ಬಹುಮಾನದ ಆಸೆ ಒಡ್ಡಿ ದುಡ್ಡು ಪೀಕಿಸುವ ಕಂಪೆನಿಗಳಿವೆ ಎಚ್ಚರ!
ಮಾನ್ಯರೇ,
ಹೊಸ ಹೊಸ ಗಿರಾಕಿಗಳ ಅನ್ವೇಷಣೆಯಲ್ಲಿರುವ ಖಾಸಗಿ ವಿಮಾ ಕಂಪೆನಿಗಳು ಇದೀಗ ಅನೈತಿಕ ಮಾರ್ಗಗಳ ಮೂಲಕ ಬಡ ಮತ್ತು ಕೆಳಮಧ್ಯಮ ವರ್ಗಗಳ ಅಮಾಯಕ ಜನರನ್ನು ವಂಚಿಸುತ್ತಿರುವುದಾಗಿ ತಿಳಿದುಬಂದಿದೆ. ಕಂಪೆನಿ ಏಜೆಂಟರು ಸರಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಶಿಕ್ಷಕವರ್ಗದ ಕೆಲವರನ್ನು ಪುಸಲಾಯಿಸಿ ಅವರಿಗೆ ಕೆಲವು ಪ್ರಶ್ನೆಪತ್ರಿಕೆಗಳನ್ನು ನೀಡುತ್ತಾರೆ. ಶಿಕ್ಷಕರು ಆ ಪ್ರಶ್ನೆಪತ್ರಿಕೆಗಳನ್ನು ಮಕ್ಕಳಿಗೆ ಕ್ಲಾಸಿನಲ್ಲಿ ಹಂಚುತ್ತಾರೆ. ಪ್ರಶ್ನೆಪತ್ರಿಕೆಯಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಯಾವಾಗ ಮುಂತಾದ ಕೆಲವು ಸರಳ ಪ್ರಶ್ನೆಗಳ ಜೊತೆ ಒಂದೆರಡು ಚಿತ್ರಗಳಿದ್ದು ಮಕ್ಕಳು ಅವುಗಳಿಗೆ ಬಣ್ಣ ಹಚ್ಚಬೇಕಾಗಿದೆ.
ಮಕ್ಕಳು ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಿದ ಬಳಿಕ ಅವುಗಳನ್ನು ವಾಪಸು ಪಡೆಯಲಾಗುತ್ತದೆ. ಇದಾದ ಕೆಲವು ದಿನಗಳ ಬಳಿಕ ಹುಡುಗ/ಹುಡುಗಿಗೆ ಬಹುಮಾನ ಬಂದಿದೆ, ಇಂತಹ ದಿನದಂದು ಇಂತಿಂತಹ ಕಡೆ ಬಂದು ಬಹುಮಾನ ಪಡೆದುಕೊಳ್ಳಬಹುದು ಎಂದು ತಿಳಿಸಲಾಗುತ್ತದೆ. ಇದನ್ನು ಕೇಳಿ ಸಂಭ್ರಮಪಡುವ ಮಕ್ಕಳು ಮತ್ತು ಹೆತ್ತವರು ಆ ಜಾಗಕ್ಕೆ ಹೋದಾಗ ಮಕ್ಕಳಿಗೆ ನೀವು ಭಾಗವಹಿಸಿದ್ದೀರಿ ಎನ್ನುವ ಒಂದು ಸರ್ಟಿಫಿಕೇಟ್ ನೀಡಲಾಗುತ್ತದೆ! ಹೆತ್ತವರನ್ನು ನೀವು ಸಾವಿರಾರು ರೂಪಾಯಿಗಳ ವಿಮೆ ಇಳಿಸಿಕೊಳ್ಳಿ ಎಂದು ಪುಸಲಾಯಿಸಲಾಗುತ್ತದೆ. ಸ್ವಲ್ಪಬುದ್ಧಿವಂತರು ಹೇಗೋ ಇದರಿಂದ ತಪ್ಪಿಸಿಕೊಂಡರೆ ಕೆಲವು ಅಮಾಯಕ ಮಂದಿ ಸಾವಿರಾರು ರೂಪಾಯಿ ತೆತ್ತು ತಮಗೆ ಬೇಕಿರದ ವಿಮೆ ಮಾಡಿಸಿಕೊಳ್ಳುತ್ತಾರೆ. ಆದ್ದರಿಂದ ಶಿಕ್ಷಣ ಇಲಾಖೆ ಮತ್ತು ಇತರ ಸಂಬಂಧಪಟ್ಟ ಇಲಾಖೆಗಳು ಕೂಡಲೇ ಎಚ್ಚೆತ್ತುಕೊಂಡು ಇಂತಹ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿದೆ.