'ಹಿಂದೂ ನಾವೆಲ್ಲಾ ಒಂದು'-ಎಷ್ಟು ಸತ್ಯ ?
ಮಾನ್ಯರೇ,
ಜೇವರ್ಗಿ ತಾಲೂಕಿನ ಕೊಂಡಗುಳಿ ಗ್ರಾಮದ ಈ ದಲಿತರು ಹಿಂದೂ ದೇವರ ಫೋಟೊಗಳಿಗೆ ಬೆಂಕಿ ಹಚ್ಚಿ, ತಮ್ಮ ಮೇಲಾಗಿದ್ದ ದೌರ್ಜನ್ಯಕ್ಕೆ ಪ್ರತಿಭಟನೆ ತೋರಿದ್ದಾರೆ. ಮೊನ್ನೆ ಆ ಊರಿನ ಗ್ರಾಮದೇವತೆ ಮೆರವಣಿಗೆಯಲ್ಲಿ ಭಾಗವಹಿಸಲು ಹೋದ ದಲಿತರ ಮೇಲೆ ಅಮಾನುಷ ಹಲ್ಲೆ ಅಲ್ಲಿನ ಸವರ್ಣೀಯರಿಂದ ನಡೆದಿತ್ತು. ತಮ್ಮ ಮೇಲೆ ನಡೆದ ಜಾತಿ ದೌರ್ಜನ್ಯವನ್ನು ತಡೆಯದ ದೇವರು ಇದ್ದರೆಷ್ಟು ಬಿಟ್ಟರೆಷ್ಟು ಎಂದವರಿಗೆ ಅನಿಸಿರಬಹುದು.
ಬಹುಶಃ ಇತ್ತೀಚಿನ ದಿನಗಳಲ್ಲಿ ದಲಿತರು ನಡೆಸಿರುವ ಪ್ರತಿಭಟನೆಗಳಲ್ಲಿ ಇದು ಉಗ್ರ ರೂಪದ ಪ್ರತಿಭಟನೆ. ದೇವಸ್ಥಾನಗಳಿಗೆ ಪ್ರವೇಶ ಕೋರಿ ಇದುವರೆಗೆ ಅನೇಕ ಹೋರಾಟಗಳು ನಡೆದಿವೆ. ಆದರೆ ಈ ಹೋರಾಟಗಳು ಯಶಸ್ವಿಯಾಗಿರುವ ಉದಾಹರಣೆ ಕಡಿಮೆ. ಈ ಕಾರಣದಿಂದಲೇ ದಲಿತರು ಹಿಂದೂ ದೇವರ ಫೋಟೊಗಳಿಗೆ ಬೆಂಕಿ ಹಚ್ಚುವ ಮಟ್ಟಕ್ಕೆ ಇಳಿದಿರುವುದು.
ಈ ಪ್ರತಿಭಟನೆ ಹಿಂದೂ ಮೇಲ್ಜಾತಿ ಜನರ, ಒಬಿಸಿ ಜಾತಿಗಳ ಜನರ ಕಣ್ಣು ತೆರೆಸಬೇಕಿದೆ. ಭಾರತದ ಸಂವಿಧಾನವನ್ನು ನೀವು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡು ಮನುಷ್ಯರಾಗದೇ ಮನುಧರ್ಮದ ಸಾಮಾಜಿಕ ಸಂವಿಧಾನವನ್ನೇ ಅನುಸರಿಸುತ್ತೇವೆಂದರೆ ದಲಿತ ಸಮುದಾಯ ಹೀಗೆ ಹಿಂದೂ ಧರ್ಮದ ಚೌಕಟ್ಟಿನಿಂದ ಸಿಡಿಯುವ ಅನಿವಾರ್ಯತೆಗೆ ತಳ್ಳಲ್ಪಡುತ್ತದೆ.
ಇಂತಹ ಸಂದರ್ಭಗಳಲ್ಲಿಯೇ ಮತಾಂತರಗಳು ನಡೆಯುತ್ತಿರುವುದು. ದಲಿತ ಸಮುದಾಯವು ತಮ್ಮನ್ನು ಕಟ್ಟಿ ಹಾಕಲಾಗಿರುವ ಹಿಂದೂ ಧರ್ಮದೊಳಗೆ ತಾವು ಅನುಭವಿಸುವ ಈ ಧಾರ್ಮಿಕ ಬೇಗುದಿಯಿಂದ ಹೊರ ಬರಲು ಅನಿವಾರ್ಯವಾಗಿ ಇತರ ಧರ್ಮಗಳ ಮೊರೆ ಹೋಗುತ್ತಾರೆ. ಹಿಂದೂ ಧರ್ಮದ ವಕ್ತಾರರು ಆಗ ಮತಾಂತರದ ಬಗ್ಗೆ ಬೊಬ್ಬೆ ಹೊಡೆಯುತ್ತಾರೆ. ಆದರೆ ಅವರು ಇಂತಹ ಸಂದರ್ಭಗಳಲ್ಲಿ ಬಂದು ಸವರ್ಣೀಯರಿಗೆ ಬುದ್ಧಿ ಹೇಳಿ ದಲಿತರಿಗೆ ನ್ಯಾಯ ಕಲ್ಪಿಸಿದ ಉದಾಹರಣೆ ಎಲ್ಲಾದರೂ ಇದೆಯೇ? ಇಲ್ಲವೆಂದರೆ ಅವರು 'ಹಿಂದೂ ನಾವೆಲ್ಲಾ ಒಂದು' ಎಂದು ಹೇಳುವುದಕ್ಕೇನಾದರೂ ಅರ್ಥ ಇದೆಯೇ?
ಬಾಬಾ ಸಾಹೇಬ್ ಅಂಬೇಡ್ಕರ್ ಈ ಹಿಂದೂ ಜಾತಿವಾದಿಗಳು ಯಾವತ್ತೂ ಬದಲಾಗುವುದಿಲ್ಲ ಅವರಿಗೆ ಎಂದೂ ನಾಗರಿಕ ಪ್ರಜ್ಞೆ ಬರುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಂಡೇ ಬೌದ್ಧ ಧರ್ಮದ ಪರ್ಯಾಯವೊಂದನ್ನು ತೆರೆದಿಟ್ಟರು. ಬಹುಶಃ ಅದೊಂದು ಸಾಮಾಜಿಕ ಕ್ರಾಂತಿಯೇ ಹೌದು. ಇಂದು ಈ ಜೇವರ್ಗಿಯ ಕೊಂಡಗುಳಿ ಗ್ರಾಮದ ದಲಿತರು ಬೌದ್ಧ ಧರ್ಮ ಸ್ವೀಕರಿಸುತ್ತಾರೋ, ಕ್ರೈಸ್ತ ಅಥವಾ ಇಸ್ಲಾಂ, ಸಿಖ್ ಧರ್ಮ ಸ್ವೀಕರಿಸುತ್ತಾರೋ ಗೊತ್ತಿಲ್ಲ. ಅವರು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದು ಅತ್ಯಂತ ನ್ಯಾಯ ಸಮ್ಮತವಾಗಿರುತ್ತದೆ. ಹಾಗಂತ ಒಂದು ಧರ್ಮವನ್ನು ಬಿಟ್ಟು ಮತ್ತೊಂದು ಧರ್ಮ ಆಯ್ಕೆ ಮಾಡಿಕೊಳ್ಳುವುದು ಅವರಿಗೆ ಸಂಪೂರ್ಣ ಪರಿಹಾರ ಆಗದಿರಬಹುದು. ಆದರೆ ಸದ್ಯದ ಮಟ್ಟಿಗೆ ನೆಮ್ಮದಿ ಯನ್ನಂತೂ ನೀಡುತ್ತದೆ.
ಸಹ ಮನುಷ್ಯರ ಆತ್ಮಗೌರವವನ್ನು ಕಾಪಾಡದ ಧರ್ಮ ಒಂದು ಧರ್ಮವೇ ಆಗಿರುವುದಿಲ್ಲ. ಇದನ್ನು ಈ ದೇಶವಾಸಿಗಳೆಲ್ಲರೂ ಅರಿತು ಬಾಳಿದ ದಿನ ಭಾರತ ನಿಜವಾದ ಅರ್ಥದಲ್ಲಿ ಒಂದು ದೇಶವಾಗಿ ರೂಪುಗೊಳ್ಳುತ್ತದೆ. ಅಲ್ಲಿಯವರೆಗೂ ಇದು ಲಂಕೇಶ್ ಹೇಳಿದಂತೆ 'ದೇಶವಲ್ಲ ದೋಷ'.