ಮಹಾಡ್‌ನ ಮಹಾಯುದ್ಧ

Update: 2017-11-30 18:41 GMT

ಭಾಗ-1

ಕೊಲಾಬಾ ಜಿಲ್ಲೆಯ ಬಹಿಷ್ಕೃತರ ಪರಿಷತ್ತಿನ ನಂತರ ಮಹಾಡ್‌ನಲ್ಲಿ ವರಿಷ್ಠ ಹಿಂದೂ ಬ್ರಾಹ್ಮಣ ಗೂಂಡಾಗಳು ಮಾಡಿದ ದಂಗೆಯ ಬಗ್ಗೆ ‘ಬಹಿಷ್ಕೃತ ಭಾರತ’ದಲ್ಲಿ ಬರೆದಿದ್ದೇನೆ. ಮಹಾಡ್ ಪಾಲಿಕೆಯವರು ಸಾರ್ವಜನಿಕ ಕೆರೆ ಎಂದು ಸಾರಿದ್ದ ‘ಚೌದಾರ್ ಕೆರೆ’ಯಲ್ಲಿ ದಲಿತರು ನೀರು ತುಂಬಿದಕ್ಕಾಗಿ ಬ್ರಾಹ್ಮಣರು ದಲಿತರನ್ನು ಥಳಿಸಿದರು ಅನ್ನುವುದು ಕೇವಲ ನೀರಿನ ವ್ಯವಸ್ಥೆಯ ದೃಷ್ಟಿಯಿಂದ ನೋಡಿದರೆ ತೀರಾ ಕ್ಷುಲ್ಲಕವಾಗಿದೆ ಅಂದುಕೊಂಡು ಪ್ರಕರಣವನ್ನು ಸುಲಭವಾಗಿ ಇತ್ಯರ್ಥ ಮಾಡಬಹುದು. ಹಾಗೂ ‘ಭಾಲಾಕಾರ’(ಭಾಲಾ ಪತ್ರಿಕೆಯ ಸಂಪಾದಕರು) ಹೇಳಿದಂತೆ ಕೆರೆಗೊಂದು ನಲ್ಲಿ ಹಚ್ಚಿ ಅಥವಾ ಬೇರೆ ಯಾವುದೆ ಉಪಾಯದಿಂದ ಅದನ್ನು ಸರಿಪಡಿಸಬಹುದು. ಆದರೆ ಮತ್ತೊಂದು ದೃಷ್ಟಿಯಿಂದ ಈ ವಿಷಯ ಕ್ಷುಲ್ಲಕವಾಗಿರದೆ ಬಹಳ ಮಹತ್ವದ್ದಾಗಿಬಿಡುತ್ತದೆ.

ಒಂದು ದೊಡ್ಡ ಪ್ರಶ್ನೆ ಇದಕ್ಕೆ ಸಂಬಂಧಿಸಿದೆ. ದಲಿತರು ನೀರು ತುಂಬಲು ಚೌದಾರ್ ಕೆರೆಗೆ ಹೋದಾಗ ದಂಗೆಗಳಾದವು ಅಥವಾ ಹೊಡೆದಾಟಗಳಾದವು ಎಂದಷ್ಟು ಹೇಳಿದರೆ ಘಟನೆಯ ನಿಜಸ್ವರೂಪ ತಿಳಿಯಲಾರದು. ಘಟನೆಯ ನಿಜ ಸ್ವರೂಪ ಬೇರೆಯೇ ಇದೆ. ಅದನ್ನು ಜಗಳ, ದಂಗೆ ಅನ್ನುವುದಕ್ಕಿಂತ ಧರ್ಮಯುದ್ಧ ಅಂದರೆ ಯಥಾರ್ಥ. ಏಕೆಂದರೆ ಹಿಂದೂ ಸಮಾಜದ ಘಟಕ ಹಾಗೂ ಹಿಂದೂ ಧರ್ಮದ ಅನುಯಾಯಿಗಳು ಅನ್ನುವ ಸಂಬಂಧದಿಂದ ಇತರ ಹಿಂದೂಗಳಿಗಿಂತ ನಾವು ಸಮಾನ ಯೋಗ್ಯತೆಯುಳ್ಳ ಅಧಿಕಾರಿಗಳಾಗಿದ್ದು ನಮ್ಮೆಲ್ಲರ ಹಕ್ಕುಗಳಲ್ಲಿ ಸಮಾನತೆಯಿದೆಯೋ ಇಲ್ಲವೊ? ಎಂದು ನಿರ್ಧರಿಸುವ ಪ್ರಶ್ನೆಯೇ ಈ ನೀರಿನ ಹಿಂದಿದ್ದು ಈ ಪ್ರಶ್ನೆಗೆ ಮಹಾಡ್‌ನ ಮೇಲ್ಜಾತಿಯವರು ದಂಗೆಯೆದ್ದು ಹೊಡೆದು ಬಡಿದು ಮಾಡಿ ನಕಾರಾತ್ಮಕ ಉತ್ತರವನ್ನೇ ಕೊಟ್ಟಿದ್ದಾರೆ ಅನ್ನುವುದೀಗ ಮನೆಮಾತು.

ವರಿಷ್ಠ ಹಿಂದೂಗಳ ಈ ವರ್ತನೆಯಿಂದ ನಾವು ಆಶ್ಚರ್ಯಚಕಿತರಾಗಿದ್ದೇವೆ. ಇತರ ದೇಶ ಗಳಲ್ಲಿ ಇಂತಹ ಧರ್ಮಯುದ್ಧಗಳು ಆಗಿಲ್ಲ ಎಂದಲ್ಲ. ಆದರೆ ಅವುಗಳು ವಿಚಾರಗಳ ಭಿನ್ನಾಭಿಪ್ರಾಯದಿಂದಾಗಿವೆ. ಈ ದೇಶದಲ್ಲಿನ ವೈದಿಕ ಧರ್ಮದ ಅನುಯಾಯಿಗಳು ಹಾಗೂ ಬೌದ್ಧ ಧರ್ಮದ ಅನುಯಾಯಿಗಳು, ಹಾಗೆಯೇ ಯುರೋಪಿಯನ್ ಹೀದನ್ ಮತ್ತು ಕ್ರೈಸ್ತರು, ಕ್ರೈಸ್ತರು ಹಾಗೂ ಮುಹಮ್ಮದೀಯರು ಇವರಲ್ಲಾದ ಧರ್ಮಯುದ್ಧಗಳಿಗೆ ಪರಸ್ಪರರಲ್ಲಿದ್ದ ವಿಚಾರಗಳ ಭಿನ್ನಾಭಿಪ್ರಾಯವೇ ಕಾರಣ. ಆದರೆ ಮಹಾಡ್‌ನಲ್ಲಾದ ಧರ್ಮಯುದ್ಧ ಹಿಂದೂ ಧರ್ಮದ ತತ್ವಗಳ ಬಗ್ಗೆ ಭಿನ್ನಾಭಿಪ್ರಾಯ ತಲೆದೋರಿದ್ದರಿಂದ ಆಯಿತು ಎಂದು ಹೇಳಿದರೆ ತಪ್ಪಾದೀತು. ಮಹಾಡ್‌ನ ಧರ್ಮಯುದ್ಧದಲ್ಲಿ ಉಭಯಪಕ್ಷದ ಜನ ಧರ್ಮಸಂಪ್ರದಾಯದ ದೃಷ್ಟಿಯಲ್ಲಿ ಒಂದೇ ಆಗಿದ್ದರು ಅನ್ನುವುದರಲ್ಲಿ ಬೇರೆ ಮಾತಿಲ್ಲ.

ಹೀಗಿರುವಾಗ ಕೆಲವು ಧರ್ಮಬಾಂಧವರು ಒಂದೇ ಧರ್ಮಬಾಂಧವರನ್ನು ಕುರಿತು ‘‘ನೀವು ಸಮಾಜಿಕ ದೃಷ್ಟಿಯಲ್ಲಿ ನಮಗಿಂತ ಕೀಳು, ನೀವು ಮುಟ್ಟಿದರೆ ನಮ್ಮ ಅಧೋಗತಿಯಾಗುತ್ತದೆ’’ ಎಂದು ಹೇಳಿ ಜಗಳ ಕಾದರೆ ಪರಕೀಯರಿಗೆ ಆಶ್ಚರ್ಯವಾಗದಿರುತ್ತದೆಯೇ? ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಾಮಾಜಿಕ ಸಮಾನತೆಗೆ ಮೊದಲಿನಿಂದಲೂ ಮಾನ್ಯತೆಯಿದೆ. ನಾನೂ ಎಲ್ಲರಂತಿದ್ದೇನೆ ಆದರೆ ಅವರಿಗಿಂತ ಎಷ್ಟೋ ಚೆನ್ನಾಗಿದ್ದೇನೆ ಅನ್ನುವ ಭಾವನೆ ಎಲ್ಲರಲ್ಲೂ ಇರುತ್ತದೆ. ಯಾರೂ ಕೀಳಲ್ಲ ಯಾರೂ ಮೇಲಲ್ಲ ಅನ್ನುವ ಸಮತೆಯ ಭಾವನೆಯಿಂದ ಪ್ರತಿಯೊಬ್ಬ ವ್ಯಕ್ತಿ ಬದುಕುತ್ತಾನೆ, ಮತದಾನದ ಹಕ್ಕು ಎಲ್ಲರಿಗೂ ಸಿಕ್ಕಿ ರಾಜಕೀಯ ಸಮಾನತೆಯೂ ಸ್ಥಾಪಿಸಲ್ಪಟ್ಟಿರುವುದರಿಂದ ಯಾರು ಯಾರ ಮೇಲೂ ರಾಜ್ಯವನ್ನಾಳಬಹುದು ಅನ್ನುವ ಭಾವನೆ ನಷ್ಟವಾಗಿ ನಾವು ನಡೆಸಿದಂತೆ ರಾಜ್ಯ ಅನ್ನುವ ಭಾವನೆ ದೃಢವಾಗಿರುವುದು ಕಂಡುಬರುತ್ತದೆ.

ಅಷ್ಟೇ ಅಲ್ಲದೆ ನಾವೆಲ್ಲರೂ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಸಮಾನವಾಗಿರುವಾಗ ಆರ್ಥಿಕ ಅಸಮಾನತೆ ಯಾಕಿರಬೇಕು? ಅನ್ನುವ ಪ್ರಶ್ನೆ ಆಡಲು ಆರಂಭವಾಗಿ ಸಾಮಾಜಿಕ ಹಾಗೂ ರಾಜಕೀಯ ಸಮಾನತೆಯ ಜೊತೆಗೆ ಆರ್ಥಿಕ ಸಮಾನತೆಯೂ ಪ್ರಸ್ತಾಪಿಸಲ್ಪಡುವ ಲಕ್ಷಣಗಳು ಕಾಣುತ್ತಿವೆ. ಹಿಂದೂ ಧರ್ಮದ ಸಿದ್ಧಾಂತ ಎಲ್ಲರೂ ದೇವರ ಪ್ರತಿರೂಪ ಎಂದು ಧೈರ್ಯದಿಂದ ಹೇಳುತ್ತದೆ ಹಿಂದೂ ಧರ್ಮ. ಎಲ್ಲರೂ ದೇವರ ಪ್ರತಿರೂಪವಾಗಿರುವಾಗ ಒಬ್ಬರು ಉತ್ತಮರು ಉಳಿದವರು ಅಧಮರು ಅನ್ನುವ ಭೇದಭಾವ ಸಾಧ್ಯವೇ ಇಲ್ಲ ಅನ್ನುವುದು ಆ ಧರ್ಮದ ಮಹಾನ್ ತತ್ವದ ಓಜಸ್ಸು ಅನ್ನುವುದನ್ನು ಯಾರೂ ಅಲ್ಲಗೆಳೆಯಲಾರರು. ಸಮಾನತೆ ಸಾಮ್ರಾಜ್ಯ ಸ್ಥಾಪಿಸಲು ಇದಕ್ಕಿಂತಲೂ ದೊಡ್ಡ ಆಧಾರ ಸಿಗಲಾರದು. ಹೀಗಿರುವಾಗ ಕ್ರೈಸ್ತ ಹಾಗೂ ಮುಸ್ಲಿಂ ದೇಶಗಳಲ್ಲಿ ಕಾಣುವಂತಹ ಸಮಾನತೆ ಹಿಂದೂ ಧರ್ಮದಲ್ಲಿ ಕಾಣಿಸದೆ ಅದನ್ನು ಪುನರ್‌ಸ್ಥಾಪಿಸಲು ನಡೆದ ಪ್ರಯತ್ನಗಳಲ್ಲಿ ಹಿಂದೂಗಳಿಗೆ ತಮ್ಮ ಧರ್ಮದ ಬಗ್ಗೆ ಹೆಚ್ಚಿನ ಜ್ಞಾನವಿಲ್ಲ ಅನ್ನುವುದು ಕಂಡುಬರುತ್ತದೆ.

ಒಂದೇ ಧರ್ಮದ ಜನ ಬೇರೆ ಧರ್ಮದ ಜನರಂತೆ ತಮ್ಮತಮ್ಮಲ್ಲೇ ಭೇದಭಾವಗಳನ್ನು ಸೃಷ್ಟಿಸುತ್ತಾರೆ ಅನ್ನುವುದನ್ನು ಹಿಂದೂ ಜನರು ಸಮರ್ಥಿಸುತ್ತ ಹಿಂದೂ ಧರ್ಮದಲ್ಲಿ ಎರಡು ಭಾಗಗಳಿವೆ ಅನ್ನುತ್ತಾರೆ. ಮೊದಲನೆಯದು ತತ್ವಜ್ಞಾನ; ಎರಡನೆಯದು ಆಚಾರ. ತತ್ವಜ್ಞಾನದ ದೃಷ್ಟಿಯಿಂದ ಎಲ್ಲರೂ ಸಮಾನರಾಗಿದ್ದರೂ ಆಚಾರದ ದೃಷ್ಟಿಯಿಂದ ದಲಿತರು ಅಸಮಾನರಷ್ಟೇಯಲ್ಲ ಅಪವಿತ್ರರೂ ಆಗಿದ್ದಾರೆ. ಆದ್ದರಿಂದಲೇ ಅವರೊಂದಿಗೆ ಯಾವುದೇ ವ್ಯವಹಾರ ಅಧರ್ಮವಾಗಿದೆ! ರೂಢಿರ್ಬಲೀಯಸಿ ಅನ್ನುತ್ತ ಧಾರ್ಮಿಕ ವಿಷಯದಲ್ಲಿ ತತ್ವಜ್ಞಾನವನ್ನು ಪಕ್ಕಕ್ಕಿಟ್ಟು ಕೇವಲ ಆಚಾರವನ್ನೇ ಪಾಲಿಸಬೇಕು ಅನ್ನುವುದಾಗಿದ್ದರೆ ರಾಜಕೀಯ ದೃಷ್ಟಿಯಲ್ಲೂ ಅದೇ ರೀತಿ ನಡೆದುಕೊಳ್ಳಬೇಕು ಅಲ್ಲವೇ? ರಾಣಿಯ (ಇಂಗ್ಲೆಂಡಿನ ರಾಣಿ) ಹೇಳಿಕೆಯಲ್ಲಿಯ ತತ್ವಗಳನ್ನು ಜಾರಿಗೆ ತರುವುದು ಅಸಾಧ್ಯ ಎಂದು ಕರ್ಝನ್‌ನಂತಹ ಒಬ್ಬ ಕಟ್ಟರ್‌ ಸಾಮ್ರಾಜ್ಯವಾದಿ ಅಂದರೆ ಜನ ಸಿಟ್ಟಿಗೆದ್ದು-
‘ಬರೀ ತತ್ವಗಳನ್ನೇನು ನೆಕ್ಕುತ್ತೀರಾ?’

ಎಂದು ಕೇಳಿ ದಂಗೆ ಏಳಲೂ ಹೇಸಲಾರರು. ಆದರೆ ಈಗ ಅದೇ ಜನ ಆಚಾರಾತ್ಮಕ ಧರ್ಮಕ್ಕೆ ಪ್ರಧಾನ್ಯತೆ ಕೊಟ್ಟು ವೇದಾಂತ ಅಥವಾ ತಾತ್ವಿಕ ಧರ್ಮ ವ್ಯವಹಾರದಲ್ಲಿ ಕೆಲಸಕ್ಕೆ ಬಾರದು ಎಂದು ಹೇಳುವುದು ನಾಚಿಕೆಗೇಡಿತನವಲ್ಲವೇ? ಧರ್ಮದ ಎರಡು ಅಂಗಗಳಿವೆ ಎಂದು ಒಪ್ಪಿಕೊಂಡರೂ ಯಾವುದೇ ಧರ್ಮದ ಆಚಾರಾತ್ಮಕ ಅಂಗವು ಆ ಧರ್ಮದ ತತ್ವಜ್ಞಾನವನ್ನೇ ಆಧರಿಸಿರುತ್ತದೆ ಅನ್ನುವುದನ್ನು ಮರೆಯಬಾರದು. ಹಾಗಿಲ್ಲದಿದ್ದರೆ ಆ ಧರ್ಮಕ್ಕೆ ಯಾವುದೇ ಅಂತಿಮ ಧ್ಯೇಯವಿರುವುದಿಲ್ಲ. ಸಮಾಜದ ಆಚಾರಾತ್ಮಕ ಧರ್ಮವು ಆ ಸಮಾಜದ ವಿಚಾರಾತ್ಮಕ ಧರ್ಮದೊಡನೆ ಬೆಸೆದಿರದಿದ್ದರೆ ಆ ಸಮಾಜ ಹಡಗು ದಿಕ್ಸೂಚಿಯಿಲ್ಲದೆ ಸಮುದ್ರದಲ್ಲಿ ಬಿಟ್ಟಂತಾಗುತ್ತದೆ. ಆ ಹಡಗು ಎಲ್ಲೆಲ್ಲೋ ಅಲೆದಾಡುತ್ತ ಯಾವ ಬಂಡೆಗೆ ಅಪ್ಪಳಿಸುವುದೋ ಹೇಳಲಾಗದು.

ವೇದಾಂತದಲ್ಲಿ ನೀತಿ ಹಾಗೂ ಧರ್ಮದ ಸಿದ್ಧಾಂತಗಳನ್ನು ಹೇಳಿರುವುದಾದರೆ, ವ್ಯವಹಾರದಲ್ಲಿ ನೀತಿ ಹಾಗೂ ಧರ್ಮದ ಆವಶ್ಯಕತೆಯಿದೆ ಎಂದಾದರೆ ವೇದಾಂತ ಧರ್ಮವು ವ್ಯವಹಾರದಲ್ಲಿ ಉಪಯೋಗಕ್ಕೆ ಬಾರದು ಎಂದು ಹೇಳುವುದಕ್ಕಿಂತ, ಅದನ್ನು ವ್ಯವಹಾರದಲ್ಲಿ ಉಪಯೋಗಿಸಲ್ಪಡುವಂತೆ ಮಾರ್ಪಡಿಸುವ ಧೈರ್ಯ ಆ ಅಸಮರ್ಥ ಜನರಲ್ಲಿಲ್ಲ ಎಂದೇ ಹೇಳಬಹುದು! ಧರ್ಮದಲ್ಲಿ ಆಚಾರವಿಚಾರಗಳೆರಡೂ ಯಾವತ್ತೂ ಒಂದಾಗುತ್ತವೆ ಎಂದು ನಾನು ಹೇಳುವುದಿಲ್ಲ, ಕೆಲವೊಮ್ಮೆ ಅವು ಬೇರ್ಪಡುತ್ತವೆ. ಆದರೆ ಧರ್ಮದ ಆಚಾರ ಆ ಧರ್ಮದ ವಿಚಾರದ ವಿರೋಧದಲ್ಲಿದ್ದಾಗ ಧಾರ್ಮಿಕ ಆಚಾರಗಳಲ್ಲಿ ಬದಲಾವಣೆ ತಂದು ಅವುಗಳನ್ನು ಧಾರ್ಮಿಕ ವಿಚಾರಗಳೊಂದಿಗೆ ಮೇಳೈಸಬೇಕಾದ್ದು ಆವಶ್ಯಕವಾಗುತ್ತದೆ.

ಸ್ವತಃ ತಿಲಕರು ಒಂದೆಡೆ ಹೀಗೆ ಹೇಳುತ್ತಾರೆ, ‘‘ಆಚಾರಾತ್ಮಕ ಹಿಂದೂ ಧರ್ಮದ ಮೇಲೆ ಹೇಳಿರುವ ಲಕ್ಷಣದ ಜೊತೆಗೆ ‘ಧಾರಣಾತ್‌ಧರ್ಮಃ ಯತೋಭ್ಯುದಯ ನಿಃಶ್ರೇಯಸ-ಸಿದ್ಧಿಃ ಸ ಧರ್ಮಃ’. ಇದು ಹಿಂದೂ ಧರ್ಮಶಾಸ್ತ್ರಜ್ಞರು ಸ್ವೀಕರಿಸಿರುವ ಧರ್ಮದ ಮತ್ತೊಂದು ತತ್ವವಾಗಿದೆ. ಇದರ ಅನುಕೂಲವಾಗಿ ಆಚಾರಗಳಲ್ಲಿ ಬದಲಾವಣೆ ಮಾಡುವ ಹಿಂದೂ ಧರ್ಮದ ಉದ್ಧಟರು ಹಿಂದೂ ಧರ್ಮದ ಶಾಸ್ತ್ರಜ್ಞರು ಕೊಟ್ಟಿರುವ ಅಧಿಕಾರ ಹಾಗೂ ಆ ಅಧಿಕಾರವನ್ನು ಶಾಸ್ತ್ರೋಕ್ತವಾಗಿ ಬಳಸಿ ಅನುಭವದಿಂದ ಪರಂಪರಾಗತ ಆಚಾರಗಳಲ್ಲಿ ತರುವ ಬದಲಾವಣೆ ಜನರಿಗೆ ಒಪ್ಪಿಗೆಯಾಗಿ ಮುಂದೊಂದು ದಿನ ಅದೇ ಧರ್ಮದ ಒಂದು ಅಂಗವಾಗಿ ಬಿಡುತ್ತದೆ’’.

ನಮ್ಮಲ್ಲಿಯ ಬ್ರಾಹ್ಮಣರಿಗೆ ತಿಲಕರ ಈ ಮಾತಿನಿಂದ ಸಾಕಷ್ಟು ಧೈರ್ಯ ಸಿಗುತ್ತದೆ. ಆದ್ದರಿಂದಲೇ ನಾನಿಲ್ಲಿ ತಿಲಕರ ಹೆಸರನ್ನು ಉಲ್ಲೇಖಿಸಿದ್ದೇನೆ. ನಿಜ ಹೇಳಬೇಕೆಂದರೆ ಈ ಬುದ್ಧಿವಾದಕ್ಕೆ ಯಾವುದೇ ಆಧಾರದ ಅಗತ್ಯವಿಲ್ಲದಷ್ಟು ಯಥಾರ್ಥವಾಗಿದೆ. ಹಾಗಿಲ್ಲದಿದ್ದರೆ ಪ್ರಾಚೀನ ಆಚಾರಗಳನ್ನು ಎದೆಗವಚಿಕೊಳ್ಳುವುದೇ ಧರ್ಮವಾಗಿ ಬಿಟ್ಟೀತು. ಹಾಗೂ ಕೆಟ್ಟ ಆಚಾರಗಳು ನಾಶವಾಗದೆ ಹಾಗೇ ಉಳಿದು ಅಸ್ಪಶ್ಯತೆಯಂತಹ ಅತ್ಯಂತ ನಿಂದನೀಯ ಹಾಗೂ ಘೋರ ರೀತಿ ರಿವಾಜುಗಳು ಅನಾದಿಕಾಲದ್ದು ಅನ್ನುವ ಕಾರಣದಿಂದ ಹಾಗೇ ನಡೆದುಕೊಂಡು ಒಂದಾವು. ಆದರೆ ಈ ಹೊಸ ಆಚಾರಧರ್ಮವನ್ನು ಹಾಕಿ ಕೊಡುವವರು ಯಾರು? ಅದನ್ನು ಈ ಉದ್ಧಟ ಜನರೇ ಹಾಕಿಕೊಡಬೇಕು ಅನ್ನುವುದು ನಮ್ಮ ಅನಿಸಿಕೆ ಹಾಗೂ ತಿಲಕರ ಅನಿಸಿಕೆಯೂ ಹಾಗೇ ಇತ್ತು ಅನ್ನುವುದು ಮೇಲಿನ ಹೇಳಿಕೆ ಹೇಳುತ್ತದೆ.

ಇಷ್ಟೆಲ್ಲ ಅಧಿಕಾರ ಅಂತಸ್ತು ಇರುವ ಜನ ಮಹಾಡ್‌ನ ಘಟನೆಯಲ್ಲಿ ಮಾಡಿದ್ದೇನು ಅನ್ನುವ ಪ್ರಶ್ನೆ ಎದುರಾಗುತ್ತದೆ. ನನಗನಿಸುತ್ತದೆ ಬಾಯಿಮಾತಲ್ಲಿ ಮಾತ್ರ ಮನುಷ್ಯ ಈಶ್ವರನ ರೂಪ ಅನ್ನುವುದು ಹಾಗೂ ಮನಸ್ಸಿನಲ್ಲಿ ಮಾತ್ರ ಜಾತಿಭೇದವನ್ನಿಟ್ಟುಕೊಂಡು ಪವಿತ್ರ ಅವಿತ್ರತೆಗಳ ನಡುವೆ ತೊಳಲಾಡುವುದು. ಹಿಂದೂ ಧರ್ಮದ ಮೇಲಿರುವ ಡಾಂಭಿಕತನದ ಆರೋಪವನ್ನು ಅಳಿಸುವ ಪ್ರಯತ್ನ ಈ ಉದ್ಧಟ ಜನ ಮಾಡಬೇಕಿತ್ತು. ಅಸ್ಪಶ್ಯತೆಯನ್ನು ಧಿಕ್ಕರಿಸಿ ತಮ್ಮ ಉಜ್ವಲ ಧರ್ಮಕ್ಕೆ ಮಸಿಬಳಿಯುವ ಪಾಪಿ ಹಾಗೂ ಧರ್ಮಾಂಧ ಜನರನ್ನು ಇಂತಹ ಅಧರ್ಮ ಕೃತ್ಯ ಮಾಡುವುದರಿಂದ ತಡೆಯುವುದು ಇವರ ಕರ್ತವ್ಯವಾಗಿದೆ. 

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News