ಏನಿದು ಫೇಸ್ ಬುಕ್ ಬಳಕೆದಾರರ ಮಾಹಿತಿ ದುರ್ಬಳಕೆ ಪ್ರಕರಣ ?
ಎಲ್ಲರಿಗೂ ತಿಳಿದಿರುವಂತೆ ಫೇಸ್ ಬುಕ್ ಸದ್ಯಕ್ಕೆ ವಿಶ್ವದ ಅತಿದೊಡ್ಡ ಸಾಮಾಜಿಕ ಜಾಲತಾಣ. 2017 ರ ಅಂತ್ಯದಲ್ಲಿ ವಿಶ್ವಾದ್ಯಂತ 2.2 ಬಿಲಿಯನ್ (220 ಕೋಟಿ )ಜನರು ಸಕ್ರಿಯವಾಗಿ ಫೇಸ್ ಬುಕ್ ಬಳಸುತ್ತಿದ್ದರು. ಹೇಗೆ ನೋಡಿದರೂ ಇದು ಭಾರೀ ದೊಡ್ಡ ಸಂಖ್ಯೆ. ಅಂದರೆ ಇಷ್ಟು ದೊಡ್ಡ ಸಂಖ್ಯೆಯ ಜನರ ಮಾಹಿತಿ ಫೇಸ್ ಬುಕ್ ಬಳಿ ಇದೆ. ಈ ಮಾಹಿತಿ ದುರ್ಬಳಕೆ ಆಗುತ್ತಿದೆ ಎಂಬ ದೂರು, ಆರೋಪಗಳು ಹಾಗು ಹೀಗೆ ಆಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ಆಗಾಗ ಇಂಟರ್ನೆಟ್ ಕುರಿತು ಜಾಗೃತಿ ಮೂಡಿಸುವ ಕಾರ್ಯಕರ್ತರಿಂದ, ಸಂಘಟನೆಗಳಿಂದ್ ಬರುತ್ತಲೇ ಇದೆ.
ಈಗ ಅದು ನಿಜವಾಗಿದೆ !
ಕೇಂಬ್ರಿಜ್ ಅನಾಲಿಟಿಕ ಎಂಬ ಬ್ರಿಟಿಷ್ ಮಾಹಿತಿ ಕಂಪೆನಿ 2016 ರಲ್ಲಿ ಡೊನಾಲ್ಡ್ ಟ್ರಂಪ್ ಅಮೇರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದಾಗ ಕೋಟ್ಯಂತರ ಅಮೆರಿಕನ್ ಫೇಸ್ ಬುಕ್ ಬಳಕೆದಾರರ ಮಾಹಿತಿಯನ್ನು ಕಾನೂನು ಬಾಹಿರವಾಗಿ ಬಳಸಿ ಟ್ರಂಪ್ ಚುನಾವಣೆಗೆ ಸಹಕರಿಸಿತ್ತು ಎಂಬ ಆರೋಪ ಕೇಳಿ ಬಂದಿದೆ. ಫೇಸ್ ಬುಕ್ ನಲ್ಲಿರುವ ಅಮೇರಿಕ ಮತದಾರರ ವೈಯಕ್ತಿಕ ಮಾಹಿತಿಯನ್ನು ಅನಧಿಕೃತವಾಗಿ , ಕಾನೂನು ಬಾಹಿರವಾಗಿ ಪಡೆದು ಅವುಗಳನ್ನು ಬಳಸಿ ಒಂದು ಸಾಫ್ಟ್ ವೇರ್ ತಯಾರಿಸಿ ಆ ಮತದಾರರನ್ನು ಸೆಳೆಯಲು ಪ್ರಯತ್ನಿಸಲಾಗಿತ್ತು ಎಂಬ ಗಂಭೀರ ಆರೋಪ ಅದು. ಇದು ಫೇಸ್ ಬುಕ್ ಇತಿಹಾಸದಲ್ಲೇ ಅತಿದೊಡ್ಡ ಮಾಹಿತಿ ಕಳವು , ದುರ್ಬಳಕೆ ಆರೋಪ.
ಬಹಿರಂಗವಾಗಿದ್ದು ಹೇಗೆ ?
ಈ ಆರೋಪವನ್ನು ಮಾಡಿರುವುದು ಬೇರಾರು ಅಲ್ಲ, ಈ ಕೇಂಬ್ರಿಜ್ ಅನಾಲಿಟಿಕ ಕಂಪೆನಿಯ ಮಾಜಿ ಉದ್ಯೋಗಿ ಕ್ರಿಸ್ಟೋಫರ್ ವೈಲಿ ಎಂಬಾತ ಈ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ . ಕೇಂಬ್ರಿಜ್ ಅನಾಲಿಟಿಕ ಕಂಪೆನಿಯ ಅಸ್ತಿತ್ವವೇ ಇಂತಹ ಕೆಲಸಗಳ ಮೇಲೆ ನಿಂತಿತ್ತು ಎಂದು ಹೇಳಿದ್ದಾರೆ ಕ್ರಿಸ್ಟೋಫರ್.
ಕ್ರಿಸ್ಟೋಫರ್ ಪ್ರಕಾರ ಕೇಂಬ್ರಿಜ್ ಅನಾಲಿಟಿಕ ಮಾಡಿದ್ದಿಷ್ಟು - ಫೇಸ್ ಬುಕ್ ನಲ್ಲಿರುವ ಅಮೇರಿಕನ್ ಮತದಾರರ ಮಾಹಿತಿ ಕಲೆ ಹಾಕಿ ಅವರ ಹಿನ್ನೆಲೆ, ಬೇಕು ಬೇಡಗಳು ಇತ್ಯಾದಿ ವಿವರಗಳನ್ನು ವಿಶ್ಲೇಷಿಸಿ ಅವರನ್ನು ಟ್ರಂಪ್ ರತ್ತ ಸೆಳೆಯುವಂತಹ ರಾಜಕೀಯ ಜಾಹೀರಾತುಗಳನ್ನು ಅವರು ನೋಡುವಂತೆ ಮಾಡುವುದು. 2014 ರಲ್ಲೇ ಈ ಕೆಲಸ ಪ್ರಾರಂಭವಾಗಿತ್ತು.
ಇದರ ಹಿಂದೆ ಇದ್ದವರು ಯಾರು ?
ಕೇಂಬ್ರಿಜ್ ಅನಾಲಿಟಿಕ ಕಂಪೆನಿಯ ಮಾಲಕ ಹೆಜ್ ಫಂಡ್ ಖ್ಯಾತಿಯ ಬಿಲಿಯನೇರ್ ರಾಬರ್ಟ್ ಮರ್ಸರ್ . ಟ್ರಂಪ್ ಗೆ ಸಹಕರಿಸಿದ ಅವಧಿಯಲ್ಲಿ ಈ ಕಂಪೆನಿಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದುದು ಟ್ರಂಪ್ ಆತ್ಮೀಯ ಸ್ಟೀವ್ ಬಾನೊನ್. ಟ್ರಂಪ್ ಅಧ್ಯಕ್ಷೀಯ ಅಭಿಯಾನದ ಮುಖ್ಯಸ್ಥರಾಗಿದ್ದ ಸ್ಟೀವ್ ಟ್ರಂಪ್ ಅಮೇರಿಕ ಅಧ್ಯಕ್ಷರಾದ ಮೇಲೆ ಶ್ವೇತ ಭವನದ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು. ಬಳಿಕ ವಿವಾದವಾಗಿ ಅಲ್ಲಿಂದ ನಿರ್ಗಮಿಸಿದರು.
ಫೇಸ್ ಬುಕ್ ಪಾತ್ರ ಏನು ?
ತನ್ನ 5 ಕೋಟಿಗೂ ಹೆಚ್ಚು ಬಳಕೆದಾರರ ಮಾಹಿತಿ ಕಾನೂನು ಬಾಹಿರವಾಗಿ ತಪ್ಪು ಕೈಗಳಿಗೆ ತಲುಪಿ ದುರ್ಬಳಕೆ ಆಗುತ್ತಿದೆ ಎಂಬುದು 2015 ರಲ್ಲೇ ಫೇಸ್ ಬುಕ್ ಗಮನಕ್ಕೆ ಬಂದಿದೆ. ಇದನ್ನು ಫೇಸ್ ಬುಕ್ ಕೂಡ ಒಪ್ಪಿಕೊಂಡಿದೆ. ಆದರೆ ತಕ್ಷಣ ತನ್ನೆಲ್ಲಾ ಬಳಕೆದಾರರಿಗೆ ಈ ಬಗ್ಗೆ ಮಾಹಿತಿ ನೀಡಿ , ಎಚ್ಚರಿಸಬೇಕಾಗಿದ್ದ ಫೇಸ್ ಬುಕ್ ಆ ಕೆಲಸ ಮಾಡದೆ ಕೇವಲ ಅಲ್ಲಿಂದೆಲ್ಲಿಗೆ ತೇಪೆ ಹಚ್ಚುವ ಪ್ರಯತ್ನ ಮಾಡಿ ಗಂಭೀರ ಲೋಪ ಎಸಗಿದೆ ಎಂಬುದು ಈಗ ಆರೋಪ. ಒಟ್ಟಾರೆ ತನ್ನ ಬಳಕೆದಾರರ ಮಾಹಿತಿ ಬಗ್ಗೆ ಫೇಸ್ ಬುಕ್ ಪಾರದರ್ಶಕವಾಗಿಲ್ಲ ಎಂಬ ಆರೋಪಗಳಿಗೆ ಈಗ ಪುಷ್ಟಿ ಬಂದಿದೆ. ನಮ್ಮ ಮಾಹಿತಿ ಸೋರಿಕೆ ಆಗಿದ್ದಲ್ಲಿ ತಕ್ಕ ಬೆಲೆ ತೆರಬೇಕಾದೀತು ಎಂದು ಭಾರತ ಸಹಿತ ಹಲವು ದೇಶಗಳ ಸರಕಾರಗಳು ಫೇಸ್ ಬುಕ್ ವಿರುದ್ಧ ಮುಗಿಬಿದ್ದಿವೆ.
ಮಾಹಿತಿ ಸೋರಿಕೆ ಆಗಿದ್ದು ಹೇಗೆ ?
thisisyourdigitallife ಎಂಬ ಹೆಸರಿನ ಆಪ್ ಮೂಲಕ ಫೇಸ್ ಬುಕ್ ಬಳಕೆದಾರರ ಮಾಹಿತಿ ಸೋರಿಕೆಯಾಗಿದೆ. ಈ ಆಪ್ ಮಾಡಿದವರು ಅಲೆಕ್ಸಾಂಡರ್ ಕೋಗನ್ ಎಂಬ ವ್ಯಕ್ತಿ. ಕೇಂಬ್ರಿಜ್ ವಿವಿಯಲ್ಲೂ ಈ ವ್ಯಕ್ತಿ ಉದ್ಯೋಗದಲ್ಲಿದ್ದಾರೆ. ಆದರೆ ಅಲ್ಲಿಂದ್ ಪ್ರತ್ಯೇಕವಾಗಿ ಕೇಂಬ್ರಿಜ್ ಅನಾಲಿಟಿಕ ಜೊತೆ ಸೇರಿ ಗ್ಲೋಬಲ್ ಸಯ್ನ್ಸ್ ರಿಸರ್ಚ್ ಎಂಬ ಕಂಪೆನಿ ಸ್ಥಾಪಿಸಿದ ಅಲೆಕ್ಸಾಂಡರ್ ಅದರ ಮೂಲಕ ಬಹುದೊಡ್ಡ ಸಂಖ್ಯೆಯ ಜನರಿಗೆ ಹಣ ಪಾವತಿಸಿ ವ್ಯಕ್ತಿತ್ವ ಪರೀಕ್ಷೆ ಎದುರಿಸುವಂತೆ ಮಾಡಿದ್ದಾರೆ . ಹಾಗೆ ಮಾಡುವಾಗ ಶೈಕ್ಷಣಿಕ ಬಳಕೆಗಾಗಿ ನಿಮ್ಮ ಮಾಹಿತಿ ಸಂಗ್ರಹಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಪರೀಕ್ಷೆ ಎದುರಿಸಿದವರ್ ಫೇಸ್ ಬುಕ್ ಮಿತ್ರರ ಮಾಹಿತಿಯನ್ನೂ ಅವರಿಂದ ಪಡೆಯಲಾಗಿದೆ. ಬಳಿಕ ಈ ಮಾಹಿತಿ ಭಂಡಾರವನ್ನು ಕಾನೂನು ಬಾಹಿರವಾಗಿ ಟ್ರಂಪ್ ಗಾಗಿ ಬಳಸಲಾಗಿದೆ ಎಂಬುದು ಆರೋಪ.
ಬ್ರೆಕ್ಸಿಟ್ ಹಿಂದೆಯೂ ಇತ್ತು ಕೇಂಬ್ರಿಜ್ ಅನಾಲಿಟಿಕ
ಯುರೋಪಿಯನ್ ಯೂನಿಯನ್ ನಿಂದ ಬ್ರಿಟನ್ ಹೊರಬರುವ ಜನಮತಗಣನೆಯಲ್ಲೂ ಕೇಂಬ್ರಿಜ್ ಅನಾಲಿಟಿಕ ಪಾತ್ರ ಇತ್ತು. Leave.EU ಎಂಬ ಸಂಘಟನೆ ಪರವಾಗಿ ಕೆಲಸ ಮಾಡಿ ಬ್ರಿಟನ್ ಯುರೋಪಿಯನ್ ಯೂನಿಯನ್ ನಿಂದ ಹೊರಬರುವಂತೆ ಮತ ಹಾಕಿಸುವಲ್ಲಿ ಪ್ರಭಾವ ಬೀರಿದೆ ಎಂಬ ಆರೋಪ ಇದೆ.