ಬೆಂಕಿ ಉತ್ಪಾದಿಸಲು ನಿಂಬೆ ಗಿಡ ನೆಡುವ ಯೋಜನೆ!
ಒಂದು ಕೈಯಲ್ಲಿ ಬೆಂಕಿ ಕಡ್ಡಿ ಮತ್ತು ಮಗದೊಂದು ಕೈಯಲ್ಲಿ ಸೀಮೆ ಎಣ್ಣೆ ಡಬ್ಬ ಹಿಡಿದು ಉತ್ತರ ಕನ್ನಡಾದ್ಯಂತ ಕೂಗುಮಾರಿಯಂತೆ ‘‘ಬೆಂಕಿ ಹಚ್ಚುತ್ತೇನೆ ಬೆಂಕಿ ಹಚ್ಚುತ್ತೇನೆ...’’ ಎಂದು ಶೋಕಾ ಕ್ರೂರಂದ್ಲಾಜೆ ಓಡಾಡುತ್ತಿರುವುದು ಕಂಡು ಗಾಬರಿಯಾದ ಪತ್ರಕರ್ತ ಎಂಜಲುಕಾಸಿ, ಮಹಾದಾಯಿಯ ಒಂದು ಚೆಂಬು ನೀರಿನ ಜೊತೆಗೆ ಅವರ ಮುಂದೆ ನಿಂತ. ಚೆಂಬನ್ನು ನೋಡಿ ‘‘ಎಂತದಾ ಇದು ...ಯಾರಿಗೆ ಪಿಂಡ ಬಿಡಲು ಬಂದದ್ದು ನೀವು ಪತ್ರಕರ್ತರು?’’ ಕ್ರೂರಂದ್ಲಾಜೆ ಸಿಟ್ಟಿನಿಂದ ಕೇಳಿದರು.
‘‘ಮೇಡಂ...ಬೆಂಕಿ ಆರಿಸುವುದಕ್ಕೆ ಬೇಕಾದರೆ ಇರಲಿ...ಅಂತ. ಯಡಿಯೂರಪ್ಪನವರು ಈಗಾಗಲೇ ಮಹಾದಾಯಿ ನೀರನ್ನು ಕರ್ನಾಟಕಕ್ಕೆ ತಂದೇ ತರುತ್ತಾರೆ ಎಂದು ಬೇರೆ ಹೇಳಿದ್ದಾರೆ. ಆದರೆ ನೀವೆಲ್ಲ ಸೇರಿ ಹಚ್ಚುವ ಬೆಂಕಿಗೆ ಹೋಲಿಸಿದರೆ, ಹಿಂದೂ ಮಹಾಸಾಗರದ ನೀರು ಸಾಕಾಗಲಿಕ್ಕಿಲ್ಲ....’’ ಕಾಸಿ ತಡವರಿಸುತ್ತಾ ಹೇಳಿದ. ‘‘ಕರ್ನಾಟಕಕ್ಕೆ ಬೇಕಾಗಿರುವುದು ನೀರಲ್ಲ, ಬೆಂಕಿ. ನಮ್ಮ ರೈತರು ಬೆಂಕಿಗಾಗಿ ಹಳ್ಳಿ ಹಳ್ಳಿಗಳಲ್ಲಿ ಅಂಗಲಾಚುತ್ತಿದ್ದಾರೆ. ರಾಜ್ಯದಲ್ಲಿ ಬೆಂಕಿಯ ಕೊರತೆಯಿಂದ ಆತ್ಮಹತ್ಯೆಗಳು ಹೆಚ್ಚುತ್ತಿವೆ...ಆದುದರಿಂದಲೇ ನಮ್ಮ ಪಕ್ಷ ಬೆಂಕಿ ಉತ್ಪಾದನೆಗೆ ಆದ್ಯತೆಯನ್ನು ಕೊಡಲಿದೆ...’’ ಎಂದು ಶೋಕಾ ಕ್ರೂರಂದ್ಲಾಜೆ ಶೋಖಿಸಿದರು.
‘‘ಆದರೆ ಕರ್ನಾಟಕಕ್ಕೆ ನೀರಿನ ಅಗತ್ಯವಿದೆ ಎಂದು ಸರಕಾರ ಹೇಳುತ್ತಿದೆ. ಕಾವೇರಿ ನೀರಿಗಾಗಿ ನಾವು ಹಲವು ವರ್ಷಗಳಿಂದ ಹೋರಾಡುತ್ತಿದ್ದೇವೆ...’’ ಕಾಸಿ ಅರ್ಥವಾಗದೆ ಕೇಳಿದ.
‘‘ಬೆಂಕಿಯ ಕೊರತೆಯಿಂದಾಗಿಯೇ ನೀರಿನ ಕೊರತೆ ಬಿದ್ದಿದೆ. ನಮ್ಮಲ್ಲಿ ಸಾಕಷ್ಟ್ಟು. ಬೆಂಕಿ ಉತ್ಪತ್ತಿಯಾಗುತ್ತಿದ್ದರೆ ತಮಿಳರು ಹೆದರಿ ನೀರು ಕೊಡುತ್ತಿದ್ದರು. ಆದುದರಿಂದ ನಾವು ಮೊದಲು ಬೆಂಕಿ ಹಚ್ಚುವುದನ್ನು ಕಲಿಯಬೇಕು. ಕರ್ನಾಟಕದಲ್ಲಿ ಬೆಂಕಿ ಹಚ್ಚುವುದಕ್ಕೆ ಶುರು ಮಾಡಿದರೆ ಈ ಬೆಂಕಿಯ ಶಾಖಕ್ಕೆ ಉಳಿದ ರಾಜ್ಯಗಳೆಲ್ಲ ಹೆದರಿ ತನ್ನಷ್ಟಕ್ಕೆ ನದಿಯನ್ನು ಕರ್ನಾಟಕದ ಕಡೆಗೆ ಹರಿಸುತ್ತವೆ. ಯಡಿಯೂರಪ್ಪರವರು ವ್ಯರ್ಥವಾಗಿ ಮಹಾದಾಯಿ ಯೋಜನೆಗಾಗಿ ಗೋವಾದ ಮುಖ್ಯಮಂತ್ರಿಯ ಕಾಲು ಹಿಡಿಯಬೇಕಾಗಿಲ್ಲ. ಈ ಕಾರಣದಿಂದಲೇ ಕರ್ನಾಟಕದ ಅಭಿವೃದ್ಧಿಗಾಗಿ ಬಿಜೆಪಿಯ ನಾಯಕರು ಹೆಚ್ಚು ಹೆಚ್ಚು ಬೆಂಕಿಯನ್ನು ಉತ್ಪಾದಿಸಬೇಕು ಎಂದು ಕೇಂದ್ರ ವರಿಷ್ಠರಾಗಿರುವ ಅಮಿತ್ ಶಾ ಆದೇಶ ನೀಡಿ ಹೋಗಿದ್ದಾರೆ...’’
‘‘ಮೇಡಂ...ಬೆಂಕಿ ಉತ್ಪಾದಿಸುವುದಕ್ಕೆ ಬೇಕಾಗಿರುವ ಇದ್ದಿಲುಗಳಿಗೆ ಅಪಾರ ವೆಚ್ಚವಾಗುವುದಿಲ್ಲವೇ?’’ ಕಾಸಿ ಮುಗ್ಧನಂತೆ ಕೇಳಿದ. ‘‘ನೋಡಿ...ಮೋದಿಯವರು ಬಾಯಿ ತೆರೆದರೆ ಸಾಕು, ಅದರಲ್ಲಿ ಪಾಸಿಟಿವ್ ಎನರ್ಜಿ ಉತ್ಪಾದನೆಯಾಗುತ್ತದೆ. ತಮ್ಮ ತಮ್ಮ ದೇಶಗಳಲ್ಲಿ ಪಾಸಿಟಿವ್ ಎನರ್ಜಿ ಉತ್ಪಾದನೆಯಾಗಲಿ ಎಂದು ಮೋದಿಯವರನ್ನು ವಿದೇಶಿಯರು ಆಗಾಗ ಕರೆಸಿ ಭಾಷಣ ಮಾಡಿಸುತ್ತಾರೆ. ಹಾಗೆಯೇ ನಾನು ನನ್ನ ಬಾಯಿಯ ಮೂಲಕವೇ ಸಾಕಷ್ಟು ಬೆಂಕಿಯನ್ನು ಉತ್ಪಾದಿಸುವ ಶಕ್ತಿಯನ್ನು ಹೊಂದಿದ್ದೇನೆ....ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ನನ್ನ ಬಾಯಿಯ ಮೂಲಕವೇ ಉತ್ಪಾದಿಸಿದ ಬೆಂಕಿಯಿಂದ ನನ್ನ ಪಕ್ಷದ ಜನರು ಗಂಜಿ ಬೇಯಿಸಿ ಬದುಕುತ್ತಿದ್ದಾರೆ. ಕಲ್ಲಡ್ಕದ ಭಟ್ಟರು ತಮ್ಮ ಶಾಲೆಯ ಬಿಸಿಯೂಟ ಬೇಯಿಸುವುದಕ್ಕೆ ಬೆಂಕಿ ಸಾಕಾಗುತ್ತಿಲ್ಲ ಎಂದು ಹೇಳಿದ್ದರು. ಅದಕ್ಕಾಗಿ ನಾನೊಬ್ಬಳೇ ಒಂದು ವರ್ಷದ ಊಟಕ್ಕೆ ಬೇಕಾಗಿರುವ ಬೆಂಕಿಯನ್ನು ಉತ್ಪಾದಿಸಿದ್ದೇನೆ. ಗ್ಯಾಸ್ ಸಿಲಿಂಡರ್‌ನ್ನು ಭಟ್ಟರು ಬಿಸಿಯೂಟ ಬೇಯಿಸುವುದಕ್ಕೆ ಬಳಸುವುದೇ ಇಲ್ಲ. ಆದರೆ ಅಕ್ಕಿಯ ವ್ಯವಸ್ಥೆ ಮಾತ್ರ ಆಗಬೇಕು. ಈಗಾಗಲೇ ಭಿಕ್ಷೆ ಬೇಡಿ ಒಂದಿಷ್ಟು ಅಕ್ಕಿ ಸಂಗ್ರಹಿಸಿದ್ದೆ. ಆದರೆ ಬಿಜೆಪಿಯ ಕಾರ್ಯಕರ್ತರೇ ಅದನ್ನು ಬೇಯಿಸಿ ತಿಂದು ಬಿಟ್ಟಿದ್ದಾರೆ. ಅವರ ಹೊಟ್ಟೆಗೇ ಸಾಕಾಗಲಿಲ್ಲ, ಇನ್ನು ವಿದ್ಯಾರ್ಥಿಗಳಿಗೆ ಎಲ್ಲಿಂದ ಕೊಡಬೇಕು...’’ ಕ್ರೂರಂದ್ಲಾಜೆ ಅಸಹಾಯಕತೆಯನ್ನು ಮುಂದಿಟ್ಟರು. ‘‘ಆದರೆ ಭಿಕ್ಷೆ ಬೇಡಿ ಶಾಲೆಗೆ ಅಕ್ಕಿ ಒದಗಿಸುತ್ತೇನೆ ಎಂದು ಭಟ್ಟರಿಗೆ ಭರವಸೆ ಕೊಟ್ಟಿದ್ದೀರಲ್ಲ?’’ ಕಾಸಿ ನೆನಪಿಸಿದ.
‘‘ನೋಡ್ರೀ... ಇಡೀ ಬಿಜೆಪಿ ಬೆಂಕಿ ಉತ್ಪಾದನೆಗಾಗಿ ನನ್ನೊಬ್ಬಳನ್ನೇ ನೆಚ್ಚಿಕೊಂಡಿದೆ. ಆದುದರಿಂದ ಭಿಕ್ಷೆ ಬೇಡುವುದಕ್ಕೆ ಸಮಯವಿಲ್ಲ. ನಾನು ಬೆಂಕಿ ಉತ್ಪಾದನೆ ಮಾಡದೇ ಇದ್ದರೆ ರಾಜ್ಯದ ಬಿಜೆಪಿ ಕಾರ್ಯಕರ್ತರೆಲ್ಲ ಒಲೆ ಉರಿಸದೇ ಹಸಿವಿನಿಂದ ಸಾಯಬೇಕು. ಆದುದರಿಂದ ಕಲ್ಲಡ್ಕ ಬಿಟ್ಟು ಇದೀಗ ಉತ್ತರ ಕನ್ನಡದಲ್ಲಿ ಬೆಂಕಿ ಉತ್ಪಾದಿಸಲು ಪ್ರಯತ್ನಿಸಿದ್ದೇನೆ. ಆದರೆ ನಿರೀಕ್ಷೆಯ ಮಟ್ಟಕ್ಕೆ ಬೆಂಕಿ ಉತ್ಪಾದನೆಯಾಗಿಲ್ಲ....’’ ಕ್ರೂರಂದ್ಲಾಜೆ ಬೇಜಾರು ವ್ಯಕ್ತಪಡಿಸಿದರು.
‘‘ಯಾಕೆ ಮೇಡಂ...ನಿಮ್ಮ ನಾಲಗೆ ಸರಿಯಾಗಿ ಕೆಲಸ ಮಾಡಲಿಲ್ಲವೇ?’3 ಕಾಸಿ ಕೇಳಿದ.
‘‘ಹಾಗೇನು ಇಲ್ಲ. ಕಾರ್ಯಕರ್ತರು ಸರಿಯಾಗಿ ಸಹಕರಿಸುತ್ತಿಲ್ಲ. ಸಾಧಾರಣವಾಗಿ ಒಂದು ಜಿಲ್ಲೆಯನ್ನು ಹೊತ್ತಿಸುವಷ್ಟು ಬೆಂಕಿ ಉತ್ಪಾದಿಸಬೇಕಾದರೆ ಕನಿಷ್ಠ ಎರಡು ಹೆಣಗಳಾದರೂ ಬೇಕಾಗುತ್ತದೆ. ಕೋಮುಗಲಭೆಯಲ್ಲಿ ಸತ್ತ ಹೆಣವಾದರೆ ಇನ್ನಷ್ಟು ಒಳ್ಳೆಯದು. ಆದರೆ ಕೆರೆಯಲ್ಲಿ ಬಿದ್ದು ಒಂದು ವಾರ ಕಳೆದಿರುವ ಹೆಣವನ್ನು ಇಟ್ಟುಕೊಂಡು ನಾನು ಎಷ್ಟು ಬೆಂಕಿ ಉತ್ಪಾದಿಸಬಹುದು ಹೇಳಿ? ಆದರೂ ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಉತ್ತರ ಕನ್ನಡದ ಬಿಜೆಪಿ ಕಾರ್ಯಕರ್ತರು ಉತ್ಪಾದಿಸಿರುವ ಬೆಂಕಿಯಲ್ಲಿ ಇನ್ನೊಂದೆರಡು ತಿಂಗಳು ಗಂಜಿ ಬೇಯಿಸಿ ಕುಡಿಯಬಹುದು. ಹಾಗೆಯೇ ಹಿಂದೂ ಬಾಲಕಿಯೊಬ್ಬಳಿಗೆ ನಿಂಬೆ ಗಿಡದ ಮುಳ್ಳು ತರಚಿ ಗಾಯವಾಗಿರುವುದನ್ನು ಬಳಸಿಕೊಂಡು ಒಂದಿಷ್ಟು ಬೆಂಕಿ ಹಚ್ಚಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಉತ್ತರ ಕನ್ನಡದಾದ್ಯಂತ ಮುಳ್ಳಿರುವ ನಿಂಬೆ ಗಿಡಗಳನ್ನು ನೆಡಲು ಎಲ್ಲ ಕಾರ್ಯಕರ್ತರಿಗೆ ಆದೇಶ ನೀಡಿದ್ದೇವೆ. ಆ ನಿಂಬೆ ಗಿಡದಿಂದ ಬೆಂಕಿ ಉತ್ಪಾದಿಸಿ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರಿಗೆ ಹಂಚಲಾಗುತ್ತದೆ...ಶವಾಗಾರಕ್ಕೆ ಹೋಗುವ ಹೆಣಗಳನ್ನೆಲ್ಲ ಕೇಶವ ಕೃಪಾಕ್ಕೆ ರವಾನಿಸಲು ಕೇಂದ್ರ ಸರಕಾರಕ್ಕೆ ಮನವಿ ನೀಡಲಾಗಿದೆ. ’’ ಕ್ರೂರಂದ್ಲಾಜೆ ತಮ್ಮ ಯೋಜನೆಯನ್ನು ವಿವರಿಸಿದರು.
‘‘ಆದರೆ ಈ ಅಲ್ಪ ಬೆಂಕಿಯಿಂದ ಮುಂದಿನ ಚುನಾವಣೆಯನ್ನು ಎದುರಿಸಲು ಸಾಧ್ಯವೇ?’’ ಕಾಸಿ ಅನುಮಾನದಿಂದ ಕೇಳಿದ.
‘‘ಅದಕ್ಕಾಗಿಯೇ ಉತ್ತರ ಪ್ರದೇಶದಿಂದ ಬೆಂಕಿಯನ್ನು ಆಮದು ಮಾಡಿಕೊಳ್ಳುವ ಕುರಿತಂತೆ ವರಿಷ್ಠರ ಮಟ್ಟದಲ್ಲಿ ಮಾತುಕತೆ ನಡೆಸಲಾಗುತ್ತಿದೆ. ಈಗಾಗಲೇ ಉತ್ತರ ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಉತ್ಪಾದನೆಯಾಗುತ್ತಿರುವುದರಿಂದ, ರಾಜ್ಯ ಚುನಾವಣೆಯ ಹೊತ್ತಿಗೆ ಅದನ್ನು ಕರ್ನಾಟಕಕ್ಕೆ ರಫ್ತು ಮಾಡುವುದಾಗಿ ಅಲ್ಲಿಯ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಇದೊಂದು ಆಶಾದಾಯಕ ಬೆಳವಣಿಗೆ. ಉತ್ತರ ಪ್ರದೇಶದಿಂದ ಬೆಂಕಿಯೇನಾದರೂ ನಮಗೆ ದೊರಕಿದರೆ ರಾಜ್ಯದ ಕೆಲವು ಜಿಲ್ಲೆಗಳಿಗಾದರೂ ನಾವು ನಿರಾಳವಾಗಿ ಬೆಂಕಿ ಕೊಡಬಹುದು. ಚುನಾವಣೆಯವರೆಗೆ ಕಾರ್ಯಕರ್ತರು ಗಂಜಿ ಬೇಯಿಸಿ ಪ್ರಾಣ ಕಾಪಾಡಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.’’ ಕ್ರೂರಂದ್ಲಾಜೆ ವಿವರಿಸಿದರು.
ಅಷ್ಟರಲ್ಲಿ ಕಾಸಿಯ ಮೊಬೈಲ್ ರಿಂಗಣಿಸಿತು. ಕಿವಿಗಿಟ್ಟವನೇ ರೋಮಾಂಚನಗೊಂಡು ಹೇಳಿದ ‘‘ಮೇಡಂ...ಹೆಣ...ಹೆಣ...ಹೆಣ ಬಿದ್ದಿದೆ...’’
ಕ್ರೂರಂದ್ಲಾಜೆ ಕೂದಲು ಬಿಚ್ಚಿ, ತನ್ನೆಲ್ಲ ಹಲ್ಲುಗಳನ್ನು ಹೊರ ಹಾಕಿ ‘‘ಹೆಣವೇ...ಎಲ್ಲಿ ಎಲ್ಲಿ....’’ ಎಂದು ವಾಸನೆಗಾಗಿ ಮೂಗು ಚಾಚಿದರು.
‘‘ವಿಜಯಪುರದಲ್ಲಿ ಮೇಡಂ...ಹಿಂದೂ ಹೆಣ್ಣು ಮಗಳ ಹೆಣ...’’
‘‘ಹೌದೆ......ತುಂಬಾ ಸಂತೋಷ... ವಿಜಯಪುರಕ್ಕೆ ಹೊರಡುವೆ...ಈಗಲೇ...’’ ಎಂದು ಸಿದ್ಧರಾದರು.
‘‘ಆದರೆ ಆಕೆಯನ್ನು ಅತ್ಯಾಚಾರಗೈದು ಕೊಂದವರು ಬಿಜೆಪಿ ಕಾರ್ಯಕರ್ತರಂತೆ ಮೇಡಂ...’’ ಕಾಸಿ ನಿರುತ್ಸಾಹದಿಂದ ಹೇಳಿದ.
ಅದನ್ನು ಕೇಳಿದ್ದೇ ಸೆರಗಿಗೆ ಬೆಂಕಿ ಬಿದ್ದವರಂತೆ ‘‘ನೀರು ನೀರು....’’ ಎನ್ನುತ್ತಾ ಓಡಿದ ಅವರು ಮಹದಾಯಿ ನದಿಗೆ ಹಾರಿ ಬಿಟ್ಟರು.