ಮಹಾಡ್‌ನ ಮಹಾಯುದ್ಧ

Update: 2017-12-08 06:44 GMT

ಭಾಗ-2

ಹಿಂದೂ ಸಮಾಜದ ಏಳಿಗೆಯ ದಾರಿ ಮುಚ್ಚಲ್ಪಟ್ಟಿದ್ದು ಅದು ಅಧೊಗತಿಗಿಳಿಯುವುದನ್ನು ಕಣ್ಣಾರೆ ನೋಡುತ್ತಿರುವಾಗ ಹಿಂದೂ ಧರ್ಮದಲ್ಲಿರುವವರನ್ನು ಹಿಂಸಿಸಿ ಅವರನ್ನು ಬೇರ್ಪಡಿಸುವ ದುಷ್ಟ ಪ್ರಯತ್ನಕ್ಕೆ ತಡೆ ಹಾಕಿ ಅವರೊಂದಿಗೆ ನ್ಯಾಯ ಹಾಗೂ ಸಮಾನತೆಯಿಂದ ವರ್ತಿಸಿ ಜನರನ್ನು ಒಂದಾಗಿಸುವ ಪಾಠವನ್ನು ಇವರಿಗೆ ಕಲಿಸುವ ಆವಶ್ಯಕತೆಯಿದೆ ಅನ್ನುವುದನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ತಾವ್ಯಾರೋ ದೊಡ್ಡ ವಿಭೂತಿಗಳು ಅನ್ನಿಸಿಕೊಳ್ಳುವ ಈ ಮತಿಮಂದ ಜನ ಇಂತಹ ಯಾವ ಪ್ರಯತ್ನವನ್ನೂ ಮಾಡಿಲ್ಲ. ಅದನ್ನೆಲ್ಲ ಬಿಟ್ಟು ಮಾಡುವುದನ್ನೆಲ್ಲ ಮಾಡಿ ತಾವಂತಹವರು ಅಲ್ಲವೇ ಅಲ್ಲ ಎಂದು ತೋರಿಸುವ ಪ್ರಯತ್ನ ಮಾಡಿದ್ದಾರೆ. ದಲಿತರು ಕೆರೆಯಿಂದ ನೀರು ತುಂಬಿಕೊಂಡಿದ್ದರಿಂದ ಜಗಳ ಮಾಡುವಷ್ಟಕ್ಕೇ ಅವರು ಸೀಮಿತವಾಗಿದ್ದರೆ ನಮಗೇನೂ ಅನಿಸುತ್ತಿರಲಿಲ್ಲ, ಆದರೆ ಈ ಉದ್ಧಟರು ಕೆರೆಯನ್ನು ಶುದ್ಧೀಕರಿಸಿ ಪ್ರತಿಗಾಮಿ ಧೋರಣೆಯನ್ನು ಅವಲಂಬಿಸಿದರು ಅನ್ನುವುದೇ ನಮ್ಮ ಸಿಟ್ಟಿಗೆ ಕಾರಣ.

ದಲಿತರು ಕೆಚ್ಚೆದೆಯಿಂದ ಕೆರೆಗೆ ಹೋಗಿ ತಾವು ಶುದ್ಧವಾಗಿದ್ದೇವೆ ಎಂದು ತೋರಿಸಲು ಸಿದ್ಧರಾದಾಗ ಕೆರೆಯನ್ನು ಶುದ್ಧೀಕರಿಸಿ ಈ ದಲಿತರು ಅಪವಿತ್ರರು, ಇವರು ಮುಟ್ಟಿದ್ದು ಅಥವಾ ಅವರ ಸಂಪರ್ಕದಿಂದ ಎಲ್ಲವೂ ಭ್ರಷ್ಟವಾಗುತ್ತದೆ ಅನ್ನುವುದನ್ನು ತೋರಿಸಿಕೊಡಲೆಂದೇ ಅವರು ಕೆರೆಯ ಶುದ್ಧಿಕರಣ ಮಾಡಿದರು. ಶುದ್ಧೀಕರಣ ಮಾಡುವ ಈ ಮೋಸಗಾರರು ದಲಿತರ ಮಾನ ಕಳೆದಿದ್ದಾರೆ ಎಂದೇ ಹೇಳಬೇಕಾಗುತ್ತದೆ. ಹೀಗೆ ಒಬ್ಬರ ಮಾನ ಕಳೆಯುವವರಿಗೆ ಯಾವುದೇ ಶಿಕ್ಷೆಯಿಲ್ಲವೆ? ಅನ್ನುವ ಪ್ರಶ್ನೆ ಕಾಡುತ್ತದೆ. ಈ ಪ್ರಶ್ನೆ ಬಿಡಿ ಆದರೆ ಕೆರೆ ಶುದ್ಧೀಕರಣ ಮಾಡುವವರು, ‘ದಲಿತರು ಮುಸಲ್ಮಾನರಾಗಿ ಪರಿವರ್ತನೆಗೊಂಡರೆ ಕೆರೆ ಮೈಲಿಗೆಯಾಗುವ ಪ್ರಶ್ನೆಯೇ ಇಲ್ಲ, ಏಕೆಂದರೆ ಮುಸಲ್ಮಾನರು ನೀರು ತುಂಬಿಕೊಂಡರೆ ಕೆರೆ ಮೈಲಿಗೆಯಾಗುವುದಿಲ್ಲ’ ಅನ್ನುವುದನ್ನು ಸಿದ್ಧಪಡಿಸಿದ್ದಾರೆ. ಈ ಕೃತ್ಯವನ್ನು ಧರ್ಮದ್ರೋಹ ಅನ್ನುವುದನ್ನು ಬಿಟ್ಟರೆ ಬೇರೆ ಏನನ್ನಬೇಕು ಅನ್ನುವುದೇ ತೋಚುತ್ತಿಲ್ಲ! ಒಂದೆಡೆ ಹಿಂದೂ ಧರ್ಮದಿಂದ ಮತಾಂತರಗೊಂಡವರನ್ನು ಶುದ್ಧೀಕರಿಸಿ ತಮ್ಮ ಧರ್ಮಕ್ಕೆ ಮರಳಿ ತರಲು ಪ್ರಯತ್ನಿಸುವುದು, ಇನ್ನೊಂದೆಡೆ ತಮ್ಮ ಧರ್ಮದಲ್ಲೇ ಇರುವವರನ್ನು ರೊಚ್ಚಿಗೇಳುವಂತೆ ವರ್ತಿಸುವುದು ತಲೆಯಿರುವವರ ಲಕ್ಷಣವಲ್ಲ.

ಸ್ವಾಮಿ ಶ್ರದ್ಧಾನಂದರು ಆರಂಭಿಸಿದ ಕೆಲಸ ಇದಲ್ಲ. ಇದು ಅವರ ಕೆಲಸವನ್ನು ಮಣ್ಣುಪಾಲು ಮಾಡುವ ಕೆಲಸ ಎಂದು ನನಗನಿಸುತ್ತದೆ. ಶುದ್ಧಿ-ಸಂಘಟನೆ ಚಳವಳಿಯ ಬಗ್ಗೆ ನನಗೇನನಿಸುತ್ತದೆ ಗೊತ್ತೆ, ಹಿಂದೂಗಳಿಗಿಂದು ಶುದ್ಧಿಗಿಂತ ಸಂಘಟನೆಯ ಆವಶ್ಯಕತೆಯಿದೆ. ಶುದ್ಧಿಯಿಂದ ಸಂಖ್ಯಾಬಲ ವೃದ್ಧಿಸುತ್ತದೆ ನಿಜ. ಆದರೆ ಇಂದು ಎಲ್ಲೆಡೆ ಹಿಂದೂಗಳು ಮುಸಲ್ಮಾನರೆದುರು ಕಾಲೂರಬೇಕಾಗುತ್ತದೆ. ಇದಕ್ಕೆ ಕಾರಣ ಹಿಂದೂಗಳು ಅಲ್ಪಸಂಖ್ಯಾಕರೆನ್ನುವುದು ಅಲ್ಲ. ಬಲ, ಸಾಮರ್ಥ್ಯ ಯಾವತ್ತೂ ಸಂಖ್ಯೆಯನ್ನವಲಂಬಿಸುವುದಿಲ್ಲ. ನನ್ನನಿಸಿಕೆಯಂತೆ, ನಿಜವಾದ ಬಲ, ಸಾಮರ್ಥ್ಯ ನಿರ್ಧಾರದಲ್ಲಡಗಿದೆ, ಸಂಖ್ಯೆಯಲ್ಲಲ್ಲ. ಗಟ್ಟಿ ನಿರ್ಧಾರವಿರುವವರು ಅಲ್ಪಸಂಖ್ಯೆಯಲ್ಲಿದ್ದರೂ ಯಾವುದೇ ಪ್ರಸಂಗಕ್ಕೂ ಹೆದರಲಾರರು. ಮುಸಲ್ಮಾನರ ಬಲ ಸಾಮರ್ಥ್ಯ ಯಾವುದರಲ್ಲಿದೆ ಅನ್ನುವುದನ್ನು ಕಂಡುಹಿಡಿದಾಗ ಅವರ ಬಲ, ಸಾಮರ್ಥ್ಯ ಅವರ ಗಟ್ಟಿ ನಿರ್ಧಾರದಲ್ಲಿದೆ ಸಂಖ್ಯೆಯಲ್ಲಿಲ್ಲ ಅನ್ನುವುದು ಸಿದ್ಧವಾಗುತ್ತದೆ. ಇದು ನಿಜವಾಗಿದ್ದರೆ ಹಿಂದೂ ಸಮಾಜಕ್ಕೆ ಶುದ್ಧಿಗಿಂತ ಸಂಘಟನೆಯ ಅಗತ್ಯವಿದೆ ಅನ್ನುವುದರಲ್ಲಿ ಬೇರೆ ಮಾತಿಲ್ಲ.

ಈಗ ಹಿಂದೂಗಳ ನಿರ್ಧಾರ ಒಂದೇ ಆಗಿರಬೇಕು ಅನ್ನುವುದು ಸಂಘಟನೆಯ ಅಂತಿಮ ಉದ್ದೇಶವಾಗಿರುವುದಾದರೆ ತಾಲೀಮು, ಆಖಾಡದಂತಹ ಬಾಹ್ಯೋಪಚಾರಗಳಿಂದ ಕೆಲಸ ಸಾಧ್ಯವಿಲ್ಲ. ಯಾವ ಜಾತಿಭೇದದಿಂದ, ಅಸ್ಪಶ್ಯತೆಯಿಂದ ಹಿಂದೂ ಧರ್ಮದ ಸಂಘಟನಾ ಶಕ್ತಿ ಮಾಯವಾಗಿದೆಯೋ, ಅವರಲ್ಲಿಯ ಆತ್ಮೀಯತೆ ನಷ್ಟವಾಗಿದೆಯೋ, ಒಂದು ಜಾತಿಯ ಸಂಬಂಧ ಮಗದೊಂದು ಜಾತಿಯೊಡನೆ ಹಾಳಾಗಿದೆಯೋ ಆ ಜಾತಿಭೇದ ಹಾಗೂ ಅಸ್ಪಶ್ಯತೆ ನಷ್ಟವಾಗದೆ ಗಟ್ಟಿ ನಿರ್ಧಾರ ಹಾಗೂ ಬಲಸಂವರ್ಧನೆಯ ಕಾರ್ಯ ಸಾಧ್ಯವಿಲ್ಲ. ಆದರೆ ಈ ಜಾತಿಭೇದ ಹಾಗೂ ಅಸ್ಪಶ್ಯತೆಯನ್ನು ಹೋಗಲಾಡಿಸಲು ಪ್ರಯತ್ನಿಸದೆ ಜಾತಿಜಾತಿಗಳಲ್ಲಿ ಒಡಕು ಉಂಟುಮಾಡಿ ಎಲ್ಲರನ್ನೂ ದೂರವಿಟ್ಟು ಸಂಘಟನೆಯ ಬದಲು ವಿಘಟಿಸುವಂತಹ ಕೆಲಸ ಮಾಡಲಾಗುತ್ತಿದೆ ಅನ್ನುವುದು ಮಹಾಡ್‌ನ ಘಟನೆಯಿಂದ ಸ್ಪಷ್ಟವಾಗಿದೆ. ಇದು ಹಿಂದೂ ಧರ್ಮಕ್ಕೊದಗಿರುವ ಘೋರ ಪ್ರಸಂಗವಾಗಿರುವಾಗ ಈ ಉದ್ಧಟ ಜನರ ನಿಂದನೀಯ ಹಾಗೂ ಬೇಜವಾಬ್ದಾರಿ ವರ್ತನೆಯ ಬಗ್ಗೆ ನನಗಿಷ್ಟೆ ಬರೆಯುವುದಿದೆ,

ಇಂತಹ ದಂಗೆಗಳಲ್ಲಿ ಪ್ರಮುಖವಾಗಿ ಬ್ರಾಹ್ಮಣೇತರರೇ ಭಾಗವಹಿಸುತ್ತಾರೆ ಅನ್ನುವುದೇ ದಿನನಿತ್ಯದ ಗೋಳಾಗಿದೆ. ಈ ಅನುಭವವನ್ನು ನಾವು ಮಹಾಡ್‌ನಲ್ಲಿ ಪಡೆದೆವು. ಮಹಾಡ್‌ನಲ್ಲಿ ಇವರು ಹೊಡೆದಾಟ ಬಡಿದಾಟ ಮಾಡಿದ್ದಲ್ಲದೆ ಅವರ ಜಾತಿಯವರು ಎಲ್ಲೆಡೆ ದಲಿತರನ್ನು ಗೋಳಾಡಿಸುತ್ತಿದ್ದಾರೆ ಎಂದು ನಮಗೆ ಸಿಗುತ್ತಿರುವ ಸುದ್ದಿಯಿಂದ ಸ್ಪಷ್ಟವಾಗಿದೆ. ಇವರೆಷ್ಟು ದಾಂಢಿಗರು ಹಾಗೂ ವಿಚಿತ್ರ ಜನರೆಂದರೆ ಹೊಡೆಯಲು, ಬಡಿಯಲು ಹೆಂಗಸರ ಮಾನ ಕಳೆಯಲು ಇವರಿಗೆ ಕಿಂಚಿತ್ತೂ ನಾಚಿಕೆಯೆನಿಸುವುದಿಲ್ಲ. ಅಸಮಾನತೆಯನ್ನು ಕಿತ್ತೊಗೆದು ಸಮಾನತೆಯ ಅಡಿಪಾಯದ ಮೇಲೆ ಹಿಂದೂ ಸಮಾಜವನ್ನು ರಚಿಸಲು ಅವತರಿಸಿ ಬ್ರಾಹ್ಮಣೇತರ ಪಕ್ಷದಲ್ಲಿ ಸೇರಿಕೊಂಡಿರುವ ಈ ಜನರಿಂದ ಇಂತಹ ನೀಚ ವರ್ತನೆ ಆ ಪಕ್ಷದ ಉಜ್ವಲ ತತ್ವಕ್ಕೆ ಕಪ್ಪು ಮಸಿ ಬಳಿಯುವಂತಹದ್ದು ಅನ್ನುವುದು ನಮ್ಮನಿಸಿಕೆ. ಬ್ರಾಹ್ಮಣೇತರ ಪಕ್ಷಕ್ಕೆ ಸಂಬಂಧಿಸಿದಂತಹ ನಮ್ಮ ವಿಚಾರಗಳನ್ನು ನಾವು ಸ್ಪಷ್ಟವಾಗಿ ಮಂಡಿಸಲಿದ್ದೇವೆ. ಆಗ ಆ ಪಕ್ಷದ ಜವಾಬ್ದಾರಿಗಳೇನು ಅನ್ನುವುದನ್ನು ಬರೆದೇ ಬರೆಯುತ್ತೇವೆ.

ಆದರೆ ಮಹಾಡ್‌ನಲ್ಲಿ ನಡೆದ ಒಂದು ವಿಚಿತ್ರ ಘಟನೆ ನಮ್ಮ ಗಮನಕ್ಕೆ ಬಂದಿದೆ. ಖುದ್ದು ಶೇಟಜಿ(ಸಾಹುಕಾರರು) ಹಾಗೂ ಭಡಜಿ (ಬ್ರಾಹ್ಮಣರು ಅಥವಾ ಬ್ರಾಹ್ಮಣ ಅರ್ಚಕರು)ಗಳು ಗಾಂಧಿಟೋಪಿ ಹಾಗೂ ತಿಲಕ್ ಶರ್ಟ್ ಹಾಕಿ ಬ್ರಾಹ್ಮಣರ ಸಂರಕ್ಷಣೆಗಾಗಿ ಕೋಲು ಹಿಡಿದು ಮುಂದಾದರು. ಅಷ್ಟೇ ಅಲ್ಲ ಇದೇ ಜನ ಊರು ಊರೆಲ್ಲ ತಿರುಗಾಡಿ ‘‘ನಮ್ಮ ಕೆರೆಗಳನ್ನು ಮೈಲಿಗೆ ಮಾಡಿದಿರಿ, ನಿಮ್ಮ ಭಾವಿಗಳನ್ನೀಗ ಜೋಪಾನ ಮಾಡಿ’’ ಅನ್ನುವ ಸಂದೇಶ ಸಾರಿ ಹಳ್ಳಿಹಳ್ಳಿಗಳಲ್ಲಿ ವಾಸಿಸುತ್ತಿರುವ ಅಲ್ಪಸಂಖ್ಯಾತರಾಗಿರುವ ದಲಿತರ ವಿರುದ್ಧ ಬಹುಸಂಖ್ಯೆಗಳಲ್ಲಿರುವ ಬ್ರಾಹ್ಮಣೇತರ ಜನರನ್ನು ಎತ್ತಿ ಹಿಡಿದರು. ಬ್ರಾಹ್ಮಣರ ಸಂರಕ್ಷಣೆಗಾಗಿ ಓಡೋಡಿ ಬಂದ ಈ ಶೇಟಜಿ ಹಾಗೂ ಭಡಜಿಗಳನ್ನು ಅವರ ಪರಾಕ್ರಮಕ್ಕಾಗಿ ಅಭಿನಂದಿಸುತ್ತೇವೆ. ಆದರೆ ಬ್ರಾಹ್ಮಣೇತರ ಜಾತಿಯಲ್ಲಿ ಬರುವ ಜಾತಿಗಳು ಈಗಿನ ಕಾಲದಲ್ಲಿ ಮಂಗಗಳಂತೆ ದಡ್ಡರು ಎಂದವರಿಗೆ ನೆನಪಿಸಿಕೊಡುತ್ತಿದ್ದೇವೆ.

ಮಂಗನ ಕೈಗೆ ಕೊಡಲಿ ಕೊಟ್ಟರೆ ಆತ್ಮಘಾತವಾಗಲಿದೆ ಅನ್ನುವುದನ್ನು ಈ ಶೇಟಜಿ-ಭಡಜಿಗಳು ಚೆನ್ನಾಗಿ ನೆನಪಿಡಲಿ. ಇದೇ ಬ್ರಾಹ್ಮಣೇತರ ಜನರು ಒಂದು ಕಾಲದಲ್ಲಿ ಘಟ್ಟದ ಮೇಲಿರುವ ಶೇಟಜಿಗಳ ಮೂಗು ಕೊಯ್ದು ಅವರ ಮನೆಗಳನ್ನು ಸುಟ್ಟು ಭಸ್ಮ ಮಾಡುತ್ತಿದ್ದರು ಅನ್ನುವುದು ಎಲ್ಲರಿಗೂ ಗೊತ್ತು. ಘಟ್ಟದ ಮೇಲೆ ಘಟಿಸಿದ ಈ ಘಟನೆ ಘಟ್ಟದ ಕೆಳಗೆ ಘಟಿಸಲಾರದು ಎಂದು ಹೇಳಲಾಗದು. ಇವರೇ ನಮ್ಮ ರಕ್ಷಕರು ಎಂದು ನಂಬುತ್ತಿರುವ ಜನರೇ ನಾಳೆ ನಮ್ಮ ಕಾಲವಾಗಿ ಬಂದಾರು ಅನ್ನುವುದನ್ನವರು ನೆನಪಿಡಬೇಕು. ಇತ್ತೀಚೆಗೆ 29-3-22ರ ಕೇಸರಿ ಪತ್ರಿಕೆಯ ಸಂಚಿಕೆಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಈ ಸಂಚಿಕೆಯಲ್ಲಿ ಈ ಮಂಗಗಳು (ಬ್ರಾಹ್ಮಣೇತರರು) ತಮ್ಮ ಕೊಡಲಿಯೇಟನ್ನು ಬ್ರಾಹ್ಮಣರ ಮನೆಗಳ ಮೇಲೆ ಹೇಗೆ ಹಾಕಿದರು ಅನ್ನುವ ಸುದ್ದಿಯನ್ನು ಕೇಸರಿಯ ‘ಪ್ರಾಸಂಗಿಕ ಬೋಲ್’ ಅನ್ನುವ ಅಂಕಣದಡಿ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಿದ್ದರು. ಕೆಳಗಿನ ನಿರೂಪಣೆ ಅದರಿಂದಲೇ ಆರಿಸಿದ್ದು.

‘‘7.ಸತ್ಯಶೋಧಕ ಸಮಾಜದ (ಸತ್ಯಶೋಧಕ ಸಮಾಜವನ್ನು ಹುಟ್ಟುಹಾಕಿದ್ದು ಮಹಾತ್ಮಾ ಜ್ಯೋತಿಬಾ ಫುಲೆಯವರು ಹಾಗೂ ಫುಲೆಯವರು ಅಂಬೇಡ್ಕರರ ಗುರುಗಳು, ಅವರ ಸತ್ಯಶೋಧಕ ಸಮಾಜದ ವಿಚಾರಗಳನ್ನು ಮುಂದೆ ಅಂಬೇಡ್ಕರರು ಮುಂದುವರಿಸಿದರು) ನೇತಾರರು ದೊಡ್ಡ ದೊಡ್ಡ ಮಾತುಗಳನ್ನಾಡು ತ್ತಾರೆ. ಆದರೆ ಹಳ್ಳಿಹಳ್ಳಿಗಳಲ್ಲಿ ಸತ್ಯಶೋಧಕ ವಿಚಾರಗಳ ಗಾಳಿ ಹರಡಲಾ ರಂಭಿಸಿದಾಗ ಅಲ್ಲಿಯ ವಾತಾವರಣ ಜಾತಿದ್ವೇಷದಿಂದ ತುಂಬಿಹೋಗುತ್ತದೆ. ಹಾಗೂ ಬ್ರಾಹ್ಮಣರ ಬದುಕು ಬಹಳ ಅಸಾಧ್ಯವಾಗುತ್ತದೆ. ಸತ್ಯಶೋಧಕ ಲೇಖಕರ ಬಾಯಿಯಲ್ಲಂತೂ ಬೌದ್ಧ, ಕ್ರೈಸ್ತ, ಗಾಂಧಿಯವರಂತಹ ವ್ಯಕ್ರಿಗಳ ಹೆಸರಿರಿತ್ತದೆ. ಆದರೆ ಅಲ್ಲಲ್ಲಿ ನಡೆಯುತ್ತಿರುವ ದ್ವೇಷ ಹಾಗೂ ಅತ್ಯಾಚಾರಕ್ಕೆ ಕಾರಣವಾಗಿರುವ ಸತ್ಯಶೋಧಕರ ನಿಷೇಧ ಅಥವಾ ಅವರ ದುಷ್ಕೃತ್ಯಕ್ಕೆ ಕಡಿವಾಣ ಹಾಕುವ ಕೆಲಸವನ್ನು ಯಾವುದೇ ನೇತಾರ ಅಥವಾ ಲೇಖಕರು ಮಾಡುವುದಿಲ್ಲ.

ಹಾಗಾಗಿ ಸತ್ಯಶೋಧಕರೆಂದರೆ ಜಾತಿದ್ವೇಷವನ್ನು ಹರಡಿ ಅತ್ಯಾಚಾರಿ ಪ್ರವೃತ್ತಿ ಯನ್ನು ಹರಡುವ ಜನ ಅನ್ನುವಂತಾಗಿದೆ. ಹಳ್ಳಿಗಳಿಂದ ಈ ಸತ್ಯಶೋಧಕರ ಉಪದ್ರವಗಳ ಬಗ್ಗೆ ಪ್ರತೀವಾರ ನಮಗೆ ದೂರುಗಳು ಬರುತ್ತವೆ. ಅದರಲ್ಲಿ ಹೆಚ್ಚಾಗಿ ಹೊರಗಿನಿಂದ ಬಂದಿರುವ ಬ್ರಾಹ್ಮಣೇತರ ಶಾಲಾ ಮೇಷ್ಟ್ರು ಈ ತೊಂದರೆಗೆ ಕಾರಣನಾಗುತ್ತಾನೆ. ಆ ಶಾಲಾ ಮೇಷ್ಟ್ರು ಆ ಶಾಲೆಗೆ ಬಂದ ಒಂದೆರಡು ವರ್ಷಗಳಲ್ಲೆ ಊರಿನ ಶಾಂತತೆಗೆ ಭಂಗ ಬಂದಿರುತ್ತದೆ. ಆತ್ಮೀಯತೆಯ ವಾತಾವರಣ ಕಲುಕಿ ಹೋಗಿ ಸಮಾನತೆ ತತ್ವದ ಬದಲಿಗೆ ಅತ್ಯಾಚಾರ, ಜಾತಿದ್ವೇಷದಂತಹ ದೆವ್ವಗಳು ಓಡಲಾರಂಭಿಸುತ್ತವೆ.

8. ಉದಾಹರಣೆಗೆ ಅನೇಕ ಘಟನೆಗಳ ಪೈಕಿ ಒಂದು ಘಟನೆಯನ್ನು ಹೇಳುತ್ತೇನೆ. (---ಊರಿನಲ್ಲಿ ಜನಸಂಖ್ಯೆ ಸುಮಾರು 1,000, ಅವರಲ್ಲಿ 30ಬ್ರಾಹ್ಮಣರು, 200ಮರಾಠಾ, ಉಳಿದವರು ಹೊಲೆಯರು, ಕುರುಬರು ಇತ್ಯಾದಿ. ಈ ಊರಲ್ಲಿ ಎರಡು ವರ್ಷಗಳಿಂದ ಸತ್ಯ ಸಮಾಜದ ಗಾಳಿ ಬೀಸುತ್ತಿದೆ. ಇಷ್ಟು ದಿನ ತಂಗಾಳಿಯಾಗಿ ಬೀಸುತ್ತಿದ್ದ ಗಾಳಿಯೀಗ ಧಗಧಗಿಸುವ ಬೆಂಕಿಯಾಗಿ ಮಾರ್ಪಟ್ಟಿದೆ. ಸತ್ಯ ಸಮಾಜದ ಒಬ್ಬ ನೇತಾರ ಇಲ್ಲಿಯ ಶಾಲಾ ಮೇಷ್ಟ್ರು. ಆ ಹಳ್ಳಿಯ ಅನೇಕ ಅಶಿಕ್ಷಿತರು ಆತ ಹೇಳಿದಂತೆ ಕೇಳುತ್ತಾರೆ. ‘ರೈತರಲ್ಲಿ ಇದೇ ನನ್ನ ವಿನಂತಿ, ಬಿಟ್ಟುಬಿಡಿ ಭಟ್ಟರ ಸಂಗತಿ’ ಅನ್ನುವಂತಹ ಬ್ರಾಹ್ಮಣರ ಮೇಲೆ ದ್ವೇಷ ಕಾರುವಂತಹ ಹಾಡುಗಳನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತದೆ. ಬ್ರಾಹ್ಮಣ ಹಾಗೂ ಮಾರವಾಡಿ ಹೆಂಗಸ ರಿಗೆ ಮನೆಯ ಹೊರಗೆ ಕಾಲಿಡುವುದು ಅಸಾಧ್ಯವಾಗಿದೆ.

ಧೈರ್ಯ ಒಟ್ಟುಗೂಡಿಸಿ ಹೆಂಗಸರೇನಾದರೂ ಮನೆಯ ಹೊರಗೆ ಹೋದರೆ ಹುಡುಗರಿಂದ ಅವರಿಗೆ ಕಲ್ಲು ಹೊಡೆಸುತ್ತಾರೆ. ಈ ವರದಿಯನ್ನೇನಾದರು ವೃತ್ತ ಪತ್ರಿಕೆಗೋ ಅಥವಾ ಸಂಬಂಧಿತ ಅಧಿಕಾರಿಗೋ ತಿಳಿಸಿದರೆ ಬನಿಯನ್ ಸುಡುವುದು, ದಾರಿಯಲ್ಲಿ ಅಡ್ಡಗಟ್ಟಿ ಹೊಡೆಯುವುದು ಇಂತಹ ಅತ್ಯಾಚಾರಗಳು ನಡೆಯುತ್ತವೆ. ಬ್ರಾಹ್ಮಣರ ಪಕ್ಷವನ್ನು ವಹಿಸಿದ್ದ ಮುಸಲ್ಮಾನನೊಬ್ಬನನ್ನು ಕೊಲೆ ಮಾಡುವ ಬೆದರಿಕೆಯನ್ನೊಡ್ಡಿ ಅವನನ್ನು ಚೆನ್ನಾಗಿ ಥಳಿಸಿದರು, ಹಳ್ಳಿಹಳ್ಳಿಗಳಲ್ಲಿ ಇಂತಹ ಘಟನೆಗಳು ಜರುಗುತ್ತಿದ್ದು ಅಲ್ಪಸಂಖ್ಯೆಯ ಬ್ರಾಹ್ಮಣರಿಗೆ ಸಾಕಷ್ಟು ತೊಂದರೆ ಯಾಗುವ ಸಾಧ್ಯತೆಯಿರುವುದರಿಂದ ಮೇಲಿನ ನಿರೂಪಣೆಯಲ್ಲಿ ಊರಿನ ಹೆಸರು ಬರೆದಿಲ್ಲ.

  9.ಸತ್ಯಶೋಧಕ ಪುಢಾರಿಗಳು ಹಾಗೂ ಅವರ ಸಮಾನತೆಯ ಶಬ್ದಕ್ಕೆ ಮಾರುಹೋಗುವಂತಹ ಕೆಲವು ಅನುಭವವೇ ಇಲ್ಲದಂತಹ ಧ್ಯೇಯವಾದಿಗಳೆದುರು ಈ ಎಲ್ಲ ವಿಷಯಗಳನ್ನು ಮಂಡಿಸಿದರೂ ಅವರದನ್ನು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ಹಾಗಾಗಿ ಬ್ರಾಹ್ಮಣ ಸಮಾಜದವರು ಇದರ ಬಗ್ಗೆ ಹೆಚ್ಚು ಯೋಚಿಸಿ ಒಂದು ನಿರ್ಧಾರಕ್ಕೆ ಬರಬೇಕು. ಕೆಲವು ಹಳ್ಳಿಗಳಿಂದ ಬ್ರಾಹ್ಮಣರು ಮನೆ ಮಠ ಬಿಟ್ಟು ಓಡುತ್ತಿದ್ದಾರೆ, ಮತ್ತೂ ಕೆಲವರು ಹೀಗೇ ಕಿರುಕುಳ ಅನುಭವಿಸುತ್ತ ಇದ್ದಲ್ಲೇ ದಿನ ದೂಡುತ್ತಿದ್ದಾರೆ. ಇಂತಹ ಘಟನೆಗಳು ಸಂಭವಿಸದಂತೆ ಒಂದು ಮಧ್ಯವರ್ತಿ ಸಮಿತಿಯನ್ನು ನೇಮಿಸಿ ಆ ಸಮಿತಿಯು ಎಲ್ಲೆಡೆಯಿಂದ ದೂರುಗಳಿಗೆ ಸಂಬಂಧಿಸಿದಂತಹ ಮಾಹಿತಿಯನ್ನು ಸಂಗ್ರಹಿಸಿ ಹಾಗೂ ಆ ದೂರು ಮತ್ತೆಮತ್ತೆ ಸರಕಾರ ಹಾಗೂ ಜನರ ಕಣ್ಣಿಗೆ ಕಾಣುವಂತೆ ಮಾಡಬೇಕು. ಹಾಗೂ ವರಿಷ್ಠ ಅಧಿಕಾರಿಗಳು ವಿಚಾರಣೆ ನಡೆಸಲು ಸಿದ್ಧರಿದ್ದರೆ ಅವರಿಗೆ ಘಟನೆಗೆ ಕಾರಣವಾದ ಜನರ ಹೆಸರನ್ನು ತಿಳಿಸಬೇಕು. ಏನೇ ಅಂದರೂ ಸರಕಾರದ ಕಡೆ ಇರುವ ಯಾವುದೇ ದೂರು ಪರಿಹರಿಸಲ್ಪಡುವುದಿಲ್ಲ ಅನ್ನುವುದು ಕಂಡುಬರುತ್ತದೆ.’’

ಸೈತಾನನ ಬಾಯಿಯಿಂದ ಇಂತಹ ವೇದಗಳನ್ನು ಕೇಳಿ ಯಾರಿಗೆ ಆಶ್ಚರ್ಯವಾಗಲಿಕ್ಕಿಲ್ಲ?
ನ್ಯಾಯವಾಗಿ ನಡೆದುಕೊಳ್ಳುವುದೇ ಗೊತ್ತಿಲ್ಲದವರ ಮೇಲೆಯೇ ಅನ್ಯಾಯವಾದರೆ ಯಾರಿಗೂ ಸಹಾನುಭೂತಿ ಅನಿಸುವುದಿಲ್ಲ. ಹಾವಿನ ಹೆಡೆಯನ್ನು ಚಚ್ಚಿದರೆ ಯಾರಿಗೂ ಬೇಸರವಿಲ್ಲ, ದುಃಖವೂ ಇಲ್ಲ. ವಾಸ್ತವಿಕವಾಗಿ ಹಳ್ಳಿಹಳ್ಳಿಗಳಲ್ಲಿ ದಲಿತರು ಅಲ್ಪಸಂಖ್ಯೆಯಲ್ಲಿದ್ದಾರೆ, ಅವರ ಮೇಲೂ ಬ್ರಾಹ್ಮಣೇತರ ಜನ ಅನ್ಯಾಯ ಮಾಡುತ್ತಿದ್ದಾರೆ. ಹಾಗೆಂದ ಮೇಲೆ ನಾವೂ ಬ್ರಾಹ್ಮಣರೂ ಸಮದುಃಖಿಗಳು ಅನ್ನುವ ಭಾವನೆ ದಲಿತರಲ್ಲೂ ಇರಬೇಕಿತ್ತು. ಆದರೆ ದಲಿತರಿಗೆ ಹಾಗೇನೂ ಅನಿಸುವುದಿಲ್ಲ. ನಮ್ಮ ಮೇಲಾದ ಅನ್ಯಾಯಕ್ಕೆ ಯಾರು ನಮಗೆ ಸಹಾಯ ಮಾಡುತ್ತಾರೋ ನಾವು ಅವರಿಗೇ ಸಹಾಯ ಮಾಡುತ್ತೇವೆ ಅನ್ನುವ ಅವರ ನಿಲುವು ಸರಿಯಾದದ್ದೆ. ಆದರೆ ಈ ಭಟ್ಟರಿಗೆ ತಮ್ಮ ಭೀಷಣ ಭವಿಷ್ಯ ಕಾಲದ ಅರಿವೆಲ್ಲಿದೆ? ಅರಿವಿದ್ದಿದ್ದರೆ ಅವರು ದಲಿತರೊಡನೆ ಹೀಗೆ ವರ್ತಿಸುತ್ತಿರಲಿಲ್ಲ. ಆದರೆ ಈ ಪ್ರಶ್ನೆ ಅವರ ಒಳ್ಳೆಯದಕ್ಕ್ಕಾಗಿಯೆ ಇರುವುದರಿಂದ ಅವರೇ ಈ ಪ್ರಶ್ನೆಯನ್ನು ಬಿಡಿಸಿಕೊಳ್ಳಬೇಕು. ಇಷ್ಟು ದಿನ ಮಹಾತ್ಮಾ ಗಾಂಧಿಯವರಂತೆ ಅಸ್ಪಶ್ಯತೆ ಹಿಂದೂ ಧರ್ಮಕ್ಕಿರುವ ಕಳಂಕ ಅನಿಸುತ್ತಿತ್ತು. ಅದರೀಗ ನಮ್ಮ ಅನಿಸಿಕೆಯಲ್ಲಿ ಬದಲಾವಣೆಯಾಗಿದೆ. ಈಗ ಅಸ್ಪಶ್ಯತೆ ನಮ್ಮ ನರದೇಹಕ್ಕಿರುವ ಕಳಂಕ ಅನಿಸುತ್ತಿದೆ ಎಂದಷ್ಟೆ ಹೇಳಬಯಸುತ್ತೇನೆ. ಇದು ಹಿಂದೂ ಧರ್ಮದ ಕಳಂಕ ಎಂದು ಎಲ್ಲಿಯವರೆಗೆ ಅನಿಸುತ್ತಿತ್ತೋ ಅಲ್ಲಿಯವರೆಗೆ ಆ ಕಳಂಕವನ್ನು ತೊಡೆದುಹಾಕುವ ಕೆಲಸವನ್ನು ನಾವು ನಿಮಗೆ ವಹಿಸಿದ್ದೆವು ಅನ್ನುವುದು ನಮಗಿದ್ದ ಕಳಂಕ ಎಂದು ನಮಗನಿಸಿದ್ದಕ್ಕೆ ಆ ಕಳಂಕವನ್ನು ತೊಡೆದುಹಾಕುವ ಕಳಂಕವನ್ನು ನಾವೇ ಮಾಡಲಿದ್ದೇವೆ. ಈ ಕಾರ್ಯಕ್ಕಾಗಿ ನಮ್ಮ ಕೆಲವು ಜನರಿಗೆ ‘ಆತ್ಮಯಜ್ಞ’ ಮಾಡಿಕೊಳ್ಳುವ ಅಗತ್ಯವಿದ್ದಲ್ಲಿ ನಾವು ಹಿಮ್ಮೆಟ್ಟುವವರಲ್ಲ. ನೀವು ಕೆರೆಯನ್ನು ಶುದ್ಧೀಕರಿಸಿ ನಮ್ಮ ಅಪವಿತ್ರತೆಯನ್ನು ಸಿದ್ಧಪಡಿಸುವ ನೀಚ ಕೆಲಸವನ್ನು ಮಹಾಡ್‌ನಲ್ಲಿ ಮಾಡಿದಂತೆ ಇನ್ನು ಮುಂದೆಯೂ ಮಾಡಿ. ಆದರೆ ನಾವು ಕೂಡ ಪವಿತ್ರರು ಅನ್ನುವುದನ್ನು ನಿಮ್ಮ ಬಾಯಿಯಿಂದ ಕೇಳದೆ ಸುಮ್ಮನಿರುವವರಲ್ಲ.
ನೀವು ಹಿಂದೂ ಧರ್ಮಕ್ಕಂಟಿರುವ ಕಳಂಕವನ್ನು ನಿಮ್ಮ ರಕ್ತದಿಂದ ತೊಳೆದು ಹಾಕಬೇಕು 

 ಎಂದೇನಾದರೂ ದೈವಚಿತ್ತವಿದ್ದರೆ ನಾವು ಭಾಗ್ಯವಂತರು ಅಂದುಕೊಳ್ಳುತ್ತೇವೆ. ಹಾಗೂ ಈ ಪವಿತ್ರ ಕಾರ್ಯಕ್ಕೆ ನಾವು ದೂತರಾಗಲಿದ್ದೇವೆ ಅನ್ನುವ ಭಾವನೆಯಿಂದ ಧೈರ್ಯವಾಗಿದ್ದೇವೆ. ಮಹಾಡ್‌ನಲ್ಲಿ ಹೊಡೆದಾಟವಾಗಿ ದಲಿತರು ಗಾಯಗೊಂಡರು ಅನ್ನುವುದಕ್ಕೆ ನಮಗ್ಯಾರಿಗೂ ಬೇಸರವಿಲ್ಲ. ಕೇವಲ ಹೊಡೆದಾಟದ ಬಗ್ಗೆ ಯೋಚಿಸುವಾಗ ಮಹಾಡ್‌ನಲ್ಲಿ ನೆರೆದ ದಲಿತರು ಸಿಕ್ಕಿದ್ದ ಅವಕಾಶವನ್ನು ಕಳೆದುಕೊಂಡರು ಅನ್ನುವ ಒಂದೇ ವಿಷಯಕ್ಕೆ ಬೇಸರವಾಗುತ್ತದೆ. ಮನಸ್ಸು ಮಾಡಿದ್ದರೆ ಅವರು ಅಲ್ಲೇ ಸೇಡು ತೀರಿಸಿಕೊಳ್ಳಬಹುದಿತ್ತು, ಒಳ್ಳೆಯ ಅವಕಾಶವಿತ್ತು ಅವರಿಗೆ, ಆದರೆ ನಾವು ಈ ಘಟನೆಯನ್ನು ದಂಗೆಯ ದೃಷ್ಟಿಯಿಂದ ನೋಡುವುದೇ ಇಲ್ಲ. ನಾವದನ್ನು ಸಮಾನತೆಗಾಗಿ ಆರಂಭವಾದ ಧರ್ಮಯುದ್ಧದ ಮೊದಲನೆಯ ರಣಕಹಳೆ ಅನ್ನುತ್ತೇವೆ. ಈಗಿನ ಜಯ, ಪರಾಜಯ ಯಾರದ್ದೇ ಪಾಲಿಗೆ ಹೋಗಿದ್ದರೂ ಕಡೆಗೆ ಯಶಸ್ಸು ನಮ್ಮದೇ ಆಗಲಿದೆ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಸ್ವಜನ ಉದ್ಧಾರದ ಹಾಗೂ ಸ್ವಧರ್ಮೋದ್ಧಾರದ ಮಹಾತ್ಕಾರ್ಯದಲ್ಲಿ ಯಶಸ್ವಿಯಾಗಲು ರಕ್ತಪಾತವಾಗಬೇಕು ಅನ್ನುವುದೇ ನಮ್ಮ ಆಸೆ. ಅಂತಹ ಅನಿವಾರ್ಯತೆ ಈ ಬ್ರಾಹ್ಮಣರ ಹಠದಿಂದ ಎದುರಾದದ್ದೇ ಆದರೆ ನಾವು ಹಿಮ್ಮೆಟ್ಟುವುದಿಲ್ಲ ಹಾಗೂ ಅದರ ಜವಾಬ್ದಾರಿ ಯಾವತ್ತೂ ನಮ್ಮ ಮೇಲಿರುವುದಿಲ್ಲ ಅನ್ನುವುದು ಅವರು ನೆನಪಿಡಲಿ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News