ಇದು ತಪ್ಪು ತಿಳುವಳಿಕೆ
ಹಿಂದೂಗಳ ಉದ್ಧಾರದ ಚಿಂತೆ ಸ್ವಾಮಿ ಶ್ರದ್ಧಾನಂದರಂತಹ ಮಹಾತ್ಮರಿಗೆ ದಿನರಾತ್ರಿ ಕಾಡುವಂತೆ ಬ್ರಾಹ್ಮಣರ ಉದ್ಧಾರದ ಚಿಂತೆ ಮಾಡುವ ಜನರೂ ಇರುವುದರಿಂದಲೇ ಹಿಂದೂ ಸಂಘಟನೆಯ ಜೊತೆ ಬ್ರಾಹ್ಮಣ ಸಂಘಟನೆಯೂ ನಡೆದುಕೊಂಡು ಬಂದಿದೆ. ಮಹಾರಾಷ್ಟ್ರದ ಈ ಬ್ರಾಹ್ಮಣ ಸಂಘಟನೆಯ ಮುಖ್ಯರು ಪುಣೆಯ ಮಾಟೆಯವರು. ಬ್ರಾಹ್ಮಣರ ದಾರಿಯ ಮುಳ್ಳುಗಳು ಮಾಯವಾಗಿ ಅವರ ಕೆಲಸ ಕಾರ್ಯಗಳು ಸುಗಮವಾಗಬೇಕು ಅನ್ನುವುದಷ್ಟೇ ಅವರ ಆಸೆ! ಹಾಗೂ ಈ ಕೆಲಸಕ್ಕಾಗಿ ಹೊಲೆಯರು ಕೈಗೆ ಬರದಿದ್ದರೂ ಮಾದಿಗರು ಹಾಗೂ ಚಮ್ಮಾರರನ್ನು ಹಿಡಿಯಲೂ ಅವರು ಹಿಂಜರಿಯುವುದಿಲ್ಲ. ಇಂತಹ ಕೆಲಸದಲ್ಲಂತೂ ಅವರು ಯಾವತ್ತೂ ಸಿದ್ಧರು. ಈ ಮಸಲತ್ತಿನಿಂದ ಬ್ರಾಹ್ಮಣರಿಗೆ ದಲಿತರ ಆಧಾರ ಸಿಕ್ಕಿ ಬ್ರಾಹ್ಮಣೇತರರಿಗಿಂತ ಬ್ರಾಹ್ಮಣರೇ ಅಸ್ಪಶ್ಯತಾ ನಿವಾರಣೆಯ ಕೆಲಸದಲ್ಲಿ ಹೆಚ್ಚು ತತ್ಪರರು ಎಂದು ಹೊಗಳಿಸಿಕೊಳ್ಳುವ ಅವಕಾಶವೂ ಸಿಗುತ್ತದೆ.
‘ಒಂದು ಪಂಥ ಎರಡುನ ಕೆಲಸ’ ಅನ್ನುವುದು ಮಾಟೆಯವರ ಉದ್ದೇಶವಾಗಿರದೆ ‘ಎರಡು ಪಂಥ ಒಂದು ಕೆಲಸ’ ಅನ್ನುವುದು ಅವರ ನಿಜವಾದ ಉದ್ದೇಶವಾಗಿದೆ ಅನ್ನುವುದು ನಮಗೆ ಗೊತ್ತು. ಹಾಗಿರದಿದ್ದರೆ ಅಸ್ಪಶ್ಯತೆ ನಿವಾರಕ ಮಾಟೆಯವರು ಮಹಾಡ್‌ನಲ್ಲಿ ಪಟ್ಟ ಪಾಡು ಯಾತಕ್ಕಾಗಿ? ಅದೇನು ದಲಿತರ ಕೈವಾರಿಗಳಾಗಿ ಅವರ ಪಕ್ಷವನ್ನು ಮಂಡಿಸಲಂತೂ ಅಲ್ಲವೇ ಅಲ್ಲ ಅನ್ನುವುದು ದಿಟ. ಕೇವಲ ದಲಿತರು ಶೇಟಜಿ ಹಾಗೂ ಭಡಜಿ (ಬ್ರಾಹ್ಮಣರು)ಗಳ ಮೇಲೆ ಮಾಡಿರುವ ಆರೋಪಗಳು ಸುಳ್ಳು ಅನ್ನುವುದನ್ನವರಿಗೆ ತೋರಿಸಿಕೊಡುವುದಿತ್ತು. ಈ ಭಾವನೆ ಮಾಟೆಯವರ ಮನಸ್ಸಿನಲ್ಲಿರದಿದ್ದರೆ ಅವರು ಮಹಾಡ್‌ನ ದಾರಿ ಹಿಡಿಯುತ್ತಿದ್ದರೇ ಅನ್ನುವುದೇ ಅನುಮಾನ. ಅದೇನೇ ಇರಲಿ, ಸಾಕಷ್ಟು ಕಷ್ಟಪಟ್ಟು ಕಲೆಹಾಕಿರುವ ಮಾಹಿತಿಯನ್ನು ಮಾಟೆಯವರು ಮೇ 4ರಂದು ಪುಣೆಯ ಶಿವಾಜಿ ಮಂದಿರದಲ್ಲಿ ಕೊಟ್ಟ ವ್ಯಾಖ್ಯಾನದಿಂದ ಬಹಿರಂಗಗೊಳಿಸಿದರು.
ಮಹಾಡ್‌ನಲ್ಲಿ ನಡೆದ ಘಟನೆಯ ಬಗ್ಗೆ ನಮಗನಿಸಿದ್ದನ್ನು ನಾವೀಗಾಗಲೇ ಹೇಳಿರುವುದರಿಂದ ಮಾಟೆ ಹಾಗೂ ದಾತೆಯವರು ಪ್ರಕಟಿಸಿರುವ ಮಾಹಿತಿಯ ಬಗ್ಗೆ ಬರೆಯುವ ಅಗತ್ಯ ನಮಗಿಲ್ಲ. ಶೇಟಜಿ -ಭಡಜಿಗಳು ಈ ದಂಗೆಯಲ್ಲಿ ಭಾಗವಹಿಸಲಿಲ್ಲ ಎಂದು ಮಾಟೆಯವರೇನು ಹೇಳುತ್ತಾರಲ್ಲ ಅದು ಸುತರಾಂ ಸುಳ್ಳು ಅನ್ನುವುದನ್ನಷ್ಟೇ ನಾವು ಹೇಳಬಯಸುತ್ತೇವೆ. ನಾವು ಕಣ್ಣಾರೆ ಕಂಡ ಘಟನೆಯ ವಿರುದ್ಧ ಯಾರು ಏನೇ ಹೇಳಿದರೂ ನಮ್ಮ ಅನಿಸಿಕೆ ಬದಲಾಗುವುದಿಲ್ಲ. ಬ್ರಾಹ್ಮಣರು ಈ ದಂಗೆಯಲ್ಲಿ ಭಾಗವಹಿಸಿದ್ದಷ್ಟೇ ಅಲ್ಲದೆ ಈ ಎಲ್ಲ ಘಟನೆಯ ಯೋಜನೆ ಒಬ್ಬ ಬ್ರಾಹ್ಮಣ ವಕೀಲನ ಮನೆಯಲ್ಲಾಗಿದೆ ಅನ್ನುವುದನ್ನು ನಾವು ಸರಿಯಾಗಿ ಬಲ್ಲೆವು. ದಲಿತರು ಮಾಡಿರುವ ಆರೋಪ ಸುಳ್ಳು ಎಂದು ಸಾಬೀತುಪಡಿಸಲು ಮಾಟೆಯವರು ಮಂಡಿಸಿರುವ ಮೊದಲ ವಿಷಯ ಹೀಗಿದೆ: ಭಾನುದಾಸ್ ಕಾಂಬಳೆಯ ಹೆಂಡತಿಯನ್ನು ಹೊಡೆದಿಲ್ಲ ಎಂದು ಸ್ವತಃ ಕಾಂಬಳೆ ಹೇಳುವಾಗ ಹೊಡೆದರು ಎಂದು ಹೇಳುವ ಜನ ಧೂರ್ತರಲ್ಲವೇ? ಮಾಟೆಯವರು ಏನೇ ಹೇಳಲಿ ಭಾನುದಾಸ್ ಕಾಂಬಳೆಯವರ ಹೆಂಡತಿಗೆ ಹೊಡೆದರೋ ಇಲ್ಲವೋ ಅನ್ನುವುದರ ಬಗ್ಗೆ ಕಾಂಬಳೆಯವರ ಸಾಕ್ಷಿ ತೆಗೆದುಕೊಳ್ಳಲು ನಾವು ಸಿದ್ಧರಿಲ್ಲ. ಏಕೆಂದರೆ ತನ್ನ ಹೆಂಡತಿ ಮಕ್ಕಳನ್ನು ಶತ್ರುಗಳ ಕೈಯಲ್ಲಿ ಬಿಟ್ಟು ತನ್ನ ಎರಡು ಟನ್ನಿನ ದೇಹವನ್ನು ಕಾಪಾಡಲು ಪೊಲೀಸ್ ಸ್ಟೇಷನ್ನಿನ ಆಶ್ರಯ ಪಡೆದು ಹೆಂಡತಿ ಮಕ್ಕಳು ಏನಾದರು ಎಂದು ಮುಂದಿನ ಮೂರು ನಾಲ್ಕು ದಿನ ವಿಚಾರಿಸಲೂ ಬರದ ಪಶುವಿಗೆ ಸತ್ಯದ ಬಗ್ಗೆ ಏನು ಗೊತ್ತಿದ್ದೀತು! ಆದರೆ ಮಾಟೆಯವರಿಗೆ ತಮ್ಮ ಸತ್ಯದ ಬಗ್ಗೆ ಇಷ್ಟೊಂದು ನಂಬಿಕೆಯಿದ್ದಿದ್ದರೆ ಮಹಾಡ್‌ನ ಪರಿಷತ್ತಿನ ಸಭೆಯಲ್ಲಿ ಹಾಜರಿದ್ದು ಘಟನೆಯನ್ನು ಕಣ್ಣಾರೆ ಕಂಡ ಜನ ನಡೆದಿದ್ದನ್ನು ಇದ್ದ ಹಾಗೆ ಹೇಳುವ ಅವಕಾಶ ಕೊಡಿ ಎಂದು ವಿನಂತಿಸಿದಾಗ ಕೂಡ ಅವರ ವಿನಂತಿಯನ್ನು ಕಡೆಗಾಣಿಸಿದ್ದೇಕೆ? ಇದರಿಂದಲೇ ಮಾಟೆಯವರ ಮಾತಿನಲ್ಲಿ ಎಷ್ಟು ಸತ್ಯಾಂಶವಿದೆ ಅನ್ನುವುದನ್ನು ಜಾಣರು ಅರ್ಥಮಾಡಿಕೊಳ್ಳಬಹುದು.
ಮಾಟೆಯವರು ಹೇಳಿದ ಎರಡನೇ ವಿಷಯ ಏನೆಂದರೆ ಶೇಟಜಿ-ಭಡಜಿಯವರು ದಂಗೆಗಳಲ್ಲಿ ಭಾಗವಹಿಸದಿದ್ದರೂ ಪರಿಷತ್ತಿನ ಮುನ್ನ ಹಾಗೂ ದಂಗೆಗಳ ನಂತರ ಅವರು ದಲಿತರಿಗೆ ಸಹಾಯವನ್ನೇ ಮಾಡಿದ್ದಾರೆ ಎಂದು ಹೇಳಿದ್ದಾರೆ, ಮತ್ತೊಂದು ಕಡೆ ಪ್ರಕಟಿಸಿರುವ ಪತ್ರಿಕಾ ಟಿಪ್ಪಣಿಯ ಟಿಪಣಿಸ್ ಅವರು ‘ನಾನು ದಲಿತರಿಗೆ ಸಹಾಯ ಮಾಡಿಲ್ಲ’ ಎಂದು ಒಪ್ಪಿಕೊಂಡಿದ್ದಾರೆ. ಅನ್ನದ ಒಂದು ಅಗಳೇ ಸಾಕು ಅನ್ನ ಬೆಂದಿದೆಯೋ ಇಲ್ಲವೋ ಎಂದು ಕಂಡುಹಿಡಿಯಲು, ಹಾಗೆಯೇ ಟಿಪಣಿಸರ ಮಾತಿನಿಂದ ಮಾಟೆಯವರ ಮಾತು ಎಷ್ಟು ನಿಜ ಅನ್ನುವುದು ಗೊತ್ತಾಗುತ್ತದೆ. ಈ ವಿಷಯ ಎಷ್ಟು ನಿಜ ಅನ್ನುವುದನ್ನು ಮಾಟೆಯವರು ಹೇಗೆ ಬಚ್ಚಿಟ್ಟರು ಅನ್ನುವುದು ಯಾರಿಗೂ ಆಶ್ಚರ್ಯವನ್ನುಂಟುಮಾಡುತ್ತದೆ. ಆದರೆ ಅದು ಹಾಗಾಗುವುದು ಸಹಜ. ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯಾಗೇ ಕಾಣುವಂತೆ, ಕಳ್ಳನಿಗೆ ಜಗತ್ತೆಲ್ಲ ಕಳ್ಳನಂತೆಯೇ ಕಾಣುತ್ತದೆ. ಹಾಗೆಯೇ ಮಾಟೆಯವರಿಗೆ ಟಿಪಣಿಸರು ಸಹಾಯ ಮಾಡಿದ್ದು ಸುಳ್ಳು ಎಂದು ಗೊತ್ತಿದ್ದರೂ, ಟಿಪಣಿಸರು ಹಾಗೇ ಹೇಳಿಯಾರೆ! ಎಂದೆನಿಸಿರಬಹುದು. ಪುಕ್ಕಟೆಯ ಲೌಕಿಕತೆ ಸಿಗುತ್ತಿದ್ದರೆ ಬೇಡ ಅನ್ನುವವರು ಯಾರು? ಆದರೆ ಟಿಪಣಿಸರು ಮಾಟೆಯವರ ಸುಳ್ಳನ್ನು ನಾಲ್ಕು ಜನರೆದುರು ತೆರೆದಿಡಲು ತೋರಿಸಿದ ಸತ್ಯಪ್ರಿಯತೆಗೆ ನಾವವರನ್ನು ಅಭಿನಂದಿಸುತ್ತೇವೆ. ಈಗ ತಮ್ಮ ಕುತ್ತಿಗೆಗೇ ತಂದುಕೊಂಡಿರುವ ಮಾಟೆಯವರು ಯಾವ ನೀತಿಯನ್ನನುಸರಿಸುತ್ತಾರೆ ಎಂದು ನೋಡೋಣ.
ಮಹಾಡ್‌ನಲ್ಲಿ ನಡೆದ ನೀರಿನ ಘಟನೆಯ ಬಗ್ಗೆ ಅನೇಕ ವೃತ್ತಪತ್ರಿಕೆಗಳು ತಮ್ಮ ತಮ್ಮ ವಿಚಾರಗಳನ್ನು ಪ್ರಕಟಿಸಿವೆ. ಆದರೆ ಕೇಸರಿ ಈ ಘಟನೆಯ ಬಗ್ಗೆ ಏನಾದರೂ ಬರೆಯಬಹುದು ಎಂದು ನಮಗೆಂದೂ ಅನ್ನಿಸಿರಲಿಲ್ಲ. ಉಳಿದೆಲ್ಲ ವೃತ್ತಪತ್ರಿಕೆಗಳು ಈ ಘಟನೆಯ ಬಗ್ಗೆ ಬರೆಯಲು ತಮ್ಮ ಎರಡೆರಡು ನಾಲ್ಕು ನಾಲ್ಕು ಪೆನ್ನುಗಳನ್ನು ಖರ್ಚು ಮಾಡಿರುವಾಗ, ಕೇವಲ ಐವತ್ತು ಸಾಲುಗಳಲ್ಲಿ ಬರೆದು ಮುಗಿಸಿ ಕಡೆಗೆ ‘‘ಘಟಿಸಿರುವ ಈ ಘಟನೆ ತುಂಬ ಗಂಭೀರವಾದದ್ದು’’ ಎಂದಷ್ಟೇ ಬರೆದು ಮುಗಿಸಿರುವ ‘ಕೇಸರಿ’ ಮತ್ತೊಮ್ಮೆ ಈ ಪ್ರಶ್ನೆಯ ಮೇಲೆ ಏನಾದರೂ ಬರೆಯಬಹುದು ಅನ್ನುವುದು ಅಸಾಧ್ಯವಾದ ಮಾತಾಗಿತ್ತು. ಸಾಮಾಜಿಕ ಸುಧಾರಣೆಗೆ ಯಾವತ್ತೂ ವಿರೋಧಿಸುವುದೇ ಅವರ ಮುಖ್ಯ ಉದ್ದೇಶವಾದ ಕಾರಣ ಆ ಕಾರಣಕ್ಕೆ ಮಸಿ ಬಳಿಯುವಂತಹ ಕೆಲಸ ‘ಕೇಸರಿ’ ಎಂದೂ ಮಾಡುವುದಿಲ್ಲ ಹಾಗೂ ಅದಕ್ಕೆ ವಿಸಂಗತವಾಗಿರುವಂತಹ ಲೇಖನಕ್ಕೆ ಅಥವಾ ವಿಷಯಕ್ಕೆ ಜಾಗ ಕೊಡುವುದಿಲ್ಲ. ಪರಿಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿರುವುದರಿಂದ ಕೇಸರಿಯ ದೃಷ್ಟಿಕೋನದಲ್ಲೂ ಬದಲಾವಣೆಯಾಗಿದೆ ಅನ್ನುವುದು ನಿಜ. ಮುಸಲ್ಮಾನರ ಹೊಡೆತದಿಂದ ನಾವು ಉಳಿಯುವುದಿಲ್ಲ ಅನ್ನುವ ಭಯದಿಂದ ಹಾಗೂ ಸ್ವಾತಂತ್ರವನ್ನು ಧೈರ್ಯವಾಗಿ ಕೇಳಬಹುದಾದ ಆಸೆಯಿಂದ ‘ಕೇಸರಿ’ ಈಗ ಮೊದಲಿನಂತೆ ಅಸ್ಪಶ್ಯತಾ ನಿವಾರಣೆಗೆ ವಿರೋಧಿಸುವುದಿಲ್ಲ. ಹಾಗೂ ಅದಕ್ಕೆ ಸಂಬಂಧಿಸಿದಂತಹ ಲೇಖನಕ್ಕೆ ತಮ್ಮ ಪತ್ರಿಕೆಯಲ್ಲಿ ಜಾಗ ಕೊಡುತ್ತದೆ. ಆದರೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅನ್ನುವ ತಮ್ಮ ನಿಲುವನ್ನವರು ಹಾಗೇ ಇಟ್ಟಿದ್ದಾರೆ. ಬೇರೆಯವರ ಲೇಖನವನ್ನು ‘ಕೇಸರಿ’ ಪ್ರಕಟಿಸುತ್ತದೆ. ಆದರೆ ತಾವೇನಾದರೂ ಬರೆಯುತ್ತಾರೆಯೇ? ಬರೆದರೆ ಅವರ ಕೈ ಬಿದ್ದೀತು! ಅನ್ನುವವರ ಹಾಗಾಡುತ್ತಾರೆ. ಅಷ್ಟೇ ಅಲ್ಲ, ದಲಿತರಿಗೆ ತಮ್ಮಿಂದ ಉತ್ತೇಜನ ಸಿಗುವಂತಹ ಕೆಲಸ ‘ಕೇಸರಿ’ ಯಾವತ್ತೂ ಮಾಡುವುದಿಲ್ಲ.
ನಮಗೆ ನೆನಪಿದೆ, 1919ರಲ್ಲಿ ನಾವು ‘ಮೂಕನಾಯಕ’ ಅನ್ನುವ ಪತ್ರಿಕೆಯನ್ನು ಆರಂಭಿಸಿದಾಗ ‘ಕೇಸರಿ’ಯವರಿಗೆ ನಮ್ಮ ಜಾಹೀರಾತನ್ನು ಬಿಟ್ಟಿ ಪ್ರಕಟಿಸಿಕೊಡಿ ಎಂದು ವಿನಂತಿಸಿದ್ದೆವು, ಆದರೆ ಅವರದನ್ನು ಕಡೆಗೆಣಿಸಿದರು! ಮುಂದೊಂದು ದಿನ ‘‘ನಿಮಗೆ ಜಾಹೀರಾತಿನ ಹಣ ಕೊಡುತ್ತೇವೆ, ಪ್ರಕಟಿಸಿ’’ ಎಂದು ಹೇಳಿದರೆ ‘‘ಜಾಗವಿಲ್ಲ’’ ಎಂದು ಉತ್ತರಿಸಿದರು! ಅಷ್ಟೇ ಅಲ್ಲದೆ, ಅಭಿಪ್ರಾಯವನ್ನೂ ತಿಳಿಸಲಿಲ್ಲ ಹಾಗೂ ಮತ್ತೊಮ್ಮೆ ಭೇಟಿಯಾಗುವ ಉತ್ಸಾಹವನ್ನೂ ತೋರಿಸಲಿಲ್ಲ. ‘ಕೇಸರಿ’ಯ ಅಭಿಪ್ರಾಯಕ್ಕೆ ನಾವು ಮೂರು ಕವಡೆಯಷ್ಟೂ ಬೆಲೆ ಕೊಡುವುದಿಲ್ಲ. ದೇಶವನ್ನು ಏಳಿಗೆಯತ್ತ ಕೊಂಡೊಯ್ಯುವ ಈ ಪತ್ರಿಕೆಯು ಬ್ರಾಹ್ಮಣೇತರ ಲೇಖನಗಳ ಬಗ್ಗೆ ಒಂದೇ ಒಂದು ಪ್ರಶಂಸೆಯ ಮಾತನ್ನಾಡಿಲ್ಲ. ಬ್ರಾಹ್ಮಣರಿಗಿಂತ ಬ್ರಾಹ್ಮಣೇತರರು ಶ್ರೇಷ್ಠರು ಅಂದರೆ ನಮ್ಮ ಪೂರ್ವಜರೊಂದಿಗೆ ರೌರವ ನರಕಕ್ಕೆ ಹೋಗುತ್ತೇವೆ ಅನ್ನುವ ಭಯವಿರುವವರು ನಮ್ಮಂತಹ ದಲಿತರು ನಡೆಸುವ ಪತ್ರಿಕೆಯ ಬಗ್ಗೆ ಯೋಗ್ಯವಾದ ನಾಲ್ಕು ಶಬ್ದಗಳನ್ನು ಹೇಳಿಯಾರು ಅನ್ನುವ ಆಸೆಯನ್ನಿಟ್ಟುಕೊಳ್ಳುವುದೇ ಬೇಡ. ಆದರೆ ಮತ್ತೊಮ್ಮೆ ಭೇಟಿಯಾಗುವ ಸೌಜನ್ಯವನ್ನೂ ‘ಕೇಸರಿ’ ತಪ್ಪಿಸಿತು ಅನ್ನುವುದು ಯಾರಿಗೂ ನಿಜ ಅನಿಸಲಿಕ್ಕಿಲ್ಲ. ಆದರೆ ನಮಗದರ ಅಂದಾಜಿತ್ತು. ಕೇಸರಿಯ ಹೃದಯವನ್ನು ನಾವು ಸರಿಯಾಗಿ ಬಲ್ಲೆವು. ಒಬ್ಬರ ವಿಚಾರಗಳು ಮತ್ತೊಬ್ಬರಿಗೆ ತಿಳಿಯಲಿ ಹಾಗೂ ಅದು ಮಾತುಕತೆಗೆ ಎಡೆಮಾಡಿಕೊಟ್ಟು ಅದರ ಫಲಿತಾಂಶ ಒಳ್ಳೆಯದಾಗಲಿ ಅನ್ನುವುದೇ ಭೇಟಿಯ ಹಾಗೂ ಮತ್ತೆ ಭೇಟಿಯ ಉಪಯೋಗ. ಆದರೆ ನಮ್ಮಲ್ಲೂ ‘ಮೂಕನಾಯಕ’ನಲ್ಲೂ ಭೇಟಿಗಳಾದರೆ ಬ್ರಾಹ್ಮಣ ಮಾದಿಗನಿಗೆ ತಮ್ಮ ಮಗಳನ್ನು ಕೊಟ್ಟ ಮೇಲೆ ಉಂಟಾಗುವ ವಿಚಿತ್ರ ಸಂಬಂಧದಂತೆ ತಾವು ಕೀಳಾಗಬಹುದು! ಎಂದು ‘ಕೇಸರಿ’ಗೆ ಅನಿಸಿತು.
ಇವರ ಯೋಗ್ಯತೆಯೇನು, ಇವರನ್ನು ಮತ್ತೆ ಭೇಟಿಯಾಗಿ ಇವರ ಹಾಗೂ ನಮ್ಮ ನಡುವೆ ಸಂಬಂಧವನ್ನೇಕೆ ಸ್ಥಾಪಿಸಿಕೊಳ್ಳಬೇಕು? ಅನ್ನುವಂತಹ ಅಹಂಕಾರದಿಂದ ಬೀಗಿ ಕೇಸರಿ ಮತ್ತೆ ನಮ್ಮನ್ನು ಭೇಟಿಯಾಗಲು ಬರಲಿಲ್ಲ. ಹಳೆಯ ವಿಷಯವೇಕೆ, ನಾವು ‘ಬಹಿಷ್ಕೃತ ಭಾರತ’ವನ್ನಾರಂಭಿಸಿದ ದಿನದಿಂದ ನಮ್ಮ ಪತ್ರಿಕೆಯ ಒಂದು ಸಂಚಿಕೆಯನ್ನು ವ್ಯವಸಾಯ ಬಂಧುಗಳು ಅನ್ನುವ ಸಂಬಂಧದಿಂದ ನಾವವರಿಗೆ ನಿಯಮಿತವಾಗಿ ಕಳುಹಿಸಿಕೊಡುತ್ತಿದ್ದೇವೆ. ಆದರೆ ನಮ್ಮ ಸೌಜನ್ಯದ ಮರುಪಾವತಿಗಾಗಿ ‘ಕೇಸರಿ’ಯ ಸಂಚಿಕೆಯೊಂದರಲ್ಲಿ ಯಾರಿಗೂ ಕಾಣದಂತಹ ಜಾಗದಲ್ಲಿ ತಲುಪಿದೆ ಎಂದಷ್ಟೆ ಬರೆದಿದ್ದಾರೆ. ಮತ್ತೆ ಅಭಿಪ್ರಾಯವಂತೂ ಇಲ್ಲವೇ ಇಲ್ಲ! ಎಂಜಲು ಪಂಜಲು ಪತ್ರಿಕೆಗಳಿಗೆ, ಹಳಸಲು ವಿಷಯಗಳಿಗೆ ಅಭಿಪ್ರಾಯಕೊಡುವ ಅಭ್ಯಾಸವಿರುವ ‘ಕೇಸರಿ’ ‘ಬಹಿಷ್ಕೃತ ಭಾರತ’ಕ್ಕೆ ಅಭಿಪ್ರಾಯ ಕೊಡದಿರುವುದು ಅವರ ದಿಮಾಕಲ್ಲವೆ? ಆದರೆ ‘ಕೇಸರಿ’ಯ ಈ ದಿಮಾಕು ಬಹಳ ದಿನ ನಡೆಯಲಾರದು. ಅಹಂಕಾರ ಮುರಿಯುವ ಸಮಯ ಹತ್ತಿರವಾಗುತ್ತಿದೆ. ಹಾಗಿಲ್ಲದಿದ್ದರೆ ಅವರು ಮತ್ತೆ ನಮ್ಮ ಭೇಟಿಗೆ ಯಾಕೆ ಬರುತ್ತಿದ್ದರು? ಮಹಾಡ್‌ನ ನೀರಿನ ಪ್ರಕರಣದಲ್ಲಿ ಅವರು ಯಾಕೆ ಬರುತ್ತಿದ್ದರು?
(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)