ಒಂದು ಹತ್ಯಾ ಪ್ರಯತ್ನದ ಸುತ್ತ...

Update: 2018-04-04 18:34 GMT
ಗಣೇಶ್ ದಾಮೋದರ್ ಸಾವರ್ಕರ್

ಇತ್ತೀಚೆಗೆ ಪಶ್ಚಿಮ ಬಂಗಾಲದ ಉತ್ತರ 24 ಪರಗಣ ಜಿಲ್ಲೆಯಲ್ಲಿ ರಾಮನವಮಿ ಉತ್ಸವ ಆಚರಿಸುತ್ತಿದ್ದ ಶಸ್ತ್ರಧಾರಿಗಳ ಮೆರವಣಿಗೆಯೊಂದು ಸ್ವಾತಂತ್ರ ಹೋರಾಟಗಾರ ವೌಲಾನಾ ಅಬುಲ್ ಕಲಾಂ ಆಝಾದ್‌ರ ಪ್ರತಿಮೆಯೊಂದನ್ನು ನಾಶಗೊಳಿಸಿತು. ಸುಮಾರು ಒಂಬತ್ತು ದಶಕಗಳ ಹಿಂದೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹ ಸ್ಥಾಪಕ ಗಣೇಶ್ ದಾಮೋದರ್ ಸಾವರ್ಕರ್ ಕೆಲವು ಪ್ರಮುಖ ಮುಸ್ಲಿಂ ನಾಯಕರ ಹತ್ಯೆಗೈಯಲು ಸಂಚು ನಡೆಸಿದ್ದರು. ಆಗ ಆತ ಹತ್ಯೆಗೆ ಗುರಿ ಮಾಡಿದ್ದ ನಾಯಕರಲ್ಲಿ ಆಝಾದ್ ಕೂಡ ಒಬ್ಬರು ಆಗಿದ್ದಿರಬಹುದು ಎಂದು ಪೊಲೀಸರು ಅನುಮಾನಿಸಿದ್ದರು.

ಆದರೆ ಹಿಂದುತ್ವ ಸಿದ್ಧಾಂತಿ ವಿನಾಯಕ್ ಸಾವರ್ಕರ್‌ರ ಹಿರಿಯ ಸಹೋದರ, ಗಣೇಶ್ ಸಾವರ್ಕರ್ ತನ್ನ ಸಂಚನ್ನು ಕಾರ್ಯಗತಗೊಳಿಸಲು ವಿಫಲರಾದರು. ಯಾಕೆ? ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ.

ಆತ ರೂಪಿಸಿದ್ದ ಒಳಸಂಚನ್ನು ಬ್ರಿಟಿಷ್ ವಸಾಹತುಶಾಹಿ ಸರಕಾರದ ಗೂಢಚಾರರು ಪತ್ತೆ ಹಚ್ಚಿದ್ದರು ಮತ್ತು ಆ ಸಂಚಿನ ಕುರಿತಾದ ಅವರ ವರದಿಗಳು ಈಗ ದಿಲ್ಲಿ ಪೊಲೀಸ್ ಪ್ರಾಚ್ಯವಸ್ತು ಸಂಗ್ರಹಾಲಯದಲ್ಲಿವೆ. ಮೊದಲ ವರದಿಯನ್ನು 1929ರ ಸೆಪ್ಟಂಬರ್ 13ರಂದು ಕಲ್ಕತ್ತಾದ ಡೆಪ್ಯೂಟಿ ಪೊಲೀಸ್ ಕಮಿಶನರ್, ಸ್ಪೆಶಲ್ ಬ್ರಾಂಚ್‌ನಿಂದ ಕಳುಹಿಸಲಾಗಿತ್ತು ಮತ್ತು ಆ ವರದಿಯನ್ನು ಮುಂಬೈಯ ಸ್ಪೆಶಲ್ ಬ್ರಾಂಚ್‌ನ, ಡೆಪ್ಯೂಟಿ ಪೊಲೀಸ್ ಕಮಿಶನರ್‌ರವರ ಹೆಸರಿಗೆ (ವಿಳಾಸಕ್ಕೆ) ಕಳುಹಿಸಲಾಗಿತ್ತು. ಆ ವರದಿಯಲ್ಲಿ ಹೀಗೆ ಬರೆಯಲಾಗಿದೆ:

‘‘ಮುಸ್ಲಿಂ (ಮುಹಮ್ಮದನ್) ಮತಾಂಧರು ನಡೆಸಿದ ಹಿಂದೂ ನಾಯಕರಾದ ಶ್ರದ್ಧಾನಂದ ಮತ್ತು ರಾಜ್‌ಪಾಲ್‌ರವರ ಹತ್ಯೆಗೆ ಪ್ರತೀಕಾರವಾಗಿ ದಿಲ್ಲಿ ಮತ್ತು ಮುಂಬೈಯಲ್ಲಿ ಕೆಲವು ಪ್ರಮುಖ ಮುಸ್ಲಿಂ ನಾಯಕರ ಹತ್ಯೆ ನಡೆಸುವ ಒಂದು ಸಂಚಿನಲ್ಲಿ ಗಣೇಶ್ ಸಾವರ್ಕರ್ ಒಳಗೊಂಡಿದ್ದಾರೆಂದು ನನಗೆ ಈಗ ತಾನೆ ನಂಬಲರ್ಹವಾದ ಮಾಹಿತಿ ಲಭಿಸಿದೆ. ಪ್ರಸ್ತಾವಿತ ಸಂಚಿನ ಬಗ್ಗೆ ಬೇರೆ ಇತರ ಮಾಹಿತಿ ನಮಗೆ ಸಿಕ್ಕಿಲ್ಲವೆಂದು ಹೇಳಲು ವಿಷಾದಿಸುತ್ತೇನೆ (ಐ ಆ್ಯಮ್ ಸಾರಿ)’’.

ಶಸ್ತ್ರಾಸ್ತ್ರಗಳನ್ನು ಪಡೆಯಲು ಗಣೇಶ್ ಸಾವರ್ಕರ್ ಕಲ್ಕತ್ತಾಕ್ಕೆ ಭೇಟಿ ನೀಡಿದ್ದ. ‘‘ಓರ್ವ ಪ್ರಮುಖ ಕ್ರಾಂತಿಕಾರಿಯಿಂದ ಬೆಂಗಾಲ್ ಬಾಂಬ್‌ನ ಸ್ಯಾಂಪಲ್ ಪಡೆಯಲು ಆತ ಕಲ್ಕತ್ತಾಕ್ಕೆ ಹೋಗಿದ್ದ’’ ಎಂದೂ ಆ ವರದಿಯಲ್ಲಿ ಹೇಳಲಾಗಿತ್ತು. ‘‘ಆದರೆ ಈ ತಂಡದಿಂದ ಸಾವರ್ಕರ್‌ಗೆ ಯಾವುದೇ ರಿವಾಲ್ವರ್ ಅಥವಾ ಸ್ಫೋಟಕಗಳು ಸರಬರಾಜಾಗಿಲ್ಲ ಎಂದು ನಮಗೆ ದೊರಕಿದ ಮಾಹಿತಿಯಿಂದ ತಿಳಿದುಬಂದಿದೆ’’ ಎಂದೂ ಆ ವರದಿಯಲ್ಲಿ ಬರೆಯಲಾಗಿತ್ತು.

ನಾಲ್ಕು ದಿನಗಳ ನಂತರ, ಶಿಮ್ಲಾದಲ್ಲಿರುವ ಗುಪ್ತಚರ ಇಲಾಖೆಯ ಕೇಂದ್ರ ಸ್ಥಳದಿಂದ ದಿಲ್ಲಿಯ ಕ್ರಿಮಿನಲ್ ತನಿಖಾ ಇಲಾಖೆಯ ಅಡಿಶನಲ್ ಸುಪರಿಂಟೆಂಡೆಂಟ್ ಆಫ್ ಪೊಲೀಸ್‌ಗೆ ಒಂದು ವರದಿ ತಲುಪಿತು. ಸೆಪ್ಟಂಬರ್ 13ರ ವರದಿಯನ್ನು ಉಲ್ಲೇಖಿಸುತ್ತಾ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅನೇಕ ಪ್ರಮುಖ ನಾಯಕರನ್ನು ಹೆಸರಿಸಿ, ಅದು ಹೀಗೆ ಹೇಳಿತು:

‘‘ಎಸ್.ಎಚ್.ದಾಮೋದರ್ ಸಾವರ್ಕರ್‌ರ ಉದ್ದೇಶಿತ ಗುರಿ (ಬಲಿಪಶು) ಮುಹಮ್ಮದ್ ಅಲಿ, ಡಾ.ಅನ್ಸಾರಿ, ಅಬುಲ್ ಕಲಾಂ ಆಝಾದ್ ಮತ್ತು ಮುಫ್ತಿ ಕಿಫಾಯತುಲ್ಲಾ ಆಗಿರಬಹುದು. ಆದರೆ ಯಾವ ನಿರ್ದಿಷ್ಟ ಮುಹಮ್ಮದೀಯ ನಾಯಕ ದಿಲ್ಲಿಯಲ್ಲಿ ತನ್ನ ತೀವ್ರವಾದ ಪ್ರತ್ಯೇಕವಾದಿ ಮುಸ್ಲಿಂ ಪರ ಅಥವಾ ಹಿಂದೂ ವಿರೋಧಿ ಚಟುವಟಿಕೆಗಳಿಂದಾಗಿ ತೀವ್ರವಾದ ದ್ವೇಷಕ್ಕೆ ಗುರಿಯಾಗಿದ್ದಾರೆಂದು ತಿಳಿಯಲು ಪ್ರಾಯಶಃ ನೀವೇ ಅತ್ಯಂತ ಸಮರ್ಥರಿದ್ದೀರಿ’’.

ಈ ವರದಿಯಲ್ಲಿ ಗಣೇಶ್ ಸಾವರ್ಕರ್‌ರನ್ನು ಎಸ್.ಎಚ್.ದಾಮೋದರ್ ಸಾವರ್ಕರ್ ಎಂದು ತಪ್ಪಾಗಿ ಹೆಸರಿಸಲಾಗಿತ್ತು. ಇದನ್ನು 1929ರ ಅಕ್ಟೋಬರ್ 2ರಂದು ಬರೆದ ಒಂದು ಟಿಪ್ಪಣಿಯ ಮೂಲಕ ಗುಪ್ತಚರ ವಿಭಾಗ ಸ್ಪಷ್ಟಪಡಿಸಿತ್ತು.
ಗಣೇಶ್ ಸಾವರ್ಕರ್‌ರ ಒಳಸಂಚು ಮತ್ತು ಯಾಕೆ ಅದು ವಿಫಲ ವಾಯಿತು? ಎಂಬ ಬಗ್ಗೆ ಈ ವರದಿಯಲ್ಲಿ ಇನ್ನೂ ಕೆಲವು ವಿವರಗಳಿವೆ.

ಪ್ರಮುಖ ಆರೆಸ್ಸೆಸ್ ನಾಯಕ 
ಬಾಬಾರಾವ್ ಎಂದು ಜನಪ್ರಿಯರಾಗಿರುವ ಗಣೇಶ್ ಸಾವರ್ಕರ್, 1925ರಲ್ಲಿ ಸ್ಥಾಪಿಸಲ್ಪಟ್ಟ ಆರೆಸ್ಸೆಸ್‌ನ ಐವರು ಸ್ಥಾಪಕರಲ್ಲಿ ಒಬ್ಬರು. ಕೆ.ಬಿ.ಹೆಡ್ಗೆವಾರ್, ಬಿ.ಎಸ್.ಮೂನ್ಜೆ, ಎಲ್.ವಿ.ಪರಾಂಜಪೆ ಮತ್ತು ಬಿ.ಬಿ.ತೋಲ್ಕರ್ ಇತರ ನಾಲ್ವರು.

ಗಣೇಶ್ ಸಾವರ್ಕರ್ ಆರೆಸ್ಸೆಸನ್ನು ವಿಸ್ತರಿಸುವುದರಲ್ಲಿ ಮತ್ತು ಅದರ ಸೈದ್ಧಾಂತಿಕ ನೆಲೆಗಟ್ಟುಗಳನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಕಠಿಣ ಶ್ರಮ ಅಲ್ಲವಾಗಿದ್ದಲ್ಲಿ ಆರೆಸ್ಸೆಸ್ ಇಷ್ಟೊಂದು ದೀರ್ಘ ಕಾಲ ಉಳಿಯುತ್ತಿತ್ತೇ? ಎನ್ನುವುದು ಚರ್ಚಾಸ್ಪದ. ಅವರು ತನ್ನ ‘ತರುಣ್ ಹಿಂದೂ ಸಭಾ’ ಮತ್ತು ‘ಮುಕ್ತೇಶ್ವರ ದಳ’ವನ್ನು ಆರೆಸ್ಸೆಸ್‌ನೊಂದಿಗೆ ವಿಲೀನಗೊಳಿಸಿದರು ಮತ್ತು ಅದರ ಮೊದಲ ಸರಸಂಘಚಾಲಕ ಹೆಡ್ಗೆವಾರ್ ಪಶ್ಚಿಮ ಮಹಾರಾಷ್ಟ್ರದಲ್ಲಿ ಪ್ರವಾಸಗಳನ್ನು ಕೈಗೊಂಡಾಗ ಅವರ ಜೊತೆಗೆ ಹೋಗಿ, ಅವರನ್ನು ಹಿಂದೂ ಮೂಲಭೂತವಾದಿ ನಾಯಕರಿಗೆ ಪರಿಚಯಿಸಿದರು. ಸ್ವಲ್ಪವೇ ಸಮಯದಲ್ಲಿ, ಅವರ ಪ್ರಯತ್ನಗಳಿಂದಾಗಿ, ಪಶ್ಚಿಮ ಮಹಾರಾಷ್ಟ್ರದಲ್ಲಿ ಪೂನಾ ಆರೆಸ್ಸೆಸ್ ಚಟುವಟಿಕೆಗಳ ಕೇಂದ್ರವಾಯಿತು.

ಬಾಬಾ ರಾವ್‌ರವರ ಮರಾಠಿ ಪ್ರಬಂಧ ‘ರಾಷ್ಟ್ರಮಿಮಾಂಸ’ ಇಂಗ್ಲಿಷ್‌ನಲ್ಲಿ ‘ವಿ ಒರ್ ಅವರ್ ನೇಷನ್‌ಹುಡ್ ಡಿಫೈನ್ಡ್’ ಎಂಬ ಶೀರ್ಷಿಕೆಯಲ್ಲಿ ಆರೆಸ್ಸೆಸ್‌ನ ದ್ವಿತೀಯ ಸರಸಂಘಚಾಲಕ ಎಂ.ಎಸ್.ಗೋಳ್ವಾಲ್ಕರ್‌ರವರ ಹೆಸರಿನಲ್ಲಿ ಪ್ರಕಟವಾದದ್ದೇ ತಡ, ಅದು ಸಂಘಪರಿವಾರದ ಮೂಲ ಸೈದ್ಧಾಂತಿಕ (ಫೌಂಡೇಶನಲ್) ಪಠ್ಯಗಳಲ್ಲಿ ಒಂದು ಪಠ್ಯವಾಯಿತು.

ಕೃಪೆ: scroll.in

Writer - ಧೀರೇಂದ್ರ ಕೆ. ಝಾ

contributor

Editor - ಧೀರೇಂದ್ರ ಕೆ. ಝಾ

contributor

Similar News