ಅಸ್ಥಿಪಂಜರದ ರಹಸ್ಯ
ಕೈಯೊಳಗೆ ನಿಲುಕುವ ಚೂಪಾದ ಪುಟ್ಟ ತಲೆ ಬುರುಡೆಯ ಅಸ್ಥಿ ಪಂಜರ ಅನ್ಯಗ್ರಹದ ಜೀವಿಯದ್ದಲ್ಲ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ. ಇದುವರೆಗೆ ಈ ಅಸ್ಥಿಪಂಜರವನ್ನು ಅನ್ಯಗ್ರಹದ ಜೀವಿಯದ್ದೆಂದು ಹೇಳಲಾಗಿತ್ತು. ಇದರೊಂದಿಗೆ ಕಳೆದ ಕೆಲವು ವರ್ಷಗಳಿಂದ ಹರಡುತ್ತಿದ್ದ ಈ ಪಿತೂರಿ ಸಿದ್ಧಾಂತ ಮೂಲೆಗುಂಪಾಗಿದೆ.
ಈ ಪುಟ್ಟ ಅಸ್ಥಿ ಪಂಜರ 2003ರಲ್ಲಿ ಚಿಲಿಯ ಅಟಕಾಮಾ ಮರುಭೂಮಿಯಲ್ಲಿ ಪತ್ತೆಯಾಗಿತ್ತು. ಈ ಅಸ್ತಿಪಂಜರ ಉದ್ದವಾದ ತಲೆಬುರುಡೆ ಹಾಗೂ ಬೆಳವಣಿಗೆಯಾದ ದವಡೆ ಹಾಗೂ ಮುಖವನ್ನು ಹೊಂದಿದೆ. ಈ ಅಸ್ಥಿಪಂಜರ ಪತ್ತೆಯಾದಾಗ ವಿಜ್ಞಾನಿಗಳಲ್ಲಿ ಸೋಜಿಗ ಉಂಟಾಗಿತ್ತು.
ವಿಲಕ್ಷಣವಾಗಿ ಕಾಣುವ ಈ ಅಸ್ಥಿಪಂಜರದ ಬಗ್ಗೆ 2013ರಲ್ಲಿ ಪ್ರಕಟಕೊಂಡ ಪ್ರಬಂಧವೊಂದು ಕೆಲವು ಪುರಾವೆಗಳನ್ನು ನೀಡಿದೆ. ಆದರೆ, ಈ ಅಸ್ಥಿಪಂಜರದ ಆನುವಂಶಿಕ ವಿಶ್ಲೇಷಣೆ ಇನ್ನಷ್ಟು ಪ್ರಶ್ನೆಗಳಿಗೆ ಉತ್ತರ ನೀಡಬಹುದು.
ಅಸ್ಥಿಪಂಜರದ ಸಂಪೂರ್ಣ ಆನುವಂಶಿಕ ಧಾತು ಸಂಕುಲ ಪರಿಶೀಲನೆ ಇದು ಚಿಲಿ ದೇಶಕ್ಕೆ ಸೇರಿದ ಹೆಂಗಸಿನದ್ದು ಎಂದು ಹೇಳಿದೆ. ಆನುವಂಶಿಕ ರೂಪಾಂತರಗಳು ಎಲುಬಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಿ ತಲೆ ಬುರುಡೆ, ಅವಯವದ ಎಲುಬುಗಳು ವಿಕೃತ ರೂಪ ಪಡೆದುಕೊಂಡಿದೆ ಎಂದು ಅದು ಹೇಳಿದೆ. ಹೀಗಾಗಿ ಈ ಅಸ್ಥಿಪಂಜರಕ್ಕೆ ಅನ್ಯಗ್ರಹದ ಜೀವಿಯ ರೂಪವನ್ನು ನೀಡಿರಬಹುದು.
ಈ ಅಸ್ಥಿಪಂಜರ 22 ವಾರಗಳ ಭ್ರೂಣದ ಗಾತ್ರದಲ್ಲಿದೆ. ಆರಂಭದಲ್ಲಿ ಇದನ್ನು ತೀವ್ರ ವಿರೂಪಕ್ಕೆ ಒಳಗಾದ 6ರಿಂದ 8 ವರ್ಷದ ಮಗುವಿನದ್ದಾಗಿರಬಹುದು ಎಂದು ಭಾವಿಸಲಾಗಿತ್ತು. ದಶಕಗಳ ಬಳಿಕ ಎಕ್ಸ್‌ರೇ, ಕಂಪ್ಯೂಟೆಡ್ ಟೋಮೋಗ್ರಫಿ (ಸಿಟಿ), ಸ್ಕಾನ್ ಹಾಗೂ ಡಿಎನ್‌ಎ ಪರೀಕ್ಷೆ ಸೇರಿದಂತೆ ಹೆಚ್ಚು ವಿವರವಾದ ವಿಶ್ಲೇಷಣೆಯಿಂದ ಇದು ನಿಜವಾಗಿಯೂ ಾನವ ಎಂದು ದೃಢಪಡಿಸಲಾಯಿತು.
ಈ ಅಸ್ಥಿಪಂಜರವನ್ನು ಗಮನಿಸಿದರೆ ಇದಕ್ಕೆ ಇಷ್ಟು ವರ್ಷದ ವ್ಯಕ್ತಿಯದ್ದು ಎಂದು ಹೇಳುವುದು ಕಷ್ಟ. ಆದರೆ, ಪರಿಶೀಲನೆಯಿಂದ ಇದು 40 ವರ್ಷ ವಯಸ್ಸಿನ ಮಹಿಳೆಯ ಅಸ್ಥಿಪಂಜರ ಎಂಬುದನ್ನು ಇದೀಗ ವಿಜ್ಞಾನಿಗಳು ದೃಢಪಡಿಸಿದ್ದಾರೆ.