ಪ್ರಶಸ್ತಿ ಮತ್ತು ಕಾವ್ಯ
ಕಣವಿಯವರ ಕಾವ್ಯಕೃಷಿ ಆರೂವರೆ ದಶಕಗಳಿಗೂ ಹೆಚ್ಚಿನ ಅವಧಿಯದು. ಅವರ ಮೊದಲ ಕವನ ಸಂಕಲನ ‘ಕಾವ್ಯಾಕ್ಷಿ’ ಗೋಕಾಕರ ಮುನ್ನುಡಿಯೊಂದಿಗೆ ಪ್ರಕಟವಾದದ್ದು 1949ರಲ್ಲಿ. ‘ಭಾವ ಜೀವಿ’ ಎರಡನೆಯ ಸಂಕಲನ. ‘ಚಿರಂತನ ದಾಹ’ ಆಯ್ದ ಕವಿತೆಗಳ ಸಂಗ್ರಹ. ಕಣವಿಯವರ ಕಾವ್ಯ ಪ್ರಣಾಳಿಕೆಗೆ ಅನ್ವರ್ಥವಾಗಬಹುದಾದ ‘ಚಿರಂತನ ದಾಹ’. ಕಣವಿ ಚಿರಂತನ ದಾಹದ ಕವಿ. ಅವರ ಸೃಜನಶೀಲತೆಯ ಕೇಂದ್ರ ಬಿಂದು ಬೆಳಕಿನ ಅನ್ವೇಷಣೆಯೇ ಆಗಿದೆ. ಯುಗಯುಗಾಂತ್ಯದವರೆಗೆ ಜಗವ ಬೆಳಗಿಸಬಲ್ಲ/ಎಲೆ ಚಿರಂತನ ಬೆಳಕೆ/ನೀನೆ ಬೇಕು/-ಇದು ಕಣವಿಯವರ ಕಾವ್ಯದ ಪ್ರಬಂಧ ದನಿ. ಬೆಳಕು ಅವರ ಕಾವ್ಯದ ಸ್ಥಾಯಿಭಾವ. ಬೆಳಕು ಅವರ ಕಾವ್ಯದಲ್ಲಿ ವೈವಿಧ್ಯಮಯವಾದ ರೂಪ-ರೂಪಕಗಳಲ್ಲಿ ನಮಗೆ ಮುಖಾಮುಖಿಯಾಗಿ ನಮ್ಮ ಪ್ರಜ್ಞೆ-ಸಂವೇದನೆಗಳಿಗೆ ತಾಕುತ್ತದೆ.
ಕವಿಸೃಷ್ಟಿ ಬ್ರಹ್ಮಸೃಷ್ಟಿಯನ್ನೂ ಮೀರಿ ನಿಲ್ಲುತ್ತದೆ ಎನ್ನುತ್ತಾರೆ ಕಾವ್ಯಮೀಮಾಂಸಕಾರರು. ಜಗತ್ತಿನ ಕಾವ್ಯಭಂಡಾರವನ್ನು, ಅದರೊಳಗಣ ಮುತ್ತುರತ್ನ -ವಜ್ರವೈಢೂರ್ಯಗಳ ಸಂಪದವನ್ನು ಗಮನಿಸಿದಾಗ ಮೀಮಾಂಸಕಾರರ ಮಾತು ಅಚ್ಚರಿಯೆನಿಸದು. ನಮ್ಮ ಕನ್ನಡ ಕಾವ್ಯಲೋಕವನ್ನೇ ನೋಡಿ. ಆದಿ ಕವಿ ಪಂಪನಿಂದ ಹಿಡಿದು ಇಂದಿನವರೆಗೆ ಏನದರ ಭವ್ಯತೆ! ಬೆರಗೊಳಿಸುವ ಎಂಥ ಭವ್ಯಸೃಷ್ಟಿ. ಎಷ್ಟು ವೈವಿಧ್ಯ, ಎಷ್ಟು ಸಂಪದ್ಭರಿತ!
ಪಂಪ ನೆನವ ಬನವಾಸಿಯ ಸೀಮೆಯಲ್ಲಿ, ಮುದ್ದಣನ ದಕ್ಷಿಣ ಕನ್ನಡ ಸೀಮೆಯಲ್ಲಿ ಭುಗಿಲೆದ್ದಿರುವ ಕೋಮು ದ್ವೇಷದ ಹಿಂಸಾಚಾರಗಳ ಸುದ್ದಿಗಳನ್ನೇ ಮೈತುಂಬ ಹಾಸುಹೊದ್ದು ಬಂದಿದ್ದ ‘ಬೆಳಗಿನ’ ವರ್ತಮಾನ ಪತ್ರಿಕೆಯ ಮೂಲೆಯೊಂದರಲ್ಲಿ ಕಣವಿಯವರಿಗೆ ‘ಸಿದ್ದಗಂಗಾಶ್ರೀ’ಪ್ರಶಸ್ತಿಯ ಸುದ್ದಿಯನ್ನೋದಿದ್ದೇ, ಮನುಷ್ಯ-ಮನುಷ್ಯರ ನಡುವೆ ವೈರ-ವೈಮನಸ್ಯಗಳನ್ನು ಬಿತ್ತುವ ವರದಿಗಳನೋದೋದಿ ಖಿನ್ನವಾಗಿದ್ದ ಮನದಲ್ಲಿ ಭರವಸೆಯ ಬೆಳಕು ಮೂಡಿತು. ಅದೂ ಕಣವಿಯವರ ಛಾಪಿನ ‘ಚೆಂಬೆಳಕು-ಹೊಂಬೆಳಕು’.
ಕವಿ ಚೆನ್ನವೀರ ಕಣವಿಯವರದು ತೆಳ್ಳಗೆಬೆಳ್ಳಗಿನ ಸಪೂರವಾದ ಆಕರ್ಷಕ ವ್ಯಕ್ತಿತ್ವ. ತಲೆಯಲ್ಲಿ ಶೃಂಗಪ್ರಾಯವಾದ ಕಸೂತಿ ಹೆಣೆದ ಸುಂದರ ಟೋಪಿ. ಚೆಲುವ ಕವಿ. ಇದು ಅವರ ಕಾವ್ಯದ ಚೆಲುವನ್ನು ಮೈಗೂಡಿಸಿಕೊಂಡ ವ್ಯಕ್ತಿತ್ವವೋ ಅಥವಾ ಅವರ ವ್ಯಕ್ತಿತ್ವದ ಚೆಲುವೇ ಬಿಂಬಿತವಾದ ಅವರ ಕಾವ್ಯದ ಚೆಲುವೋ ಎಂದು ಬೆರಗುಪಡುವಂತಾಗುತ್ತದೆ. ತನ್ನ ಸುತ್ತಲ ಜಗತ್ತಿನಲ್ಲಿ ಮಾನವ ಪ್ರೀತಿ,ಘನತೆಗಳನ್ನು ಬಿತ್ತಿಬೆಳೆಯುವುದು ಕಣವಿಯವರ ಅಂತ:ಕರಣದ ಶೀಲ. ಹಾಗೆಯೇ ಅದು ಅವರ ಕಾವ್ಯದ ಚೆಲುವೂ ಹೌದು.ಪ್ರಕೃತಿ ಸೌಂದರ್ಯ, ಪ್ರೀತಿವಾತ್ಸಲ್ಯ, ಪರಶೀಲನೆ-ಪರಾಮರ್ಶೆಗಳ ನೆಲೆಯಲ್ಲೇ ಬದುಕಿನ ಚೆಲುವನ್ನು ಢಾಳವಾಗಿ ಬಿಂಬಿಸುವ ಕಣವಿಯವರ ಕಾವ್ಯದ ಮೂಲಸೆಲೆ ಮಾನವ ಪ್ರೀತಿಯೇ ಹೊರತು ದ್ವೇಷಕ್ರೌರ್ಯಗಳಲ್ಲ.
ನವೋದಯ ಕಾವ್ಯ ಕೃಷಿ ಸಮೃದ್ಧವಾಗಿ ನಡೆದಿದ್ದ ಕಾಲಘಟ್ಟದಲ್ಲೇ ಕಾವ್ಯರಚನೆ ಪ್ರಾರಂಭಿಸಿದ ಕಣವಿಯವರು ಮುಂದೆ ನವ್ಯದ ‘ಚಂಡೆಮದ್ದಳೆ’ಗಳ ಜಂಝಾವಾತಗಳಿಗೆ ಮನಒಡ್ಡಿಕೊಂಡರೂ ತಮ್ಮ ಕಾವ್ಯದ ಚೆಲುವನ್ನೂ ಮುಕ್ಕಾಗದಂತೆ ಕಾಪಾಡಿಕೊಂಡವರು.ಅವರ ಓರಿಗೆಯ ಕವಿ ಜಿ.ಎಸ್.ಶಿವರುದ್ರಪ್ಪನವರು ಹೇಳಿರುವಂತೆ, ನವೋದಯದಿಂದ ಮಾನವೀಯತೆ, ನಿಸರ್ಗಪ್ರಿಯತೆ, ಮೌಲ್ಯಪ್ರಜ್ಞೆ, ಅನುಭಾವಿಕತೆ ಇತ್ಯಾದಿ ಮೂಲದ್ರವ್ಯವನ್ನು ತಮ್ಮ ವ್ಯಕ್ತಿತ್ವದಲ್ಲಿ ಕರಗಿಸಿಕೊಂಡು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡ ಕವಿ, ಕಣವಿಯುವರು. ವಿಮರ್ಶಕರು ಕಣವಿಯವರನ್ನು ಸಮನ್ವಯ ಕವಿ ಎಂದು ಕರೆದಿದ್ದರೂ ಅವರು ನವೋದಯನವ್ಯಗಳ ಅತಿಗಳನ್ನು ದೂರವಿಟ್ಟವರು. ನವೋದಯದ ಆದರ್ಶವಾದ ಮತ್ತು ನವ್ಯದ ವಾಸ್ತವಿಕ ಪ್ರಜ್ಞೆಗಳಿಂದ ಪ್ರಭಾವಿತರಾದರೂ ಯಾವುದೇ ಸಿದ್ಧಾಂತಗಳಿಗೂ ಒಲಿದವರಲ್ಲ. ಕಣವಿಯವರೇ ಹೇಳಿರುವಂತೆ ಕಾವ್ಯಕ್ಕೆ ಮುಖ್ಯ ಬೇಕಾದ್ದು ಜೀವಂತ ಗತಿ, ಹೊಸ ನೆತ್ತರಿನ ಕೊಡುಗೆ. ಕಣವಿಯವರ ಕಾವ್ಯದುದ್ದಕ್ಕೂ ಈ ಜೀವಂತ ಗತಿಯನ್ನು ನಾವು ಕಾಣಬಹುದಾಗಿದೆ. ಅದೂ, ಪರಿಸರ ಸಂವೇದಿಯಾದ ಚಲನಶೀಲತೆಯನ್ನೇ ಪ್ರಧಾನ ಗುಣವಾಗುಳ್ಳ ಜೀವಂತ ಗತಿ.
ಕಣವಿಯವರ ಕಾವ್ಯಕೃಷಿ ಆರೂವರೆ ದಶಕಗಳಿಗೂ ಹೆಚ್ಚಿನ ಅವಧಿಯದು. ಅವರ ಮೊದಲ ಕವನ ಸಂಕಲನ ‘ಕಾವ್ಯಾಕ್ಷಿ’ ಗೋಕಾಕರ ಮುನ್ನುಡಿಯೊಂದಿಗೆ ಪ್ರಕಟವಾದದ್ದು 1949ರಲ್ಲಿ. ‘ಭಾವ ಜೀವಿ’ ಎರಡನೆಯ ಸಂಕಲನ. ‘ಚಿರಂತನ ದಾಹ’ ಆಯ್ದ ಕವಿತೆಗಳ ಸಂಗ್ರಹ. ಕಣವಿಯವರ ಕಾವ್ಯ ಪ್ರಣಾಳಿಕೆಗೆ ಅನ್ವರ್ಥವಾಗಬಹುದಾದ ‘ಚಿರಂತನ ದಾಹ’. ಕಣವಿ ಚಿರಂತನ ದಾಹದ ಕವಿ. ಅವರ ಸೃಜನಶೀಲತೆಯ ಕೇಂದ್ರ ಬಿಂದು ಬೆಳಕಿನ ಅನ್ವೇಷಣೆಯೇ ಆಗಿದೆ. ಯುಗಯುಗಾಂತ್ಯದವರೆಗೆ ಜಗವ ಬೆಳಗಿಸಬಲ್ಲ/ಎಲೆ ಚಿರಂತನ ಬೆಳಕೆ/ನೀನೆ ಬೇಕು/-ಇದು ಕಣವಿಯವರ ಕಾವ್ಯದ ಪ್ರಬಂಧ ದನಿ. ಬೆಳಕು ಅವರ ಕಾವ್ಯದ ಸ್ಥಾಯಿಭಾವ. ಬೆಳಕು ಅವರ ಕಾವ್ಯದಲ್ಲಿ ವೈವಿಧ್ಯಮಯವಾದ ರೂಪ-ರೂಪಕಗಳಲ್ಲಿ ನಮಗೆ ಮುಖಾಮುಖಿಯಾಗಿ ನಮ್ಮ ಪ್ರಜ್ಞೆ-ಸಂವೇದನೆಗಳಿಗೆ ತಾಕುತ್ತದೆ. ಬೆಳಕು ಅವರ ಬದುಕು ಕಾವ್ಯಗಳ ‘ಧ್ಯಾನ’ ಎಂದರೆ ಅತಿಶಯವಾಗಲಾರದು. ಧಾರವಾಡದ ಕಲ್ಯಾಣ ನಗರದಲ್ಲಿರುವ ಅವರ ಮನೆಯ ಹೆಸರು ‘ಚೆಂಬೆಳಕು’. ಅಭಿಮಾನಿಗಳು ಅವರಿಗೆ ಅರ್ಪಿಸಿರುವ ಅಭಿನಂದನಾ ಗ್ರಂಥ ‘ಚೆಂಬೆಳಕು’. ಅವರ ಸಮಗ್ರ ಕಾವ್ಯ ಸಂಪುಟ,‘ಹೊಂಬೆಳಕು’.
ಕಣವಿಯವರ ಕಾವ್ಯ ಪಯಣದಲ್ಲಿ ಅವರ ಒಂದೊಂದು ಸಂಕಲನವೂ ಕವಿಯ ಬೆಳವಣಿಗೆಯ ಗತಿ ಬಿಂಬವಾಗಿದೆ. ಚೊಚ್ಚಲು, ಮರುಚಲು ಸಂಕಲನಗಳಾದ ‘ಕಾವ್ಯಾಕ್ಷಿ’ ಮತ್ತು ‘ಭಾವಜೀವಿ’ ಕವಿಯ ಆಗಮನವನ್ನು ಸಾರಿದರೆ, ನಂತರ ಬಂದ ‘ಆಕಾಶ ಬುಟ್ಟಿ’(1953), ‘ಮಧುಚಂದ್ರ’(1954), ‘ದೀಪಧಾರಿ’(1956), ‘ಮಣ್ಣಿನ ಮೆರವಣಿಗೆ’(1960), ‘ನೆಲ ಮುಗಿಲು’(1965), ‘ಎರಡು ದಡ’(1969), ‘ನಗರದಲ್ಲಿ ನೆರಳು’(1974), ‘ಜೀವಧ್ವನಿ’(1980), ‘ಕಾರ್ತೀಕದ ಮೋಡ’(1986) ಸಂಕಲನಗಳು ಕನ್ನಡ ಕಾವ್ಯದಲ್ಲಿ ಅವರ ಸ್ಥಾನವನ್ನು ಸುಭದ್ರಗೊಳಿಸಿದವು.
ಕಣವಿಯವರ ಮೊದಲ ಸಂಕಲನ ಕುರಿತು ವರಕವಿ ಬೇಂದ್ರೆಯವರು ಆಡಿರುವ ಈ ಮಾತುಗಳನ್ನು ಗಮನಿಸಿ:
‘‘ಮಾತೃ ವಾತ್ಸಲ್ಯ, ಮಾತೃಭಾಷಾ ವಾತ್ಸಲ್ಯ, ಸೌಂದರ್ಯ ದೃಷ್ಟಿ, ಅಭೀಪ್ಸೆಯ ತೀವ್ರತೆ, ನವಸ್ವಾತಂತ್ರ್ಯದ ಎಚ್ಚರ, ಹೊಸ ಮೌಲ್ಯಗಳ ಸ್ವೀಕಾರ, ದೇಶಾಭಿಮಾನ, ರಾಷ್ಟ್ರಭಕ್ತಿ, ಆದರ್ಶಪ್ರೀತಿ-ಇವೇ ಮೊದಲಾಗಿ ಅವರ ಕಾವ್ಯಸ್ಫೂರ್ತಿಯ ವಿಷಯಗಳಿವೆ. ಅವರ ಕವನದಲ್ಲಿ ಜೀವಂತ ಗತಿ ಇದೆ, ಮಾತಿಗೆ ಅಚ್ಚುಕಟ್ಟು ಇದೆ. ಅಲ್ಪಸಂತುಷ್ಟಿ ಇಲ್ಲ. ಮಹತ್ತಿನ ಕಡೆಯ ಎಳೆತವಿದೆ.
ಈ ಮಾತುಗಳು ಕಣವಿಯವರ ಕಾವ್ಯದ ಮುಖ್ಯ ಕಾಳಜಿಕಳಕಳಿಗಳನ್ನು ಸ್ಪಷ್ಟವಾಗಿ ತೋರುವುದಷ್ಟೇ ಅಲ್ಲದೆ ಅವರ ಮುಂದಿನ ಕಾವ್ಯದ ಅಂತಸ್ಸತ್ವದ ಮುಂಗಾಣ್ಕೆಯ ನುಡಿಗಳೂ ಆಗಿವೆ. ಎಂದೇ ಮೌಲ್ಯಪ್ರಜ್ಞೆ, ಜೀವನ ಪ್ರೀತಿ, ಮಾನವೀಯತೆ, ನಿಸರ್ಗ ಇವೆಲ್ಲದರ ಸಮರ್ಥ ಅಭಿವ್ಯಕ್ತಿಯಿಂದಾಗಿ ಮುಂದಿನ ಸಂಕಲನಗಳಲ್ಲಿ ಕಣವಿಯವರ ಕಾವ್ಯ ವ್ಯಕ್ತಿತ್ವದ ಅಸ್ಮಿತೆ ಸ್ಫುಟವಾಗಿ ಎದ್ದು ಕಾಣುತ್ತದೆ. ಮೇಘೋಪಾಸನೆ, ಮೊದಲ ಮಳೆ, ಕಾರ್ತೀಕದ ಮೋಡ, ಹೊಸ ಹುಟ್ಟು -ಇಂಥ ಹಲವು ಸೊಗಸಾದ ಕವಿತೆಗಳಲ್ಲಿ ಪ್ರಕೃತಿಯ ಹೃದಯಂಗಮ ಚಿತ್ರವಿದೆ. ‘ಮಧುಚಂದ್ರ’ ಮತ್ತು ‘ದೀಪಧಾರಿ’ ಸಂಕಲನಗಳ ಕವಿತೆಗಳಲ್ಲಿ ವಾತ್ಸಲ್ಯದ ಚೆಲುವು ಗಾಢವಾಗಿ ನಮ್ಮನ್ನು ಆಕರ್ಷಿಸುತ್ತವೆ. ‘ಹಕ್ಕಿ ಪುಚ್ಚ’ (1985)ಮಕ್ಕಳ ಕವಿತೆಗಳ ಸಂಕಲನ.
ಕನ್ನಡ ಕಾವ್ಯದಲ್ಲಿ ಸುನೀತಗಳಿಗೆ(ಸಾನೆಟ್) ದೃಢವಾದ ಸ್ವರೂಪವನ್ನು ತಂದುಕೊಟ್ಟವರು ಎಂದು ವಿಮರ್ಶಕರ ಪ್ರಶಂಸೆಗೆ ಪಾತರ್ರಾಗಿರುವ ಕಣವಿಯವರು ಸಾನೆಟ್ ರಚನೆಯಲ್ಲಿ ವಿಶೇಷವಾದ ಸಾಧನೆ ಮಾಡಿದವರು. ಸುನೀತಗಳಲ್ಲಿ ಅವರು ಕಡೆದು ನಿಲ್ಲಿಸಿರುವ ವ್ಯಕ್ತಿಚಿತ್ರಗಳು ಅನನ್ಯವಾದವು. ಕಣವಿಯವರ ಜಾಡಿನಲ್ಲೇ ಸಾನೆಟ್ಟುಗಳಲ್ಲಿ ವ್ಯಕ್ತಿಚಿತ್ರಗಳನ್ನು ರೂಪಿಸಿದ ಅವರ ಮುಂದಿನ ಪೀಳಿಗೆಯ ಇನ್ನೊಬ್ಬ ಕವಿ ಎಚ್.ಎಸ್. ವೆಂಕಟೇಶ ಮೂರ್ತಿಯವರು.
‘‘ವರ್ಣನವೃತ್ತಿ, ಶಿಲ್ಪದ ಕಟ್ಟೆಚ್ಚರ, ಸಹಜ ಮಾತುಗಾರಿಕೆ, ಚೆಲುವಾದ ಕಲ್ಪಕತೆ ಇವುಗಳಿಂದಾಗಿ ಕಣವಿಯವರ ಸಾನೆಟ್ಟುಗಳು ವಿಶೇಷವಾಗಿ ನಮ್ಮ ಗಮನ ಸೆಳೆಯುತ್ತವೆ. ಬೇಂದ್ರೆಯವರ ಸಾನೆಟ್‌ಗಳ ಪ್ರಖರತೆ, ಕುವೆಂಪು ಅವರ ರಭಸ ಇವುಗಳನ್ನು ನಾವು ಕಣವಿಯವರಲ್ಲಿ ಕಾಣುವುದಿಲ್ಲ. ಸಾನೆಟ್ಟುಗಳಲ್ಲಿ ಅವರ ಕಸುಬುಗಾರಿಕೆ ಅಚ್ಚರಿಹುಟ್ಟಿಸುವಷ್ಟು ಪರಿಣಿತವಾಗಿದೆ’’ ಎನ್ನುತ್ತಾರೆ ಎಚ್.ಎಸ್.ವೆಂಕಟೇಶ ಮೂರ್ತಿಯವರು.
ಮನೋಹರವಾದ ಸುನೀತಗಳಂತೆಯೇ ಕಣವಿಯವರು ನಾದಮಯವಾದ ಹಲವಾರು ಗೀತೆಗಳನ್ನೂ ರಚಿಸಿದ್ದಾರೆ. ವಿಶ್ವ ಭಾರತಿಗೆ ಕನ್ನಡದಾರತಿ, ಹೂವುಹೊರಳುವವು-ಮೊದಲಾಗಿ ಅವರ ಹಲವು ಗೀತೆಗಳು ಹಾಡುಗಳಾಗಿ ಜನಪ್ರಿಯವಾಗಿವೆ. ‘ವಿಶ್ವ ವಿನೂತನ ವಿದ್ಯಾಚೇತನ ಸರ್ವಹೃದಯ ಸಂಸ್ಕಾರಿ ಎಂದು ಆರಂಭವಾಗುವ ‘ವಿಶ್ವಭಾರತಿಗೆ ಕನ್ನಡದಾರತಿ’ ಕೇಳಿ ಕುವೆಂಪು, ‘‘ಕಣವಿ ಎಷ್ಟು ಒಳ್ಳೆಯ ಕವಿತೆ ಬರದಿದ್ದೀರಿ! ಇವತ್ತು ನಿಮ್ಮ ಕವಿತೆ ಕೇಳಿ ನನಗೆ ರೋಮಾಂಚನವಾಗಿ ಹೋಯಿತು’’ ಎಂದು ಉದ್ಗರಿಸಿದರಂತೆ. ‘‘ಕಣವಿಯವರು ತರುಣರಿಗೆ ಆದರ್ಶ’’ಎಂದೂ ಕವೆಂಪು ಅವರು ಹಿಂದೊಮ್ಮ ಹೇಳಿರುವುದುಂಟು.
ಚೆನ್ನವೀರ ಕಣವಿ ನವೋದಯದ ಕವಿಯೇ? ನವ್ಯ ಕವಿಯೇ? ಎಂದು ವಿಮರ್ಶೆಯಲ್ಲಿ ಸಾಕಷ್ಟು ಚರ್ಚೆಗಳಾಗಿವೆ. ಅವರಿಗೆ ‘ಸಮನ್ವಯ ಕವಿ’ ಎಂಬ ಹಣೆಪಟ್ಟಿಯನ್ನೂ ಲಗತ್ತಿಸಲಾಗಿದೆ. ಸಮಾಧಾನದ ಅಂಶವೆಂದರೆ ಅವರನ್ನು ಕವಿಯೆಂದು ಗ್ರಹಿಸಿದ ಮೂಲಾಧಾರದ ಮೇಲೆಯೇ ಈ ಎಲ್ಲ ಚರ್ಚೆಗಳು ನಡೆದಿರುವುದು. ವಿಮರ್ಶಕರು ಮತ್ತು ಅವರ ಪ್ರಬೇಧಗಳು ಏನೇ ಇರಲಿ, ಕನ್ನಡಿಗರು ಕಣವಿಯವರನ್ನು ಕವಿ ಎಂದು ಮಾನ್ಯಮಾಡಿದ್ದಾರೆ. (‘‘ನಾನು ಯಾವ ಪಂಥದ ಕವಿಯೋ ನನಗೆ ತಿಳಿದಿಲ್ಲ ಆ ಕುರಿತು ಚರ್ಚೆ ಮಾಡುವವರು ಮಾಡಿಕೊಳ್ಳಲಿ. ಒಟ್ಟಿನಲ್ಲಿ ನಾನು ಕವಿ ಎಂಬುದಷ್ಟೇ ಮುಖ್ಯವಾದದ್ದ್ದು. ಅಷ್ಟು ಸಾಕು.’’).
ಅಂತೆಯೇ ಅವರನ್ನು ಹಲವಾರು ಪ್ರಶಸ್ತಿ ಪುರಸ್ಕಾರಗಳಿಂದ ಗೌರವಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ-ಹಲವಾರು ಪ್ರಶಸ್ತಿಗಳು ಸಾಲುಗಟ್ಟಿ ಬಂದು ಅವರನ್ನು ಅಲಂಕರಿಸಿವೆ. ಈಗ ‘ಸಿದ್ದಗಂಗಾ ಶ್ರೀ’ ಪ್ರಶಸ್ತಿ. ಈ ಪ್ರಶಸ್ತಿಗಳು ಸಂತಸ-ಹೆಮ್ಮೆ ತರುವ ಸಂಗತಿಗಳು. ನಮ್ಮ ಪ್ರೀತಿಯ ಕವಿ ಸಾಹಿತಿಗಳು, ಕಲಾವಿದರು ಪ್ರಶಸ್ತಿಗೆ ಭಾಜನರಾದಾಗ ಅವರನ್ನು ಹತ್ತಿರದಿಂದ ಕಂಡವರು, ದೂರದಿಂದ ಕೃತಿಗಳಮುಖೇನ ಕಂಡವರು ಎಲ್ಲರಿಗೂ ಸಂತೋಷವಾಗುತ್ತದೆ. ಜೊತೆಗೆ ಇಂಥ ಪ್ರಶಸ್ತಿಪುರಸ್ಕಾರಗಳು ನಮ್ಮ ಪ್ರಸಕ್ತ ಜೀವನದ ಸಂದರ್ಭದಲ್ಲೂ ಎಷ್ಟು ಮುಖ್ಯವಾಗುತ್ತವೆ ಎನ್ನುವ ನಿಟ್ಟಿನಲ್ಲಿ ಚಂತನಮಂಥನಕ್ಕೂ ಒಂದು ನೆಪವಾಗಿ ಒದಗಿ ಬರುತ್ತವೆ.
ಸಾಂಸ್ಕೃತಿಕ ಪರಂಪರೆಯನ್ನು ಪೋಷಿಸುವುದು, ಬೆಳೆಸುವುದು ಎಂದರೆ, ಪ್ರಸಕ್ತ ಪರಿಸ್ಥಿತಿಯಲ್ಲಿ ಸಾಂಸ್ಕೃತಿ ಪರಂಪರೆ ನಾಗರಿಕ ಜೀವನ ಮೌಲ್ಯಗಳನ್ನು ಪಾಲಿಸುವುದರಲ್ಲಿ ಎಷ್ಟರಮಟ್ಟಿಗೆ ವರ್ತಮಾನದ ತಲೆಮಾರಿಗೆ ಪ್ರೇರಕಶಕ್ತಿಯಾಗ ಬಲ್ಲವು, ನೈತಿಕಬಲವಾಗಿ ನಿಲ್ಲಬಲ್ಲವು ಎಂಬುದರ ಪರೀಕ್ಷೆಯೇ ಆಗಿದೆ. ಹೀಗೆ ಪರೀಕ್ಷಿಸುವುದರ ಮೂಲಕ ಸಾಂಸ್ಕೃತಿಕ ಪರಂಪರೆಯನ್ನು ಇನ್ನೂ ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯುವುದು ಪರಂಪರೆಯನ್ನು ಉಳಿಸಿಬೆಳೆಸುವ ಪ್ರಕ್ರಿಯೆಯ ಮುಖ್ಯ ತಂತುವಾಗಿದೆ.
ಸಂಸ್ಕೃತಿಯ ಮುಖ್ಯ ಅಂಗವಾದ ಕಾವ್ಯಸಾಹಿತ್ಯಕಲೆಗಳೂ ಹೇಗೆ ನಾಗರಿಕ ಜೀವನ ಮೌಲ್ಯಗಳ ಪಾಲನೆಪೋಷಣೆಯಲ್ಲಿ ಇವತ್ತಿನ ಜನತೆಗೆ ಪ್ರೇರಣೆಗಳನ್ನು ಒದಗಿಸಬಲ್ಲದು, ಹೇಗೆ ಒಳ್ಳೆಯ ಬದುಕಿಗೆ ಮೂಲಧಾತುವಾಗಬಲ್ಲದು, ಹೇಗೆ ಆಯಾ ಕಾಲಘಟ್ಟದ ಮೌಲ್ಯಮಾಪನಗಳ ಪರೀಕ್ಷೆಯನ್ನು ಎದುರಿಸಿ ಜೀವನಾವಶ್ಯಕ ಮೌಲ್ಯವಾಗಬಲ್ಲದು ಎಂಬುದರಿಂದಾಗಿ ಇವತ್ತಿಗೂ ಮುಖ್ಯವಾಗುತ್ತವೆ, ಪ್ರಸ್ತುತವಾಗುತ್ತವೆ. ಈ ನಿಟ್ಟಿನಿಂದ ಕಣವಿಯವರ ಕಾವ್ಯವನ್ನು ನೋಡಿದಾಗ, ಮನುಷ್ಯ ಸಂಬಂಧಗಳು ನಲುಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಅದು ಮುಖ್ಯವಾಗುವುದು, ಪ್ರಸ್ತುತವಾಗುವುದು, ನೈತಿಕ ಸ್ಥೈರ್ಯ ತುಂಬುವ ಶಕ್ತಿಯಾಗುವುದು ತನ್ನೊಳಗಿನ ಮಾನವೀಯ ಮೌಲ್ಯಗಳಿಂದಾಗಿ.
ಮನುಕುಲವು ಹೂವಾಗಿ
ಜಗವು ಜೇಂಗೊಡವಾಗಿ
ಮನವು ತನಿವಣ್ಣಾಗಲೆಂಬ ಹುಚ್ಚು
* * *
ಕೂಡಿ ಬಾಳುತ ಕೂಡಿ ಬೆಳೆಯೋಣ ಕಾಂತಿಯಲಿ
ಸೂರ್ಯಪಾನದ ಹಾಗೆ ವೀರ್ಯ ತಳೆದು
(ಹೊಸಬಾಳಿನ ಯೋಜನೆ)
* * *
ಜಗವ ತುಂಬಿದ ಬೇಳಕು ನಮಗೇಕೊ ಸಾಲದಿದೆ!
ಎನಿತು ಮಾನವನೆದೆಯ ಆಳ ಅಗಲ!
* * *
ಎಷ್ಟು ಹಣತೆಗಳಿಂದ ಕತ್ತಲೆಯು ಕರಗುವುದು?
ಎಷ್ಟು ಕವಿತೆಗೆ ಜಗದ ಕಣ್ಣು ತೆರೆಯುವುದು?
ಒಂದಿದ್ದರೂ ಸಾಕು,ಮನೆ ಬೆಳಕಾಗುವುದು ಒಂದು ಕವಿತೆಗೆ ಕೂಡ ಮನ ಕರಗಬಹುದು.
ಕಣವಿಯವರ ಕಾವ್ಯ ಧೋರಣೆಯನ್ನು ಸ್ಪಷ್ಟವಾಗಿ ನಿರೂಪಿಸುವ ಇಂಥ ಕಾವ್ಯ ರಾಷ್ಟ್ರದಲ್ಲಿನ ಇಂದಿನ ಪರಿಸ್ಥಿತಿಯಲ್ಲಿ ಅಧ್ಯಯನಯೋಗ್ಯವೂ ಅನುಕರಣಯೋಗ್ಯವೂ ಆಗಿದೆ.