ದಿಲ್ಲಿ ದರ್ಬಾರ್

Update: 2018-03-24 19:09 GMT

► ರಾಷ್ಟ್ರಪತಿ ಭವನದಲ್ಲಿ ಮಾಂಸಾಹಾರ ಭೋಜನ!

ಸಂಸದರನ್ನು ರಾಷ್ಟ್ರಪತಿ ಭವನಕ್ಕೆ ಉಪಾಹಾರಕ್ಕೆ ಆಹ್ವಾನಿಸುವ ಮೂಲಕ ಭಾರತದ ರಾಷ್ಟ್ರಪತಿ ರಾಮ ನಾಥ್ ಕೋವಿಂದ್ ಅವರು ಹಲವು ವರ್ಷಗಳಿಂದ ನಿಂತು ಹೋಗಿದ್ದ ಸಂಪ್ರದಾಯವೊಂದಕ್ಕೆ ಮತ್ತೆ ಚಾಲನೆ ನೀಡಿದ್ದಾರೆ. ಈ ಸಂಪ್ರದಾಯ ಶಂಕರ್ ದಯಾಳ್ ಶರ್ಮಾ ಅವರ ಕಾಲದ ನಂತರ ನಿಂತು ಹೋಗಿತ್ತು ಎಂಬುದು ಹಿರಿಯ ಸಂಸದರಿಗೆ ತಿಳಿದಿರಬಹುದು. ಸದ್ಯ ಕೋವಿಂದ್ ಈ ಸಂಪ್ರದಾಯಕ್ಕೆ ಪುನರ್ ಚಾಲನೆ ನೀಡಿದ್ದಾರೆ ಎನ್ನುವುದಕ್ಕಿಂತಲೂ ಮುಖ್ಯವಾದ ವಿಷಯವೆಂದರೆ ಮತ್ತು ಹಲವು ಸಂಸದರನ್ನು ಮುಖ್ಯವಾಗಿ ಪಶ್ಚಿಮ ಬಂಗಾಳದ ಸಂಸದರನ್ನು ಚಕಿತಗೊಳಿಸಿದ ಅಂಶವೆಂದರೆ ಈ ಬಾರಿ ಉಪಾಹಾರದಲ್ಲಿ ಹಲವು ಮಾಂಸಾಹಾರಿ ಖಾದ್ಯಗಳೂ ಸೇರಿದ್ದವು. ಬಿಜೆಪಿಯ ಸದಸ್ಯರು ದಿಲ್ಲಿಯಲ್ಲಿ ಮಾಂಸಾಹಾರ ಭೋಜನಕ್ಕೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಸಾಧ್ಯದ ಮಾತು. ಆದರೆ ರಾಷ್ಟ್ರಪತಿಗಳೇ ಈ ಸಂಪ್ರದಾಯಕ್ಕೆ ನಾಂದಿ ಹಾಡಿರುವುದು ಎಲ್ಲರನ್ನೂ ಅಚ್ಚರಿಗೆ ದೂಡಿದೆ.

ನಿಂತು ಹೋಗಿದ್ದ ಪದ್ಧತಿಯೊಂದನ್ನು ಪುನರಾರಂಭಿಸಿರುವುದು ಒಳ್ಳೆಯದೇ. ಅದರಲ್ಲೂ ರಾಷ್ಟ್ರಪತಿ ಭವನದಲ್ಲಿ ಮಾಂಸಾಹಾರ ಭೋಜನಕ್ಕೆ ಅವಕಾಶ ಮಾಡಿಕೊಟ್ಟಿರುವುದು ಮತ್ತಷ್ಟು ಸಂತೋಷದ ವಿಷಯವಾಗಿದೆ.

► ಸೋನಿಯಾ ಬಗ್ಗೆ ನಯವಾದ ಮುಲಾಯಂ

ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಜೊತೆ ಉತ್ತಮ ಸಂಬಂಧವನ್ನು ಹೊಂದಿರಲಿಲ್ಲ ಎಂಬುದು ಭಾರತೀಯ ರಾಜಕೀಯದಲ್ಲಿ ಆಸಕ್ತಿ ಹೊಂದಿರುವ ಪ್ರತಿಯೊಬ್ಬನಿಗೂ ತಿಳಿದಿರುವ ವಿಷಯವೇ. ಕಳೆದ ವರ್ಷ ಉತ್ತರ ಪ್ರದೇಶ ಚುನಾವಣೆಯ ವೇಳೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಅಖಿಲೇಶ್ ಯಾದವ್ ನಿರ್ಧಾರಕ್ಕೆ ಮುಲಾಯಂ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ ಇದೀಗ ಬಿಜೆಪಿಯಿಂದ ಎದುರಾಗಿರುವ ಅಪಾಯ ಮತ್ತು ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಅಖಿಲೇಶ್ ಯಾದವ್ ಕಾಂಗ್ರೆಸ್‌ನಿಂದ ದೂರ ಉಳಿದು ತನ್ನ ಸಾಂಪ್ರದಾಯಿಕ ವೈರಿ ಬಹುಜನ ಸಮಾಜ ಪಕ್ಷದ ಜೊತೆ ಕೈಜೋಡಿಸಿರುವುದರಿಂದ ಎಚ್ಚೆತ್ತುಕೊಂಡಿರುವ ಮುಲಾಯಂ ಸಿಂಗ್ ಕಾಂಗ್ರೆಸ್ ನಾಯಕತ್ವಕ್ಕೆ ಜೈ ಎನ್ನಲು ಮುಂದಾಗಿದ್ದಾರೆ. ಗೋರಖ್‌ಪುರ ಮತ್ತು ಫೂಲ್‌ಪುರ ಉಪಚುನಾವಣೆಯಲ್ಲಿ ಜಯಗಳಿಸಿದ ಪಕ್ಷದ ಅಭ್ಯರ್ಥಿಗಳನ್ನು ಇತ್ತೀಚೆಗೆ ಲೋಕಸಭೆಯಲ್ಲಿ ಸೋನಿಯಾ ಗಾಂಧಿಯ ಆಶೀರ್ವಾದ ಪಡೆಯುವಂತೆ ಸೂಚಿಸುವ ಮೂಲಕ ಮುಲಾಯಂ ಕಾಂಗ್ರೆಸ್ ನಾಯಕಿಗೆ ಸಮೀಪವಾಗಲು ಬಯಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ‘‘ಗೆದ್ದ ಅಭ್ಯರ್ಥಿಗಳು ಅದಾಗಲೇ ನನಗೆ ಶುಭಾಶಯ ಕೋರಿದ್ದಾರೆ, ಆದರೆ ನಿಮಗದು ಕೇಳಿಸಲಿಲ್ಲ’’ ಎಂದು ಸೋನಿಯಾ ಮುಲಾಯಂಗೆ ತಿಳಿಸಿದರು. ಆದರೂ ಎಸ್ಪಿ ಮುಖಂಡ, ಎರಡನೇ ಬಾರಿಯಾದರೂ ಸರಿ ಇಬ್ಬರು ಅಭ್ಯರ್ಥಿಗಳು ಕೂಡಾ ತನ್ನ ಮುಂದೆ ಸೋನಿಯಾರ ಕಾಲಿಗೆ ನಮಸ್ಕರಿಸಿ ಆಕೆಯ ಆಶೀರ್ವಾದ ಪಡೆಯುವಂತೆ ಸೂಚಿಸಿದ್ದಾರೆ.

► ಆದಿತ್ಯನಾಥ್‌ಗೆ ಚಿಂತೆ ರಾಜನಾಥ್‌ಗೆ ಖುಷಿ

ಗೋರಖ್‌ಪುರ ಮತ್ತು ಫೂಲ್‌ಪುರ ಉಪಚುನಾವಣೆಯಲ್ಲಿ ಅನುಭವಿಸಿದ ಸೋಲಿನಿಂದ ಬಿಜೆಪಿ ಆಘಾತಕ್ಕೊಳಗಾಗಿರಬಹುದು. ಆದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಆಗಿರುವ ಮುಖಭಂಗದಿಂದ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅಂತೂ ಖುಷಿಗೊಂಡಿದ್ದಾರೆ. ಈ ಇಬ್ಬರು ಕೂಡಾ ಠಾಕೂರ್ ಸಮುದಾಯಕ್ಕೆ ಸೇರಿದವರಾಗಿದ್ದು ಉತ್ತರ ಪ್ರದೇಶ ರಾಜಕೀಯದಲ್ಲಿ ಪರಸ್ಪರ ಶತ್ರುಗಳೆಂದೇ ಬಿಂಬಿತರಾಗಿದ್ದಾರೆ. ಕಳೆದ ವರ್ಷ ಎಲ್ಲರನ್ನೂ ಚಕಿತಗೊಳಿಸಿದ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ರಾಜನಾಥ್ ಸಿಂಗ್‌ಗೆ ಪರ್ಯಾಯವಾಗಿ ಆದಿತ್ಯನಾಥ್‌ರನ್ನು ಆಯ್ಕೆ ಮಾಡಿದ್ದರು. ರಾಜನಾಥ್ ಸಿಂಗ್‌ರನ್ನು ಮೂಲೆಗುಂಪು ಮಾಡುವ ತಂತ್ರದ ಭಾಗವಾಗಿ ಆದಿತ್ಯನಾಥ್‌ರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಗಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ರಾಜನಾಥ್ ಸಿಂಗ್ ರಾಜ್ಯ ರಾಜಕಾರಣದಲ್ಲಿ ಪ್ರಮುಖ ಸ್ಥಾನದಲ್ಲಿರುವುದು ಮೋದಿ ಮತ್ತು ಶಾಗೆ ಇಷ್ಟವಿರಲಿಲ್ಲ. ಯಾಕೆಂದರೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಂತೆ ರಾಜನಾಥ್ ಸಿಂಗ್ ಕೂಡಾ ಪಕ್ಕಾ ಹಿಂದುತ್ವ ಸಿದ್ಧಾಂತವನ್ನು ಪ್ರತಿಪಾದಿಸದೆ ಮಧ್ಯದ ಹಾದಿಯಲ್ಲಿ ನಡೆಯುವುದನ್ನು ಇಷ್ಟಪಡುತ್ತಾರೆ. ಸದ್ಯ ಆದಿತ್ಯನಾಥ್‌ಗೆ ಎದುರಾಗಿರುವ ಸಂಕಷ್ಟದಿಂದ ರಾಜನಾಥ್ ನಿರಾಳರಾಗಿರಬಹದು.

► ಶಿವಪ್ರಸಾದ್ ಗಮನ ಸೆಳೆಯುವ ಶೈಲಿ!

ಪ್ರತಿದಿನ ಹಳದಿ ಬಣ್ಣದ ಧಿರಿಸನ್ನು ಧರಿಸಿ ಸಂಸತ್ ಕಲಾಪ ಆರಂಭವಾಗುವುದಕ್ಕೂ ಮುನ್ನ ಮಹಾತ್ಮ್ಮಾ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ಆರಂಭಿಸುವ ತೆಲುಗುದೇಶಂ ಪಕ್ಷದ ಸಂಸದರು ಪ್ರತಿದಿನ ಮಾಧ್ಯಮದವರ ಕಣ್ಣು ತಮ್ಮ ಮೇಲೆಯೇ ಇರಬೇಕೆಂದು ಬಯಸುತ್ತಾರೆ. ಆದರೆ ಅವರು ಪ್ರತಿದಿನ ಏನಾದರೂ ವಿಭಿನ್ನವಾದುದನ್ನು ಮಾಡದ ಹೊರತು ಮಾಧ್ಯಮಗಳು ಕೂಡಾ ಅವರತ್ತ ತಿರುಗಿ ನೋಡುವುದಿಲ್ಲ. ಅದಕ್ಕಾಗಿಯೇ ಟಿಡಿಪಿ ಸಂಸದ ಎನ್. ಶಿವಪ್ರಸಾದ್ ದಿನಕ್ಕೊಂದು ರೀತಿಯ ಬಟ್ಟೆಯನ್ನು ಧರಿಸಿ ಮಾಧ್ಯಮದ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಶಿವಪ್ರಸಾದ್ ಈವರೆಗೆ ಹಲವು ರೂಪಗಳಲ್ಲಿ ಸಂಸತ್ ಮುಂದೆ ಕಾಣಿಸಿಕೊಂಡಿದ್ದಾರೆ. ಒಮ್ಮೆ ಮಹಾಭಾರತದಲ್ಲಿ ಬರುವ ಪಾತ್ರ ಬೃಹನ್ನಳನಂತೆ ಹಳದಿ ಸೀರೆಯುಟ್ಟು ತಲೆಗೆ ವಿಗ್ ಹಾಗೂ ಹಣೆಗೆ ಬಿಂದಿಯಿಟ್ಟು ಬಂದರೆ ಮತ್ತೊಮ್ಮೆ ರಾಜಾ ಹರಿಶ್ಚಂದ್ರನಂತೆ, ಮತ್ತೊಮ್ಮೆ ಶಾಲಾ ಬಾಲಕನಂತೆ ಬಟ್ಟೆ ಧರಿಸಿ ಬಂದಿದ್ದಾರೆ. ಇಂಥ ಗಿಮಿಕ್‌ಗಳನ್ನು ಮಾಡುವಲ್ಲಿ ಅಷ್ಟೊಂದು ಪ್ರಾವಿಣ್ಯರಲ್ಲದ ಟಿಡಿಪಿ ಸಂಸದರು ಶಿವಪ್ರಸಾದ್‌ರ ಈ ಪ್ರಯತ್ನಕ್ಕೆ ಬೆಂಬಲವೇನೋ ನೀಡಿದ್ದಾರೆ. ಆದರೆ ಮಾಧ್ಯಮಗಳು ತಮ್ಮ ಮೇಲೂ ಬೆಳಕು ಬೀರುವಂತೆ ಮಾಡುತ್ತಾರೆ.

► ರಾಜೀವ್ ಶುಕ್ಲಾಗೆ ಅದೃಷ್ಟ ಕೈಕೊಟ್ಟಾಗ

ಇತ್ತೀಚೆಗೆ ಮುಗಿದ ರಾಜ್ಯಸಭಾ ಚುನಾವಣೆಯಲ್ಲಿ ಗುಜರಾತ್‌ನಿಂದ ನಾಮಪತ್ರ ಸಲ್ಲಿಸಲು ಹಾಲಿ ರಾಜ್ಯಸಭಾ ಸದಸ್ಯ, ಪತ್ರಕರ್ತ ರಾಜೀವ್ ಶುಕ್ಲಾಗೆ ಅವಕಾಶವಿದ್ದರೂ ಕೊನೆ ಗಳಿಗೆಯಲ್ಲಿ ತಪ್ಪಿಹೋಯಿತು. ಕಾಂಗ್ರೆಸ್ ಅಭ್ಯರ್ಥಿ ನರನ್ ಭಾಯಿ ರಥ್ವ ಅವರು ನಾಮಪತ್ರ ಸಲ್ಲಿಸಲು ಇದ್ದ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದ ಸಮಯದಲ್ಲಿ ಶುಕ್ಲಾಗೆ ತನ್ನ ನಾಮಪತ್ರವನ್ನು ಸಲ್ಲಿಸುವ ಅವಕಾಶವಿತ್ತು. ಶುಕ್ಲಾ ಹೆಸರನ್ನು ಪಕ್ಷದ ಕೆಲವು ಸದಸ್ಯರು ಕೂಡಾ ಅನುಮೋದಿಸಿದ್ದರು. ಆದರೆ ಅಕ್ಕೊಂದು ಸಮಸ್ಯೆ ಎದುರಾಗಿತ್ತು.

ನಾಮಪತ್ರ ಸಲ್ಲಿಸಲು ಇದ್ದ ಅಂತಿಮ ಗಡುವಿನ ಸಮಯದಲ್ಲೇ ಅಹ್ಮದಾಬಾದ್ ವಿಮಾನ ನಿಲ್ದಾಣವನ್ನು ಕೆಲವು ಗಂಟೆಗಳ ಕಾಲ ಮುಚ್ಚಲಾಗಿತ್ತು. ಹಾಗಾಗಿ ಶುಕ್ಲಾ ತಮ್ಮ ಅವಕಾಶವನ್ನು ಕಳೆದುಕೊಂಡರೆ ರಥ್ವ ತವ್ಮು ನಾಮಪತ್ರವನ್ನು ಸಲ್ಲಿಸಿದರು.

ಶುಕ್ಲಾಗೆ ಬಹುತೇಕ ಎಲ್ಲ ಪಕ್ಷಗಳ ಜೊತೆ ಉತ್ತಮ ಸಂಬಂಧವಿದ್ದರೂ ಮತ್ತು ಗಾಂಧಿ ಕುಟುಂಬದ ಜೊತೆ ಸಾಮೀಪ್ಯವಿದ್ದರೂ ಪಕ್ಷಾಧ್ಯಕ್ಷ ರಾಹುಲ್ ಗಾಂಧಿ, ಫೀಲ್ಡಿಗಿಳಿದು ಕೆಲಸ ಮಾಡುವ ನಾಯಕರಿಗೆ ಮಾತ್ರ ಈ ಬಾರಿ ರಾಜ್ಯಸಭಾ ಟಿಕೆಟ್ ನೀಡಲು ನಿರ್ಧರಿಸಿರುವುದರಿಂದ ಶುಕ್ಲಾಗೆ ತಮ್ಮ ಪ್ರಭಾವವನ್ನು ಬಳಸಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75