ಕೇಸರಿವಾದಿಗಳ ಸಟೆನುಡಿ, ವದಂತಿ, ದ್ವೇಷ ಇತ್ಯಾದಿಗಳ ಮೂಲ
ಭಾಗ - 2
ಅಷ್ಟಕ್ಕೂ ನೆಹರೂ ಮೇಲೆ ಯಾಕಿಷ್ಟು ಕೋಪ? ಮೋದಿಯವರ ಮಾತುಗಳನ್ನು ಕೇಳಿದವರಿಗೆ ಅವರ ಮನದಾಳದಲ್ಲಿ ತುಂಬಿರುವ ರೋಷ, ದ್ವೇಷ ಮತ್ತು ಪ್ರತೀಕಾರದ ಭಾವನೆಗಳ ಧಗಧಗಿಸುವ ಜ್ವಾಲೆಯ ಬಿಸಿ ತಟ್ಟದೆ ಇರದು. ಅದರಲ್ಲೂ ಭಾರತದ ಪ್ರಥಮ ಪ್ರಧಾನಿ ಜವಾಹರ ಲಾಲ್ ನೆಹರೂ ಮೇಲಿನ ವಿಶೇಷವಾದ ಸಿಟ್ಟು ಕೇವಲ ಮೋದಿಗಷ್ಟೆ ಸೀಮಿತವಾಗಿಲ್ಲ, ಅದು ಇಡೀ ಪರಿವಾರಕ್ಕೆ ವ್ಯಾಪಿಸುತ್ತದೆ. ಗಾಂಧಿ ಹತ್ಯೆಯ ಬಳಿಕ ಗೃಹಸಚಿವ ಪಟೇಲರ ಸಲಹೆಯ ಮೇರೆಗೆ ಆರೆಸ್ಸೆಸ್ ಅನ್ನು ನಿಷೇಧಿಸಿದ, 1950ರಲ್ಲಿ ಹಿಂದೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದ, ಭಾರತದ ಆದರ್ಶ ಜಾತ್ಯತೀತತೆ ಕುರಿತು ಬಹಳ ಸ್ಪಷ್ಟವಾದ ನಿಲುವನ್ನು ಹೊಂದಿದ್ದ, ಕೋಮುವಾದವನ್ನು ತೀವ್ರವಾಗಿ ವಿರೋಧಿಸಿದ್ದ ನೆಹರೂ ಬಗ್ಗೆ ಸಂಘ ಪರಿವಾರಕ್ಕಿರುವ ದ್ವೇಷ ಅಷ್ಟಿಷ್ಟಲ್ಲ.
ಕೋಮುವಾದದ ಗಂಡಾಂತರವನ್ನು ಅಂದೇ ಮನಗಂಡಿದ್ದ ನೆಹರೂ, ‘‘ಭಾರತಕ್ಕೆ ಅಪಾಯವಿರುವುದು ಕಮ್ಯುನಿಸಂನಿಂದ ಅಲ್ಲ, ಬಲ ಪಂಥೀಯ ಕೋಮುವಾದದಿಂದ’’ ಎಂದು ಭಾರತೀಯ ವಿದೇಶ ಸೇವಾ (ಐಎಫ್‌ಎಸ್) ವಿಭಾಗದ ಅಧಿಕಾರಿಗಳಿಗೆ ಹೇಳಿದ್ದರು (Y.D. Gundevia, Outside the Archives, Sangam Books 1984, p. 210). ನೆಹರೂಗೆ ಹಿಂದೂ ಕೋಮುವಾದದ ವಿಶ್ವಾಸಘಾತುಕತನದ ಬಗ್ಗೆ ಹೆಚ್ಚುಕಮ್ಮಿ ಭವಿಷ್ಯಸೂಚಕ ಎನ್ನಬಹುದಾದ, ಶೀಘ್ರಗ್ರಾಹಿ ಒಳನೋಟವಿತ್ತು. ಇದು ನೆಹರೂ ಭಾರತಕ್ಕೆ ಸಲ್ಲಿಸಿರುವ ಅತ್ಯಂತ ಮಹತ್ತರ ಕೊಡುಗೆಗಳಲ್ಲೊಂದು. ಹಿಂದೂ ಕೋಮುವಾದದ ರೋಗ ತನ್ನ ಪಕ್ಷಕ್ಕೂ ತಗಲಿದುದನ್ನು ಕಂಡ ನೆಹರೂ ಸೆಪ್ಟಂಬರ್ 6, 1951ರಂದು ಸಾರ್ವಜನಿಕ ಸಭೆಯೊಂದರಲ್ಲಿ ತನ್ನ ಅಸಮಾಧಾನವನ್ನು ಹೊರಹಾಕಿದ್ದರು. ಅದೇ ವೇಳೆ ಮುಸ್ಲಿಂ ಕೋಮುವಾದವೂ ಅವರ ಗಮನದಲ್ಲಿತ್ತು.
‘‘ಅಲ್ಪಸಂಖ್ಯಾತರ ಕೋಮುವಾದಕ್ಕಿಂತ ಬಹುಸಂಖ್ಯಾತರ ಕೋಮುವಾದವೇ ಅತೀ ಹೆಚ್ಚು ಅಪಾಯಕಾರಿ’’ ಎಂದು ಮೇ 11, 1958ರಂದು ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಹೇಳಿದ್ದರು. ಜನವರಿ 5, 1961ರಂದು ‘‘ಕೋಮುವಾದ ನಮ್ಮ ಸಮಾಜದ ಒಂದು ಭಾಗವಾಗಿದೆ’’ ಎಂದ ನೆಹರೂ, ಹಿಂದೂ ಕೋಮುವಾದ ಯಾಕೆ ಹೆಚ್ಚು ಅಪಾಯಕಾರಿ ಎನ್ನುವುದನ್ನು ವಿವರಿಸಿದರು: ‘‘ಅಲ್ಪಸಂಖ್ಯಾತ ಸಮುದಾಯಗಳು ಕೋಮುವಾದಿಗಳಾದಾಗ ಅದನ್ನು ನೋಡಲು ಸಾಧ್ಯವಿದೆ, ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಆದರೆ ಬಹುಸಂಖ್ಯಾತ ಸಮುದಾಯವೊಂದರ ಕೋಮುವಾದವು ರಾಷ್ಟ್ರೀಯವಾದವೆಂದು ಪರಿಗಣಿಸಲ್ಪಡುವ ಪ್ರವೃತ್ತಿ ಇರುತ್ತದೆ.’’ ನೆಹರೂರ ಮತ್ತೊಂದು ಹೇಳಿಕೆ ಅವರ ಕಳಕಳಿಯನ್ನು ಸ್ಪಷ್ಟವಾಗಿ ಬಿಂಬಿಸುತ್ತದೆೆ: ‘‘ನಾನು ಸರಕಾರದ ಮುಖ್ಯಸ್ಥನಾಗಿರುವಾಗ ಮಾತ್ರವಲ್ಲ ಸರಕಾರದಿಂದ ಹೊರಗಿರುವಾಗಲೂ, ಯಾರೊಬ್ಬನಾದರೂ ಧರ್ಮದ ಹೆಸರಿನಲ್ಲಿ ಮತ್ತೊಬ್ಬನ ಮೇಲೆ ಆಕ್ರಮಣ ನಡೆಸಿದರೆ, ನನ್ನ ಕೊನೆಯುಸಿರಿನ ತನಕವೂ ಆತನ ವಿರುದ್ಧ ಹೋರಾಡುವೆ. (RSS and BJP – A Division of Labour, ಎ.ಜಿ.ನೂರಾನಿ)
ಸಂಘ ಪರಿವಾರದ ಈ ರೋಷ ಹಾಗೂ ದ್ವೇಷ ಅವರ ಆದಿ ಗುರು ಸಾವರ್ಕರ್‌ನಿಂದಲೆ ಪ್ರಾರಂಭವಾಗಿದೆ. 1940ರಲ್ಲಿ ಹಿಂದೂ ಮಹಾಸಭಾದ ಮದುರೆಯ ಅಧಿವೇಶನದ ಅಧ್ಯಕ್ಷನಾಗಿದ್ದ ಸಾವರ್ಕರ್, ಭಾರತದಲ್ಲಿ ಫ್ಯಾಶಿಸ್ಟ್ ಮತ್ತು ನಾಝಿ ಸಿದ್ಧಾಂತಗಳನ್ನು ಅಳವಡಿಸುವುದಕ್ಕೆ ಪ್ರತಿರೋಧ ಒಡ್ಡಿದ್ದಕ್ಕಾಗಿ ನೆಹರೂರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆತ ‘‘ನಾವು ಸರಕಾರದ ಒಂದು ನಿರ್ದಿಷ್ಟ ಸ್ವರೂಪ ಅಥವಾ ಕಾರ್ಯನೀತಿಯನ್ನು ಕೇವಲ ಪಾಂಡಿತ್ಯದ ಆಕರ್ಷಣೆಯಿಂದ ಮೆಚ್ಚುತ್ತಿರುವಾಗ ಆ ಕಾರಣಕ್ಕಾಗಿ ಜರ್ಮನಿ, ಜಪಾನ್ ಅಥವಾ ರಶ್ಯಾ ಅಥವಾ ಇಟಲಿ ಕೂಡ ಅದನ್ನೇ ಆಯ್ಕೆ ಮಾಡಿಕೊಳ್ಳಬೇಕೆಂದು ಅವರಿಗೆ ಆದೇಶಿಸಲು ನಾವು ಯಾರು? ಖಂಡಿತವಾಗಿಯೂ ಜರ್ಮನಿಗೆ ಯಾವುದು ಅತ್ಯುತ್ತಮವಾಗಿ ಸರಿಹೋಗುತ್ತದೆಂದು ಪಂಡಿತ್ ನೆಹರೂಗಿಂತಲೂ ಹೆಚ್ಚು ಚೆನ್ನಾಗಿ ಬಲ್ಲವರು ಹಿಟ್ಲರ್. ನಾಝಿ ಅಥವಾ ಫ್ಯಾಶಿಸ್ಟ್ ಮಂತ್ರದಂಡ ಮುಟ್ಟಿದ ಪರಿಣಾಮವಾಗಿ ಜರ್ಮನಿ ಅಥವಾ ಇಟಲಿ ಇಷ್ಟೊಂದು ಅದ್ಭುತವಾಗಿ ಸುಸ್ಥಿತಿಗೆ ಮರಳಿ ಹಿಂದೆಂದೂ ಇಲ್ಲದ ರೀತಿಯಲ್ಲಿ ಇಷ್ಟೊಂದು ಬಲಶಾಲಿಯಾಗಿ ಬೆಳೆದಿರುವ ಸತ್ಯವೇ ಆ ರಾಜಕೀಯ ಸಿದ್ಧಾಂತಗಳು ಅವುಗಳ ಆರೋಗ್ಯಕ್ಕೆ ಅವಶ್ಯವಿದ್ದ ಅತ್ಯಂತ ಹಿತಕರವಾದ ಶಕ್ತಿವರ್ಧಕಗಳೆಂಬುದನ್ನು ಸಾಬಿತುಪಡಿಸುತ್ತದೆ’’ ಎಂದು ಹೇಳಿದ್ದರು. (Know the RSS, ಶಂಸುಲ್ ಇಸ್ಲಾಮ್).
ಸಟೆನುಡಿ, ವದಂತಿ, ದ್ವೇಷ ಇತ್ಯಾದಿಗಳ ಮೂಲ
ಅಸತ್ಯ ಹಾಗೂ ವದಂತಿಗಳನ್ನು ಪ್ರಚಾರ ಮಾಡಿ ವಿವಾದಗಳನ್ನು ಸೃಷ್ಟಿಸುವುದು, ಸಮಾಜದಲ್ಲಿ ದ್ವೇಷದ ವಿಷಬೀಜ ಬಿತ್ತುವುದು ಸಂಘ ಪರಿವಾರದ ನಿತ್ಯವಿಧಿಯಾಗಿದೆ. ಯಾರು ಅದನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತಾರೆ ಅರ್ಥಾತ್ ಯಾರ ಭಾಷಣ ಅತ್ಯಧಿಕವಾಗಿ ಬೆಂಕಿ ಉಗುಳುತ್ತದೆ ಎನ್ನುವುದರ ಮೇಲೆ ನಾಯಕರ ಸಾಮರ್ಥ್ಯವನ್ನು ಗುರುತಿಸಿ, ನಾಗಪುರದಲ್ಲಿ ವಿಶೇಷ ತರಬೇತಿ ಕೊಡಿಸಿ, ಅಂಥವರನ್ನು ಸ್ಟಾರ್ ಪ್ರಚಾರಕರನ್ನಾಗಿ ಕಣಕ್ಕಿಳಿಸಲಾಗುತ್ತದೆ. ಮೊದಲ ಎರಡು ಸ್ಥಾನಗಳಲ್ಲಿರುವ ಜೋಡಿ ಯಾರೆಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ! ವಾಸ್ತವವಾಗಿ ಇದರಲ್ಲಿ ಅಚ್ಚರಿಯಾಗುವಂಥದ್ದೇನೂ ಇಲ್ಲ. ಏಕೆಂದರೆ ಇದೊಂದು ಹಳೆ ಕೋಮುವಾದಿ ತಂತ್ರವಾಗಿದ್ದು ಇದಕ್ಕೊಂದು ಸುದೀರ್ಘ ಪರಂಪರೆಯೇ ಇದೆ. ಅದನ್ನು ಹುಡುಕುತ್ತಾ ಹೊರಟರೆ ತಲುಪುವುದು ಅದೇ ಕಾಂಗ್ರೆಸ್ ದ್ವೇಷಿ, ನೆಹರೂ ದ್ವೇಷಿ, ಅಲ್ಪಸಂಖ್ಯಾತ ದ್ವೇಷಿ, ಹಿಂದುತ್ವ ಸಿದ್ಧಾಂತದ ಜನಕ ಹಾಗೂ ಕೋಮುವಾದಿಗಳ ಸ್ಟಾರ್ ಗುರುಗಳಲ್ಲೊಬ್ಬರಾದ ತಥಾಕಥಿತ ವೀರ ಸಾವರ್ಕರ್‌ಗೆ. ಗಾಂಧಿ, ನೆಹರೂ ಎಂದೂ ಹೇಳಿರದ ವಿಚಾರಗಳನ್ನು ಅವರೇ ಹೇಳಿರುವುದಾಗಿ ಪ್ರಚಾರ ಮಾಡುವ ಮೂಲಕ ಈ ಪರಂಪರೆಗೆ ನಾಂದಿ ಹಾಕಿದವರೆೇ ಸಾವರ್ಕರ್. ಸಾವರ್ಕರ್‌ರ ಮರಣಾನಂತರದಲ್ಲಿ ಆತನ ಶಿಷ್ಯಗಣಗಳು ಸಾವರ್ಕರ್ ಮಾತ್ರವಲ್ಲ ಗೋಳ್ವಲ್ಕರ್, ಹೆಡ್ಗೇವಾರ್ ಮೊದಲಾದ ಮಿಕ್ಕೆಲ್ಲಾ ಸಂಘಿ ಗುರುಗಳು ಹಾಕಿಕೊಟ್ಟ ಮಾರ್ಗವನ್ನು ಚಾಚೂತಪ್ಪದೆ ಅನುಸರಿಸುತ್ತಾ ಬಂದಿದ್ದಾರೆ. ದ್ವೇಷ ಮತ್ತು ಸೇಡಿನ ಮನೋಭಾವನೆಯಿಂದ ಕುದಿಯುತ್ತಿದ್ದ ಸಾವರ್ಕರ್‌ರ ಅಪ್ಪಟ ಸುಳ್ಳು ಹೇಳಿಕೆಗಳ ನಾಲ್ಕು ಉದಾಹರಣೆಗಳು ಈ ಕೆಳಗಿನಂತಿವೆ:
► ಹಿಂದುಸ್ಥಾನಿ ಭಾರತದ ರಾಷ್ಟ್ರಭಾಷೆಯಾಗಲು ಅತ್ಯಂತ ಸೂಕ್ತ ಎಂದಷ್ಟೆ ಹೇಳುವ ಮೌಲಾನಾ ಅಬುಲ್ ಕಲಾಂ ಆಝಾದ್, ಹಿಂದುಸ್ಥಾನಿ ಉರ್ದು ಭಾಷೆಗೆ ಸಮನಾದುದು ಎಂದು ಖಾತ್ರಿ ನೀಡುತ್ತಾರೆ. ಆದರೆ ಪಂಡಿತ್ ನೆಹರೂರ ಪ್ರಸ್ತಾಪ ಆಝಾದರ ಪ್ರಸ್ತಾಪವನ್ನು ಹಿಂದಿಕ್ಕಿ ಅದೆಷ್ಟೋ ಮುಂದೆ ಸಾಗುತ್ತದೆ. ಪಂಡಿತ್ ನೆಹರೂರ ಅಭಿಪ್ರಾಯದಲ್ಲಿ ಅಲಿಗಢ ಪಂಥದ ಅಥವಾ ಉಸ್ಮಾನಿಯ ವಿಶ್ವವಿದ್ಯಾನಿಲಯ ಪಂಥದ ತೀವ್ರ ಅರಬೀಕರಣಗೊಂಡ ಉರ್ದುವೇ ಸುಮಾರು 28 ಕೋಟಿ ಹಿಂದೂಗಳನ್ನು ಒಳಗೊಂಡಿರುವ ಭಾರತದ ರಾಷ್ಟ್ರಭಾಷೆಯಾಗಲು ನಿಸ್ಸಂದೇಹವಾಗಿಯೂ ಅತ್ಯಂತ ಸೂಕ್ತ. (ಹಿಂದೂ ರಾಷ್ಟ್ರ ದರ್ಶನ್, ಪುಟ 110)
► ಒಬ್ಬ ಮುಸ್ಲಿಮನಿಗೆ ಮೂರು ವೋಟುಗಳಿರಬೇಕು ಎಂಬ ಮುಸ್ಲಿಂ ಲೀಗ್‌ನ ಬೇಡಿಕೆ ಮಿತಿಮೀರಿ ಕೋಮುವಾದಿಯಾಗಿದೆ. ಅದೇ ವೇಳೆ ಹಿಂದೂಗಳು ಈ ಬೇಡಿಕೆಯನ್ನು ಮನ್ನಿಸಬೇಕು ಮತ್ತು ಮೂವರು ಹಿಂದೂಗಳಿಗೆ ಒಂದು ವೋಟಿನ ಪ್ರಸ್ತಾಪಕ್ಕೆ ಒಪ್ಪಬೇಕೆಂದು ಕರೆಕೊಡುವ ಕಾಂಗ್ರೆಸ್ ಹೇಡಿತನದ ಕೋಮುವಾದಿಯಾಗಿದೆ! (ಹಿಂ.ರಾ.ದ., ಪುಟ 121)
► ಅಮೀರ ದಿಲ್ಲಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದಲ್ಲಿ ನಾವು ಸ್ವರಾಜ್ಯ ಗಳಿಸುತ್ತಿದ್ದೆವು ಎಂದು ಸಮರ್ಥಿಸುವ ಈ ಹಿಂದೂ ಮುಖಂಡರು ಅಲಿ ಸಹೋದರರ ಜೋಡಿ, ರಾಷ್ಟ್ರೀಯ ಮೌಲಾನಾ ಆಝಾದ್ ಮತ್ತು ಇತರ ಮುಸ್ಲಿಂ ಮುಖಂಡರನ್ನು ಕೂಡಾ ಮೀರಿಸುವುದನ್ನು ನೋಡುವಾಗ ಅತ್ಯಾಶ್ಚರ್ಯವಾಗುತ್ತದೆ - ಏಕೆಂದರೆ ಖಂಡಿತವಾಗಿಯೂ ಅವರು ಅಫ್ಘಾನಿಗಳ ಆಳ್ವಿಕೆಯೇ ಸ್ವರಾಜ್ಯ ಎಂದು ಹೇಳಿದರು. (ಹಿಂ.ರಾ.ದ., ಪುಟ 127)
► ಪ್ರಥಮ ಮಹಾಯುದ್ಧದ ಕಾಲದಲ್ಲಿ ಅಮಾನುಲ್ಲಾ ಖಾನ್ ಎಂಬ ಮಾಜಿ ಅಮೀರ ಭಾರತದಲ್ಲಿ ಇಸ್ಲಾಮಿನ ದೈವನಿಯಾಮಕ ವಿಮೋಚಕನ ಪಾತ್ರವನ್ನು ವಹಿಸಲಿದ್ದರು. ಮಹಾನ್ ರಾಷ್ಟ್ರೀಯವಾದಿಗಳಾದ ಅಲಿ ಸಹೋದರರ ಜೋಡಿ ಗಾಂಧೀಜಿಯ ವಿಶ್ವಾಸಘಾತುಕ ಮೌನಸಮ್ಮತಿಯೊಂದಿಗೆ ಅಮಾನುಲ್ಲಾ ಖಾನ್‌ರನ್ನು ದಿಲ್ಲಿಗೆ ಕರೆತಂದು ಭಾರತದ ಭಾವೀ ಅಭಿಷಿಕ್ತ ಚಕ್ರವರ್ತಿಯಾಗಿಸುವ ಸಂಚನ್ನು ರೂಪಿಸಿತ್ತು. (ಹಿಂ.ರಾ.ದ., ಪುಟ 237)