ಸ್ಟೀವ್ ಬೆನನ್: ನಷ್ಟವನ್ನೇ ಕಾಣದ ರಾಜಕೀಯ ದಲ್ಲಾಳಿ
ಭಾಗ-5
ತೀರ ಇತ್ತೀಚಿನವರೆಗೆ ಟ್ರಂಪ್ ಅವರ ಆಪ್ತವಲಯದ ಭಾಗವಾಗಿದ್ದ ಸ್ಟೀವ್ ಬೆನನ್ ಚತುರ ದಲ್ಲಾಳಿ ಎಂದೇ ಗುರುತಾದವ. ಹಾಗೆ ತಾನು ಹಿಡಿದ ಎಲ್ಲಾ ಕಾರ್ಯಗಳಲ್ಲಿ ಲಾಭ ಗಿಟ್ಟಿಸಿಕೊಂಡಿರುವುದು ಈತನ ವೃತ್ತಿ ಜೀವನದ ಗುಣವಿಶೇಷತೆ. ಕೇಂಬ್ರಿಡ್ಜ್ ಅನಲಿಟಿಕಾ ಉಪಾಧ್ಯಕ್ಷನಾಗಿದ್ದ ಈತ, ಟ್ರಂಪ್ ಅವರ ಅಧ್ಯಕೀಯ ಚುನಾವಣೆ ಪ್ರಚಾರ ತಂಡದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದವ. ಟ್ರಂಪ್‌ರ ಗೆಲುವಿನ ನಂತರ ಮುಖ್ಯ ತಂತ್ರಗಾರನಾಗಿ(ಚೀಫ್ ಸ್ಟ್ರಾಟಜಿಸ್ಟ್) ಒಂಬತ್ತು ತಿಂಗಳು ಮಾತ್ರವಿದ್ದು ಜಗಳವಾಡಿಕೊಂಡು ಹೊರಬಂದವನು. ಅಧ್ಯಕ್ಷ ಟ್ರಂಪ್‌ನೊಂದಿಗಿನ ತನ್ನ ಅನುಭವವನ್ನು ‘ಫೈರ್ ಆ್ಯಂಡ್ ಫ್ಯೂರಿ’ ಎನ್ನುವ ಪುಸ್ತಕದಲ್ಲಿ ದಾಖಲಿಸುವ ಈತ, ಬಲಪಂಥೀಯ ಆನ್‌ಲೈನ್ ಪತ್ರಿಕೆಯಾದ ‘ಬ್ರೈಟ್‌ಬಾರ್ಟ್’ ಸ್ಥಾಪಕ ಸಹ. 1953ರಲ್ಲಿ ಜನಿಸಿದ ಬೆನನ್, ತನ್ನ ಆರಂಭಿಕ ವರ್ಷಗಳನ್ನು ಅಮೆರಿಕದ ನೌಕಾದಳದಲ್ಲಿ ಕಳೆದವನು.
ಮಿಲಿಟರಿಯಲ್ಲಿರುವಾಗ ಹೆಚ್ಚಿನ ಸೇವೆಯನ್ನು ಗೂಢಾಚಾರ ವ್ಯವಸ್ಥೆಯಲ್ಲಿ ಮಾಡಿದವನು. ಆನಂತರ ವಾಲ್‌ಸ್ಟ್ರೀಟ್‌ನ ಗೋಲ್ಡ್‌ಮನ್‌ಶ್ಕಾಸ್‌ನಲ್ಲಿ ಹಣಹೂಡಿಕೆ ಸಲಹೆಗಾರನಾಗಿ ಸ್ವಲ್ಪವರ್ಷವಿದ್ದ ಈತ, ಹಾಲಿವುಡ್‌ನಲ್ಲಿ ಕಾರ್ಯನಿರ್ವಾಹಕ ನಿರ್ಮಾಪಕನಾಗಿದ್ದವನು. ಈತ ವ್ಯವಹಾರಿಕವಾಗಿ ಸೋಲುಕಂಡಿದ್ದೇ ಇಲ್ಲ. ಮತ್ತೊಬ್ಬರ ಹಣವನ್ನು ಅವರ ಅಗತ್ಯ ಮತ್ತು ನಿರೀಕ್ಷೆಗೆ ತಕ್ಕಂತೆ ಹೂಡಿಕೆ ಮಾಡಿ ಅವರಿಗೂ ಲಾಭ ತಂದುಕೊಟ್ಟು ತನಗೂ ಲಾಭ ಮಾಡಿಕೊಳ್ಳುವುದರಲ್ಲಿ ಬೆನನ್ ನಿಸ್ಸೀಮ. ಚಾಣಕ್ಷತನ ಬೆನನ್‌ನ ಸಹಜ ಗುಣವೆಂದು ಕಾಣುತ್ತದೆ. ಕೇಂಬ್ರಿಡ್ಜ್ ಅನಲಿಟಿಕಾದ ಮಾತೃ ಕಂಪೆನಿಯಾದ ಎಸ್‌ಸಿಎಲ್‌ನ ಬಳಿ ಫೇಸ್‌ಬುಕ್ ಬಳಕೆದಾರರ ಮಾಹಿತಿಗಳನ್ನು ಪಡೆಯುವ ದಾರಿ ಇದೆಯೆಂದು ಖಚಿತವಾಗುತ್ತಿದ್ದಂತೆ, ಅಮೆರಿಕದಲ್ಲಿ ಬಲಪಂಥೀಯ ರಾಜಕೀಯ ಸಿದ್ಧಾಂತಗಳನ್ನು ಬೆಂಬಿಲಿಸುವ ರಾಬರ್ಟ್ ಮರ್ಸರ್‌ನ ಮೂಲಕ ಬಂಡವಾಳ ಹೂಡಿಕೆ ಮಾಡಿಸಿ ಕೇಂಬ್ರಿಡ್ಜ್ ಅನಲಿಟಿಕಾ ಸ್ಥಾಪಿಸುತ್ತಾನೆ. ಅದರ ಉಪಾಧ್ಯಕ್ಷನೂ ಆಗುತ್ತಾನೆ. ಓರ್ವ ದಲ್ಲಾಳಿಯಾಗಿ ಗೆಲ್ಲುವ ಕುದುರೆಯನ್ನು ಎಲ್ಲರಿಗಿಂತ ಮೊದಲು ಗುರುತಿಸುವುದೇ ಬೆನನ್‌ನ ಯಶಸ್ಸಿನ ಗುಟ್ಟೆಂದು ಪರಿಣತರ ಅಭಿಪ್ರಾಯ. ಎಸ್‌ಸಿಎಲ್‌ನಲ್ಲಿ ತಾಂತ್ರಿಕ ತಜ್ಞನಾಗಿದ್ದ ಕ್ರಿಸ್ಟೋಫರ್ ವೈಲಿಗೆ ಆತ್ಮವಿಶ್ವಾಸ ತುಂಬಿ ಕೇಂಬ್ರಿಡ್ಜ್ ಅನಲಿಟಿಕಾದ ನಿರ್ದೇಶಕ ಸ್ಥಾನಕ್ಕೆ ತರುತ್ತಾನೆ. 24ರ ಹರೆಯದ ಹುರುಪಿನ ವೈಲಿಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬೆಳೆಸಿ ಸೂಕ್ಷ್ಮವಾಗಿ ಬಳಸಿಕೊಳ್ಳುತ್ತಾನೆ.
ಬೆನನ್‌ನ ತಂತ್ರಗಾರಿಕೆಯ ಗುಣವನ್ನು ಪರಿಚಯಸಲು ವೈಲಿ ಒಂದು ಉದಾಹರಣೆ ನೀಡುತ್ತಾನೆ. ಕೋಗ್ನ್‌ನ್ ಫೇಸ್‌ಬುಕ್ ಬಳಕೆದಾರರ ಮಾಹಿತಿಯನ್ನು ಕದ್ದು ನೀಡಿದ ಮೇಲೆ, ವೈಲಿಗೆ ಹೀಗೆ ಪಡೆಯುವುದು ಕಾನೂನು ವಿರೋಧಿಯಲ್ಲವೇ ಅನ್ನೋ ಆಲೋಚನೆ ಮೂಡುತ್ತದೆ. ಇದನ್ನು ಬೆನನ್‌ನೊಂದಿಗೆ ಹಂಚಿಕೊಳ್ಳುತ್ತಾನೆ. ಬೆನನ್ ಕೋಗ್ನ್‌ನ್ ಅಧಿಕೃತವಾಗಿ ಫೇಸ್‌ಬುಕ್‌ನಿಂದ ಮಾಹಿತಿ ಪಡೆದಿರುವುದರಿಂದ ಯಾವುದೇ ತೊಂದರೆಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಾನೆ. ಜೊತೆಗೆ ‘‘ಒಂದು ಉತ್ತಮ ಕಾರ್ಯವನ್ನು ಈಡೇರಿಸಿಕೊಳ್ಳಬೇಕಾದರೆ, ಕೆಲವು ಸಣ್ಣಪುಟ್ಟ ಅಡ್ಡದಾರಿ ಹಿಡಿಯುವುದು ಅಪರಾಧವೇ ಅಲ್ಲ’’ ಎಂದು ವೈಲಿಯನ್ನು ಸಮಾಧಾನಿಸುತ್ತಾನೆ. ಬೆನನ್‌ಗೆ ವೈಲಿಯ ಮಾನಸಿಕ ಸ್ಥಿತಿಯ ಪೂರ್ಣ ಅರಿವು ಇರುತ್ತದೆ. ಬಾಲ್ಯದಿಂದಲೂ ತನ್ನ ಸಲಿಂಗಿತನದ ಕಾರಣದಿಂದ ವ್ಯವಸ್ಥೆಯೊಂದಿಗೆ ಸಂಘರ್ಷದ ಕಾರಣ ವೈಲಿಯಲ್ಲಿದ್ದ ಆತ್ಮವಿಶ್ವಾಸದ ಕೊರತೆಯನ್ನು ತನ್ನ ಲಾಭಕ್ಕೆ ದುಡಿಸಿಕೊಳ್ಳುವುದರಲ್ಲಿ ಬೆನನ್ ಯಶಸ್ವಿಯಾಗುತ್ತಾನೆ. ಆದರೆ ಇದೇ ಬೆನನ್, ಇಡೀ ಹಗರಣ ಹೊರಬಂದ ಮೇಲೆ ಫೇಸ್‌ಬುಕ್‌ನಿಂದ ಮಾಹಿತಿ ಪಡೆದಿದ್ದ ವಿಷಯವೇ ತನಗೆ ತಿಳಿದಿರಲಿಲ್ಲವೆಂದು ಘೋಷಿಸಿದ್ದಾನೆ. ಬೆನನ್‌ನ ಚತುರತೆಯನ್ನು ಅರಿಯಲು ವೈಲಿಯೇ ನೀಡಿರುವ ಮತ್ತೊಂದು ಉದಾಹರಣೆ ತೆಗೆದುಕೊಳ್ಳಬಹುದು. ಸಲಿಂಗಿಯಾದ ವೈಲಿಯ ಕೈಯಲ್ಲೇ ಸಲಿಂಗತನವನ್ನು ಕಾನೂನು ವಿರೋಧಿ ಎಂದು ಘೋಷಿಸಬೇಕೆನ್ನುವ ಟ್ರಂಪ್ ಅಧ್ಯಕ್ಷೀಯ ಚುನಾವಣೆಯ ಯಶಸ್ಸಿಗೆ ಬೇಕಾದ ಸಾಧನಗಳನ್ನು ಸೃಷ್ಟಿಸಿಕೊಳ್ಳುತ್ತಾನೆ.
ಕೇಂಬ್ರಿಡ್ಜ್ ಅನಲಿಟಿಕಾ ಕಂಪೆನಿಗೆ ಬಂಡವಾಳ ಹೂಡಿದ್ದ ಸಲಿಂಗತನದ ವಿರೋಧಿ ಮರ್ಸರ್ ಅವರಿಂದಲೇ ‘‘ಸಲಿಂಗಿ ಗುಂಪಿನ ಉತ್ತಮ ಪ್ರತಿನಿಧಿ ನೀನು’’ ಎಂದು ವೈಲಿಯನ್ನು ಬೆನನ್ ಹೊಗಳಿಸುತ್ತಾನೆ. ಮುಂದೆ ವೈಲಿಯಿಂದ ಅಗಬೇಕಾಗಿದ್ದ ಕೆಲಸವಾದ ಕೂಡಲೇ, ಆತನನ್ನು ಬಿಸಾಕುತ್ತಾನೆ. 2016ರಲ್ಲಿ ವೈಲಿ ಪಾಪಪ್ರಜ್ಞೆಯ ಕೂಪದಲ್ಲಿ ಬಿದ್ದು ಕೆನಡಾದ ಮೂಲೆಯೊಂದರಲ್ಲಿ ನರಳುತ್ತಿದ್ದಾಗ, ಬೆನನ್ ಟ್ರಂಪ್ ಅನ್ನು ಅಧ್ಯಕ್ಷನಾಗಿ ಚುನಾಯಿಸುವ ಕಾರ್ಯದಲ್ಲಿ ಮಗ್ನನಾಗಿರುತ್ತಾನೆ. ಬೆನನ್‌ನ ಸೈದ್ಧಾಂತಿಕ ನಿಲುವುಗಳ ಮೂಲಗಳು ಬಹಳ ಕುತೂಹಲಕಾರಿಯಾಗಿವೆ. ತನ್ನ ರಾಜಕೀಯ ಸೈದ್ಧಾಂತಿಕ ಗುರುಗಳಲ್ಲಿ ಸಾವಿತ್ರಿ ದೇವಿ ಮುಖರ್ಜಿ ಪ್ರಮುಖಳೆಂದು ಆತನೇ ಹೇಳುತ್ತಾನೆ! ಹುಟ್ಟಿನಿಂದ ಮಾಕ್ಸಿಮಿನಿಯನ್ ಜ್ಯೂಲಿಯಾ ಪ್ರೋಟ್ಸ್ ಆಗಿದ್ದ ಈಕೆ ಭಾರತೀಯ ಬಲಪಂಥೀಯ ಚಿಂತನೆಗೆ ಬೆಂಬಲಿಗರಾಗಿದ್ದ ಅಸಿತ್ ಕೃಷ್ಣ ಮುಖರ್ಜಿಯನ್ನು ಮದುವೆಯಾದಾಕೆ. ಏಕ ಕಾಲಕ್ಕೆ ಹಿಟ್ಲರ್‌ನ ನಾಝೀವಾದವನ್ನು ಮತ್ತು ಹಿಂದೂವಾದವನ್ನು ಬಹಳವಾಗಿ ಪ್ರೀತಿಸಿದಾಕೆ. ‘‘ಜಗತ್ತಿನಲ್ಲಿ ನಿರಂತರವಾಗಿ ಒಳಿತು ಮತ್ತು ಕೆಡುಕಗಳ ನಡುವೆ ಯುದ್ಧ ನಡೆಯುತ್ತಿರುತ್ತದೆ’’ ಎನ್ನುವ ಈಕೆಯ ವಾದವನ್ನು ಒಪ್ಪಿಕೊಂಡಿರುವ ಬೆನನ್ ಟ್ರಂಪ್ ಅಧ್ಯಕ್ಷನಾಗುವುದು ಎಂದರೆ ಅಮೆರಿಕದಲ್ಲಿ ಆಗಿರುವ ತಪ್ಪುಗಳನ್ನು ಸರಿಪಡಿಸುವುದೆಂದು ನಂಬಿದ್ದವ. ಒಬಾಮಾರನ್ನು ಅಧ್ಯಕ್ಷನಾಗಿ ಅಯ್ಕೆ ಮಾಡಿಕೊಂಡು ಅಪವಿತ್ರವಾಗಿರುವ ಅಮೆರಿಕ ದೇಶ ಟ್ರಂಪ್‌ನ ಮೂಲಕ ಪವಿತ್ರಗೊಳ್ಳಬೇಕೆಂಬ ಉದ್ದೇಶ ಬೆನನ್‌ದಾಗಿತ್ತು. ಈ ಕಾರಣಕ್ಕಾಗಿಯೇ ಆತ ಅಮೆರಿಕದ ಕಪ್ಪುಜನರಿಗೆ ನಾಗರಿಕ ಹಕ್ಕುಗಳನ್ನು ನೀಡಿದ 1964ರ ‘ಸಿವಿಲ್ ರೈಟ್ಸ್ ಆ್ಯಕ್ಟ್’ ಅಮೆರಿಕದ ಇತಿಹಾಸದಲ್ಲಾದ ಬಹುದೊಡ್ಡ ಅಪರಾಧವೆಂದು ನಂಬಿರುವ ರಾಬರ್ಟ್ ಮರ್ಸರ್‌ನ ಬಂಡವಾಳದ ದಲ್ಲಾಳಿಯಾಗಿ ಕೇಂಬ್ರಿಡ್ಜ್ ಅನಲಿಟಿಕಾದ ಉಪಾಧ್ಯಕ್ಷನಾಗಿದ್ದು.