ಗಿಳಿ, ಪಂಜರ ಮತ್ತು ರಂಗಾ

Update: 2018-04-15 05:58 GMT

ಎಪ್ಪತ್ತು-ಎಂಬತ್ತರ ದಶಕ, ಕರ್ನಾಟಕದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ರಂಗ ಬದಲಾವಣೆ ಕಂಡ ಕಾಲ. ನವ್ಯ ಸಾಹಿತ್ಯ, ಹೊಸ ಅಲೆಯ ಸಿನೆಮಾ, ಚಲನಶೀಲ ರಂಗಭೂಮಿಯ ಜೊತೆಗೆ ದಲಿತ-ಬಂಡಾಯ-ರೈತ ಚಳವಳಿಗಳು ಚಿಗುರೊಡೆದು ಕವಲಾಗಿ ಕರ್ನಾಟಕವನ್ನು ವ್ಯಾಪಿಸುತ್ತಿದ್ದ ಕಾಲ. ಎಲ್ಲ ಕ್ಷೇತ್ರಗಳಲ್ಲೂ ಸೃಜನಶೀಲ ಪ್ರತಿಭಾವಂತರು- ಜಗಳಗಂಟರು, ತಿಕ್ಕಲರು, ವ್ಯಸನಿಗರು- ಹೊರಹೊಮ್ಮಿದ ಕಾಲ. ಅಂತಹ ಕಾಲದ ಕೂಸು ಟಿ.ಎಸ್.ರಂಗಾ. ಅವರಲ್ಲಿ ಈ ಎಲ್ಲ ಗುಣವಿಶೇಷಗಳೂ ಇದ್ದವು.

ಟಿ.ಎಸ್.ರಂಗಾ ಹುಟ್ಟಿ(1949) ಬೆಳೆದದ್ದು ಬೆಂಗಳೂರಿನ ಎನ್ನಾರ್ ಕಾಲನಿಯಲ್ಲಿ. ಈ ಏರಿಯಾ ರಂಗಾ ಅವರ ತಂದೆ ಟಿ.ಆರ್.ಶಾಮಣ್ಣನವರ ಕರ್ಮಭೂಮಿ. ಮಾಗಡಿ ಮೂಲದ ಅಯ್ಯಂಗಾರರಾದ ಶಾಮಣ್ಣನವರು ಸಮಾಜ ಸೇವಕರು, ಸ್ವಾತಂತ್ರ್ಯ ಹೋರಾಟಗಾರರು. ಗಾಂಧೀಜಿಯವರ ತತ್ವ ಸಿದ್ಧಾಂತಗಳನ್ನು ತಮ್ಮ ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದ ಕಠೋರ ಶಿಸ್ತಿನವರು. ಖಾದಿ ಬಟ್ಟೆ, ಟೋಪಿ ಧರಿಸಿ, ಆಟೊ-ಸೈಕಲ್ನಲ್ಲಿ ಓಡಾಡುತ್ತಿದ್ದ ಸರಳ ಸಜ್ಜನರು. ಬಡವರ ಕುಂದುಕೊರತೆಗಳನ್ನು ಕೇಳಿ ಪರಿಹರಿಸುತ್ತಿದ್ದ ನಿಜಅರ್ಥದ ಬಡವರ ಬಂಧು. ನಗರ ಪಾಲಿಕೆ ಸದಸ್ಯರಾಗಿ, ನಾಲ್ಕು ಬಾರಿ ಶಾಸಕರಾಗಿ, ಸಂಸದರಾಗಿ ಆಯ್ಕೆಯಾದ ಜನಾನುರಾಗಿ ನಾಯಕರು. ಇವರ ಮಗನಾದ ಟಿ.ಎಸ್.ರಂಗಾ, ಅಪ್ಪನ ಹಾದಿ ಅರುಗಿಸಿ; ಪ್ರತಿಷ್ಠೆ, ಪ್ರಭಾವ ಮತ್ತು ಪ್ರಭಾವಳಿಯನ್ನು ಪಕ್ಕಕ್ಕಿಟ್ಟು; ಸಾಂಸ್ಕೃತಿಕ ರಂಗವನ್ನು ಆಯ್ಕೆ ಮಾಡಿಕೊಂಡರು.

ಬಿ.ವಿ.ಕಾರಂತ, ಕಂಬಾರ, ಕಾರ್ನಾಡ್, ಲಂಕೇಶ್, ವೈಎನ್‌ಕೆ, ಅನಂತಮೂರ್ತಿಯವರ ಒಡನಾಟಕ್ಕೆ ಬಿದ್ದರು. ಆ ಕಾಲಕ್ಕೆ ರಂಗಭೂಮಿಯಲ್ಲಿ ಹೆಸರು ಮಾಡಿದ್ದ ಬಿ.ವಿ.ಕಾರಂತರು ಹಯವದನ, ಸಂಕ್ರಾಂತಿ, ಈಡಿಪಸ್, ಜೋಕುಮಾರಸ್ವಾಮಿ, ಸತ್ತವರ ನೆರಳು, ಏವಂ ಇಂದ್ರಜಿತ್ ನಾಟಕಗಳ ಮೂಲಕ ಹವ್ಯಾಸಿ ರಂಗಭೂಮಿಗೆ ಹೊಸ ಕಳೆ ತಂದಿದ್ದರು. ಬೆನಕ ನಾಟಕ ತಂಡ ಕಟ್ಟಿ ಕಲಾವಿದರ ಬೆಳೆ ತೆಗೆದು, ನಾಡಿಗೆ ಕೊಡುಗೆಯಾಗಿ ನೀಡುತ್ತಿದ್ದರು. ಕಾರಂತರ ಗರಡಿಯ ಪೈಲ್ವಾನರಾದ ನಾಗಾಭರಣ, ಸುಂದರರಾಜ್, ಗಿರೀಶ್ ಕಾಸರವಳ್ಳಿ, ವೈಶಾಲಿ, ಪ್ರಮೀಳಾ ಜೋಷಾಯ್, ಕೋಕಿಲಾ ಮೋಹನ್‌ರ ಜೊತೆ ಟಿ.ಎಸ್.ರಂಗಾ ಕೂಡ ಒಬ್ಬರಾಗಿದ್ದರು. ರಂಗಾ ನಟನಾಗಿ, ಹಾಡುಗಾರನಾಗಿ, ನಿಪುಣ ನೇಪಥ್ಯಗಾರನಾಗಿ ಕಾರಂತರ ಅಚ್ಚುಮೆಚ್ಚಿನ ಶಿಷ್ಯನಾಗಿದ್ದರು. ರಂಗಭೂಮಿಯ ಒಳ-ಹೊರಗನ್ನು ಅರಿಯುತ್ತಲೇ ಅರಗಿಸಿಕೊಂಡು ಬೆಳೆದಿದ್ದರು. ಲಂಕೇಶರ ಆಪ್ತ ಬಳಗದಲ್ಲೂ ಗುರುತಿಸಿಕೊಂಡಿದ್ದ ರಂಗಾ, ಅವರ ‘ಪಲ್ಲವಿ’ ಚಿತ್ರದ ಲಂಕೇಶರ ಪಾತ್ರಕ್ಕೆ ಧ್ವನಿ ನೀಡಿದ್ದರು. ಆ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಾಗ, ತಮಗೇ ಬಂದಷ್ಟು ಖುಷಿಗೊಂಡಿದ್ದರು. ಏತನ್ಮಧ್ಯೆ 1978ರಲ್ಲಿ ಕೋಡಳ್ಳಿ ಶಿವರಾಂ ನಿರ್ಮಾಣದ ‘ಗ್ರಹಣ’ ಚಿತ್ರಕ್ಕೆ ಗೆಳೆಯ ಟಿ.ಎಸ್.ನಾಗಾಭರಣರೊಂದಿಗೆ ಚಿತ್ರಕಥೆ ರಚಿಸಿದ್ದ ರಂಗಾ, ಮೊದಲ ಪ್ರಯತ್ನದಲ್ಲಿಯೇ ರಾಷ್ಟ್ರಪ್ರಶಸ್ತಿ ಪಡೆದು ಕುತೂಹಲ ಕೆರಳಿಸಿದ್ದರು. ಆನಂತರ ಆಲನಹಳ್ಳಿ ಕೃಷ್ಣರ ಕತೆಯಾಧರಿಸಿದ ‘ಗೀಜಗನಗೂಡು’ ಚಿತ್ರದ ಮೂಲಕ, ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮಿದರು.

1980ರಲ್ಲಿ ರಂ.ಶ.ಲೋಕಾಪುರ ಕತೆಯನ್ನು ಆಧರಿಸಿ ‘ಸಾವಿತ್ರಿ’ ಚಿತ್ರ ಮಾಡಿದರು. ಉತ್ತರ ಕರ್ನಾಟಕದ ಎರಡು ಫ್ಯೂಡಲ್ ಕುಟುಂಬಗಳ ಜಿದ್ದಿಗೆ, ದ್ವೇಷಕ್ಕೆ, ಪ್ರತಿಷ್ಠೆಗೆ ಮುಗ್ಧ ಜೀವಗಳು ಬಲಿಯಾಗುವ ಮನ ಕಲಕುವ ಕತೆಯನ್ನು ರಂಗಾ, ಅದ್ಭುತವಾಗಿ ಚಿತ್ರಿಸಿದ್ದರು. ಇದು ರಂಗಾ ಅವರಲ್ಲಿನ ಪ್ರತಿಭೆ, ಶಕ್ತಿ, ಸಾಮರ್ಥ್ಯವನ್ನೆಲ್ಲ ಬಸಿದಿಟ್ಟ ಚಿತ್ರವಾಗಿತ್ತು. ಅಧ್ಯಯನಯೋಗ್ಯ ಚಿತ್ರವಾಗಿ ದಾಖಲಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ, ಪುರಸ್ಕಾರಗಳಿಗೆ ಪಾತ್ರವಾಗಿ ರಂಗಾ ಅವರನ್ನು ಉತ್ತುಂಗಕ್ಕೇರಿಸಿತ್ತು. ಆ ನಂತರ ಅವರು ‘ಗಿದ್’ ಎಂಬ ಹಿಂದಿ ಚಿತ್ರ ನಿರ್ದೇಶಿಸಿದರು. ಆ ಚಿತ್ರದಲ್ಲಿ, ಇವತ್ತಿನ ಹಿಂದಿ ಚಿತ್ರೋದ್ಯಮದ ದಂತಕತೆಗಳಾಗಿರುವ ಓಂಪುರಿ, ಸ್ಮಿತಾ ಪಾಟೀಲ್, ನಾನಾ ಪಾಟೇಕರ್ ನಟಿಸಿದ್ದು, ಅದರಲ್ಲೂ ನಾನಾಗೆ ಅದು ಮೊದಲ ಚಿತ್ರವಾಗಿದ್ದು ವಿಶೇಷವಾಗಿತ್ತು. ಉತ್ತರ ಕರ್ನಾಟಕದ ದೇವದಾಸಿಯರ ಸಂಕಟ-ಸಂಕಷ್ಟದ ಕತೆ ಹೇಳುವ ‘ಗಿದ್’ ಸಂಚಲನ ಉಂಟುಮಾಡಿದ ಚಿತ್ರವಾಗಿತ್ತು.

1982ರಲ್ಲಿ ಗದಗ ಸುತ್ತಮುತ್ತ ಪರಿಶಿಷ್ಟ ಜಾತಿ-ಪಂಗಡದವರ ಕುರಿತು ‘ನೊಂದವರ ಹಾಡು’ ಸಾಕ್ಷ್ಯ ಚಿತ್ರ ನಿರ್ಮಿಸಿದ ರಂಗಾ, ಉಮಾಶ್ರೀ ಅವರನ್ನು ಮೊತ್ತಮೊದಲ ಬಾರಿಗೆ ಕ್ಯಾಮೆರಾ ಎದುರು ನಿಲ್ಲಿಸಿದ್ದರು. ಚಂದ್ರಶೇಖರ ಕಂಬಾರರ ‘ತುಕ್ರನ ಕನಸು’ ಮತ್ತು ಡಾ.ಬೆಸಗರಹಳ್ಳಿ ರಾಮಣ್ಣರ ‘ಚಲುವನ ಪರಂಗಿ ಗಿಡಗಳು’ ಕತೆ ಆಧರಿಸಿ ಕಿರುಚಿತ್ರಗಳನ್ನು ನಿರ್ದೇಶಿಸಿದ್ದರು. ವಾರ್ತಾ ಇಲಾಖೆಗಾಗಿ ಶಂ.ಬಾ.ಜೋಷಿ ಮತ್ತು ಎಚ್.ನರಸಿಂಹಯ್ಯ- ಸಾಕ್ಷ್ಯ ಚಿತ್ರಗಳು ಇವತ್ತಿಗೂ ಮಾದರಿ ಎಂಬುದು ಹಲವರ ಅನಿಸಿಕೆ. ಅಪ್ಪರ್ ಕೃಷ್ಣಾ, ಲೆಪ್ರಸಿ, ಕ್ಯಾನ್ಸರ್ ಬಗೆಗಿನ ಕಿರುಚಿತ್ರಗಳನ್ನು ನಿರ್ಮಿಸಿದ ರಂಗಾ, ಆ ನಂತರ ಜನರಿಂದ ದೂರವಾಗಿ; ಕತೆ, ಚಿತ್ರಕತೆ ಮಾಡುವುದರಲ್ಲಿ ಮುಳುಗಿಹೋದರು. ಹೊಸ ಜಗತ್ತು, ಜನರೊಂದಿಗೆ ಬೆರೆಯದೆ ಬದಲಾವಣೆಗೆ ಬೆನ್ನಾದರು. ಬಣ್ಣದ ಜಗತ್ತಿನ ಕನಸುಗಾರ, ದಿನಗಳೆದಂತೆ ಬಣ್ಣ ಕಳೆದುಕೊಂಡು ಕಳಾಹೀನರಾದರು. ಸಕ್ಕರೆ ಕಾಯಿಲೆ ನೆಪವಾಗಿ, ಗೂಡು ಬಿಟ್ಟು ಹೊರಬರದಂತಾದರು. ಟಿ.ಎಸ್.ರಂಗಾ ಅವರಿಗೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಜೀವರಾಜ ಆಳ್ವ ಮತ್ತು ವಿ.ಎಸ್.ಕೃಷ್ಣಯ್ಯರ್ ತೀರಾ ಆತ್ಮೀಯರಾಗಿದ್ದರು.

80ರ ದಶಕದಲ್ಲಿ ಇವರದೇ ಅಧಿಕಾರವಿತ್ತು. ಆದರೆ ಸ್ವಾಭಿಮಾನಿ ರಂಗಾ, ಮುಲಾಜಿಗೆ ಒಳಗಾಗಬೇಕಾಗುತ್ತದೆಂದು ದೂರವಿದ್ದರು. ಅಪ್ಪನ ಪ್ರಭಾವವಿಲ್ಲದೆ, ಅಧಿಕಾರಸ್ಥರ ನೆರವಿಲ್ಲದೆ ಸ್ವಂತ ಶಕ್ತಿಯ ಮೇಲೆ ನಿಲ್ಲಬೇಕು, ಸಾಧಿಸಿ ತೋರಬೇಕೆಂಬ ಕೆಟ್ಟ ಹಠವಿತ್ತು. ‘ಸಾವಿತ್ರಿ’ ಚಿತ್ರ ಅದನ್ನು ಸಾಬೀತುಪಡಿಸಿದ್ದರೂ, ಮಹೋನ್ನತವಾದದ್ದು ಮುಂದಿದೆ ಎನ್ನುವ ಮಹತ್ವಾಕಾಂಕ್ಷೆ ಇತ್ತು. ಆದರೆ ವಯಸ್ಸು, ಉತ್ಸಾಹ, ಆರೋಗ್ಯ ಕೈಕೊಟ್ಟಿತ್ತು. ಬದಲಾಗದ್ದು ಜನರಿಂದ ದೂರವಿರಿಸಿತು. ಎನ್ನಾರ್ ಕಾಲನಿಯ ಕಚೇರಿಯೇ ಪ್ರಪಂಚವಾಯಿತು. ರಂಗಾ ಅವರಿಗೆ ಉತ್ತರ ಕರ್ನಾಟಕವೆಂದರೆ ತವರುಮನೆಯಷ್ಟೆ ಪ್ರೀತಿ. ಆ ಜನರ ಮುಗ್ಧತೆ, ನಿಷ್ಕಾರಣ ಪ್ರೀತಿ, ಲಿಂಗಾಯತರ ಫ್ಯೂಡಲ್‌ಗಿರಿ, ವಾಡೆಗಳೆಂಬ ಜಗತ್ತು, ದೇವದಾಸಿಯರ ಸ್ಥಿತಿ, ಹಿಂದುಳಿದಿರುವಿಕೆ- ಅವರ ಮಾತುಗಳಲ್ಲಿ ಆಗಾಗ ಬಂದುಹೋಗುತ್ತಿದ್ದವು. ಇನ್ನು ಸಾಹಿತಿ-ಕಲಾವಿದರಂತೂ ರಂಗಾ ಅವರ ಆಫೀಸನ್ನೇ ಮನೆ ಮಾಡಿಕೊಂಡಿದ್ದರು.

ಬಿ.ಸಿ.ದೇಸಾಯಿ, ಎಂ.ಎಸ್.ಕೆ.ಪ್ರಭು, ಕೆ.ಸದಾಶಿವರ ಕತೆಗಳನ್ನು ಮತ್ತೆ ಮತ್ತೆ ಓದುತ್ತಿದ್ದರು. ರಾವ್ ಬಹದ್ದೂರ್‌ರ ‘ಗ್ರಾಮಾಯಣ’ದ ಬಗ್ಗೆ ಅತೀ ಎನ್ನಿಸುವಷ್ಟು ಚರ್ಚಿಸುತ್ತಿದ್ದರು. ಹಿಂದಿಯ ಬಿಮಲ್ ರಾಯ್‌ರ ‘ದೋ ಬಿಘಾ ಜಮೀನ್’ ಚಿತ್ರದ ಗೆಲುವಿನಲ್ಲಿ ಚಿತ್ರಕತೆ ರಚಿಸಿದ ಹೃಷಿಕೇಷ್ ಮುಖರ್ಜಿ ಪಾತ್ರದ ಬಗ್ಗೆ ತರ್ಕಬದ್ಧ ವಾದ ಮಂಡಿಸುತ್ತಿದ್ದರು. ಪರ್ಲ್ ಎಸ್.ಬಕ್ ಕತೆಯಾಧರಿಸಿದ ಹಾಲಿವುಡ್‌ನ ‘ದಿ ಗುಡ್ ಅರ್ಥ್’ ಚಿತ್ರ ಕುರಿತು ದಿನಗಟ್ಟಲೆ ಮಾತನಾಡುತ್ತಿದ್ದರು. ಕುತೂಹಲಕರ ಸಂಗತಿ ಎಂದರೆ, ಗ್ರಾಮಾಯಣ, ದೋ ಬಿಘಾ, ಗುಡ್ ಅರ್ಥ್- ಈ ಮೂರೂ ಕತೆಗಳಲ್ಲಿ ಗ್ರಾಮೀಣ ಬದುಕು ಮತ್ತು ಕೃಷಿಕರ ಆತ್ಮವಿತ್ತು. ಅವುಗಳತ್ತ ರಂಗಾ ಅವರ ಚಿತ್ತವಿತ್ತು, ಚಿತ್ರ ಮಾಡುವ ಅದಮ್ಯ ಆಸೆಯಿತ್ತು. ರಂಗಾ ಅವರ ಬಳಿ ಹಳೆಯ ಎಲ್ಲಾ ಭಾಷೆಯ ಅತ್ಯುತ್ತಮ ಚಿತ್ರಗಳ ದೊಡ್ಡ ಸಂಗ್ರಹವೇ ಇತ್ತು. ಹಾಗೆಯೇ ಪುಸ್ತಕಗಳು. ನೋಡಲೇಬೇಕಾದ ಚಿತ್ರಗಳ ವೀಡಿಯೊ ಕ್ಯಾಸೆಟ್, ಸಿಡಿಗಳನ್ನು ಹಾಗೂ ಓದಲೇಬೇಕಾದ ಪುಸ್ತಕಗಳನ್ನು ಕಾರ್ಟೂನ್ ಬಾಕ್ಸ್ ಗಳಲ್ಲಿ ಅಚ್ಚುಕಟ್ಟಾಗಿ ಪ್ಯಾಕ್ ಮಾಡಿ, ಲೇಬಲ್ ಅಂಟಿಸಿ ಸಾಲಾಗಿ ಜೋಡಿಸಿದ್ದರು. ಆಸ್ತಿಯಂತೆ ಕಾಪಾಡಿಕೊಂಡು ಬಂದಿದ್ದರು.

ನಾನು ಇತ್ತೀಚಿನ ಲೆಬನೀಸ್, ಮೆಕ್ಸಿಕನ್, ಇರಾನಿ ಸಿನೆಮಾಗಳ ಬಗ್ಗೆ ಮಾತನಾಡಿದರೆ, ಅವರು ಕುರೊಸವಾ, ಸತ್ಯಜಿತ್ ರೇ, ಸ್ಟಾನ್ಲಿ ಕ್ಯುಬ್ರಿಕ್, ಡಿಸಿಕಾ, ಆಲ್‌ಫ್ರೆಡ್ ಹಿಚ್‌ಕಾಕ್, ಕಪೊಲ, ಮಾರ್ಟಿನ್ ಸ್ಕಾರ್ಸಿಸ್, ವುಡಿ ಅಲೆನ್, ರೊಮನ್ ಪೊಲಾನ್‌ಸ್ಕಿ, ಬಿಲ್ಲಿ ವೈಲ್ಡರ್, ಬಿಮಲ್ ರಾಯ್, ಗುರುದತ್, ರಾಬರ್ಟ್ ಝಮಿಕಿಸ್, ಫೆಲಿನಿ, ಚಾರ್ಲಿ ಚಾಪ್ಲಿನ್ ಬಗ್ಗೆ ಮಾತನಾಡುತ್ತಿದ್ದರು. ಅಷ್ಟೇ ಅಲ್ಲ, ಕ್ಲಾಸಿಕ್ ಸಿನೆಮಾಗಳ ಬಗ್ಗೆ ತಿಳಿಸಿ, ‘‘ನೋಡ್ಕೊಂಡು ಬನ್ನಿ ಮಾತಾಡೋಣ’’ ಎನ್ನುತ್ತಿದ್ದರು. ‘‘ಫಾರ್ ಫ್ರಂ ದಿ ಮ್ಯಾಡಿಂಗ್ ಕ್ರೌಡ್ ಮತ್ತು ದ ಬ್ರಿಡ್ಜ್ ಆನ್ ದಿ ರಿವರ್ ಕ್ವಾಯ್ ಸಿನೆಮಾಗಳ ಸಿಡಿ ಮಿಸ್ಸಾಗಿದೆ, ಬೇಕಿತ್ತಲ್ಲ’’ ಎಂದು ಕೇಳಿದ್ದರು. ಆನ್‌ಲೈನ್‌ನಲ್ಲಿ ಸಿಗುತ್ತೆ ಎಂದರೆ, ‘‘ಕ್ವಾಲಿಟಿ ಚೆನ್ನಾಗಿರಲ್ಲ, ಅಲ್ಲಿ ನೋಡಿದರೆ ನೋಡಿದಂಗೆ ಆಗಲ್ಲ, ಸಿಡಿಯೇ ಆಗಬೇಕು’’ ಎಂದಿದ್ದರು.

ಸಂಜೆಯ ಗೋಷ್ಠಿಗಳಲ್ಲಿ ತಮ್ಮ ಮೆಚ್ಚಿನ ಡಿಎಸ್ಪಿಬ್ಲಾಕ್ ವ್ಹಿಸ್ಕಿ, ಸಿಗರೇಟು ಜೊತೆಗೆ ಬಿಸಿ ಇಡ್ಲಿ ಇಟ್ಟುಕೊಂಡು, ಕಳೆದ ಕಾಲದ ನೆನಪುಗಳನ್ನು ಮೆಲುಕು ಹಾಕುವುದೆಂದರೆ ಎಲ್ಲಿಲ್ಲದ ಉತ್ಸಾಹ ಮೈದುಂಬಿಕೊಳ್ಳುತ್ತಿತ್ತು. ಸ್ವಲ್ಪಹೆಚ್ಚಾದಾಗ, ಗುರು ಬಿ.ವಿ.ಕಾರಂತರ ರಂಗಗೀತೆ, ‘ಗಿಳಿಯು ಪಂಜರದೊಳಿಲ್ಲ... ರಾಮ’ವನ್ನು ಮನದುಂಬಿ ಹಾಡುತ್ತಿದ್ದರು. ಗಿಳಿಯೇ ಕಾರಂತರಾಗಿ, ಗೀತೆಯೇ ಒಡಲಾಳದ ನೋವಾಗಿ ಹರಿಯುತ್ತಿತ್ತು. ಸಿನೆಮಾ ಬದುಕಿನ ಆರಂಭದ ಎನ್‌ಎಂಎಚ್ ಹೊಟೇಲ್ ವಾಸ್ತವ್ಯದ ದಿನಗಳು ಧಾರಾವಾಹಿಯಾಗುತ್ತಿದ್ದವು. ಲಂಕೇಶ್, ವೈಎನ್‌ಕೆ, ನಿಸಾರ್, ನಾಡಿಗ್ ಬಗೆಗಿನ ಸ್ವಾರಸ್ಯಕರ ಸಂಗತಿಗಳು ಸುಳಿದಾಡುತ್ತಿದ್ದವು. ಅಲ್ಲಿ ಅಭಿಮಾನವೂ, ಮನುಷ್ಯರಾಗಿ ನೋಡುವ ಕ್ರಮವೂ ಕಾಣುತ್ತಿತ್ತು. ಗೆಳೆಯರಾದ ಕಾಸರವಳ್ಳಿ, ನಾಗಾಭರಣರ ಬಗ್ಗೆ, ‘‘ಉಳಿದಿದ್ದಾರೆ, ಉತ್ಕೃಷ್ಟವಾದದ್ದು ಬರಲಿಲ್ಲ’’ ಎನ್ನುತ್ತಿದ್ದರು. ಪ್ರತಿದಿನ ಬೆಳಗ್ಗೆ ತಪ್ಪದ ವಾಕ್. ಹತ್ತಕ್ಕೆಲ್ಲ ಆಫೀಸು. ಬರುವಾಗ ಬಗಲಲ್ಲೊಂದು ಬಟ್ಟೆ ಬ್ಯಾಗು, ಬ್ಯಾಗಿನಲ್ಲಿ ತಿಂಡಿಯ ಡಬ್ಬಿ, ಇನ್ಸುಲಿನ್ ಸಿರಿಂಜು. ಹಾಲು ತರುವುದು, ಗೆಳೆಯರೊಂದಿಗೆ ಕಾಫಿ ಕುಡಿಯುವುದು ನೆಪವಾಗಿ, ಸಿಗರೇಟು ಸೇದಿಬಿಡುತ್ತಿದ್ದರು. ಆಫೀಸ್‌ನಲ್ಲಿ ಥರಾವರಿ ಗಣೇಶನ ಕಲಾಕೃತಿಗಳು, ಆ್ಯಶ್ ಟ್ರೇಗಳು, ಪೆನ್‌ಗಳನ್ನು ಸಂಗ್ರಹಿಸಿದ್ದರು. ಕಂಪ್ಯೂಟರ್, ಇಂಟರ್‌ನೆಟ್, ಫೋಟೋಶಾಪ್ ಬಗ್ಗೆ ಅರಿವಿದ್ದು, ಒಬ್ಬರೇ ಕೂತು ಟೈಪಿಸುತ್ತಿದ್ದರು. ಕೆಲವರು, ‘ಎಫ್‌ಬಿಐ-ಸಿಐಎ ಏಜೆಂಟ್’ ಎಂದು ಗುಮಾನಿ ವ್ಯಕ್ತಪಡಿಸಿದ್ದೂ ಉಂಟು. ಡಾಕ್ಯುಮೆಂಟೇಷನ್‌ನಲ್ಲಿ ಎತ್ತಿದ ಕೈ. ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟುತನ, ಕಲಾತ್ಮಕತೆ, ಸೊಗಸುಗಾರಿಕೆ ಎದ್ದು ಕಾಣುತ್ತಿತ್ತು. ಬಟ್ಟೆ, ಬೂಟು, ಹ್ಯಾಟು- ದೇವಾನಂದ್ ಹಾಗೂ ಕ್ಲಿಂಟ್ ಈಸ್ಟ್‌ವುಡ್ ಆಯ್ಕೆಯಂತಿದ್ದವು. ಎಲ್ಲಿಗಾದರೂ ಹೋಗಬೇಕೆಂದರೆ ಆಟೋ; ಏನಾದರೂ ಕೆಲಸವಾಗಬೇಕಾದರೆ ಜನ ಸಿದ್ಧರಾಗಿ ನಿಂತಿರುತ್ತಿದ್ದರು. ಕಾಲನಿ ಜನರ ನಿಷ್ಕಲ್ಮಶ ಪ್ರೀತಿಗೆ ರಂಗಾ ಮೌನವಾಗುತ್ತಿದ್ದರು.

ಗಣ್ಯರು, ಸೆಲಬ್ರಿಟಿಗಳು, ಅಧಿಕಾರಸ್ಥರನ್ನು ನೋಡದೆ ನಿರ್ಲಕ್ಷಿಸುತ್ತಿದ್ದರು. ಗೆಳೆಯರ ಸಣ್ಣತನಗಳನ್ನು ಕಂಡು ಖಿನ್ನರಾಗುತ್ತಿದ್ದರು. ‘ಸಾವಿತ್ರಿ’ ಚಿತ್ರ ಮಾಡುವಾಗ ಸಾವಿತ್ರಿ ಪಾತ್ರ ನಿರ್ವಹಿಸಿದ್ದ ಅಶ್ವಿನಿಯವರನ್ನೇ ರಂಗಾ ಮದುವೆಯಾಗಿದ್ದರು. ಅಶ್ವಿನಿ ಕೂಡ ಪ್ರತಿಭಾವಂತ ನಟಿ. ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿದ್ದರು. ಇತ್ತೀಚಿಗೆ ರಂಗಾ ಅವರಿಗೆ ಡಯಾಬಿಟಿಸ್ ಹೆಚ್ಚಾಗಿ, ಸಿಗರೇಟು ಮತ್ತು ಗುಂಡು ಬಿಟ್ಟಿದ್ದರು. ಆಗಾಗ ಆರೋಗ್ಯ ಕೈಕೊಟ್ಟು ರಂಗದೊರೈ, ಅಪೊಲೊ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆದಿದ್ದರು. ಏತನ್ಮಧ್ಯೆ ರಸ್ತೆಯಲ್ಲಿಯೇ ಕುಸಿದುಬಿದ್ದು ಆತಂಕ ಸೃಷ್ಟಿಸಿದ್ದರು. ಇದನ್ನೆಲ್ಲ ನೋಡಿದ ಅಶ್ವಿನಿಯವರು ನಟನೆ ಬಿಟ್ಟು, ರಂಗಾರನ್ನು ಮಗುವಿನಂತೆ ಆರೈಕೆ ಮಾಡುತ್ತಿದ್ದರು. ಮಗಳು ತನ್ವಿಗೆ ಮದುವೆ ಮಾಡಿ, ಮೊಮ್ಮಗು ಬಂದಾಗ, ಅದರೊಂದಿಗೆ ಆಡುತ್ತಾ, ರಂಗಾ ನಿಜಕ್ಕೂ ಮಗುವೇ ಆಗಿಹೋಗಿದ್ದರು. ಇಂತಹ ರಂಗಾ ಅವರಿಗೆ ರಂಗಭೂಮಿ, ಸಿನೆಮಾ ಕ್ಷೇತ್ರಗಳ ಬಗ್ಗೆ ಅಪಾರ ಜ್ಞಾನವಿತ್ತು. ಅಪರಿಮಿತ ಅನುಭವವಿತ್ತು. ಭಿನ್ನ ನೋಟವಿತ್ತು. ಅವರೂ ಹಂಚಲಿಲ್ಲ, ಬೇಕಿದ್ದವರೂ ಬಳಸಿಕೊಳ್ಳಲಿಲ್ಲ. ಈಗ ಗಿಳಿಯೂ ಪಂಜರದೊಳಿಲ್ಲ...

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News