ದಿಲ್ಲಿ ದರ್ಬಾರ್
ಬದಲಾವಣೆಯ ಶಕೆ!
ಸದ್ಯ ಕಾಂಗ್ರೆಸ್ ಪಕ್ಷದಲ್ಲೂ ಬದಲಾವಣೆಯ ಪರ್ವ ಆರಂಭವಾಗಿದೆ. ಪಕ್ಷದ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಈ ಬದಲಾವಣೆಯ ಹಿಂದೆ ಇರುವ ರೂವಾರಿ ಎಂದರೆ ತಪ್ಪಲ್ಲ. ಉದಾಹರಣೆ; ಗುಜರಾತ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಾಕಷ್ಟು ಪರಿಶ್ರಮ ಪಟ್ಟನಂತರ ಪಕ್ಷವು ಒಂದಷ್ಟು ಪುನರುತ್ಥಾನಗೊಳ್ಳಲು ಸಾಧ್ಯವಾಗಿರುವುದನ್ನೇ ತಮ್ಮ ಯಶಸ್ಸು ಎಂದು ನಂಬಿ ಕಾಂಗ್ರೆಸ್‌ನ ಸ್ಥಳೀಯ ನಾಯಕರು ಕಾಲ ಮೇಲೆ ಕಾಲು ಹಾಕಿ ಕುಳಿತುಕೊಳ್ಳಲು ಮುಂದಾಗಿದ್ದರು. ಆದರೆ ರಾಹುಲ್ ಗಾಂಧಿ ಈ ನಾಯಕರ ಅಡಿಯಿಂದ ಕುರ್ಚಿಯನ್ನೇ ಕಸಿದುಕೊಳ್ಳುವ ಮೂಲಕ ಇವರಿಗೆಲ್ಲಾ ಬಿಸಿ ಮುಟ್ಟಿಸಿದ್ದಾರೆ. ಹಿರಿಯ ನಾಯಕರ ಸಭೆ ಕರೆದಿರುವ ರಾಹುಲ್ ಗಾಂಧಿ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗೆ ಸಿದ್ಧತೆ ನಡೆಸುವಂತೆ ತಮ್ಮ ಪಕ್ಷದ ನಾಯಕರಿಗೆ ಸೂಚಿಸಿದ್ದಾರೆ. ನಗರಸಭಾ ಚುನಾವಣೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ರಾಹುಲ್ ಗಾಂಧಿ ಹಿರಿಯ ನಾಯಕರ ಮೇಲೆ ಒತ್ತಡ ಹೇರಿದ್ದಾರೆ. ಪ್ರತಿಯೊಬ್ಬ ನಾಯಕನಿಗೆ ಒಂದಲ್ಲ ಬದಲಿಗೆ ಮೂರು ಜಿಲ್ಲೆಗಳ ಜವಾಬ್ದಾರಿಯನ್ನು ನೀಡಲಾಗಿದೆ. ಜೊತೆಗೆ ಅಭ್ಯರ್ಥಿಗಳನ್ನು ಭೇಟಿಯಾಗುವ ಸಲುವಾಗಿ ಸ್ಥಳೀಯ ಪ್ರದೇಶಗಳಿಗೆ ತೆರಳುವಂತೆ ಮತ್ತು ಕೆಳಹಂತದ ನಾಯಕರ ಜೊತೆ ಸಮಾಲೋಚನೆ ನಡೆಸುವಂತೆ ಅಧ್ಯಕ್ಷರು ಸೂಚಿಸಿದ್ದಾರೆ. ಈ ಕೆಲಸದಿಂದ ಪಕ್ಷದ ಹೈಕಮಾಂಡನ್ನು ಕೂಡಾ ಹೊರಗಿಟ್ಟಿಲ್ಲ ರಾಹುಲ್ ಗಾಂಧಿ. ಎಐಸಿಸಿ ಕಾರ್ಯದರ್ಶಿಗಳು ಮೊತ್ತಮೊದಲನೆಯದಾಗಿ ವಲಯವಾರು ಸಭೆಗಳನ್ನು ಆಯೋಜಿಸುವ ಸಲುವಾಗಿ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ಯಾವತ್ತೂ ಸ್ಥಳೀಯ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇ ಇಲ್ಲ. ಆದರೆ ಕೇಂದ್ರದಿಂದ ಬಿಜೆಪಿಯನ್ನು ಕೆಳಗಿಳಿಸಬೇಕಾದರೆ ನಗರಗಳ ಮತ್ತು ಪಟ್ಟಣ ಪ್ರದೇಶಗಳಲ್ಲಿ ಬೆಂಬಲವನ್ನು ಕ್ರೋಡೀಕರಿಸುವುದು ಬಹಳ ಮುಖ್ಯ ಎಂಬುದನ್ನು ರಾಹುಲ್ ಗಾಂಧಿ ಅರಿತಂತಿದೆ. ಈ ಪ್ರಕ್ರಿಯೆಯಲ್ಲಿ ರಾಹುಲ್ ಹಿರಿಯ ನಾಯಕರ ದೈತ್ಯ ಅಹಂಗೆ ಜೋರಾದ ಪೆಟ್ಟು ನೀಡಿದ್ದಾರೆ. ಅಷ್ಟಕ್ಕೂ ಕಾಂಗ್ರೆಸ್‌ನ ಬಹಳಷ್ಟು ಹಳೆತಲೆಗಳು ಪೌರ ಚುನಾವಣೆಗಳ ಪ್ರಚಾರದಲ್ಲಿ ತೊಡಗುವುದು ತಮ್ಮ ಘನತೆಗೆ ತಕ್ಕುದಲ್ಲ ಎಂದೇ ಭಾವಿಸಿದ್ದಾರೆ.
ಮೋದಿಯ ಮುಖದಲ್ಲಿ ಆತಂಕದ ಕಳೆ
ಚುನಾವಣಾ ವರ್ಷದ ಬಜೆಟ್ ಬಗ್ಗೆ ಉತ್ತಮವಾದ ಹೇಳಿಕೆಗಳನ್ನೇ ನೀಡುವಂತೆ ತನ್ನ ಎಲ್ಲ ಮಂತ್ರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಆದೇಶಿಸಿದಂತೆ ಭಾಸವಾಗುತ್ತಿದೆ. ಬಜೆಟ್ ಬಗ್ಗೆ ಪ್ರತಿಕ್ರಿಯೆ ಕುರಿತು ಆತಂಕಿತರಾಗಿರುವ ಮತ್ತು ಯಾವಾಗಲೂ ಸಕ್ರಿಯವಾಗಿರುವ ಸಾಮಾಜಿಕ ಜಾಲತಾಣದ ತನ್ನ ಬೆಂಬಲಿಗರು ಮತ್ತು ಹಿತೈಷಿಗಳಿಂದ ನಿರೀಕ್ಷಿತ ಬೆಂಬಲ ಸಿಗದಿರುವುದರಿಂದ ಮೋದಿ ಚಿಂತಿತರಾದಂತಿದೆ. ಈ ಸನ್ನಿವೇಶಕ್ಕೆ ಕ್ರಿಕೆಟ್ ಭಾಷೆಯಲ್ಲಿ ನರ್ವಸ್ ನೈಂಟಿ ಎನ್ನುತ್ತಾರೆ ಎಂದೊಮ್ಮೆ ಬಿಜೆಪಿ ನಾಯಕರೇ ತಿಳಿಸಿದ್ದರು. ಏಕಾಏಕಿ ಕೇಂದ್ರದ ಮಂತ್ರಿಗಳು ಬಜೆಟ್‌ನ ಲಾಭಗಳ ಬಗ್ಗೆ ಒಂದರ ಹಿಂದೆ ಒಂದರಂತೆ ಮಾಧ್ಯಮಗೋಷ್ಠಿಗಳನ್ನು ಆಯೋಜಿಸುತ್ತಿರುವುದು ಕಂಡುಬರುತ್ತಿದೆ. ಆ ಮೂಲಕ ಮೋದಿ ಆಡಳಿತದಲ್ಲಿ ಮಾಡಲಾಗಿರುವ ಘೋಷಣೆಗಳಿಗೆ ವಿಸ್ತೃತ ಧ್ವನಿಯಾಗುವ ಸಚಿವರ ಹಿಂದಿನ ಚಾಳಿ ಮುಂದುವರಿದಿದೆ. ಆರಂಭದಲ್ಲಿ ಸರಕಾರವು ಜಗತ್ತಿನಲ್ಲೇ ಅತ್ಯಂತ ದೊಡ್ಡ ಪ್ರಮಾಣದ್ದು ಎಂದು ತಿಳಿಯಲಾದ ಆರೋಗ್ಯಸೇವೆ ಮತ್ತು ರೈತರಿಗೆ ಕನಿಷ್ಠ ಬೆಂಬಲ ಬೆಲೆಗಿಂತ ಶೇ. 50ಹೆಚ್ಚು ನೀಡುವುದಾಗಿ ಮಾಡಲಾದ ಘೋಷಣೆಯಿಂದ ವಿಪಕ್ಷಗಳು ಕೂಡಾ ಒಂದರೆ ಕ್ಷಣ ಮೂಕವಿಸ್ಮಿತರಾಗಿದ್ದವು. ಆದರೆ ಈ ಘೋಷಣೆಗಳು ಕೇವಲ ಜುಮ್ಲಾಗಳಾಗಿದ್ದು ಬಜೆಟ್‌ನಲ್ಲಿ ಮಧ್ಯಮವರ್ಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂಬುದು ಸ್ಪಷ್ಟವಾದ ನಂತರ ಇದೀಗ ಕೇಂದ್ರದ ಬಜೆಟ್ ನಿಜವಾಗಿಯೂ ಉತ್ತಮವಾಗಿದೆ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ಮಂತ್ರಿಗಳ ಹೆಗಲ ಮೇಲೆ ಬಿದ್ದಿದೆ. ಇದೊಂದು ಕಷ್ಟಕರ ಕೆಲಸವಾಗಿದ್ದು ಮೋದಿ ಸಂತುಷ್ಟಗೊಳ್ಳುವುದು ಅನುಮಾನ.
ಚಿದಂಬರಂರನ್ನು ನಿರ್ಲಕ್ಷಿಸುವಂತಿಲ್ಲ
ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಹಸ್ತಕ್ಷೇಪವನ್ನು ವಿರೋಧಿಸಿ ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್ ನೇತೃತ್ವದಲ್ಲಿ ರಾಜ್ಯಸಭೆಯಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು. ಆದರೆ ಈ ವಿಷಯದಲ್ಲಿ ಬಿಜೆಪಿಯ ಹಲವು ಸಂಸದರು ಅನಂತ ಕುಮಾರ್ ಜೊತೆ ಸಹಮತ ಹೊಂದಿಲ್ಲದಿರುವುದು ಕಂಡು ಬಂತು. ಕೆಲವು ಬಿಜೆಪಿ ನಾಯಕರು ಬಾವಿಯೊಳಗಿಳಿದು ಘೋಷಣೆಗಳನ್ನು ಕೂಗಿದರೆ ಇನ್ನೂ ಕೆಲವು ಬಿಜೆಪಿ ನಾಯಕರು ತಮ್ಮ ಸ್ಥಳದಲ್ಲೇ ಕುಳಿತು ಕಿವಿಗೆ ಹೆಡ್‌ಫೋನ್‌ಗಳನ್ನು ಹಾಕಿ ಕಾಂಗ್ರೆಸ್‌ನ ಪ್ರಬುದ್ಧ ನಾಯಕ ಆಡುತ್ತಿದ್ದ ಪ್ರತಿಯೊಂದು ಮಾತುಗಳನ್ನೂ ಗಮನವಿಟ್ಟು ಕೇಳುತ್ತಿದ್ದರು. ಅವರಲ್ಲಿ ಹಲವರು ಚಿದಂಬರಂ ಹೇಳುತ್ತಿರುವ ಸಾಲುಗಳನ್ನು ಬರೆದಿಡುವ ಕಷ್ಟವನ್ನೂ ತೆಗೆದುಕೊಳ್ಳುತ್ತಿದ್ದರು. ಇಂಥ ದೃಶ್ಯ ಪ್ರಧಾನಿ ಮೋದಿ ಅಥವಾ ಬಿಜೆಪಿ ಅಧ್ಯಕ್ಷ ಭಾಷಣ ಮಾಡುವ ವೇಳೆಯೂ ಕಂಡುಬಂದಿರಲಿಲ್ಲ. ಇದರಿಂದ ಒಂದು ವಿಷಯ ಸ್ಪಷ್ಟವಾಗುವುದೇನೆಂದರೆ, ನಿಮ್ಮ ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇದ್ದರೂ ಚಿದಂಬರಂ, ಮುಖ್ಯವಾಗಿ ಆರ್ಥಿಕತೆಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದಾದರೆ ನೀವು ಅವರ ಮಾತುಗಳನ್ನು ಆಲಿಸಲು ಬಯಸುತ್ತೀರಿ.
ದೇವೇಗೌಡರ ಚುನಾವಣಾ ವಿಶ್ಲೇಷಣೆ
ಕೆಲದಿನಗಳ ಹಿಂದೆ ತೃಣಮೂಲ ಕಾಂಗ್ರೆಸ್‌ನ ಸಂಸದರೊಬ್ಬರು ಸಂಸತ್‌ನಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರ ಜೊತೆ ಮಾತುಕತೆ ನಡೆಸುತ್ತಾ, ಕರ್ನಾಟಕವು ಚುನಾವಣೆಗೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಗೌಡರ ಜಾತ್ಯತೀತ ಜನತಾದಳ ಯಾವ ರೀತಿಯ ನಿರ್ವಹಣೆ ತೋರಬಹುದು ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಗೌಡರು, ಕಾವೇರಿ ವಿವಾದದ ಕುರಿತು ಸರ್ವೋಚ್ಚ ನ್ಯಾಯಾಲಯದ ತೀರ್ಪು ಬಂದ ನಂತರ ಇದಕ್ಕೆ ಸರಿಯಾದ ಉತ್ತರ ಸಿಗಬಹುದು ಎಂದು ತಿಳಿಸಿದ್ದರು. ಅವರ ಮಾತುಗಳನ್ನು ಕೇಳಿಸಿಕೊಂಡ ಪಕ್ಕದಲ್ಲೇ ಇದ್ದ ಸಂಸದರೊಬ್ಬರು, ಬಹುಶಃ ದೇವೇ ಗೌಡರು ಸರ್ವೋಚ್ಚ ನ್ಯಾಯಾಲಯವು ನೀಡುವ ತೀರ್ಪು ಕರ್ನಾಟಕ ಸರಕಾರವನ್ನು ಚಿಂತೆಗೀಡು ಮಾಡುವಂತಿರಬೇಕು ಎಂದು ಬಯಸುತ್ತಿರಬಹುದು ಎಂದು ಪಿಸುಗುಟ್ಟಿದ್ದರು. ಈಗ ನ್ಯಾಯಾಲಯದ ತೀರ್ಪು ಹೊರಬಿದ್ದಿದ್ದು ಆಳುವ ಕಾಂಗ್ರೆಸ್ ತುಂಬಾ ಸಂತೋಷಗೊಂಡಿದೆ. ಹಾಗಾಗಿ ದೇವೇ ಗೌಡರ ಲೆಕ್ಕಾಚಾರದಂತೆ ಮುಂದಿನ ಚುನಾವಣೆಯಲ್ಲಿ ಈ ತೀರ್ಪು ಯಾವ ರೀತಿಯ ಪರಿಣಾಮ ಬೀರಬಹುದು ಎಂಬ ಬಗ್ಗೆ ಕುತೂಹಲವಂತೂ ಇದೆ.
ರೇಣುಕಾ ಎಂಬ ತಮಾಷೆಗಾತಿ
ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುತ್ತಿದ್ದ ವೇಳೆ ಜೋರಾಗಿ ನಕ್ಕ ಕಾರಣಕ್ಕೆ ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿಯಾದವರು ರೇಣುಕಾ ಚೌಧುರಿ. ಆಕೆಯ ಬಗ್ಗೆ ಪ್ರಧಾನಿ ಮೋದಿ ನೀಡಿದ ಹೇಳಿಕೆ ಯಿಂದ ಮಹಿಳಾ ಗುಂಪುಗಳು ಮೋದಿಯ ವಿರುದ್ಧ ಹರಿಹಾಯ್ದಿದ್ದವು. ಆದರೆ ರೇಣುಕಾ ತನ್ನ ಮೇಲೆಯೇ ನಗುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದ ಸಮಯದಲ್ಲಿ ಜೈಪಾಲ್ ರೆಡ್ಡಿಯವರು ಪ್ರಧಾನಿ ದೇಶವನ್ನು ಬೃಹತ್ ಮಟ್ಟದಲ್ಲಿ ವಂಚಿಸಿದ್ದಾರೆ ಎಂದು ಆರೋಪಿಸಿದ್ದರು. ಆಗ ಬೃಹತ್ ಎಂಬ ಶಬ್ದಕ್ಕೆ ಆಂಗ್ಲ ಭಾಷೆಯಲ್ಲಿ ಹುಮೊಂಗಸ್ ಎಂಬ ಶಬ್ದವನ್ನು ಬಳಸಿದ್ದರು. ನಂತರ ಸಭೆ ಅಲ್ಪಕಾಲಕ್ಕೆ ಮುಂದೂಡಲ್ಪಟ್ಟಾಗ ಲೋಕಸಭಾ ಸದಸ್ಯರು ಶಬ್ದಕೋಶದಲ್ಲಿ ಈ ಹುಮೊಂಗಸ್ ಶಬ್ದದ ಅರ್ಥವನ್ನು ಹುಡುಕುವಲ್ಲಿ ತಲ್ಲೀನರಾದರು. ಆ ಸಂದರ್ಭದಲ್ಲಿ ಮಾತನಾಡಿದ ಚೌಧುರಿ, ಈ ಶಬ್ದದ ಅರ್ಥ ನಿಮಗೆ ಗೊತ್ತಿಲ್ಲವೇ? ಹುಮೊಂಗಸ್ ಎಂದರೆ ನಾನೇ ಎಂದು ವ್ಯಂಗ್ಯವಾಡಿದ್ದರು. ಆಕೆಯ ಮಾತುಗಳನ್ನು ಕೇಳಿ ಎಲ್ಲರೂ ಜೋರಾಗಿ ನಕ್ಕಿದ್ದರು. ಅಂದಹಾಗೆ ಜೋರಾಗಿ ನಗುವುದಕ್ಕೆ ಆಂಗ್ಲಭಾಷೆಯಲ್ಲಿ ಲಾಫ್ ಔಟ್ ಲೌಡ್ ಅಥವಾ ಎಲ್‌ಒಎಲ್ ಎನ್ನುತ್ತಾರೆ ಅದರ ನೂತನ ಪರಿಭಾಷೆ ಎಲ್‌ಎಲ್‌ಆರ್‌ಸಿ ಆಗಿದೆ. ಅಂದರೆ ಲಾಫ್ ಲೈಕ್ ರೇಣುಕಾ ಚೌಧುರಿ