ಆನ್‌ಲೈನ್ ದತ್ತಾಂಶಗಳ ಒಡೆತನ ಯಾರದ್ದು?
ಭಾಗ-6
ಕೇಂಬ್ರಿಡ್ಜ್ ಅನಲಿಟಿಕಾ ಹಗರಣ ಬಹಳ ಮುಖ್ಯವಾದ ಚರ್ಚೆ ಯನ್ನು ಮುನ್ನೆಲೆಗೆ ತಂದಿದೆ. ಇದು ಪ್ರಕರಣದ ಆಶಾದಾಯಕ ವಿಷಯವಾಗಿದೆ. ಇಂದು ಸಾವಿರಾರು ಆ್ಯಪ್‌ಗಳ ಮೂಲಕ ಸೃಷ್ಟಿಯಾಗುತ್ತಿರುವ ಮಾಹಿತಿಗಳ ಕಣಜ ಕಂಪೆನಿಗಳ ಪಾಲಿಗೆ ದತ್ತಾಂಶವಾಗಿ ಲಾಭದಾಯಕ ಉತ್ಪನ್ನವಾಗಿದೆ. ದತ್ತಾಂಶದ ಗಣಿಗಾರಿಕೆ ನಡೆಸಿರುವ ಕಂಪೆನಿಗಳು ಮಾಹಿತಿಯನ್ನು ಬಳಕೆದಾರರ ಅನುಮತಿಯಿಲ್ಲದೆ ಪಡೆಯುತ್ತಿರುವುದು ಒಂದು ಅಂಶವಾದರೆ, ಸೃಷ್ಟಿಯಾಗುತ್ತಿರುವ ದತ್ತಾಂಶದ ನೈಜ ಮಾಲಕರು ಯಾರು ಎನ್ನುವ ಪ್ರಶ್ನೆ ಮುಖ್ಯವಾಗುತ್ತದೆ. ದತ್ತಾಂಶದ ಮಾಲಕತ್ವದ ವಿಷಯವನ್ನು ಅರಿಯಲು ಈ ಉದಾಹರಣೆ ತೆಗೆದುಕೊಳ್ಳುವ. ನೀವು ನಗರಪ್ರದೇಶದಲ್ಲಿ ವಾಸವಾಗಿದ್ದು, ಓಡಾಟಕ್ಕೆ ಟ್ಯಾಕ್ಸಿಯನ್ನು ಬಳಸುವವರು ಎಂದುಕೊಳ್ಳಿ. ಸ್ಮಾರ್ಟ್ ಫೋನ್ ಇರುವ ನೀವು ಆ್ಯಪ್‌ನ ಮೂಲಕ ಆನ್‌ಲೈನ್‌ನಲ್ಲಿ ಟ್ಯಾಕ್ಸಿ ಬುಕ್ ಮಾಡುತ್ತೀರಿ. ನಿಮ್ಮ ಸುರಕ್ಷತೆ ದೃಷ್ಟಿಯಿಂದ ನಿಮ್ಮ ಪ್ರಯಾಣವನ್ನು ಮ್ಯಾಪ್‌ಗಳ ಮೂಲಕ ದಾಖಲಿಸಲಾಗುತ್ತದೆ. ಮತ್ತು ಎಲ್ಲಿ ಟ್ಯಾಕ್ಸಿಯನ್ನು ಏರಿದಿರಿ, ಎಲ್ಲಿ ಇಳಿದಿರಿ ಎಂಬುದು ದಾಖಲಾಗುತ್ತದೆ. ನಿಮ್ಮ ಅನುಕೂಲಕ್ಕೆಂದು ಆ್ಯಪ್ ನಿಮ್ಮ ಮನೆಯ ವಿಳಾಸವನ್ನು ‘ಹೋಂ’ ಎಂದು ಕಚೆೇರಿಯ ವಿಳಾಸವನ್ನು ‘ವರ್ಕ್’ ಎಂದು ಸೇವ್ ಮಾಡಲು ಹೇಳುತ್ತದೆ. ನೀವು ಹಾಗೆ ಮಾಡಿ ಅದರ ಅನುಕೂಲ ಪಡೆಯುತ್ತೀರಿ. ಈಗ ಇದೆಲ್ಲವು ಮಾಹಿತಿಯ ರೂಪದಲ್ಲಿ ಆ್ಯಪ್‌ನ ಸರ್ವರ್ ಅನ್ನು ತಲುಪುತ್ತದೆ. ಇಲ್ಲಿಂದ ಮುಂದಕ್ಕೆ ನಿಮ್ಮ ಮಾಹಿತಿ ದತ್ತಾಂಶವಾಗಿ ಬದಲಾಗುತ್ತದೆ.
ದತ್ತಾಂಶ ಗಣಿಗಾರಿಕೆ ನಡೆಸಿದಾಗ ನಿಮ್ಮ ಹೋಂ ವಿಳಾಸ ಮತ್ತು ವರ್ಕ್ ವಿಳಾಸಗಳು ಅಮೂಲ್ಯವಾದ ವಿಷಯವಾಗುತ್ತವೆೆ. ಯಾವುದೋ ಕಂಪೆನಿ ಹೊಟೇಲ್ ಆರಂಭಿಸಬೇಕೆಂದು ಯೋಚಿಸಿದೆ ಎಂದು ಕೊಳ್ಳಿ. ಅದಕ್ಕೀಗ ನಿಮ್ಮ ವರ್ಕ್ ಎಂದು ಸೇವ್ ಆಗಿರುವ ಪ್ರದೇಶ ಟಾರ್ಗೆಟ್ ಪ್ರದೇಶವಾಗುತ್ತದೆ. ದತ್ತಾಂಶ ಗಣಿಗಾರಿಕೆಯ ಮೂಲಕ ಟ್ಯಾಕ್ಸಿ ಸೇವೆ ನೀಡುವ ಕಂಪೆನಿಯು ಇಡೀ ನಗರದ ಪ್ರಯಾಣಿಕರ ವಿವರವನ್ನು ಹೊಟೇಲ್ ಆರಂಭಿಸುತ್ತಿರುವ ಕಂಪೆನಿಗೆ ಮಾರುತ್ತದೆ. ಕೊಂಡುಕೊಂಡ ಕಂಪೆನಿಗೆ ಹೊಸದಾಗಿ ಸರ್ವೇ ಕಾರ್ಯ ನಡೆಸುವ ಖರ್ಚು ಉಳಿಯುತ್ತದೆ. ಹೀಗೆ ದತ್ತಾಂಶ ಗಣಿಗಾರಿಕೆ ಈರ್ವರಿಗೂ ಪ್ರಯೋಜನಕಾರಿಯಾಗುತ್ತದೆ. ಪ್ರಶ್ನೆಯಿರುವುದು ದತ್ತಾಂಶದ ಮಾಲಕರು ಯಾರು? ದತ್ತಾಂಶದ ಸಂಗ್ರಹಕ್ಕೆ ಕಾರಣರಾದ ಬಳಕೆದಾರರೋ? ಇಲ್ಲವೇ ಮಾಹಿತಿಯನ್ನು ಸಂಗ್ರಹಮಾಡಿಕೊಂಡ ಆ್ಯಪ್‌ನ ಕಂಪೆನಿಯೋ? ಹಾಗೆ ಇದಕ್ಕೆ ಸಹಾಯ ಮಾಡಿದ ಫೋನ್ ತಯಾರಿಸಿದ ಕಂಪೆನಿ ಇಲ್ಲವೇ ಇಂಟರ್‌ನೆಟ್ ಸೇವೆ ನೀಡಿದ ಕಂಪೆನಿಯೋ? ಹೀಗೆ ಪ್ರಶ್ನೆಗಳು ಹುಟ್ಟುತ್ತವೆ. ಈಗಿರುವ ಸ್ಥಿತಿಯಲ್ಲಿ ಆ್ಯಪ್ ಸೃಷ್ಟಿಸಿದ ಕಂಪೆನಿಯೇ ದತ್ತಾಂಶದ ಒಡೆಯನಾಗಿರುತ್ತದೆ. ಇದಕ್ಕೆ ಬಳಕೆದಾರರ ಅನುಮತಿ ಪಡೆದಿದೆ ಎಂದಾದರೂ, ಮಾಹಿತಿಯನ್ನು ಸೃಷ್ಟಿಸಿದ ಬಳಕೆದಾರ ಕೂಡಾ ದತ್ತಾಂಶದ ಮಾಲಕನಲ್ಲವೇ? ಏಕೆಂದರೆ ಅವನ ಓಡಾಟದಿಂದ ಮತ್ತು ಅವನ ಹಣದಿಂದ ತಾನೇ ದತ್ತಾಂಶ ಸೃಷ್ಟಿಯಾಗಿದ್ದು? ಬಳಕೆದಾರನ ಶ್ರಮದಿಂದ ಸೃಷ್ಟಿಯಾದ ಮಾಹಿತಿಯ ಒಡೆತನ ಅವನಿಗೆ ಸೇರಬೇಕು ಎನ್ನುವುದು ಒಂದು ವಾದವಾಗುತ್ತದೆ. ಮತ್ತೊಂದು ವಾದ ಮಾಹಿತಿಯನ್ನು ಒಂದೆಡೆ ಸೇರಿಸಿ ತದನಂತರ ಅದರ ಗಣಿಗಾರಿಕೆ ನಡೆಯುವುದರಿಂದ ಆ್ಯಪ್‌ನ ಕಂಪೆನಿಯೇ ಒಡೆಯ ಎನ್ನುತ್ತದೆ. ಇದರ ನಡುವೆ ಇನ್ನೊಂದು ವಾದವು, ದತ್ತಾಂಶದ ಮೇಲೆ ಬಳಕೆದಾರನಿಗೆ ಹಾಗೂ ಆ್ಯಪ್ ಕಂಪೆನಿ ಇಬ್ಬರಿಗೂ ಸಮಾನ ಒಡೆತನವಿದೆ ಎನ್ನುತ್ತದೆ. ಹಾಗಾಗಿ ಲಾಭದ ಹಂಚಿಕೆಯಾಗಬೇಕು ಎನ್ನುತ್ತದೆ ಈ ವಾದ.
ಎಲ್ಲಾ ಮೂರು ವಾದಗಳು ಸರಿ ಎನ್ನಿಸಬಹುದು. ಆದರೆ ಈಗಿರುವ ಪರಿಸ್ಥಿತಿಯಲ್ಲಿ ಮತ್ತೊಂದು ಸಮಸ್ಯೆಯಿದೆ. ಅದೇನೆಂದರೆ ಹೀಗೆ ಸಂಗ್ರಹವಾಗುವ ಮಾಹಿತಿಯನ್ನು ಭಾರತ ದೇಶದಲ್ಲಿ ಸಂಗ್ರಹಿಸಿಡದೆ ಬಹುತೇಕ ಕಂಪೆನಿಗಳು ಸಿಂಗಾಪುರ ಮುಂತಾದ ದೇಶಗಳಲ್ಲಿ ಸಂಗ್ರಹಿಸುತ್ತವೆ! ಹೀಗೆ ಲಭ್ಯವಿರುವ ಮಾಹಿತಿಯು ಕಂಪೆನಿಯ ಒಡೆತನದಲ್ಲೇ ಉಳಿದುಬಿಡುತ್ತದೆ. ನಮ್ಮ ಸರಕಾರ ಏನೂ ಮಾಡಲಾಗದ ಸ್ಥಿತಿಯಲ್ಲಿರುತ್ತದೆ. ಜೊತೆಗೆ ಇನ್ನೊಂದು ಸತ್ಯವೂ ಇದೆ: ದತ್ತಾಂಶ ಗಣಿಗಾರಿಕೆಗೆ ಸಂಬಂಧಿಸಿದ ಯಾವುದೇ ಕಾನೂನು ಇನ್ನೂ ನಮ್ಮಲ್ಲಿ ಇಲ್ಲ!
ತಜ್ಞರ ಪ್ರಕಾರ ಮಾಲಕತ್ವ ಯಾರದ್ದು ಎಂದು ನಿರ್ಧಾರವಾಗುವ ಮುನ್ನ ಸಂಗ್ರಹವಾದ ಮಾಹಿತಿಯು ನಮ್ಮ ದೇಶದ ವ್ಯಾಪ್ತಿಯನ್ನು ದಾಟಿ ಹೋಗಬಾರದೆಂಬ ಕಾನೂನು ಜಾರಿಯಾಗಬೇಕು. ದತ್ತಾಂಶವನ್ನು ನಮ್ಮ ದೇಶದ ನೆಲದಲ್ಲೇ ಇರುವಂತೆ ನೋಡಿಕೊಳ್ಳುವುದು ಮೊದಲ ಹೆಜ್ಜೆಯಾಗುತ್ತದೆ. ತದನಂತರ, ಮಾಲಕತ್ವದ ವಿಷಯ ನಿರ್ಧರಿಸಬಹುದು. ಇದಾದ ನಂತರ ಬಳಕೆದಾರರಿಗೂ ಲಾಭದ ಒಂದಂಶ ಸೇರಬೇಕೆಂಬ ನಿಯಮ ರೂಪಿಸಬಹುದು ಅಥವಾ ತನ್ನ ಪ್ರಜೆಗಳು ನೀಡಿದ ಮಾಹಿತಿಯನ್ನು ಬಳಸಿಕೊಂಡು ದತ್ತಾಂಶದ ಗಣಿಗಾರಿಕೆ ಮಾಡಿರುವುದರಿಂದ ತನಗೆ ಇಷ್ಟು ತೆರಿಗೆ ಸಲ್ಲಬೇಕೆಂದು ಸರಕಾರ ಹೇಳಬಹುದು. ಇಲ್ಲವೇ ದೇಶದಲ್ಲಿ ಸೃಷ್ಟಿಯಾಗುವ ಎಲ್ಲಾ ರೀತಿಯ ಮಾಹಿತಿಗಳನ್ನು ರಾಷ್ಟ್ರೀಕರಣಗೊಳಿಸಬಹುದು. ಹೀಗೆ ಸರಕಾರದ ಬಳಿ ಸೇರುವ ದತ್ತಾಂಶದ ಗಣಿಗಾರಿಕೆಯನ್ನು ಸರಕಾರವೇ ಶುಲ್ಕ ವಿಧಿಸಿ ಎಲ್ಲರಿಗೂ ನೀಡಬಹುದು. ತನ್ಮೂಲಕ ತನ್ನ ಆದಾಯವನ್ನು ಹೆಚ್ಚಿಸಿಕೊಂಡು ಪ್ರಜೆಗಳಿಗೆ ಉಪಯುಕ್ತವಾದುದನ್ನು ಮಾಡಬಹುದು. ಇದೆಲ್ಲವೂ ಆಗಬೇಕಾದಲ್ಲಿ; ಸೂಕ್ತ ಕಾನೂನುಗಳ ರಚಿತವಾಗಬೇಕು. ಈಗ ಯಾವುದೇ ಕಾನೂನು ಇರದ ಕಾರಣ ಎಲ್ಲವೂ ಮುಕ್ತವಾಗಿ ಬಿಟ್ಟಿದೆ. ಅಮೂಲ್ಯವಾದ ದತ್ತಾಂಶವನ್ನು ಸಂಗ್ರಹಿಸಿಕೊಳ್ಳುತ್ತಿರುವ ಅಮೆರಿಕದ ಮತ್ತು ಯುರೋಪಿನ ದೇಶಗಳ ಕಂಪೆನಿಗಳು ನವವಸಾಹತು ಸ್ಥಾಪನೆಯ ಹಾದಿಯಲ್ಲಿ ದಾಪುಗಾಲು ಹಾಕುತ್ತಿವೆ. ಇದಾಗುವ ಮುನ್ನ ನಾವು ಎಚ್ಚರಗೊಳ್ಳಬೇಕಿದೆ.