ಜಸ್ಟ್ ಫೇಲಾದ ಕ್ಷೇತ್ರದಲ್ಲಿ ಪಾಸಾಗಲು ಕಾಂಗ್ರೆಸ್ ತಂತ್ರ

Update: 2018-03-05 07:33 GMT

► ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಪ್ರತಿತಂತ್ರ

► ಮೀಸಲು ಕ್ಷೇತ್ರದಲ್ಲಿ ಐದು ಬಾರಿ ಶಾಸಕರಾಗಿರುವ ಅಂಗಾರ

► ಮೂರು ಬಾರಿ ಪ್ರಬಲ ಸ್ಪರ್ಧೆ ನೀಡಿದ್ದ ಡಾ. ರಘುವಿಗೆ ಮತ್ತೆ ಸಿಗಲಿದೆಯೇ ಟಿಕೆಟ್?

ಕಳೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದರೆ ಸುಳ್ಯ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ ಸ್ವಲ್ಪ ಅಂತರದಲ್ಲಿ ಸೋಲುಂಡಿತ್ತು. 1,370 ಮತಗಳ ಅಂತರದಲ್ಲಿ ಜಸ್ಟ್ ಫೇಲಾದ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಹೇಗಾದರೂ ಮಾಡಿ ಪಾಸ್ ಆಗಲು ವಿವಿಧ ತಂತ್ರಗಳನ್ನು ಹೆಣೆಯುತ್ತಿದ್ದರೆ, ದ.ಕ. ಜಿಲ್ಲೆಯ ಏಕೈಕ ಬಿಜೆಪಿ ಅಭ್ಯರ್ಥಿ ಇರುವ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿ ಪ್ರತಿತಂತ್ರವನ್ನು ರೂಪಿಸುತ್ತಿದೆ. ಒಕ್ಕಲಿಗ ಮತದಾರರದ್ದೇ ಪ್ರಾಬಲ್ಯ ಇರುವ ಸುಳ್ಯ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆಯ ನಡುವೆಯೂ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಎಸ್.ಅಂಗಾರ ಜಯಗಳಿಸಿ ಐದನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಬಿಜೆಪಿ ತನ್ನ ಕೋಟೆಯನ್ನು ಭದ್ರಪಡಿಸಿಕೊಳ್ಳಲು ಇನ್ನಷ್ಟು ತಯಾರಿ ನಡೆಸಿಕೊಳ್ಳುತ್ತಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್ ಕ್ಷೇತ್ರವನ್ನು ತನ್ನದಾಗಿಸಲು ವಿವಿಧ ಕಸರತ್ತು ಮಾಡುತ್ತಿದೆ. ಒಟ್ಟಿನಲ್ಲಿ ಕೆಲವೇ ತಿಂಗಳಲ್ಲಿ ಬರಲಿರುವ ವಿಧಾನಸಭಾ ಚುನಾವಣೆಗೆ ಎರಡೂ ಪಕ್ಷಗಳು ಈಗಾಗಲೇ ತಾಲೀಮು ಆರಂಭಿಸಿವೆ. ಲೋಕಸಭಾ, ವಿಧಾನಸಭಾ ಹಾಗೂ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಭರ್ಜರಿ ಮತ ಬೇಟೆಯ ಮೂಲಕ ಸುಳ್ಯ ವಿಧಾನಸಭಾ ಕ್ಷೇತ್ರ ತನ್ನ ಭದ್ರ ಕೋಟೆ ಎಂಬುದನ್ನು ಬಿಜೆಪಿ ಸಾಬೀತುಪಡಿಸುತ್ತಿದೆ. 2013ರ ಚುನಾವಣೆಯಲ್ಲಿ ಸಲ್ಪ ಅಂತರದಲ್ಲಿ ಸೋತ ಕಾಂಗ್ರೆಸ್ ಈ ಬಾರಿಯಾದರೂ ಗೆಲ್ಲಬೇಕೆಂದು ಶತಾಯಗತಾಯ ಪ್ರಯತ್ನ ಮಾಡುತ್ತಿದೆ. ಪುತ್ತೂರು ತಾಲೂಕಿನ ಭಾಗವನ್ನೂ ಒಳಗೊಂಡಿರುವ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ತನ್ನದೇ ಆದ ವೋಟ್ ಬ್ಯಾಂಕ್ ಇದೆ ಎಂಬುದೇ ಪಕ್ಷದ ನಿರೀಕ್ಷೆ. ಆದುದರಿಂದ ಪಕ್ಷ ಸಂಘನೆಗೆ ಶಕ್ತಿಯನ್ನು ಒದಗಿಸಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿ ವಿವಿಧ ಹಂತಗಳಲ್ಲಿ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಿ ಪಕ್ಷವನ್ನು ಬಲಪಡಿಸಿ ಚುನಾವಣಾ ಅಖಡಾಕ್ಕೆ ಧುಮುಕಿದೆ. ಮೀಸಲು ಕ್ಷೇತ್ರವಾದ ಸುಳ್ಯ ಕಳೆದ ಮೂರು ವಿಧಾನಸಭಾ ಚುನಾವಣೆಗಳಲ್ಲಿಯೂ ಎಸ್.ಅಂಗಾರ- ಡಾ. ಬಿ.ರಘು ಹೋರಾಟಕ್ಕೆ ವೇದಿಕೆಯಾಗಿತ್ತು. ಆರು ಬಾರಿ ಸ್ಪರ್ಧಿಸಿ ಐದು ಬಾರಿ ಗೆಲುವು ಸಾಧಿಸಿದ ಎಸ್.ಅಂಗಾರರೇ ಮತ್ತೊಮ್ಮೆ

ಬಿಜೆಪಿ ಸಾರಥಿಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಮೂರು ಬಾರಿ ಸ್ಪರ್ಧಿಸಿದರೂ ಗೆಲುವು ಕೈತಪ್ಪಿ ಹೋಗಿರುವ ಡಾ. ಬಿ.ರಘು ಮತ್ತೊಮ್ಮೆ ಕಣಕ್ಕಿಳಿಯುತ್ತಾರಾ ಎಂಬುದು ಕಾದು ನೋಡಬೇಕಾಗಿದೆ. ದಾಖಲೆ ಬರೆದ ಶಾಸಕ ಅಂಗಾರ 1989ರಲ್ಲಿ ಪ್ರಥಮ ಬಾರಿಗೆ ಸ್ಪರ್ಧಿಸಿದ್ದ ಎಸ್.ಅಂಗಾರ ಸೋಲು ಕಂಡರೂ ಬಳಿಕ 1994ರಿಂದ ನಡೆದ ಐದು ವಿಧಾನಸಭಾ ಚುನಾವಣೆಗಳಲ್ಲಿ ಸತತ ಗೆಲವು ಪಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಅದಕ್ಕಿಂತ ಹಿಂದೆ ಕೆ.ಕುಶಲ, ಎ.ರಾಮಚಂದ್ರ ಎರಡು ಬಾರಿ ಶಾಸಕರಾದರೆ, ಬಾಕಿಲ ಹುಕ್ರಪ್ಪ, ಪಿ.ಡಿ.ಬಂಗೇರ, ಸುಬ್ಬಯ್ಯ ನಾಯ್ಕ ಒಂದೊಂದು ಬಾರಿ ಶಾಸಕರಾಗಿ ಸುಳ್ಯವನ್ನು ವಿಧಾನಸಭೆಯಲ್ಲಿ ಪ್ರತಿನಿಧಿಸಿದ್ದರು.

ಕಾಂಗ್ರೆಸ್‌ಗೆ ಕತ್ತಲ್‌ಸಾರ್ ಹೆಸರು ಸೂಚನೆ?

ಮೂರು ಬಾರಿಯ ಕಾಂಗ್ರೆಸ್ ಆಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಕಂಡಿರುವ ಡಾ. ರಘು ಅವರ ಪಾಲಿಗೆ ಕಳೆದ ಚುನಾವಣೆಯೇ ಅಂತಿಮ ಚುನಾವಣೆಯಾಗಿದೆ ಎಂದು ಕಾಂಗ್ರೆಸ್ ಪಾಳಯದಲ್ಲಿ ಬಿಂಬಿತವಾಗಿತ್ತು. ಈ ಬಾರಿ ಅವರು ಸ್ಪರ್ಧಿಸದೇ ಇದ್ದಲ್ಲಿ ಕಾಂಗ್ರೆಸ್ ಹೊಸ ಅಭ್ಯರ್ಥಿಯನ್ನು ಹುಡುಕಬೇಕಾಗಿದೆ. ಈಗಾಗಲೇ ಕಾಂಗ್ರೆಸ್‌ನ ಒಂದು ಬಣ ಸಂಘಪರಿವಾರದ ಸಂಘಟನೆಗಳಲ್ಲಿ ಒಂದಾದ ಸಂಸ್ಕಾರ ಭಾರತೀಯ ಲೋಕ ಕಲಾವಿದ ಪ್ರಮುಖ್ ಕತ್ತಲ್‌ಸಾರ್ ಹೆಸರನ್ನು ಹೈಕಮಾಂಡ್‌ಗೆ ಸೂಚಿಸಿದೆ ಎನ್ನಲಾಗಿದೆ. ಆದರೆ ಇದಕ್ಕೆ ಇನ್ನೊಂದೆಡೆ ಕಾಂಗ್ರೆಸ್ ಪಕ್ಷದಲ್ಲಿ ಇದುವರೆಗೆ ದುಡಿದಿರುವ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಈ ನಡುವೆ ನಗರ ಪಂಚಾಯತ್ ಸದಸ್ಯ ಕೆ.ಗೋಕುಲ್‌ದಾಸ್, ನಂದರಾಜ ಸಂಕೇಶ್, ನಾರಾಯಣ ಜಟ್ಟಿಪಳ್ಳ ಹೀಗೆ ಹಲವು ಹೆಸರುಗಳು ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದು ಹೊರಗಿನ ಕ್ಷೇತ್ರದ ಕೆಲವು ಹೆಸರುಗಳೂ ಚಾಲ್ತಿಯಲ್ಲಿದೆ.

ಕ್ಷೇತ್ರದಲ್ಲಿ ಜಾತಿ ಬಲ

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 1,92,367 ಮತದಾರರು ಇದ್ದಾರೆ. ಶೇ.35ರಿಂದ 40ರಷ್ಟು ಗೌಡ ಸಮುದಾಯದ ಮತದಾರರು, ಶೇ.25ರಷ್ಟು ಪರಿಶಿಷ್ಟ ಜಾತಿ ಮತ್ತು ಪಂಗಡದ, ಶೇ.15ರಷ್ಟು ಅಲ್ಪಸಂಖ್ಯಾತ ಮತದಾರರು, ಶೇ.20ರಷ್ಟು ಇತರ ಸಮುದಾಯ ಮತದಾರರು ಇದ್ದಾರೆ ಎಂದು ಅಂದಾಜಿಸಲಾಗಿದೆ.

ಕ್ಷೇತ್ರದ ವೈಶಿಷ್ಟ

76 ಗ್ರಾಮಗಳನ್ನು ಒಳಗೊಂಡಿರುವ ಸುಳ್ಯ ವಿಧಾನಸಭಾ ಕ್ಷೇತ್ರ ಗ್ರಾಮೀಣ ಪ್ರದೇಶಗಳಲ್ಲಿ ವಿಸ್ತಾರಗೊಂಡಿದೆ. ಪಶ್ಚಿಮ ಘಟ್ಟದ ದಟ್ಟ ಅರಣ್ಯದೊಂದಿಗೆ ಬೆಸೆದುಕೊಂಡಿರುವ ಸುಳ್ಯ ಕ್ಷೇತ್ರ ದಕ್ಷಿಣ ಭಾರತದ ಇತಿಹಾಸ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಅಲ್ಲದೇ ಸುಳ್ಯ ಚೆನ್ನಕೇಶವ ದೇವಾಲಯ, ತೊಡಿಕಾನದ ಮಲ್ಲಿಕಾರ್ಜುನ ದೇವಸ್ಥಾನ, ಪಂಜದ ಪಂಚಲಿಂಗೇಶ್ವರ, ಮರ್ಕಂಜದ ಜೈನ ಬಸದಿ, ಸಾಮರಸ್ಯ ಬೆಸೆಯುವ ಮಸೀದಿ, ದರ್ಗಾದೊಂದಿಗೆ ಪ್ರತಷ್ಠಿತ ಕೆವಿಜಿ ಶಿಕ್ಷಣ ಸಂಸ್ಥೆ ಕ್ಷೇತ್ರವನ್ನು ಹೊಂದಿದೆ.

ಜೆಡಿಎಸ್-ಬಿಎಸ್ಪಿ, ಎಸ್‌ಡಿಪಿಐ ಪ್ರಾಬಲ್ಯ

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪ್ರತೀ ಬಾರಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಆದರೆ ಈ ಬಾರಿ ಬಿಎಸ್ಪಿ- ಜೆಡಿಎಸ್ ಮೃತ್ರಿಯ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಬಿಎಸ್ಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಅದೇ ರೀತಿ ಕಳೆದ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿ ರಾಷ್ಟ್ರೀಯ ಪಕ್ಷಗಳಿಗೆ ಶಾಕ್ ನೀಡಿದ್ದ ಎಸ್‌ಡಿಪಿಐ ಈ ಬಾರಿಯೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಎಸ್‌ಡಿಪಿಐ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಸುಳ್ಯ ಕ್ಷೇತ್ರದ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಪ್ರಬಲ ಸ್ಪರ್ಧೆ ನೀಡುವ ಮೂಲಕ ಎಸ್‌ಡಿಪಿಐ ತಳಮಟ್ಟದಲ್ಲಿ ಬೇರೂರುತ್ತಿದ್ದು ಜೆಡಿಎಸ್-ಬಿಎಸ್ಪಿ ಮತ್ತು ಎಸ್‌ಡಿಪಿಐ ಪಕ್ಷಗಳ ಅಭ್ಯರ್ಥಿಗಳು ಪಡೆಯುವ ಮತಗಳು ಸುಳ್ಯ ವಿಧಾನಸಭೆಯ ಅಭ್ಯರ್ಥಿಗಳ ಸೋಲು- ಗೆಲುವಿನಲ್ಲಿ ನಿರ್ಣಾಯಕವಾಗುತ್ತದೆ.

ಅಭಿವೃದ್ಧಿ ಕಾರ್ಯಗಳು ಕುಂಠಿತ: ಆರೋಪ

ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಪ್ರಮುಖ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂದು ಕ್ಷೇತ್ರದ ಜನರು ಆರೋಪಿಸುತ್ತಿದ್ದಾರೆ. 110 ಕೆವಿ ವಿದ್ಯುತ್ ಲೈನ್ ಕಾಮಗಾರಿ ಕಾನೂನು ತೊಡಕುಗಳ ಮಧ್ಯೆ 20 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಗ್ರಾಮೀಣ ಪ್ರದೇಶಗಳ ರಸ್ತೆಗಳು ತೀರ ಹದೆಗೆಟ್ಟಿವೆ. ಸುಳ್ಯದ ಬಹುತೇಕರ ಜನರ ಜೀವನವಾಗಿರುವ ಅಡಿಕೆ ಕೃಷಿ ಹಲವು ರೋಗಗಳಿಗೆ ತುತ್ತಾಗಿದ್ದರೂ, ರಬ್ಬರ್ ಬೆಲೆ ಕುಸಿತ ಕಂಡರೂ ರೈತರ ಸಮಸ್ಯೆಗಳಿಗೆ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಕ್ಷೇತ್ರದ ಜನರಿಂದ ಕೇಳಿ ಬರುತ್ತಿದೆ.

Writer - ಗಿರೀಶ್ ಅಡ್ಪಂಗಾಯ

contributor

Editor - ಗಿರೀಶ್ ಅಡ್ಪಂಗಾಯ

contributor

Similar News