“ನಿಮಗೆ ಬೇಕಾದುದನ್ನು ತಿನ್ನಿ, ನಿಮಗೆ ಸಾಧ್ಯವಿದ್ದಷ್ಟು ಹಣ ನೀಡಿ”
ಹೋಟೆಲ್ ಎಂದಾಕ್ಷಣ ಜನ ಸಾಮಾನ್ಯರು ಬೆಚ್ಚಿ ಬೀಳುತ್ತಾರೆ ಕಾರಣ ಕಿಸೆಯಲ್ಲಿ ಹಣವಿಲ್ಲವೆಂದಾದರೆ ಹೋಟೆಲ್ ಗಳಲ್ಲಿ ಹೋಗಿ ತಿನ್ನವುದು ಕಷ್ಟ ಸಾಧ್ಯ.
ನಾವು ಹೋಗಿ ಕುಳಿತ ತಕ್ಷಣ ಹೋಟೆಲ್ ಮಾನಿಯು ತಂದು ಕೈಗೆ ನೀಡುವ ಮೆನು ಲಿಸ್ಟ್ ನಲ್ಲಿರುವ ತಿಂಡಿಯ ಪಟ್ಟಿಯನ್ನು ನೋಡಿ ನಮ್ಮಲ್ಲಿರುವ ಹಣದ ಲೆಕ್ಕ ಹಾಕಿಕೊಂಡು ತಿಂಡಿಗಳ ಆರ್ಡರ್ ಮಾಡುತ್ತೇವೆ. ಆದರೆ ಇದಕ್ಕೆ ವ್ಯತಿರಿಕ್ತವಾದ ಹೋಟೆಲ್ ಒಂದು ಕೇರಳದಲ್ಲಿ ತಲೆಯೆತ್ತಿದೆ.
ಇಲ್ಲಿ ಊಟ ತಿಂಡಿಗಳಿಗೆ ನಿಗದಿತ ದರವೂ ಇಲ್ಲ, ಮೆನು ಲಿಸ್ಟೂ ಇಲ್ಲ, ತಿಂದ ನಂತರ ಬಿಲ್ ನೀಡುವ ಪದ್ದತಿಯಿಲ್ಲ, ನಿಮಗೆ ಬೇಕಾದುದನ್ನು ತಿಂದ ನಂತರ ನಿಮಗೆ ಎಷ್ಟು ಹಣ ಕೊಡಲು ಸಾಧ್ಯವಿದೆಯೋ ಅಷ್ಟನ್ನು ಕೊಟ್ಟು ಹೋಗಿ. ಇದು ವಿಚಿತ್ರ ಆದರೂ ಸತ್ಯವಾಗಿದೆ.
ಕೇರಳದ ಆಲಪ್ಪುಝ ಸಮೀಪದ ಪಾತಿರಪಳ್ಳಿ ಎಂಬಲ್ಲಿರುವ ‘ಜನಕೀಯ ಭಕ್ಷಣ ಶಾಲಾ’ (ಜನರ ಉಪಹಾರ ಗೃಹ) ಎಂಬ ಹೆಸರಿನ ಹೋಟೆಲ್ ಜನಸಾಮಾನ್ಯರಿಗೆ ನಿಗದಿತ ದರವಿಲ್ಲದೆ ಊಟ ತಿಂಡಿ ಚಹಾಗಳನ್ನು ನೀಡುತ್ತದೆ. ‘ನಿಮಗೆ ಬೇಕಾದುದನ್ನು ತಿನ್ನಿ; ನಿಮ್ಮಲ್ಲಿರುವ ಹಣವನ್ನು ನೀಡಿ’ ಎಂಬ ಸ್ಲೋಗನ್ ನೊಂದಿಗೆ ಕಳೆದ ವಾರ ಈ ಹೋಟೆಲ್ ತಲೆಯೆತ್ತಿದೆ. ನೀವು ಈ ಹೋಟೆಲಲ್ಲಿ ಕುಳಿತು ನಿಮಗಿಷ್ಟವಾದ ತಿಂಡಿಗಳನ್ನು ಆರ್ಡರ್ ಮಾಡಬಹುದು. ಆ ತಿಂಡಿಗಳಿಗೆ ಯಾವುದೇ ನಿಗದಿತ ದರ ಇರುವುದಿಲ್ಲ. ತಿಂದ ನಂತರ ಇತರ ಹೋಟೆಲ್ ಗಳಲ್ಲಿ ನೀಡುವಂತೆ ಬಿಲ್ ಕೂಡ ನೀಡಲಾಗುವುದಿಲ್ಲ. ನೀವು ಎಷ್ಟು ಪಾವತಿಸಬೇಕೋ ನಿಮ್ಮ ನಿರ್ಧಾರಕ್ಕೆ ಬಿಟ್ಟದ್ದು. ಕ್ಯಾಶ್ ಕೌಂಟರ್ ಹತ್ತಿರವಿರುವ ಡ್ರಾಪ್ ಬಾಕ್ಸ್ ನಲ್ಲಿ ನಿಮ್ಮಲ್ಲಿರುವ ಹಣವನ್ನು ಹಾಕಿ ಹೋಗಬಹುದು.
ಆಡಳಿತ ರೂಢ ಕಮ್ಯೂನಿಸ್ಟ್ ಪಕ್ಷದ ಅಂಗ ಸಂಸ್ಥೆಯಾದ ಸ್ನೇಹ ಜಲಕಮ್ ವತಿಯಿಂದ ನಡೆಸಲ್ಪಡುವ ಈ ಜನಕೀಯ ಭಕ್ಷಣ ಶಾಲಾ ಉಪಹಾರ ಗೃಹವು ಸರಕಾರಿ ಸಂಸ್ಥೆಯಾದ ಕೇರಳ ರಾಜ್ಯ ಹಣಕಾಸು ನಿಗಮ (ಕೆಎಸ್ ಎಫ್ಇ)ದ ಸಹಭಾಗಿತ್ವದಲ್ಲಿ ನಡೆಯುತ್ತಿದೆ.
ಈ ಹೋಟೆಲಿಗೆ ಮೊದಲ ಗ್ರಾಹಕರಾಗಿ ಬಂದ ಕೇರಳ ರಾಜ್ಯದ ಹಣಕಾಸು ಸಚಿವ ಟಿ.ಎಮ್. ಥಾಮಸ್ ಐಸಾಕ್ ಹೋಟೆಲನ್ನು ಬಾಯಿ ತುಂಬ ಹೊಗಳಿದರು. “ಗ್ರಾಹಕರು ತಿಂದ ಹಣ ಎಷ್ಟೆಂದು ಹೋಟೆಲ್ ಮಾಲಕರು ನಿರ್ಧರಿಸುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ತಾವು ತಿಂದ ಹಣ ಎಷ್ಟೆಂದು ಗ್ರಾಹಕರೇ ನಿರ್ಧರಿಸುವ ಕೇರಳದ ಪ್ರಪ್ರಥಮ ಹೋಟೆಲ್ ಇದು” ಎಂದು ಸಚಿವ ಥಾಮಸ್ ಐಸಾಕ್ ಹೇಳುತ್ತಾರೆ.
ಒಂದು ದಿನ ಊಟ ತಿಂಡಿ ತಯಾರಿಕೆಗೆ ಸುಮಾರು 40,000 ರೂಪಾಯಿಗಳು ಖರ್ಚು ಮಾಡಿದ ಹೋಟೆಲ್ ಮೇಲ್ವಿಚಾರಕರು 10,000 ರೂಪಾಯಿಗಳ ಚೆಕ್ ಸೇರಿದಂತೆ ತಮಗೆ ವೆಚ್ಚವಾದ ಹಣಕ್ಕಿಂತ ಹೆಚ್ಚಿನ ಹಣವನ್ನು ಗಳಿಸಿದ್ದಾರೆ . ಅದಲ್ಲದೆ ಕೇರಳದ ಕೊಲ್ಲಂ ಜಿಲ್ಲೆಯಿಂದ ಇಬ್ಬರು ಈ ಹೋಟೆಲಿಗೆ ಬಂದು ಎರಡು ‘ಬ್ಲ್ಯಾಕ್ ಟೀ’ ಕುಡಿದು 2000 ರೂಪಾಯಿಗಳನ್ನು ಬಾಕ್ಸ್ ನಲ್ಲಿ ಹಾಕಿರುತ್ತಾರೆ ಎಂದು ಹೇಳುವ ಸ್ಥಳೀಯ ಪ್ರತ್ಯಕ್ಷದರ್ಶಿಗಳು, ಈ ಹೋಟೆಲ್ ಎಷ್ಟು ದಿನ ಬಾಳ್ವಿಕೆ ಬರಬಹುದೆಂಬ ಕುರಿತು ಕುತೂಹಲದಲ್ಲಿದ್ದಾರೆ.
ಜನಕೀಯ ಪಾಕಶಾಲಾ ಹೋಟೆಲ್ ಗಾಗಿ ಸುಮಾರು ಹನ್ನೊಂದು ಲಕ್ಷ ರೂಪಾಯಿಗಳಷ್ಟು ವೆಚ್ಚವಾಗಿದ್ದು , ದಿನಂಪ್ರತಿ ಸರಿ ಸುಮಾರು 2000 ಗ್ರಾಹಕರಿಗೆ ಊಟ ತಿಂಡಿಗಳ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ತಗಲುವ ವೆಚ್ಚವನ್ನು ಕೆಎಸ್ ಎಫ್ಇ ಸಂಸ್ಥೆ ಭರಿಸುತ್ತದೆ.
ಒಟ್ಟಿನಲ್ಲಿ ಗ್ರಾಹಕರೇ ತಾವು ತಿಂಡಿಯ ಹಣವನ್ನು ನಿರ್ಧರಿಸುವ ನಮ್ಮ ದೇಶದ ಪ್ರಪ್ರಥಮ ಹೋಟೆಲ್ ಎನ್ನುವ ಖ್ಯಾತಿಯ ಈ ಜನಕೀಯ ಭಕ್ಷಣ ಶಾಲಾ ಈಗ ಕೇರಳದಾದ್ಯಂತ ಮನೆ ಮಾತಾಗಿದೆ.