ಮಹಾತ್ಮಾಗಾಂಧಿ ಕೂಡ ‘ಪೋಸ್ಟ್‌ಕಾರ್ಡ್’ನಲ್ಲಿ ಬರೆದಿದ್ದರು...!

Update: 2018-04-08 05:45 GMT

ಮಾಧ್ಯಮ ಕಣ್ಗಾವಲು ಸಮಿತಿಗೆ ಸಂಸದರಾಗಿರುವ ಪ್ರಲಾಪ ತಿಮ್ಮ ಅವರು ಆಯ್ಕೆಯಾಗಿದ್ದಾರೆ ಎಂದು ಗೊತ್ತಾದದ್ದೇ ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡ. ಇನ್ನು ಮುಂದೆ ಮಾಧ್ಯಮಗಳಲ್ಲಿ ಸುಳ್ಳುಗಳು ಬರುವುದಕ್ಕೆ ಸಾಧ್ಯವೇ ಇಲ್ಲ, ನರೇಂದ್ರ ಮೋದಿಯವರು ನೋಟು ನಿಷೇಧ ಮಾಡುವ ಮೂಲಕ ದೇಶದಲ್ಲಿರುವ ಕಪ್ಪುಹಣವನ್ನೆಲ್ಲ ನಾಶ ಮಾಡಿದಂತೆ ಪ್ರಲಾಪ ತಿಮ್ಮನವರು ಮಾಧ್ಯಮಗಳಲ್ಲಿರುವ ಸುಳ್ಳು ಸುದ್ದಿಗಳನ್ನೆಲ್ಲ ಬ್ಯಾನ್ ಮಾಡಿ ಬಿಡುತ್ತಾರೆ ಎಂದು ಕಾಸಿ ಸಂಭ್ರಮಪಟ್ಟು, ನೇರವಾಗಿ ಪ್ರಲಾಪ ತಿಮ್ಮನವರ ಇಂಟರ್ಯೂ ಮಾಡಲು ಹೊರಟ.

ಕೈಯಲ್ಲಿ ಎರಡು ಭೂತಕನ್ನಡಿಗಳನ್ನು ಹಿಡಿದುಕೊಂಡು ಪ್ರಲಾಪ ತಿಮ್ಮ ಎದುರಾದರು. ‘‘ಸಾರ್...ನಾನು ಎಂಜಲು ಕಾಸಿ...’’ ಪರಿಚಯಿಸಿದ.

‘‘ಹೂಂ...ಗೊತ್ತು ಗೊತ್ತು...’’ ಎನ್ನುತ್ತಾ ತಿಮ್ಮ ತಮ್ಮ ಭೂತಗನ್ನಡಿ ಯಲ್ಲಿ ಕಾಸಿಯನ್ನು ಆಮೂಲಾಗ್ರ ಪರಿಶೀಲಿಸಿದ ಬಳಿಕ ಒಳಬಿಟ್ಟರು.

‘‘ಸಾರ್...ಈ ಸುಳ್ ಸುದ್ದಿಯನ್ನು ಪತ್ತೆ ಮಾಡುವುದು ಹೇಗೆ? ಸುಳ್ ಸುದ್ದಿ ಯಾವುದು, ಸತ್ಯ ಸುದ್ದಿ ಯಾವುದು? ಎನ್ನುವುದು ನಿಮಗೆ ಗೊತ್ತಾಗುವುದು ಹೇಗೆ?’’ ಕಾಸಿ ಪ್ರಶ್ನೆಯನ್ನು ಮುಂದಿಟ್ಟ.

‘‘ಅದು ತುಂಬಾ ಸುಲಭ. ಮೋದಿ ಪರವಾಗಿರುವ ಸುದ್ದಿಗಳೆಲ್ಲ ಸತ್ಯ ಸುದ್ದಿ. ಮೋದಿ ವಿರುದ್ಧವಾದ ಸುದ್ದಿಗಳೆಲ್ಲ ಸುಳ್ ಸುದ್ದಿ...’’ ಪ್ರಲಾಪ ತಿಮ್ಮ ಒಂದೇ ವಾಕ್ಯದಲ್ಲಿ ವಿವರಿಸಿದರು.

ಕಾಸಿಗೆ ಜ್ಞಾನೋದಯವಾಯಿತು.

‘‘ಸರ್, ಅದೇನೋ ಸುಳ್ಳು ಸುದ್ದಿಗೆ ಹೆಸರಾಗಿರುವ ಪೋಸ್ಟ್ ಕಾರ್ಡ್‌ನ್ನು ನೀವು ಬೆಂಬಲಿಸಿದ್ದೀರಂತೆ...’’ ಕಾಸಿ ಮೆಲ್ಲಗೆ ತನ್ನ ಬುದ್ಧಿ ತೋರಿಸಿದ.

‘‘ನೋಡ್ರೀ...ಹೀಗೆಲ್ಲ ಸುಳ್ ಸುದ್ದಿ ಹರಡಿದ್ರೆ ನಿಮ್ಮ ಅಕ್ರೆಡಿಶನ್ ಕಾರ್ಡ್‌ನ್ನು ನಾನು ಕಿತ್ಕೋಬೇಕಾಗತ್ತೆ....’’ ತಿಮ್ಮ ಬೆದರಿಕೆ ಹಾಕಿದರು.

‘‘ಸಾರಿ ಸಾರ್...’’ ಕಾಸಿ ಬೆದರಿ ಕ್ಷಮೆಯಾಚಿಸಿದ.

‘‘ನೋಡ್ರೀ...ಪೋಸ್ಟ್‌ಕಾರ್ಡ್ ಸುಳ್ಳು ಸುದ್ದಿ ಹಾಕುತ್ತೆ ಎನ್ನುವುದೇ ಸುಳ್ ಸುದ್ದಿ. ಪೋಸ್ಟ್ ಕಾರ್ಡ್‌ಗೆ ತುಂಬಾ ದೊಡ್ಡ ಇತಿಹಾಸ ಇದೆ. ಸ್ವಾತಂತ್ರ ಪೂರ್ವದಲ್ಲಿ ಸ್ವಾತಂತ್ರ ಹೋರಾಟದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸಿ ಬ್ರಿಟಿಷರಿಗೆ ಸಾಕಷ್ಟು ಕಿರುಕುಳ ಕೊಟ್ಟಿರುವುದರಿಂದ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು...ಗಾಂಧೀಜಿಯವರು ಕೂಡ ಪೋಸ್ಟ್‌ಕಾರ್ಡ್‌ನಲ್ಲಿ ಬರೆದಿದ್ದರು ಗೊತ್ತಾ...’’

‘‘ಸಾರ್...ಅದು ಬೇರೆ ಪೋಸ್ಟ್‌ಕಾರ್ಡ್ ಸಾರ್....’’ ಕಾಸಿ ಕಂಗಾಲಾಗಿ ಹೇಳಿದ.

‘‘ನೋಡ್ರೀ...ಹೀಗೆಲ್ಲ ನೀವು ವಾದ ಮಾಡಿದ್ರೆ....ನಿಮ್ಮ ಅಕ್ರೆಡಿಶನ್ ಕಾರ್ಡ್ ಕಿತ್ತುಕೊಳ್ಳಬೇಕಾಗತ್ತೆ...’’

‘‘ಸಾರಿ ಸಾರ್......ಇದೆಲ್ಲ ಇತಿಹಾಸ ನನಗೆ ಗೊತ್ತಿರಲಿಲ್ಲ ಸಾರ್...’’ ಮತ್ತೆ ಕ್ಷಮೆಯಾಚಿಸಿದ.

‘‘ಅದಕ್ಕೆ ಹೇಳೋದು...ಪೋಸ್ಟ್‌ಕಾರ್ಡ್ ಓದಿ. ಅದರಲ್ಲಿ ಇದೆಲ್ಲದರ ವಿವರಗಳು ಇವೆ. ಪೋಸ್ಟ್‌ಕಾರ್ಡ್‌ನಲ್ಲಿ ಬರುವ ಸುದ್ದಿಗಳನ್ನೇ ನೀವು ಯಥಾವತ್ ವರದಿ ಮಾಡಿದರೆ ನಿಮ್ಮ ಅಕ್ರೆಡಿಶನ್ ಕಾರ್ಡ್‌ಗೆ ಸಮಸ್ಯೆ ಇಲ್ಲ...’’ ತಿಮ್ಮ ಸಲಹೆ ನೀಡಿದರು.

‘‘ಸಾರ್...ಸತ್ಯ ಸುದ್ದಿಗಳು ಸಿಗುವ ಪ್ರದೇಶಗಳ ವಿವರ ಸ್ವಲ್ಪ ಕೊಡುತ್ತೀರಾ...?’’ ಕಾಸಿ ಮನವಿ ಮಾಡಿದ

‘‘ನೋಡ್ರೀ...ನಮ್ಮ ಕಡೆಯಿಂದಲೇ ಒಂದು ತಂಡ ಇದೆ. ಅವರೇ ಸುದ್ದಿಗಳನ್ನು ಬರೆದು ಕೊಡುತ್ತಾರೆ. ನೀವು ಮುದ್ರಿಸಿದರೆ ಆಯಿತು. ನಿಮ್ಮ ಕೆಲಸವೂ ಸುಲಭವಾಯಿತು. ಅಕ್ರೆಡಿಶನ್ ಕಾರ್ಡ್ ಕೂಡ ಉಳಿಯಿತು...’’ ತಿಮ್ಮ ವಿವರಿಸಿದರು. ‘‘ಸಾರ್... ಅಕ್ರೆಡಿಶನ್ ಕಾರ್ಡ್ ಇಲ್ಲದ ಪತ್ರಕರ್ತರು ಸುಳ್ಳು ಸುದ್ದಿ ಬರೆದರೆ....?’’ ಕಾಸಿ ಮತ್ತೊಂದು ಸಮಸ್ಯೆ ಮುಂದಿಟ್ಟ.

‘‘ಅಂಥವರನ್ನು ನಾವು ಗುರುತಿಸಿ ಅವರಿಗೆ ಕೈತುಂಬಾ ಉಡುಗೊರೆ ಮತ್ತು ಅಕ್ರೆಡಿಶನ್ ಕಾರ್ಡ್ ಕೊಡುತ್ತೇವೆ. ಆ ಬಳಿಕವೂ ಅವರು ಬರೆದರೆ ಅವರ ಅಕ್ರೆಡಿಶನ್ ಕಾರ್ಡ್‌ನ್ನು ಕಿತ್ತುಕೊಳ್ಳುತ್ತೇವೆ...’’ ತಿಮ್ಮ ಉತ್ತರಿಸಿದರು.

‘‘ಅಕ್ರೆಡಿಶನ್ ಕಾರ್ಡ್ ಬೇಡ ಎಂದರೆ...’’ ‘‘ಬೇಡ ಎಂದವರ ಉದ್ದೇಶವೇ ಸುಳ್ಳು ಸುದ್ದಿ ಬರೆಯುವುದು ಎಂದು ತೀರ್ಮಾನಿಸಿ ಅವರನ್ನು ಜೈಲಿಗೆ ತಳ್ಳುತ್ತೇವೆ’’ ಪ್ರಲಾಪ ತಿಮ್ಮ ತನ್ನ ಭೂತ ಕನ್ನಡಿಯನ್ನೊಮ್ಮೆ ಕಣ್ಣಿಗೆ ಹಿಡಿದುಕೊಂಡ.

‘‘ಸಾರ್...ನೀವು ಪತ್ರಕರ್ತರಾಗಿ ಹೆಸರು ಪಡೆದದ್ದೇ ಸುಳ್ಳು ಸುದ್ದಿ ಬರೆದು ಎಂದು ಕೆಲವರು ಆರೋಪಿಸುತ್ತಿದ್ದಾರೆ....’’ ಕಾಸಿ ಹೆದರುತ್ತಾ ಕೇಳಿದ.

‘‘ನೋಡ್ರೀ...ನನ್ನ ಕೈಯಲ್ಲಿ ಇನ್ನೂ ಅಕ್ರೆಡಿಶನ್ ಕಾರ್ಡ್ ಇದೆ. ಒಂದು ವೇಳೆ ಸುಳ್ಳು ಸುದ್ದಿ ಬರೆದಿದ್ದರೆ ಅದನ್ನು ಕಿತ್ತುಕೊಳ್ಳುತ್ತಾ ಇದ್ದರು. ಬದಲಿಗೆ ನನಗೆ ರಾಜ್ಯೋತ್ಸವ ಪ್ರಶಸ್ತಿಯ ಜೊತೆಗೆ ಸೈಟ್ ಕೊಟ್ಟು ಸನ್ಮಾನಿಸಿದ್ದಾರೆ....ಗೊತ್ತಾ?’’ ತಿಮ್ಮ ತನ್ನ ಅಕ್ರೆಡಿಶನ್ ಕಾರ್ಡ್ ತೋರಿಸಿದ.

‘‘ಸಾರ್ ಸುಳ್ಳು ಮಾಹಿತಿ ಕೊಟ್ಟು ಸೈಟ್ ಪಡೆದ್ರಂತೆ ಹೌದಾ?’’ ಕಾಸಿ ಮತ್ತೆ ಕೇಳಿದ.

ಪ್ರಲಾಪ ತಿಮ್ಮರಿಗೆ ಸಿಟ್ಟು ಉಕ್ಕೇರಿತು. ತನ್ನೆದುರು ನಿಂತು ಪೋಸ್ಟ್ ಕಾರ್ಡ್‌ಗಿಂತಲೂ ಭೀಕರ ಸುಳ್ಳು ಸುದ್ದಿ ಹೇಳುತ್ತಿದ್ದಾನಲ್ಲ ಇವ ಎಂದವರೇ, ‘‘ಕೊಡ್ರೀ ನಿಮ್ಮ ಅಕ್ರೆಡಿಶನ್ ಕಾರ್ಡ್...’’ ಕೇಳಿದರು.

‘‘ಸಾರಿ ಸಾರ್...’’ ಕಾಸಿ ಮತ್ತೆ ಕ್ಷಮೆಯಾಚಿಸಿದ.

‘‘ನೋಡ್ರೀ...ಪದೇ ಪದೇ ಕ್ಷಮೆ ಯಾಚಿಸಲು ನೀವೇನು ಸಾವರ್ಕರ್ ಅಂತ ತಿಳ್ಕೊಂಡಿದ್ದೀರಾ? ಹಾಗೆ ಕ್ಷಮಿಸುವುದಕ್ಕೆ ನಾನು ಬ್ರಿಟಿಷ್ ಸರಕಾರ ಅಲ್ಲ. ನಮ್ಮದು ಮೋದಿ ಸರಕಾರ...’’ ತಿಮ್ಮ ಗರ್ಜಿಸುತ್ತಿ್ದಂತೆಯೇ ಕಾಸಿ ಎದ್ದು ಓಡ ತೊಡಗಿದ.

‘‘ಸುಳ್ಳು ಸುದ್ದಿ...ಹಿಡಿಯಿರಿ...ಹಿಡಿಯಿರಿ...’’ ಎನ್ನುತ್ತಾ ಪ್ರಲಾಪ ತಿಮ್ಮ ಅರೂ ಆತನ ಹಿಂದೆ ಓಡ ತೊಡಗಿದರು.

Writer - - ಚೇಳಯ್ಯ chelayya@gmail.com

contributor

Editor - - ಚೇಳಯ್ಯ chelayya@gmail.com

contributor

Similar News