ಮಹಾಡ್‌ನ ಧರ್ಮಯುದ್ಧ ಹಾಗೂ ದಲಿತರ ಜವಾಬ್ದಾರಿ

Update: 2018-03-16 07:18 GMT

ಭಾಗ -1

ಮಹಾಡ್‌ನ ಚವ್‌ದಾರ್ ಕೆರೆ ಸಾರ್ವಜನಿಕವಾದದ್ದು. ಅಲ್ಲಿ ಎಲ್ಲ ಜಾತಿಯ ಜನ ಯಾವುದೇ ತೊಡಕಿಲ್ಲದೆ ನೀರು ತುಂಬಬಹುದು. ಯಾರೂ ಯಾರಿಗೂ ತಡೆಯುವುದಿಲ್ಲ. ಆದರೆ ಅದೇ ಕೆರೆಗೆ ಮಾದಿಗರು, ಚಮ್ಮಾರರು ನೀರು ತುಂಬಿದರೆ ಹಿಂದೂ ಮೇಲ್ಜಾತಿಯವರಿಗದು ಸರಿ ಬರುವುದಿಲ್ಲ ಅನ್ನುವುದು ಮಹಾಡ್‌ನ ಪ್ರಕರಣದಿಂದ ಸಿದ್ಧವಾಗಿದೆ.

ಹೀಗೇಕಾಗುತ್ತದೆ? ಅನ್ನುವುದನ್ನು ಬುದ್ಧಿಯಿರುವ ನಮ್ಮ ಬಂಧುಗಳು ಸರಿಯಾಗಿ ಯೋಚಿಸಿದರೆ ಹಿಂದೂ ಧರ್ಮದಲ್ಲಿ ದಲಿತರನ್ನು ಅಪವಿತ್ರವಾಗಿ ಕಾಣಲಾಗುತ್ತದೆ ಅನ್ನುವುದವರಿಗೆ ಅರ್ಥವಾದೀತು. ಆತನ ಸ್ಪರ್ಶವಾದರೆ ಹಿಂದೂ ಧರ್ಮದ ಮನುಷ್ಯನಿಗೆ ಮೈಲಿಯಾಗುತ್ತದೆ ಹಾಗೂ ಆತ ಸ್ನಾನ ಮಾಡಬೇಕಾಗುತ್ತದೆ. ಕೆಲವೆಡೆಯಂತೂ ದಲಿತರ ನೆರಳು ಬಿದ್ದರೂ ದೋಷ ಪರಿಹಾರಕ್ಕಾಗಿ ಸ್ನಾನ ಮಾಡಬೇಕಾಗುತ್ತದೆ. ಈ ಶುದ್ಧಾಶುದ್ಧತೆಗೆ ಸರಿಯಾದ ಕಾರಣಗಳಿದ್ದಿದ್ದರೆ ಯಾರೂ ಅದರ ವಿರುದ್ಧ ಚಕಾರವೆತ್ತುತ್ತಿರಲಿಲ್ಲ. ಸ್ತ್ರೀಯೊಬ್ಬಳು ರಜಸ್ವಲೆಯಾಗಿರುವಾಗ ಆಕೆ ಆ ಸ್ಥಿತಿಯಲ್ಲಿ ಯಾರನ್ನೂ ಮುಟ್ಟಬಾರದು ಅನ್ನುವುದನ್ನು ಒಪ್ಪಬಹುದು. ಮೈಲಿಗೆಯಾಗಿರುವ ಇಲ್ಲವೇ ಸೂತಕದಲ್ಲಿರುವ ವ್ಯಕ್ತಿಯು ಆ ಸ್ಥಿತಿಯಲ್ಲಿರುವವರೆಗೂ ಶುಚಿರ್ಭೂತ ವ್ಯಕ್ತಿಯನ್ನು ಮುಟ್ಟಬಾರದು ಅನ್ನುವುದನ್ನು ಕೂಡ ಒಪ್ಪಬಹುದು. ಆದರೆ ದಲಿತ ಜಾತಿಯ ಜನ ಮುಟ್ಟಿದ್ದರೆ ಏನಾಗುತ್ತದೆ ಅನ್ನುವುದರ ಒಟ್ಟು ಕಾರಣ ಮೀಮಾಂಸೆಗಳನ್ನು ಕೊಡಲು ಯಾರಿಂದಲೂ ಸಾಧ್ಯವಿಲ್ಲ. ದಲಿತ ಜಾತಿಯ ಜನ ಹೊಲಸಾಗಿರುತ್ತಾರೆ. ಆದ್ದರಿಂದ ಇವರನ್ನು ಮುಟ್ಟಬಾರದು ಎಂದು ಹೇಳುವ ಮೇಲ್ಜಾತಿಯ ಜನ ದಲಿತರಲ್ಲೇ ಅಚ್ಚುಕಟ್ಟಾಗಿರುವ ಜನರನ್ನೆಲ್ಲಿ ಮುಟ್ಟಿಸಿಕೊಳ್ಳುತ್ತಾರೆ? ದಲಿತ ಜಾತಿಯ ಜನ ತಿನ್ನಬಾರದ್ದನ್ನೆಲ್ಲ ತಿನ್ನುವುದರಿಂದ ಅವರನ್ನು ದೂರವಿಡುತ್ತೇವೆ ಅನ್ನುವ ಕಾರಣ ಕೂಡ ಅರ್ಥಪೂರ್ಣವಾಗಿಲ್ಲ. ದಲಿತರಲ್ಲಿ ಮದ್ಯ, ಮಾಂಸ ಮುಟ್ಟದ ಜನ ಅನೇಕರಿದ್ದಾರೆ. ಆದರೂ ಗೋಮಾಂಸಭಕ್ಷಕ ಅಸ್ಪಶ್ಯರಂತೆ ಇವರನ್ನೂ ದೂರವಿಡಲಾಗ್ತುತದೆ. ಸ್ಪರ್ಶ ನಾವೇನು ತಿನ್ನುತ್ತೇವೆ ಅನ್ನುವುದನ್ನು ಅವಲಂಭಿಸಿರುವುದಾದರೆ ಮುಸಲ್ಮಾನರಂತಹ ಮಾಂಸ ತಿನ್ನುವ ಜನರನ್ನು ಅಸ್ಪಶ್ಯರೆನ್ನಲು ಯಾವ ಹಿಂದುಗೂ ಎದೆಗಾರಿಕೆಯಿಲ್ಲ. ಸಾರಾಂಶ ಅಸ್ಪಶ್ಯತೆಯು ಮೇಲ್ಜಾತಿಯವರ ಒಂದು ಮನೋಭಾವ ಅನ್ನದೆ ಬೇರೆ ದಾರಿಯಿಲ್ಲ. ನಾವು ನಿಮ್ಮನ್ನು ಅಸ್ಪಶ್ಯರೆನ್ನುವುದರಿಂದ ನೀವು ಅಸ್ಪಶ್ಯರು ಅನ್ನುವ ಮೇಲ್ಜಾತಿಯ ಜನರ ಮನೋಭಾವವಲ್ಲದೆ ಬೇರೇನೂ ಅಲ್ಲ. ತಮ್ಮ ಈ ಮನೋಭಾವಕ್ಕೆ ಜನ ರೂಢಿ ಅನ್ನುತ್ತಾರೆ. ಹಾಗೂ ರೂಢಿಯನ್ನೇ ಕಾಯ್ದೆ ಅಂದುಕೊಂಡು ಅವುಗಳನ್ನು ಅಸ್ಪಶ್ಯರ ಮೇಲೆ ಹೇರಲು ಪ್ರಯತ್ನಿಸುತ್ತಾರೆ.

ಅಸ್ಪಶ್ಯತೆ ನಿವಾರಣೆಯ ಬಗ್ಗೆ ಒಂದು ಆಶ್ಚರ್ಯದ ಸಂಗತಿಯೆಂದರೆ ಈ ರೂಢಿಯ ಬಗ್ಗೆ ದಲಿತರಿಗೇನು ಅನಿಸುತ್ತದೆ ಎಂದು ಯಾರೂ ಕೇಳುವುದಿಲ್ಲ ಹಾಗೂ ಅಸ್ಪಶ್ಯತೆಯ ಬಗ್ಗೆ ಮೇಲ್ಜಾತಿಯವರ ಅಭಿಪ್ರಾಯ ಇನ್ನೂ ಸ್ಪಷ್ಟವಾಗಿಲ್ಲ ಹಾಗಾಗಿ ಅವರ ಅಭಿಪ್ರಾಯ ಸ್ಪಷ್ಟವಾಗುವವರೆಗೆ ನೀವು ಅಸ್ಪಶ್ಯರಾಗೇ ಇರಿ ಎಂದು ಹೇಳಲಾಗುತ್ತದೆ.

ಜನರಿಗೆ ಇಷ್ಟವಿಲ್ಲದಂತಹ ಹಾಗೂ ಅವರು ವಿರೋಧಿಸುವುದನ್ನು ಬಲವಂತವಾಗಿ ರಾಜಕಾರಣಿಗಳು ಅವರ ಮೇಲೆ ಹೇರಬಾರದು ಎಂದು ಸರಕಾರಕ್ಕೆ ದಬಾಯಿಸಿ ಹೇಳುವ ಒಂದು ಪಕ್ಷ ಈ ದೇಶದಲ್ಲಿದೆ. ಕರ್ಝಾನ್ ಸಾಹೇಬರು ರಾಜ್ಯದ ಕಾರ್ಯ ಸುಲಭವಾಗಲೆಂದು ಬಂಗಾಲದ ವಿಭಜನೆ ಮಾಡಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಆದರೆ ಇದನ್ನು ಬಂಗಾಲದ ಜನ ವಿರೋಧಿಸಿದ್ದರು. ಆದರೆ ಅವರ ವಿರೋಧಕ್ಕೆ ಬಾಗದೆ ಬ್ರಿಟಿಷ್ ಸರಕಾರ ತಮ್ಮ ಕೆಲಸವನ್ನು ಮಾಡಿದಾಗ, ಸರಕಾರ ಜನರ ಅನಿಸಿಕೆಗಳಿಗೆ ಬೆಲೆ ಕೊಡುವುದಿಲ್ಲ ಎಂದು ತಿಲಕರಂತಹ ರಾಷ್ಟ್ರೀಯ ಮನೋಭಾವನೆಯಿರುವ ಉಗ್ರರು ಯಾವ ರೀತಿ ಟೀಕೆಗಳನ್ನು ಮಾಡಿದರು ಅನ್ನುವುದು ಎಲ್ಲರಿಗೂ ತಿಳಿದಿದೆ. ಕಡೆಗೆ ಬ್ರಿಟಿಷ್ ಸರಕಾರ ಕೂಡ ಜನರ ಅನಿಸಿಕೆಗೆ ಬೆಲೆ ಕೊಟ್ಟೇ ಸರಕಾರ ನಡೆಸಬೇಕು ಅನ್ನುವ ತತ್ವವನ್ನು ಒಪ್ಪಿಕೊಂಡು ಬಂಗಾಲವನ್ನು ವಿಭಜಿಸುವ ಯೋಜನೆಯನ್ನು ರದ್ದುಗೊಳಿಸಿತು ಹಾಗೂ ತನ್ನ ದೊಡ್ಡಸ್ತಿಕೆಯನ್ನು ಪಕ್ಕಕ್ಕಿಟ್ಟು ಜನರ ಅನಿಸಿಕೆಗೆ ಶರಣಾಯಿತು. ತಮಗೇನನಿಸುತ್ತದೆ ಅನ್ನುವುದಕ್ಕಿಂತ ಜನ ಏನಂದರೂ ಅನ್ನುವ ಬಗ್ಗೆ ಯೋಚಿಸಿ ಜನತೆಗೆ ಬಾಗಿ ತಾವು ಜನರ ಅನಿಸಿಕೆಗಳಿಗೆ ಬೆಲೆ ಕೊಡುವವರು ಅನ್ನುವುದನ್ನು ಸಿದ್ಧಮಾಡಿ ತೋರಿಸಿದರು.

ಜನಾಭಿಪ್ರಾಯಕ್ಕೆ ವಿಜಯವಾಯಿತು ಅನ್ನುವುದು ಒಳ್ಳೆಯದೇ ಆಯಿತು. ಆದರೆ ಈ ಐತಿಹಾಸಿಕ ವಿಷಯದ ನೆನಪಿನಿಂದ ನಮಗೆ ಸಂತೋಷವಾಗುವುದಕ್ಕಿಂತ ತಿರಸ್ಕಾರವೆನಿಸುತ್ತಿದೆ. ತಿರಸ್ಕಾರ ಏಕೆಂದರೆ ಜನರ ಅನಿಸಿಕೆಗಳಿಗೆ ಬೆಲೆ ಕೊಡಿ ಎಂದು ಸರಕಾರಕ್ಕೆ ಒತ್ತಾಯಿಸುವ ಜನರೇ ನಾಚಿಕೆಯಿಲ್ಲದೆ ದಲಿತರ ಅನಿಸಿಕೆಗಳನ್ನು ತಮ್ಮ ಕಾಲಡಿ ತುಳಿಯುತ್ತಿದ್ದಾರೆ. ಜನರ ಅನಿಸಿಕೆಗಳಿಗೆ ಬೆಲೆ ಕೊಟ್ಟು ಅಧಿಕಾರದ ಉಪಯೋಗ ಮಾಡಿಕೊಳ್ಳುವುದು ಅನ್ನುವ ತತ್ವವನ್ನು ಪುರಸ್ಕರಿಸುವ ಮೇಲ್ಜಾತಿ ಜನರು ದಲಿತರು ಸ್ಪಶ್ಯತೆ ರೂಢಿಯನ್ನು ಮುಂದುವರಿಸಲು ಒಪ್ಪುತ್ತಿಲ್ಲ ಅನ್ನುವುದನ್ನು ನೋಡಿ ‘‘ಈ ಅನಿಷ್ಟ ರೂಢಿಯ ತ್ಯಾಗ ಮಾಡಲು ನಾವು ಸಿದ್ಧರು’’ ಎಂದು ಎಲ್ಲರೆದುರು ಹೇಳುವುದು ಅನಿವಾರ್ಯವಾಗಿತ್ತು. ಬಂಗಾಲಿ ಜನರು ಬಂಗಾಲದ ವಿಭಜನೆಗೆ ವಿರುದ್ಧವಾಗಿದ್ದಂತೆ ಎಲ್ಲ ದಲಿತರು ಅಸ್ಪಶ್ಯತೆಯ ರೂಢಿಗೆ ವಿರೋಧವಾಗಿದ್ದಾರೆ. ಬಂಗಾಲ ವಿಭಜನೆ ಬಂಗಾಲಿ ಜನರ ಅನಿಸಿಕೆಗಳನ್ನವಲಂಬಿಸಬೇಕು ಎಂದು ಎದೆತಟ್ಟಿ ಹೇಳುವ ಜನ ಅಸ್ಪಶ್ಯತೆಯನ್ನು ಮುಂದುವರಿಸಿಕೊಂಡು ಹೋಗಬೇಕೋ ಬೇಡವೋ ಅನ್ನುವುದು ಅಸ್ಪಶ್ಯರ ಅನಿಸಿಕೆಗಳನ್ನು ಅವಲಂಬಿಸಿರಬೇಕು ಅನ್ನುವುದಕ್ಕೆ ಯಾಕೆ ಒಪ್ಪುತ್ತಿಲ್ಲ? ಆದರೆ ಈ ಪ್ರಶ್ನೆಯನ್ನು ಯಾರೂ ಆ ದೃಷ್ಟಿಯಿಂದ ನೋಡುವುದೇ ಇಲ್ಲ.

ಸ್ವಾರ್ಥ ಎಷ್ಟು ಬಲವಾಗಿದೆಯೆಂದರೆ ತನ್ನ ಕಾಲಡಿ ಏನು ಸುಡುತ್ತಿದೆ ಅನ್ನುವುದು ಬುದ್ಧಿವಂತ ಮನುಷ್ಯನ ಗಮನಕ್ಕೇ ಬರುತ್ತಿಲ್ಲ. ಕೆಲವು ಪ್ರಸಂಗದಲ್ಲಿ ಆತ ಉಳಿದವರಿಗೆ ಹೇಳುವ ಬುದ್ಧಿವಾದವನ್ನೋ, ಉಪದೇಶವನ್ನೋ ಅದೇ ಪರಿಸ್ಥಿತಿ ತನ್ನ ಮೇಲೆ ಬಂದಾಗ ಪಾಲಿಸಲು ಹಿಂದೂ ಮುಂದೂ ನೋಡುತ್ತಾನೆ ಅನ್ನುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆ. ಇರಲಿ, ಮೇಲ್ಜಾತಿ ಹಿಂದೂಗಳ ಜನಮತ ಅಸ್ಪಶ್ಯತೆ ನಿವಾರಣೆಗೆ ಪ್ರತಿಕೂಲವಾಗಿಯೇ ಇದೆ ಅನ್ನುವ ವಿಷಯವನ್ನು ಅಸ್ಪಶ್ಯರು ಗಮನದಲ್ಲಿಡಬೇಕು.

ಅದನ್ನು ಹೇಗೆ ಅನುಕೂಲ ಮಾಡಬೇಕು ಅನ್ನುವ ದೊಡ್ಡ ಹಾಗೂ ಮಹತ್ವದ ಪ್ರಶ್ನೆಯೀಗ ದಲಿತರ ಎದುರಿದೆ. ಅದನ್ನು ಪರಿಹರಿಸಲು ಅವರು ಯೋಗ್ಯ ಉಪಾಯ ಯೋಜನೆಯೊಂದನ್ನು ಮಾಡಬೇಕಿದೆ. ಆದರೆ ಈ ಉಪಾಯ ಯೋಜನೆಯನ್ನು ನಿರ್ಧರಿಸುವ ಮೊದಲು ಮೇಲ್ಜಾತಿಯವರ ಭಾವನೆಗಳು ಕಲ್ಲಿನಂತೆ ಕಠಿಣವಾದದ್ದೇಕೆ? ಅನ್ನುವುದರ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ.

ಯಾವುದೇ ಸಮಾಜದಲ್ಲಿ ತಾವು ತಲೆ ಓಡಿಸದೆ ಬೇರೆಯವರ ವಿಚಾರಗಳನುಸಾರವಾಗಿ ನಡೆಯುವ ಜನ ಇದ್ದೇ ಇರುತ್ತಾರೆ. ಧರ್ಮೋಪದೇಶಕರು ಹೇಳಿದ್ದೇ ಧರ್ಮ, ತಂದೆಯ ಮಾತು ಆಜ್ಞೆಯ ಸಮಾನ, ಅಧಿಕಾರಿ ಹೇಳಿದ್ದೇ ಹುಕುಮು, ಗೆಳೆಯ ಕೊಟ್ಟಿದ್ದೇ ಸಲಹೆ ಹೀಗೆ ಎಲ್ಲವನ್ನೂ ಒಪ್ಪಿಕೊಂಡು ತಮ್ಮ ವ್ಯವಹಾರಗಳನ್ನು ನಡೆಸುವ ಅಸಂಖ್ಯರು ಈ ಭೂಮಂಡಲದ ಮೇಲಿದ್ದಾರೆ. ಕಡೆಗೆ ಆ ಧರ್ಮ, ಆ ಆಜ್ಞೆ, ಆ ಹುಕುಮು, ಆ ಸಲಹೆ ಯೋಗ್ಯವೇ ಅಯೋಗ್ಯವೇ, ಸ್ವಾರ್ಥದಿಂದ ಕೂಡಿದ್ದಿದೆಯೇ ಇಲ್ಲ ನಿಸ್ವಾರ್ಥದಿಂದ ಕೂಡಿದ್ದಿದೆಯೆ? ಅನ್ನುವುದರ ಬಗ್ಗೆ ಯೋಚಿಸುವ ಜವಾಬ್ದಾರಿಯನ್ನು ಈ ಬುದ್ಧಿಹೀನರು ಯಾವತ್ತೂ ತೆಗೆದುಕೊಳ್ಳುವುದಿಲ್ಲ. ತಮ್ಮ ತಲೆ ಓಡಿಸದೆ ಬೇರೆಯವರ ವಿಚಾರಗಳಂತೆ ನಡೆಯುವ ವಿಚಾರಹೀನ ಜನರಿರುವಂತೆ ಯೋಚನೆ ಮಾಡಿಯೂ ಅದರಂತೆ ನಡೆಯದ ಜನ ಕೂಡ ಪ್ರತಿಯೊಂದು ಸಮಾಜದಲ್ಲಿದ್ದಾರೆ. ಬರೀ ಯೋಚನೆ ಮಾಡಿ ಅ ಯೋಚನೆಯನ್ನು ಜೋಪಾನ ಮಾಡಲು ಒಂದು ನಯಾ ಪೈಸೆಯನ್ನೂ ಖರ್ಚು ಮಾಡುವ ಅಗತ್ಯವಿಲ್ಲ. ಕೋಮಲ ಹೃದಯದ ಕುಬೇರ ಕೂಡ ಜಗತ್ತಿನ ಸಂಪತ್ತಿನ ಹಂಚಿಕೆ ವಿಷಮ ಪ್ರಮಾಣದಲ್ಲಾಗಬಾರದು ಅನ್ನುವ ತತ್ವ ಒಪ್ಪುತ್ತಾನೆ.

ವತನದಾರ ಜೋಶಿ (ಹಿಂದೆ ಜೋಶಿ ಅನ್ನುವ ಕುಲದವರು ವಿದ್ಯೆಯನ್ನು ಹೇಳಿಕೊಡುತ್ತಾ ಇಲ್ಲವೆ ಹಸ್ತರೇಖೆಯನ್ನು ನೋಡಿ ಭವಿಷ್ಯ ಹೇಳುತ್ತ ತಮ್ಮ ಹೊಟ್ಟೆ ಹೊರೆದುಕೊಳ್ಳುತ್ತಿದ್ದರು. ಯಾವುದೋ ಒಂದು ಕಾಲದಲ್ಲಿ ಇವರ ಪೂರ್ವಜರು ಬ್ರಿಟಿಷರ ಆಸ್ಥಾನದಲ್ಲಿರುವ ಸಾಧ್ಯತೆಯಲ್ಲಿ ಬ್ರಿಟಿಷರು ಇವರಿಗೆ ಬಹುಮಾನವಾಗಿ ಜಮೀನನ್ನು ಕೊಟ್ಟರು. ಅಲ್ಲಿಂದ ಇವರು ವತನದಾರರಾದರು, ಹಾಗಾಗಿ ವತನ್‌ದಾರ್ ಜೋಶಿ ಅನ್ನುವ ಹೆಸರಿನಿಂದ ಪ್ರಸಿದ್ಧರಾದರು. ಜಮೀನು ಸಿಗುವ ಮೊದಲು ಇದ್ದ ಇವರ ನಿಲುವು ಜಮೀನು ಕೈಗೆ ಬಂದು ಹಣ ಕೈಯಲ್ಲಿ ಕುಣಿಯಲಾರಂಭಿಸಿದಾಗ ಜಮೀನುದಾರರಲ್ಲಿರಬಹುದಾದ ದರ್ಪ ಇವರಲ್ಲೂ ಕಾಣಿಸಿಕೊಂಡು ಜನತೆಗಿವರು ಸಾಕಷ್ಟು ಕಿರುಕುಳ ಕೊಡಲಾರಂಭಿಸಿದರು) ಕೂಡ ಜ್ಯೋತಿಷಿಯಿದ್ದರೆ ಪಾರಂಗತ ಜೋಷಿಯೇ ಆಗಿರಬೇಕು ಎಂದು ಆಶಿಸುತ್ತಾನೆ. ಅದರಂತೆಯೇ ಹಿಂದುಳಿದ ಜನರನ್ನು ಮೇಲಕ್ಕೆತ್ತಲು ಸರಕಾರಿ ಕೆಲಸಗಳಲ್ಲಿ ಅವರಿಗೆ ಮೊದಲ ಆದ್ಯತೆ ಕೊಡಬೇಕು ಅನ್ನುವ ಮಾತನ್ನು ಮುಂದುವರಿದ ಜನ ಒಪ್ಪುತ್ತಾರೆ. ಆದರೆ ಸ್ವತಃ ಕುಬೇರನಿಗೆ ತನ್ನ ಸಂಪತ್ತನ್ನು ಸರಿಸಮಾನವಾಗಿ ಹಂಚುವ ಪರಿಸ್ಥಿತಿ ಬಂದರೆ ಅಥವಾ ಬುದ್ಧಿವಂತ ದೊಂಬ ಜಾತಿಯ ಜೋಶಿಯೇನಾದರೂ ವತನದಾರ್ ಜೋಶಿಗೆ ಸಿಕ್ಕಿ ತನ್ನ ಕಾರ್ಯವನ್ನು ಆತನಿಗೆ ವರ್ಗಾಯಿಸುವ ಕಠಿಣ ಪ್ರಸಂಗ ವತನದಾರ ಜೋಶಿಗೆ ಎದುರಾದರೆ ಅಥವಾ ತನ್ನನ್ನು ಪಕ್ಕಕ್ಕಿಟ್ಟು ಹಿಂದುಳಿದವನಿಗೆ ಸರಕಾರಿ ಕೆಲಸದಲ್ಲಿ ಪ್ರಾಧಾನ್ಯ ಕೊಡುವ ಪ್ರಸಂಗ ಒಬ್ಬ ಮೇಲ್ಜಾತಿಯವನಿಗೆ ಎದುರಾದರೆ ಮೂವರ ಬಾಯಿಗಳು ಕಟ್ಟಿಹೋದಾವು ಅನ್ನುವುದರಲ್ಲಿ ಅನುಮಾನವಿಲ್ಲ.

ಮನುಷ್ಯನ ಈ ಸ್ವಭಾವವನ್ನು ಗಮನದಲ್ಲಿಟ್ಟರೆ ದಲಿತರು ಇಷ್ಟೊಂದು ಹಠ ಮಾಡುತ್ತಿರುವಾಗಲೂ ಮೇಲ್ಜಾತಿಯವರಿಗೆ ಯಾಕೆ ಏನೂ ಅನ್ನಿಸುತ್ತಿಲ್ಲ ಅನ್ನುವುದು ಅರ್ಥವಾದೀತು. ಮೇಲ್ಜಾತಿಯವರಲ್ಲಿ ಬುದ್ಧಿಹೀನ ಜನರಿರುವಂತೆ ಆಚಾರಹೀನ ಜನರೂ ಇದ್ದಾರೆ. ಬುದ್ಧಿ ಹೀನ ಆದರೆ ಆಚಾರ ಹೀನ ಜನ ಅಸ್ಪಶ್ಯತೆ ಒಳ್ಳೆಯದೋ ಕೆಟ್ಟದ್ದೋ ಎಂದು ಯೋಚಿಸುವುದಿಲ್ಲ. ಆದರೆ ಆಚಾರಹೀನ ಜನ ಅಸ್ಪಶ್ಯತೆ ಕೆಟ್ಟದ್ದು ಎಂದು ಒಪ್ಪಿದರೂ ಕೂಡ ತಮ್ಮ ದೊಡ್ಡಸ್ತಿಕೆಯ ಸ್ವಾರ್ಥಕ್ಕೆ ಕಟ್ಟು ಬೀಳುವುದರಿಂದ ಅವರಾರೂ ತಮ್ಮ ಯೋಚನೆಗಳನ್ನು ಆಚರಣೆಯಲ್ಲಿ ತರುವುದಿಲ್ಲ.

ಈ ರೀತಿ ರೋಗ ಪತ್ತೆಯಾದರೂ ಅಂಧ ಪರಂಪರೆ ಹಾಗೂ ಸ್ವಾರ್ಥದಿಂದಾಗಿ ನಾವು ಹೇಳಿದ ಮದ್ದು ಅವರಿಗೆ ಅರ್ಥವಾಗದಾಗ ಅವರನ್ನು ಸರಿದಾರಿಗೆ ತರಲು ನಾವು ಯಾವ ಉಪಾಯ ಮಾಡಬೇಕು ಅನ್ನುವ ಒಂದೇ ಪ್ರಶ್ನೆ ಉಳಿಯುತ್ತದೆ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ನಾಸ್ತಿಕ ಮದ