ಗುಜರಾತ್ ಗೆಲುವಿನೊಂದಿಗೆ ಬಿಜೆಪಿ ನಿರ್ಮಿಸಿದ ಹೊಸ ದಾಖಲೆಯೇನು ಗೊತ್ತೇ?
ಹೊಸದಿಲ್ಲಿ, ಡಿ.18: ಗುಜರಾತ್‌ನಲ್ಲಿ ಸತತ ಆರನೇ ಬಾರಿಗೆ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿ, ಹಿಮಾಚಲಪ್ರದೇಶವನ್ನು ಕಾಂಗ್ರೆಸ್‌ನಿಂದ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ದೇಶದ 29 ರಾಜ್ಯಗಳ ಪೈಕಿ 19ರಲ್ಲಿ ಆಡಳಿತದ ನಿಯಂತ್ರಣ ಪಡೆಯುವ ಮೂಲಕ ಬಿಜೆಪಿ ಹೊಸ ದಾಖಲೆ ಬರೆದಿದೆ.
1993ರಲ್ಲಿ ಕಾಂಗ್ರೆಸ್ 18 ರಾಜ್ಯಗಳ ನಿಯಂತ್ರಣ ಹೊಂದಿತ್ತು. ಕೇಂದ್ರದಲ್ಲಿ ಅತ್ಯಂತ ಪ್ರಭಲವಾಗಿದ್ದ ಕಾಂಗ್ರೆಸ್ ಪಕ್ಷ 15 ರಾಜ್ಯಗಳಲ್ಲಿ ತನ್ನದೇ ಸರಕಾರ ಹೊಂದಿದ್ದರೆ ಒಂದು ರಾಜ್ಯದಲ್ಲಿ ಕಾಂಗ್ರೆಸ್ ಒಳಗೊಂಡ ಸಮ್ಮಿಶ್ರ ಸರಕಾರ, ಎರಡು ರಾಜ್ಯಗಳಲ್ಲಿ ಸಿಪಿಐ(ಎಂ) ಆಡಳಿತವಿತ್ತು(ಸಿಪಿಎಂ ಆಗ ಕೇಂದ್ರ ಸರಕಾರಕ್ಕೆ ಬಾಹ್ಯ ಬೆಂಬಲ ನೀಡಿತ್ತು).
2014ರ ಮಹಾಚುನಾವಣೆಗೂ ಮುನ್ನ ಬಿಜೆಪಿಯು ಗುಜರಾತ್, ರಾಜಸ್ತಾನ್, ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ನಾಗಾಲ್ಯಾಂಡ್‌ನಲ್ಲಿ ಅಧಿಕಾರದಲ್ಲಿತ್ತು. 2014ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಕ್ರಮೇಣ ತನ್ನ ಬಲ ಹೆಚ್ಚಿಸಿಕೊಳ್ಳುತ್ತಾ ಸಾಗುತ್ತಿದೆ. ಲೋಕಸಭೆ ಚುನಾವಣೆಯ ಜೊತೆಗೇ ನಡೆದ ಸಿಕ್ಕಿಂ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಮಿತ್ರಪಕ್ಷ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್(ಎಸ್‌ಡಿಎಫ್) ಗೆದ್ದು ಅಧಿಕಾರದ ಗದ್ದುಗೆಗೆ ಏರಿದ್ದರೆ, ವಿಭಜಿತ ಆಂಧ್ರಪ್ರದೇಶಕ್ಕೆ ನಡೆದ ಪ್ರಪ್ರಥಮ ಚುನಾವಣೆಯಲ್ಲಿ ಬಿಜೆಪಿಯ ಮತ್ತೊಂದು ಮಿತ್ರಪಕ್ಷವಾಗಿರುವ ತೆಲುಗುದೇಶಂ ಪಕ್ಷ ಸರಕಾರ ರಚಿಸಿದೆ.
ಮಹಾರಾಷ್ಟ್ರದ 288 ಸ್ಥಾನಗಳಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 122 ಸ್ಥಾನ ಗಳಿಸಿದ ಬಿಜೆಪಿ ಎನ್‌ಡಿಎ ಮಿತ್ರಪಕ್ಷವಾದ ಶಿವಸೇನೆಯೊಂದಿಗೆ ಮೈತ್ರಿ ಮಾಡಿಕೊಂಡು ಅಧಿಕಾರ ಪಡೆಯಲು ಶಕ್ತವಾಯಿತು. ಬಳಿಕ ಹರ್ಯಾಣದಲ್ಲೂ ಬಿಜೆಪಿ ಗೆಲುವಿನ ನಗೆ ಬೀರಿತು. ನಂತರ ಜಾರ್ಖಂಡ್‌ನಲ್ಲಿ ಮಿತ್ರಪಕ್ಷಗಳ ಬೆಂಬಲದಿಂದ ಬಿಜೆಪಿ ಅಧಿಕಾರ ಪಡೆಯಿತು.
2014ರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿದ ಬಿಜೆಪಿ, ಪೀಪಲ್ಸ್ ಡೆಮೊಕ್ರಟಿಕ್ ಪಕ್ಷ(ಪಿಡಿಪಿ) ಜೊತೆ ಮೈತ್ರಿ ಮಾಡಿಕೊಂಡು ಸರಕಾರ ರಚಿಸಲು ಶಕ್ತವಾಯಿತು.
ಆದರೆ 2015ರಲ್ಲಿ ಬಿಜೆಪಿಗೆ ಎರಡು ಕಡೆ ಭಾರೀ ಹಿನ್ನಡೆಯಾಯಿತು. ದಿಲ್ಲಿ ಮತ್ತು ಬಿಹಾರ್‌ನಲ್ಲಿ ಮುಖಭಂಗ ಅನುಭವಿಸಿದ ಕಮಲ ಪಕ್ಷ, ಬಿಹಾರದಲ್ಲಿ ಅಚ್ಚರಿಯ ರಾಜಕೀಯ ಬೆಳವಣಿಗೆಯ ಬಳಿಕ ನಿತೀಶ್ ಕುಮಾರ್ ನೇತೃತ್ವದ ಸಂಯುಕ್ತ ಜನತಾದಳ (ಜೆಡಿಎಸ್)ದೊಂದಿಗೆ ಮೈತ್ರಿ ಮಾಡಿಕೊಂಡು ಬಿಹಾರದ ಆಡಳಿತದಲ್ಲೂ ನಿಯಂತ್ರಣ ಸಾಧಿಸಲು ಶಕ್ತವಾಯಿತು. ಬಿಜೆಪಿ ಬೆಂಬಲದೊಂದಿಗೆ ಬಿಹಾರದಲ್ಲಿ ಸರಕಾರ ರಚಿಸಿದ ನಿತೀಶ್ ಕುಮಾರ್, ವಿಶ್ವಾಸಮತ ಗೆಲ್ಲಲು ಶಕ್ತರಾದರು.
2016ರಲ್ಲಿ ಅಸ್ಸಾಂ ವಿಧಾನಸಭೆಯ 126 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 60ರಲ್ಲಿ ಗೆಲುವು ಸಾಧಿಸಿದ ಬಿಜೆಪಿ, 15 ವರ್ಷದ ಕಾಂಗ್ರೆಸ್ ಆಳ್ವಿಕೆಯನ್ನು ಸಮಾಪ್ತಿಗೊಳಿಸಿತು. 2016ರ ಸೆಪ್ಟೆಂಬರ್‌ನಲ್ಲಿ ಅರುಣಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿದ್ದ 47 ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದ ಬಳಿಕ ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಸಾಬೀತುಪಡಿಸಲು ಯಶಸ್ವಿಯಾಯಿತು. ಆದರೆ ಪಶ್ಚಿಮಬಂಗಾಲ,ಕೇರಳ ಮತ್ತು ತಮಿಳುನಾಡು- ಈ ಮೂರು ಪ್ರಮುಖ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಭಾರೀ ಮುಖಭಂಗಕ್ಕೆ ಒಳಗಾಯಿತು. 2017ರಲ್ಲಿ ಬಿಜೆಪಿ ಸೋಲು ಮತ್ತು ಗೆಲುವಿನ ಸಮ್ಮಿಶ್ರ ಅನುಭವವಾಯಿತು. ಉತ್ತರಪ್ರದೇಶದಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರ ಪಡೆದರೆ ಉತ್ತರಾಖಂಡದಲ್ಲಿ ಕೂಡಾ ಗೆಲುವು ಪಡೆಯಿತು. ಗೋವಾ ಮತ್ತು ಮಣಿಪುರದಲ್ಲಿ ಕಾಂಗ್ರೆಸ್‌ಗಿಂತ ಕಡಿಮೆ ಸ್ಥಾನ ಗಳಿಸಿದರೂ ಪಕ್ಷೇತರರು ಹಾಗೂ ಪ್ರಾದೇಶಿಕ ಪಕ್ಷಗಳ ಬೆಂಬಲದೊಂದಿಗೆ ಸರಕಾರ ರಚಿಸುವಲ್ಲಿ ಸಫಲವಾಯಿತು.
2017ರಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡರೆ, ಇದೀಗ ಹಿಮಾಚಲ ಪ್ರದೇಶ ರಾಜ್ಯದಲ್ಲಿ ಅಧಿಕಾರ ಪಡೆಯುವಲ್ಲಿ ಶಕ್ತವಾಗಿದೆ. ಅಲ್ಲದೆ ಗುಜರಾತ್‌ನಲ್ಲಿ ಅಧಿಕಾರ ಉಳಿಸಿಕೊಂಡಿದೆ.