ತನ್ನದೇ ದೇಶದಲ್ಲಿ ವಿದೇಶಿಯಾಗಿರುವ ಐಎಫ್‌ಎಸ್
ಭಾರತದ ನಾಗರಿಕ ಸೇವೆಗಳಲ್ಲಿ ಒಂದು ಐಎಫ್‌ಎಸ್, (IFS). ಈ ಐಎಫ್‌ಎಸ್‌ನಲ್ಲಿ ‘ಎಫ್’ ಎಂದರೆ ಭಾರೀ ಗಣ್ಯ ಎನ್ನಲಾಗುವ ‘ಫಾರಿನ್’ ಅಲ್ಲ ; ಬದಲಾಗಿ ಯಾವುದೇ ಗ್ಲಾಮರ್ ಇಲ್ಲದ ‘ಫಾರೆಸ್ಟ್’.
ಇಂಡಿಯನ್ ಫಾರೆಸ್ಟ್ ಸರ್ವಿಸ್, ಅಂದರೆ ಭಾರತೀಯ ಅರಣ್ಯಸೇವೆಯಲ್ಲಿ, ಓರ್ವ ಹಿರಿಯ ಅಧಿಕಾರಿಯಾಗಿದ್ದ ಎಸ್. ಮಣಿಕಂಠನ್‌ರವರು ಆನೆಯೊಂದರ ದಾಳಿಗೊಳಗಾಗಿ ಇತ್ತೀಚೆಗೆ ಮೃತಪಟ್ಟರು. ಇವರ ಸಾವು ಕರ್ತವ್ಯ ನಿರತರಾಗಿದ್ದಾಗ ಅಷ್ಟೊಂದು ಪ್ರಸಿದ್ಧವಲ್ಲದ ಈ ನಾಗರಿಕ ಸೇವಾ ಅಧಿಕಾರಿಗಳ ಕೊನೆಯಿಲ್ಲದ ಬವಣೆಗಳನ್ನು, ಸಮಸ್ಯೆಗಳನ್ನು ಮುನ್ನೆಲೆಗೆ ತಂದಿದೆ.
ವ್ಯಂಗ್ಯವೆಂದರೆ, ಮಣಿಕಂಠನ್‌ರವರ ಶೋಚನೀಯ ದುರಂತ ಸಂಭವಿಸಿದ್ದು ವಿಶ್ವ ವನ್ಯದಿನಾಚರಣೆ (3 ಮಾರ್ಚ್)ಯ ದಿನ. ಅವರ ಸಾವಿಗೆ, ಪ್ರಧಾನಿ ಸೇರಿದಂತೆ, ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದರಾದರೂ, ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳಿಗೆ ಸಿಗುವ ಮನ್ನಣೆ, ಪ್ರಚಾರ ಹಾಗೂ ಮಹತ್ವ ಐಎಫ್‌ಎಸ್ ಅಧಿಕಾರಿಗಳಿಗೆ ಸಿಗುವುದಿಲ್ಲ, ಎನ್ನುತ್ತಾರೆ ಐಎಫ್‌ಎಸ್ ಅಧಿಕಾರಿಗಳು. ರಾಜಕಾರಣಿಗಳು ಈ ಅಧಿಕಾರಿಗಳ ಬಗ್ಗೆ ನಿರ್ಲಕ್ಷ ತೋರುತ್ತಾರೆ ಎನ್ನುವ ದೂರು ಕೇಳಿ ಬಂದಿದೆ. ಅಲ್ಲದೆ, ಆ ದಿನದಂದು ನಡೆದ ದುರಂತ ಘಟನೆಯಂತಹ ಘಟನೆಗಳು ಅರಣ್ಯ ಇಲಾಖೆ ಅಧಿಕಾರಿಗಳಿಗೆ ‘ಮಾಮೂಲಿ’ ಎನ್ನಲಾಗಿದೆ. ಅನಿಶ್ಚಿತತೆ ಮತ್ತು ಅರಣ್ಯಗಳು ಒಡ್ಡುವ ಅಪಾಯಗಳ ನಡುವೆ ಕರ್ತವ್ಯ ನಿರ್ವಹಿಸಬೇಕಾದ ಇವರು ಉದ್ಯೋಗಕ್ಕೆ ಸೇರುವಾಗಲೇ ಇಂತಹ ಅಪಾಯಕಾರಿ ಸನ್ನಿವೇಶಗಳನ್ನು ಎದುರಿಸಬೇಕೆಂದು ಗ್ತೊತಿದ್ದೇ ಸೇರುತ್ತಾರೆ; ಆದ್ದರಿಂದ ನಾವು ದೂರುವಹಾಗಿಲ್ಲ’’ ಎಂದಿದ್ದಾರೆ, ಪಂಜಾಬಿನ ಮುಖ್ಯ ಅರಣ್ಯ ಸಂರಕ್ಷಕ ಹಾಗೂ ಅರಣ್ಯ ಪಡೆಯ ಮುಖ್ಯಸ್ಥ ಜಿತೇಂದ್ರ ಶರ್ಮ ‘‘ನಮ್ಮ ವೃತ್ತಿ ಅಸುರಕ್ಷಿತ ಎಂದು ಹೇಳುವುದು ಸೈನಿಕನೊಬ್ಬ ಯುದ್ಧದಲ್ಲಿ ಹೋರಾಡುವುದು ಅಸುರಕ್ಷಿತ ಎಂದು ಹೇಳಿದಂತೆ’’ ಅರಣ್ಯ ಸೈನಿಕರು
‘‘ರಾಷ್ಟ್ರೀಯ ಅರಣ್ಯ ನೀತಿಯನ್ನು ಅನುಷ್ಠಾನಗೊಳಿಸುವುದು, ಅರಣ್ಯಗಳನ್ನು ವೈಜ್ಞಾನಿಕವಾಗಿ ನಿಭಾಯಿಸಿ ಅವುಗಳನ್ನು ಮರದ ಉತ್ಪನ್ನಗಳಿಗಾಗಿ ಬಳಸುವುದು’’ ಐಎಫ್‌ಎಸ್‌ನ ಮೂಲ ಉದ್ದೇಶ. ಇದರ ಈಡೇರಿಕೆಗಾಗಿ ಐಎಫ್‌ಎಸ್‌ನಲ್ಲಿ 3,152 ಅಧಿಕಾರಿಗಳು ದುಡಿಯುತ್ತಿದ್ದಾರೆ.
‘‘ತಮ್ಮ ಕರ್ತವ್ಯ ಮಾಡುವಾಗ ಎದುರಿಸಬೇಕಾಗುವ ಗಂಡಾಂತರ ಗಳಿಗಿಂತಲೂ ಹೆಚ್ಚಾಗಿ ಈ ಅರಣ್ಯ ಅಧಿಕಾರಿಗಳು ಇತರ ಒತ್ತಡಗಳನ್ನು ನಿಭಾಯಿಸಬೇಕಾಗುತ್ತದೆ. ಈ ಅರಣ್ಯ ಅಧಿಕಾರಿಗಳು ಮಾಡುವ ಕೆಲಸ ಐಎಎಸ್ ಅಥವಾ ಐಪಿಎಸ್ ಅಧಿಕಾರಿಗಳು ಮಾಡುವ ಕೆಲಸದ ಹಾಗೆ, ನಾಗರಿಕರಾಗಲಿ ಅಥವಾ ರಾಜಕಾರಣಿಗಳಿಗಾಗಲಿ ‘ತತ್‌ಕ್ಷಣದ ಕಾಳಜಿ’ಯ ಕೆಲಸವಲ್ಲವಾದ್ದರಿಂದ ರಾಜಕಾರಣಿಗಳು ಇವರು ಮಾಡುವ ಕೆಲಸದ ಬಗ್ಗೆ ಆಸಕ್ತಿ ಅಥವಾ ಕಾಳಜಿ ತೋರುವುದಿಲ್ಲ’’ ಎನ್ನುತ್ತಾರೆ ಜಿತೇಂದ್ರ ಶರ್ಮ.
ಅರಣ್ಯಗಳ ಉಪ ಸಂರಕ್ಷಣಾಧಿಕಾರಿಯಾಗಿರುವ ದೀಪಿಕಾ ಬಾಜಪಾ ಹೇಳುವಂತೆ. ‘‘ರಾಜಕಾರಣಿಗಳು ಮತ್ತು ಜನರು ಕೂಡ ನಮ್ಮನ್ನು ‘ಅಭಿವೃದ್ಧಿಗೆ ಒಂದು ಅಡಚಣೆ’ ಎಂಬಂತೆ ನೋಡುತ್ತಾರೆ.’’
2016ರಲ್ಲಿ ಈಕೆಗೆ ಶಾಸಕರೊಬ್ಬರು ಹೀನಾಮಾನವಾಗಿ ಬೈದಿದ್ದರು. ‘‘ಬೇರೆ ಎಲ್ಲಾ ವೃತ್ತಿಗಳಿಗೆ ಗ್ಲಾಮರ್ ಇದೆ. ಸೈನಿಕರ ತ್ಯಾಗ, ಬಲಿದಾನದ ಬಗ್ಗೆ ಎಲ್ಲರೂ ಮಾತನಾಡುತ್ತಾರೆ; ಎಲ್ಲರಿಗೂ ಇದು ತಿಳಿದಿರುತ್ತದೆ. ಆದರೆ ನಾವು ಮಾಡುವ ಕೆಲಸದ ಬಗ್ಗೆ, ನಮ್ಮವರು ಕರ್ತವ್ಯದಲ್ಲಿರುವಾಗಲೇ ಆನೆ ತುಳಿತಕ್ಕೊಳಗಾಗಿ ಮೃತಪಟ್ಟರೆ-ಯಾರೂ ಆ ಬಗ್ಗೆ ಮಾತಾಡುವುದಿಲ್ಲ’’ ಎನ್ನುತ್ತಾರೆ ದೀಪಿಕಾ.
ಸಾಂಸ್ಥಿಕ ಅವಗಣನೆ
ತಾಂತ್ರಿಕವಾಗಿ, ಕೇಂದ್ರ ಸರಕಾರಕ್ಕೆ ಡೆಪ್ಯೂಟ್ ಆಗಲು ಐಎಫ್‌ಎಸ್ ಅಧಿಕಾರಿಗಳು ಅರ್ಹರಾಗಿದ್ದಾರೆ. ಆದರೆ, ವಾಸ್ತವದಲ್ಲಿ ಅವರಿಗೆ ಈ ಸವಲತ್ತು, ಭಡ್ತಿ ಸಿಗುವುದಿಲ್ಲ; ಇದೆಲ್ಲ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೆ ಸಿಗುತ್ತಿದೆ. ಇದಕ್ಕೊಂದು ಉದಾಹರಣೆ ಎಂದರೆ, ಪರಿಸರ ಮತ್ತು ಅರಣ್ಯ ಸಚಿವಾಲಯದಲ್ಲಿ ಐಎಫ್‌ಎಸ್ ವಿಭಾಗದ ಮುಖ್ಯಸ್ಥರಾಗಿರುವ ಜಂಟಿ ಕಾರ್ಯದರ್ಶಿಯೇ ಓರ್ವ ಐಎಎಸ್ ಅಧಿಕಾರಿ!
ಸಚಿವಾಲಯದ ಒಳಗಡೆಯೇ ಅರಣ್ಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದಿದ್ದಾರೆ ಕುರಿತು ಬಹಿರಂಗ ಪಡಿಸಲಿಚ್ಛಿಸದ ಓರ್ವ ಹಿರಿಯ ಐಎಫ್‌ಎಸ್ ಅಧಿಕಾರಿ. ಇವರ ಪ್ರಕಾರ ‘‘ಐಎಫ್‌ಎಸ್ ಅಧಿಕಾರಿಗಳು ಅಧಿಕಾರ ಕೇಂದ್ರಗಳಿಂದ ಹಾಗೂ ರಾಜ್ಯಗಳ ರಾಜಧಾನಿಯಿಂದ ತುಂಬಾ ದೂರದ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಕೂಡಾ ಈ ನಿರ್ಲಕ್ಷ್ಯಕ್ಕೆ ಒಂದು ಕಾರಣ.’’
‘‘ಐಎಫ್‌ಎಸ್ ಅಧಿಕಾರಿಗಳು ಕಾರ್ಯದರ್ಶಿ ಮಟ್ಟಕ್ಕೆ ಹೋಗಲು ಬಿಡಕೂಡದೆಂಬ ಬಗ್ಗೆ ರಾಜಕಾರಣಿಗಳು ಮತ್ತು ಐಎಎಸ್ ಲಾಬಿಯ ಮಧ್ಯೆ ಒಂದು ಅವಾಚಿತ ಒಮ್ಮತವಿದೆ ಅನ್ನಿಸುತ್ತದೆ. ಇತರ ಸಚಿವಾಲಯಗಳ ಮಾತು ಹಾಗಿರಲಿ ಪರಿಸರ ಸಚಿವಾಲಯದಲ್ಲೇ ಯಾಕೆ ಇಷ್ಟೊಂದು ಕಡಿಮೆ ಸಂಖ್ಯೆಯಲ್ಲಿ ಐಎಫ್‌ಎಸ್ ಅಧಿಕಾರಿಗಳಿದ್ದಾರೆ?’’
ವೇತನಗಳು ಮತ್ತು ಪ್ರತಿಫಲಗಳು
ಅರಣ್ಯ ಅಧಿಕಾರಿಗಳಾಗುವಾಗ ವೇತನ ಶ್ರೇಣಿಗಳಲ್ಲಿ ಮತ್ತು ಪ್ರತಿಫಲ ಗಳಲ್ಲಿ ಕೂಡ ಐಎಎಸ್, ಐಪಿಎಸ್‌ಗೆ ಹೋಲಿಸಿದರೆ ಐಎಫ್‌ಎಸ್‌ನಲ್ಲಿ ತಾರತಮ್ಯ ಇದೆ. ‘‘ಈ ವಿಷಯಗಳನ್ನು ಚರ್ಚಿಸಬೇಕಾದ ಸಂಸ್ಥೆಗಳೇ ಐಎಎಸ್ ಅಧಿಕಾರಿಗಳ ಪ್ರಾಬಲ್ಯದಲ್ಲಿ, ಹಿಡಿತದಲ್ಲಿ ಇರುವಾಗ ನಮ್ಮ ವೇತನಗಳ ಬಗ್ಗೆ ಮಾತನಾಡುವವರು ಯಾರು?’’ ಎಂದು ದೀಪಿಕಾ ಕೇಳುತ್ತಾರೆ
ಗಂಡಾಂತರದ ಅಪಾಯದ ಪರಿಸ್ಥಿತಿಗಳಲ್ಲಿ ಐಪಿಎಸ್ ಅಧಿಕಾರಿಗಳು ಕೂಡ ಕೆಲಸ ಮಾಡಬೇಕಾಗುತ್ತದಾದರೂ ಅವರಿಗೆ ಅವರ ಕೆಲಸಕ್ಕಾಗಿ ರಾಷ್ಟ್ರಪತಿಗಳ ಪದಕಗಳು ಹಾಗೂ ಇತರ ಪ್ರಶಸ್ತಿಗಳು, ಪ್ರತಿಫಲಗಳು ಸಿಗುತ್ತವೆ. ಆದರೆ ಐಎಫ್‌ಎಸ್‌ನ ಅಧಿಕಾರಿಗಳಿಗೆ ಇಂತಹ ಯಾವುದೇ ಪ್ರಶಸ್ತಿ ಫಲಕಗಳು ಇಲ್ಲ’’ ಎನ್ನುತ್ತಾರೆ ದೀಪಿಕಾ ಬಾಜಪಾ. ‘‘ಕರ್ತವ್ಯ ನಿರತರಾಗಿದ್ದಾಗ ಮಡಿದ ಮಣಿಕಂಠನ್ ಅವರಿಗೆ ಅವರು ಯಾವುದೇ ಮತ ಬ್ಯಾಂಕಿಗೆ ನಿಷ್ಠರಾಗಿರಲ್ಲವೆಂಬ ಒಂದೇ ಕಾರಣಕ್ಕಾಗಿ ಪ್ರಶಸ್ತಿ ಇಲ್ಲವೇ?’’ ಎಂದೂ ಬಾಜಪಾ ಹೇಳಿದ್ದಾರೆ
ಕೃಪೆ: theprint.in