ಸೋನು ಕೆ ಟಿಟು ಕಿ ಸ್ವೀಟಿ: ಮಹಿಳೆಯರಿಗೆ ಪ್ರವೇಶವಿಲ್ಲ!
ಪ್ಯಾರ್ ಕಾ ಪಂಚನಾಮ (ಕು)ಖ್ಯಾತಿಯ ನಿರ್ದೇಶಕ ಲವ್ ರಂಜನ್ ಇದೀಗ ‘ಸೋನು ಕೆ ಟಿಟು ಕಿ ಸ್ವೀಟಿ’ ಚಿತ್ರದ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಪ್ಯಾರ್ ಕಾ ಪಂಚನಾಮದಲ್ಲಿ ಆಧುನಿಕ ಹೆಣ್ಣು ಪ್ರೀತಿಯ ಹೆಸರಲ್ಲಿ ಹೇಗೆ ಯುವಕರನ್ನು ಶೋಷಣೆ ಮಾಡುತ್ತಾಳೆ ಎನ್ನುವುದನ್ನು ತೆರೆದಿಟ್ಟಿದ್ದರು. ಇದೊಂದು ಹಾಸ್ಯ ಚಿತ್ರವಾಗಿದ್ದರೂ ಇದರ ವಿರುದ್ಧ ಕಟು ವಿಮರ್ಶೆ ಹೊರ ಬಂದಿತ್ತು. ಚಿತ್ರವಾಗಿ ಜನಮನ ಗೆದ್ದಿತ್ತಾದ್ದರೂ ಇದು ಹೆಣ್ಣಿನ ಕುರಿತಂತೆ ಪೂರ್ವಾಗ್ರಹವನ್ನು ಬಿತ್ತುತ್ತದೆ ಎನ್ನುವುದು ಚಿತ್ರ ಪ್ರೇಮಿಗಳ ವಾದವಾಗಿತ್ತು. ಇದಾದ ಬಳಿಕ ‘ಪ್ಯಾರ್ ಕಾ ಪಂಚನಾಮ-2’ ಬಂತು. ಇದೀಗ ‘ಸೋನು ಕೆ ಟಿಟು ಕಿ ಸ್ವೀಟಿ’ಯ ಮೂಲಕ ಪ್ರೀತಿಯ ಪಂಚನಾಮ ಮಾಡಿದ್ದಾರೆ. ಇಲ್ಲೂ ಆಧುನಿಕ ಹೆಣ್ಣು ಪ್ರೀತಿಯ ಹೆಸರಲ್ಲಿ ಶೋಷಣೆ ಮಾಡುವವಳೇ ಆಗಿರುತ್ತಾಳೆ. ತನ್ನ ಬಾಲ್ಯ ಸ್ನೇಹಿತನನ್ನು ಆ ಹುಡುಗಿಯ ಬಲೆಯಿಂದ ಬಿಡಿಸುವ ಕತೆ ಇದು.
ಸೋನು (ಕಾರ್ತಿಕ್ ಆರ್ಯನ್) ಮತ್ತು ಟಿಟು (ಸನ್ನಿ ಸಿಂಗ್) ಬಾಲ್ಯ ಸ್ನೇಹಿತರು ಮಾತ್ರವಲ್ಲ, ಒಂದೇ ಕುಟುಂಬದ ಸದಸ್ಯರು. ಸೋದರರಲ್ಲ್ಲದ್ದರೂ ಸೋದರರಂತೆ ಬದುಕುತ್ತಿರುವವರು. ಹೆಣ್ಣಿನ ವಿಷಯದಲ್ಲಿ ಟಿಟು ತುಸು ಮುಗ್ಧ. ಈತನನ್ನು ಹುಡುಗಿಯರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎನ್ನುವುದು ಸೋನುವಿನ ಭಯ. ಹೆಣ್ಣಿನ ವಿಷಯದಲ್ಲಿ ಟಿಟು ದುಃಖಿತನಾದಾಗೆಲ್ಲ ಆತನನ್ನು ರಕ್ಷಿಸುವವನು, ಸಂತೈಸುವವನು ಸೋನು. ಈ ಜಗತ್ತಿನಲ್ಲಿ ಒಳ್ಳೆಯ ಹುಡುಗಿಯರೇ ಇಲ್ಲ ಎನ್ನುವುದು ಈತನ ನಿಲುವು. ಒಂದೆಡೆ ಹೆಣ್ಣು ಒಳ್ಳೆಯವಳಂತೆ ಕಂಡರೂ ‘‘ಆಕೆ ಯಾಕೆ ಇಷ್ಟು ಒಳ್ಳೆಯವಳಿದ್ದಾಳೆ...? ಹೆಣ್ಣು ಇಷ್ಟು ಒಳ್ಳೆಯವಳು ಇರಲು ಸಾಧ್ಯವೇ ಇಲ್ಲ, ಈಕೆ ನಟಿಸುತ್ತಿದ್ದಾಳೆ’’ ಎಂಬ ನಿಲುವನ್ನು ಹೊಂದಿದವನು. ಈಗಾಗಲೇ ಒಂದು ಹುಡುಗಿಯ ಮೋಹ ಮತ್ತು ಮೋಸವನ್ನು ಗೆಳೆಯನಿಗೆ ಪರಿಚಯಿಸಿ ಆಕೆಯ ಬಲೆಯಿಂದ ಗೆಳೆಯನನ್ನು ರಕ್ಷಿಸಿದವನು ಸೋನು. ಹೀಗಿರುವಾಗ, ಟಿಟುವಿಗೆ ಕುಟುಂಬವೇ ಒಂದು ಹುಡುಗಿಯನ್ನು ನಿಶ್ಚಯಮಾಡುತ್ತದೆ. ಸರ್ವ ರೀತಿಯಲ್ಲೂ ಒಳ್ಳೆಯ ಗುಣ ಲಕ್ಷಣಗಳಿರುವ ಹುಡುಗಿ ಸ್ವೀಟಿ (ನುಶ್ರತ್ ಬರೂಚ). ಟಿಟುವಿಗೂ ಹುಡುಗಿ ಇಷ್ಟವಾಗುತ್ತಾಳೆ. ಆದರೆ ಸೋನುವಿಗೆ ಸಂಶಯ ಆರಂಭವಾಗುತ್ತದೆ. ಸ್ವೀಟಿ ಹಂತಹಂತವಾಗಿ ಮನೆಯವರೆಲ್ಲರ ಮನಸ್ಸನ್ನು ಗೆಲ್ಲುತ್ತಾಳೆ. ಎಲ್ಲಿಯವರೆಗೆ ಎಂದರೆ, ಕುಟುಂಬದ ತಿಜೋರಿಯ ಕೀಲಿ ಕೈ ಕೂಡ ಒಪ್ಪಿಸುವವರೆಗೆ. ಕೊನೆಯಲ್ಲಿ ಸೋನುವಿಗೂ ಹುಡುಗಿ ನಿಜಕ್ಕೂ ಒಳ್ಳೆಯವಳು ಅನ್ನಿಸುತ್ತದೆ. ನಿಶ್ಚಿತಾರ್ಥವೂ ನಡೆಯುತ್ತದೆ. ಆದರೆ ನಿಶ್ಚಿತಾರ್ಥ ನಡೆದ ಬೆನ್ನಿಗೇ ಸೋನು ಏಕಾಂತದಲ್ಲಿರುವಾಗ ಅಲ್ಲಿಗೆ ಬಂದು ‘‘ನಾನು ನಿಜಕ್ಕೂ ಮೋಸ ಮಾಡುವುದಕ್ಕಾಗಿಯೇ ಬಂದಿದ್ದೇನೆ. ಮದುವೆಯಾದದ್ದೇ ನಿನ್ನನ್ನು ಈ ಮನೆಯಿಂದ ಓಡಿಸಲು. ಸಾಧ್ಯವಾದರೆ ನನ್ನ ಮೋಸವನ್ನು ನಿನ್ನ ಗೆಳೆಯನಲ್ಲಿ ಹೇಳಿ ನಂಬಿಸು’’ ಎಂದು ಸವಾಲು ಹಾಕುತ್ತಾಳೆ. ಗೆಳತಿ ಮತ್ತು ಸ್ನೇಹ ಇದರಲ್ಲಿ ಟಿಟು ಯಾರನ್ನು ನಂಬುತ್ತಾನೆ ಎನ್ನುವುದು ಚಿತ್ರದ ಕ್ಲೈಮಾಕ್ಸ್.
ಲವ್‌ರಂಜನ್ ಚಿತ್ರಗಳು ಯುವಕರ ಪ್ರೇಮ ಪ್ರೀತಿ ತಲ್ಲಣಗಳನ್ನು ಹೇಳುವಲ್ಲಿ ಯಶಸ್ವಿಯಾಗುತ್ತದೆಯಾದರೂ, ಅದು ಪ್ರತೀ ಬಾರಿ ಹುಡುಗರ ಪರವಾಗಿಯೇ ಇರುತ್ತದೆ. ಇಲ್ಲಿಯೂ ಅದೇ ನಡೆದಿದೆ. ‘ಹುಡುಗಿಯರು ತುಂಬಾ ಚಾಲೂ’ ಎನ್ನುವ ಮನಸ್ಥಿತಿಯನ್ನು ಪ್ರತಿಪಾದಿಸುವ ಈ ಸಿನೆಮಾ ಪ್ರತಿಗಾಮಿ ವೌಲ್ಯವನ್ನು ಹೊಂದಿದೆ. ಆದರೆ ಒಂದು ಚಿತ್ರವಾಗಿಯಷ್ಟೇ ಸ್ವೀಕರಿಸುವುದಾದರೆ, ಆರಂಭದಿಂದ ಕೊನೆಯವರೆಗೂ ರಂಜಿಸುವುದರಲ್ಲಿ ಅನುಮಾನವಿಲ್ಲ. ಸೋನು ಆಗಿ ಕಾರ್ತಿಕ್ ಆರ್ಯನ್ ತನ್ನ ಒರಟು, ನಿಷ್ಠುರ ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ತೆರೆದಿಟ್ಟಿದ್ದಾರೆ. ಒಬ್ಬ ಆಪ್ತ ಗೆಳೆಯನಾಗಿ ಅವನ ರಕ್ಷಣೆಯಲ್ಲಿ ಅಸಹಾಯಕನಾಗುವ ಸಂಕಟಗಳನ್ನೂ ತೀವ್ರವಾಗಿ ಕಟ್ಟಿಕೊಡುತ್ತಾರೆ.
ಮುಗ್ಧ ಟಿಟುವಾಗಿ ಸನ್ನಿಸಿಂಗ್ ಪಾತ್ರವೂ ಇಷ್ಟವಾಗುತ್ತದೆ. ಸ್ವೀಟಿಯಾಗಿ ನುಶ್ರತ್ ಇಷ್ಟವಾಗುತ್ತಾಳೆ. ಗೆಳೆತನ ಮತ್ತು ಹುಡುಗಿಯ ಪ್ರಶ್ನೆ ಬಂದಾಗ ಹುಡುಗರು ಹುಡುಗಿಯನ್ನೇ ಆಯ್ಕೆ ಮಾಡುತ್ತಾರೆ ಎಂಬ ಸ್ವೀಟಿಯ ಮಾತು ಚಿತ್ರದ ಕೊನೆಯಲ್ಲಿ ಸೋಲುತ್ತದೆ. ಅದು ಅವಳ ಕಣ್ಣೀರಾಗಿ ಇಳಿಯುವ ರೀತಿ ತಟ್ಟುತ್ತದೆ. ಕೊನೆಯಲ್ಲಿ ಸ್ವೀಟಿ ಸೋಲುತ್ತಾಳಾದರೂ, ವಿಲನ್ ಆಗಿ ಪ್ರೇಕ್ಷಕರನ್ನು ಸೋನು ಪಾತ್ರವೇ ಕಾಡುತ್ತದೆ. ಬಹುಶಃ ಈ ಚಿತ್ರದ ಮೂಲಕ ರಂಜನ್ ಏನನ್ನು ಹೇಳ ಹೊರಟಿದ್ದಾರೆ? ಹೆಣ್ಣನ್ನು ಬರೇ ಸೆಕ್ಸ್‌ಗಾಗಿ ಅಷ್ಟೇ ಬಳಸಿಕೊಳ್ಳಿ. ಪ್ರೀತಿ, ವಿಶ್ವಾಸಗಳನ್ನು ಹಂಚಿಕೊಳ್ಳುವುದಕ್ಕೆ ಗೆಳೆಯರನ್ನು ನೆಚ್ಚಿಕೊಳ್ಳಿ ಎನ್ನಲು ಹೊರಟಿದ್ದಾರೆಯೇ?