ದಿಲ್ಲಿ ದರ್ಬಾರ್

Update: 2018-03-10 18:42 GMT

►ಸರ್ಕಾರ್ ಸರಳತೆ ಮತ್ತು ಬಿಜೆಪಿಯ ಮುಜುಗರ

ತ್ರಿಪುರಾದ ಅಗರ್ತಲಾದಲ್ಲಿರುವ ಸಿಪಿಎಂ ಪಕ್ಷದ ಕೇಂದ್ರ ಕಚೇರಿ ನಿರ್ಗಮಿತ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ನೂತನ ನಿವಾಸವಾಗಲಿದೆ. ಕಳೆದ 20 ವರ್ಷಗಳಿಂದ ತಾವು ವಾಸಿಸುತ್ತಿದ್ದ, ಮಾರ್ಕ್ಸ್-ಏಂಜೆಲ್ಸ್ ಸರಾನಿ ರಸ್ತೆಯಲ್ಲಿರುವ 2 ಮಹಡಿಯ, 7 ಕೋಣೆಗಳಿದ್ದ ಸರಕಾರಿ ನಿವಾಸವನ್ನು ಸರ್ಕಾರ್ ಮತ್ತವರ ಪತ್ನಿ ಪಾಂಚಾಲಿ ಭಟ್ಟಾಚಾರ್ಜಿ ತೆರವುಗೊಳಿಸಿ, ಸಿಪಿಎಂ ರಾಜ್ಯ ಸಮಿತಿಯ ಕಚೇರಿಯ ಮೂರನೇ ಅಂತಸ್ತಿನಲ್ಲಿರುವ ಒಂದು ಕೋಣೆಯನ್ನು ಹೊಂದಿರುವ ಅತಿಥಿ ಗೃಹಕ್ಕೆ ಸ್ಥಳಾಂತರಗೊಂಡಿದ್ದಾರೆ. ತ್ರಿಪುರಾ ರಾಜ್ಯದಲ್ಲಿ ಸುದೀರ್ಘಾವಧಿ ಕಾರ್ಯ ನಿರ್ವಹಿಸಿರುವ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿರುವ ಸರ್ಕಾರ್ ಅವರ ಈಗಿನ ನಿವಾಸದಲ್ಲಿ ಪ್ರತ್ಯೇಕ ಅಡುಗೆ ಮನೆ ಇಲ್ಲ. ಮನೆಗೆ ಅತಿಥಿಗಳು ಬಂದರೆ ಪಕ್ಷದ ಕಚೇರಿಯ ಕ್ಯಾಂಟೀನ್‌ನಿಂದ ವಿಶೇಷ ಅಡುಗೆಯ ವ್ಯವಸ್ಥೆಯಾಗಲಿದೆ. ಸರ್ಕಾರ್ ಅವರ ಈ ಸರಳತೆಯೇ ನೂತನ ಬಿಜೆಪಿ ಸರಕಾರಕ್ಕೆ ಮುಜುಗರ ತಂದಿಕ್ಕಿದೆ ಎನ್ನಲಾಗುತ್ತಿದೆ. ಈ ಕಾರಣದಿಂದಲೇ ತ್ರಿಪುರಾದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವಿನ ರೂವಾರಿ ಎನ್ನಲಾಗಿರುವ ರಾಮ್‌ಮಾಧವ್ ಹಾಗೂ ಮುಖ್ಯಮಂತ್ರಿ ಬಿಪ್ಲಬ್ ದಾಸ್ ಸ್ವತಃ ಸರ್ಕಾರ್ ಅವರ ಮನೆಗೆ ತೆರಳಿ ಅವರನ್ನು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ. ಅತ್ಯಂತ ವಿನೀತ, ಸರಳ ವ್ಯಕ್ತಿತ್ವದ ಮಾಜಿ ಮುಖ್ಯಮಂತ್ರಿಗೆ ಅವಮಾನವಾಗಲು ಬಿಜೆಪಿ ಬಯಸುತ್ತಿಲ್ಲ ಎಂದು ಹೇಳಲಾಗುತ್ತಿದೆ.

► ಬದಲಾವಣೆ ಸಾಧ್ಯವಾಗಿದೆಯೇ?

ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಮಹಾಧಿವೇಶನಕ್ಕೆ ಆಯ್ಕೆ ಮಾಡಿರುವ ಸಮಿತಿಗೆ ರಾಹುಲ್ ಮಾಡಿರುವ ಆಯ್ಕೆ ಪಕ್ಷದ ಹಲವರ ಹುಬ್ಬು ಮೇಲೇರಲು ಕಾರಣವಾಗಿದೆ. ತಳಮಟ್ಟದ ರಾಜಕಾರಣಿಗಳೊಂದಿಗೆ ಸಂಪರ್ಕವೇ ಇಲ್ಲದ ಇಂಗ್ಲಿಷ್ ಮಾತನಾಡುವ ‘ಗಣ್ಯ’ರಿಗೆ ಅವಕಾಶ ನೀಡಿರುವುದು ಪಕ್ಷದ ನಿಷ್ಠಾವಂತ ಮುಖಂಡರಿಗೆ ಅಸಮಾಧಾನ ತಂದಿದೆ ಎನ್ನಲಾಗಿದೆ. ಉತ್ತರಪ್ರದೇಶದ ಓರ್ವ ಮುಖಂಡರಂತೂ ಈ ‘ಬೇರಿಲ್ಲದ ಅಚ್ಚರಿಗಳ’ ಪಟ್ಟಿಯಲ್ಲಿ ಕಾಣೆಯಾಗಿರುವ ಒಂದು ಹೆಸರೆಂದರೆ ಅದು ಚೇತನ್ ಭಗತ್‌ರದ್ದು ಎಂದು ಟೀಕಿಸುವ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಈ ಪಟ್ಟಿಯಲ್ಲಿ ಶೇ.80ರಷ್ಟು ಮಂದಿ ಪ್ರಮುಖ ನಾಯಕರ ಮಕ್ಕಳು ಹಾಗೂ ಕಳೆದ ಕೆಲ ದಶಕಗಳಿಂದ ಪಕ್ಷವನ್ನು ನಿಯಂತ್ರಿಸುತ್ತಿರುವ ಕಾಂಗ್ರೆಸಿಗರು. ಪಕ್ಷದ ಅಧ್ಯಕ್ಷತೆ ವಹಿಸಿಕೊಂಡಾಗ ಪಕ್ಷದ ಕಾರ್ಯವೈಖರಿಯಲ್ಲಿ ಬದಲಾವಣೆ ತರುವುದಾಗಿ ರಾಹುಲ್ ಘೋಷಿಸಿದ್ದರು. ಆದರೆ ಈ ಬದಲಾವಣೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಎಂಬುದು ನಿಚ್ಚಳವಾಗಿದೆ.

ಜೋಷಿ ಮೇಲೆ ಅಷ್ಟೊಂದು ನಂಬಿಕೆ ಯಾಕೆ?

 ಮೇಘಾಲಯದಲ್ಲಿ ಚುನಾವಣೆ ಮುಗಿದು ಮತ ಎಣಿಕೆ ನಡೆಯುತ್ತಿದ್ದಾಗ ಕಾಂಗ್ರೆಸ್ ಮುಖಂಡರಾದ ಅಹ್ಮದ್ ಪಟೇಲ್, ಕಮಲ್‌ನಾಥ್, ಸಿ.ಪಿ. ಜೋಷಿ ಹಾಗೂ ಇತರರು ಶಿಲ್ಲಾಂಗ್‌ಗೆ ಧಾವಿಸಿದ್ದರು. ಇಂತಹ ಪರಿಸ್ಥಿತಿ ಬಂದಾಗ ಈ ಹಿಂದೆ ಇಷ್ಟೊಂದು ತ್ವರಿತವಾಗಿ ಕಾಂಗ್ರೆಸ್ ಪ್ರತಿಕ್ರಿಯಿಸಿರಲಿಲ್ಲ. ಎನ್‌ಪಿಪಿ ಮತ್ತು ಬಿಜೆಪಿ ಸರಕಾರ ರಚನೆಗೆ ಅಗತ್ಯವಿರುವ ಸದಸ್ಯ ಬಲವನ್ನು ಪಡೆದಿವೆ ಎಂಬುದು ಸ್ಪಷ್ಟವಾದಾಗ ಇವರು ಅಲ್ಲಿಂದ ಮಾಯವಾದರು. ಪಟೇಲ್ ಮತ್ತು ಇತರರು ರವಿವಾರ ಸಂಜೆ ವೇಳೆಗೆ ಶಿಲ್ಲಾಂಗ್‌ನಿಂದ ಹೊರಟರೆ, ಸಿ.ಪಿ.ಜೋಷಿ ರಾತ್ರಿ ವೇಳೆ ಹೊರಟರು. ಸಿ.ಪಿ.ಜೋಷಿ ಉಸ್ತುವಾರಿ ವಹಿಸಿಕೊಂಡ ಪ್ರತಿಯೊಂದು ಚುನಾವಣೆಯನ್ನೂ ಕಾಂಗ್ರೆಸ್ ಸೋತಿದೆ. ಆದರೂ ಕೆಲವು ಕಾರಣಗಳಿಂದ ಅವರನ್ನು ಉಳಿಸಿಕೊಂಡಿದ್ದಾರೆ. ಮಾಜಿ ಪ್ರೊಫೆಸರ್ ಆಗಿರುವ ಜೋಷಿ ಓರ್ವ ಚಿಂತಕನಾಗಿದ್ದು ಯಾರ ಮೇಲೂ ಪ್ರಭಾವ ಬೀರುವ ಸಾಮರ್ಥ್ಯ ಅವರಿಗಿದೆ ಎಂದು ಕೆಲವು ಕಾಂಗ್ರೆಸಿಗರು ಹೇಳುತ್ತಿದ್ದಾರೆ. ಆದರೆ ಅವರು ಸ್ವಲ್ಪ ಒರಟು ಸ್ವಭಾವದವರು ಎನ್ನಲಾಗುತ್ತಿದೆ. ಇವರು ರಾಹುಲ್ ಗಾಂಧಿಯ ಮೇಲೆ ಪ್ರಭಾವ ಬೀರಿದ್ದಂತೂ ಸ್ಪಷ್ಟ. ಹೀಗಿರುವಾಗ ಸತತ ವೈಫಲ್ಯದ ಬಳಿಕವೂ ಅವರನ್ನು ಪ್ರಶ್ನಿಸುವ ಧೈರ್ಯ ಯಾರಿಗಿದೆ?

ಶಾ ಸಾಧನೆ ಮೀರಿಸಿದ ಕಾಂಗ್ರೆಸ್!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಲ್ಲಾ ಕಾಲಕ್ಕೂ ಸಲ್ಲುವ ವ್ಯಕ್ತಿ ಎಂಬುದು ಗುಟ್ಟಾಗಿ ಉಳಿದಿಲ್ಲ. ಸದಸ್ಯರ ಸಂಖ್ಯೆಯನ್ನು ಸುಮಾರು 11 ಕೋಟಿಗೆ ಹೆಚ್ಚಿಸುವ ಮೂಲಕ ಬಿಜೆಪಿಯನ್ನು ವಿಶ್ವದ ಅತ್ಯಂತ ಬೃಹತ್ ರಾಜಕೀಯ ಪಕ್ಷವಾಗಿಸಿದರು. ಪಕ್ಷದ ಸದಸ್ಯರ ಸಂಖ್ಯೆ ಹೆಚ್ಚಾಗುವುದರ ಜೊತೆಗೆ ಪಕ್ಷದ ಕೇಂದ್ರ ಕಚೇರಿ ಕೂಡಾ ವಿಸ್ತಾರವಾಗಬೇಕೆಂಬುದು ಶಾ ಅವರ ಆಶಯವಾಗಿತ್ತು. ಅದರಂತೆ ಈಗ ಶಾ, ಬಿಜೆಪಿಯ ಕೇಂದ್ರ ಕಚೇರಿ ವಿಶ್ವದ ರಾಜಕೀಯ ಪಕ್ಷಗಳ ಕಚೇರಿಗಳ ಪೈಕಿ ಅತ್ಯಂತ ದೊಡ್ಡದು ಎಂದು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಆದರೆ ಶಾ ಅವರ ಬಹುತೇಕ ಮಾತಿಗೆ ತಲೆಯಾಡಿಸುವ ಪಕ್ಷದ ಕಾರ್ಯಕರ್ತರು ಅವರ ಈ ಹೇಳಿಕೆಯನ್ನು ಬಹುಶಃ ಒಪ್ಪಲಾರರು.

ಯಾಕೆಂದರೆ ಬಿಜೆಪಿ ಕೇಂದ್ರ ಕಚೇರಿ ಇರುವ ರಸ್ತೆಯಲ್ಲೇ ಕಾಂಗ್ರೆಸ್‌ನ ನೂತನ ಕೇಂದ್ರ ಕಚೇರಿ ತಲೆ ಎತ್ತಲಿದೆ. ಈ ಕಚೇರಿ ಕಟ್ಟಡದ ಎತ್ತರ ಮತ್ತು ವಿಸ್ತಾರ ಬಿಜೆಪಿಯ ಕೇಂದ್ರ ಕಚೇರಿಗಿಂತ ಸಾಕಷ್ಟು ಹೆಚ್ಚಿದೆ ಎನ್ನಲಾಗುತ್ತಿದೆ. ಮಾತು ಮಾತಿಗೂ ‘ಕಾಂಗ್ರೆಸ್ ಮುಕ್ತ ಭಾರತ’ ಎಂದು ಅಬ್ಬರಿಸುವ ಶಾರಿಗೆ, ಈ ವಿಷಯದಲ್ಲಿ ಕಾಂಗ್ರೆಸ್ ತನ್ನನ್ನು ಸೋಲಿಸಿದೆ ಎಂಬ ಭಾವನೆ ಮೂಡಿರಬಹುದು. ಇದೀಗ ಶಾರನ್ನು ಸಮಾಧಾನಪಡಿಸಲು ಬಿಜೆಪಿ ಕಾರ್ಯಕರ್ತರು ಒಂದು ಕಾರಣವನ್ನು ಹುಡುಕಿ ಇಟ್ಟಿದ್ದಾರಂತೆ. ಕಾಂಗ್ರೆಸ್ ಪಕ್ಷದ ಕೇಂದ್ರ ಕಚೇರಿ ಹೆಚ್ಚು ಎತ್ತರ ಹಾಗೂ ವಿಸ್ತಾರವಾಗಿರಲು ಆ ಪಕ್ಷ ದೇಶದಲ್ಲಿ ಸುದೀರ್ಘಾವಧಿಯವರೆಗೆ ಆಡಳಿತ ನಡೆಸಿದ್ದೇ ಕಾರಣ ಎಂಬ ದೂರನ್ನು ಸಿದ್ಧವಾಗಿಟ್ಟುಕೊಂಡಿದ್ದಾರಂತೆ ಬಿಜೆಪಿ ಕಾರ್ಯಕರ್ತರು.

ಮಮತಾರ ಚಾಣಾಕ್ಷ ರಾಜಕಾರಣ

ಪಶ್ಚಿಮಬಂಗಾಲದಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ (ಟಿಎಂಸಿ) ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಸಿಂಘ್ವಿಯನ್ನು ಬೆಂಬಲಿಸಲಿದೆ ಎಂದು ಟಿಎಂಸಿಯ ನಾಯಕಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ. ಸಿಂಘ್ವಿಯ ಹೆಸರನ್ನು ಕಾಂಗ್ರೆಸ್ ಘೋಷಿಸುವ ಮೊದಲೇ ಮಮತಾ ಈ ಹೇಳಿಕೆ ನೀಡಿದ್ದರು. ಪಶ್ಚಿಮ ಬಂಗಾಲದಲ್ಲಿ ಮುಂಬರುವ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಹಾಗೂ ಬಿಜೆಪಿ ವಿರುದ್ಧ ಹೋರಾಡಲು ಸಿಪಿಎಂ ಮತ್ತು ಕಾಂಗ್ರೆಸ್ ಆಲೋಚಿಸುತ್ತಿರುವ ಸಂದರ್ಭದಲ್ಲೇ ಮಮತಾರ ಘೋಷಣೆ ಹೊರಬಿದ್ದಿದೆ. ರಾಜ್ಯದ ಕಾಂಗ್ರೆಸ್ ಮುಖಂಡರಲ್ಲಿ ಗೊಂದಲದ ಬೀಜ ಬಿತ್ತುವುದು ಮಮತಾರ ಉದ್ದೇಶವಾಗಿದೆ ಎನ್ನಲಾಗುತ್ತಿದೆ. ಅಲ್ಲದೆ ಪ.ಬಂಗಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ‘ಚೆಕ್‌ಮೇಟ್’ ಮಾಡುವುದೂ ಮಮತಾ ಉದ್ದೇಶವಾಗಿದೆ ಎಂದು ಕೆಲವು ಕಾಂಗ್ರೆಸಿಗರೇ ಹೇಳುತ್ತಿದ್ದಾರೆ. ಇನ್ನೊಂದೆಡೆ ಸಿಪಿಎಂನಲ್ಲಿ ಕೂಡಾ ಕಾಂಗ್ರೆಸ್ ಬಗ್ಗೆ ಗೊಂದಲವಿದೆ. ಮಮತಾರೊಂದಿಗೆ ಕಾಂಗ್ರೆಸ್ ಹಿಂಬಾಗಿಲ ಮೈತ್ರಿ ಮಾಡಿಕೊಳ್ಳಬಹುದು ಎಂದು ಸಿಪಿಎಂ ಭಯಪಡುತ್ತಿದೆ. ಆದರೆ ಮಮತಾರ ಉದ್ದೇಶ ಗೊಂದಲ ಹಬ್ಬಿಸುವುದು ಮತ್ತು ಇದರಲ್ಲಿ ಅವರಂತೂ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News