ದಿಲ್ಲಿ ದರ್ಬಾರ್

Update: 2018-03-31 18:54 GMT

ಸಿನ್ಹಾರ ಸಂದಿಗ್ಧತೆ
ತನ್ನ ತಂದೆ, ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹಾ ತಳೆದಿರುವ ಬಿಜೆಪಿ ಹಾಗೂ ನರೇಂದ್ರ ಮೋದಿ ವಿರೋಧಿ ನಿಲುವು ಬಿಜೆಪಿ ಮುಖಂಡ ಹಾಗೂ ನಾಗರಿಕ ವಿಮಾನಯಾನ ಇಲಾಖೆಯ ಸಹಾಯಕ ಸಚಿವ ಜಯಂತ್ ಸಿನ್ಹಾರಿಗೆ ಈಗ ಇಕ್ಕಟ್ಟಿನ ಸ್ಥಿತಿ ತಂದಿಟ್ಟಿದೆ. ಬಿಜೆಪಿ ವಿರೋಧಿ ಶಕ್ತಿಗಳನ್ನು ಸಂಘಟಿಸಲು ಪ್ರಯತ್ನಿಸುತ್ತಿರುವ ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಯಶವಂತ ಸಿನ್ಹಾ ದಿಲ್ಲಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದರು. ಇದರ ಮರುದಿನ ಮಾಧ್ಯಮದವರಿಂದ ಜಯಂತ್ ಸಿನ್ಹಾಗೆ ಈ ಕುರಿತು ಪ್ರಶ್ನೆಗಳ ಸುರಿಮಳೆಯಾಯಿತು. ಇದಕ್ಕೆ ಉತ್ತರಿಸಿದ ಜಯಂತ್, ಪ್ರಜಾಪ್ರಭುತ್ವದಲ್ಲಿ ಜನರು ತಮ್ಮದೇ ಆದ ನಿಲುವನ್ನು ಹೊಂದಿರಲು ಮುಕ್ತರಾಗಿದ್ದಾರೆ ಎಂದು ತಾನು ಸ್ವಂತ ನಿರ್ಧಾರ ಹೊಂದಿರುವ ವಯಸ್ಕ ಎಂದು ಪರೋಕ್ಷವಾಗಿ ಸೂಚಿಸಿದರು. ನನಗೀಗ 54 ವರ್ಷ. ನನ್ನ ಹಾಗೂ ತಂದೆಯ ಮಧ್ಯೆ ಬಹಳಷ್ಟು ಅಂತರವಿದೆ. ನನಗೂ ಈಗ ಸಾಕಷ್ಟು ಅನುಭವವಾಗಿದೆ ಎನ್ನುವ ಮೂಲಕ ಬಿಜೆಪಿ ಪಕ್ಷದ ಬಗ್ಗೆ ತನಗಿರುವ ನಿಷ್ಠೆಯನ್ನು ವ್ಯಕ್ತಪಡಿಸಿದರು ಹಾಗೂ ಬಿಜೆಪಿಯಲ್ಲಿ ನೀವು ಮುಜುಗರದ ಪರಿಸ್ಥಿತಿ ಎದುರಿಸುತ್ತಿದ್ದೀರಾ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದೆ ನುಣುಚಿಕೊಂಡರು.

‘ಬೆಂಕಿ’ ತಣ್ಣಗಾಯಿತೇ.. ರಾಜ್ ?

ಸಂಸತ್ ಸದಸ್ಯ ಉದಿತ್‌ರಾಜ್ ಯುವಕನಾಗಿದ್ದ ಸಂದರ್ಭ ‘ಫೈರ್‌ಬ್ರಾಂಡ್ ’ ದಲಿತ ಮುಖಂಡ ಎಂದೇ ಹೆಸರಾಗಿದ್ದರು ಹಾಗೂ ಜನತೆ ಇವರ ಮೇಲೆ ಬಹಳಷ್ಟು ನಿರೀಕ್ಷೆ ಇರಿಸಿದ್ದರು. ಆದರೆ ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಅವರು ಹೋರಾಟದ ಮನೋಭಾವ ತೊರೆದಿರುವಂತೆ ಭಾಸವಾಗುತ್ತದೆ. ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ವಿಷಯವನ್ನು ಇತ್ತೀಚೆಗೆ ಬಿಜೆಪಿಯ ರಾಷ್ಟ್ರೀಯ ಕೇಂದ್ರ ಕಚೇರಿಯಲ್ಲಿ ನಡೆದ ಪಕ್ಷದ ಸಭೆಯೊಂದರಲ್ಲಿ ಪ್ರಸ್ತಾವಿಸಲು ಉದಿತ್‌ರಾಜ್ ಮುಂದಾದರು. ಆದರೆ ಆಗ ಮೋದಿ ಹಾಗೂ ಶಾರಿಂದ ಸತತ ಮೂರು ಗಂಟೆಗಳ ಕಾಲ ಉಪದೇಶ ಕೇಳಬೇಕಾಯಿತಷ್ಟೇ ಹೊರತು ತಾವು ಏನನ್ನು ಹೇಳಬಯಸುತ್ತಿದ್ದೇನೆ ಎಂದು ತಿಳಿಸಲೂ ಅವರಿಗೆ ಅವಕಾಶ ಸಿಗಲಿಲ್ಲ. ಮೋದಿ, ಶಾರ ಭಾಷಣ ಮುಗಿದ ಕೂಡಲೇ ಭೋಜನದ ವ್ಯವಸ್ಥೆಯಾಯಿತು. ಇದೀಗ ಕೇಸರಿ ಪಕ್ಷದಲ್ಲಿ ಪರಿಸ್ಥಿತಿ ಎಲ್ಲಿಗೆ ಬಂದು ಮುಟ್ಟಿದೆ ಎಂದರೆ, ಎಲ್ಲಿ ಮೋದಿ, ಶಾ ತಮ್ಮ ಮೇಲೆ ಬೇಸರ ಪಟ್ಟುಕೊಳ್ಳುತ್ತಾರೋ ಎಂಬ ಅಳುಕಿನಲ್ಲಿ ಪ್ರಮುಖ ನಾಯಕರು ಯಾವುದೇ ವಿಷಯದ ಬಗ್ಗೆಯೂ ಬಾಯಿ ಬಿಡುವುದೇ ಇಲ್ಲ. ಉದಿತ್‌ರಾಜ್‌ಗೆ ಉತ್ಸಾಹವಿದ್ದರೂ ಅಸಹಾಯಕರಾಗಿದ್ದಾರೆ. ತಮ್ಮ ‘ಬೆಂಕಿಯ ಚೆಂಡು’ ಎಂಬ ವಿಶೇಷಣವನ್ನು ಅವರು ಮರಳಿ ಪಡೆಯುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

ಪ್ರಿಯಾಂಕಾರ ಕಾರ್ಯಕ್ರಮ.. !
ದಿಲ್ಲಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ 84ನೇ ಪೂರ್ಣಾಧಿವೇಶನ ಪ್ರಭಾವಶಾಲಿ ಕಾರ್ಯಕ್ರಮವಾಗಿತ್ತು. ಮಾಧ್ಯಮದವರ ಕಣ್ಣಿನಿಂದ ದೂರವಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಹಿರಿಯ ರಾಜಕೀಯ ಪಕ್ಷದ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಪ್ರಿಯಾಂಕಾ ಗಾಂಧಿಯವರಲ್ಲಿ ಓರ್ವ ಸೂಕ್ಷ್ಮ ವ್ಯವಸ್ಥಾಪಕರನ್ನು ಕಾಂಗ್ರೆಸ್ ಮುಖಂಡರು ಗುರುತಿಸಿದ್ದರು.
ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಯಾವಾಗ ಮಾತನಾಡಬೇಕು ಎಂಬುದನ್ನೂ ನಿರ್ಧರಿಸಿದ್ದು ಪ್ರಿಯಾಂಕಾ ಅವರೇ. ಅತ್ಯುತ್ತಮ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ನೆರವಿನಿಂದ , ರಾಹುಲ್ ಗಾಂಧಿ ಭಾಷಣಕ್ಕೆ ಟಿವಿ ವಾಹಿನಿಯಲ್ಲಿ ಗರಿಷ್ಠ ಕವರೇಜ್ ದೊರೆಯುವಂತೆ ಅವರು ನೋಡಿಕೊಂಡರು. ಅಲ್ಲದೆ ಮುಖಂಡರಿಗೆ ಆಸನದ ವ್ಯವಸ್ಥೆ ಮಾಡುವಾಗಲೂ ಅವರು ತನ್ನ ತಾಯಿ ಸೋನಿಯಾ ಗಾಂಧಿಯ ಸಲಹೆಯನ್ನು ಒಪ್ಪಿಕೊಳ್ಳಲಿಲ್ಲ ಎನ್ನಲಾಗುತ್ತಿದೆ. ವೇದಿಕೆಯಲ್ಲಿ ಹಿರಿಯ ನಾಯಕರಿಗೆ ಆಸನದ ವ್ಯವಸ್ಥೆ ಮಾಡಬೇಕು ಎಂದು ಸೋನಿಯಾ ಬಯಸಿದ್ದರು. ಆದರೆ ರಾಹುಲ್ ಭಾಷಣ ಮಾಡುವಾಗ ಹಿಂಬದಿಯಲ್ಲಿ ಪ್ರಮುಖ ನಾಯಕರ ಮುಖ ಕಂಡುಬಂದರೆ ಸಭಿಕರ ಗಮನ ಬೇರೆಡೆಗೆ ಸೆಳೆಯಲ್ಪಡಬಹುದು ಎಂದು ಭಾವಿಸಿದ ಪ್ರಿಯಾಂಕಾ, ಸೋನಿಯಾ ಸಲಹೆಯನ್ನು ಒಪ್ಪಲಿಲ್ಲ ಎನ್ನಲಾಗಿದೆ.
ಅಲ್ಲದೆ ವೇದಿಕೆಯಲ್ಲಿ ಮಹಾತ್ಮಾ ಗಾಂಧೀಜಿ, ಜವಾಹರಲಾಲ್ ನೆಹರೂ ಸೇರಿದಂತೆ ಪ್ರಮುಖ ನಾಯಕರ ಬೃಹತ್ ಬ್ಯಾನರ್ ಹಾಕುವುದಕ್ಕೂ ಅವರು ಅವಕಾಶ ನೀಡಲಿಲ್ಲ. ತನ್ನ ಸಹೋದರನ ಮೇಲೆಯೇ ಎಲ್ಲರ ಗಮನ ಕೇಂದ್ರೀಕೃತವಾಗಬೇಕು ಎಂದು ಪ್ರಿಯಾಂಕಾ ಬಯಸಿದ್ದರು. ಇದೀಗ ಕಾಂಗ್ರೆಸ್‌ನ ಪ್ರಮುಖ ನಾಯಕರು ಪ್ರಿಯಾಂಕಾ ಗಾಂಧಿಯವರಲ್ಲಿ ಓರ್ವ ಉತ್ತಮ ವ್ಯವಸ್ಥಾಪಕರನ್ನು ಕಂಡಿದ್ದಾರೆ ಎನ್ನಲಾಗುತ್ತಿದೆ.

ಜಯಾಬಚ್ಚನ್ ಆಯ್ಕೆಯ ಹಿಂದಿನ ರಹಸ್ಯ !

ಜಯಾ ಬಚ್ಚನ್‌ರನ್ನು ರಾಜ್ಯಸಭಾ ಚುನಾವಣೆಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಸಮಾಜವಾದಿ ಪಕ್ಷ(ಎಸ್ಪಿ)ದ ನಿರ್ಧಾರದ ಬಗ್ಗೆ ಹಲವರು ಪ್ರಶ್ನಿಸಿದ್ದರು. ಪಕ್ಷ ಜಯಾ ಬಚ್ಚನ್‌ರನ್ನು ಕಣಕ್ಕಿಳಿಸುವ ನಿರ್ಧಾರ ಕೈಬಿಟ್ಟರೆ, ಆಗ ಪಕ್ಷದ ಹೆಚ್ಚುವರಿ ಮತಗಳನ್ನು ಬಿಎಸ್ಪಿ ಅಭ್ಯರ್ಥಿಗೆ ವರ್ಗಾಯಿಸುವ ಮೂಲಕ ಬಿಎಸ್ಪಿ ನಾಯಕಿ ಮಾಯಾವತಿ ಜೊತೆಗಿನ ಸಂಬಂಧವನ್ನು ಇನ್ನಷ್ಟು ಬಲಿಷ್ಠಗೊಳಿಸಬಹುದಿತ್ತು. ರಾಜ್ಯಸಭಾ ಸದಸ್ಯೆಯಾಗಿ ಜಯಾ ಬಚ್ಚನ್ ಕಾರ್ಯನಿರ್ವಹಣೆ ಅಷ್ಟೊಂದು ಪ್ರಭಾವಶಾಲಿಯಾಗಿಲ್ಲದಿದ್ದರೂ ಮಾಜಿ ಬಾಲಿವುಡ್ ನಟಿ ಜಯಾ ನಾಲ್ಕನೇ ಅವಧಿಗೆ ಮರು ಆಯ್ಕೆ ಬಯಸಿದ್ದರು. ಗೋರಖ್‌ಪುರ ಹಾಗೂ ಫೂಲ್‌ಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಮಾಯಾವತಿ ಮಾಡಿದ ಉಪಕಾರಕ್ಕೆ ಇಷ್ಟಾದರೂ ಪ್ರತ್ಯುಪಕಾರ ಎಸ್ಪಿ ಮಾಡಬೇಕಿತ್ತು. ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಒತ್ತಾಯದಿಂದ ಜಯಾ ಬಚ್ಚನ್‌ಗೆ ಟಿಕೇಟು ನೀಡಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಜಯಾಬಚ್ಚನ್‌ರನ್ನು ರಾಜ್ಯಸಭೆಗೆ ಆಯ್ಕೆ ಮಾಡುವ ಮೂಲಕ ಎಸ್ಪಿ ಮಹಿಳೆಯರ ಹಾಗೂ ಕಲಾವಿದರ ಪರವಾಗಿದೆ ಎಂದು ಸಂದೇಶ ಕಳುಹಿಸುವ ಇರಾದೆ ಡಿಂಪಲ್ ಯಾದವ್ ಅವರದ್ದು ಎನ್ನಲಾಗುತ್ತಿದೆ.

ಎನ್‌ಡಿಎಗೆ ಸಮಸ್ಯೆಯಾಗಿರುವ ಕುಶ್ವಾಹ

ಆರ್‌ಎಲ್‌ಎಸ್‌ಪಿ ಅಧ್ಯಕ್ಷ ಉಪೇಂದ್ರ ಕುಶ್ವಾಹ ಕೇಂದ್ರ ಸರಕಾರದಲ್ಲಿ ಸಚಿವರಾಗಿದ್ದಾರೆ. ಆದರೆ ಎನ್‌ಡಿಎ ಮಿತ್ರಕೂಟದ ಪಕ್ಷಗಳು ನಿರ್ವಹಿಸಬೇಕಿರುವ ಕೆಲವು ರಾಜಕೀಯ ಬಾಧ್ಯತೆಗಳು ತನ್ನ ಪಕ್ಷಕ್ಕೆ ಅನ್ವಯಿಸದು ಎಂಬ ರೀತಿ ಕುಶ್ವಾಹ ನಡೆದುಕೊಳ್ಳುತ್ತಿದ್ದಾರೆ. ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ವೈದ್ಯಕೀಯ ತಪಾಸಣೆಗಾಗಿ ಎಐಐಎಂಎಸ್‌ಗೆ ದಾಖಲಾದಾಗ ಅವರನ್ನು ಭೇಟಿಯಾಗಲು ಕುಶ್ವಾಹ ತೆರಳಿದ್ದರು. ಇದಕ್ಕೂ ಮೊದಲು ಆರ್‌ಎಲ್‌ಎಸ್‌ಪಿ ಪಾಟ್ನಾದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆರ್‌ಜೆಡಿ ಸದಸ್ಯರು ಪಾಲ್ಗೊಂಡಿದ್ದರು. ಈ ಘಟನೆಯ ಬಳಿಕ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಕುಶ್ವಾಹರನ್ನು ಭೇಟಿ ಮಾಡಿ, 2019ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎಗೆ ವಿರುದ್ಧವಾಗಬಹುದಾದ ಯಾವುದೇ ದುಸ್ಸಾಹಸ ನಡೆಸದಂತೆ ಎಚ್ಚರಿಕೆ ನೀಡಿದರು. ಕುಶ್ವಾಹ ಲಾಲು ಪ್ರಸಾದ್‌ರನ್ನು ಭೇಟಿ ಮಾಡಿರುವುದು ಬಿಹಾರದಲ್ಲಿ ಹಲವರ ಹುಬ್ಬೇರಿಸಿದೆ. ಕೋಮುಗಲಭೆಯ ಪ್ರಕರಣದಿಂದ ಬಿಹಾರದಲ್ಲಿ ನಿತೀಶ್ ಕುಮಾರ್ ಹಿನ್ನಡೆ ಅನುಭವಿಸಿರುವುದು ಹಾಗೂ ಅಲ್ಲಿ ಆರ್‌ಜೆಡಿ ಆಕ್ರಮಣಕಾರಿಯಾಗಿ ಮುನ್ನುಗ್ಗುತ್ತಿದ್ದು, ಮುಂದಿನ ದಿನಗಳಲ್ಲಿ ಆ ರಾಜ್ಯದಲ್ಲಿ ಪಕ್ಷಗಳು ಹೇಗೆ ಮರುಹೊಂದಾಣಿಕೆ ಮಾಡಿಕೊಳ್ಳಲಿವೆ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೆ ಕುಶ್ವಾಹ ನಡೆ ಜೆಡಿಯು ಮಿತ್ರಕೂಟಕ್ಕೆ ಹಾಗೂ ಬಿಜೆಪಿಗೆ ಭಾರೀ ಸಮಸ್ಯೆ ಉಂಟು ಮಾಡಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಸಂವಿಧಾನ -75