ಹೀಗೊಬ್ಬ ಮಾದರಿ ಮನುಷ್ಯ
ಕಳೆದ ಶತಮಾನದ ನಾಲ್ಕನೆಯ ದಶಕದಲ್ಲಿ ಬರವಣಿಗೆ ಪ್ರಾರಂಭಿಸಿದ ಲಕ್ಷ್ಮಣ ರಾವ್ ಜೀವಿತದ ಕೊನೆಯವರೆಗೂ ಅಧ್ಯಯನ ಮತ್ತು ಬರವಣಿಗೆಯನ್ನು ಒಂದು ವ್ರತದಂತೆ ಪಾಲಿಸಿಕೊಂಡು ಬಂದವರು. ಇಷ್ಟು ಸುದೀರ್ಘ ಅವಧಿಯಲ್ಲಿನ ಅವರ ಸಾಧನೆಗಳು ಗುಣಗಾತ್ರಗಳೆರಡರಲ್ಲೂ ದೊಡ್ಡದೇ. ವಿಜ್ಞಾನ ಸಾಹಿತ್ಯ ರಚನೆಯ ಜೊತೆಗೆ ಸಂಪಾದಕರಾಗಿ ವಿಜ್ಞಾನ ಸಾಹಿತ್ಯಕ್ಕೆ ಅವರ ಕೊಡುಗೆ ಅನನ್ಯವಾದುದು. ಮೈಸೂರು ವಿಶ್ವ ವಿದ್ಯಾನಿಲಯದ ಪ್ರತಿಷ್ಠೆಯ ಪ್ರಕಟಣೆಯಾದ ಪ್ರಬುದ್ಧ ಕರ್ನಾಟಕದ ಸುವರ್ಣ ಮಹೋತ್ಸವದ ಅಂಗವಾಗಿ ಸಂಪಾದಿಸಿದ ಎರಡು ವಿಜ್ಞಾನ ಸಂಪುಟಗಳು ಲಕ್ಷ್ಮಣ ರಾಯರ ವಿಜ್ಞಾನ ಪಾಂಡಿತ್ಯ, ಪ್ರತಿಭೆ ಮತ್ತು ಕಾರ್ಯಕ್ಷಮತೆಗಳಿಗೆ ಶೃಂಗ ಸದೃಶವಾದ ನಿದರ್ಶನಗಳು.
ಹೀಗೊಬ್ಬರಿದ್ದರು,
ಲಕ್ಷ್ಮಣ ರಾಯರು,
ವೈಜ್ಞಾನಿಕ ಮನೋಧರ್ಮಕ್ಕೆ ಮತ್ತೊಂದು ಹೆಸರಾದವರು.
ಮೊನ್ನೆ (ಡಿ.29) ಇಹಲೋಕ ತ್ಯಜಿಸಿದಾಗ ಅವರ ಪ್ರಾಯ ತೊಂಬತ್ನಾಲ್ಕರ ಇಳಿ ವಯಸ್ಸು. ಅವರು ಜಗಳೂರು ರಾಘವೇಂದ್ರ ರಾವ್ ಲಕ್ಷ್ಮಣ ರಾವ್. ಕನ್ನಡ ವಿಜ್ಞಾನ ಸಾಹಿತ್ಯದ ಆದ್ಯ ಪ್ರವರ್ತಕರಾದ ಆರ್. ಎಲ್. ನರಸಿಂಹಯ್ಯನವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವನ್ನು ಬೆಳೆಸಿದವರಲ್ಲಿ ಆದ್ಯರು. ತಮ್ಮ ಬದುಕಿನ ಬಹುಭಾಗವನ್ನು ವಿಜ್ಞಾನ ಸಾಹಿತ್ಯ ರಚನೆ ಮತ್ತು ಪ್ರಸಾರಕ್ಕೆ ಮುಡುಪಾಗಿರಿಸಿದವರು.
ಬಹು ಶ್ರುತ ವಿಜ್ಞಾನ ಲೇಖಕರೂ ವಿದ್ಯಾರ್ಥಿಪ್ರಿಯ ಪ್ರಾಧ್ಯಾಪಕರೂ ಆಗಿದ್ದ ಜೆ.ಆರ್.ಲಕ್ಷ್ಮಣ ರಾವ್ ಹುಟ್ಟಿದ್ದು (21-01-1921)ಜಗಳೂರಿನಲ್ಲಿ, ಶ್ಯಾನುಭೋಗ ಮನೆತನದಲ್ಲಿ. ಚಿತ್ರದುರ್ಗದಲ್ಲಿ ಮಾಧ್ಯಮಿಕ ವಿದ್ಯಾಭ್ಯಾಸ. ಮುಂದೆ ಕಾಲೇಜು ಶಿಕ್ಷಣ ಬೆಂಗಳೂರು, ಮೈಸೂರುಗಳಲ್ಲಿ. 1943ರಲ್ಲಿ ರಸಾಯನ ಶಾಸ್ತ್ರದಲ್ಲಿ ಎಂಎಸ್ಸಿ ಗಳಿಸಿದ ಲಕ್ಷ್ಮಣರಾಯರನ್ನು ಕೈಬೀಸಿ ಕರೆದದ್ದು ಕಾಲೇಜು ಅಧ್ಯಾಪಕರ ವೃತ್ತಿ. ಅದೇ ವರ್ಷ ತುಮಕೂರು ಕಾಲೇಜಿನಲ್ಲಿ ರಸಾಯನ ಶಾಸ್ತ್ರ ಉಪನ್ಯಾಸಕರಾಗಿ ವೃತ್ತಿ ಜೀವನ ಪ್ರಾರಂಭ. ಲಕ್ಷ್ಮಣ ರಾಯರ ಬಾಲ್ಯ ಮತ್ತು ಕಾಲೇಜು ಶಿಕ್ಷಣದವರೆಗಿನ ಅವಧಿ ಚಂಚಲಚಿತ್ತದ, ಡೋಲಾಯಮಾನ ಸ್ಥಿತಿಯ ದಿನಗಳು. ಪೌಗಂಡ ವಯಸ್ಸಿನ ಚಿತ್ತಚಾಂಚಲ್ಯದ ಆ ದಿನಗಳಲ್ಲಿ ಬಾಲಕ ಲಕ್ಷ್ಮಣ ರಾವ್ ಓದಿಗೆ ನಮಸ್ಕಾರ ಹೇಳಿ ಉದ್ಯೋಗ ಅರಸಿ ಪರಾರಿಯಾಗುವಾಗ ಹಿರಿಯರ ಕೈಗೆ ಸಿಕ್ಕಿಬಿದ್ದು ಮತ್ತೆ ಹೈಸ್ಕೂಲ್ ಮೆಟ್ಟಿಲನ್ನು ಹತ್ತ ಬೇಕಾಯಿತು. ಇಲ್ಲಿ ಪತರಗುಡುತ್ತಿದ್ದ ಬಾಲಕನಿಗೆ ಆಸರೆಯಾಗಿ ನಿಂತವರು ವಿಜ್ಞಾನದ ಮೇಷ್ಟ್ರು ರಾಮಚಂದ್ರನ್. ಮೇಷ್ಟ್ರ ಮನೆಯಲ್ಲೇ ಇದ್ದುಕೊಂಡು ಬೆಳೆದ ಬಾಲಕ ಲಕ್ಷ್ಮಣ ರಾವ್ ಎಸೆಸೆಲ್ಸಿ ಮುಗಿಸುವ ವೇಳೆಗೆ ನಿಜಕ್ಕೂ ‘ಬುದ್ಧಿವಂತ’ ಬಾಲಕನೆನಿಸಿಕೊಂಡಿದ್ದರು.
ಬಾಲ್ಯದಲ್ಲಿ ಶಾಲೆಯ ಪಠ್ಯಗಳ ಓದಿನಲ್ಲಿ ಅನಾಸಕ್ತನಾಗಿದ್ದರೂ ಓದಿನಲ್ಲಿ ಆಸಕ್ತಿ ಇರಲಿಲ್ಲ ಎಂದೇನೂ ಅಲ್ಲ. ಹೈಸ್ಕೂಲು ಮೆಟ್ಟಿಲು ಹತ್ತುವ ವೇಳೆಗಾಗಲೇ ಗಳಗನಾಥರ ‘ಮಾಧವ ಕರುಣಾ ವಿಲಾಸ’, ಬಿ.ವೆಂಕಟಾಚಾರ್ಯರ ‘ದೇವಿ ಚೌಧುರಾಣಿ’ ಮೊದಲಾದ ಅನುವಾದಗಳನ್ನು ಓದಿಕೊಂಡಿದ್ದ ಬಾಲಕ ಲಕ್ಷ್ಮಣನಿಗೆ ಜನ್ಮಕೊಟ್ಟ ತಾಯಿಯಿಂದಲೇ ಓದುವ ‘ಸೋಂಕು’ಅಂಟಿಕೊಂಡಿತ್ತು. ಹೀಗಾಗಿ ಅಮ್ಮ ತರಿಸುತ್ತಿದ್ದ ಕಲ್ಯಾಣಮ್ಮನವರ ‘ಸರಸ್ವತಿ’, ಆಲೂರು ವೆಂಟರಾಯರ ‘ಜಯಕರ್ನಾಟಕ’, ಅಗಡಿ ಆನಂದವನದ ’ಸದ್ಬೋಧ ಚಂದ್ರಿಕೆ’ ಬಾಲಕನಲ್ಲಿ ಓದುವ ಕುತೂಹಲ ಕೆರಳಿಸಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ. ದಾವಣಗೆರೆಯಲ್ಲಿ ಹೈಸ್ಕೂಲು ಓದುವಾಗ ಅನಾಯಾಸವಾಗಿ ದೊರೆತ ತಂದೆಯ ಮಿತ್ರ ನರಸಿಂಹಮೂರ್ತಿ ರಾಯರ ಪ್ರೋತ್ಸಾಹ ಮತ್ತು ‘ಬುಕ್ ಆಫ್ ನಾಲೆಡ್ಜ್’ - ‘ಲ್ಯಾಂಡ್ಸ್ ಆ್ಯಂಡ್ ಪೀಪಲ್’ ವಿಶ್ವಕೋಶ ಸಂಪುಟಗಳು ಬಾಲಕನಲ್ಲಿ ಸುಪ್ತ ಸ್ಥಿತಿಯಲ್ಲಿದ್ದ ಓದುವ ಹವ್ಯಾಸಕ್ಕೆ ಪುನರ್ಜೀವ ಕೊಟ್ಟವು. ಆದರೆ ಈ ಓದುವ ಹವ್ಯಾಸಕ್ಕೆ ಒಂದು ನಿಶ್ಚಿತ ಗೊತ್ತುಗುರಿ ಸಿಕ್ಕಿದ್ದು ಕುವೆಂಪು ಅವರಿಂದ.
ಮೈಸೂರಿನಲ್ಲಿ ಜೂನಿಯರ್ ಇಂಟರ್‌ಮೀಡಿಯಟ್ ಓದುತ್ತಿದ್ದಾಗ(1937) ಕನ್ನಡ ತರಗತಿ ತೆಗೆದುಕೊಳ್ಳುತ್ತಿದ್ದ ಮೇಷ್ಟ್ರು, ಕೆ.ವಿ.ಪಿ. ರಾಘವಾಂಕನ ಹರಿಶ್ಚಂದ್ರ ಕಾವ್ಯ ಬೋಧಿಸುತ್ತಿದ್ದ ಕೆ.ವಿ.ಪಿ. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ದೃಷ್ಟಿಯನ್ನೂ ಬೆಳೆಸಿದರು ಎನ್ನುತ್ತಾರೆ ಲಕ್ಷ್ಮಣ ರಾಯರು.(ನೆನಪಿನ ಅಲೆಗಳು -ಜೀವನ ವೃತ್ತಾಂತದಲ್ಲಿ). ಒಂದು ತರಗತಿಯಲ್ಲಿ ‘ಹರಿಶ್ಚಂದ್ರ ಕಾವ್ಯ’ ಪಾಠ ಮುಗಿಸಿ ಕುವೆಂಪು ವಿದ್ಯಾರ್ಥಿಗಳಿಗೆ ಹೀಗೊಂದು ಕಿವಿ ಮಾತು ಹೇಳಿದರು:
‘‘ನೀವೆಲ್ಲ ವಿಜ್ಞಾನದ ವಿದ್ಯಾರ್ಥಿಗಳು. ಆದರೆ ನಿಮ್ಮಲ್ಲಿ ಬಹುಪಾಲು ಜನ ಗ್ರಿಗೊರಿ ಮತ್ತು ಹಾಡ್ಜಸ್ ಪುಸ್ತಕದಲ್ಲಿ ಏನಿದೆಯೋ ಅದೇ ವಿಜ್ಞಾನ ಎಂದು ತಿಳಿದಿರುವಿರಿ. ಅದು ಸರಿಯಲ್ಲ. ಪಠ್ಯಕ್ರಮದಲ್ಲಿ ಎರಡೋ ಮೂರೋ ವಿಜ್ಞಾನ ಶಾಖೆಗಳನ್ನು ನಿಮ್ಮ ವ್ಯಾಸಂಗಕ್ಕೆ ನಿಗದಿ ಮಾಡಿರಬಹುದು, ಅಷ್ಟೆ. ಇನ್ನೂ ಉನ್ನತ ವ್ಯಾಸಂಗ ಕೈಗೊಂಡಾಗ ನಿಮ್ಮ ವ್ಯಾಸಂಗ ಯಾವುದಾದರೂ ಒಂದು ವಿಜ್ಞಾನ ಶಾಖೆಗೆ ಸೀಮಿತ ವಾಗುತ್ತದೆ. ಆದರೆ ನಿಮ್ಮ ವ್ಯಾಸಂಗವನ್ನು ಆ ಒಂದು ಶಾಖೆಗೆ ಸೀಮಿತ ಗೊಳಿಸಿ ನೀವು ಕೂಪಕೂರ್ಮಗಳಾಗಬಾರದು. ಇತರ ಶಾಖೆಗಳ ಪರಿಚಯವನ್ನು ಸ್ಥೂಲವಾಗಿಯಾದರೂ ಮಾಡಿಕೊಳ್ಳಬೇಕು. ವಿಜ್ಞಾನದ ವ್ಯಾಪ್ತಿಯನ್ನರಿತು ವಿಜ್ಞಾನ ಮಾರ್ಗದ ಪರಿಚಯಮಾಡಿಕೊಂಡು, ವೈಜ್ಞಾನಿಕ ದೃಷ್ಟಿಯನ್ನು ಮೈಗೂಡಿಸಿಕೊಳ್ಳುವುದು ಬಹು ಮುಖ್ಯ...’’
-ಹೀಗೆಂದು ಹೇಳಿ ಕುವೆಂಪು ತಮ್ಮ, ಕೈಚೀಲದಿಂದ ಒಂದು ಪುಸ್ತಕವನ್ನು ತೆಗೆದು ತೋರಿಸಿ, ‘‘ಪ್ರಖ್ಯಾತ ಖಗೋಳ ವಿಜ್ಞಾನಿ ಸರ್ ಜೇಮ್ಸ್ ಜೀನ್ಸ್ ಬರೆದಿರುವ ಈ ಪುಸ್ತಕ ‘ಮಿಸ್ಟೀರಿಯಸ್ ಯೂನಿವರ್ಸ್’ ತುಂಬ ಸ್ವಾರಸ್ಯಕರವಾಗಿದೆ. ನಮ್ಮಂಥವರು ಸಹ ಇದನ್ನು ಓದಿ ಅರ್ಥಮಾಡಿಕೊಳ್ಳಬಹುದು’’ ಎಂದು ಬುದ್ಧಿಯ ಮಾತು ಹೇಳುತ್ತಾರೆ. ಹೀಗೆ ಕುವೆಂಪು ಅವರಿಂದ ವಿಜ್ಞಾನದ ಓದಿನ ದೀಕ್ಷೆ ಪಡೆದ ಲಕ್ಷ್ಮಣ ರಾವ್ ಅವರಿಗೆ ಜೀವಿತಾವಧಿ ಪೂರ್ತಿ ಓದು-ಬರಹ-ಅಧ್ಯಾಪನ ಎಲ್ಲವೂ ವಿಜ್ಞಾನವೇ ಆಯಿತು.
‘‘ಲಕ್ಷ್ಮಣ ರಾವ್, ಜಿ.ಪಿ.ರಾಜರತ್ನಂ ಗರಡಿಯಲ್ಲಿ ತಯಾರಾದ ಬರಹಗಾರ’’ ಎನ್ನುವುದು ಪ್ರಸಿದ್ಧ ಅಂಕಣಕಾರ ಹಾ.ಮಾ.ನಾಯಕರ ಮಾತು. ಅವರ ಮತು ಅಕ್ಷರಶಃ ನಿಜ. ‘‘ನಾನು ರಾಜರತ್ನಂ ಗರಡಿಯಲ್ಲಿ ತಾಲೀಮು ಮಾಡಿದವನು. ಇಂದು ನನ್ನ ಬರವಣಿಗೆಯಲ್ಲಿ ಏನಾದರೂ ಉತ್ತಮ ಅಂಶಗಳಿದ್ದರೆ, ಅವು ನನಗೆ ದೊರೆತಿರುವುದು ರಾಜರತ್ನಂ ಅವರ ಕೃಪೆಯಿಂದ’’ ಎನ್ನುವ ವಿನಯ ಲಕ್ಷ್ಮಣ ರಾಯರದು. ಲಕ್ಷ್ಮಣ ರಾವ್ ಮೈಸೂರಿನ ಇಂಟರ್‌ಮೀಡಿಯಟ್ ಕಾಲೇಜಿನಲ್ಲಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ರಾಜರತ್ನಂ ಅವರ ವಿದ್ಯಾರ್ಥಿಯಾಗಿದ್ದರು. ಮುಂದೆ ತುಮಕೂರಿನ ಕಲಾಲೇಜಿನಲ್ಲಿ ಉಪನ್ಯಾಸಕರಾದಾಗ ಅಲ್ಲಿ ರಾಜರತ್ನಂ ಅವರ ಹಿರಿಯ ಸಹೋದ್ಯೋಗಿ. 1947ರ ಮಧ್ಯ ಭಾಗದಲ್ಲಿ ಲಕ್ಷ್ಮಣ ರಾವ್ ಮದ್ರಾಸ್ ವಿಶ್ವವಿದ್ಯಾನಿಲಯಕ್ಕೆ ‘ಪರಮಾಣುವಿನ ಕಥೆ’ ಪುಸ್ತಕ ಬರೆದುಕೊಡಬೇಕಾಯಿತು. ಅದರ ಭಾಷೆಯನ್ನು ಪರಿಷ್ಕರಿಸಿಕೊಡುವಿರಾ ಎಂದು ಕೇಳಿದಾಗ ರಾಜರತ್ನಂ ಹೇಳಿದರಂತೆ: ‘‘ಆಗುವುದಿಲ್ಲ...ನೀವು ಬರೆಯುವುದು, ನಾನು ತಿದ್ದುವುದು, ಅದು ನಿಮ್ಮದೇ ಬರವಣಿಗೆಯೇನೋ ಅನ್ನುವ ಹಾಗೆ ನೀವು ಪ್ರಕಟಿಸುವುದು-ಹೀಗೆ ಎಷ್ಟು ದಿನ ಮುಂದುವರಿಸಿಕೊಂಡು ಹೋಗುವ ಯೋಚನೆ ಮಾಡಿದ್ದೀರಿ ನೀವು?’’ ಲಕ್ಷ್ಮಣ ರಾಯರಿಗೆ ಇದನ್ನು ಕೇಳಿ ಕಕ್ಕಾಬಿಕ್ಕಿ.ಹಾಗಾದರೆ ನಾನೇನು ಮಾಡಲಿ ಹೇಳಿ. ಹಸ್ತಪ್ರತಿ ತಂದಿಟ್ಟುಕೊಂಡು ನನ್ನ ಜೊತೆಗೆ ಕುಳಿತುಕೊಳ್ಳಿ. ಇಬ್ಬರೂ ಒಟ್ಟಿಗೆ ಅದನ್ನು ಓದೋಣ. ಬರವಣಿಗೆಯಲ್ಲಿ ಲೋಪದೋಷಗಳು ಏಕೆ ಆಗುತ್ತವೆ, ಹೇಗೆ ಆಗುತ್ತವೆ ಎಂದು ತೋರಿಸುವುದಕ್ಕೂ ಅವು ಆಗದಂತೆ ನೋಡಿಕೊಳ್ಳುವುದು ಹೇಗೆ ಎಂದು ಉದಾಹರಣೆಗಳೊಂದಿಗೆ ವಿವರಿಸುವುದಕ್ಕೂ ಅನುಕೂಲವಾಗುತ್ತದೆ.-ಇದು ರಾಜರತ್ನಂ ಸಮಾಧಾನ. ಹೀಗೆ ಲಕ್ಷ್ಮಣ ರಾಯರು ರಾಜರತ್ನಂ ಗರಡಿಯಲ್ಲಿ ಬರವಣಿಗೆಯ ಪಟ್ಟುಗಳಲ್ಲಿ ಪಳಗಿದರು. ಇಂಥ ಗುರುವಿಗಾಗಿ ಇಂದು ದೀಪ ತೆಗೆದುಕೊಂಡು ಹುಡುಕಬೇಕಾಗಿದೆ.
ಕಳೆದ ಶತಮಾನದ ನಾಲ್ಕನೆಯ ದಶಕದಲ್ಲಿ ಬರವಣಿಗೆ ಪ್ರಾರಂಭಿಸಿದ ಲಕ್ಷ್ಮಣ ರಾವ್ ಜೀವಿತದ ಕೊನೆಯವರೆಗೂ ಅಧ್ಯಯನ ಮತ್ತು ಬರವಣಿಗೆಯನ್ನು ಒಂದು ವ್ರತದಂತೆ ಪಾಲಿಸಿಕೊಂಡು ಬಂದವರು. ಇಷ್ಟು ಸುದೀರ್ಘ ಅವಧಿಯಲ್ಲಿನ ಅವರ ಸಾಧನೆಗಳು ಗುಣಗಾತ್ರಗಳೆರಡರಲ್ಲೂ ದೊಡ್ಡದೇ. ವಿಜ್ಞಾನ ಸಾಹಿತ್ಯ ರಚನೆಯ ಜೊತೆಗೆ ಸಂಪಾದಕರಾಗಿ ವಿಜ್ಞಾನ ಸಾಹಿತ್ಯಕ್ಕೆ ಅವರ ಕೊಡುಗೆ ಅನನ್ಯವಾದುದು. ಮೈಸೂರು ವಿಶ್ವ ವಿದ್ಯಾನಿಲಯದ ಪ್ರತಿಷ್ಠೆಯ ಪ್ರಕಟಣೆಯಾದ ಪ್ರಬುದ್ಧ ಕರ್ನಾಟಕದ ಸುವರ್ಣ ಮಹೋತ್ಸವದ ಅಂಗವಾಗಿ ಸಂಪಾದಿಸಿದ ಎರಡು ವಿಜ್ಞಾನ ಸಂಪುಟಗಳು ಲಕ್ಷ್ಮಣ ರಾಯರ ವಿಜ್ಞಾನ ಪಾಂಡಿತ್ಯ, ಪ್ರತಿಭೆ ಮತ್ತು ಕಾರ್ಯಕ್ಷಮತೆಗಳಿಗೆ ಶೃಂಗ ಸದೃಶವಾದ ನಿದರ್ಶನಗಳು. ‘ಪ್ರಬುದ್ಧ ಕರ್ನಾಟಕ’ದ ಸೋದರ ಪತ್ರಿಕೆಯಾದ ‘ವಿಜ್ಞಾನ ಕರ್ನಾಟ’ಕ ಹಾಗೂ ‘ಬಾಲ ವಿಜ್ಞಾನ’ಪತ್ರಿಕೆಗಳ ಸಂಪಾದಕರಾಗಿ ಲಕ್ಷ್ಮಣ ರಾಯರು ಕನ್ನಡದಲ್ಲಿ ವಿಜ್ಞಾನ ಪತ್ರಿಕೋದ್ಯಮದ ಹೊಸ ಶಕೆಯನ್ನು ಆರಂಭಿಸಿದರು.ಕೇರಳ ಶಾಸ್ತ್ರೀಯ ಸಾಹಿತ್ಯ ಪರಿಷತ್ ಮಾದರಿಯಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತನ್ನು ಸ್ಥಾಪಿಸಿದ್ದು, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯವನ್ನು ಪ್ರೋತ್ಸಾಹಿಸುವ, ಪ್ರವರ್ಧಮಾನಗೊಳಿಸುವ ನಿಟ್ಟಿನಲ್ಲಿ ರಾಯರು ಇಟ್ಟ ಗಣನೀಯ ಹೆಜ್ಜ್ಜೆ. ಅಡ್ಯನಡ್ಕ ಕೃಷ್ಣಭಟ್ಟರ ಜೊತೆಗೂಡಿ ಸಂಪಾದಿಸಿರುವ ‘ಇಂಗ್ಲಿಷ್ ಕನ್ನಡ ವಿಜ್ಞಾನ ಕೋಶ’ ಕನ್ನಡಕ್ಕೊಂದು ಅಮೂಲ್ಯ ಕೊಡುಗೆ.
ಪರಮಾಣು ಚರಿತ್ರೆ, ಬೈಜಿಕ ವಿದ್ಯುತ್ತು, ವೈಜ್ಞಾನಿಕತೆ, ಹಾರಾಡುವ ತಟ್ಟೆಗಳು, ವಿಜ್ಞಾನ ದೀಪಕರು, ವಿಜ್ಞಾನಿಗಳೊಡನೆ ರಸ ನಿಮಿಷಗಳು, ಲೂಯಿ ಪಾಸ್ಚರ್ ಮೊದಲಾಗಿ ಮುವತ್ತಕ್ಕೂ ಹೆಚ್ಚು ವಿಜ್ಞಾನ ಪುಸ್ತಕಗಳ ಕೃತಿಕಾರರಾದ ಲಕ್ಷ್ಮಣ ರಾಯರು ಕರ್ನಾಟಕ ಸಾಹಿತ್ಯ ಅಕಾಡಮಿ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಂಸ್ಥೆ(ಎನ್‌ಸಿಇಆರ್‌ಟಿ) ಮೊದಲಾಗಿ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾದವರು.‘ವಿಜ್ಞಾನ ವಿಚಾರ’, ‘ಆರ್ಕಿಮೆಡಿಸ್’, ‘ಚಕ’್ರ, ‘ಗೆಲಲಿಯೊ’ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಕೃತಿಗಳು. ‘ಗೆಲಲಿಯೊ’ ಎಚ್.ಕೆ.ರಾಮಚಂದ್ರ ಮೂರ್ತಿಯವರೊಡಗೂಡಿ ಅನುವಾದಿಸಿರುವ ಬ್ರೆಕ್ಟನ ವಿಶ್ವ ವಿಖ್ಯಾತ ನಾಟಕ. 2016ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಪಾತ್ರರಾದ ಲಕ್ಷ್ಮಣರಾಯರನ್ನು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿಯು ಕಳೆದ ವರ್ಷ ಜೀವಮಾನ ಸಾಧನೆಯ ಪ್ರಶಸ್ತಿ ನೀಡಿ ಗೌರವಿಸಿತು.
‘ನೆನಪಿನ ಅಲೆಗಳು’-ಲಕ್ಷ್ಮಣ ರಾವ್ ಅವರ ಆತ್ಮ ಕಥನ ಎನ್ನಬಹುದಾದ ಒಂದು ವಿಶಿಷ್ಟ ಕೃತಿ. ಆತ್ಮ ಕಥನವಾದರೂ ‘ನಾನು’ ವಿಜೃಂಭಿಸದ, ‘ಅಹಂ’ನ ವೈಭವೀಕರಣವಿಲ್ಲದ, ಪೂರ್ವಾಗ್ರಹಗಳು ಮೂಗುತೂರಿಸದ ನಿರ್ವಿಕಾರ ನಿರೂಪಣೆಯ ಒಂದು ಸಾಮಾಜಿಕ ದಾಖಲೆ ‘ನೆನಪಿನ ಅಲೆಗಳು’. ಹಳೆಯ ಮೈಸೂರಿನ ಸಾಮಾಜಿಕ ಸ್ವರೂಪವನ್ನು ಕಾಣಿಸುವುದರಲ್ಲಿ,ಆಗಿನ ವಿದ್ವತ್ ಪ್ರಪಂಚದ (ಕುವೆಂಪು, ಪುತಿನ, ಮೂರ್ತಿರಾಯರು, ಆರ್.ಎಲ್.ನರಸಿಂಹಯ್ಯ, ವೀಣೆ ದೊರೆಸ್ವಾಮಿ ಅಯ್ಯಂಗಾರ್ ಹಾಗೂ ಅಪರೂಪದ ಸಂಪನ್ನ ರಾಜಕಾರಣಿ ಜಗಳೂರು ಮುಹಮ್ಮದ್ ಇಮಾಮ್) ಗುಣಸಂಪನ್ನತೆಯನ್ನು, ದೊಡ್ಡತನವನ್ನು, ಬೋಧಪ್ರದವಾಗುವಂತೆ ಎತ್ತಿ ತೋರಿಸುವುದರಲ್ಲಿ ಯಶಸ್ವಿಯಾಗಿದೆ. ಲಕ್ಷ್ಮಣ ರಾಯರಿಗೆ ವಿಜ್ಞಾನದಷ್ಟೇ ಇತರ ಜೀವಪರ ವಿಷಯಗಳಲ್ಲೂ ತೀವ್ರ ಆಸಕ್ತಿಯಿತ್ತು. ಅವರು ಮೂಢನಂಬಿಕೆ ನಿರ್ಮೂಲನಾ ಚಳವಳಿ, ಅಣ್ವಸ್ತ್ರ ವಿರೋಧಿ ಚಳವಳಿ, ಪರಿಸರ ಸಂರಕ್ಷಣಾ ಆಂದೋಲನ ಮೊದಲಾದವುಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.
ಸಂಗೀತ ಅವರಿಗೆ ಪ್ರಿಯವಾಗಿತ್ತು. ವಿದ್ಯಾರ್ಥಿಯಾಗಿದ್ದಾಗಿನಿಂದಲೇ ಸಂಗೀತದಲ್ಲಿ ಆಸಕ್ತಿ ಬೆಳೆದಿತ್ತು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎಂ.ಎಸ್.ಸಿ. ಓದುತ್ತಿದ್ದಾಗ ಸಹಪಾಠಿ ಗೆಳೆಯ ಕೆ.ಶ್ರೀನಿವಾಸನ್, ರಾಯರಿಗೆ ಸಂಗೀತ ಮತ್ತು ಮಾರ್ಕ್ಸ್ ಸಿದ್ಧಾಂತವನ್ನು ಪರಿಚಯಿಸಿದ್ದರಂತೆ. ಹೀಗೆ ಕುದುರಿದ ಆಸಕ್ತಿಯಿಂದಾಗಿ ಲಕ್ಷ್ಮಣ ರಾಯರು ಆಗಾಗ್ಗೆ ವಿಜ್ಞಾನಕ್ಕೆ ರಜೆ ಕೊಟ್ಟು ಶಾಸ್ತ್ರೀಯ ಸಂಗೀತದಲ್ಲಿ ಅಭಿರುಚಿ ಬೆಳೆಸಿಕೊಂಡರು. ಪಾಶ್ಚಾತ್ಯ ಸಂಗೀತ, ಹಿಂದೂಸ್ತಾನಿ ಸಂಗೀತ, ವೀಣೆ ಅವರಿಗೆ ಹೆಚ್ಚು ಪ್ರಿಯವಾಗಿತ್ತು. ಈ ಆಸಕ್ತಿಯಿಂದಾಗಿ ಅವರಿಗೆ ವೀಣೆ ದೊರೆಸ್ವಾಮಿ ಅಯ್ಯಂಗಾರ್ ಅವರಂಥ ಪ್ರಸಿದ್ಧರ ಗೆಳೆತನ ಸಾಧ್ಯವಾಗಿತ್ತು. ಈ ಪರಿಯ ಸಂಗೀತ ಪ್ರೇಮ ಮೈಸೂರಿನಲ್ಲಿ ‘ಗಾನ ಭಾರತಿ’ ಗಾಯನ ಸಂಸ್ಥೆ ಸ್ಥಾಪಿಸಲು ಅವರಿಗೆ ಪ್ರೇರಣೆ ಒದಗಿಸಿತ್ತು.
ಬಾಲ್ಯದಲ್ಲಿ ಕುವೆಂಪು ಅವರ ‘ಕಿಂದರಿಜೋಗಿ’ಗೆ, ದೊಡ್ಡವರಾದ ಮೇಲೆ ಪುತಿನ ಅವರ ‘ಗೋಕುಲ ನಿರ್ಗಮನ’ ಗೇಯ ನಾಟಕಕ್ಕೆ ಮಾರು ಹೋಗಿದ್ದ ಲಕ್ಷ್ಮಣರಾಯರಿಗೂ ಪುತಿನ ಅವರಿಗೂ ಭಿನ್ನ ಸ್ವಭಾವ-ಭಿನ್ನದೃಷ್ಟಿಯ ವಿಚಿತ್ರ ಸ್ನೇಹ. ‘‘ನೀವು ಎಷ್ಟು ವಿಜ್ಞಾನ ಅಭ್ಯಾಸ ಮಾಡಿದರೂ ಅಷ್ಟೆ, ಎಷ್ಟು ಮಾರ್ಕ್ಸ್, ಲೆನಿನ್ ಓದಿದರೂ ಅಷ್ಟೆ; ಯೂ ಆರ್ ಎಸೆನ್ಷಿಯಲಿ ಅನ್ ಇಂಡಿಯನ್. ನೋಡಿ, ಕರ್ನಾಟಕ ಸಂಗೀತ ಕೇಳಿ ಆನಂದಿಸುತ್ತೀರಿ, ಮನೆಯಲ್ಲಿ ಸೊಗಸಾದ ಒಬ್ಬಟ್ಟು ಮಾಡಿಸುತ್ತೀರಿ; ಕನ್ನಡ ವಿಷಯದಲ್ಲಿ ನಿಮಗೆಷ್ಟು ಅಭಿಮಾನ ಇದೆ.ಇನ್ನೇನು ಬೇಕು? ನಿಮ್ಮ ಚಿಕ್ಕ ವಯಸ್ಸಿನಲ್ಲಿ ನಿಮಗೆ ಆ ಶಾನುಭೋಗಿಕೆ ಸಂಪರ್ಕ ಇತ್ತಲ್ಲಾ ಅದು ನಿಮ್ಮನ್ನು ಕಾಪಾಡಿದೆ, ನಮ್ಮ ಜನತೆಯ ಬಗ್ಗೆ ನಿಮಗೆ ಪ್ರೀತಿ ಸಂಪಾದಿಸಿಕೊಟ್ಟಿದೆ. ಅದಕ್ಕೇ ನೋಡಿ ನನಗೂ ನಿಮಗೂ ನಂಟು’’ ಎಂಬುದು ಪುತಿನ ಅಂಬೋಣ. ಆದರೆ ವಿಜ್ಞಾನದ ಅಭ್ಯಾಸವೇ ಆಗಲಿ, ಮಾರ್ಕ್ಸ್, ಲೆನಿನ್ ಓದುವುದೇ ಆಗಲಿ ‘ಅಭಾರತೀಯವೆನಿಸದ’ ಲಕ್ಷ್ಮಣ ರಾಯರಿಗೆ ಇದು ಅರ್ಥವಾಗುವುದಿಲ್ಲ. ಆದಾಗ್ಯೂ ನರಸಿಂಹಾಚಾರ್ಯರಂತಹ ವ್ಯಕ್ತಿಯ ಸ್ನೇಹ ಸಂಪಾದಿಸಿಕೊಟ್ಟ ಸಮಾನ ಅಭಿರುಚಿಗಳು ಮತ್ತು ಜೀವನ ಮೌಲ್ಯಗಳ ಬಗೆಗೆ ಅವರಿಗೆ ಹೆಮ್ಮೆ ಎನಿಸುತ್ತದೆ.
ಇದು ಇನ್ನಿಲ್ಲವಾದ ಪ್ರೊ. ಜೆ.ಆರ್.ಲಕ್ಷ್ಮಣ ರಾವ್. ಅವರು ಇನ್ನಿಲ್ಲ. ಅವರೊಬ್ಬ ಮಾದರಿ ಮನುಷ್ಯ. ಅನುಕರಣೀಯ ಹೆಜ್ಜೆಗಳನ್ನು ಮೂಡಿಸಿ ನಮ್ಮನ್ನು ಅಗಲಿದ್ದಾರೆ