ಅಪರಾಧ ಯಾವುದು? ದ್ವೇಷಿಸುವವರ ಜೊತೆ ಸಹಕಾರ್ಯವೇ?

Update: 2018-01-04 18:45 GMT

ವ್ಯವಸಾಯ ಬಂಧು ಧರ್ಮಾನುಸಾರ ನಾವು ನಮ್ಮ ‘ಮೂಕನಾಯಕ’ ಪತ್ರಿಕೆಯನ್ನು ಮರಾಠಿ ಭಾಷೆಯ ಎಲ್ಲ ಸಂಪಾದಕರಿಗೆ ಕಾಣಿಕೆಯಾಗಿ ಕೊಡುತ್ತೇವೆ. ಆದರೆ ನಮಗೆ ಕೇವಲ ಬ್ರಾಹ್ಮಣೇತರರ ಪತ್ರಿಕೆಗಳೇ ಕಾಣಿಕೆಯಾಗಿ ಬರುತ್ತವೆ ಅನ್ನುವುದೇ ಆಶ್ಚರ್ಯ. ಬ್ರಾಹ್ಮಣರ ಯಾವುದೇ ಪತ್ರಿಕೆಗಳು ನಮಗೆ ಕಾಣಿಕೆಯಾಗಿ ಬರದ ಕಾರಣ ನಮಗೆ ಗೊತ್ತಿರುವುದೇ ಇಲ್ಲ. ತಾ.23.3.1920ರ ‘ಜ್ಞಾನಪ್ರಕಾಶ’ದಲ್ಲಿ ಉತ್ತರಿಸದಿದ್ದರೆ ಆ ಮನುಷ್ಯ ಟೀಕೆಯನ್ನೂ ಆ ವಿಷಯಗಳನ್ನು ಒಪ್ಪಿಕೊಂಡಿದ್ದಾನೆ ಅನ್ನುವುದು ಓದುಗರ ಅನಿಸಿಕೆಯಾಗಿಬಿಡುತ್ತದೆ. ವ್ಯವಸಾಯ ಬಂಧು ಭಾವನೆಯಿಂದ ಪ್ರೇರಿತರಾಗಿ ಅವರ ‘ಜ್ಞಾನಪ್ರಕಾಶ’ ಪತ್ರಿಕೆ ದಿನನಿತ್ಯ ನಮ್ಮಲ್ಲಿಗೆ ಬರದಿದ್ದರೂ ಉತ್ತರ ಕೊಡಲು ನಮಗೆ ಸಮಯಾವಕಾಶ ಸಿಗಲೆಂದು ಈ ಸಂಚಿಕೆಯನ್ನಾದರೂ ಕಳಿಸಬೇಕಿತ್ತು. ಸುದೈವದಿಂದ ನಮ್ಮ ಗೆಳೆಯರೊಬ್ಬರು ನಮಗೆ ಅದನ್ನು ತಂದು ಕೊಟ್ಟಿದ್ದರಿಂದ ನಮಗೆ ಉತ್ತರಿಸುವ ಅವಕಾಶ ಸಿಕ್ಕಿತು. ನಾನವರಿಗೆ ಸದಾಋಣಿ. ನಮ್ಮ ಟೀಕೆಗೆ ಉತ್ತರಿಸಲು ಲೋ.ಶಿಂಧೆಯವರೇ ಸಮರ್ಥರಿದ್ದರು. ಆದರೆ ಶಿಂಧೆಯವರು ಸ್ವತಃ ಉತ್ತರಿಸಲು ಅಸಮರ್ಥರಾಗಿದ್ದಾರೆ. ಅಂದರೆ ‘ಜ್ಞಾನಪ್ರಕಾಶ’ದ ಸುಳ್ಳು ಮಾಹಿತಿಯಿಂದ ನಮ್ಮ ಅಪೇಕ್ಷೆಗಳಿಗೆ ಪರಿಹಾರ ಸಿಗುತ್ತದೆ ಎಂದು ‘ಜ್ಞಾನಪ್ರಕಾಶ’ದವರು ತಿಳಿದುಕೊಳ್ಳಬಾರದು. ಡಿಪ್ರೆಸ್ಡ್ ಕ್ಲಾಸ್ ಮಿಶನ್ ಅನ್ನುವುದು ದಲಿತರಲ್ಲಿ ನೀತಿ ಮೌಲ್ಯ ಹಾಗೂ ಶಿಕ್ಷಣದ ಜಾಗೃತಿ ಮೂಡಿಸಲು ಅಸ್ತಿತ್ವಕ್ಕೆ ಬಂದಿದೆ. ಈ ಎರಡು ವಿಷಯಗಳಲ್ಲಿ ಈ ಮಿಷನ್‌ನಿಂದ ದಲಿತರಿಗೆ ಯಾವ ರೀತಿಯ ಸಹಾಯವಾಗಿದೆ, ಇದರಿಂದ ಅವರೆಷ್ಟು ಬೆಳೆದಿದ್ದಾರೆ ಅನ್ನುವುದರ ಬಗ್ಗೆಯೊಮ್ಮೆ ವಿವರವಾಗಿ ಬರೆಯುವ ಆಸೆಯಿದೆ.

ಲೋ.ಶಿಂಧೆಯವರು ರಾಜಕೀಯ ಹಕ್ಕು ಸಂಬಂಧಗಳು ದಲಿತರ ಏಳಿಗೆಗೆ ಯಾವ ರೀತಿಯ ಸಹಾಯ ಮಾಡಿವೆ ಅನ್ನುವ ಬುದ್ಧಿಯನ್ನು ‘ಜ್ಞಾನಪ್ರಕಾಶ’ಕ್ಕೆ ಕಲಿಸುವ ಕೆಲಸವನ್ನು ಬಿಟ್ಟರೆ ಬೇರೆ ಯಾವ ಕೆಲಸವನ್ನೂ ಮಾಡಿಲ್ಲ. ನಾ.ಕಾಮತ್, ಸರ್ ಶಂಕರ್ ನಾರಾಯಣ್ ಹಾಗೂ ಫ್ರಾಂಚಾಯಿಸ್ ಕಮಿಟಿಯವರಿಂದ ದಲಿತರಿಗೆ ಜಾತಿ ಆಧಾರಿತ ಪ್ರತಿನಿಧಿಗಳನ್ನು ದೊರಕಿಸಿಕೊಡಲು ಲೋ.ಶಿಂಧೆಯವರು ಪಟ್ಟ ಕಷ್ಟಕ್ಕೆ ಫಲವೇನೂ ಸಿಗಲಿಲ್ಲ ಅನ್ನುವುದನ್ನು ‘ಜ್ಞಾನಪ್ರಕಾಶ’ದವರು ಕಂಡುಹಿಡಿದಿದ್ದರೆ ಅವರಿಗೆ ಮತ್ತದೆ ಬರೆಯಬೇಕು ಅನಿಸುತ್ತಿರಲಿಲ್ಲ. ‘ಜ್ಞಾನಪ್ರಕಾಶ’ದವರು ಹೇಳುವಂತೆ ಏನಾದರೂ ಲೋ.ಶಿಂಧೆಯವರಿಗೆ ದಲಿತರ ಬಗ್ಗೆ ಅತ್ಮೀಯತೆಯಿದ್ದರೆ ಹಾಗೂ ಮೇಲ್ಜಾತಿಯವರು ಇವರ ಮಾತು ಕೇಳುತ್ತಾರೆ ಎಂದೇನಾದರೂ ಗೊತ್ತಿರುವುದಾದರೆ ಸ್ವಾತಂತ್ರ ಸಿಕ್ಕ ಮೇಲೆ ತಮ್ಮ ಆಶ್ರಿತರ ಮೇಲೆ ಅನ್ಯಾಯವಾಗಲಿದೆ ಅನ್ನುವುದನ್ನು ನೋಡಿಯೂ ಕೂಡ ಅವರು ಜಾತಿ ಆಧಾರಿತ ಪ್ರತಿನಿಧಿಯನ್ನು ಯಾಕೆ ಅನುಮೋದಿಸಲಿಲ್ಲ? ಸ್ವಾತಂತ್ರದ ವಾದವಿವಾದಗಳಲ್ಲಿ ಜಾತಿ ಆಧಾರಿತ ಪ್ರತಿನಿಧಿಗಳ ಪ್ರಶ್ನೆ ತಲೆ ಎತ್ತಿದಾಗ ಅದನ್ನು ವಿರೋಧಿಸುವ ಪಕ್ಷಕ್ಕೆ ಸೇರಿಕೊಂಡು ಶಿಂಧೆಯವರು ಯಾವ ರೀತಿ ವರ್ತಿಸಿದರು ಅನ್ನುವುದು ‘ಜ್ಞಾನಪ್ರಕಾಶ’ದವರಿಗೆ ತಿಳಿದಿರಬಹುದು.

ಇಷ್ಟಕ್ಕೇ ಸುಮ್ಮನಾಗದೆ ಮಂತ್ರಾಲೋಚನೆ ಸಭೆಯ ಜನಪ್ರತಿನಿಧಿಗಳಿಂದ ದಲಿತರ ಪ್ರತಿನಿಧಿಗಳನ್ನಾರಿಸುವ ಮಾತನ್ನಾಡಿದರು. ಹೀಗೆ ವರ್ತಿಸುವುದು ದಲಿತರ ಬಗ್ಗೆ ಆತ್ಮೀಯತೆಯಿರುವ ಒಬ್ಬ ಮನುಷ್ಯನಿಗೆ ಒಪ್ಪುತ್ತದೆಯೇ? ಅನ್ನುವುದನ್ನು ‘ಜ್ಞಾನಪ್ರಕಾಶ’ದವರು ಯೋಚಿಸಲಿ. ಕಡೆಗೂ ತಮ್ಮ ವರ್ತನೆಯ ಬಗ್ಗೆ ನಾಚಿಕೆಯಾಗಿ ಹೀಗೆ ನಾನಲ್ಲ ಹೇಳಿದ್ದು ಇದು ಡಿಸ್ಪ್ರೆಸ್ ಕ್ಲಾಸ್ ಮಿಶನ್ನಿನವರ ಮಾತು ಎಂದು ಹೇಳಲಾರಂಭಿಸಿದರು. ‘ಶಿವದ್ಯ ಹೃದಯಂ ವಿಷ್ಣು ವಿಷ್ಣುಸ್ಯ ಹೃದಯಂ ಶಿವಃ’ ಅನ್ನುವ ಹಾಗೆ ಡಿಸ್ಪ್ರೆಸ್ ಕ್ಲಾಸ್ ಮಿಶನ್‌ರವರದ್ದು ಎಂದು ಹೇಳುವ ಕುಟಿಲತೆಯನ್ನು ತೋರಿ ಶಿಂಧೆಯವರು ತಮಗೆದುರಾಗಬಹುದಾಗಿದ್ದ ಕಠಿಣ ಪ್ರಸಂಗವನ್ನು ತಡೆದರು ಹಾಗೂ ಮತ್ತೊಮ್ಮೆ ದಲಿತರಿಗಾಗಿ ಜಾತಿ ಆಧಾರಿತ ಪ್ರತಿನಿಧಿಗಳು ಸಿಗಲಿ ಎಂದು ಹೋರಾಡತೊಡಗಿದರು.

ದಲಿತರಿಗೆ ಜಾತಿ ಆಧಾರಿತ ಪ್ರತಿನಿಧಿಗಳು ಬೇಡ ಎಂದು ವಿರೋಧಿಸಿದ ಶಿಂಧೆಯಿಂದಾಗಿ ಅಪ್ಪಿತಪ್ಪಿಯೂ ದಲಿತರಿಗೆ ಪ್ರತಿನಿಧಿಗಳನ್ನು ಕೊಡಲು ಚಾರಿತ್ರಶೂನ್ಯ ಸುಶಿಕ್ಷಿತ ಜನ ಒಪ್ಪಲಿಲ್ಲ. ಅದೇ ಶಿಂಧೆ ಇವರಿಗೆ ಜಾತಿ ಆಧಾರಿತ ಪ್ರತಿನಿಧಿಗಳನ್ನು ಕೊಡಿ ಎಂದು ತಾವೇ ಇದರ ವಿರುದ್ಧ ಎತ್ತಿ ಕಟ್ಟಿರುವ ಜನರೆದುರು ಕೇಳಿಕೊಳ್ಳುವುದು ಹಾಸ್ಯಾಸ್ಪದವಲ್ಲವೇ? ಹೀಗಿರುವಾಗ ‘ಜ್ಞಾನಪ್ರಕಾಶ’ದವರು ಇದಕ್ಕಾಗಿ ಶಿಂಧೆಯವರನ್ನು ಸನ್ಮಾನಿಸುವುದಾದರೆ ಸನ್ಮಾನಿಸಲಿ, ದಲಿತರ ಮನಸ್ಸು ಮಾತ್ರ ಇಂತಹ ಸನ್ಮಾನಕ್ಕೆ ಸಿದ್ಧವಾಗುತ್ತಿಲ್ಲ, ಹಾಗಾಗಿ ನಮ್ಮಲ್ಲೂ ಅವರಲ್ಲೂ ಇರುವ ವ್ಯತ್ಯಾಸವನ್ನು ನಾವು ಒಪ್ಪಿಕೊಳ್ಳುತ್ತೇವೆ. ಲೋ.ಶಿಂಧೆಯವರಿಂದಲೇ ನಮಗೆ ಜಾತಿ ಆಧಾರಿತ ಪ್ರತಿನಿಧಿಗಳು ಸಿಗಲಿಲ್ಲ. ಮೊದಲಿನಿಂದಲೇ ಅವರದಕ್ಕೆ ಪ್ರಯತ್ನಿಸಿದ್ದಿದ್ದರೆ ಎಲ್ಲರಿಗಲ್ಲದಿದ್ದರೂ ದಲಿತರಿಗಾದರೂ ಪ್ರತಿನಿಧಿಗಳು ಸಿಗುತ್ತಿರಲಿಲ್ಲವೇ? ಮೊದಲು ಬೇಡ ಎಂದು ಹೇಳಿದವರು ಕಡೆಗೆ ಈ ಭಿಕಾರಿ ಶಿಂಧೆ ಅದನ್ನೇ ಬೇಕು ಎಂದು ಬೇಡಲು ಆರಂಭಿಸಿದರು. ಈ ಭಿಕ್ಷೆ ತನಗೆ ಸಿಗಲಿ ಎಂದವರು ನಾ.ಕಾಮತ್ ಹಾಗೂ ಸರ್‌ಶಂಕರ್ ನಾರಾಯಣ್ ಎದುರು ಕೈ ಒಡ್ಡಿದರು.

ಆದರೆ ಭಿಕ್ಷೆಯ ಪಾತ್ರೆಯನ್ನು ಬೆಣ್ಣೆಯ ಪಾತ್ರೆಯಂತೆ ನೆಲುವಿನ ಮೇಲಿಡುವುದಕ್ಕಾಗುವುದಿಲ್ಲ. ಹಾಗಾಗಿ ಆ ಭಿಕ್ಷೆ ಅವರಿಗೆ ಸಿಗಲಿಲ್ಲ ಅನ್ನುವುದು ಶಿಂಧೆಯವರ ದುರ್ದೈವ ಎಂದು ಶಿಂಧೆಯವರಿಗೆ ಅನಿಸಲಿ ಅನಿಸದಿರಲಿ ನಮಗಂತೂ ಹಾಗೇ ಅನಿಸುತ್ತದೆ. ಶಿಂಧೆಯವರ ತಪ್ಪು ಧೋರಣೆಯಿಂದಲೇ ಈ ದುರ್ದೈವ ಅವರ ಪಾಲಿಗೆ ಬಂದಿದೆ ಎಂದು ‘ಜ್ಞಾನಪ್ರಕಾಶ’ದವರಿಗೆ ಅನಿಸದಿದ್ದರೆ ಯಾರು ತಾನೆ ಏನು ಮಾಡಿಯಾರು? ಆದರೆ ನಮಗಂತೂ ಹಾಗೇ ಅನಿಸುತ್ತದೆ. ಹೀಗಿದ್ದರೂ ಲೋ.ಶಿಂಧೆಯವರಿಗೆ ದಲಿತರ ಬಗ್ಗೆ ದಯೆಯಿಲ್ಲ ಅನ್ನುವ ಆರೋಪವನ್ನು ಯಾವುದೇ ದಲಿತರಾಗಲಿ ಮೂಕನಾಯಕನಾಗಲಿ ಹೊರಿಸಿಲ್ಲ. ಅವರ ತಪ್ಪು ಧೋರಣೆಯಿಂದಲೇ ನಾವವರನ್ನು ಟೀಕಿಸಿದ್ದೇವೆ. ಬೇರೆಯವರ ಬಗ್ಗೆ ದಯೆಯಿದ್ದೂ ಕೂಡ ತಪ್ಪು ಧೋರಣೆಯಿದ್ದರೆ ಇನ್ನೊಬ್ಬರ ಕಲ್ಯಾಣವಾಗಲೆಂದು ಇಚ್ಛಿಸುವ ಕೈಯಿಂದಲೇ ಅವರಿಗೆ ಕೆಟ್ಟದ್ದಾಗುತ್ತದೆ ಅನ್ನುವ ಮಾತನ್ನು ‘ಜ್ಞಾನಪ್ರಕಾಶ’ ದವರು ಕೇಳಿಲ್ಲವೇನೋ. ಇಂತಹ ಉದಾಹರಣೆಯಲ್ಲಿ ಲೋ.ಶಿಂಧೆಯವರ ಉದಾಹರಣೆಯೂ ಒಂದು ಅನ್ನುವ ಹೇಳಿಕೆಯನ್ನು ‘ಜ್ಞಾನ ಪ್ರಕಾಶ’ದವರು ಒಪ್ಪದಿದ್ದರೆ ನಾವಾದರೂ ಏನೂ ಮಾಡಲು ಸಾಧ್ಯ?

ದಲಿತರು ಮೇಲ್ವರ್ಗದವರನ್ನು ದ್ವೇಷಿಸಿದರೆ ಲೋ. ಶಿಂದೆಯವರದನ್ನು ನೋಡಲಾರರು ಅನ್ನುವುದು ‘ಜ್ಞಾನ ಪ್ರಕಾಶ’ರ ಅಂಬೋಣ. ಲೋ. ಶಿಂಧೆಯವರು ತಿಲಕರ ಸರೀಕರಾದ್ದರಿಂದಲೇ ಅಲ್ಲವೇ ನಾವು ಅವರ ಮೇಲೆ ಆಯುಧವನ್ನು ಎತ್ತಿ ಹಿಡಿದಿರುವುದು, ‘ಸಂಮೋಹ ಸರ್ವಭೂತೇಷು ನಮೋಃ ದ್ವೇಷೋಸ್ತಿ ನ ಪ್ರಿಯಃ’ ಅನ್ನುವುದು ಬ್ರಾಹ್ಮಣರ ಅಥವಾ ದೇವದೇವತೆಗಳ ಲಕ್ಷಣವಾದರೂ ಮಾನವ ದೃಷ್ಟಿಯಿಂದ ನೋಡಿದಾಗ ನಮಗೆ ನಷ್ಟವನ್ನೇ ಮಾಡಿದ ಜನರನ್ನು ನಾವು ಪ್ರೀತಿಸುವುದಿಲ್ಲ ಎಂದು ಒಪ್ಪಿಕೊಳ್ಳಲು ನಮಗೆ ಯಾವ ನಾಚಿಕೆಯೂ ಇಲ್ಲ. ಲೋಭ, ಮೋಹ, ಕ್ರೋಧ, ಮದ ಮತ್ಸರಗಳು ದೇವರಲ್ಲಿರುತ್ತವೋ ಇಲ್ಲವೋ ಕಾಣೆ! ಆದರೆ ಮಾನವನಲ್ಲಿರುತ್ತವೆ ಹಾಗೂ ಪರಿಸ್ಥಿತಿಗನುಗುಣವಾಗಿ ಅವು ಪ್ರಬಲವಾಗುತ್ತಾ ಮುಂದೊಂದು ದಿನ ಶಾಂತವಾಗುತ್ತದೆ ಅನ್ನುವುದೇ ವಿಶೇಷ. ದಲಿತರು ಕೂಡ ಮನುಷ್ಯರೇ. ಹಾಗಾಗಿ ಅವರನ್ನು ದ್ವೇಷಿಸುವವರನ್ನು ದ್ವೇಷಿಸಿದರೆ ಅವರ ನೀತಿಮತ್ತೆಯ ಬಗ್ಗೆ ಯಾರಾದರೂ ಕಾರಣ ತೋರಿದ್ದೇ ಆದರೆ ಅದು ಲೋ. ಶಿಂಧೆಯವರೇ. ಇದರರ್ಥ ಲೋ. ಶಿಂಧೆಯವರು ದೇವರಾಗಲಿ ಅಥವಾ ಅವರಿಗೆ ಬ್ರಹ್ಮ ದೃಷ್ಟಿ ಲಭಿಸಿದೆ ಎಂದಾಗಲೀ ಆಗುವುದಿಲ್ಲ. ಅವರು ದಲಿತೇತರರು ಅನ್ನುವುದಕ್ಕೆ ನಾವು ಅವರನ್ನು ದೂಷಿಸುತ್ತಿಲ್ಲ. ನಿಮಗೆ ಗೊತ್ತೇ? ದ್ವೇಷವೇ ಉರಿಗೆ ಉಪಶಮನ. ಲೋ. ಶಿಂಧೆಯವರು ದಲಿತರಾಗಿದ್ದರೆ ಅವರಿಂದಲೂ ದ್ವೇಷಿಸದೆ ಇರಲಾಗುತ್ತಿರಲಿಲ್ಲ. ದಲಿತರಿಗಾಗಿ ಕೆಲಸ ಮಾಡುತ್ತಾ ಅವರು ಸ್ವತಃ ದಲಿತರಾಗಿದ್ದಾರೆ ಎಂದು ಹಿಂದಿನವರೆಗೆ ಅನಿಸಿದ್ದು ಸುಳ್ಳು ಅನ್ನುವು ದನ್ನು ‘ಜ್ಞಾನ ಪ್ರಕಾಶ’ದವರು ಪ್ರಕಟಿಸಿದ್ದು ಒಳ್ಳೆಯದೇ ಆಯಿತು.

ದಲಿತರ ಪ್ರಗತಿಗಾಗಿ ದಲಿತರಾಗಬೇಕು ಎನ್ನುವುದಕ್ಕೆ ಯಾರೂ ಬೇಡವೆನ್ನಲಾರರು. ಆದರೂ ಲೋ. ಶಿಂಧೆಯವರು ಲೋ. ತಿಲಕರನ್ನು ದ್ವೇಷಿಸುವುದಿಲ್ಲ ಅನ್ನುವ ಕಾರಣಕ್ಕಾಗಿಯೇ ನಮಗೆ ಅವರ ಮೇಲೆ ಸಿಟ್ಟಿದೆ ಎಂದು ‘ಜ್ಞಾನಪ್ರಕಾಶ’ದವರು ಅಂದುಕೊಂಡರೆ ತಪ್ಪು.ಲೋ. ತಿಲಕರಂತಹ ಅವರ ‘ಶಠಂ ಪ್ರತಿ ಶಾಠ್ಯಂ’ (ಮುಯ್ಯಿಗೆ ಮುಯ್ಯಿ) ಅನ್ನುವ ತತ್ವವನ್ನು ಪಾಲಿಸುವ ಮನುಷ್ಯನ ಜೊತೆ ಸಹಕರಿಸು ತ್ತಾರಲ್ಲ ಅನ್ನುವುದೇ ನಮಗಿರುವ ಸಿಟ್ಟು. ದ್ವೇಷಿಸುವುದು ಹಾಗೂ ಸಹಕರಿಸುವುದರ ನಡುವಣ ವ್ಯತ್ಯಾಸ ಜ್ಞಾನ ಪ್ರಕಾಶರು ತಿಳಿದೇ ಇಲ್ಲ. ನಮ್ಮ ಬಗ್ಗೆ ಸಹಾನುಭೂತಿ ಇಲ್ಲದವರು ನಮ್ಮ ಪ್ರಗತಿಗೆ ಅಡ್ಡ ಬರುವ, ನಮ್ಮ ಹಕ್ಕನ್ನು ಕಾಲಡಿ ತುಳಿಯುವ ಜನರೊಂದಿಗೆ ಸಹಕರಿಸುವವರು ನಮ್ಮನ್ನೇನು ಉದ್ಧರಿಸಿಯಾರು? ಹಾಂ..ಇವರು ದಾರಿ ಮಾತ್ರ ತಪ್ಪಿಸಿಯಾರು.

ಹೀಗೆ ದಾರಿ ತಪ್ಪುವುದರಿಂದ ತಾವಾಗಿಯೇ ಸ್ವಾವಲಂಬನೆಯಿಂದ, ಆತ್ಮಬಲದಿಂದ ಸಮಾಜದ ರಥವನ್ನೆಳೆಯಲು ಸಿದ್ಧರಿರುವ ನಮ್ಮ ಜನ ಹೇಗೂ ತಿಲಕರು ನಮ್ಮ ಕೆಲಸ ಮಾಡುತ್ತಿದ್ದಾರೆ ನಮಗೇನೂ ಮಾಡುವ ಅಗತ್ಯವಿಲ್ಲ ಎಂದೋ ಅಥವಾ ಕೆಲಸವನ್ನಾರಂಭಿಸಿರುವವರೇ ಮುಂದುವರಿಸುವುದು ಒಳ್ಳೆಯದು ಎನ್ನುವ ತಪ್ಪು ತಿಳಿವಳಿಕೆಯ ಭಾವನೆಗಳಿಂದ ಕರ್ತವ್ಯದಿಂದ ದೂರವಾಗುವ ಸಾಧ್ಯತೆಗಳಿವೆ. ಹಾಗಾಗಿ ಲೋ. ಶಿಂಧೆಯವರಿಗೆ ನಾವೀಗಲೇ ಮುನ್ನೆಚ್ಚರಿಕೆಯನ್ನು ಕೊಟ್ಟಾಗಿದೆ. ಯಾರದ್ದೇ ಮುಲಾಜಿಲ್ಲದೆ ನಮ್ಮ ಉದ್ಧಾರಕ್ಕಾಗಿ ನಮ್ಮ ಹಕ್ಕನ್ನು ಧೈರ್ಯದಿಂದ ನಾವು ಕೇಳಿದ್ದೇವೆ. ಭಿಕ್ಷೆ ಬೇಡುವುದರಿಂದ ಹಕ್ಕು ಸಿಗುವುದಿಲ್ಲ. ಆದರೆ ಲೋ. ಶಿಂಧೆಯವರಿಗೆ ಮಾತ್ರ ಭಿಕ್ಷೆ ಬೇಡದೆ ಬೇರೆ ದಾರಿಯಿಲ್ಲ. ದಲಿತರೊಂದಿಗವರು ಸಹಕರಿಸುವುದಿಲ್ಲ ಅನ್ನುವುದೇ ಇದಕ್ಕೆ ಕಾರಣ. ಸಹಕರಿಸುವ ಬುದ್ಧಿ ಇವರಿಗೆ ಬರುವ ತನಕ ಇವರ ಅವತಾರ ಕೊನೆಗೊಳ್ಳುತ್ತದೆ ಎಂದೆನಿಸುತ್ತಿಲ್ಲ.

ನಾವಿಷ್ಟೆಲ್ಲ ಬರೆದಿರುವುದು ಯಾರಿಗೂ ನೋವುಂಟು ಮಾಡುವ ಉದ್ದೇಶದಿಂದಲ್ಲ. ಆದರೆ ದಾರಿ ತಪ್ಪುವವರಿಗೆ ಎಚ್ಚರಿಕೆ ಕೊಡುವ ಉದ್ದೇಶದಿಂದ ಮಾತ್ರ ಹೌದು. ಈ ಎಚ್ಚರಿಕೆಯನ್ನು ಪಾಲಿಸಿ ದಲಿತರನ್ನು ದ್ವೇಷಿಸುವವರ ಜೊತೆ ಸಹಕರಿಸುವುದಕ್ಕಿಂತ ದಲಿತರೊಂದಿಗೆ ಸಹಕರಿಸಿದರೆ ಅವರ ಕೈಯಿಂದ ಒಳ್ಳೆಯ ಕೆಲಸಗಳಾಗಲಿಕ್ಕಿವೆ. ಆದರೆ ಉದ್ದೇಶವನ್ನೇ ಮರೆತು ಮನಸ್ಸು ನೋಯಿಸಿದರು ಅಂದುಕೊಂಡು ಸೇಡು ತೀರಿಸಲು ಲೋ. ಶಿಂಧೆ ಅಥವಾ ಇನ್ಯಾರೇ ನಮ್ಮ ಕೆಲಸದಲ್ಲಿ ಅಡಚಣೆ ತಂದರೆ ಅವರಿಗಾಗಿ ಯುದ್ಧಭೂಮಿ ಸಿದ್ಧವಿದೆ. ಆದರೆ ಇದಕ್ಕೆಲ್ಲ ಹೆದರದೆ ಎಚ್ಚರಿಕೆ ಕೊಡುವುದನ್ನು ನಿಲ್ಲಿಸುವುದಿಲ್ಲ. ಕೇಡುಗರನ್ನು ಒಪ್ಪಿಸುವುದರಿಂದ, ಅವರ ಮನಸ್ಸನ್ನು ಕರಗಿಸುವುದರಿಂದ ವಿಘ್ನಗಳು ಮಾಯವಾಗಲಾರದು ಅನ್ನುವ ನಮ್ಮ ಸಂದೇಶವನ್ನು ಜ್ಞಾನಪ್ರಕಾಶ ದವರು ಯೋಗ್ಯವಾದ ಸಮಯದಲ್ಲಿ ಯೋಗ್ಯ ಮನುಷ್ಯನಿಗೆ ತಲುಪಿಸುತ್ತಾರೆ ಅನ್ನುವ ನಂಬಿಕೆ ಇದೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ನಾಸ್ತಿಕ ಮದ