ಒದೆಸಿಕೊಳೊಳ್ಳೋ ಕೆ ಬಂದಿದ್ದೇವೆ ಕಣ್ರೀ...

Update: 2018-02-24 18:19 GMT

ಒದೆಯುವುದರಲ್ಲಿ ಕುಖ್ಯಾತರಾಗಿ ‘ಒದೆರತ್ನ’ ಪ್ರಶಸ್ತಿಯನ್ನು ಪಡೆದಿರುವ ಶಾಸಕರೊಬ್ಬರ ಪುತ್ರನೊಬ್ಬ ಮಾಧ್ಯಮಗಳಲ್ಲಿ ಮತ್ತೆ ಕುಖ್ಯಾತರಾಗುತ್ತಿದ್ದಂತೆಯೇ ಹಳ್ಳಿಗಳಿಂದ ನಗರಕ್ಕೆ ವಲಸೆ ಬಂದಿರುವ ಕಾರ್ಮಿಕರೆಲ್ಲ ಶಾಸಕರ ಮನೆಗೆ ತಾಮುಂದೆ, ನಾಮುಂದೆ ಎಂದು ನೆರೆಯ ತೊಡಗಿದರು. ಶಾಸಕರ ಮನೆಯ ಮುಂದೆ ಜನರು ಗುಂಪು ಗುಂಪಾಗಿ ಸೇರುತ್ತಿರುವುದು ಪತ್ರಕರ್ತ ಎಂಜಲು ಕಾಸಿಗೆ ಗೊತ್ತಾಗಿ, ‘‘ಪ್ರತಿಭಟನೆಗಾಗಿ ಜನರೆಲ್ಲ ಶಾಸಕರ ನಿವಾಸದ ಮುಂದೆ ಸೇರುತ್ತಿದ್ದಾರೆ’’ ಎಂದು ಸಂಪಾದಕರಿಗೆ ಪ್ರಾಥಮಿಕ ವರದಿ ಒಪ್ಪಿಸಿ ತನ್ನ ಜೋಳಿಗೆ ಮತ್ತು ಪೆನ್ನಿನ ಜೊತೆಗೆ ಸ್ಥಳಕ್ಕೆ ಧಾವಿಸಿದ.

‘‘ಸಾಲಾಗಿ ನಿಲ್ಲಿ..... ಸಾಲಾಗಿ ನಿಲ್ಲಿ....’’ ಎಂದು ಯಾರೋ ಸಲಹೆ ನೀಡುತ್ತಿದ್ದರು. ಕಾಸಿಗೆ ಅರ್ಥವಾಗಲಿಲ್ಲ. ಯಾವುದೇ ಘೋಷಣೆಗಳಿಲ್ಲ. ಬಾವುಟ ಇಲ್ಲ. ಅಂದರೆ ಪ್ರತಿಭಟನೆ ಅಲ್ಲ ಎನ್ನುವುದು ಅರ್ಥವಾಯಿತು. ಅಷ್ಟರಲ್ಲಿ ಒಬ್ಬ ಸಣಕಲು ವ್ಯಕ್ತಿಯನ್ನು ತಟ್ಟಿ ‘‘ಇಲ್ಲಿ ಯಾಕೆ ಸೇರಿದ್ದೀರಿ?’’ ಎಂದು ಕೇಳಿದ.

‘‘ಸಾಲಲ್ಲಿ ಬನ್ನಿ....ಮಧ್ಯೆ ನುಸುಳ ಬೇಡಿ...’’ ಸಣಕಲ ಕಾಸಿಯನ್ನು ಬೆದರಿಸಿದ. ‘‘ನಾನು ಕ್ಯೂ ನಿಲ್ಲಲು ಬಂದಿಲ್ಲ...ನೀವೆಲ್ಲ ಯಾಕೆ ಇಲ್ಲಿ ಸೇರಿದ್ದೀರಿ ಎಂದು ತಿಳಿದುಕೊಳ್ಳಲು ಬಂದಿದ್ದೇನೆ....’’ ಕಾಸಿ ಸ್ಪಷ್ಟೀಕರಣ ನೀಡಿದ.
‘‘ಅಂದ್ರೆ ನಿಮಗೆ ಗೊತ್ತಿಲ್ವಾ...?’’ ಸಣಕಲ ಕೇಳಿದ.

‘‘ಇಲ್ಲ....’’ ‘‘ಶಾಸಕರು ಎಲ್ಲರಿಗೂ ಒಂದೊಂದು ಕೋಟಿ ವಿತರಿಸುತ್ತಿದ್ದಾರೆ...ಅಂತ ಸುದ್ದಿ ಸಿಕ್ಕಿತು...ಅದಕ್ಕೆ ನಾವೆಲ್ಲರೂ ಇಲ್ಲಿ ಸೇರಿದ್ದೇವೆ...’’ ಅದನ್ನು ಕೇಳಿ ಕಾಸಿಯ ತಲೆ ಧಿಮ್ಮೆಂದಿತು. ಒಂದು ಕೋಟಿ ರೂಪಾಯಿ! ಅದು ಇಲ್ಲಿ ನೆರೆದ ಎಲ್ಲರಿಗೂ? ಅರ್ಥವಾಗಲಿಲ್ಲ.
‘‘ಯಾಕ್ರೀ...ಅವರ್ಯಾಕೆ ನಿಮಗೆ ಒಂದು ಕೋಟಿ ರೂಪಾಯಿ ಕೊಡ್ತಾರೆ....?’’ ಕೇಳಿದ.
‘‘ಸಾರ್... ಮೊನ್ನೆ ಅದ್ಯಾವುದೋ ಬಾರಲ್ಲಿ ನಮ್ಮ ಶಾಸಕರ ಮಗ ಯಾರಿಗೋ ಒದ್ದು ಆಸ್ಪತ್ರೆ ಸೇರಿಸಿದ್ನಲ್ಲಾ?’’
‘‘ಹೌದು...’’ ಕಾಸಿ ತಲೆಯಲ್ಲಾಡಿಸಿದ.
‘‘ಇದೀಗ ಆತ ಕೇಸು ಹಿಂದೆಗೆಯಬೇಕು ಅಂತ ಭಾರೀ ದೊಡ್ಡ ಡೀಲು ನಡೀತಿದೆಯಂತೆ. ಕೇಸು ಹಿಂದೆಗೆದು, ಮಗನ ಪರವಾಗಿ ಸಾಕ್ಷಿ ಹೇಳಿದರೆ ಆತನಿಗೆ ಒಂದು ಕೋಟಿ ಕೊಡ್ತಾರಂತೆ...’’ ಸಣಕಲ ವಿವರಿಸಿದ.
‘‘ಅದು ಅವರಿಬ್ಬರಿಗೆ ಸಂಬಂಧಿಸಿದ ವಿಷಯ. ಅದಕ್ಕೆ ನೀವ್ಯಾಕೆ ಇಲ್ಲಿ ಸೇರಿದ್ದೀರಿ?’’ ಕಾಸಿ ಪ್ರಶ್ನಿಸಿದ.
‘‘ಅದೇರಿ...ನಾವು ಶಾಸಕರ ಮಗನ ಜೊತೆಗೆ ಒದೆಸಿಕೊಳ್ಳೋದಕ್ಕೆ ಬಂದಿದ್ದೇವೆ....’’ ಸಣಕಲ ಹೇಳಿದ.
ಕಾಸಿ ಅರ್ಥವಾಗದೆ ಸಣಕಲನ ಮುಖವನ್ನೇ ನೋಡ ತೊಡಗಿದ.
‘‘ನೋಡ್ರೀ...ಹಳ್ಳಿಯಿಂದ ನಗರಕ್ಕೆ ಬಂದಿದ್ದೀವಿ. ಇಲ್ಲಿ ನೋಡಿದ್ರೆ ಯಾವ ಕೆಲಸವೂ ಇಲ್ಲ. ಅತ್ಲಾಗೆ ಹಳ್ಳಿಗೆ ಹೋಗುವ ಹಾಗೂ ಇಲ್ಲ. ಈ ನಗರದಲ್ಲಿ ನೋಡಿದರೆ ಬರೇ ಒದೆ ತಿಂದು ಕೋಟಿ ಕೋಟಿ ಡೀಲು ಮಾಡ್ಕೋಬಹುದು. ಅದಕ್ಕೆ ಶಾಸಕರ ಮಗನ ಬಳಿಕ ಒದೆ ತಿಂದು ಅವರಿಂದ ಒಂದು ಕೋಟಿ ಇಸ್ಕೊಂಡು ಅವರ ಪರವಾಗಿ ಸಾಕ್ಸಿ ಹೇಳೋಣಾಂತೀದ್ದೇವೆ...ನಿಮಗೇನಾದ್ರೂ ಶಾಸಕರು ಪರಿಚಯ ಇದ್ದರೆ ವಸಿ ಹೇಳ್ರಿ....ನಾವು ಒದೆಸಿಕೊಳ್ಳೋದಕ್ಕೆ ಸಿದ್ಧ ಇದ್ದೇವೆ...ಒಂದು ಕೋಟಿ ಬೇಡ...ಒಂದೈದು ಸಾವ್ರ ಸಿಕ್ಕಿದರೂ ಸಾಕು...ಆಸ್ಪತ್ರೆ ಖರ್ಚು ನಾವೇ ನೋಡ್ಕೋತೀವಿ....ಸಾರ್ ಪ್ಲೀಸ್ ಸಾರ್...ನೀವೇ ವಸಿ ಇನ್‌ಫ್ಲೂಯೆನ್ಸ್ ಮಾಡಿ ಸಾರ್....ಒದೆ ತಿಂದಾದ್ರೂ ಬದ್ಕೋತೀವಿ....ಸಿದ್ರಾಮಣ್ಣರ ಸರಕಾರದಲ್ಲಿ ಅನ್ನ ಭಾಗ್ಯ ಥರ, ಒದೆ ಭಾಗ್ಯ ಅಂತ ಸ್ವೀಕರಿಸುತ್ತೀವಿ....’’
ಯಾರೋ ಹೊಟ್ಟೆಗೆ ಒದ್ದಂತೆ ಅನ್ನಿಸಿ ಕಾಸಿ ವಿಲ ವಿಲ ನರಳುತ್ತಾ ಅಲ್ಲಿಂದ ಹೊರಟ

****
ಶಾಸಕರ ಪುತ್ರ ಯುವಕನೊಬ್ಬನಿಗೆ ಬಾರೊಂದರಲ್ಲಿ ಒದ್ದಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆಯೇ ಯಡಿಯೂರಪ್ಪ ಪತ್ರಿಕಾಗೋಷ್ಠಿ ಕರೆದರು.
‘‘ಆತ ಒದ್ದಿರುವುದು ಬಿಜೆಪಿ ಕಾರ್ಯಕರ್ತನನ್ನು....’’ ಯಡಿಯೂರಪ್ಪ ಘೋಷಿಸಿದರು.
‘‘ಸಾರ್, ಆತ ಬಿಜೆಪಿ ಕಾರ್ಯಕರ್ತ ಎಂದು ನಿಮಗೆ ಹೇಳಿರುವುದು ಯಾರು?’’ ಕಾಸಿ ಕೇಳಿದ.

‘‘ಕೇಂದ್ರದಿಂದ ಬಂದ ಅಮಿತ್ ಶಾ ಅವರೇ ಘೋಷಿಸಿದ್ದಾರೆ. ಅಂದ ಮೇಲೆ ಆತ ಬಿಜೆಪಿ ಕಾರ್ಯಕರ್ತ ಇರಲೇ ಬೇಕು....’’
‘‘ಸಾರ್ ನಿಮಗೆ ಗೊತ್ತಿಲ್ಲದೇ ಇರುವುದು ಅವರಿಗೆ ಹೇಗೆ ಗೊತ್ತು?’’ ಕಾಸಿ ತನ್ನ ಪಟ್ಟು ಬಿಡಲಿಲ್ಲ.
‘‘ನೋಡ್ರೀ...ನಮ್ಮಲ್ಲಿ ಮಿಸ್‌ಕಾಲ್ ಕೊಟ್ಟರೆ ಬಿಜೆಪಿಯ ಸದಸ್ಯನಾಗಬಹುದು...ಹಲ್ಲೆಗೊಳಗಾದ ಯುವಕ ನೇರವಾಗಿ ಅಮಿತ್ ಶಾ ಅವರ ಮೊಬೈಲ್‌ಗೆ ಮಿಸ್ ಕಾಲ್ ಕೊಟ್ಟಿದ್ದ. ಆದುದರಿಂದ ನಮಗೆ ಅಮಿತ್ ಶಾ ಅವರಿಂದ ಆತ ಬಿಜೆಪಿ ಕಾರ್ಯಕರ್ತ ಎನ್ನುವುದು ಗೊತ್ತಾಯಿತು...ಮುಂದಿನ ದಿನಗಳಲ್ಲಿ ಮಿಸ್ ಕಾಲ್ ಅಲ್ಲ ಬರೇ ಕಾಲ್ ಕೊಟ್ಟರೂ ಕಾರ್ಯಕರ್ತರನ್ನಾಗಿ ಮಾಡುತ್ತೇವೆ....’’ ಯಡಿಯೂರಪ್ಪ ಘೋಷಿಸಿದರು.
‘‘ಕಾಲ್ ಕೊಡುವುದು ಎಂದರೆ...’’ ಕಾಸಿ ಅರ್ಥವಾಗದೆ ಕೇಳಿದ.

‘‘ಅದೇರೀ...ಯಾರಾದರೂ ಕಾಲು ಕತ್ತರಿಸಲ್ಪಟ್ಟವರು ತಮ್ಮ ಕತ್ತರಿಸಲ್ಪಟ್ಟ ಕಾಲಿನ ಜೊತೆಗೆ ಬಂದರೆ ಅವರನ್ನು ಸದಸ್ಯರನ್ನಾಗಿ ಮಾಡಿಕೊಳ್ಳುತ್ತೇವೆ. ಅವರ ಕಾಲನ್ನು ಯಾರು ಕತ್ತರಿಸಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ....’’
ಕಾಸಿಯ ಕಾಲು ಸಣ್ಣಗೆ ನಡುಗಿತು. ‘‘ಸಾರ್....ಶಾಸಕರ ಪುತ್ರ ಹಲ್ಲೆ ನಡೆಸಿದ ವ್ಯಕ್ತಿ ಕೇಸು ಹಿಂದೆಗೆಯ ಬೇಕಾದರೆ ಒಂದು ಕೋಟಿ ಕೊಡಲು ಸಿದ್ಧರಿದ್ದಾರಂತೆ...ಜನರೆಲ್ಲ ಅವರ ಕೈಯಿಂದ ಒದೆಸಿ ಕೇಸು ಹಿಂದೆಗೆಯಲು ಕ್ಯೂ ನಿಂತಿದ್ದಾರೆ. ಇದರ ಬಗ್ಗೆ ಏನು ಹೇಳುತ್ತೀರಿ?’’

‘‘ನೋಡ್ರೀ...ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಒಂದು ಒದೆಗೆ ಒಂದು ಲಕ್ಷ ರೂಪಾಯಿ ಡೀಲು ಮಾಡುತ್ತೇವೆ. ಗಂಭೀರವಾಗಿ ಗಾಯಗೊಂಡರೆ ಎರಡು ಕೋಟಿಯವರೆಗೆ ಡೀಲು ಕುದುರಿಸುತ್ತೇವೆ...ಡೀಲ್ ಭಾಗ್ಯವೆಂದೇ ಅದಕ್ಕೆ ಹೆಸರಿಡುತ್ತೇವೆ.....’’ ಯಡಿಯೂರಪ್ಪ ಪುಂಖಾನುಪುಂಖವಾಗಿ ಭರವಸೆಗಳನ್ನು ನೀಡತೊಡಗಿದಂತೆಯೇ...ಪತ್ರಕರ್ತ ಎಂಜಲು ಕಾಸಿ ‘‘ಸಾರ್ ಕೇರಳದಲ್ಲಿ....ಆದಿವಾಸಿಯ ಮೇಲೆ...ಹಲ್ಲೆ ಕೊಲೆ....’’ ಎನ್ನುತ್ತಿದ್ದಂತೆಯೇ ಯಡಿಯೂರಪ್ಪ ಘೋಷಿಸಿದರು ‘‘ಆತ ನಮ್ಮ ಪಕ್ಷದ ಪಕ್ಕಾ ಕಾರ್ಯಕರ್ತ. ಅದಕ್ಕಾಗಿಯೇ ಆತನ ಮೇಲೆ ಹಲ್ಲೆ ನಡೆಸಲಾಗಿದೆ....ನಾವು ಕೇರಳಕ್ಕೆ ಪಾದಯಾತ್ರೆ ಹೊರಡಲಿದ್ದೇವೆ....’’ ಕಾಸಿ ಮೆಲ್ಲಗೆ ಅಲ್ಲಿಂದ ಕಾಲಿಗೆ ಬುದ್ಧಿ ಹೇಳಿದ.

 

Writer - ಚೇಳಯ್ಯ - chelayya@gmail.com

contributor

Editor - ಚೇಳಯ್ಯ - chelayya@gmail.com

contributor

Similar News