ಕಾರಣ ತಿಳಿದರೆ ವಿವಾದ ನಿಂತೀತು

Update: 2017-12-14 18:50 GMT

ಈ ದೇಶದಲ್ಲಿ ಜಾತಿಭೇದ ಹಾಗೂ ಧರ್ಮಭೇದದಿಮದ ಹೇಗೆ ತೊಳಲಾಡುತ್ತಿದೆ ಅನ್ನುವುದನ್ನು ಹೊಸದಾಗಿ ಹೇಳಬೇಕಿಲ್ಲ. ಈ ಜಾತಿಭೇದ ಧರ್ಮಭೇದವಿರುವವರೆಗೆ ಈ ದೇಶ ಸ್ವಾತಂತ್ರಕ್ಕೆ ಯೋಗ್ಯವಲ್ಲ ಎಂದು ಬ್ರಿಟಿಷರು ಸ್ವಾತಂತ್ರ ಸೈನಿಕರ ಬಾಯಿ ಮುಚ್ಚಿಸುತ್ತಿದ್ದಾರೆ. ಮೊದಲು ನಿಮ್ಮಲ್ಲಿರುವ ಜಾತಿಭೇದ ಹಾಗೂ ಧರ್ಮಭೇದವನ್ನು ತೊಲಗಿಸಿದ ಮೇಲೆಯೇ ಸ್ವಾತಂತ್ರ ಕೇಳಲು ಬನ್ನಿ ಎಂದು ಹೇಳುತ್ತಾ ಬ್ರಿಟಿಷ್ ಸರಕಾರ ಇಂದಿನವರೆಗೆ ನಿರಾಸೆ ಮಾಡುತ್ತ ಬಂದಿದೆ. ಜಾತಿಭೇದ ದಿಂದಾಗಿ ಸ್ವಾತಂತ್ರ ಕೊಡಬಾರದೆಂದು ನಮಗೆಂದೂ ಅನಿಸಿಯೇ ಇಲ್ಲ. ಸ್ವಾತಂತ್ರ ಕೊಡುವುದೇ ಆಗಿದ್ದರೆ ಜಾತಿಭೇದ ತೊಲಗಿಸಲು ಜಾತಿ ಆಧಾರಿತ ಪ್ರತಿನಿಧಿಗಳನ್ನು ಕೊಟ್ಟು ಯಾವತ್ತೋ ಸ್ವಾತಂತ್ರವನ್ನು ಕೊಡಬಹುದಿತ್ತು.

ತಡವಾಗಿ ಆದರೂ ಜಾತಿಭೇದವೊಂದು ಗೋಡೆ ಎಂದು ತಿಳಿಯುವ ಸರಕಾರ ಸ್ವಾತಂತ್ರ ಕೊಡುವಾಗ ಜಾತಿ ಆಧಾರಿತ ಪ್ರತಿನಿಧಿಗಳನ್ನು ಕೊಡಲು ಮರೆಯಲಾರದು ಅನ್ನುವ ಭಯ ಬ್ರಾಹ್ಮಣರಿಗಿತ್ತಾದರೆ ಒಂದು ದೂರದ ಆಸೆ ದಲಿತರಿಗೆ ಹಾಗೂ ಬ್ರಾಹ್ಮಣೇತರರಿಗಿತ್ತು. ಆದರೆ ಮಿ.ಮೊಂಟೆಗೊ ಅವರು ಒಂದು ಮೋಹಿನಿ ಅಸ್ತ್ರವನ್ನು ಬಿಟ್ಟೊಡನೆ ಅದೇ ಭಾರತದೇಶ ಸ್ವಾತಂತ್ರಕ್ಕೆ ಯೋಗ್ಯವಾಗಿದೆ, ಅಷ್ಟೇ ಅಲ್ಲದೆ ಜಾತಿಪ್ರತಿನಿಧಿಗಳ ಆಯ್ಕೆ ಸ್ವಾತಂತ್ರಕ್ಕೆ ಘಾತುಕವಲ್ಲ ಅನ್ನುವುದನ್ನು ಬ್ರಿಟಿಷ್ ಸರಕಾರ ಒಪ್ಪಿದೆ. ಒಮ್ಮೆಲೆ ಈ ದೃಷ್ಟಿಕೋನ ಬದಲಾಗಲು ಕಾರಣವೇನು? ಎಂದು ದಲಿತರಿಗೂ ಬ್ರಾಹ್ಮಣೇತರರಿಗೂ ಆಶ್ಚರ್ಯವಾಗುತ್ತಿದೆ. ಜಾತಿಗಳು ಇದ್ದಲ್ಲೇ ಇವೆ, ಮೊದಲು ಅವು ಸ್ವಾತಂತ್ರಕ್ಕೆ ಅಡ್ಡಿ ಬರುತ್ತಿದ್ದವಾದರೆ ಈಗ ಅವು ಯಾವ ಕಾರಣಗಳಿಂದ ಅಡ್ಡಿ ಬರುತ್ತಿಲ್ಲ? ಅನ್ನುವುದು ನಮಗೆ ತಿಳಿದಿಲ್ಲ.

ಜಾತಿ ಜಾತಿ ಎಂದು ಬೊಬ್ಬೆ ಹೊಡೆಯುವ ಸರಕಾರವನ್ನು ಜಾತಿ ಆಧಾರಿತ ಪ್ರತಿನಿಧಿತ್ವದ ವಿರೋಧದಿಂದ ಬಿಡಿಸುವಷ್ಟರಲ್ಲಿ ದಲಿತರಿಗೂ ಬ್ರಾಹ್ಮಣೇತರರಿಗೂ ಸಾಕು ಸಾಕಾಯಿತು. ಈಗ ಅಪವಾದವೆಂಬಂತೆ ಬಹಳ ಕಷ್ಟದಿಂದ ಪ್ರತಿನಿಧಿಗಳನ್ನು ಕೊಡಲು ಸರಕಾರ ಒಪ್ಪಿಕೊಂಡಿದೆ. ಹೀಗೆ ಕುರುಡಾಗಿರುವ ಸರಕಾರದ ಕಣ್ಣು ತೆರೆಯಲು ‘‘ಜಾತಿಭೇದವನ್ನು ಕಡೆಗಾಣಿಸಬೇಡಿ ಹಾಗೂ ಜಾತಿ ಆಧಾರಿತ ಪ್ರತಿನಿಧಿಗಳನ್ನು ಕೊಟ್ಟು ಅನರ್ಥ ತಪ್ಪಿಸಿ’’ ಎಂದು ಗಂಟಲು ಹರಿಯುತ್ತಿರುವ ಸ್ವಾತಂತ್ರ ಸೇನಾನಿ ಗಳು ದೇಶದ್ರೋಹಿಗಳು, ಆತ್ಮಘಾತಕಿಗಳು ಎಂದು ಅಗ್ಗವಾಗಿ ಮಾತನಾಡು ತ್ತಿದ್ದಾರೆ.

ಜಾತಿಭೇದದಿಂದಾಗಿ ಈ ದೇಶ ಸ್ವಾತಂತ್ರಕ್ಕೆ ಯೋಗ್ಯವಲ್ಲ ಅನ್ನುವ ತಪ್ಪುತಿಳುವಳಿಕೆಗಳನ್ನು ಅನೇಕ ದಿನಗಳಿಂದ ತನ್ನ ಮನಸ್ಸಿನಲ್ಲಿಟ್ಟು ಕೊಂಡು ಈಗ ಧಗಧಗಿಸುವ ಸಿಟ್ಟನ್ನು ‘ಕೇಸರಿ’ಯವರು ತಮ್ಮ 16-3-20ರ ‘ಜ್ವಾಲಾಮುಖಿ’ ಅನ್ನುವ ಆಗ್ರಲೇಖನದಲ್ಲಿ ಹೊರಗಡೆವಿದ್ದಾರೆ. ಬ್ರಾಹ್ಮಣರು ಹಾಗೂ ಬ್ರಾಹ್ಮಣೇತರರು ಅನ್ನುವ ವಿವಾದದಲ್ಲಿ ‘ಕೇಸರಿ’ಯವರಿಗೆ ಎಷ್ಟು ಮಜ ಬರುತ್ತಿದೆಯೆಂದರೆ ‘ಹಿಂದೂಗಳು ಸ್ವಾತಂತ್ರಕ್ಕೆ ಯೋಗ್ಯತೆ ಪಡೆದಿರುವುದರಿಂದ ಅವರಿಗೆ ಸ್ವಾತಂತ್ರ ಸಿಗಲಿ ಎಂದು ಕಾಂಗ್ರೆಸ್ ಅಥವಾ ಹೋಮ್‌ರೂಲ್ ಸಂಸ್ಥೆ ಆರಂಭಿಸಿದ್ದ ಚಳವಳಿಯಲ್ಲಿ ಇವರು ಆಸಕ್ತಿ ಯಿಂದ ಭಾಗವಹಿಸದೆ, ಭಾಗವಹಿಸಿದರೂ ತಮಗೆ ಸಂಬಂಧವೇ ಇಲ್ಲದಂತೆ ಓಡಾಡಿಕೊಂಡು ಅಗೀಗ ಈ ಚಳವಳಿಯನ್ನು ವಿರೋಧಿಸಿದ ಈ ಜನರು ಹೀಗೆ ಬಂಡುಕೋರತನ ಮಾಡುತ್ತಿದ್ದಾರೆ. ಬ್ರಾಹ್ಮಣರು ಹಾಗೂ ಉಳಿದವರ ದೃಷ್ಟಿಯಲ್ಲಿರುವ ಮಹತ್ವದ ವ್ಯತ್ಯಾಸವನ್ನು ‘ಕೇಸರಿ’ಯವರು ಗುರುತಿಸಿದ್ದರೆ ಈ ವಿವಾದದಲ್ಲಿ ಅವರಿಗಷ್ಟು ಮಜ ಬರುತ್ತಿರಲಿಲ್ಲ.

ಬ್ರಾಹ್ಮಣರಿಗೆ ಸ್ವಾತಂತ್ರ ಹೇಗೆ ಸಿಕ್ಕೀತು? ಅನ್ನುವ ಒಂದೇ ಪ್ರಶ್ನೆ ಅವರಿಗೆ ಮಹತ್ವದ್ದಾಗಿದೆ ಹಾಗಾಗಿ ಮತದಾನದ ಹಕ್ಕು ಯಾರಿಗಿರಬೇಕು? ಅಥವಾ ಪ್ರತಿನಿಧಿಗಳನ್ನು ಹೇಗೆ ಆರಿಸುವುದು? ಅನ್ನುವ ವಿಷಯಗಳ ಬಗ್ಗೆ ಬಾಯಿ ಬಿಟ್ಟು ಮಾತನಾಡದೆ ಸುಮ್ಮನಿದ್ದರು. ಏಕೆಂದರೆ ಏನೇ ಆದರೂ ಬ್ರಾಹ್ಮಣರ ಪ್ರತಿನಿಧಿಗಳು ಆರಿಸಲ್ಪಡುತ್ತಾರೆ ಅನ್ನುವ ಅಹಂಕಾರ. ಸ್ವಾತಂತ್ರವೆಂದರೆ ಬ್ರಾಹ್ಮಣರ ರಾಜ್ಯವಾಗದಿರಲು ಸ್ವಾತಂತ್ರ ಸಿಕ್ಕ ಮೇಲೆ ಸಿಗುವ ಅಧಿಕಾರಿಗಳನ್ನು ಎಲ್ಲ ಜಾತಿಗಳಲ್ಲಿ ಹೇಗೆ ವಿಭಜಿಸಬೇಕು? ಅನ್ನುವುದೊಂದು ದೊಡ್ಡ ಪ್ರಶ್ನೆ. ಹಾಗಾಗಿಯೇ ಅವರುಗಳು ಮತದಾನದ ಹಕ್ಕು ಹಾಗೂ ಪ್ರತಿನಿಧಿಗಳನ್ನಾರಿಸುವ ಪದ್ಧತಿಯ ಬಗ್ಗೆ ದಿನರಾತ್ರಿ ಚರ್ಚಿಸುತ್ತಿದ್ದಾರೆ. ಜಾತಿಭೇದಗಳಿರುವುದರಿಂದ ಸ್ವಾತಂತ್ರ ಕೊಡುವುದಿಲ್ಲ ಎಂದು ಬ್ರಿಟಿಷ್ ಸರಕಾರವೇ ಅಧಿಕಾರದಿಂದ ಹೇಳುತ್ತಿರುವುದರಿಂದ ನಾವಿನ್ನೂ ಸ್ವಾತಂತ್ರ ಕೇಳಿಲ್ಲ. ಹಾಗಾಗಿ ಜಾತಿಭೇದವನ್ನು ತೊಲಗಿಸಿ ಅನ್ನುವ ಬೇಡಿಕೆಯನ್ನು ನಾವು ಎಷ್ಟೋ ದಿನಗಳಿಂದ ಬ್ರಾಹ್ಮಣರಲ್ಲಿಡುತ್ತಿದ್ದೇವೆ. ಆದರೆ ಜಾತಿಭೇದವೂ ತೊಲಗಲಿಲ್ಲ ಹಾಗೂ ಜಾತಿ ಆಧಾರಿತ ಪ್ರತಿನಿಧಿಗಳೂ ಸಿಗದಂತಹ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಮಾತ್ರ, ಬ್ರಾಹ್ಮಣರಂತೆ ಕಣ್ಣು ಮುಚ್ಚಿ ಕುಳಿತುಕೊಳ್ಳುವಂತಹ ಬ್ರಿಟಿಷರಿಗೆ ಜಾತಿಭೇದದ ಸ್ವರೂಪವನ್ನು ತೋರಿಸಿಕೊಡಲು ಹಿಂದೂ ಸಮಾಜವನ್ನು ಬ್ರಾಹ್ಮಣರು, ಬ್ರಾಹ್ಮಣೇತರರು ಹಾಗೂ ದಲಿತರು ಅನ್ನುವ ಮೂರು ವರ್ಗಗಳನ್ನಾಗಿ ವಿಂಗಡಿಸಬೇಕಾಯಿತು.

ಈ ವರ್ಗೀಕರಣವು ಕೇವಲ ಶಾಬ್ದಿಕ ಹಾಗೂ ಕೃತ್ರಿಮವಾಗಿದೆ ಎಂದು ‘ಕೇಸರಿ’ಯವರು ಸಾಬೀತುಪಡಿಸುವ ಸಾಹಸ ಮಾಡುತ್ತಿದ್ದಾರೆ. ಲೋ.ತಿಲಕರು ಕೂಡ ಬ್ರಾಹ್ಮಣರು ಹಾಗೂ ಬ್ರಾಹ್ಮಣೇತರರು ಅನ್ನುವ ವಿಷಯದ ಮೇಲೆ ಪುಣೆಯಲ್ಲೊಂದು ಭಾಷಣ ಕೊಟ್ಟರು. ಅಲ್ಲಿ ಕೂಡ ಬ್ರಾಹ್ಮಣೇತರರಲ್ಲಿ ಐಕ್ಯವಿಲ್ಲ ಅನ್ನುವ ಅಜ್ಞಾನಭರಿತ ವಿವಾದವನ್ನು ಆರಂಭಿಸಿದರು. ಹಿಂದೂ ಸಮಾಜದ ರಚನೆ ಜನ್ಮಸಿದ್ಧವಾಗಿದ್ದು ಗುಣಸಿದ್ಧ ವಾಗಿಲ್ಲ, ಹಾಗೂ ಜನ್ಮ ಸಿದ್ಧ ಯೋಗ್ಯತೆ ಹಾಗೂ ಜನ್ಮಸಿದ್ಧ ಪಾವಿತ್ರ ಅನ್ನುವ ಎರಡು ಮೂಲ ತತ್ವ ಅಡಿಪಾಯದ ಮೇಲೆಯೇ ಸಮಾಜದ ರಚನೆಯಾಗಿದೆ ಅನ್ನುವುದನ್ನು ‘ಕೇಸರಿ’ಯ ಜನರು ಒಪ್ಪಿಕೊಂಡರು. ಅಜನ್ಮಸಿದ್ಧ ಯೋಗ್ಯತೆ ಹಾಗೂ ಜನ್ಮಸಿದ್ಧ ಪಾವಿತ್ರತೆ ಈ ತತ್ವಗಳ ಅನುಸಾರವಾಗಿ ನಾವು ಹಿಂದೂ ಸಮಾಜವನ್ನು ವರ್ಗೀಕರಿಸಿದ್ದರೆ ಈ ಧರ್ಮದ ಮೂರು ವರ್ಗಗಳಾಗುತ್ತವೆ. ಎಲ್ಲ ದೃಷ್ಟಿಯಿಂದ ಶ್ರೇಷ್ಠರು ಹಾಗೂ ಎಲ್ಲಕ್ಕಿಂತಲೂ ಪವಿತ್ರರು ಅನ್ನುವ ವರ್ಗವೇ ಬ್ರಾಹ್ಮಣ ವರ್ಗ. ಯೋಗ್ಯತೆ ಹಾಗೂ ಪಾವಿತ್ರತೆಯಲ್ಲಿ ಬ್ರಾಹ್ಮಣರಿಗಿಂತ ಕಡಿಮೆಯಿರುವವರು ಬ್ರಾಹ್ಮಣೇತರರು. ಅಲ್ಲದೆ ಅಯೋಗ್ಯರು, ಅಪವಿತ್ರರನ್ನು ದಲಿತರು ಅನ್ನುತ್ತಾರೆ.

ಈ ರೀತಿಯಲ್ಲಿ ವರ್ಗೀಕರಿಸಿದರೆ ಬ್ರಾಹ್ಮಣರು (ವೇದೋಕ್ತ ವರ್ಗ ), ಬ್ರಾಹ್ಮಣೇತರರು (ಶಾಸ್ತ್ರೋಕ್ತ ವರ್ಗ) ಹಾಗೂ ದಲಿತರು (ಪುರಾಣೋಕ್ತ ವರ್ಗ) ಅನ್ನುವ ಈ ಭೇದ ಶಬ್ದಗಳದ್ದೋ ಇಲ್ಲ ಭಾವನೆಗಳದ್ದೋ? ಅನ್ನುವುದನ್ನು ನಿರ್ಧರಿಸಲು ತಡವಾಗದು. ಬ್ರಾಹ್ಮಣೇತರರು ಹಾಗೂ ದಲಿತರಲ್ಲಿ ಸಹಭೋಜನ ಹಾಗೂ ಹೆಣ್ಣು ಕೊಡುವ ಅಥವಾ ಪಡೆಯುವ ಪದ್ಧತಿಯಿಲ್ಲ. ಇಂತಹ ವ್ಯವಹಾರ ನಡೆಯದವರಲ್ಲಿ ಐಕ್ಯತೆಯಿರಲು ಹೇಗೆ ಸಾಧ್ಯ? ಹಾಗೂ ಐಕ್ಯತೆ ಇರದವರಲ್ಲಿ ಬೇರೆ ಬೇರೆ ವರ್ಗಗಳನ್ನು ಮಾಡುವುದು ಮೂರ್ಖತನ ಅನ್ನುವುದು ‘ಕೇಸರಿ’ಯವರ ಆರೋಪ. ಕೊಡುವುದು, ತೆಗೆದುಕೊಳ್ಳುವಂತಹ ವ್ಯವಹಾರ ಸೌಹಾರ್ದತೆ ಹಾಗೂ ಐಕ್ಯತೆಯನ್ನು ಬೆಳೆಸುವುದಕ್ಕೆ ಸಹಾಯ ಮಾಡುತ್ತದೆ ಅನ್ನುವುದನ್ನು ಅಲ್ಲಗಳೆಯಲಾಗುವುದಿಲ್ಲ. ಬ್ರಾಹ್ಮಣೇತರರಲ್ಲಿ ಹಾಗೂ ದಲಿತರಲ್ಲಿ ಕೊಡುಕೊಳ್ಳುವಿಕೆಯ ವ್ಯವಹಾರವಿಲ್ಲ ಹಾಗಾಗಿ ಅವರಲ್ಲಿ ಐಕ್ಯತೆಯಿಲ್ಲ ಅನ್ನುವುದು ಇಂದಿನಕ್ಕಿಂತ ಭಿನ್ನ ಪರಿಸ್ಥಿತಿಯಲ್ಲೂ ನಿಜ ಅನಿಸಬಹುದಿತ್ತು. ಆದರೂ ದಕ್ಷಿಣ ಆಫ್ರಿಕಾದಲ್ಲಿ ವಾಸಿಸುತ್ತಿರುವ ಹಿಂದೂಗಳಲ್ಲಿ ಅನೇಕ ಜಾತಿ ಹಾಗೂ ಧರ್ಮಗಳಿದ್ದು ಅವರಲ್ಲಿ ಯಾವುದೇ ಕೊಡುಕೊಳ್ಳುವಿಕೆಯ ವ್ಯವಹಾರ ಇಲ್ಲದಿದ್ದಾಗ್ಯೂ ಅವರಲ್ಲಿರುವ ಐಕ್ಯತೆ ಭಾವನೆ ಎಂತಹ ಅದ್ಭುತ ಅನ್ನುವುದನ್ನು ‘ಕೇಸರಿ’ಯವರೇ ಅನೇಕ ಸಲ ಜನರಿಗೆ ತೋರಿಸಿದ್ದಾರೆ. ಪರಸ್ಪರಲ್ಲಿ ಕೊಡುಕೊಳ್ಳುವಿಕೆ ಇಲ್ಲದಿದ್ದಾಗಲೂ ಕೂಡ ಆಫ್ರಿಕಾದ ಹಿಂದೂಗಳಲ್ಲಿ ಐಕ್ಯತೆ ಹೇಗೆ ಬೆಳೆಯಿತು ಅನ್ನುವ ಸಂಶೋಧನೆಯನ್ನು ‘ಕೇಸರಿ’ಯವರು ಮಾಡಿದ್ದರೆ ಇಂತಹ ತಲೆಹಿಡುಕ ಲೇಖನವನ್ನವರು ಎಂದೂ ಬರೆಯುತ್ತಿರಲಿಲ್ಲ.

ಒಂದು ಸಮಾಜದಲ್ಲಿ ಎಷ್ಟೇ ಭಿನ್ನತೆಯಿದ್ದರೂ ಹೊರಗಿನಿಂದ ಅವರ ಮೇಲೆ ದಾಳಿಯಾದಾಗ ಅವರಲ್ಲಿರುವ ಭಿನ್ನತೆ ಲೋಪವಾಗಿ ಐಕ್ಯತೆ ಮೈಗೂಡುತ್ತದೆ ಅನ್ನುವ ಸಮಾಜ ಶಾಸ್ತ್ರದ ನಿಯಮ ಸರ್ವಸಮ್ಮತವಾಗಿದೆ. ಕೊಡುಕೊಳ್ಳುವಿಕೆಯ ಅಭಾವದಿಂದ ತಲೆಯೆತ್ತಿರುವ ಭಿನ್ನತೆ ಮಾಯವಾಗಿ ಅಲ್ಲಿ ಐಕ್ಯತೆ ತಲೆದೋರಲು ಆಫ್ರಿಕಾದ ಬಿಳಿ ಜನರು ಮಾಡಿದ ಅನ್ಯಾಯವೇ ಕಾರಣ ಎಂದಿಟ್ಟುಕೊಂಡರೆ ಬ್ರಾಹ್ಮಣೇತರರು ಹಾಗೂ ದಲಿತರಲ್ಲಿರುವ ಭಿನ್ನತೆ ಅಯೋಗ್ಯ ಹಾಗೂ ಅಪವಿತ್ರ ಅನ್ನುವ ಬ್ರಾಹ್ಮಣರ ಶಾಸನದೆದುರು ತನ್ನ ಅಸ್ತಿತ್ವವನ್ನು ಉಳಿಸಿಕೊಂಡೀತು ಎಂದು ಯೋಚಿಸುವುದು ಮೂರ್ಖತನವಲ್ಲವೇ? ನಾವು ಇಂತಿಂಥವರು ಅನ್ನುವ ಭಾವನೆ ಬ್ರಾಹ್ಮಣೇತರರು ಹಾಗೂ ದಲಿತರಲ್ಲಿ ಮೊದಲಿನಂತೆ ಅನ್ನುವುದು ‘ಕೇಸರಿ’ಯವರ ದುರ್ದೈವವೇ ಅನ್ನಬಹುದು. ನಾವು ಬ್ರಾಹ್ಮಣರಿಗಿಂತ ಕೆಳಮಟ್ಟದವರು ಹಾಗೂ ಅಪವಿತ್ರರು ಅನ್ನುವ ಭಾವನೆ ಬ್ರಾಹ್ಮಣೇತರರು ಹಾಗೂ ದಲಿತರ ಮನಸ್ಸಿನಲ್ಲಿ ತುಂಬಿಕೊಂಡಿದೆ. ಈ ಭಾವನೆಗಳು ಬೆಳೆಯುತ್ತಿದ್ದಂತೆ ಬ್ರಾಹ್ಮಣ, ಬ್ರಾಹ್ಮಣೇತರ ಹಾಗೂ ದಲಿತರು ಅನ್ನುವುದು ಕೇವಲ ಶಬ್ದಗಳಾಗದೆ ಭಾವನೆಯ ವರ್ಗಗಳಾಗುವ ಸಾಧ್ಯತೆಯಿದೆ. ಯೋಗ್ಯತೆ ಹಾಗೂ ಅಪವಿತ್ರತೆ ಹುಟ್ಟಿನಿಂದಲೇ ಮೈಗೂಡಿಸಿಕೊಂಡು ಬ್ರಾಹ್ಮಣರು ಹೇಗೆ ಕೊಬ್ಬುತ್ತಿದ್ದಾರೆ ಹಾಗೂ ಅಯೋಗ್ಯತೆ ಹಾಗೂ ಅಪವಿತ್ರತೆಯನ್ನು ಮೈಗೂಡಿಸಿಕೊಂಡಿರುವ ಬ್ರಾಹ್ಮಣೇತರರು ಹಾಗೂ ದಲಿತರು ಹೇಗೆ ಸುಲಿಗೆಗೆ ಒಳಪಟ್ಟಿದ್ದಾರೆ ಅನ್ನುವುದು ಅರ್ಥವಾಗುತ್ತ ಹೋದಂತೆ ಈ ಭೇದದಿಂದಾಗಿ ರಾಷ್ಟ್ರಕಾರ್ಯಗಳಲ್ಲಿ ವಿಘ್ನಗಳು ಬರಲಿವೆ ಅನ್ನುವುದು ‘ಕೇಸರಿ’ಯವರಂತೆ ನಮಗೂ ಗೊತ್ತು. ಆದರೆ ವಿವಾದದ ಕಾರಣವನ್ನು ಕಂಡುಹಿಡಿಯದೆ ವಿವಾದವನ್ನೇ ಪರಿಹರಿಸಿ ಎಂದೋ ಅಥವಾ ಅದು ಪರಿಹರಿಸಲ್ಪಡುವುದಿಲ್ಲ ಎಂದೋ ಸಿಟ್ಟಿಗೆ ಬಂದು ಬೈಯುವುದು ಅನುಚಿತ. ಬ್ರಾಹ್ಮಣರ ಜನ್ಮಸಿದ್ಧ ಯೋಗ್ಯತೆ ಹಾಗೂ ಪಾವಿತ್ರತೆಯಿಂದ ಗುಣಸಿದ್ಧ ಬ್ರಾಹ್ಮಣೇತರರು ಹಾಗೂ ದಲಿರು ಎಷ್ಟು ನಷ್ಟ ಅನುಭವಿಸಿದ್ದಾರೆ ಅನ್ನುವುದು ‘ಕೇಸರಿ’ಯವರಲ್ಲದೆ ಇನ್ಯಾರು ಬಲ್ಲರು? (ಆದರೂ ವಿವಾದ ಪರಿಹಾರವಾಗಿ ಸಮಾಜದಲ್ಲಿ ಐಕ್ಯತೆ ಬೆಳೆಯಬೇಕು ಅನ್ನುವುದು ‘ಕೇಸರಿ’ಯವರಿಗೆ ಪ್ರಾಮಾಣಿಕವಾಗಿ ಅನಿಸುತ್ತಿದ್ದರೆ ಬ್ರಾಹ್ಮಣರು ಉಳಿದ ಜಾತಿಯವರನ್ನು ಮುಳುಗಿಸಲಿಲ್ಲ ಅನ್ನುವಂತಹ ಇತಿಹಾಸ ವಿರುದ್ಧವಿರು ವಂತಹ ಸಾಕ್ಷಿಯ ‘ಕೇಸರಿ’ಯವರ ಮನೋದೇವತೆ ‘ಕೇಸರಿ’ಯವರಿಗೆ ಕೊಡುತ್ತಿದ್ದರೂ ಉಳಿದವರು ಇದು ಸುಳ್ಳು ಎಂದು ಗುಲ್ಲೆಬ್ಬಿಸುತ್ತಿದ್ದಾರೆ.

ಅಂದರೆ ಈ ಹುಚ್ಚರ ಮಾತಿನಲ್ಲಿ ಏನೋ ಸತ್ಯಾಂಶವಿದೆ ಅನ್ನುವ ಅನುಮಾನ ಕಾಡಿ ಬ್ರಾಹ್ಮಣರು, ಬ್ರಾಹ್ಮಣೇತರರು ಹಾಗೂ ದಲಿತರು ಅನ್ನುವ ವಿವಾದದಲ್ಲಿರುವ ಕಾರಣವನ್ನು ಕಂಡುಹಿಡಿದರೆ ‘ಕೇಸರಿ’ಗಳು ಜ್ಞಾನಿಗಳಾಗಿ ಮುಂದಿನ ಲೇಖನವು ಈ ವಿವಾದವನ್ನು ಪರಿಹರಿಸುವ ವಿಧಾನದ ಬಗ್ಗೆಯಿರುವುದರಿಂದ ಬ್ರಾಹ್ಮಣೇತರರು ಹಾಗೂ ದಲಿತರಲ್ಲಿ ‘ಕೇಸರಿ’ಯವರ ಮಾನ ಎಷ್ಟು ಕಾಪಾಡಲ್ಪಡುತ್ತದೆಯೋ ಹಾಗೂ ಪತ್ರಿಕೆಯು ಎಷ್ಟು ಮಾರಾಟವಾಗುತ್ತದೆಯೋ ಅಷ್ಟು ಬೇಗ ಈ ವಿವಾದ ಪರಿಹಾರವಾಗಲಿ.) ಎಂದು ಬರೆಯುವುದರಿಂದ ಏನೂ ಆಗದು ಎಂದಂತಿರುವ ‘ಕೇಸರಿ’ಯವರು ಈ ದುಬಾರಿ ದಿನಗಳಲ್ಲಿ ತಮ್ಮ ಮಸಿ, ಕಾಗದ ಹಾಗೂ ಬುದ್ಧಿಯನ್ನು ಖರ್ಚು ಮಾಡಿಯಾರು ಅನ್ನುವ ಆಸೆ ತುಂಬ ದೊಡ್ಡ ಆಸೆಯಾದೀತೇ?

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ನಾಸ್ತಿಕ ಮದ