಲು ಹಳಿ ನಿರ್ಮಾಣದ ಕಾರ್ಯಗಳು ವೇಗದಿಂದ ಪ್ರಾರಂಭವಾಯಿತು. ಮೊದಲಿಗೆ ಹೊನ್ನಕಟ್ಟೆಯಲ್ಲಿ ರಸ್ತೆ ವಿಭಜಿಸಿ ರಸ್ತೆಯಿಂದ ಆಳಕ್ಕೆ ಅಂಡರ್‌ಪಾಸ್ ಎಂಬಂತೆ ಹಳಿ ನಿರ್ಮಾಣವಾಯಿತು. ಸ್ಥಳೀಯ ಜನರಿಗೆ, ವಾಹನಗಳಿಗಾಗಿ ಮೇಲ್ಸೇತುವೆಯೂ ನಿರ್ಮಾಣವಾಯಿತು. ಈ ರಸ್ತೆಯ ಬಳಿಕ ಮುಂದುವರಿದ ರೈಲು ಹಳಿಯು ಅದೇ ಪಾತಳಿಯಲ್ಲಿ ಸುರತ್ಕಲ್ ಪೇಟೆಯಿಂದ ಒಳಗಡೆ ದಾಟಿ ಹೋಗಬೇಕಾಗಿತ್ತು. ಈಗ ಅಲ್ಲಿಯೂ ರಸ್ತೆಯನ್ನು ವಿಭಜಿಸುವ ಕಾರ್ಯದಲ್ಲಿ ಮಣ್ಣನ್ನು ಅಗೆವ ಸಮರೋಪಾದಿ ಕೆಲಸ ನೋಡಿದಾಗ ರಾಜಕೀಯ ಇಚ್ಛಾಶಕ್ತಿ ಇದ್ದರೆ ಕೆಲಸ ಕಾರ್ಯಗಳನ್ನು ನಮ್ಮ ಕಣ್ಣೆದುರಲ್ಲೇ ನೋಡಿ ಸಂತೋಷ ಪಡೆಯಬಹುದೆಂಬ ಅನುಭವವೂ ಆಯಿತು. ಸುರತ್ಕಲ್ ಪೇಟೆಯಿಂದ ಕಾಟಿಪಳ್ಳ, ಕೃಷ್ಣಾಪುರಗಳಿಗೆ ತಿರುವು ತೆಗೆದುಕೊಳ್ಳುವ ರಸ್ತೆಗಳಿಗಿಂತ ಸ್ವಲ್ಪ ಮೊದಲೇ ಮುಖ್ಯರಸ್ತೆಯನ್ನು ಕಡಿದು ಹಾಕಿ ರೈಲು ಹಳಿ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಬಸ್ಸುಗಳು ಹೋಗುವುದಕ್ಕೆ ಒಂದು ಬದಿಯಲ್ಲಿ ಮಣ್ಣಿನ ದಾರಿ ಮಾಡಲಾಯಿತು.

ರೈಲು ಹಳಿಗಳಿಗಾಗಿ ಕಬ್ಬಿಣದ ಹಳಿಗಳು, ಜಲ್ಲಿ ಕಲ್ಲುಗಳು ಅಂದಿನ ಕೆಇಬಿಯ ಪಕ್ಕದ, ಎದುರಿನ ಖಾಲಿ ಜಾಗಗಳಲ್ಲಿ ರಾಶಿ ರಾಶಿ ಬಿದ್ದುದನ್ನು, ಅಲ್ಲಿ ಕೆಲಸ ಕಾರ್ಮಿಕರ ಜೋಪಡಿಗಳನ್ನು ಕಂಡಾಗ ದೇಶದ ಪ್ರಗತಿಯಲ್ಲಿ ಜನಪ್ರತಿನಿಧಿಗಳ ಅಥವಾ ಸರಕಾರದ ಇಚ್ಛಾಶಕ್ತಿಯೊಂದಿಗೆ ದೇಶದ ಸಾಮಾನ್ಯ ಪ್ರಜೆಗಳಾಗಿರುವ ಕಾರ್ಮಿಕರ ತ್ಯಾಗ ಕಡಿಮೆಯದಲ್ಲ ಎಂಬಂತೆ ಅವರ ಕಠಿಣ ದುಡಿಮೆಯ ಪ್ರಾತ್ಯಕ್ಷತೆ ನೋಡಲು ಸಿಗುತ್ತಿತ್ತು. ಇಷ್ಟೆಲ್ಲಾ ನಡೆಯುವಾಗ ನನಗೆ ಅಚ್ಚರಿಯಾದುದು ಇಲ್ಲಿ ಕೆಲಸ ಮಾಡಲು ಬಂದ ಕೂಲಿ ಕಾರ್ಮಿಕರು ತಮಿಳರು ಮತ್ತು ಮಲೆಯಾಳಿಗಳು. ಅವರೆಲ್ಲಾ ಮಹಿಳೆಯರು ಸೇರಿದಂತೆ ತಮ್ಮ ಮಕ್ಕಳು ಮರಿಗಳನ್ನು ಪಕ್ಕದಲ್ಲೇ ಇರಿಸಿಕೊಂಡು ಜಲ್ಲಿ ಒಡೆಯುವ, ಹಳಿ ನಿರ್ಮಿಸುವ ಕೆಲಸಗಳನ್ನು ನನ್ನೂರಿನ ನಿರುದ್ಯೋಗಿ ಹುಡುಗರು ನಿಂತು ನೋಡುತ್ತಿದ್ದರೂ ಅವರ್ಯಾರಿಗೂ ಅದು ದುಡಿಮೆಯ ಪಾಠವಾಗದಿರುವ ಬಗ್ಗೆ ನನಗೆ ಬೇಸರವಾಗುತ್ತಿತ್ತು. ನನ್ನ ಊರಿನ ಎನ್ನುವುದರೊಂದಿಗೆ ವಿಶಾಲವಾದ ವ್ಯಾಪ್ತಿಯಲ್ಲಿಯೂ ದುಡಿದು ಉಣ್ಣಬೇಕೆನ್ನುವ ಸಂಸ್ಕೃತಿ ಅರೆ ವಿದ್ಯಾವಂತರಾಗಿ ಒಂದಿಷ್ಟು ಅಕ್ಷರ ಕಲಿತ ಎಳೆಯ ಪೀಳಿಗೆಗೆ ಯಾಕೆ ಇಲ್ಲ ಎನ್ನುವುದು ಅಂದಿನಷ್ಟೇ ವಿಷಾದದ ವಿಚಾರ ಇಂದಿನ ಯುವ ಪೀಳಿಗೆಯ ಬಗೆಗೂ ಇದೆ. ಇಂದು ಕೂಡಾ ತಾಯಿ, ಅಕ್ಕ, ತಂಗಿಯರ ದುಡಿಮೆಯಲ್ಲೇ ತಮ್ಮ ಅನ್ನವನ್ನು ಕಾಣುವವರ ಸಂಖ್ಯೆ ಕಡಿಮೆಯಾಗಿಲ್ಲ. ಆ ದಿನಗಳಲ್ಲೂ ‘‘ಬೆನ್ನು ಬಗ್ಗುವುದಿಲ್ಲ’’ ಎನ್ನುವುದು ಹುಡುಗರ ಬಗ್ಗೆ ಸತ್ಯವಾಗಿದ್ದ ಮಾತು ಇಂದಿಗೂ ಸತ್ಯವಾಗಿಯೇ ಉಳಿದಿದೆಯಲ್ಲಾ? ನಾಲ್ಕಕ್ಷರ ಕಲಿತ ಹುಡುಗರಿಗೆ ಬಿಳಿ ಕಾಲರಿನ ಕೆಲಸ ಬೇಕೆಂಬ ನಿರೀಕ್ಷೆ ಇದೆ. ಆದರೆ ಅದಕ್ಕೆ ಬೇಕಾದ ಶೈಕ್ಷಣಿಕ ಅರ್ಹತೆ ಪಡೆಯುವ ಶಾಲಾ ಕಾಲೇಜುಗಳ ದಿನಗಳಲ್ಲಿ ಕಲಿಕೆಯ ಶ್ರಮ, ಶ್ರದ್ಧೆ ಇಲ್ಲದಿರುವುದಕ್ಕೆ ಹೆತ್ತವರು ಹೊಣೆಯೇ?

 ಕೊಂಕಣ ರೈಲ್ವೆಯ ದಾರಿ ಸಂಪೂರ್ಣಗೊಳ್ಳುತ್ತಿದ್ದಂತೆಯೇ ಎಲ್ಲರೂ ಗೋವಾಕ್ಕೆ, ಮುಂಬೈಗೆ ಹೋಗುವ ಕನಸು ಕಾಣುತ್ತಿದ್ದುದು ಸಹಜವೇ. ಬಹಳ ಮಂದಿ ರೈಲಿನಲ್ಲಿ ಪ್ರಯಾಣಿಸಿ ಮುಂಬೈಯಲ್ಲಿದ್ದ ಬಂಧು ಬಳಗವನ್ನು ನೋಡಿ ಬಂದುದೂ ಆಯಿತು. ಈಗ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಪ್ರವಾಸಕ್ಕೆ ಅನುಕೂಲವಾಯಿತು. ಗೋವಾ, ಮುರುಡೇಶ್ವರ ಬಹಳ ಹತ್ತಿರದ ಪ್ರವಾಸಿ ತಾಣಗಳಾದವು. ನಾವು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಗೋವಾ, ಮುರುಡೇಶ್ವರ ನೋಡಿದ್ದೂ ಆಯಿತು. ಮುಂಬೈಗೆ ಕೌಟುಂಬಿಕ ಪ್ರವಾಸ ಕೈಗೊಂಡದ್ದೂ ಆಯಿತು. ಸಹ್ಯಾದ್ರಿಯ ಬೆಟ್ಟದ (ಪಶ್ಚಿಮ ಘಟ್ಟಗಳ) ನಡುವಿನ ಸುರಂಗಗಳಲ್ಲಿ ರೈಲು ಸಾಗುವಾಗ ಭಯಕ್ಕಿಂತ ಇಂತಹ ಅದ್ಭುತ ಸಾಧನೆ ಮಾಡಿದ ಇಂಜಿನಿಯರ್‌ಗಳ, ಇದಕ್ಕಾಗಿ ಶ್ರಮಿಸಿದ ಶ್ರಮಿಕರ ಕಷ್ಟಗಳೆಲ್ಲ ಕಣ್ಣೆದುರು ಹಾದು ಹೋದಂತಾಯ್ತು. ಜನರೆಲ್ಲಾ ‘ಹೋ’ ಎಂಬ ಉದ್ಗಾರಗಳನ್ನು ಮಾಡಿದಾಗ ಅದು ಅವರೆಲ್ಲರಿಗೆ ಹೇಳಿದ ಜೈಕಾರದಂತೆ ಭಾಸವಾಯ್ತು. ರೈಲು ಹಳಿಯ ಕೆಲಸ ಸಂಪೂರ್ಣಗೊಂಡಂತೆ ಕಡಿದು ವಿಭಜಿಸಿದ ಅಗಲ ಕಿರಿದಾದ ಬಸ್ಸಿನ ರಸ್ತೆಗೆ ಗಟ್ಟಿಮುಟ್ಟಿನ ಮೇಲ್ಸೇತುವೆ ನಿರ್ಮಾಣವಾಗಿ ಬಸ್ಸುಗಳಿಗೆ ಉತ್ತಮ ರಸ್ತೆಯು ಒದಗಿತು. ಇದೀಗ ಕಾಟಿಪಳ್ಳಕ್ಕೆ ಇನ್ನೊಂದು ಅದ್ಭುತ ಅನುಭವದ ಅವಕಾಶ. ಪಣಂಬೂರು, ಬೈಕಂಪಾಡಿ ಕೈಗಾರಿಕಾ ವಲಯಗಳಾದಂತೆಯೇ ಇದೀಗ ತೋಕೂರು, ಕಾನ, ಬಾಳ, ಕುತ್ತೆತ್ತೂರುಗಳನ್ನೆಲ್ಲಾ ವ್ಯಾಪಿಸುವ ಬಹುದೊಡ್ಡ ಕೈಗಾರಿಕೆ ಯೋಜನೆಯ ನಿರ್ಮಾಣದ ಕಾರ್ಯ ಶುರುವಾಯಿತು. ಪಣಂಬೂರು ಬಂದರಿನ ಮೂಲಕ ಆಮದಾಗುವ ಕಚ್ಚಾ ತೈಲವನ್ನು ಶುದ್ಧೀಕರಿಸುವ ತೈಲಾಗಾರದ ಘಟಕದ ಪ್ರಾರಂಭಿಕ ಹಂತದ ಕೆಲಸಗಳು ಶುರುವಾಯಿತು. ಇದಕ್ಕಾಗಿ ದುಡಿಯಲು ಬಂದವರು ಮಧ್ಯಭಾರತ,, ಉತ್ತರ ಭಾರತದ ರಾಜ್ಯಗಳ ಕಾರ್ಮಿಕರು. ಬೇರೆ ಬೇರೆ ಹಂತದ ಕೆಲಸಗಳ ಗುತ್ತಿಗೆ ಈ ರಾಜ್ಯದವರಿಗೆ ದೊರೆತ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಬಿಹಾರ, ರಾಜಸ್ಥಾನದ ಮಂದಿ ಊರೆಲ್ಲಾ ತುಂಬಿಕೊಂಡರು. ಇವರೆಲ್ಲ ಕಾಟಿಪಳ್ಳ, ಕೃಷ್ಣಾಪುರದಲ್ಲಿ ಬಾಡಿಗೆ ಮನೆಗಳನ್ನು ಅಪೇಕ್ಷ್ಷಿಸುತ್ತಿದ್ದುದರಿಂದ ಬಹಳಷ್ಟು ಮಂದಿ ತಮ್ಮ ಮನೆಗಳ ಮಾಡನ್ನು ಇಳಿಸಿ ಹೆಂಚು ಹೊದೆದು ಒಂದೆರಡು ಕೋಣೆಗಳನ್ನು ಬಿಡಾರ ಕೊಡುವುದಕ್ಕೆ ಸಿದ್ಧರಾದರು.

ಈ ಮಂದಿ ತಮ್ಮೆಂದಿಗೆ ಕುಟುಂಬ ಸಂಸಾರ ತಂದವರಲ್ಲ. ಆದ್ದರಿಂದ ಒಂದೊಂದು ಬಿಡಾರಗಳಲ್ಲಿ ಆರೇಳು ಮಂದಿ ಜೊತೆಯಾಗಿ ವಾಸಿಸುತ್ತಿದ್ದರು. ಇವರಾಡುವ ಭಾಷೆ ಯಾರಿಗೂ ಅರ್ಥವಾಗದೆ ಇದ್ದರೂ ಅವರು ಸ್ಥಳೀಯ ವ್ಯವಹಾರವನ್ನು ಹಿಂದಿ ಭಾಷೆಯಲ್ಲಿ ಮಾಡುತ್ತಿದ್ದರು. ಸ್ಥಳೀಯ ಮಂದಿಗೆ ಆದಾಗಲೇ ಟಿವಿ ಅಂದರೆ ದೂರದರ್ಶನದ ಪರಿಚಯವಾಗಿದ್ದುದರಿಂದ ಹಾಗೂ ಹೆಚ್ಚಿನವರಿಗೆ ಹಿಂದಿ ಸಿನೆಮಾಗಳ ಒಲವು ಇದ್ದುದರಿಂದಲೂ ಹಿಂದಿ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗಲಿಲ್ಲ. ಅಂಗಡಿಯವರು, ಹೊಟೇಲಿನವರು, ಬಸ್ಸಿನ ಕಂಡಕ್ಟರ್‌ಗಳೆಲ್ಲಾ ಅರೆಬರೆ ಹಿಂದಿಯಲ್ಲಿ ಮಾತನಾಡುತ್ತಿದ್ದುದಲ್ಲದೆ ಈ ಹಿಂದೆ ಹೇಳಿದಂತೆ ಉತ್ತರ ಕರ್ನಾಟಕದ ಮಂದಿಯನ್ನು ಅವಜ್ಞೆಯಲ್ಲಿ ಕಾಣುತ್ತಿದ್ದಂತೆ ಕಾಣದಿದ್ದುದು ಕೂಡಾ ವಿಶೇಷವೇ! ಬಹುಶಃ ಹಿಂದಿ ರಾಷ್ಟ್ರಭಾಷೆಯೆನ್ನುವ ವಿಚಾರ ಅಪ್ರಜ್ಞಾಪೂರ್ವಕವಾಗಿ ಅವರ ಮನಸ್ಸಿನೊಳಗೆ ಇದ್ದಿರಬಹುದೋ ಏನೋ? ಈ ಶ್ರಮಿಕರಲ್ಲಿ ಇದ್ದ ಒಂದು ಚಟ ಅಂದರೆ ಗುಟ್ಕಾ ಸೇವನೆ. ಇವರಿಂದಾಗಿಯೇ ಅಂಗಡಿಗಳಲ್ಲಿ ಬೀಡದ ಸ್ಥಳವನ್ನು ಗುಟ್ಕಾ ಪ್ಯಾಕೆಟ್‌ಗಳು ಪಡೆದುಕೊಂಡಿತು ಎಂದರೆ ತಪ್ಪಲ್ಲ. ನಮ್ಮ ಜನರೂ ಈ ಚಟಕ್ಕೆ ನಿಧಾನಕ್ಕೆ ಅಂಟಿ ಕೊಂಡುದೂ ಇದೆ. ಜೊತೆಗೆ ಈ ಜನ ಗುಟ್ಕಾ ತಿಂದು ಸಿಕ್ಕ ಸಿಕ್ಕಲ್ಲಿ ಉಗುಳುವ ಸ್ವಭಾವದವರಿಂದ ರಸ್ತೆಗಳಲ್ಲಿ ಕಾಲಿಡುವುದಕ್ಕೆ ಅಸಹ್ಯವಾದುದೂ ಸತ್ಯ.

ಈ ಊರಿಗೆ ಶ್ರಮಿಕರಾಗಿ ಬಂದ ರಾಜಸ್ಥಾನಿಗಳು ಈ ಊರಿನ ಕೊರತೆಗಳನ್ನು ಅಥವಾ ತಮಗೆ ಇಲ್ಲಿ ಇರಬಹುದಾದ ವ್ಯವಹಾರದ ಸಾಧ್ಯತೆಗಳನ್ನು ಕಂಡು ಹಿಡಿದರೆಂದರೆ ಹೆಚ್ಚು ಸರಿ. ಇಂದು ಕಾಣುವ ಕುಳಾಯಿ, ಹೊಸಬೆಟ್ಟುಗಳಲ್ಲಿ ಕಾಣುವ ಮಾರ್ಬಲ್, ಗ್ರಾನೈಟ್‌ಗಳ ದೊಡ್ಡ ದೊಡ್ಡ ವ್ಯಾಪಾರಿ ಮಳಿಗೆಗಳು ಹುಟ್ಟಿಕೊಳ್ಳುವುದರ ಜೊತೆಗೆ ಅವಿಭಜಿತ ಜಿಲ್ಲೆಗಳ ಮನೆಗಳು ಮೊಸಾಯಿಕ್ ಫ್ಯಾಶನ್‌ಗೆ ಬದಲಾಗಿ ಹೊಸ ನೆಲಹಾಸುಗಳಿಗೆ ತೆರೆದುಕೊಂಡದ್ದೂ ನಿಜ.

ಇದೀಗ ಪಣಂಬೂರಿನಿಂದ ಹಡಗುಗಳಿಂದ ಇಳಿಸಲ್ಪಟ್ಟ ಅಥವಾ ರಸ್ತೆಗಳಲ್ಲೇ ಬಂದ ದೊಡ್ಡ ದೊಡ್ಡ ದೈತ್ಯಾಕಾರದ ಯಂತ್ರಗಳು, ಪೀಪಾಯಿಗಳು (ಟ್ಯಾಂಕ್‌ಗಳು) ಜನರ ಕಣ್ಣುಗಳಿಗೆ ಆಶ್ಚರ್ಯದ ವಸ್ತುಗಳು. ಇವುಗಳನ್ನು ಹೊತ್ತುಕೊಂಡು ನಿಧಾನವಾಗಿ ಸಾಗುವ ರೈಲು ಬೋಗಿಗಳಂತಹ ಟ್ರಕ್ಕುಗಳು ಪಂಡಿತ ಪಾಮರರೆಲ್ಲ ಮೂಗಿನ ಮೇಲೆ ಬೆರಳಿಟ್ಟು ನೋಡುವಂತೆ ಮಾಡಿದ್ದುವು. ಇನ್ನು ಮಹಿಳೆಯರು, ಮಕ್ಕಳು ತಮ್ಮ ಕೆಲಸ ಮರೆತು, ಆಟ ಮರೆತು ಮನೆಯ ಬಳಿ ನಿಂತು ಬಿಟ್ಟ ಕಣ್ಣಿನಿಂದ, ತೆರೆದ ಬಾಯಿಯಿಂದ ಗಮನಿಸುತ್ತಿದ್ದುದನ್ನು ನೋಡಿದರೆ ಇದು ಕನಸೋ ನನಸೋ ಎನ್ನುವಂತಾಗುತ್ತಿತ್ತು. ಆ ಟ್ರಕ್ಕುಗಳೋ ಹೊರಲಾಗದ ಭಾರವನ್ನು ಹೊತ್ತುಕೊಂಡು ನಿಧಾನವಾಗಿ ಚೇರಟೆ ಹುಳುವಿನಂತೆ ಸಾಗುತ್ತಿದ್ದರೆ ಹಿಂದೆ ಇದ್ದ ಬಸ್ಸುಗಳಿಗೆ ಮುಂದೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇಂದಿನಂತೆ ರಾಷ್ಟ್ರೀಯ ಹೆದ್ದಾರಿ ಅಗಲವಾಗಿರಲಿಲ್ಲ. ಆದರೂ ಆ ಟ್ರಕ್ಕುಗಳು ಅದೆಂತಹ ಕುಶಲತೆಯಿಂದ ಸಾಗುತ್ತಿತ್ತೋ. ಅದರ ಚಾಲಕರು ಹೆಚ್ಚಾಗಿ ಪಂಜಾಬಿ ಸಿಕ್ಖರೂ ಆಗಿರುತ್ತಿದ್ದುದು ಕೂಡಾ ವಿಶೇಷವೇ.

ಬಹಳ ಜಾಗರೂಕತೆಯಿಂದ ಅವರು ಟ್ರಕ್ಕನ್ನು ನಡೆಸುತ್ತಿದ್ದರೆ ಅವಕಾಶ ಸಿಕ್ಕಾಗ ನಮ್ಮ ಬಸ್ಸುಗಳು ಓವರ್‌ಟೇಕ್ ಮಾಡುವಲ್ಲಿ ನಮ್ಮ ಬಸ್ಸು ಚಾಲಕರೂ ಕುಶಲರೇ ಆಗಿದ್ದರು. ಹಾಗೆಯೇ ಬಸ್ಸುಗಳು ತಮ್ಮ ದಾರಿಯನ್ನು ಬದಲಾಯಿಸಿಕೊಂಡು ಸುರತ್ಕಲ್‌ಗೆ ಹೋಗದೆ ಹೊನ್ನಕಟ್ಟೆಯನ್ನೇರುತ್ತಿತ್ತು. ಹೊಸಬೆಟ್ಟು, ವಿದ್ಯಾದಾಯಿನಿ, ಸುರತ್ಕಲ್ ಜನರು ಗೊಣಗದೆ ಇಳಿದು ನಡೆಯುತ್ತಿದ್ದರು. ಹೊನ್ನಕಟ್ಟೆಯಿಂದ ಬಂದ ಬಸ್ಸು ಕಾಟಿಪಳ್ಳಕ್ಕೆ ತಿರುಗಿದರೆ ಕಾನ, ಕೃಷ್ಣಾಪುರ, ಚೊಕ್ಕಬೆಟ್ಟಿನ ಜನರೂ ಮಾತಿಲ್ಲದೆ ಇಳಿದು ಹೋಗುತ್ತಿದ್ದರು. ಒಟ್ಟಿನಲ್ಲಿ ಜನರಿಗೆ ನಮ್ಮನ್ನೂ ಸೇರಿದಂತೆ ತಮ್ಮ ಊರಿನಲ್ಲಿ ಏನೋ ಅದ್ಭುತ ಕಾರ್ಯ ದೇಶದ ಅಭಿವೃದ್ಧಿ, ನಮ್ಮ ಉದ್ಧಾರ ಆಗುತ್ತಿದೆ ಎನ್ನುವ ಸಂಭ್ರಮ. ಆದರೆ ಕಾನ, ಬಾಳ, ತೋಕೂರು, ಕುತ್ತೆತ್ತೂರಿನವರಿಗೆ ಪಣಂಬೂರಿನಿಂದ ವಲಸೆ ಬಂದ ಜನರ ಕತೆ ವ್ಯಥೆಗಳು ಗೊತ್ತಿತ್ತು. ಈಗ ಅವರೇ ಸ್ವತಃ ಅನುಭವಿಸುವಂತಾಯ್ತು. ತಮ್ಮ ಗದ್ದೆಗಳನ್ನು, ಕೃಷಿ ಬದುಕನ್ನು ಅನಿವಾರ್ಯವಾಗಿ ಬದಲಾಯಿಸಿಕೊಂಡು ಸರಕಾರ ಚೇಳ್ಯಾರಿನಲ್ಲಿ ನೀಡಿದ ಪುನರ್ವಸತಿ ನೆಲೆಗೆ ತಮ್ಮ ಬದುಕಿನ ಪೆಟ್ಟಿಗೆ ಎತ್ತಿಕೊಂಡು ಸಾಗುವಂತಾಯ್ತು. ಬಾಳದಲ್ಲಿದ್ದ ಪ್ರಾಥಮಿಕ ಶಾಲೆ ಮುಚ್ಚಿ ಹೋಯಿತು. ಹೀಗೆ ಎಂಆರ್‌ಪಿಎಲ್‌ನ ಪ್ರಾರಂಭಿಕ ಹಂತದ ಕಟ್ಟಡ, ತೈಲಾಗಾರ ಯಂತ್ರಗಳ ಸ್ಥಾಪನೆ ಇವುಗಳೆಲ್ಲ ಮುಗಿಯುತ್ತಿದ್ದಂತೆಯೇ ಅಧಿಕಾರಿಗಳಿಗೆ ವಸತಿಗಳ ನಿರ್ಮಾಣ, ಅವರ ಹಾಗೂ ಇತರ ಸಿಬ್ಬಂದಿಯ ಮಕ್ಕಳಿಗಾಗಿ ಇಂಗ್ಲಿಷ್ ಮಾಧ್ಯಮದ ಶಾಲೆಯ ನಿರ್ಮಾಣದ ಜೊತೆಗೆ ತೈಲಾಗಾರ ಘಟಕ ತನ್ನ ಕಾರ್ಯ ಪ್ರಾರಂಭಿಸಿತು.

ಭಾರತದ ಬೇರೆ ಬೇರೆ ರಾಜ್ಯಗಳ ವಿದ್ಯಾವಂತ ಜನರು ವಿವಿಧ ಹಂತದ ಅಧಿಕಾರಿಗಳಾಗಿ, ಇಂಜಿನಿಯರ್‌ಗಳಾಗಿ ಬಂದರು. ಚಿತ್ರಾಪುರ, ಹೊಸಬೆಟ್ಟು, ಮಂಗಳೂರಿನಲ್ಲಿ ಬಾಡಿಗೆ ಮನೆಗಳನ್ನು ಮಾಡಿಕೊಂಡರು. ಎನ್‌ಎಂಪಿಟಿ ಹೈಸ್ಕೂಲಿಗೆ, ಮಂಗಳೂರಿನ ಪ್ರತಿಷ್ಠಿತ ಶಾಲೆಗಳಿಗೆ ಮಕ್ಕಳು ಸೇರಿಕೊಂಡರೆ, ಅಧಿಕಾರಿಗಳಿಗೆ ಓಡಾಡಲು ವಾಹನಗಳು ಇದ್ದುವು. ಮುಂದೆ ಅವರದ್ದೇ ಆವರಣದೊಳಗೆ ವಸತಿ ಹಾಗೂ ಶಾಲಾ ಕಟ್ಟಡಗಳ ನಿರ್ಮಾಣ ಪೂರ್ಣಗೊಂಡಾಗ ಎಲ್ಲರೂ ತಮ್ಮ ವಸತಿಯನ್ನು ವರ್ಗಾಯಿಸಿಕೊಂಡು ಅವರದ್ದೇ ಸಾಮ್ರಾಜ್ಯದೊಳಗೆ ಇರಲು ಆರಂಭಿಸಿದರು. ಇಲ್ಲಿ ಅಧಿಕಾರಿಗಳ ಪತ್ನಿಯರೂ ಶಾಲಾ ಅಧ್ಯಾಪಿಕೆಯರಾಗುವ ಅವಕಾಶಗಳೂ ಪ್ರಾರಂಭದಲ್ಲಿತ್ತು. ಮುಂದೆ ನಮ್ಮೂರಿನ ಮಹಿಳೆಯರೂ ಅಧ್ಯಾಪಿಕೆಯರಾಗಿ ಸೇರಿಕೊಂಡರು. ಹಾಗೆಯೇ ಸುರತ್ಕಲ್, ಮಂಗಳೂರು ಪರಿಸರದ ನಮ್ಮ ಊರಿನ ವಿದ್ಯಾರ್ಥಿಗಳೂ ಇಲ್ಲಿನ ಶಾಲೆಗೆ ಸೇರ್ಪಡೆಗೊಳ್ಳುವುದು ಪ್ರಾರಂಭವಾಯಿತು. ಎಂಆರ್‌ಪಿಎಲ್‌ನ ಘಟಕವನ್ನು ಮಂಗಳೂರಿನ ಎತ್ತರ ಭಾಗದಲ್ಲಿ ನಿಂತು ನೋಡಿದರೆ ಉರಿಯುತ್ತಿರುವ ಬೆಂಕಿಯ ಕೊಳವೆಗಳನ್ನು ಕಾಣಬಹುದು. ಅಂದು ಕೈಗಾರಿಕಾ ಘಟಕ ಪ್ರಾರಂಭವಾಗುವ ವೇಳೆ ಪರಿಸರದಲ್ಲಿ ಉಂಟಾಗುವ ಹಾನಿಯ ಅಂದಾಜು ಅರಿಯದ, ವಾಯು ಮಾಲಿನ್ಯದ ಕಲ್ಪನೆ ಇಲ್ಲದ ಜನ ಇಂದು ಎಚ್ಚೆತ್ತುಗೊಂಡಿದ್ದಾರೆ ಎಂದರೂ ಇಂತಹ ಬೃಹತ್ ಕೈಗಾರಿಕೆಗಳು ಬಂದಾಗ ಪ್ರತಿಭಟಿಸುವ ಒಗ್ಗಟ್ಟು ಇಲ್ಲವೆಂದೇ ಹೇಳಬೇಕು. ಅಂದು ಮಂಗಳೂರಿನ ಜನರಿಗೆ ಉಚಿತ ಅಡುಗೆ ಅನಿಲ, ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ದೊರೆಯುತ್ತದೆ ಎಂಬ ಮಾತು ಜನರ ಭ್ರಮೆಯ ಮಾತುಗಳಷ್ಟೇ ಎಂಬುದು ಇಂದು ಅರಿವಾಗಿದೆ.

ಆದರೂ ಮುಂದೆ ಇನ್ನಷ್ಟು ಕೈಗಾರಿಕಾ ವಲಯವನ್ನು ವಿಸ್ತರಿಸುವ ಸರಕಾರದ ಆಲೋಚನೆಗಳಿಗೆ ಒಂದಿಷ್ಟು ಪ್ರತಿಭಟಿಸುವ, ಯೋಜನೆಗಳ ಬಗ್ಗೆ ಪ್ರಶ್ನಿಸುವ, ತಿಳಿದುಕೊಳ್ಳುವುದು ನಮ್ಮ ಹಕ್ಕು ಎಂದು ಭಾವಿಸುವ ಜನ ಸಂಘಟನೆಗಳು ಇಂದು ಹುಟ್ಟಿಕೊಂಡಿರುವುದು ಅನಿವಾರ್ಯ ಮಾತ್ರವಲ್ಲ ಅಗತ್ಯವೂ ಹೌದು. ಎಂಆರ್‌ಪಿಎಲ್‌ನ ದಾರಿಯಲ್ಲೇ ಕಾನದಲ್ಲಿ ಬಿಎಸ್‌ಎಫ್ ಎಂಬ ಇನ್ನೊಂದು ಕೈಗಾರಿಕಾ ಘಟಕವು ಸದ್ದಿಲ್ಲದೆ ಇದೇ ಕಾಲದಲ್ಲಿ ತಲೆಯೆತ್ತಿದೆ. ಕರಾವಳಿ ತೀರವಾದ, ಬಂದರಿಗೆ ಸಮೀಪ ಎಂಬ ಕಾರಣಕ್ಕೆ ಸರಕಾರದ ಕಣ್ಣು ಈ ಊರಿನ ಕಡೆಗೇ ನೆಟ್ಟಿರುವುದನ್ನು ನೋಡಿದರೆ ನಮಗೆ ಬಂದರು ಬಂತು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಂತು ಎಂಬೆಲ್ಲಾ ಸಂತೋಷದೊಂದಿಗೆ, ದೇಶದ ಅಭಿವೃದ್ಧಿಯೆಂಬ ಮಂತ್ರದೊಂದಿಗೆ ಸಾಮಾನ್ಯರಲ್ಲಿ ಸಾಮಾನ್ಯರಾದ ಬಡ ಜನರ ಹಾಗೂ ಕೃಷಿಯ ಬಗ್ಗೆ ಆದ್ಯತೆ ಇಲ್ಲವಾಗುವುದು ಅಭಿವೃದ್ಧಿಯ ಹಾದಿ ಅಲ್ಲ ಎನ್ನುವುದು ನಿಧಾನವಾಗಿ ಅರ್ಥವಾಗುತ್ತಿರುವ ನಮಗೆ ಪಾಪ ಪ್ರಜ್ಞೆ ಕಾಡುವುದು ಕೂಡಾ ಸತ್ಯವೆಂದೇ ಹೇಳಬೇಕು.

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News

ಸಂವಿಧಾನ -75