ವಿಶ್ವಶಾಂತಿಗೆ ಸರಳವಾದ ನಡೆ ನುಡಿ

Update: 2017-12-05 18:57 GMT

ಕಾಟಿಪಳ್ಳ, ಕೃಷ್ಣಾಪುರ, ಚೊಕ್ಕಬೆಟ್ಟುಗಳನ್ನೊಳಗೊಂಡಂತೆ ಅಲ್ಲಿನ ಹಿಂದೂ, ಮುಸ್ಲಿಮ್, ಕ್ರಿಶ್ಚಿಯನ್ನರು ಪಣಂಬೂರು, ಬೈಕಂಪಾಡಿ ಗಳಿಂದ ವಲಸೆ ಬಂದಾಗ ಅವರು ಆರಾಧಿಸುವ ದೈವ ದೇವರು ಕೂಡಾ ಜೊತೆಗೇ ವಲಸೆ ಬಂದಿರಬೇಕಲ್ಲವೇ? ಬಂದಿರಲೇಬೇಕು ಎನ್ನುವುದು ತರ್ಕ. ಬಾರದೆ ಉಳಿದಿರಬಹುದು ಎಂಬುದು ಕೂಡಾ ಊಹೆ. ಬೇರೆ ಬೇರೆ ಕಾಲದಲ್ಲಿ ಬೇರೆ ರೂಪಗಳಲ್ಲಿ ಬಂದಿರುವ ಸಾಧ್ಯತೆಗಳನ್ನೂ ಅಲ್ಲಗಳೆಯಲಾಗದು. ಸುರತ್ಕಲ್‌ನಿಂದ ಕಾಟಿಪಳ್ಳಕ್ಕೆ ಬಂದು ಕಾನ ಬಾಳವಾಗಿ ಸಾಗುವ ನೇರ ದಾರಿಯಾದರೆ ಇನ್ನೊಂದು ಈ ನೇರ ದಾರಿಯ ಪ್ರಾರಂಭದಲ್ಲೇ ಎಡಕ್ಕೆ ತಿರುಗಿದರೆ ಚೊಕ್ಕಬೆಟ್ಟು. ಕೃಷ್ಣಾಪುರದಿಂದ ಕಾಟಿಪಳ್ಳವನ್ನು ಸೇರುವುದು.

ಚೊಕ್ಕಬೆಟ್ಟು ಎಂಬಲ್ಲಿ ಕಾಟಿಪಳ್ಳ ಪುನರ್ವಸತಿ ವಲಯದ 8ನೇ ಬ್ಲಾಕ್ ಇದ್ದರೆ ಮುಂದೆ 6,7,5,4 ಹೀಗೆ ಬ್ಲಾಕ್‌ಗಳು ಇದ್ದುದು 6,5 ಬ್ಲಾಕ್‌ಗಳನ್ನು ಕೃಷ್ಣಾಪುರ ಎಂದು ಸಾಮಾನ್ಯವಾಗಿ ಕರೆಯಲಾಗುತ್ತಿತ್ತು. ಚೊಕ್ಕಬೆಟ್ಟುಗೆ ಹೋಗುವ ದಾರಿಯಲ್ಲಿ ಸ್ಥಳೀಯ ಜನರ ವಾಸವಿತ್ತು. ಅದು ಬೊಳ್ಳಾಜೆ, ಕಾನ, ಬಾಳದವರೆಗೂ ಇದ್ದು ಇಲ್ಲಿನ ಜನರಿಗೆ ಸುರತ್ಕಲ್ ಎನ್ನುವುದೇ ಮುಖ್ಯಕೇಂದ್ರ. ಇಲ್ಲಿನ ಹಿಂದೂಗಳಿಗೆ ಸುರತ್ಕಲ್‌ನ ಇಡ್ಯಾ ಮಹಾಲಿಂಗೇಶ್ವರನೇ ಆರಾಧ್ಯದೇವವಾದರೆ ಕ್ರಿಶ್ಚಿಯನ್ನರಿಗೆ ಸುರತ್ಕಲ್ ಚರ್ಚ್ ಹಾಗೂ ಮುಸ್ಲಿಮರಿಗೂ ಸುರತ್ಕಲ್‌ನಲ್ಲಿರುವ ಮಸೀದಿಯೇ ಪ್ರಾರ್ಥನಾ ಮಂದಿರಗಳು. ಹಾಗೆಯೇ ಕೃಷ್ಣಾಪುರ ಎನ್ನುವುದು ಕೂಡಾ ಪುನರ್ವಸತಿಯ ವಲಯದ ಜನವಸತಿಯಲ್ಲದೆ ಸ್ಥಳೀಯವಾಗಿ ಅಲ್ಲಿದ್ದ ಜನರು ಹಿಂದೆಯೇ ಅಲ್ಲಿ ವಾಸವಾಗಿದ್ದವರು. ಈ ಕೃಷ್ಣಾಪುರ ಎನ್ನುವ ಹಳ್ಳಿಯಲ್ಲಿ ಮಠ ಒಂದಿದೆ. ಅದು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಕೃಷ್ಣಾಪುರ ಮಠದ ಮೂಲ ಮಠ. ಈ ಮಠದ ಆರಾಧ್ಯದೇವ ಕಾಳಿಂಗ ಮರ್ದನ ಕೃಷ್ಣ.

5ನೇ ಬ್ಲಾಕಿನ ಮಂದಿ ನಾಗರ ಪಂಚಮಿಯಂದು ಈ ಮಠಕ್ಕೆ ಹೋಗಿ ನಾಗನಿಗೆ ಹಾಲೆರೆವ ಪೂಜೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ನಾನು ಈ ಕಾರಣಕ್ಕೆ ಮಠಕ್ಕೆ ಹೋಗದಿದ್ದರೂ ಮಠವನ್ನು ನೋಡಲು ಒಂದು ಅವಕಾಶ ಡಾ.ಸಿದ್ಧಾಪುರ ವಾಸುದೇವ ಭಟ್ಟರಿಂದ ದೊರೆಯಿತು. ಸಿದ್ಧಾಪುರ ವಾಸುದೇವ ಭಟ್ಟರು ತನ್ನ ಪಿಎಚ್‌ಡಿ ಸಂಶೋಧನೆಯ ವಿಷಯಕ್ಕೆ ಶಿಲ್ಪಗಳಲ್ಲಿ, ಕಾಷ್ಠಗಳಲ್ಲಿ ಸರ್ಪಗಳು ಹಾಗೂ ನಾಗಾರಾಧನೆಯ ಬಗ್ಗೆ ಅಧ್ಯಯನ ಮಾಡುತ್ತಿದ್ದರು. ಈ ಕಾರಣಕ್ಕಾಗಿಯೇ ಅವರು ನಮ್ಮ ಮನೆಗೆ ಬಂದಿದ್ದರು. ಅವರ ಜೊತೆಗೆ ನನ್ನವರು ಹೊರಟಾಗ ನಾನೂ ಅವರೊಂದಿಗೆ ಸೇರಿಕೊಂಡೆ. ಅದುವರೆಗೆ ನಾನು ದೇವಸ್ಥಾನಗಳನ್ನು ನೋಡಿದ್ದರೂ ಮಠಗಳನ್ನು ನೋಡಿರಲಿಲ್ಲ. ಮಠ ಎನ್ನುವುದು ಹಿಂದೆ ಗುರುಕುಲವೂ ಹೌದು. ಬ್ರಾಹ್ಮಣ ವಟುಗಳಿಗೆ ವೇದ ಶಾಸ್ತ್ರ ಆಗಮಗಳನ್ನು ಕಲಿಸುವಂತಹುದು. ಇಲ್ಲಿ ಮಠಾಧಿಪತಿಯಾಗಿದ್ದವರು ಗುರುಗಳೂ ಆಗಿರುತ್ತಿದ್ದರು ಎನ್ನುವುದು ನನ್ನ ಓದಿಗೆ ತಿಳಿದ ವಿಷಯ. ಈ ಶಿಷ್ಯರು ಅಲ್ಲಿಯೇ ಸನಿವಾಸಿಗಳಾಗಿ ಇದ್ದು ಕೇವಲ ಬೌದ್ಧಿಕ ಜ್ಞಾನವಲ್ಲದೆ ದೈನಂದಿನ ಬದುಕಿಗೆ ಸಂಬಂಧಿಸಿದ ಕರ್ಮಾನುಷ್ಠಾನಗಳನ್ನು ಮಾಡಬೇಕಾಗಿತ್ತು. ಹೀಗೆ ಮಾಡುವಲ್ಲಿ ಗುರುವಿನ ಗುಲಾಮ ಎನ್ನುವ ಕಲ್ಪನೆಯೂ ದಾಸರ ಕೀರ್ತನೆಗಳಲ್ಲಿ ಪ್ರಕಟವಾದುದನ್ನು ತಿಳಿದಿದ್ದೆ. ಆದ್ದರಿಂದ ಮಠ ಎನ್ನುವುದು ಒಂದು ದೊಡ್ಡ ಮನೆಯಂತಿರಬಹುದು ಎಂಬುದು ನನ್ನ ಊಹೆಯಾಗಿತ್ತು. ನನ್ನ ಊಹೆ ಸುಳ್ಳಾಗಲಿಲ್ಲ. ದೊಡ್ಡ ಮನೆ ಮಾತ್ರವಲ್ಲ ಮಹಡಿಯ ಮನೆಯೇ ಆಗಿತ್ತು.

ಪ್ರವೇಶಿಸಲು ಇರುವ ಜಾಗದಲ್ಲಿ ಎರಡೂ ಬದಿಗೆ ಜಗಲಿಗಳು ಇದ್ದು ಬಂದವರು ನೇರವಾಗಿ ಒಳ ಹೋಗದಂತೆ ಅಪ್ಪಣೆ ಪಡೆದು ಅವಕಾಶವಿದ್ದರೆ ಒಳಗೆ ಹೋಗುವಂತಿರಬಹುದು. ಇಲ್ಲವಾದಲ್ಲಿ ಅಲ್ಲಿಂದಲೇ ತಾವು ಬಂದ ಕೆಲಸಕ್ಕೆ ಅನುಗುಣವಾದ ವ್ಯವಸ್ಥೆಯೊಂದಿಗೆ ಹಿಂದಿರುಗಿ ಹೋಗುವಂತಿರಬಹುದು ಅನ್ನಿಸಿತು. ಒಳ ಪ್ರವೇಶಿಸಿದರೆ ದೇವಸ್ಥಾನದಂತೆಯೇ ಪ್ರಾಂಗಣ ನಡುವೆ ಗರ್ಭಗುಡಿ ಪ್ರದಕ್ಷಿಣೆ ಬರಲು ಸಾಧ್ಯವಿರುವಂತಹುದು. ಈ ಪ್ರಾಂಗಣ ಸುತ್ತಲೂ ಎತ್ತರದಲ್ಲಿ ನಾಲ್ಕೂ ದಿಕ್ಕಿಗೆ ತೆರೆದ ಚಾವಡಿಗಳು, ಈ ಚಾವಡಿಗಳ ಮೇಲೆ ಮಹಡಿ ಇದ್ದು ಅವುಗಳಿಗೆ ಆಧಾರವಾಗಿ ಚಾವಡಿಯಲ್ಲಿ ಕುಸುರಿ ಕೆಲಸಗಳಿಂದ ಕೂಡಿದ ಕಂಬಗಳು ಇದ್ದುವು. ಈ ಕಂಬಗಳಲ್ಲಿ ಸರ್ಪದ ಅಥವಾ ಹಾವುಗಳ ವಿವಿಧ ವಿನ್ಯಾಸದ ಕಲೆಗಾರಿಕೆ ಇದ್ದು ನೋಡಲು ಆಕರ್ಷಣೀಯವಾಗಿದ್ದರೂ ಹಾವಿನ ಭಯವುಳ್ಳ ನಾನು ಒಂದೇ ಕಂಬ ನೋಡಿದವಳು ಉಳಿದವುಗಳ ಸಮೀಪವೂ ಹೋಗಲಿಲ್ಲ. ಸಿದ್ಧಾಪುರ ವಾಸುದೇವ ಭಟ್ಟರು ಅನುಮತಿಯೊಂದಿಗೆ ಆ ಕಂಬಗಳ ಚಿತ್ರಗಳನ್ನು ಕ್ಯಾಮರಾದಲ್ಲಿ ಕ್ಲಿಕ್ಕಿಸುತ್ತಿದ್ದರು. ಗರ್ಭಗುಡಿಯೊಳಗೆ ಇದ್ದ ಕಾಳಿಂಗ ಮರ್ದನ ಕೃಷ್ಣನ ಮೂರ್ತಿಯನ್ನು ನೋಡಿದೆ.

ಸ್ನಿಗ್ಧವಾದ ಮಂದಹಾಸದೊಂದಿಗಿನ ಕರಿಕಲ್ಲಿನ ಕೃಷ್ಣಮೂರ್ತಿ ಕಾಳಿಂಗನ ಹೆಡೆಯ ಮೇಲೆ ನಿಂತ ಭಂಗಿ ಸುಂದರವಾಗಿತ್ತು. ಮೇಲೆ ಮಹಡಿಯಲ್ಲಿ ಕೊಠಡಿಗಳೂ ಇದ್ದುವು. ಮಠಾಧಿಪತಿಗಳಾದ ಸ್ವಾಮೀಜಿಗಳ ಕೊಠಡಿಗಳನ್ನು ತೋರಿಸಿದರು. ಅಡುಗೆ ಮನೆ, ಬಚ್ಚಲು ಮನೆ ಇವೆಲ್ಲವೂ ಹಳೆಯ ಹಳ್ಳಿಯ ಮನೆಗಳಂತೆ ಇದ್ದರೂ ಸ್ವಚ್ಛವಾಗಿ ವ್ಯವಸ್ಥಿತವಾಗಿತ್ತು. ಹಾಗೆಯೇ ಒಂದು ಗುಪ್ತ ಸುರಂಗ ಇದ್ದುದನ್ನು ತೋರಿಸಿದರು. ಅದು ಅಪಾಯದ ಸಂದರ್ಭದಲ್ಲಿ ಮಾತ್ರ ಬಳಕೆಯಾಗುತ್ತಿತ್ತು ಎಂದು ತಿಳಿಸಿದ ವ್ಯವಸ್ಥಾಪಕರು ಇಂದು ಅದರ ಆವಶ್ಯಕತೆ ಇಲ್ಲ ಎನ್ನುವುದನ್ನೂ ತಿಳಿಸಿದರು. ಹೌದು ಈಗ ಮಠಾಧಿಪತಿಗಳು ಕೂಡಾ ಸಾಮಾನ್ಯ ಜನರಂತೆ ಕಾರು, ರೈಲು, ವಿಮಾನಗಳಲ್ಲಿ ಓಡಾಡುವ ಕಾಲವಲ್ಲವೇ? ಆಧುನಿಕ ಸೌಲಭ್ಯಗಳು ಎಲ್ಲರಿಗೂ ಸಮಾನವಾಗಬೇಕಾದುದು ಅನಿವಾರ್ಯವೂ ಹೌದು ಅಗತ್ಯವೂ ಹೌದು. ಭಕ್ತರಂತೆ ಭಗವಂತ ಹಾಗೆಯೇ ಶಿಷ್ಯರಂತೆ ಗುರುಗಳು ಎಂಬ ಗಾದೆ ಈ ಕಾಲಕ್ಕೆ ಅನ್ವರ್ಥವಾದುದು.

ಕೃಷ್ಣಾಪುರ ಮಠ ಉಡುಪಿಯ ಮಠಗಳಲ್ಲಿ ಒಂದು ಆಗಿರುವುದರಿಂದ ಅದು ಮಧ್ವಮತಾನುಯಾಯಿಗಳಿಗೆ ಪ್ರಮುಖವಾದುದು. ನಮ್ಮ ಅವಿಭಜಿತ ಜಿಲ್ಲೆಯಲ್ಲೇ ಹುಟ್ಟಿಕೊಂಡ ಈ ಮತ ವಿಷ್ಣುವಿನ ಪಾರಮ್ಯವನ್ನು ಒಪ್ಪಿಕೊಂಡಿರುವುದರಿಂದ ಇದನ್ನು ವೈಷ್ಣವ ಪಂಥ ಎಂದೂ ಗುರುತಿಸುತ್ತಾರೆ. ಇದು ಈ ತುಳುನಾಡಿನದ್ದಾಗಿರುವುದರಿಂದ ಈ ಮತೀಯರ ಭಾಷೆ ತುಳು ಆಗಿದೆ. ಕೃಷ್ಣಾಪುರದಲ್ಲಿರುವ ಹೆಚ್ಚಿನ ಬ್ರಾಹ್ಮಣರು ಕನ್ನಡ ಮನೆ ಮಾತಿನವರು. ಹಾಗೆಯೇ ಕೋಟ ಬ್ರಾಹ್ಮಣರೂ ಆಗಿದ್ದುದರಿಂದ ಕೃಷ್ಣಾಪುರ ಮಠಕ್ಕೂ ಈ ಬ್ರಾಹ್ಮಣರಿಗೂ ಸಂಬಂಧವಿದ್ದಂತೆ ಕಾಣುತ್ತಿರಲಿಲ್ಲ. ಕೃಷ್ಣಾಪುರದಲ್ಲಿರುವ ಪಣಂಬೂರಿನಿಂದ ವಲಸೆ ಬಂದ ಜನರು ಪಣಂಬೂರಿನಲ್ಲಿದ್ದ ತಮ್ಮ ಆರಾಧ್ಯ ದೇವನಾದ ನಂದನೇಶ್ವರನನ್ನು ಜೊತೆಗೆ ಒಯ್ಯಲು ಸಾಧ್ಯವಾಗಿರಲಿಲ್ಲ. ಆದರೆ ಅವರು ಈಗಲೂ ಆ ದೇವರಿಗೇ ನಡೆದುಕೊಳ್ಳುತ್ತಿದ್ದುದರಿಂದ ಅವರ ಪಾಲಿನ ಎಲ್ಲಾ ಸಂದರ್ಭಗಳಿಗೆ ನಂದನೇಶ್ವರನೇ ನಂಬಿಕಸ್ಥ ದೇವರಾಗಿದ್ದುದು ಕೇವಲ ಬ್ರಾಹ್ಮಣರಿಗೆ ಮಾತ್ರವಲ್ಲ ಪಣಂಬೂರಿನಿಂದ ಬಂದ ಇತರ ಅಬ್ರಾಹ್ಮಣ ಸಮುದಾಯಗಳಿಗೆ ಕೂಡಾ. ಪಣಂಬೂರು ಜಾತ್ರೆ ಅವರಿಗೆ ಬಹಳ ವಿಶೇಷವಾದುದಾಗಿತ್ತು.

ಈ ಹಿನ್ನೆಲೆಯಲ್ಲಿ ಕಾಟಿಪಳ್ಳದಲ್ಲಿ ದೇವಸ್ಥಾನವಿರಲಿಲ್ಲ. ದೇವಸ್ಥಾನಗಳೆಂದರೆ ಪುರಾತನವಾದುದೇ ಆಗಿರುತ್ತದೆ ಎನ್ನುವ ನನ್ನ ತಿಳುವಳಿಕೆಯೊಂದಿಗೆ ದೇವಸ್ಥಾನವನ್ನು ಎಂದೂ ಯಾರೂ ಎಲ್ಲೂ ಎತ್ತಿ ಕೊಂಡೊಯ್ಯುವಂತಿಲ್ಲ ಎನ್ನುವುದೂ ಸೇರಿಕೊಂಡಿತ್ತು. ಆದರೆ ಅಬ್ರಾಹ್ಮಣ ಸಮುದಾಯದ ಜನರ ನಂಬಿಕೆಗಳು ಮತ್ತು ಆಚರಣೆಗಳು ಬಹಳ ಗೊಂದಲಗಳಿಂದ ಕೂಡಿದ್ದು ಎಂದರೆ ತಪ್ಪಾಗಬಹುದು. ಆದರೂ ಸತ್ಯ. ಯಾಕೆಂದರೆ ಅವರ ಹಿರಿಯರಿಂದ ಅವರ ಜೊತೆಗೇ ಬಂದ ಆರಾಧನಾ ರೀತಿ ಬಹಳ ಸರಳ ನೇರವೂ ಹೌದು. ಅವರು ಪಣಂಬೂರಿನಲ್ಲಿ ಗೇಣಿ ಒಕ್ಕಲಾಗಿದ್ದಿರಬಹುದು ಅಥವಾ ಸ್ವಂತ ವರ್ಗದಾರರೇ ಆಗಿರಬಹುದು ಅಥವಾ ಕೃಷಿ ಕಾರ್ಮಿಕರೇ ಆಗಿರಬಹುದು ಇದಕ್ಕೆ ಸಂಬಂಧವಿಲ್ಲದೆಯೇ ಅವರ ಜೊತೆಯಲ್ಲಿದ್ದ ದೈವಗಳನ್ನು ಅವರು ಕಾಟಿಪಳ್ಳದ ಊರಿಗೆ ಜೊತೆಗೇ ತಂದಿದ್ದಾರೆ. ಅದನ್ನು ಈಗ ಇಲ್ಲಿ ಸ್ಥಾಪಿಸಿಕೊಂಡಿದ್ದಾರೆ. ಅಲ್ಲಿ ದೊಡ್ಡ ಮನೆಯ ಚಾವಡಿಯ ತೂಗು ಮಂಚದಲ್ಲಿದ್ದ ದೈವಗಳ ಮುಖವಾಡ, ಆಭರಣಗಳು, ಕಡ್ತಲೆಗಳು ಇಲ್ಲಿನ ಸಣ್ಣ ಮನೆಯ ಒಂದು ಕೋಣೆಯೊಳಗೆ ಇರಬೇಕಾಯ್ತು. ಇನ್ನು ಕೆಲವರ ಮನೆಯಂಗಳದಲ್ಲಿದ್ದ ಕಲ್ಲಿನ ರೂಪದಲ್ಲಿದ್ದ ದೈವ ಇಲ್ಲಿಗೂ ಬಂದು ಮನೆಯಂಗಳದ ಒಂದು ಮೂಲೆಯಲ್ಲಿ ಸ್ಥಾಪಿತವಾಯ್ತು.

ಇನ್ನು ಕೆಲವರು ಅನುಕೂಲಸ್ಥರು ದೊರೆತ ಸೈಟಿನಲ್ಲಿಯೇ ತಮ್ಮ ಜೊತೆಗೇ ತಂದ ದೈವಕ್ಕೂ ಗುಡಿ ಕಟ್ಟಿಸಿ, ತಮಗೂ ಮನೆ ಕಟ್ಟಿಸಿಕೊಂಡು ತಮ್ಮ ದೈವಗಳ ಆರಾಧನೆಯ ಪರಂಪರೆಯನ್ನು ಮುಂದುವರಿಸಿ ಕೊಂಡಿದ್ದರು. ಜೊತೆಗೆ ದೇವಸ್ಥಾನದ ಪರಂಪರೆಗಳನ್ನೂ ಆಚರಿಸುವುದು ಕಂಡು ಬರುತ್ತಿತ್ತು. ಕಾಟಿಪಳ್ಳದ ಕ್ರಿಶ್ಚಿಯನ್ನರಿಗೆ ನಾನು ಹಿಂದೆ ಹೇಳಿದಂತೆಯೇ ಕಾನ ಬಾಳದ ರಸ್ತೆಯಲ್ಲಿ ಕಾಟಿಪಳ್ಳದ ವಸತಿ ವಲಯದಲ್ಲಿ ಚರ್ಚ್ ಒಂದಿತ್ತು. ಅದು ಒಂದನೇ, ಎರಡನೇ ಬ್ಲಾಕ್‌ನವರಿಗೆ ಹತ್ತಿರವಾಗಿದ್ದರೆ ಉಳಿದ ಬ್ಲಾಕ್‌ನವರಿಗೆ ನಡಿಗೆಗೆ ದೂರವೇ ಹೌದು. ಬಸ್ಸುಗಳಿದ್ದುದೂ ನಿಜವೇ. ಆದರೂ ಕ್ರಿಶ್ಚಿಯನ್ನರಲ್ಲೂ ಉಪಪಂಗಡಗಳಿದೆ ಎನ್ನುವುದರಿಂದಲೋ ಅಥವಾ ದೂರದ ಕಾರಣದಿಂದಲೋ 7ನೇ ಬ್ಲಾಕ್‌ನಲ್ಲಿ ಮುಖ್ಯರಸ್ತೆಯಲ್ಲಿ ಒಂದು ಸಣ್ಣ ಪ್ರಾರ್ಥನಾ ಮಂದಿರ ನಿರ್ಮಾಣವಾದುದು ನಾವು ಇಲ್ಲಿದ್ದ ದಿನಗಳಲ್ಲಿಯೇ. ಸೈಟುಗಳಿಂದ ಹೊರತಾಗಿ ಖಾಲಿ ಇದ್ದ ಜಾಗದಲ್ಲಿ ಈ ಪ್ರಾರ್ಥನಾ ಮಂದಿರ ನಿರ್ಮಾಣವಾದಾಗ ಸಾಮಾನ್ಯ ಜನರಲ್ಲಿ ಇದೊಂದು ತಪ್ಪು ಅಥವಾ ಸರಿ ಎಂಬ ಚರ್ಚೆ ನಡೆದದ್ದು ನನಗೆ ತಿಳಿದಿಲ್ಲ. ಇದೊಂದು ದೊಡ್ಡ ಸುದ್ದಿಯಾಗದೆ ಮಾಮೂಲಿ ವಿಷಯವಾಯ್ತು. ಅಲ್ಲಿ ರವಿವಾರದ ಬೆಳಗಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಕ್ರಿಸ್‌ಮಸ್ ವೇಳೆ ಪ್ರಾರ್ಥನಾ ಮಂದಿರ ಅಲಂಕಾರಗೊಳ್ಳುತ್ತಿತ್ತು. ಇಲ್ಲಿನ ಮುಸ್ಲಿಮರಿಗೆ ಚೊಕ್ಕಬೆಟ್ಟಿನ ತಿರುವಿನ 8ನೇ ಬ್ಲಾಕ್‌ನಲ್ಲಿ ಒಂದು ಮಸೀದಿ.

ಅದೇ ಮುಖ್ಯರಸ್ತೆಯಲ್ಲಿ 7ನೇ ಬ್ಲಾಕ್‌ನಲ್ಲಿ ಒಂದು ಮಸೀದಿ ಹಾಗೂ ಮುಂದೆ ಈ ರಸ್ತೆ ಕಾಟಿಪಳ್ಳಕ್ಕೆ ತಿರುಗುವಲ್ಲಿ ಇನ್ನೊಂದು ಮಸೀದಿ ಮುಖ್ಯ ರಸ್ತೆಯಲ್ಲಿದ್ದು ರಸ್ತೆಗೆ ಸರಿಯಾಗಿ ಕಾಣುವಂತಿತ್ತು. ಶುಕ್ರವಾರದ ದಿನಗಳಲ್ಲಿ ಹುಡುಗರು, ಯುವಕರು, ಹಿರಿಯ ಗಂಡಸರೆಲ್ಲರೂ ನಮಾಝ್‌ಗೆ ಹೋಗುವುದನ್ನು ಕಾಣುತ್ತಿದ್ದೆವು. ಮಹಿಳೆಯರು ತಮ್ಮ ಮನೆಗಳಲ್ಲಿಯೇ ನಮಾಝ್ ನಿರ್ವಹಿಸುತ್ತಿದ್ದರು. ಹೀಗೆ ಕಾಟಿಪಳ್ಳದಲ್ಲಿದ್ದ ವಿವಿಧ ಧರ್ಮಗಳ ಜನರು ತಮ್ಮ ತಮ್ಮ ನಂಬಿಕೆಗಳಂತೆ ತಮ್ಮ ದೇವರಿಗೆ ತಮ್ಮ ಪ್ರಾರ್ಥನೆಗಳಲ್ಲಿ ಬೇಡಿಕೆ ಸಲ್ಲಿಸುತ್ತಿದ್ದರು ಅಥವಾ ತಮ್ಮ ಬದುಕಿನ ನೆಮ್ಮದಿ ಶಾಂತಿಗಳಿಗೆ ಕೃತಜ್ಞತೆ ಸಲ್ಲಿಸುತ್ತಿದ್ದರು.

ಪ್ರಾರ್ಥನೆ ಎಂದರೆ ಬೇಡುವುದು ಅಥವಾ ಕೃತಜ್ಞತೆ ಸಲ್ಲಿಸುವುದಲ್ಲದೆ ಇನ್ನೇನಾಗಿರಲು ಸಾಧ್ಯ? ಎಂಬ ಆಲೋಚನೆಯೊಂದಿಗೆ ಬಹುಶಃ ಇದಕ್ಕಿಂತ ಭಿನ್ನವಾಗಿ ‘‘ಓ ನನ್ನ ಚೇತನ, ಆಗು ನೀ ಅನಿಕೇತನ’’ ಎಂದು ಭಾವಿಸುವುದು, ‘‘ನಿನ್ನ ಸಂಗವ ತೊರೆಯೇ, ನಿನ್ನನೆಂದೂ ಮರೆಯೆ; ನಿನ್ನವನು/ವಳು ನಾನಲ್ಲವೇನೋ ದೊರೆಯೇ?’’ ಎಂದು ಶರಣಾಗುವುದು, ‘‘ಎನ್ನ ದೇಹವೇ ದೇಗುಲ, ಕಾಲೇ ಕಂಬ, ಶಿರವೇ ಹೊನ್ನ ಕಲಶವಯ್ಯಿ’’ ಎಂಬ ಅಧ್ಯಾತ್ಮದ ಅಸ್ಮಿತೆಯನ್ನು ಮೆರೆಯುವುದು ಎಲ್ಲಾ ಧರ್ಮಗಳನ್ನು ಮೀರಿದ ಮಾನವೀಯ ನೆಲೆಯ ಅಧ್ಯಾತ್ಮದ ನಂಬಿಕೆಗಳಾಗುವುದು ವಿಶ್ವ ಶಾಂತಿಯ ಸಾಧ್ಯತೆಗೆ ಅತ್ಯಂತ ಸರಳವಾದ, ಪ್ರಾಮಾಣಿಕವಾದ, ವೈಯಕ್ತಿಕವಾದ ನಡೆ ನುಡಿ ಎನ್ನುವುದು ಅನುಭವದ ತತ್ವಗಳಂತೆಯೇ ಅನುಭವದ ಸತ್ಯಗಳೂ ಆಗಬಹುದಲ್ಲವೇ?

Writer - ಚಂದ್ರಕಲಾ ನಂದಾವರ

contributor

Editor - ಚಂದ್ರಕಲಾ ನಂದಾವರ

contributor

Similar News