ದಿಲ್ಲಿ ದರ್ಬಾರ್

Update: 2018-02-24 18:38 GMT

ನರೇಶ್ ಅಗರ್‌ವಾಲ್‌ಗೆ ನಾಮಕರಣದ ಕಿರಿಕ್
 ಎಪ್ರಿಲ್‌ನಲ್ಲಿ ರಾಜ್ಯಸಭೆಗೆ ದ್ವೈವಾರ್ಷಿಕ ಚುನಾವಣೆ ನಡೆಯಲಿದ್ದು, ಆಗ ವಿಶೇಷವಾಗಿ ಉತ್ತರಪ್ರದೇಶದ ಸಂಸದರು ಸೇರಿದಂತೆ ಹಲವಾರು ಪ್ರತಿಪಕ್ಷ ಸದಸ್ಯರು ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳಲಿದ್ದಾರೆ. 245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಸುಮಾರು 55 ಮಂದಿ ಸದಸ್ಯರು ನಿವೃತ್ತರಾಗಲಿದ್ದಾರೆ. ಸಮಾಜವಾದಿ ಪಕ್ಷದ ಬಲವೂ ಗಣನೀಯವಾಗಿ ಕುಸಿಯಲಿದೆ. ವಾಸ್ತವವಾಗಿ ಸಮಾಜವಾದಿ ಪಕ್ಷವು ಈ ಸಲ ಉತ್ತರಪ್ರದೇಶದಿಂದ ಒಂದೇ ಒಂದು ಸ್ಥಾನಕ್ಕೆ ನಾಮಕರಣಗೊಳ್ಳಲಿದೆ. ಸಮಾಜವಾದಿ ಪಕ್ಷದಿಂದ ರಾಜ್ಯಸಭೆಗೆ ನಾಮಕರಣಗೊಳ್ಳುವ ಬಗ್ಗೆ 99.9 ಶೇಕಡದಷ್ಟು ಆತ್ಮವಿಶ್ವಾಸ ಹೊಂದಿರುವ ಏಕೈಕ ವ್ಯಕ್ತಿಯೆಂದರೆ ನರೇಶ್ ಅಗರ್‌ವಾಲ್. ಅತ್ಯಂತ ಜನಪ್ರಿಯ ನಾಯಕನಾಗಿರುವ ಅವರು ತನ್ನ ವಾಕ್ಚಾತುರ್ಯಕ್ಕೆ ಹಾಗೂ ಬಿಜೆಪಿಯನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ರಾಜ್ಯಸಭೆಯಲ್ಲಿ ಗಮನಸೆಳೆದಿದ್ದಾರೆ. ಆದರೆ ರಾಜ್ಯಸಭೆಯ ಇನ್ನೋರ್ವ ಸಂಸದ ಕಿರಣ್‌ಮಯಿ ನಂದಾ ಅವರ ಪ್ರಕಾರ ಸಮಾಜವಾದಿ ಪಕ್ಷದಿಂದ ಅಗರ್‌ವಾಲ್ ನಾಮಕರಣಗೊಳ್ಳದೆ ಇರುವ ಸಾಧ್ಯತೆಯೂ ಶೇ.99.9 ರಷ್ಟಿದೆಯಂತೆ. ಅಗರ್‌ವಾಲ್ ಅಥವಾ ನಂದಾ ಇವರಿಬ್ಬರಲ್ಲಿ ಯಾರು ಹೇಳಿದ್ದು ಸರಿ ಎಂಬುದನ್ನು ಅಖಿಲೇಶ್ ಯಾದವ್ ಸಾಬೀತುಪಡಿಸುವರೇ ಎಂಬುದನ್ನು ತಿಳಿಯಲು ಎಲ್ಲರೂ ಸ್ವಲ್ಪ ಸಮಯ ಕಾಯಬೇಕಾಗಿದೆ.


ಜಯಾ ಬಚ್ಚನ್ ಆಶಾವಾದ
ರಾಜ್ಯಸಭಾ ಎಂಪಿ ಜಯಾಬಚ್ಚನ್ ಬಂಗಾಳದಿಂದ, ಅದರಲ್ಲೂ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಕರಣಗೊಳ್ಳಲಿದ್ದಾರೆಂಬ ವದಂತಿಗಳು ಹೇಗೆ ಹರಡಲು ಪ್ರಾರಂಭವಾಯಿತೆಂಬುದೇ ಈಗ ಪ್ರಶ್ನೆಯಾಗಿಬಿಟ್ಟಿದೆ. ಆದರೆ ರಾಜ್ಯಸಭೆಯಿಂದ ನಿವೃತ್ತರಾಗಲಿರುವ ಜಯಾಬಚ್ಚನ್‌ಗೆ ಈ ವದಂತಿಗಳು ಒಂದಿಷ್ಟು ಆಶಾವಾದ ಮೂಡಿಸಿದೆ. ಉತ್ತರಪ್ರದೇಶ ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷದ ಶಾಸಕರ ಸಂಖ್ಯೆ ಕಡಿಮೆಯಾಗಿರುವುದರಿಂದ ಜಯಾ ರಾಜ್ಯಸಭೆಗೆ ಪುನರಾಯ್ಕೆಗೊಳ್ಳುವ ಸಾಧ್ಯತೆ ಈ ಸಲ ತುಂಬಾ ವಿರಳವಾಗಿದೆ. ಕೆಲವು ನಾಯಕರು ಜಯಾ ಬಚ್ಚನ್‌ರನ್ನು ಬಂಗಾಳದ ಐಕಾನ್ ಎಂದೆಲ್ಲಾ ಬಣ್ಣಿಸಿದ್ದಾರಾದರೂ, ಸಮಾಜವಾದಿ ಪಕ್ಷವು ಈ ಊಹಾಪೋಹಗಳನ್ನು ದೃಢಪಡಿಸಲೂ ಇಲ್ಲ ಅಥವಾ ಅಲ್ಲಗಳೆಯಲೂ ಇಲ್ಲ. ಆದರೆ ಕೆಲವು ನಾಯಕರು ಹೇಳುವ ಪ್ರಕಾರ ರಾಜ್ಯಸಭೆಗೆ ಜಯಾ ಅವರನ್ನು ನಾಮಕರಣಗೊಳಿಸಿದಲ್ಲಿ ಅದು ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚಿಸಲ್ಪಡುವುದರಿಂದ ಮಮತಾ ಆ ಬಗ್ಗೆ ಆಸಕ್ತಿ ವಹಿಸುವ ಸಾಧ್ಯತೆ ತೀರಾ ಕಡಿಮೆ. ಅದರೆ ಅಚ್ಚರಿಯ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಹೆಸರಾಗಿರುವ ಮಮತಾ ಅವರು ಜಯಾರನ್ನು ಕಡೆಗಳಿಗೆಯಲ್ಲಿ ಟಿಎಂಸಿ ಅಭ್ಯರ್ಥಿಯನ್ನಾಗಿ ನಾಮಕರಣಗೊಳಿಸಲೂ ಬಹುದು.


ಸೋನಿಯಾ ಫುಲ್‌ಖುಷ್
 ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಎಲ್ಲ ಹಿರಿಯ ನಾಗರಿಕರಿಗೆ ಅವರ ಜೀವನಶೈಲಿ ಹೇಗಿರಬೇಕೆಂಬುದನ್ನು ತೋರಿಸಿಕೊಡುತ್ತಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಹುದ್ದೆಯನ್ನು ತೊರೆದ ಬಳಿಕ ಆಕೆ ಹೊಸ ಸ್ವಾತಂತ್ರವನ್ನು ಆಸ್ವಾದಿಸುತ್ತಿದ್ದಾರೆ. ಸೋನಿಯಾ ಅವರು ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಕಲಾಕೃತಿ ಹಾಗೂ ಸೀರೆಗಳ ವಸ್ತುಪ್ರದರ್ಶನಗಳು, ಕರಕುಶಲ ಸಂಗ್ರಹಾಲಯಗಳಲ್ಲಿ ಕಾಣಸಿಗುತ್ತಿದ್ದಾರೆ ಹಾಗೂ ಜನಪ್ರಿಯ ರೆಸ್ಟೋರೆಂಟ್‌ಗಳಲ್ಲಿ ಪುಷ್ಕಳ ಭೋಜನ ಮಾಡುತ್ತಿದ್ದಾರೆ. ಈಗ ತುಂಬಾ ಹರ್ಷಚಿತ್ತರಾಗಿರುವಂತೆ ಕಂಡುಬರುತ್ತಿರುವ ಅವರು ತನ್ನ ಸುತ್ತಮುತ್ತಲಿರುವ ಜನರೊಂದಿಗೆ ಮುಗುಳ್ನಗೆಯನ್ನು ವಿನಿಮಯಮಾಡಿಕೊಳ್ಳುತ್ತಾರೆ. ಆದರೆ, ಈ ಸ್ಥಳಗಳಲ್ಲಿ ತನ್ನೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವುದಕ್ಕೆ ಮಾತ್ರ ಆಕೆ ಕಟ್ಟುನಿಟ್ಟಾಗಿ ‘ಬೇಡವೇ ಬೇಡ’ ಅನ್ನುತ್ತಾರೆ. ಅಲ್ಲದೆ ಅವರು ತನ್ನ ನಿವಾಸ 10 ಜನಪಥ್‌ನಲ್ಲಿ ರಾಜಕಾರಣಿಗಳನ್ನು ಭೇಟಿಯಾಗುವುದನ್ನು ಹೆಚ್ಚುಕಮ್ಮಿ ನಿಲ್ಲಿಸಿಯೇಬಿಟ್ಟಿದ್ದಾರೆ. ಕೆಲವು ಸಂಜೆಗಳನ್ನು ಅವರು ತನ್ನ ಆಪ್ತರ ಜೊತೆ ಬಿಸಿಬಿಸಿ ಚಹಾ ಸೇವನೆಯೊಂದಿಗೆ ಕಳೆಯುತ್ತಾರೆ.


ಜಾವಡೇಕರ್‌ಗೆ ದ್ವಂದ್ವ
  ಹೆಸರಿನಲ್ಲೇನಿದೆ?. ಖಂಡಿತವಾಗಿಯೂ ಬಹಳಷ್ಟಿದೆ. ವಜ್ರದ ವ್ಯಾಪಾರಿ ಹಾಗೂ ಕೋಟ್ಯಂತರ ರೂ. ಸುಸ್ತಿದಾರ ನೀರವ್ ಮೋದಿಯ ಉಪನಾಮವು, ಬಿಜೆಪಿ ನಾಯಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು, ‘‘ಮೋದೀಜೀ’’ ಎಂದೇ ಸಂಬೋಧಿಸುವ ಅಭ್ಯಾಸವಿದೆ. ಹೀಗಾಗಿ, ನೀರವ್ ಮೋದಿ ಶಾಮೀಲಾಗಿರುವ ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣ ಬಯಲಿಗೆ ಬಂದ ಬಳಿಕ ತನ್ನ ಸರಕಾರವನ್ನು ಸಮರ್ಥಿಸಲು ನಿಯೋಜಿತರಾಗಿರುವ ಸಚಿವ ಜಾವಡೇಕರ್ ಸಾಧ್ಯವಿದ್ದಷ್ಟು ಮಟ್ಟಿಗೆ, ಈಗ ಪರಾರಿಯಾಗಿರುವ ಈ ಉದ್ಯಮಿಯ ಉಪನಾಮ ಉಚ್ಚರಿಸುವುದನ್ನು ತಪ್ಪಿಸುತ್ತಿದ್ದರು. ಆದಾಗ್ಯೂ ಈ ನಡುವೆ ಕೇಂದ್ರ ಮಾನವಸಂಪನ್ಮೂಲ ಸಚಿವರು ದೊಡ್ಡದೊಂದು ಪ್ರಮಾದವನ್ನೇ ಎಸಗಿದರು.ಅವರು ಅರಿವಿಲ್ಲದೆಯೇ ನೀರವ್ ಮೋದಿಯವರ ಹೆಸರನ್ನು ನೀರವ್ ಶಾ ಎಂದು ಹೇಳಿದ್ದರು. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್‌ಶಾ ಬಗ್ಗೆ ಭಯ, ಭಕ್ತಿ ಎರಡನ್ನೂ ಹೊಂದಿರುವ ಕೇಸರಿ ನಾಯಕರಿಗೆ ಮಾನವಸಂಪನ್ಮೂಲ ಸಚಿವರ ಬಾಯ್ತಪ್ಪಿನ ಮಾತು ಖುಷಿ ತಂದಿಲ್ಲ. ಈಗ ನೀರವ್ ಮೋದಿ ಸುದ್ದಿಯಲ್ಲಿರುವಂತೆಯೇ, ಮೋದಿ ಉಪನಾಮವು ಬಿಜೆಪಿಯ ನಾಯಕರಿಗೆ ಕೆಲವು ಸಮಯದವರೆಗೆ ಪೇಚಿಗೆ ಸಿಲುಕಿಸಲಿದೆ.


ಉಮಾ ಸನ್ಯಾಸ
    ಕೇಂದ್ರ ಸಂಪುಟದ ನೇರನುಡಿಯ ವ್ಯಕ್ತಿಗಳಲ್ಲೊಬ್ಬರೆನಿಸಿರುವ ಕುಡಿಯುವ ನೀರು ಹಾಗೂ ನೈರ್ಮಲೀಕರಣ ಸಚಿವೆ ಉಮಾ ಭಾರತಿ ಇತ್ತೀಚೆಗೆ ಮಹತ್ವದ ಘೋಷಣೆಯೊಂದಿಗೆ ಇದ್ದಕ್ಕಿದ್ದಂತೆ ತನ್ನ ನಾಲಗೆಯನ್ನು ಹರಿತಗೊಳಿಸಿದ್ದಾರೆ. ತನ್ನ ಲೋಕಸಭಾ ಕ್ಷೇತ್ರವಾದ ಝಾನ್ಸಿಗೆ ಇತ್ತೀಚೆಗೆ ಭೇಟಿ ನೀಡಿದ ಈ ಉರಿನಾಲಗೆಯ ರಾಜಕಾರಣಿ ಮುಂದಿನ ಮೂರು ವರ್ಷಗಳವರೆಗೆ ತಾನು ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲವೆಂದು ನೆರೆದಿದ್ದ ಜನತೆಗೆ ತಿಳಿಸಿದ್ದರು. ಆದಾಗ್ಯೂ, ಆನಂತರ ಆಕೆ ಕೇಂದ್ರ ಸರಕಾರದ ಸಚಿವೆಯಾಗಿ ತನ್ನ ಕರ್ತವ್ಯಗಳನ್ನು ನಿರ್ವಹಿಸುವುದಾಗಿ ಸ್ಫಷ್ಟಪಡಿಸಿದ್ದರು. ಆದರೆ ವದಂತಿಗಳನ್ನು ಹರಡುವವರಿಗೆ ಅವರ ಸ್ಪಷ್ಟೀಕರಣದಿಂದ ಯಾವುದೇ ಪರಿಣಾಮವಾಲ್ಲ. ಚುನಾವಣೆಯಲ್ಲಿ ಸ್ಪರ್ಧಿಸದೇ ಇರುವುದಕ್ಕೆ ಉಮಾ ಹಿಂದೇಟು ಹಾಕಲು ಕಾರಣವೇನು ಎಂಬ ಬಗ್ಗೆ ಗಾಳಿ ಸುದ್ದಿಗಳು ಹರಡತೊಡಗಿವೆ. ಅಧಿಕೃತ ಮೂಲಗಳ ಪ್ರಕಾರ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಉಮಾ ಭಾರತಿ ತೀವ್ರವಾದ ಮಂಡಿ ನೋವು ಹಾಗೂ ಬೆನ್ನುನೋವಿನಿಂದ ಬಾಧೆಪಡುತ್ತಿದ್ದು, ಅವರಿಗೆ ನಡೆದಾಡಲೂ ಕಷ್ಟಕರವಾಗುತ್ತಿದೆ. ಆದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿರುವ ತಾನು ಚುನಾವಣೆಗಳ ಸಂದರ್ಭಗಳಲ್ಲಿ ಬಿಜೆಪಿಯ ಪರವಾಗಿ ಪ್ರಚಾರ ಮಾಡಲು ಬಿಡುವು ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಆದರೆ ಈ ಕೇಸರಿವಸ್ತ್ರಧಾರಿ ಸಚಿವೆಯ ರಾಜಕೀಯ ಸನ್ಯಾಸಕ್ಕೆ ಬೇರೆಯೇ ಕಾರಣಗಳಿರುವುದಾಗಿ ಪಕ್ಷದೊಳಗಿನ ಅನೇಕರು ಹೇಳುತ್ತಿದ್ದಾರೆ. ತನ್ನ ಅಚ್ಚುಮೆಚ್ಚಿನ ಜಲಸಂಪನ್ಮೂಲ ಹಾಗೂ ಗಂಗಾ ನೈರ್ಮಲೀಕರಣ ಖಾತೆಯನ್ನು ಕಳೆದುಕೊಂಡಾಗಿನಿಂದ ಉಮಾಭಾರತಿ ಬೇಸರಗೊಂಡಿದ್ದರೆಂದು ಅವರು ಹೇಳುತ್ತಾರೆ. ಇನ್ನೊಂದೆಡೆ ಉಮಾಭಾರತಿಯ ಬೆಂಬಲಿಗರು, ಆಕೆ ಚುನಾವಣಾ ಕಣದಿಂದ ಬಿಡುವು ಪಡೆದುಕೊಳ್ಳುವ ಇಚ್ಛೆಯನು ವ್ಯಕ್ತಪಡಿಸಿದ್ದಾರಷ್ಟೇ ಎಂದು ಸಮಜಾಯಿಷಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75