ನಿರಪರಾಧಿಗೆ ಹಿಂಸೆ: ನ್ಯಾಯ ಸಮ್ಮತವೇ?
ನೂರು ಅಪರಾಧಿಗಳು ತಪ್ಪಿಸಿಕೊಂಡರೂ ಓರ್ವ ನಿರಪರಾಧಿಗೆ ಶಿಕ್ಷೆಯಾಗಬಾರದು ಎನ್ನುವುದು ನಮ್ಮ ಕಾನೂನಿನ ಮೂಲಭೂತ ತತ್ವಗಳಲ್ಲೊಂದು. ಆದರೆ ಇಂದು ನಮ್ಮ ದೇಶದಲ್ಲಿ ಇದಕ್ಕೆ ತದ್ವಿರುದ್ಧವಾದುದು ನಿರಂತರ ಮತ್ತು ಉದ್ದೇಶಪೂರ್ವಕವಾಗಿ ಸಂಭವಿಸುತ್ತಿರುತ್ತದೆ. ಪೊಲೀಸ್ ಮತ್ತು ನ್ಯಾಯಾಂಗದ ವ್ಯಾಖ್ಯೆಯ ಪ್ರಕಾರ ಆರೋಪಿಯ ಅಪರಾಧ ಸಾಬೀತಾದ ಬಳಿಕ ನ್ಯಾಯಾಲಯ ಘೋಷಿಸುವ ಶಿಕ್ಷೆ ಮಾತ್ರ ನಿಜವಾದ ಶಿಕ್ಷೆ. ಆದರೆ ಆರೋಪಿಯನ್ನು ಹಿಡಿಯುವ ಸಲುವಾಗಿ ಪೊಲೀಸರು ಕಾನೂನು ಮೀರಿ ಕೈಗೊಳ್ಳುವ ವಿಚಾರಣಾ ವಿಧಾನ ಅನೇಕ ಬಾರಿ ನ್ಯಾಯಾಲಯ ಘೋಷಿಸುವ ಶಿಕ್ಷೆಗಿಂತ ಘೋರವಾಗಿರುತ್ತದೆ. ಈ ನಿಟ್ಟಿನಲ್ಲಿ ಪೊಲೀಸರು ಯಾವತ್ತೂ ಯೋಚಿಸುವುದಿಲ್ಲ. ಅವರ ಕೆಲಸ ಮಾಡಲು ಯಾವುದೇ ವಿಧಾನ ಅನುಸರಿಸಿದರೂ ಅವರಿಗದು ಕಾನೂನು ಬಾಹಿರ ಎಂದೆಣಿಸುವುದೇ ಇಲ್ಲ. ಇದನ್ನು ನಮ್ಮ ನ್ಯಾಯಾಂಗದ ಹುಳುಕೆನ್ನಬೇಕೋ ಅಥವಾ ನಮ್ಮ ಕಾನೂನು ವ್ಯವಸ್ಥೆಯ ಲೂಪ್‌ಹೋಲ್ ಎನ್ನಬೇಕೋ ತಿಳಿಯುತ್ತಿಲ್ಲ.
ಓರ್ವ ಮಾನವ ಹಕ್ಕುಗಳ ಕಾರ್ಯಕರ್ತನೆಂಬ ನೆಲೆಯಲ್ಲಿ ನಾಡಿನ ವಿವಿಧೆಡೆ ನಡೆದ ಕೋಮುಗಲಭೆ ಮತ್ತು ಪೊಲೀಸ್ ಕಾರ್ಯಾಚರಣೆಗಳ ಕುರಿತು ಸಂಘಟನೆಯ ಸದಸ್ಯರೊಂದಿಗೆ ಭಾಗಿಯಾಗಿದ್ದ ಹೆಚ್ಚಿನೆಲ್ಲಾ ಸತ್ಯಶೋಧನಾ ಕಾರ್ಯದಲ್ಲಿ ಕಂಡುಕೊಂಡ ಒಂದು ಮುಖ್ಯ ಅಂಶವೇನೆಂದರೆ ಪೊಲೀಸರು ಕೈಗೆ ಸಿಕ್ಕವರನ್ನು ಬಂಧಿಸಿ ಕೇಸು ಜಡಿಯುವುದು. ಅಲ್ಲಿ ನ್ಯಾಯ ನೀತಿ ಎಂಬ ವಿಚಾರಗಳು ನಗಣ್ಯ.
ಸ್ವಾತಂತ್ರ್ಯಾನಂತರ ಭಾರತದಲ್ಲಿ ನಡೆದ ಹೆಚ್ಚಿನೆಲ್ಲಾ ಕೋಮು ಗಲಭೆಗಳನ್ನು ತಹಬಂದಿಗೆ ತರಲು ಅನೇಕ ಸಂದರ್ಭಗಳಲ್ಲಿ ಪೊಲೀಸರು ಅಲ್ಪಸಂಖ್ಯಾತ ಸಮುದಾಯದ ಮಂದಿಯನ್ನು ಕಾನೂನು ಮೀರಿ ಶಿಕ್ಷಿಸಿದ್ದಾರೆ ಎಂಬ ಅಭಿಪ್ರಾಯವನ್ನು ಭಾರತೀಯ ಪೊಲೀಸ್ ಇಲಾಖೆಯ ಚಿಂತನೆಯ ಚಿಲುಮೆಯೆಂದೇ ಹೆಸರಾದ ಡಾ.ವಿಭೂತಿ ನಾರಾಯಣ್ ರಾವ್ ತಮ್ಮ ‘ಕೋಮುಗಲಭೆಗಳು ಹಾಗೂ ಭಾರತದ ಪೊಲೀಸರು’ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ.
ಯಾವುದೇ ಪ್ರಕರಣದಲ್ಲಿ ಆರೋಪಿಯೊಬ್ಬ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡಾಗ, ಪೊಲೀಸರ ಮೇಲೆ ರಾಜಕೀಯ ಅಥವಾ ಮೇಲಧಿಕಾರಿಯಿಂದ ಒತ್ತಡ ಬಿದ್ದರೆ ಆಳುವ ವರ್ಗಕ್ಕೆ ತಮ್ಮ ದಕ್ಷತೆ ಪ್ರದರ್ಶಿಸಲು ತಪ್ಪಿಸಿಕೊಂಡ ಆರೋಪಿಯ ಸಂಬಂಧಿಕರನ್ನು ಬಂಧಿಸುತ್ತಾರೆ ಅಥವಾ ಆತನ ಗೆಳೆಯರನ್ನು ಬಂಧಿಸುತ್ತಾರೆ. ಆರೋಪಿ ಎಲ್ಲಿದ್ದಾನೆಂಬ ಮಾಹಿತಿ ನೀಡಲು ಪೀಡಿಸುತ್ತಾರೆ, ಚಿತ್ರಹಿಂಸೆ ಕೊಡುತ್ತಾರೆ. ಕೆಲವು ಪ್ರಕರಣಗಳಲ್ಲಿ ಇಂತಹದ್ದು ನಡೆದಾಗ ತನ್ನಿಂದಾಗಿ ಅವರು ಹಿಂಸೆ ಅನುಭವಿಸುವುದು ಬೇಡ ಎಂದು ಆರೋಪಿ ಶರಣಾಗುವುದೂ ಇದೆ. ಆರೋಪಿಯನ್ನು ಕಾನೂನಿನ ಮುಷ್ಟಿಗೆ ತರಲು ಅಮಾಯಕರನ್ನು ಹಿಂಸಿಸುವುದು ನ್ಯಾಯಸಮ್ಮತವೇ? ಈ ರೀತಿಯ ಬ್ಲ್ಯಾಕ್ ಮೇಲ್ ತಂತ್ರ ಕಾನೂನು ಬದ್ಧವೇ?ಆರೋಪಿಯನ್ನು ಬಂಧಿಸುವುದು ಪೊಲೀಸರ ಕೆಲಸವೇ ಹೊರತು ಆರೋಪಿಯ ಸಂಬಂಧಿಕರನ್ನು ಒತ್ತೆ ಇಟ್ಟು ಆರೋಪಿಯನ್ನು ಬ್ಲ್ಯಾಕ್‌ಮೇಲ್ ಮಾಡುವುದು ಕಾನೂನು ಬಾಹಿರ.
ಆರೋಪಿಯೊಬ್ಬ ತಪ್ಪಿಸಿಕೊಳ್ಳುವಾಗ ಹೆಚ್ಚಿನ ಸಂದರ್ಭಗಳಲ್ಲಿ ಆತ ತಾನು ಎಲ್ಲಿರುತ್ತೇನೆ ಎಂಬ ಮಾಹಿತಿಯನ್ನು ಆತ ಕುಟುಂಬಿಕರಿಗೆ ತಿಳಿಸುವುದಿಲ್ಲ.ವ್ಯಕ್ತಿಯೊಬ್ಬ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಆತನ ಮನೆಮಂದಿಯೆಲ್ಲಾ ಅದಕ್ಕೆ ಹೊಣೆಯಾಗುವುದಿಲ್ಲ. ಯಾವ ಹೆತ್ತವರೂ ತಮ್ಮ ಮಕ್ಕಳು ಮಾಡುವ ಕ್ರಿಮಿನಲ್ ಕೆಲಸಗಳಿಗೆ ಸಾಥ್ ಕೊಡುವುದಿಲ್ಲ. ಯಾವ ಕ್ರಿಮಿನಲ್ ಕೂಡಾ ತಾನು ಮಾಡುವ ದುಷ್ಕೃತ್ಯಗಳನ್ನು ತನ್ನ ಮನೆಮಂದಿಗೆ ತಿಳಿಸಿ ಮಾಡುವುದಿಲ್ಲ.
ಆರೋಪಿಯೊಬ್ಬ ತಪ್ಪಿಸಿಕೊಂಡರೆ ಆತನ ಮನೆಗೆ ಅಕ್ರಮವಾಗಿ ನುಗ್ಗಿ ಆತನ ಹೆತ್ತವರನ್ನು, ಪತ್ನಿ ಮಕ್ಕಳನ್ನು, ಸಹೋದರರನ್ನು ಪೀಡಿಸುವ ಕೃತ್ಯಗಳನ್ನು ನಾವು ಸರ್ವೇ ಸಾಮಾನ್ಯವಾಗಿ ಕೇಳುತ್ತಿರುತ್ತೇವೆ.
ಸಂಶಯದ ಆಧಾರದಲ್ಲಿ ಯಾರನ್ನು ಬೇಕಾದರೂ ವಿಚಾರಣೆಗೆ ಕೊಂಡೊಯ್ಯಬಹುದು. ಆದರೆ ಅದಕ್ಕೆ ಕೆಲವು ನೀತಿ ನಿಯಮಾವಳಿಗಳಿವೆ. ಅದೆಷ್ಟೋ ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸಿದರೆ ಅಥವಾ ವಿಚಾರಣೆಗಾಗಿ ಯಾರನ್ನೇ ವಶಕ್ಕೆ ತೆಗೆದುಕೊಳ್ಳುವಾಗ ಆತನ ಮನೆಮಂದಿಗೆ ಆ ಬಗ್ಗೆ ಮಾಹಿತಿ ನೀಡುವುದಿಲ್ಲ. ಒಂಥರಾ ಅಪಹರಣದ ಸ್ವರೂಪದಲ್ಲೇ ಕೊಂಡೊಯ್ಯಲಾಗುತ್ತದೆ. ದುರಂತವೇನೆಂದರೆ ಜನಸಾಮಾನ್ಯರು ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಲು ಅಸಹಾಯಕರಾಗುತ್ತಾರೆ.
ಆರೋಪಿಯೊಬ್ಬನನ್ನು ಅಥವಾ ವಿಚಾರಣೆಗೆಂದು ಕೊಂಡೊಯ್ಯು ವವರನ್ನು ಹೇಗೆ ಕೊಂಡೊಯ್ಯಬೇಕೆಂಬ ಸುಪ್ರೀಂ ಕೋರ್ಟ್‌ನ ಸ್ಪಷ್ಟ ನಿರ್ದೇಶನವಿದ್ದಾಗ್ಯೂ ಪೊಲೀಸ್ ಇಲಾಖೆ ಅದನ್ನು ಗಾಳಿಗೆ ತೂರಿ ತಾವು ಕಾನೂನಿಗೆ ಅತೀತರು ಎಂಬಂತೆ ವರ್ತಿಸುತ್ತದೆ.
ಪಶ್ಚಿಮ ಬಂಗಾಳ ಸರಕಾರ v/s ಡಿ.ಕೆ.ಬಸು ಪ್ರಕರಣದ ರಿಟ್ ಸಂಖ್ಯೆ ಸಿಆರ್‌ಎಲ್ 539196 ಇದರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಕುಲದೀಪ್ ಸಿಂಗ್ ಮತ್ತು ಡಾ.ಎ.ಎಸ್.ಆನಂದ್ ನೀಡಿದ ನಿರ್ದೇಶನ ಈ ಕೆಳಗಿನಂತಿವೆ.
1.ಬಂಧಿಸುವ ಮತ್ತು ಬಂಧಿತರನ್ನು ತನಿಖೆಗೊಳಪಡಿಸುವ ಪೊಲೀಸ್ ಅಧಿಕಾರಿ ತನ್ನ ಹೆಸರು ಹುದ್ದೆಯ ಪದನಾಮವನ್ನು ಸರಿಯಾಗಿ ಸ್ಪಷ್ಟವಾಗಿ ಕಾಣುವಂತೆ ಧರಿಸಿರಬೇಕು. ವಿಚಾರಣೆ ನಡೆಸುವ ಪೊಲೀಸರ ಹೆಸರನ್ನು ಪೊಲೀಸ್ ಡೈರಿಯಲ್ಲಿ ನಮೂದಿಸಬೇಕು.
2.ಬಂಧಿಸಿದ ಪೊಲೀಸ್ ಅಧಿಕಾರಿ ಬಂಧನದ ಸಮಯವನ್ನು ದಾಖಲಿಸಬೇಕು.ಅದನ್ನು ಒಬ್ಬ ಸಾಕ್ಷಿದಾರ ದೃಢೀಕರಿಸಬೇಕು. ಸಾಕ್ಷಿದಾರ ಬಂಧಿತನ ಕುಟುಂಬ ಸದಸ್ಯನಾಗಿರಬೇಕು ಇಲ್ಲವೇ ಆ ಪ್ರದೇಶದ ಗಣ್ಯ ವ್ಯಕ್ತಿಯಾಗಿರಬೇಕು. ಬಂಧಿತನ ಬಂಧನದ ಕುರಿತ ದಾಖಲೆಗೆ ಬಂಧನದ ದಿನ ಮತ್ತು ಸಮಯ ನಮೂದಿಸಿ ಸಹಿ ಮಾಡಿರಬೇಕು.
3.ಪೊಲೀಸ್ ಠಾಣೆ ಇಲ್ಲವೇ ವಿಚಾರಣಾ ಕೇಂದ್ರದಲ್ಲಿ ವಿಚಾರಣೆಗೆಂದು ಇರಿಸಿಕೊಳ್ಳಲ್ಪಟ್ಟ ವ್ಯಕ್ತಿಯ ಸ್ನೇಹಿತ ಇಲ್ಲವೇ ಸಂಬಂಧಿಗೆ ಆದಷ್ಟು ಬೇಗ ಬಂಧನದ ಮಾಹಿತಿ ಮತ್ತು ಇರಿಸಿಕೊಂಡ ಸ್ಥಳದ ಬಗ್ಗೆ ಮಾಹಿತಿ ನೀಡಬೇಕು.
4.ಬಂಧಿತನ ಸ್ನೇಹಿತ ಯಾ ಸಂಬಂಧಿ ಹೊರಜಿಲ್ಲೆಯಲ್ಲಿದ್ದ ಪಕ್ಷದಲ್ಲಿ ಆ ಜಿಲ್ಲೆಯ ಕಾನೂನು ಸಹಾಯ ಸಂಸ್ಥೆಯ ಮೂಲಕ ವ್ಯಕ್ತಿಯನ್ನು ಬಂಧಿಸಿದ 8-12 ಗಂಟೆಯೊಳಗೆ ಆತನ ಸಂಬಂಧಿ ಯಾ ಸ್ನೇಹಿತನಿಗೆ ಬಂಧನದ ವಿಷಯ ತಿಳಿಸಬೇಕು.
5.ಬಂಧಿತ ವ್ಯಕ್ತಿಗೆ ತನ್ನ ಬಂಧನದ ಸುದ್ದಿಯನ್ನು ಬೇರೆಯವರಿಗೆ ತಿಳಿಸುವ ಹಕ್ಕು ಇದೆಯೆಂದು ಅರಿವು ಮೂಡಿಸಬೇಕು.
6.ಬಂಧಿತ ವ್ಯಕ್ತಿಯನ್ನು ಎಲ್ಲಿಡಲಾಗಿದೆ ಹಾಗೂ ಬಂಧನದ ಕುರಿತಂತೆ ಯಾರಿಗೆ ಸುದ್ದಿ ತಲಪಿಸಲಾಗಿದೆ ಎಂದು ಪೊಲೀಸ್ ಡೈರಿಯಲ್ಲಿ ನಮೂದಿಸಬೇಕು. ಬಂದಿ ಯಾವ ಪೊಲೀಸ್ ಅಧಿಕಾರಿಯ ವಶದಲ್ಲಿದ್ದಾನೆ ಎಂಬ ವಿವರ ಡೈರಿಯಲ್ಲಿ ನಮೂದಾಗಿರಬೇಕು.
7.ಬಂಧಿತ ಅಪೇಕ್ಷಿಸಿದರೆ ಬಂಧನದ ಸಮಯದಲ್ಲಿ ಆತನ ವೈದ್ಯಕೀಯ ಪರೀಕ್ಷೆ ನಡೆಸಿ ಅದನ್ನು ದಾಖಲಿಸಿ ಬಂಧಿತ ಮತ್ತು ಪೊಲೀಸ್ ಅಧಿಕಾರಿ ಅದಕ್ಕೆ ಸಹಿ ಹಾಕಬೇಕು. ಅದರ ಪ್ರತಿಯೊಂದನ್ನು ಬಂಧಿತನಿಗೆ ನೀಡಬೇಕು.
8.ಬಂಧನದ ನೋಟಿಸ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ಜಿಲ್ಲಾ ನ್ಯಾಯಾಧೀಶರಿಗೆ ಕಳುಹಿಸಬೇಕು.
9.ಪಾಟೀ ಸವಾಲಿನ ಸಮಯ ಬಂಧಿತನಿಗೆ ತನ್ನ ವಕೀಲನ ಭೇಟಿಗೆ ಅವಕಾಶ ನೀಡಬೇಕು.
ಸುಪ್ರೀಂ ಕೋರ್ಟ್‌ನ ಇಷ್ಟು ಸ್ಪಷ್ಟ ನಿರ್ದೇಶನವಿದ್ದಾಗ್ಯೂ ಅನೇಕ ಪೊಲೀಸರು ಇದನ್ನು ಗಾಳಿಗೆ ತೂರುವ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಾರೆ. ಈ ಮಾಹಿತಿಗಳ ಬಗ್ಗೆ ಸಾರ್ವಜನಿಕರು ತೀರಾ ಅಜ್ಞರಾಗಿರುವುದೇ ಪೊಲೀಸ್ ಇಲಾಖೆಯ ಕಾನೂನು ಬಾಹಿರ ಶಕ್ತಿಗಳು ಕಾನೂನು ಮೀರಿ, ಮಾನವ ಹಕ್ಕುಗಳನ್ನು ಉಲ್ಲಂಘಿಸಲು ಕಾರಣ. ನ್ಯಾಯಾಧೀಶರು ಎಲ್ಲಾ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ಸಂದರ್ಭಗಳಲ್ಲಿ ಈ ಮೇಲಿನ ವಿಚಾರಗಳ ಕುರಿತು ಕೂಲಂಕಶ ಪರಿಶೀಲನೆ ನಡೆಸುವ ಕೆಲಸ ತುರ್ತಾಗಿ ಆಗಬೇಕಿದೆ. ಕಾನೂನು ಕೈಗೆತ್ತುವ ಪೊಲೀಸರ ಮೇಲೂ ಕಾನೂನು ಕೈಗೆತ್ತುವ ಜನಸಾಮಾನ್ಯನಿಗೆ ಅನ್ವಯವಾಗುವ ಪ್ರಕರಣ ದಾಖಲಾಗುವಂತೆ ಗೃಹ ಇಲಾಖೆ ನೋಡಿಕೊಳ್ಳಬೇಕಿದೆ.