"ಬೇರೆ ಯಾವ ದೇಶದಲ್ಲಿ ಕಲಾವಿದರಿಗೆ ಬಹಿರಂಗ ಬೆದರಿಕೆಯೊಡ್ಡಲಾಗುತ್ತಿದೆ ?"
ಮುಂಬೈ,ಡಿ.8 : 'ಪದ್ಮಾವತಿ' ಚಿತ್ರ ಬಿಡುಗಡೆಗೊಳ್ಳಬಾರದೆಂಬ ಉದ್ದೇಶದಿಂದ ಅದರ ನಿರ್ದೇಶಕರಿಗೆ ಹಾಗೂ ನಟರಿಗೆ ಒಡ್ಡಲಾಗುತ್ತಿರುವ ಬಹಿರಂಗ ಬೆದರಿಕೆಗಳ ಬಗ್ಗೆ ತನ್ನ ತೀವ್ರ ಅಸಮಾಧಾನ ವ್ಯಕ್ತಪಡಿಸಿದರುವ ಬಾಂಬೆ ಹೈಕೋರ್ಟ್ "ಬೇರೆ ಯಾವ ದೇಶದಲ್ಲಿ ಕಲಾವಿದರಿಗೆ ಈ ರೀತಿಯ ಬೆದರಿಕೆಗಳನ್ನೊಡ್ಡಲಾಗುತ್ತಿರುವುದನ್ನುನೀವು ನೋಡಿದ್ದೀರಿ? ಸಿನೆಮಾವೊಂದನ್ನು ತಯಾರಿಸಲು ಅವಿರತ ಶ್ರಮ ಪಟ್ಟ ನಂತರ ಅದನ್ನು ಬಿಡುಗಡೆಗೊಳಿಸಲು ಈ ದೇಶದಲ್ಲಿ ಏಕೆ ಸಾಧ್ಯವಾಗುತ್ತಿಲ್ಲ? ನಮ್ಮ ದೇಶ ಯಾವ ಹಂತಕ್ಕೆ ಬಂದು ಮುಟ್ಟಿದೆ ?'' ಎಂದು ಜಸ್ಟಿಸ್ ಎಸ್ ಸಿ ಧರ್ಮಾಧಿಕಾರಿ ಹಾಗೂ ಭಾರತಿ ದಂಗ್ರೆಯವರನ್ನೊಳಗೊಂಡ ಪೀಠ ಪ್ರಶ್ನಿಸಿದೆ.
ಈ ಬಹಿರಂಗ ಬೆದರಿಕೆಗಳ ಬಗ್ಗೆ ಟಿವಿಯಲ್ಲಿ ಕೂಡ ಹೇಳಲಾಗುತ್ತಿದೆ ಹಾಗೂ ಕಲಾವಿದರನ್ನು ಕೊಲ್ಲಲು ನಗದು ಬಹುಮಾನ ಘೋಷಿಸುವಲ್ಲಿ ಕೆಲವರು ಹೆಮ್ಮೆ ಪಡುತ್ತಿದ್ದಾರೆ. ಕೆಲವು ಮುಖ್ಯಮಂತ್ರಿಗಳೂ ತಮ್ಮ ರಾಜ್ಯದಲ್ಲಿ ಈ ಚಿತ್ರವನ್ನು ಬಿಡುಗಡೆಗೊಳಿಸಲು ಅನುಮತಿಸಲಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಇದು ಇನ್ನೊಂದು ವಿಧದ ಸೆನ್ಸಾರ್. ಆರ್ಥಿಕವಾಗಿ ಸಬಲರಾಗಿರುವ ಜನರಿಗೇ ಈ ರೀತಿಯ ಸಮಸ್ಯೆ ಎದುರಾದರೆ ಬಡವರ ಗತಿಯೇನು ?,'' ಎಂದು ನ್ಯಾಯಾಧೀಶರು ಪ್ರಶ್ನಿಸಿದ್ದಾರೆ.
ವಿಚಾರವಾದಿಗಳಾದ ನರೇಂದ್ರ ಧಾಬೋಲ್ಕರ್ ಹಾಗೂ ಗೋವಿಂದ ಪನ್ಸಾರೆ ಅವರ ಹತ್ಯೆ ನಡೆದು ಹಲವು ವರ್ಷಗಳಾದರೂ ಕೊಲೆಗಾರರನ್ನು ಪತ್ತೆ ಹಚ್ಚಲು ವಿಫಲವಾಗಿರುವ ಸಿಬಿಐ ಹಾಗೂ ಸಿಐಡಿಯನ್ನು ತರಾಟೆಗೆ ತೆಗೆದುಕೊಳ್ಳುವ ಸಂದರ್ಭ ನ್ಯಾಯಾಲಯ ಪದ್ಮಾವತಿ ವಿವಾದದ ಬಗ್ಗೆ ಮೇಲಿನಂತೆ ಪ್ರತಿಕ್ರಿಯಿಸಿದೆ. "ಈ ಎರಡು ಕೊಲೆಗಳು ಕ್ರಮವಾಗಿ 2013 ಹಾಗೂ 2015ರಲ್ಲಿ ನಡೆದಿದೆ. ಆದರೆ ನೀವು ಇನ್ನೂ ಕೊಲೆಗಾರರನ್ನು ಶೋಧಿಸುತ್ತಿದ್ದೀರಿ,'' ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯದ ಪರಿವೀಕ್ಷಣೆಯಲ್ಲಿ ತನಿಖೆ ನಡೆಸಬೇಕೆಂದು ದಾಭೋಲ್ಕರ್ ಹಾಗೂ ಪನ್ಸಾರೆ ಕುಟುಂಬಗಳು ಮಾಡಿರುವ ಮನವಿಗಳ ಹಿನ್ನೆಲೆಯಲ್ಲಿ ನ್ಯಾಯಾಲಯ ಮೇಲಿನಂತೆ ಪ್ರತಿಕ್ರಿಯಿಸಿದೆ.
ಪ್ರಕರಣಗಳನ್ನು ಬೇಧಿಸಲು ಸರ್ವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಸಿಬಿಐ ಪರ ವಾದಿಸುತ್ತಿರುವ ಹೆಚ್ಚುವರಿ ಸಾಲಿಸಿಟರ್ ಜನರಲ್ ಹಾಗೂ ಸಿಐಡಿ ಪರ ವಕೀಲ ಅಶೋಕ್ ಮುಂಡರ್ಗಿ ಹೇಳಿದರು. ಈ ನಿಟ್ಟಿನಲ್ಲಿ ಗೃಹ ಕಾರ್ಯದರ್ಶಿ, ಡಿಜಿಪಿ ಹಾಗೂ ಸಿಬಿಐ ಜಂಟಿ ನಿರ್ದೇಶಕರ ಜತೆ ಸಭೆ ನಡೆಸಲಾಗುವುದೆಂದು ಇಬ್ಬರೂ ಹೇಳಿದ ನಂತರ ಮುಂದಿನ ವಿಚಾರಣೆಯನ್ನು ಡಿಸೆಂಬರ್ 21ಕ್ಕೆ ನಿಗದಿ ಪಡಿಸಲಾಗಿದೆ.