ಮುದ ಕೊಡುವ ಜನಪದ ಮುಕ್ತಕಗಳು

Update: 2018-01-13 18:54 GMT

‘ನೀಲಿ ಮೂಗಿನ ನತ್ತು’ ವಿಶಿಷ್ಟವಾದ ಅನನ್ಯತೆಯ ಮೆರುಗಿನ ಲೇಖನಗಳ ಸಂಕಲನ. ಇದರ ವೈಶಿಷ್ಟ್ಯ ಇರುವುದು ಮುಖ್ಯವಾಗಿ ಮೂರು ನೆಲೆಗಳಲ್ಲಿ. ಒಂದು, ಬುದ್ಧಿ-ಇಂದ್ರಿಯಗಳು ಗ್ರಹಿಸಿರುವ ಘಟನಾ ಪ್ರಧಾನವಾದ ಅನುಭವಗಳದು. ಎರಡನೆಯದು, ಜನಪದ ಸಂಕಥನದ್ದು. ಮೂರನೆಯದು ಗ್ರಾಮೀಣ ಜನಪದವನ್ನು ಮಾನವೀಯ ಆಸಕ್ತಿಗಳ ಜೊತೆಗೇ ಅಧ್ಯಯನದ ಕಣ್ಣುಗಳಿಂದ ನೋಡುವ ಆಧುನಿಕ ಸಂವೇದನೆಯದು. ಇವೆಲ್ಲದರಿಂದಾಗಿ ಇಲ್ಲಿ ನೆರೇಷನ್/ಕಥನ ಎನ್ನುವುದು ಆಧುನಿಕ ಜನಪದ ಸಂಕಥನವಾಗಿರುವುದು ಸುಜಾತ ಅವರ ಬರವಣಿಗೆಯ ಇನ್ನೊಂದು ಅತಿಶಯವಾಗಿದೆ.


ಪುರುಷ ಸಂವೇದನೆಗಿಂತ ಭಿನ್ನವಾದ ಮಹಿಳಾ ಸಂವೇದನೆಯೆಂಬುದೊಂದು ಇದೆಯೇ ಎನ್ನುವ ವಿಷಯದಲ್ಲಿ ಚರ್ಚೆ ಹಳೆಯದು. ಸ್ತ್ರೀಗೆ ಅವಳದೇ ಆದ ಅನುಭವ ಲೋಕವಿದೆ, ಅವಳಿಗೆ ವಿಶಿಷ್ಟವಾದ ಸಂವೇದನೆಯಿಲ್ಲ ಎನ್ನುವವರೂ ಇದ್ದಾರೆ. ಇಂಗ್ಲಿಷ್‌ನ ಸೆನ್ಸಿಬಲಿಟಿ ಪದಕ್ಕೆ ಸಮಾನಾರ್ಥವಾಗಿ ಬಳಸುವ ಸಂವೇದನೆ ಪದಕ್ಕೆ ಕನ್ನಡ ನಿಘಂಟಿನಲ್ಲಿ ಇಂದ್ರಿಯಗಳಿಂದ ಅಥವಾ ಬುದ್ಧಿಯಿಂದ ಲಭಿಸುವ ಜ್ಞಾನ, ಅನುಭವ, ಅರಿವು, ತಿಳಿವಳಿಕೆ, ಶಕ್ತಿ, ಸಾಮರ್ಥ್ಯ, ಭಾವ ಸೂಕ್ಷ್ಮತೆ ಎಂಬೆಲ್ಲ ಅರ್ಥಗಳಿವೆ. ನಿಘಂಟಿನ ಅರ್ಥ ಹಿಡಿದೇ ಹೊರಟರೂ ಇಂದ್ರಿಯಜನ್ಯವಾದ ಜ್ಞಾನ ಅಥವಾ ಅನುಭವ ಸ್ತ್ರೀಯರಲ್ಲಿ ಪುರುಷರಿಗಿಂತ ವಿಭಿನ್ನವೂ ವಿಶಿಷ್ಟವೂ ಆಗಿರಲು ಸಾಧ್ಯ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ನಂಜನಗೂಡು ತಿರುಮಲಾಂಬ ಅವರಿಂದ ಹಿಡಿದು ಇವತ್ತಿನ ವೈದೇಹಿವರೆಗೆ ನೋಡಿದಾಗ ಅವರ ರಚನೆಗಳಲ್ಲಿ ಪುರುಷರಿಗಿಂತ ವಿಭಿನ್ನವಾದ, ವಿಶಿಷ್ಟವಾದ ಸಂವೇದನೆ ಕೆಲಸಮಾಡಿರುವುದನ್ನು ನಾವು ಕಾಣುತ್ತೇವೆ. ಇದಕ್ಕೆ ಇತ್ತೀಚಿನ ಉದಾಹರಣೆ ಶ್ರೀಮತಿ ಹೆಚ್. ಆರ್. ಸುಜಾತ ಅವರ ನೀಲಿ ಮೂಗಿನ ನತ್ತು, ಸ್ಮತಿ ವೃತ್ತಾಂತ ಮಾದರಿಯ ಲೇಖನಗಳ ಸಂಕಲನ.

‘ನೀಲಿ ಮೂಗಿನ ನತ್ತು’ ವಿಶಿಷ್ಟವಾದ ಅನನ್ಯತೆಯ ಮೆರುಗಿನ ಲೇಖನಗಳ ಸಂಕಲನ. ಇದರ ವೈಶಿಷ್ಟ್ಯ ಇರುವುದು ಮುಖ್ಯವಾಗಿ ಮೂರು ನೆಲೆಗಳಲ್ಲಿ. ಒಂದು, ಬುದ್ಧಿ-ಇಂದ್ರಿಯಗಳು ಗ್ರಹಿಸಿರುವ ಘಟನಾ ಪ್ರಧಾನವಾದ ಅನುಭವಗಳದು. ಎರಡನೆಯದು, ಜನಪದ ಸಂಕಥನದ್ದು. ಮೂರನೆಯದು ಗ್ರಾಮೀಣ ಜನಪದವನ್ನು ಮಾನವೀಯ ಆಸಕ್ತಿಗಳ ಜೊತೆಗೇ ಅಧ್ಯಯನದ ಕಣ್ಣುಗಳಿಂದ ನೋಡುವ ಆಧುನಿಕ ಸಂವೇದನೆಯದು. ಇವೆಲ್ಲದರಿಂದಾಗಿ ಇಲ್ಲಿ ನೆರೇಷನ್/ಕಥನ ಎನ್ನುವುದು ಆಧುನಿಕ ಜನಪದ ಸಂಕಥನವಾಗಿರುವುದು ಸುಜಾತ ಅವರ ಬರವಣಿಗೆಯ ಇನ್ನೊಂದು ಅತಿಶಯವಾಗಿದೆ.

ಇಲ್ಲಿನ ಬರವಣಿಗೆಯ ಆಕರಗಳು ಲೇಖಕಿಯ ಎಳವೆಯ ಅನುಭವಗಳು. ಗ್ರಾಮೀಣ ಸಮಾಜವೇ ಎದ್ದು ಬಂದು ಮಾತನಾಡುತ್ತಿರುವಂತೆ ಭಾಸವಾಗುವ ಅನುಭವಗಳು. ನಿರೂಪಣೆಯಲ್ಲಿನ ಪ್ರಾಮಾಣಿಕತೆ ಮತ್ತು ಭಾಷೆಯಲ್ಲಿನ ಎಗ್ಗಿಲ್ಲದ ಜಾನಪದೀಯತೆಯಿಂದಾಗಿ ಈ ಅನುಭವಗಳಿಗೆ ಸಾಚಾತನ ಮತ್ತು ಅಧಿಕೃತತೆ ತಾನೇ ತಾನಾಗಿ ಪ್ರಾಪ್ತವಾಗುತ್ತದೆ. ಇದು ಓದುಗರನ್ನು ತನ್ನೆಡೆಗೆ ಸೆಳೆದುಕೊಳ್ಳುವ ಸುಜಾತ ಅವರ ಬರವಣಿಗೆಯ ಮೊದಲ ಗುಣ. ಹೀಗೆ ಆಪ್ತವಾಗಿ ಓದಿಸಿಕೊಳ್ಳುತ್ತಲೇ ಗ್ರಾಮೀಣ ಸೊಗಡಿನ ಭಾಷೆಯ ಅರ್ಥವಂತಿಕೆ ‘ಸೊರ’ಬಿಟ್ಟುಕೊಟ್ಟಂತೆ (ಕರೆಯುವ ಆಕಳ ಸೊರ ಬಿಟ್ಟ ಕೆಚ್ಚಲಿನ ಅಮೃತಧಾರೆಯಂತೆ) ಜನಪದ ವಿವೇಕದ ಹೊಳಹುಗಳ ಚಿಮ್ಮಿಸಿ ಹರಟೆಯ ತೆವಲಿನಾಚೆಗಿನ ಘನ ನೋಟದತ್ತ ನಮ್ಮನ್ನು ಒಯ್ಯುವುದು ಇನ್ನೊಂದು ಗುಣ. ಅಂದರೆ, ಇಲ್ಲಿನ ಅನುಭವ ಲೋಕದ ಒಡಲೊಳಗಿನಿಂದ ಹೊಮ್ಮುವ ಜನಪದ ಸಂವೇದನೆಯಿಂದ ದಕ್ಕುವ ‘ವಿವೇಕ’ ಮುಖ್ಯವಾಗುತ್ತದೆ. ಈ ಜಾನಪದ ‘ವಿವೇಕ’ವನ್ನು ಆಧುನಿಕ ಮನಸ್ಸು ಗ್ರಹಿಸುವ ಪರಿಯಿಂದಾಗಿ, ಇವತ್ತಿಗೆ ಜ್ಞಾನವಾಗಿ, ಮೌಲ್ಯವಾಗಿ ಸ್ವೀಕಾರಾರ್ಹವಾಗುತ್ತದೆ. ನನ್ನೀ ಮಾತಿನ ಸಮರ್ಥನೆಗೆ ಇಲ್ಲಿನ ಒಂದೊಂದು ಲೇಖನದಿಂದಲೂ ಪ್ರಮಾಣ ವಾಕ್ಯಗಳನ್ನು ಹೆಕ್ಕಿ ಕೊಡುವಷ್ಟು ಸಮೃದ್ಧಿ ಇಲ್ಲಿದೆ. ಆದರೆ ಮುಖ್ಯವಾಗಿ ಪ್ರಕಾಶಮಾನವಾದ ಕೆಲವೊಂದು ಬರಹಗಳನ್ನು ಈ ಅಂಕಣದ ವ್ಯಾಪ್ತಿಯೊಳಗೆ ಗಮನಿಸಬಹುದು.

 ‘ಬೂತಾಳಿ, ಕಡ್ಡಿಪುಡಿ ಸಣ್ಣ’, ‘ಆಲೂರಿಗೆ ಆಲೂಗೆಡ್ಡೆ ತಂದ ಗೌಡ್ರು’, ‘ಮಾಲಣ್ಣನ ಪೋಲಿ ಬೈಗುಳ’, ‘ಹೊನ್ನಳ್ಳಿ ಅಮ್ಮ’, ‘ಹೊಟ್ಟುರಿಯೆಂಬ ಬೇಗೆ’, ‘ಕರುಳುಬ್ಬರದ ಹೊಂಬೆಳಕು’ ‘ದೊಡ್ಡನ ನಂದಗೋಕುಲ’, ಮೊದಲಾದವು ಜನಪದ ಸಂವೇದನೆ ಮತ್ತು ವಿವೇಕದ ದೃಷ್ಟಿಯಿಂದ ಮುಖ್ಯವಾಗಿ ಗಮನಿಸ ಬೇಕಾದ ಬರಹಗಳು. ಮೂರು ಮಕ್ಕಳನ್ನು ಸಾಕಿಸಲಹಿ ದೊಡ್ಡವರನ್ನಾಗಿ ಮಾಡಿದ ಲಕ್ಕಮ್ಮ ಕ್ಯಾನ್ಸರ್‌ನಿಂದ ವಿಧಿವಶಳಾದಂತೆಯೇ ಅವಳ ಮಗ ಭೂತಾಳಿ ಮೈಮೇಲೆ ದೇವರು ಬರುವ ಶಾಸ್ತ್ರ ಹೇಳೋದು ಕಲಿತು, ಅದನ್ನು ಹೊಟ್ಟೆಹೊರೆಯುವ ಮಾರ್ಗವಾಗಿಸಿಕೊಂಡು, ದುಡ್ಡುಕಾಸು ಮಾಡ್ಕೊಂಡು ಚೆನ್ನಾಗಿದಾನೆ ಎಂಬ ಭಾಷ್ಯದೊಂದಿಗೆ ಜನಪದ ನಂಬಿಕೆಗಳ ಇಳಿಜಾರನ್ನು ಲೇಖಕಿ ಗುರುತಿಸುತ್ತಾರೆ.

ಸುಮಾರು ಅರುವತ್ತು ಎಪ್ಪತ್ತು ವರ್ಷಗಳಿಂದ ಇವತ್ತಿನ ತನಕ ರೈತರ ಜೀವನದೊಂದಿಗೆ ಜೂಜಾಡುತ್ತಲೇ ಇರುವ ‘ಆಲೂರಿಗೆ ಆಲೂಗೆಡ್ಡೆ ತಂದ ಗೌಡ್ರು’ ಆಲೂಗೆಡ್ಡೆ ಮಾರಾಟದ ಕನಸಿನಲ್ಲಿರುವಾಗಲೇ, ‘‘ಮನುಶನ ಈ ಭಂಗ ಬಾಳಿಗೀಟು ಬೆಂಕಿ ಹಾಕ, ಬಾ. ಊರ ತುಂಬ ಹರವಕಂದು ಬಿದ್ದಿರೊ ಭೂಮಿನೆ ಬುಟ್ಟು ‘ಬದಿಕ್ಕಳಿ ನನ್ನ ಮಕ್ಕಳೆ’ ಅಂತ ಆ ತಾಯಿ ನಿರುಮ್ಮಳಾಗಿ ಮಲಗಿದ್ರೆ ಈ ಮುಖಡೇವು ಬದಿನ ಮೇಲೆ ಈಸು ಗೆಂಡೆ ಹಾಕ್ಕಂಡು ಕಾಯ್ಕಂದು ಮಲ್ಕಂದವಲ್ಲ. ಏನ ಹೇಳನ ಹೇಳು ಮತ್ತೇ...’’ ಹಳೆಯ ವಿವೇಕಗಳು ಹೊಸ ಆಮಿಷಗಳಿಗೆ ಜಾಗ ಮಾಡಿಕೊಡುತ್ತಿರುವ ವ್ಯಂಗ್ಯವಿದೆ. ‘ಮಾಲಣ್ಣನ ಪೋಲಿ ಬೈಗುಳ’ದಲ್ಲಿ ಮಾಲಣ್ಣನ ಜೇನುಕಡಿತ ಅವಸ್ಥೆಗಳು ನಗೆ, ಕನಿಕರ ಎರಡನ್ನೂ ಹುಟ್ಟಿಸುವುದಾದರೂ ಊರಿಗೊಂದು ರಸ್ತೆ ಬೇಕು ಎನ್ನುವ ಗೌಡ್ರ ನಿರ್ಧಾರದಲ್ಲಿ ಹಳ್ಳಿಗಾಡಿನ ಜನಪದ ಆಧುನಿಕತೆಗೆ ಹೊರಳುತ್ತಿರುವ ಇಂಗಿತವಿದೆ.

‘‘ಹರ್ಯೋನೀರಿಗೆ ದೊಣ್ಣೆನಾಯಕನ ಅಪ್ಪಣೇನಾ ಅಂತ - ಅಲ್ಲಲ್ಲೇ ಬದ ಹಾಕಂದು, ನೀರಹಾಯಿಸಕಂದು ಯಾತ ಮಾಡಕಂದು ತಮಗೆಟ್ಕಿ ಹಂಗೆ ವ್ಯವಸಾಯವ ಮಾಡಕ್ಕೆ ರೈತರ ಬುಡೋದ ಬುಟ್ಟು ಇದ್ಯಾವ ಬದುಕು’’ ಎಂದು ವಾಟೆಹೊಳೆ ಡ್ಯಾಮನ್ನು ವಿರೋಧಿಸುವುದರಿಂದಲೇ ಪ್ರಾರಂಭವಾಗುವ ‘ಹೊನ್ನಳ್ಳಿ ಅಮ್ಮ’ನ ಜನಪದ ವಿವೇಕ ಹೇಳುವುದು, ‘‘ವಾಟಹೊಳೆ ಅನ್ನೊ ಸಣ್ಣಹಳ್ಳಕ್ಕೆ ..ತಿಳಿವಳಿಕಿಲ್ಲದೆ ತಂದು ಡ್ಯಾಂಮ್ ಕಟ್ಟ್ಟಿದ್ದು’’ ಆಧುನಿಕತೆಯ ತಪ್ಪುನಿರ್ಧಾರ. ಆಧುನಿಕತೆಯ ಆಕ್ರಮಣದಿಂದಾಗಿ ಗ್ರಾಮೀಣ ಜನಪದ ವಿವೇಕ ಸಡಿಲಗೊಳ್ಳುತ್ತಿರುವ ಪ್ರಕ್ರಿಯೆ ಮತ್ತು ಪ್ರತಿರೋಧಗಳನ್ನು ಈ ಬರಹಗಳಲ್ಲಿ ಕಾಣಬಹುದಾಗಿದೆ.

‘ಕರುಳುಬ್ಬರದ ಹೊಂಬೆಳಕು’-ದೀಪಾವಳಿ ಸಂದರ್ಭದ ತಿಪ್ಪಮ್ಮನ ಹಬ್ಬ ಒಂದು ಮನೋಹರವಾದ ಜಾನಪದ ಆಚರಣೆಯ ರೂಪಕವಾಗಿ ನಮ್ಮ ಗಮನ ಸೆಳೆಯುತ್ತದೆ. ಜನರು ಭಕ್ತಿಯಿಂದ ಅರ್ಪಿಸಿದ ಎಡೆ ಉಂಡು ತಿಪ್ಪಮ್ಮ, ‘‘ನನ್ನ ಮೈ ಕರಗಿ ನಿಮ್ಮ ಮಳೆಬೆಳೆ ಸಮ್ರುದ್ದಿಯಾಗಲಿ ನನ ಮಕ್ಕಳೆ. ನನ್ನ ಕರುಳುಬ್ಬರದಲ್ಲಿ ನಿಮ್ಮ ಬೆಳೆ ಹೆಚ್ಚಿ ನಿಮ್ಮನೆ ಹೊಂಬೆಳಕಾಗಲಿ ಸಂದೂಬೈಗೂ ಗೇದು ಉಣ್ಣೋ ನನ್ ಮಕ್ಳೆ’’ ಎಂದು ವರ ಕೊಟ್ಟು ತಿಪ್ಪೆ ಅನ್ನೂ ಕಸದ ರಾಶೀಲಿ ಕರಗೋಗ್ತಾಳೆ. ಇನ್ನು ಬಲಿಪಾಡ್ಯಮಿ ದಿಸ ಮನೆಮನಿಗೆ ಬಂದ ಬಲಿ ಚಕ್ರವರ್ತಿ ಈ ಊರಿನ ಜನರ ದೀವಳಿಗೆ ಹಬ್ಬ ಅಚರಣೆಯ ಈ ಪರಿ ಕಂಡು ‘‘ತಾನೂ ಊಟದ ಮನೆ ಮೆಟ್ಲ ಮೇಲೆ ಕಾಲು ನೀಡಕಂಡು ಕೂರನು.

ಅಲ್ಲಿಂದ ದೇವರ ಮನೆ, ಕೊಟ್ಟಿಗೆ, ಅಡುಗೆ ಮನೆ ತಯ್ಯಿರಿಯ ಕಾಣತಾ...ಹಾಕೋ ಎಡೆ ರುಚಿ ನೋಡಿ ಹೋಗದೂ ಅಲ್ಲದೆ ವಾಮನನ ಪ್ರವೇಶವೇ ಇಲ್ಲದಿರ ಈ ಊರ ಜನರ, ಹಸುಮಗಿನಬುದ್ದಿಗೆ ಬೆರಗಾಗಿ ಬೆರಳ ಮೂಗಿನ ಮೇಲೆ ಇಟ್ಕಂಡು ನೋಡತಾ... ಕೂರ್ತಾನೆ’’ ಅಂದರೆ, ವಾಮನನ ಪ್ರವೇಶಕ್ಕೂ ಆಸ್ಪದವಿಲ್ಲದ ಇಲ್ಲಿನ ಜನಪದ, ಜನಪದೀಯ ಆಚರಣೆಯ ಹಿಂದಿನ ಶ್ರದ್ಧೆ, ವಿವೇಕಗಳ ಮಹಿಮೆ ಹೇಗಿದ್ದೀತು! ಮೂಗಬಸವನ ದೆವ್ವವಂತೂ, ‘‘...ಬ್ಯಾಡ..ನೀನೂ ರೈತನ ಮಗನೆ. ನಾನೂ ರೈತನ ಮಗನೆ. ತಲೆ ಎತ್ತಿ ನಡೆಯಾದು ಬ್ಯಾಡ. ತಲೆ ಬಗ್ಗಸ್ಕಂಡು ದುಡಿಮೆ ಮಾಡೋರು ಕನೊ ತಮ್ಮಣ್ಣ ನಾವು’’ ಎಂದು ಸತ್ಯ ಕತೆಗಳನ್ನು ಹೇಳುತ್ತಾ ದಂಗುಬಡಿಸುತ್ತದೆ. ‘ದಾಸಯ್ಯ ಹೆಂಡ್ತೀಗ್ ಹೊಡ್ದಂಗೆ’ ಪುರುಷ ಪೌರುಷದ ರಸಿಕ ವಿಡಂಬನೆಯಾದರೆ, ‘ಕುರುಬೋಳಿ’, ‘ದಸರಾ ನೋಡಿ ಬಂದ ಗಿಣಿ’ ಥೇಟ್ ಕಿನ್ನರ (ಫೇರಿ) ಕತೆಗಳಂತೆಯೇ ಸೈ!

ಇನ್ನು ಸಂಕಲನಕ್ಕೆ ಶೀರ್ಷಿಕೆಯಾಗಿರುವ ‘ನೀಲಿ ಮೂಗಿನ ನತ್ತು’ ನಮ್ಮ ಅಂತ:ಕರಣವನ್ನು ಆರ್ಧ್ರಗೊಳಿಸುವ ಪ್ರಸಂಗ. ಕಾಯಿಲೆ ಬಿದ್ದ ಕರುಳ ಕುಡಿಯನ್ನು ಉಳಿಸಿಕೊಳ್ಳುವ ಸಲುವಾಗಿ ಮೂಗಿನ ನತ್ತನ್ನು ಅಡ ಇಡಲು ಬಂದ ನೀಲಿಯ ಅಗತ್ಯದ ತುರ್ತನ್ನು ಅರಿತೂ ರಂಗವ್ವಾರ ಮನಸ್ಸು, ‘‘ನಿನಗೂ ತಿವಾಸ ಕಣೇ ನೀಲಿ.ಈಂಥ ಇಳೇಹೊತ್ನಲ್ಲಿ, ಎದೆ ವಳಗೆ ನೋವ ಕಟ್ಟಕಂದು ಮಗ ಉಳುಸ್ಕಳಕೆ ಅಂತವ, ನಿನ್ನ ಮೈಮೇಲೆ ಇರೊದೊಂದ ವಡವೆಯ ಬಿಚ್ಚಕಂದು ತಂದು ನನ್ನ ಕೈಗಿಡ್ತಿದಿಯಲ್ಲಾ...ಆ ನೋವು ನನ್ನ ಮನೆಗೆ ಸುತ್ತಕಳ್ಲಿ ಅಂತವ...ಈಮನೆ ವಳಗೆ ಮಕ್ಕಳು ಮರಿ ಬದುಕ ಮಾಡಬೇಕೋ ಬೇಡವೋ ಹೇಳು ನೋಡಾನ’’ ಎಂದು ನೈತಿಕ ಭಯ ಕಕ್ಕುಲಾತಿಗಳಿಂದ ನಿರಾಕರಿಸುತ್ತಾಳಾದರೂ ಕೊನೆಯಲ್ಲಿ ಅತ್ತೆಮ್ಮಗೆ ಸೊಸೆ ಮೂಗಿನ ನತ್ತು ಒಲೆ ಉರೀಲಿ ಬೆಳಗುವುದು ಕಾಣಿಸುತ್ತದೆ. ತಂಬೂರಿ ಜವರಯ್ಯನ ದನಿಯಿಂದಾಗಿ ಬರಹದ ದನಿ ಆಧ್ಯಾತ್ಮಿಕತೆಯತ್ತ ಚಾಚಿಕೊಳ್ಳುತ್ತೆಯಾದರೂ ಊಳಿಗಮಾನ್ಯ ವ್ಯವಸ್ಥೆಯ ಕರಿನೆರಳು ಉದ್ದಕ್ಕೂ ಆವರಿಸಿಕೊಂಡಿರುವುದೇ ಇದರ ದುರಂತ ಮರ್ಮವಾಗಿದೆ.

ಹೀಗೆ ತಮ್ಮ ಊರಿನ ಸಂಕಥನ ಮಾಡುವ ಸುಜಾತ ಅವರ ಕಥನದ ಭಾಷೆ ನಮ್ಮ ಹಳೇ ಮೈಸೂರಿನ ಮಂಡ್ಯ, ಹಾಸನ ಹಾಗೂ ಬೆಂಗಳೂರು ಮಗ್ಗುಲ ರಾಮನಗರ.ಮಾಗಡಿ,ಕನಕಪುರ ಕಡೆಯ ಒಕ್ಕಲು ಮಕ್ಕಳ ಭಾಷೆ. ಈ ಗ್ರಾಮ್ಯ ಭಾಷೆಯ ಕಸುವಿನ ಜೊತೆಗೆ ಲೇಖಕಿಯ ಸೃಜನಶೀಲ ಪ್ರತಿಭೆಯ ಕಸುವು ಸೇರಿ ಇಲ್ಲಿನ ಬರಹಗಳಲ್ಲಿ ಭಾಷೆ ಎಂಬೋದು ಜೋಗದ ಜಲಪಾತದಂತೆ ಧುಮುಧುಮಿಸುತ್ತದೆ. ಈ ಗಂಗಾವತರಣ ನೋಡಿ:
‘‘ಎಲ್ಲಿತ್ತೋ ಹೆಮ್ಮಾರಿ ಅಂಥ ಏಮಾರಿ ಮಳೆ...ಮೋಡ ಅನ್ನವು ಎಲ್ಲಿದ್ದವೋ...ಎನೋ! ಧುಮಗುಟ್ಕಂಡು

ಬರೊ ಹುಚ್ಚಿಡ್ಕಿರಂಗೆ, ಗುಡುಗು ಮಿಂಚು ಜೊತಿಗೆ ಮಳೆ ಅಳಾನೂವೆ ಅಂಗೆ ತಬ್ಬಕಂಡು ಬತ್ತಾ ಅವೆ. ತಲೆ ಎತ್ತಿ ನೋಡುದ್ರೆ ಆಕಾಶ ಅನ್ನ ಆಕಾಶನೆ ಪೂರ ಮೆರವಣಿಗೆ ಮಾಡ್ಕಂದು, ಅಳ್ತಾ ತವರಿಗೆ ಬರೊ ಗೌರಮ್ಮ ಗಂಗೆ ಅಬ್ಬರನೂ ಜತಿಲಿ ಕಟ್ಕಂಡು ಸರಸರನೆ ಇಳದು ಬತ್ತಾವಳೆ.’’

ಇದು ಮಳೆಯ ಆರ್ಭಟದ ಚಿತ್ರವಾದರೆ, ಪ್ರೀತಿಯ ಅವತರಣದ ಈ ಚಿತ್ರ ನೋಡಿ: ‘‘ ...ಇನ್ನೂ ಇರೊ ಅವಳ ಪ್ರಾಯದ ಮಿಂಚು ಇವನ ಮನಸಲ್ಲಿ ಕರುಣೆಯ ಸಾಣೆ ಹಿಡಿತಾ ಸೆಳಿತಾ ಇವಳನ್ನೂ ಎಳಿತಿತ್ತು. ಒತ್ತಾಸೆಗೆ ನಿಂತ ಅವನ ಮೇಲೆ ಇವಳುಗೂವೆ, ವಳಗೆ ಮುಚ್ಚಿಟ್ಟಿದ್ದ ಆಸೆ ಅನ್ನ ಕೂಸು ಹುಟ್ಟಿ ಮೊಲೆ ಹಾಲಿಗೆ ಬಾಯ ಬುಡೊ ಕಂದನಂಗೆ ಸಂದೂ...ಲು ಕನವರಸುತಾ ಇತ್ತು. ಎಂದೂ ಊರೊಳುಗಡೇ ಹೆಸರು ಕೆಡಸ್ಕಳದಿರೊ ಯಾಲಕ್ಕಿ, ಒಂಟಿ ಎಂಗಸಿನ ಅಕ್ಕರೆ ಮಾಡದ ಕಂಡು ಊರು ಅನ್ನದು ಅವನ ಮೇಲೆ ಆಗೀಗ ಅದರ ಪಾಡಿಗೆ ಅದು ನಿಗಾ ಇಡತಾ ಇತ್ತು. ಆದ್ರೂ... ಇವರಿಬ್ಬರೂ ಹತ್ತುರಕ್ಕೆ ಬಂದದ್ದು ಸುಳ್ಳೇ...ನಾಗಿರಲಿಲ್ಲ.’’

 -ಲೇಖಕಿಗೆ ಕೈವಶವಾಗಿರುವ ಗ್ರಾಮ್ಯ ಭಾಷೆಯ ಸೊಗಡು ಮತ್ತು ಕಾವ್ಯಾತ್ಮಕ ವರ್ಣನೆಯಿಂದಾಗಿ ಇಲ್ಲಿನ ಬಹುತೇಕ ಬರಹಗಳು ಜಾನಪದ ಪುರಾಣಗಳಂತೆಯೂ ಭಾಸವಾಗುತ್ತದೆ.ಸುಜಾತ ಅವರ ಮನೋಹರ ಕಥನ ಶೈಲಿಗೆ ಕುಂದಣವಿಟ್ಟಂತೆ ಬರುವ-
 ಸುಳ್ಳು ಹೇಳೋ ಸುಕ್ರ ಅಂದ್ರೆ...ವಾಟೇ ಕೊಳವೇಲಿ ಒಂಬತ್ತು ಆನೆ ನುಗ್ಗಿ, ಮರಿ ಆನೇನೂ ನುಗ್ಗಿ ಮರಿ ಆನೆ ಬಾಲ ಬಂದು ಅದರೊಳಗ ಸಿಕ್ಕಿ ಹಾಕ್ಕಂಡಿತ್ತು ಕನೋ..
ಇಂಥ ಚಾಟು ಮಾತಗಳು ಹಾಗೂ-

‘‘ನೆರೆ ಮನೆ ಮುರುದು ಬಿದ್ದರೆ ಕರ ಕಟ್ಟಕೆ ಜಾಗಾತು’’-ಇಂಥ ಗಾದೆ ಮಾತುಗಳು, ‘‘ಕೊಲ್ಲೋ ದೇವ್ರ ಎದ್ರುಗಿದ್ರೆ, ಬೆನ್ನಲೇ ಕಾಯೋ ದೇವ್ರ ಹುಟ್ಟಿರ್ತನೆ ತಗ...’’ಎಂಬಂಥ ಅನುಭವದ ಮಾತುಗಳು, ನೇಗ್ಲು, ನೊಗಮಿಣಿ, ಬೆರಣಿವಟ್ಲು, ಹುಲ್ಲುಕೊಣಬೆಯಂಥ ಗ್ರಾಮೀಣ ಪಾರಿಭಾಷಿಕ ಪದಗಳು ಜಾನಪದ ಸೊಗಡು-ಸತ್ತ್ವಗಳನ್ನೂ ಸೊಗಸಾಗಿ ಸ್ಫುರಿಸುತ್ತವೆ. ಸ್ತ್ರೀ ಸಂವೇದನೆಗೆ ಮಾತ್ರ ಒಲಿಯಬಹುದಾದಂಥ, ದಕ್ಕಬಹುದಾದಂಥ, ‘‘ಬೂಮ್ತಾಯ ಜೀವಂತ ರೂಪದ’’ ಇಲ್ಲಿನ ಬರಹಗಳು ಮುದಕೊಡುವ ಜನಪದ ಮುಕ್ತಕಗಳು. ಹುಟ್ಟಿದ ನೆಲದ ‘‘ಕಳ್ಳುಬಳ್ಳಿಗಳ ನಂಟಿನ’’ ಸತ್ವ ಹೀರಿಕೊಂಡು ಬೆಳೆದಿರುವ ಇಂಥ ಜನಪದ ಮುಕ್ತಕಗಳನ್ನು ಕೊಟ್ಟಿರುವ ಎಚ್.ಆರ್.ಸುಜಾತಾ ಅವರು ಅಭಿನಂದನಾರ್ಹರು ಎಂದು ಹೆೀಳಲು ಸಂತೋಷವಾಗುತ್ತದೆ.

Writer - ಜಿ.ಎನ್.ರಂಗನಾಥ ರಾವ್

contributor

Editor - ಜಿ.ಎನ್.ರಂಗನಾಥ ರಾವ್

contributor

Similar News