ಬಸ್ರಾದಲ್ಲಿ ಬೆಕ್ಕುಗಳಿಗೊಂದು ಹೊಟೇಲ್

Update: 2018-04-12 06:25 GMT

ಅಂತರ್ಯುದ್ಧದಿಂದ ಜರ್ಜರಿತವಾಗಿರುವ ಇರಾಕ್ ನಗರವಾದ ಬಸ್ರಾದಲ್ಲಿ ಬೆಕ್ಕು ಪ್ರಿಯರು, ತಮ್ಮ ಮುದ್ದಿನ ಪ್ರಾಣಿಗಳಿಗೆ ಸುರಕ್ಷಿತ ಹಾಗೂ ಆಹ್ಲಾದಕರ ತಾಣವೊಂದನ್ನು ಕಂಡುಕೊಂಡಿದ್ದಾರೆ.
ಜಾನುವಾರು ಚಿಕಿತ್ಸಾಶಾಸ್ತ್ರ (ವೆಟರ್ನರಿ)ದ ವಿದ್ಯಾರ್ಥಿ ಅಹ್ಮದ್ ತಾಹೆರ್ ಮಾಕಿ ಅವರು ದಕ್ಷಿಣ ಇರಾಕ್‌ನ ನಗರವಾದ ಬಸ್ರಾದಲ್ಲಿರುವ ತನ್ನ ಮನೆಯನ್ನು ಬೆಕ್ಕುಗಳಿಗೆಂದೇ ಮೀಸಲಾದ ವಿಶೇಷ ಹೊಟೇಲನ್ನಾಗಿ ಮಾರ್ಪಡಿಸಿದ್ದಾರೆ. ಅಂದ ಹಾಗೆ ಇದು ಇರಾಕ್‌ನ ಪ್ರಪ್ರಥಮ ಮಾರ್ಜಾಲ ಹೊಟೇಲ್ ಎಂದು ಹೇಳಲಡ್ಡಿಯಿಲ್ಲ.

ಒಂದು ಬೆಕ್ಕು ಈ ಹೊಟೇಲ್‌ನಲ್ಲಿ ಒಂದು ರಾತ್ರಿಯನ್ನು ಕಳೆಯಬೇಕಾದರೆ, ಅದರ ಯಜಮಾನ 5 ಸಾವಿರ ಇರಾಕಿ ದಿನಾರ್ (4.20 ಡಾಲರ್) ಪಾವ ತಿಸಬೇಕಾಗುತ್ತದೆ. ಇಷ್ಟೊಂದು ಹಣಕ್ಕೆ ಬೆಕ್ಕುಗಳಿಗೆ ಇಲ್ಲಿ ರಾಜಾತಿಥ್ಯವೇ ದೊರೆಯುತ್ತದೆ. ಅವುಗಳಿಗೆ ಮೆತ್ತನೆಯ ಹಾಸಿಗೆ, ನಿಯಮಿತವಾದ ಊಟ, ಆರೋಗ್ಯ ತಪಾಸಣೆಯ ಸೌಲಭ್ಯ ದೊರೆಯುತ್ತದೆ. ಇದಲ್ಲದೆ ಆಟವಾಡಿ ಕೊಂಡಿರಲು ಪುಟ್ಟ ಆಟದ ಮೈದಾನವೂ ಇದೆ. ಇಲ್ಲಿ ಬೆಕ್ಕುಗಳಿಗೆ ಬಿಸಿಲಿನ ಬೇಗೆಯ ಬಾಧೆಯೂ ಇಲ್ಲ. ಯಾಕೆಂದರೆ ಇಡೀ ಕಟ್ಟಡದಲ್ಲಿ ಹವಾನಿಯಂತ್ರಿತ ವ್ಯವಸ್ಥೆಯಿದ್ದು, ಅತಿಥಿ ಬೆಕ್ಕುಗಳನ್ನು ಸದಾ ತಂಪಾಗಿಡುತ್ತದೆ.

ಹೊಟೇಲ್‌ನ ಮಾಲಕರಾದ ಮಾಕಿ ಅವರು ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಬೆಕ್ಕುಗಳನ್ನು ದತ್ತು ತೆಗೆದುಕೊಳ್ಳುವಂತೆ ಉತ್ತೇಜಿಸುತ್ತಿದ್ದಾರೆ. ಜನರು ದೂರದ ಸ್ಥಳಗಳಿಗೆ ಪ್ರವಾಸ ಹೋದಾಗ ನೆಮ್ಮದಿಯಿಂದ ಬೆಕ್ಕು ಗಳನ್ನು ತಮ್ಮ ಸುಪರ್ದಿಗೆ ವಹಿಸಬಹುದೆಂದು ಅವರು ಹೇಳುತ್ತಾರೆ.
ಸಾಕುಪ್ರಾಣಿಗಳ ಪಾಲನೆಯಿಂದ ಜನರು ಕರುಣಾಭರಿತ ಹೃದಯವುಳ್ಳವರಾಗುತ್ತಾರೆ ಹಾಗೂ ಹಿಂಸೆ, ಘರ್ಷಣೆಯಿಂದ ದೂರವಿರುತ್ತಾರೆಂದು ಮಾಕಿ ಅಭಿಪ್ರಾಯಿಸುತ್ತಾರೆ.


 

Writer - -ವಿಸ್ಮಯ

contributor

Editor - -ವಿಸ್ಮಯ

contributor

Similar News