ಸ್ವಾಮೀಜಿಗಳು ತಪಃಶಕ್ತಿಯಿಂದಲೂ ಮಕ್ಕಳು ಮಾಡಲು ಸಾಧ್ಯ!

Update: 2018-03-25 08:22 GMT

ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಲು ರಾಜ್ಯ ಸರಕಾರ ತನ್ನ ಒಪ್ಪಿಗೆ ನೀಡಿದ ಬೆನ್ನಿಗೇ ರಾಜ್ಯಾದ್ಯಂತ ಸ್ವಾಮೀಜಿಗಳು ಕಣ್ಣೀರು ಹಾಕ ತೊಡಗಿದರು. ಕೆಲವು ಸ್ವಾಮೀಜಿಗಳಂತೂ ‘‘ನಿನ್ನ ಕಳುಹ ಬಂದವರಿಲ್ಲಿ ಉಳಿದುಕೊಂಬವರಿಲ್ಲ’’ ಎಂಬ ಶಿಶುನಾಳ ಶರೀಫರ ಹಾಡನ್ನು ಹಾಡುತ್ತಾ ಲಿಂಗಾಯತ ಸ್ವಾಮೀಜಿಗಳ ಸುತ್ತ ಸುತ್ತತೊಡಗಿದರು. ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಬಾರದು ಎನ್ನುವುದರ ಕುರಿತಂತೆ ದೇಶದ ಖ್ಯಾತ ಸ್ವಾಮೀಜಿ ಬೇಜಾರೇಶ್ವರ ಶ್ರೀಗಳು ಪತ್ರಕರ್ತ ಎಂಜಲು ಕಾಸಿಯನ್ನು ಕರೆದು ಮಾತನಾಡಿದರು. ಆ ಸಂದರ್ಶನವನ್ನು ಇಲ್ಲಿ ಯಥಾವತ್ ನೀಡಲಾಗಿದೆ.

***

ಕಾಸಿ:   ಸ್ವಾಮೀಜಿ, ಲಿಂಗಾಯತ ಸ್ವತಂತ್ರ ಧರ್ಮವಾದುದಕ್ಕೆ ನೀವು ಅತೀವ ದುಃಖ ವ್ಯಕ್ತಪಡಿಸಿದ್ದೀರಿ. ಈ ದುಃಖಕ್ಕೆ ಕಾರಣವೇನು?

ಬೇಜಾರೇಶ್ವರ ಶ್ರೀ ಸ್ವಾಮೀಜಿ: ನನ್ನ ಮತ್ತು ಅಲ್ಪಸಂಖ್ಯಾತರ ಸ್ನೇಹ-ಸಂಬಂಧ ದೀರ್ಘವಾದುದು. ಎಲ್ಲ ಹಿಂದೂಧರ್ಮೀಯರನ್ನು ಎದುರು ಹಾಕಿಕೊಂಡು ಅವರಿಗೆ ನಾನು ಮಠದ ಅಟ್ಟದಲ್ಲಿ ಗುಟ್ಟಾಗಿ ಇಫ್ತಾರ್ ಕೂಟ ಏರ್ಪಡಿಸಿದ್ದೆ. ಇದೀಗ ‘ಲಿಂಗಾಯತ ಸ್ವತಂತ್ರ’ ಧರ್ಮವಾಗುವುದರಿಂದ ಅಲ್ಪಸಂಖ್ಯಾತರಿಗೆ ಅದರಲ್ಲೂ ಕರ್ನಾಟಕದ ಮುಸಲ್ಮಾನರಿಗೆ ಅನ್ಯಾಯವಾಗುತ್ತದೆ ಎನ್ನುವುದೇ ನನ್ನ ಆತಂಕ. ಈಗ ನೋಡಿ, ಲಿಂಗಾಯತರು ಸ್ವತಂತ್ರ ಧರ್ಮವಾದರೆ ಅವರು ಅಲ್ಪಸಂಖ್ಯಾತರ ಮೀಸಲಾತಿಯಲ್ಲಿ ಪಾಲು ಕೇಳುತ್ತಾರೆ. ಇದು ನನಗೆ ನೋವು ಕೊಟ್ಟಿದೆ. ಆದುದರಿಂದ ಲಿಂಗಾಯತ ಸ್ವತಂತ್ರ ಧರ್ಮದ ವಿರುದ್ಧ ನಾಡಿನ ಎಲ್ಲ ಅಲ್ಪಸಂಖ್ಯಾತರು ನಮ್ಮ ಜೊತೆ ಹೋರಾಟಕ್ಕೆ ಕೈ ಜೋಡಿಸಬೇಕು.

ಕಾಸಿ: ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗ ಅಲ್ಲ ಎಂದು ಹೇಳುತ್ತಿದ್ದಾರೆ...ಇದರ ಬಗ್ಗೆ ಏನು ಹೇಳುತ್ತೀರಿ?

ಬೇಜಾರೇಶ್ವರ ಶ್ರೀ: ಅದು ಹೇಗೆ ಅಲ್ಲ? ನಮ್ಮಲ್ಲೂ ಮೇಲು ಕೀಳು ಇದೆ. ಅವರಲ್ಲೂ ಮೇಲು ಕೀಳು ಇದೆ. ನಾವು ರಾಜಕೀಯ ಮಾಡುತ್ತೇವೆ. ಅವರೂ ರಾಜಕೀಯ ಮಾಡುತ್ತಾರೆ. ಯಡಿಯೂರಪ್ಪ ನಮ್ಮ ನಾಯಕರೂ ಹೌದು, ಲಿಂಗಾಯತರ ನಾಯಕರೂ ಹೌದು. ಆರೆಸ್ಸೆಸ್‌ನಲ್ಲಿ ತುಂಬಾ ಲಿಂಗಾಯತರು ಇದ್ದಾರೆ. ಮಠದ ಹುಂಡಿಗೆ ಹಣ ಹಾಕಲು ನಾವು ಲಿಂಗಾಯತರಿಗೆ ಧಾರಾಳವಾಗಿ ಅವಕಾಶ ನೀಡುತ್ತಾ ಬಂದಿದ್ದೇವೆ. ಇವೆಲ್ಲವೂ ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗ ಎನ್ನುವುದನ್ನು ಎತ್ತಿ ಹಿಡಿಯುವುದಿಲ್ಲವೇ?

ಕಾಸಿ: ಲಿಂಗಾಯತ ಧರ್ಮದ ಸ್ಥಾಪಕ ಬಸವಣ್ಣ ಎಂದು ಹೇಳುತ್ತಾರಲ್ಲ. ಇದರ ಬಗ್ಗೆ ನಿಮ್ಮ ಅಭಿಪ್ರಾಯ?
ಬೇಜಾರೇಶ್ವರ ಶ್ರೀ:  ಅದನ್ನು ಇಷ್ಟು ದೊಡ್ಡ ವಿಷಯ ಮಾಡುವುದಾ? ಹಿಂದೆ ಬೌದ್ಧರು ನಾವು ಪ್ರತ್ಯೇಕ ಧರ್ಮ ಎಂದು ಹೇಳಿದರು. ಇದೀಗ ಬುದ್ಧ ನಮ್ಮ ದಶಾವತಾರಗಳಲ್ಲಿ ಒಬ್ಬ. ಹಾಗೆಯೇ ಏನಾದರೂ ಬಸವಣ್ಣನವರಿಗೂ ಒಂದು ವ್ಯವಸ್ಥೆ ಮಾಡುವ. ಲಿಂಗಾಯತ ಸ್ವಾಮೀಜಿಗಳು ನನ್ನ ಜೊತೆಗೆ ಮಾತುಕತೆ ನಡೆಸಿದ್ದಿದ್ದರೆ ನಾನು ಈ ಬಗ್ಗೆ ಮೇಲ್ಮಟ್ಟದಲ್ಲಿ ಚರ್ಚೆ ನಡೆಸಿ ಹಿಂದೂ ಧರ್ಮದಲ್ಲಿ ಬಸವಣ್ಣ ಯಾರ ಅವತಾರ, ಯಾವ ಅವತಾರ ಎನ್ನುವುದನ್ನು ಪತ್ರಿಕಾಗೋಷ್ಠಿಯಲ್ಲಿ ಹೇಳುತ್ತಿದ್ದೆ.

ಕಾಸಿ: ಲಿಂಗಾಯತರು ಪ್ರತ್ಯೇಕ ಧರ್ಮ ಮಾಡಿದರೆ ನಿಮಗೇನು ನಷ್ಟ?

ಬೇಜಾರೇಶ್ವರ ಶ್ರೀ: ನಷ್ಟ ಏನು ಎಂದರೆ? ಈಗಾಗಲೇ ದೇಶದಲ್ಲಿ ಲವ್ ಜಿಹಾದ್‌ನಿಂದ ನಮ್ಮ ಹುಂಡಿಗೆ ಸಾಕಷ್ಟು ನಷ್ಟವಾಗಿದೆ. ಅದರ ಜೊತೆಗೆ ದಲಿತರು ಬೌದ್ಧರ ಜಿಹಾದ್‌ಗೆ ಬಲಿಯಾಗುತ್ತಿದ್ದಾರೆ. ಇದೀಗ ಶರಣ ಜಿಹಾದ್ ಶುರು ಆದರೆ ನಮ್ಮ ಹುಂಡಿಗೆ ಕಾಸು ಹಾಕುವವರು ಯಾರು? ಇದು ನಷ್ಟ ಅಲ್ಲವೇ? ಹೀಗೇ ಆದರೆ ಪರ್ಯಾಯ ಉತ್ಸವವನ್ನು ನಡೆಸುವುದು ಹೇಗೆ?

ಕಾಸಿ:  ಲಿಂಗಾಯತರನ್ನು 12ನೇ ಶತಮಾನದಲ್ಲಿ ವೈದಿಕರು ನಾಶ ಮಾಡಿದರು, ಅವರನ್ನು ಹತ್ಯೆ ಮಾಡಿದರು ಎಂದೆಲ್ಲ ಆರೋಪಗಳಿವೆಯಲ್ಲ ಸ್ವಾಮೀಜಿ....
ಬೇಜಾರೇಶ್ವರ ಶ್ರೀ: ಹಾಗೆಲ್ಲ ಇತಿಹಾಸವನ್ನು ಕೆದಕುವುದು ಸರಿಯಲ್ಲ. ಅವರು ಮಾಡಿದ ತಪ್ಪನ್ನು ಈಗ ಯಾಕೆ ಪ್ರಸ್ತಾಪ ಮಾಡುವುದು.
ಕಾಸಿ: ಇದು ಬಾಬರಿ ಮಸೀದಿ ವಿಷಯಕ್ಕೂ ಅನ್ವಯಿಸುತ್ತದಾ?

ಬೇಜಾರೇಶ್ವರ ಶ್ರೀ: ನೋಡಿ ಅದನ್ನು ಇಲ್ಲಿಗೆ ತರಬೇಡಿ. ನಾನು ಬಾಬರಿ ಮಸೀದಿ ಧ್ವಂಸವಾದಾಗ ಮೂರು ದಿನ ಊಟ ಬಿಟ್ಟಿದ್ದೆ.

ಕಾಸಿ: ಸ್ವಾಮೀಜಿ ಲಿಂಗಾಯತರು ಮಾಡಿದ ಹಾಗೆ ನೀವು ಕೂಡ ಪ್ರತ್ಯೇಕ ಧರ್ಮ ಮಾಡಿ.
ಬೇಜಾರೇಶ್ವರ ಶ್ರೀ: ನಾವು ಮಾಡುತ್ತಿದ್ದೆವು. ಆದರೆ ಮುಖ್ಯವಾಗಿ ಅದರಿಂದ ಅಲ್ಪಸಂಖ್ಯಾತರ ಮೀಸಲಾತಿಯನ್ನು ನಮಗೆ ಕೊಡಬೇಕಾಗುತ್ತದೆ. ಇದರಿಂದ ಮುಸ್ಲಿಮರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅದಕ್ಕೆ ಬೇಡ ಎಂದು ನಿರ್ಧರಿಸಿದ್ದೇವೆ.
ಕಾಸಿ: ಸ್ವಾಮೀಜಿ ನೀವು ಸ್ವತಂತ್ರ ಧರ್ಮ ಮಾಡಿದರೆ, ಉಳಿದವರು ನಿಮ್ಮ ದೇವಸ್ಥಾನಗಳಿಗೆ ಮಾಂಸ ತಿಂದು ಪ್ರವೇಶ ಮಾಡುವುದು ತಪ್ಪುತ್ತದೆ. ನಿಮ್ಮದು ಬೇರೆ ಧರ್ಮ ಆಗಿರುವುದರಿಂದ ಶೂದ್ರರು ನಿಮ್ಮ ದೇವಸ್ಥಾನಗಳಿಗೆ ಪ್ರವೇಶಿಸುವುದಿಲ್ಲ. ಆದುದರಿಂದ ಮಠದಲ್ಲಿ ಪಂಕ್ತಿ ಭೇದ ಅಳಿಯುತ್ತದೆ. ಮಡಿ ಮೈಲಿಗೆಯಾಗುವುದು ತಪ್ಪುತ್ತದೆ. ದಲಿತರನ್ನು ದೇವಸ್ಥಾನಕ್ಕೆ ಅರ್ಚಕರನ್ನಾಗಿ ಮಾಡಿ ಎಂಬ ಒತ್ತಾಯವೂ ಇರುವುದಿಲ್ಲ. ಆದುದರಿಂದ ನೀವು ಯಾಕೆ ‘ಸ್ವತಂತ್ರ ಬ್ರಾಹ್ಮಣ ಧರ್ಮ’ ಮಾಡಬಾರದು?
ಬೇಜಾರೇಶ್ವರ ಶ್ರೀ: ಇದು ತುಂಬಾ ಗಂಭೀರವಾಗಿರುವ ಪ್ರಶ್ನೆ. ಮುಖ್ಯವಾಗಿ ನಮ್ಮದು ಸ್ವತಂತ್ರ ಧರ್ಮವಾದರೆ ಹಿಂದೂ ಧರ್ಮದೊಳಗಿರುವ ಮಡಿ, ಮೈಲಿಗೆ, ಮೇಲು, ಕೀಳು ಎಲ್ಲ ಅಳಿಯುತ್ತದೆ ಆದರೆ ಪರಂಪರಾಗತವಾಗಿ ಬಂದಿರುವ ಈ ಮಹತ್ ಸಂಪ್ರದಾಯಗಳನ್ನು ನಾವು ನಾಶ ಮಾಡಿದಂತಾಗುತ್ತದೆ. ಇದು ನಮ್ಮ ಹಿರಿಯರಿಗೆ ಬಗೆಯುವ ದ್ರೋಹವಾಗುತ್ತದೆ. ಈ ಸಂಪ್ರದಾಯ ಅಳಿಯಬಾರದು ಎನ್ನುವ ಒಂದೇ ಒಂದು ಕಾರಣಕ್ಕಾಗಿ ನಾವು ಸ್ವತಂತ್ರ ಧರ್ಮ ಘೋಷಿಸದೆ ಹಿಂದೂ ಧರ್ಮಕ್ಕಾಗಿ ತ್ಯಾಗ ಮಾಡುತ್ತಿದ್ದೇವೆ.

ಕಾಸಿ: ತಮ್ಮ ಮಠಗಳಲ್ಲಿ ಎಲ್ಲ ಸ್ವಾಮೀಜಿಗಳಿಗೂ ಮಕ್ಕಳಿವೆ ಎನ್ನುವುದನ್ನು ಓರ್ವ ಸ್ವಾಮೀಜಿ ಟಿವಿಗಳಲ್ಲಿ ಬಹಿರಂಗ ಪಡಿಸಿದ್ದಾರಲ್ಲ?
ಬೇಜಾರೇಶ್ವರ ಶ್ರೀ: ನೋಡಿ ಹಾಗೆ ಆರೋಪಿಸಿದ ಸ್ವಾಮೀಜಿಗಳ ವಿಷಯ ನನಗೆ ಗೊತ್ತಿಲ್ಲ. ಮತ್ತೆ ಕೆಲವು ಸ್ವಾಮೀಜಿಗಳು ತಮ್ಮ ತಪಃಶಕ್ತಿಯಿಂದ ಮಕ್ಕಳನ್ನು ಸೃಷ್ಟಿಸಿರಲೂ ಸಾಧ್ಯ. ಅದು ಅವರ ಹಿರಿಮೆಯನ್ನು ಸಾರುತ್ತದೆ. ಹಿಂದೆ ನೋಡಿ, ಸನ್ಯಾಸಿಗಳೆಲ್ಲ ಕಿವಿಯಿಂದ ಮಕ್ಕಳನ್ನು ಸೃಷ್ಟಿಸುತ್ತಿದ್ದರು. ಕೆಲವು ಸ್ವಾಮೀಜಿಗಳು ಮಂತ್ರಗಳ ಮೂಲಕ ಮಕ್ಕಳನ್ನು ಸೃಷ್ಟಿಸಬಹುದು. ಅವನ್ನೆಲ್ಲ ಕ್ಷೇತ್ರ ಮಹಿಮೆಯಾಗಿ ತಿಳಿದುಕೊಳ್ಳಬೇಕು. ಕಾಸಿ: 
ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗುವುದರಿಂದ ಬೇರೇನು ತೊಂದರೆಯಿದೆ? ಬೇಜಾರೇಶ್ವರ ಶ್ರೀ: (ಹುಂಡಿಯ ಕಡೆಗೊಮ್ಮೆ ನೋಡಿ ನಿಟ್ಟುಸಿರಿಡುತ್ತಾ) ಹಿಂದೂ ಧರ್ಮ ನನ್ನ ಕಣ್ಣೆದುರು ಒಡೆಯುವುದನ್ನು ನಾನು ಹೇಗೆ ಸಹಿಸಲಿ?
ಕಾಸಿ: ದಲಿತರು ದೇವಸ್ಥಾನ ಪ್ರವೇಶಿಸುವಂತಿಲ್ಲ. ಮಠದ ಊಟದ ಮನೆ ಜಾತಿಗನುಗುಣವಾಗಿ ಒಡೆದಿದೆ. ಶೈವರು, ವೈಷ್ಣವರೆಂದು ಒಡೆಯಲಾಗಿದೆ. ಶೂದ್ರರು, ದಲಿತರೆಂದು ಒಡೆಯಲಾಗಿದೆ. ಎಲ್ಲಿ ನೋಡಿದರೂ ಬಿರುಕುಗಳೇ ಕಾಣುತ್ತಿರುವಾಗ, ಇನ್ನು ಹೊಸದಾಗಿ ಒಡೆಯುವುದಕ್ಕೆ ಬಾಕಿ ಉಳಿದಿದೆ?
ಬೇಜಾರೇಶ್ವರ ಶ್ರೀ: ಆದರೂ ಈ ಬಿರುಕುಗಳು ಕಾಣದ ಹಾಗೆ ಆರೆಸ್ಸೆಸ್‌ನೋರು ಅಷ್ಟು ಚಂದ ಸುಣ್ಣ ಬಣ್ಣ ಬಳಿದಿದ್ದಾರೆ. ಹೊಸದಾಗಿ ಸುಣ್ಣ ಬಣ್ಣ ಬಳಿಯುವ ಸಿದ್ಧತೆಯಲ್ಲೂ ಇದ್ದರು. ಅಷ್ಟರಲ್ಲಿ ಒಡೆದು ಬಿಟ್ಟರು...(ಎನ್ನುತ್ತಾ ಗೊಳೋ ಎಂದು ಅಳ ತೊಡಗಿದರು)
ಅಲ್ಲಿಗೆ ತನ್ನ ಪ್ರಶ್ನೆಯನ್ನು ಮುಗಿಸಿದ ಕಾಸಿ ಮಠಕ್ಕೆ ಒಂದು ಸುತ್ತು ಬಂದ. ಸಣ್ಣ ಪುಟ್ಟ ಮಕ್ಕಳೆಲ್ಲ ಅಲ್ಲಿ ಆಡುತ್ತಿದ್ದವು. ಯಾರ ಮಕ್ಕಳು? ಎಂದು ಕೇಳಲು ಆತನಿಗೆ ಭಯವಾಯಿತು. ಸುಣ್ಣ ಬಣ್ಣದಲ್ಲಿ ಮುಚ್ಚಲ್ಪಟ್ಟಿದ್ದರೂ ಆತನಿಗೆ ಬಿರುಕುಗಳು ಎದ್ದು ಕಂಡವು.

Writer - - ಚೇಳಯ್ಯ chelayya@gmail.com

contributor

Editor - - ಚೇಳಯ್ಯ chelayya@gmail.com

contributor

Similar News