ಅಸ್ಪಶ್ಯತೆ ನಿವಾರಣೆಯ ಮಕ್ಕಳಾಟ

Update: 2018-04-19 18:36 GMT

ಭಾಗ-2

ಬೌದ್ಧ ಧರ್ಮದ ವಿರುದ್ಧ ಬೆಳೆದ ಪ್ರವೃತ್ತಿ ಮತ್ತೆ ಜಾತಿಭೇದದ ಕಡೆ ವಾಲಿತು. ಅದಕ್ಕೆ ಸರಿಯಾದ ಮಾರ್ಗ ಸಿಗದೆ ದಿನಗಳೆದಂತೆ ಅದು ಹೆಚ್ಚೆಚ್ಚು ಗಟ್ಟಿಯಾಗುತ್ತ ಹೋಗಿ ಕಡೆಗೆ ಯಾವ ಸ್ಥಿತಿ ತಲುಪಿತೆಂದರೆ ಮೊದಲಿನ ನಾಲ್ಕು ಜಾತಿಗಳು ನಾಲ್ಕು ಸಾವಿರ ಜಾತಿಗಳು ಹಾಗೂ ಉಪ ಜಾತಿಗಳಾಗಿ ಹುಟ್ಟಿಕೊಂಡವು. ಜಾತಿ ಬೇರೆ ಉಪಜಾತಿಗಳು ಬೇರೆ ಅನ್ನುವಂತಹ ಭಾಗಗಳಾಗಿ ಮಡಿ ಮೈಲಿಗೆಗಳ ಕಲ್ಪನೆಗಳು ಎಷ್ಟು ಬೆಳೆದುವೆಂದರೆ ಹದಿನಾರನೆಯ ಶತಮಾನದಲ್ಲಿ ಸಾಧುಸಂತರು ಸತ್ಯಶೋಧವೆಂಬ ಕೊಡಲಿಪೆಟ್ಟನ್ನು ಎಷ್ಟೇ ಹೊಡೆದರೂ ಅಸ್ಪಶ್ಯರೆಂಬ ಪೊಗದಸ್ತಾಗಿ ಬೆಳೆದ ಮರ ಅವರ ಕೈಯಿಂದ ಅಲುಗಾಡಿಸಲೂ ಆಗಲಿಲ್ಲ.

ಆಧುನಿಕ ಕಾಲದ ಅಸ್ಪಶ್ಯತೆ ನಿವಾರಣೆಯ ಪ್ರಯತ್ನ ಬ್ರಿಟಿಷ್ ರಾಜ್ಯದಿಂದ ಆರಂಭವಾಗಿದೆ ಎಂದು ಹೇಳಬಹುದು. ಈ ಕಾಲದ ಮೊದಲ ಸುಧಾರಕರೆಂದರೆ ರಾಜಾರಾಮ್ ಮೋಹನ್‌ರಾಯ್. ಸತಿಪದ್ಧತಿಯಂತಹ ಅನಿಷ್ಟ ಸಾಮಾಜಿಕ ಆಚರಣೆಗಳು ರಾಜಾರಾಮ್ ಮೋಹನ್‌ರಾಯ್ ಅವರ ಪ್ರಯತ್ನದಿಂದ ನಿಂತು ಹೋದವಾದರೂ ಸಾಮಾಜಿಕ ಪ್ರಶ್ನೆಗಳಿಗಿಂತ ಧಾರ್ಮಿಕ ಪ್ರಶ್ನೆಗಳ ಬಗ್ಗೆಯೇ ಅವರ ಒಲವು ಹೆಚ್ಚಿತ್ತು ಅನ್ನುವುದು ನಿರ್ವಿವಾದ. ಎಲ್ಲಿಯವರೆಗೆ ಧಾರ್ಮಿಕ ಮತಗಳ ಹಾಗೂ ಅವುಗಳ ಜೊತೆ ಸುಳ್ಳುಗಳ ಚರ್ಚೆ ನಡೆದಿತ್ತೋ ಅಲ್ಲಿಯವರೆಗೆ ಸಾಮಾಜಿಕ ಪ್ರಶ್ನೆಗಳ ಕಡೆ ಯಾರೂ ಗಮನ ಕೊಡಲಿಲ್ಲ. ರಾಜಕೀಯ ಚಳವಳಿ ಆರಂಭವಾದಾಗಿನಿಂದ ಸಾಮಾಜಿಕ ಪ್ರಶ್ನೆಗಳು ಎದುರಾಗಲಾರಂಭಿಸಿದವು. ಏಕೆಂದರೆ ಸಾಮಾಜಿಕ ಪುನರ್‌ಘಟನೆಯ ಪ್ರಶ್ನೆಯನ್ನು ಹಿಂದೂ ಜನರು ಪರಿಹರಿಸದ ಹೊರತು ರಾಜಕೀಯ ಸ್ವಾತಂತ್ರದ ಚಮಚದಷ್ಟು ನೀರನ್ನು ಕೂಡ ಹಿಂದೂ ರಾಷ್ಟ್ರಕ್ಕೆ ಅರಗಿಸಿಕೊಳ್ಳುವುದು ಸಾಧ್ಯವಿಲ್ಲ, ವಾಂತಿಯಾದೀತು! ಅನ್ನುವ ಎಚ್ಚರಿಕೆ ಕೊಡುವ ಪಕ್ಷವೊಂದಿತ್ತು. ಕೇವಲ ರಾಷ್ಟ್ರೀಯ ಚಳವಳಿಗಳನ್ನಷ್ಟೇ ಮಾಡಬೇಕು ಅಂದುಕೊಂಡವರು ‘ರಾಷ್ಟ್ರೀಯ ಸಭೆ’ಗಿಂತ ಗಟ್ಟಿಯಾದ ಅಥವಾ ಅದರಷ್ಟೇ ಗಟ್ಟಿಯಾದ ಸಾಮಾಜಿಕ ಸಭೆಯೊಂದನ್ನು ಸ್ಥಾಪಿಸಿದರು.

ಈ ಎರಡು ಪಕ್ಷಗಳಲ್ಲಿ ಮೊದಲು ಯಾವುದು? ಸಾಮಾಜಿಕವೇ ಇಲ್ಲ ರಾಜಕೀಯವೇ? ಅನ್ನುವ ಪ್ರಶ್ನೆಗಳ ಮೇಲೆ ಕೆಲವು ವರ್ಷ ವಾದವಿವಾದಗಳಾದವು. ಅದರಲ್ಲಿ ರಾಜಕೀಯ ಪ್ರಶ್ನೆ ಮೊದಲು ಅನ್ನುವವರು ಸೋತಿದ್ದರೆ ಅಸ್ಪಶ್ಯತೆಯಂತಹ ಸಾಮಾಜಿಕ ಪ್ರಶ್ನೆ ಆದಷ್ಟು ಬೇಗ ಪರಿಹರಿಸಲ್ಪಡುತ್ತಿತ್ತು. ಆದರೆ ಇಷ್ಟರಿಂದಲೇ ಸಾಮಾಜಿಕ ಪಕ್ಷ ಮೂಲತಃ ವಲಹೀನವಾದದ್ದು ಎಂದು ಯೋಚಿಸುವುದು ತಪ್ಪು . ಜಾತಿ ಆಧಾರಿತ ಪ್ರಶ್ನೆಗಳಿಗೆ ಸಾಮಾಜಿಕ ಸ್ವರೂಪ ಕೊಟ್ಟದ್ದರಿಂದಲೇ ಈ ಪಕ್ಷ ಪರಾಭವ ಕಾಣಬೇಕಾಯಿತು. ಅನೇಕ ಕಾರಣಗಳಿಂದ ಸಾಮಾಜಿಕ ಪ್ರಶ್ನೆಗಳು ಉದ್ಭವಿಸುತ್ತವೆ. ಕೆಲವೊಮ್ಮೆ ಅನಿಷ್ಟ ಆಚಾರಗಳಿಂದ, ಕುಲದ ಬಗ್ಗೆಯಿರುವ ಅಂಧವಿಶ್ವಾಸದಿಂದ ಉದ್ಭವಿಸಿದರೆ ಕೆಲವೊಮ್ಮೆ ದೇಶಾಚಾರದಿಂದಲೂ ಉದ್ಭವಿಸುತ್ತದೆ. ಕುಲಾಚಾರದಲ್ಲಿ ಉಗಮವಾಗುವ ಪ್ರಶ್ನೆಗಳ ವ್ಯಾಪ್ತಿ ಆ ಕುಲದ ಜನರಮಟ್ಟಿಗಷ್ಟೇ ಸಂಬಂಧಿಸಿದ್ದಿರುತ್ತದೆ. ಆದರೆ ದೇಶಾಚಾರದಲ್ಲಿ ಹುಟ್ಟುವ ಪ್ರಶ್ನೆಗಳು ಅ ಇಡೀ ದೇಶದ ಜನತೆಯ ಪ್ರಶ್ನೆಗಳಾಗುತ್ತವೆ. ಆದರೆ ಸಾಮಾಜಿಕ ಪರಿಷತ್ತಿನ ಸುಧಾರಕರಿಗೆ ಈ ವ್ಯತ್ಯಾಸ ತಿಳಿಯಲಿಲ್ಲ.

ಆದ್ದರಿಂದಲೇ ಜಾತಿಭೇದ, ಹಾಗೂ ಸ್ಪರ್ಶಭೇದ ಅನ್ನುವಂತಹ ಸರ್ವಜನವ್ಯಾಪಿ ಪ್ರಶ್ನೆಗಳನ್ನು ಮರೆತು ವಿಧವೆಯರ ಕೇಶವಪನ, ವಿಧವಾ ವಿವಾಹ ಹಾಗೂ ಬಾಲ್ಯ ವಿವಾಹದಂತಹ ಕುಲವಾಚಕ ಪ್ರಶ್ನೆಗಳ ವಿರುದ್ಧವೇ ಯುದ್ಧ ಸಾರಲಾಯಿತು. ಈ ಪ್ರಶ್ನೆಗಳು ಸಾಮಾಜಿಕವಾಗಿದ್ದರೂ ರಾಜಕೀಯ ಬೇಡಿಕೆಗಳ ಅಡ್ಡ ಅವು ಬರುವಂತಿರಲಿಲ್ಲ. ಆದ್ದರಿಂದಲೇ ಕೈ.ತೆಲಾಂಗ್ ಪ್ರಭೃತಿಯಂತಹ ಮಹಾನ್ ಜನರಿಗೆ ಸಾಮಾಜಿಕ ಪರಿಷತ್ತಿನ ಬುದ್ಧಿವಾದ ಇಷ್ಟವಾಗಲಿಲ್ಲ. ಆದರೆ ಅವರು ಜಾತಿಭೇದ ಹಾಗೂ ಅಸ್ಪಶ್ಯತೆಯಂತಹ ಸಾಮಾಜಿಕ ಅನ್ಯಾಯದ ಆಧಾರ ಮುಚ್ಚಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅವರ ದೃಷ್ಟಿ ಕುಲಾಚಾರ ದಾಟಿ ಮುಂದೆ ಹೋಗಲೇ ಇಲ್ಲ. ಸ್ವಜಾತಿ ಜನರ ಶುದ್ಧಿ ಮಾಡುವುದರಲ್ಲೇ ಅವರು ತಮ್ಮ ಸಮಯವನ್ನೆಲ್ಲ ಕಳೆದರು ಹಾಗೂ ಸಾಮಾಜಿಕ ಸುಧಾರಣೆಯ ಜಪ ಮಾಡಿಯೂ ಕೂಡ ಜಾತಿಭೇದ ಹಾಗೂ ಸ್ಪರ್ಶಭೇದವನ್ನು ಹಾಗೇ ಇಟ್ಟು ಹೋದರು.

ಈ ಆಧುನಿಕ ಕಾಲದ ಸಾಮಾಜಿಕ ಪರಿಷತ್ತಿನ ಜಾಗದಲ್ಲಿ ಈ ಹೊಸ ಸುಧಾರಣಾವಾದಿಗಳು ಹುಟ್ಟಿಕೊಂಡಿದ್ದಾರೆ. ಹಳೇ ಜನರ ಸಾಮಾಜಿಕ ಪರಿಷತ್ತು ಇದ್ದಂತೆ ಈಗ ಹೊಸಬರ ಹಿಂದೂ ಮಹಾಸಭೆ! ಈ ಹಿಂದೂ ಮಹಾಸಭೆಯ ಉಗಮಸ್ಥಾನ ಆರ್ಯರ ಮೂಲಸ್ಥಾನವಾಗಿದ್ದ ಪಂಜಾಬ್. 1909ರಲ್ಲಿ ಮುಸಲ್ಮಾನರು ಕಾಂಗ್ರೆಸ್‌ನಿಂದ ಹೊರಬಂದು ಮುಸಲ್ಮಾನರನ್ನು ಸಂಘಟಿಸುವ ಮುಸ್ಲಿಂ ಲೀಗ್ ಸ್ಥಾಪಿಸಿದಾಗ ಯೋಗಕ್ಕೆ ಪ್ರತಿಯೋಗವೆಂದು ‘ಪಂಜಾಬ್ ಹಿಂದೂಸಭಾ’ ಅನ್ನುವ ಸಂಸ್ಥೆಯನ್ನು ಸ್ಥಾಪಿಸಿದರು. ಸಂಸ್ಥೆಯನ್ನು ಸ್ಥಾಪಿಸಿಯಾದ ಮೇಲೆ ನಾಲ್ಕುವರ್ಷಗಳವರೆಗೆ ಅವರ ಕಾರ್ಯಕ್ಷೇತ್ರ ಕೇವಲ ಪಂಜಾಬ್‌ಗಷ್ಟೇ ಸೀಮಿತವಾಗಿತ್ತು. ಆದರೆ 1913ರಲ್ಲಿ ಈ ಸಂಸ್ಥೆಯು ತನ್ನ ಪ್ರಾಂತದ ಸರಹದ್ದನ್ನು ದಾಟಿ ಅಂಬಾಲದಲ್ಲಿ ಸಭೆಯನ್ನು ಆಯೋಜಿಸಿತು ಹಾಗೂ ಅಲ್ಲಿ ಹಿಂದೂ ಸಮಾಜದ ಪ್ರಶ್ನೆಗಳ ಬಗ್ಗೆ ಚರ್ಚಿಸಲು ಅಖಿಲ ಹಿಂದೂ ಜನರ ಪರಿಷತ್ತನ್ನು 1915ರಲ್ಲಿ ಹರಿದ್ವಾರದಲ್ಲಿ ಸೇರಿಸಬೇಕು ಅನ್ನುವ ಮಸೂದೆಯೊಂದನ್ನು ಮಂಜೂರು ಮಾಡಿತು. ಅದರಂತೆ ಮಹಾರಾಜ್ ಮುನೀಂದ್ರಚಂದ್ ನಂದಿ ಅವರ ಅಧ್ಯಕ್ಷತೆಯಲ್ಲಿ ಒಂದು ಸಭೆಯಾಗಿ ಆ ಸಭೆಯಲ್ಲಿ ಪಂಜಾಬ್ ಹಿಂದೂಸಭಾ ಅನ್ನುವುದಕ್ಕಿಂತ ‘ಸರ್ವದೇಶದ ಹಿಂದೂ ಸಭಾ’ ಅನ್ನುವ ಸಂಸ್ಥೆಯೊಂದನ್ನು ಸ್ಥಾಪಿಸಿದರು.

ಹಿಂದೂ ಸಮಾಜವನ್ನು ಸಂಘಟಿಸಿ ಅದಕ್ಕೆ ಒಂದೇ ರೂಪ ಒಂದೇ ಜೀವ ಕೊಡುವುದೇ ಈ ಸಂಸ್ಥೆಯ ಉದ್ದೇಶವಾಗಿತ್ತು. ಕಾಸಿಂ ಬಝಾರ್‌ನಂತಹ ಅಧ್ಯಕ್ಷರು, ಮೂವರು ಶಂಕರಾಚಾರ್ಯರನ್ನೊಳಗೊಂಡ 13 ಉಪಾಧ್ಯಕ್ಷರು, ಲಾಲಾ ಸುಖವಿಂದರ್ ಸಿಂಗ್‌ನಂತಹ ಸಚಿವರು ಹಾಗೂ ನಾಲ್ವರು ಉಪಸಚಿವರು ಹಾಗೂ ಬೇರೆ ಬೇರೆ ಪ್ರಾಂತದಿಂದ ಆರಿಸಿದ 50 ಸಲಹೆಗಾರರನ್ನು ಈ ಸಭೆಗೆ ಆರಿಸಿದ್ದರು. ಇಷ್ಟೊಂದು ಅದ್ದೂರಿಯಾಗಿ ಸ್ಥಾಪಿಸಿದ ಈ ಸರ್ವದೇಶ ಹಿಂದೂಸಭೆಯು ಹಿಂದೂ ಸಮಾಜದ ಪುನರ್‌ಘಟನೆಯ ಕಾರ್ಯವನ್ನು ಯಶಸ್ವಿಯಾಗಿ ಮಾಡಿತೋರಿಸುತ್ತದೆ ಎಂದು ಎಲ್ಲರೂ ನಂಬಿದ್ದರು. ಆದರೆ ಬ್ರಿಟಿಷರ ಕೈಯಿಂದ ಗಂಗೆಯನ್ನು ಬಿಡಿಸಿ ಆ ನೀರಿನ ಹರಿವನ್ನು ಹರಿದ್ವಾರದೆಡೆಗೆ ಕೊಂಡೊಯ್ಯುವ ಹಾಗೂ ರಾಜಕಾರಣದಲ್ಲಿ ಹಿಂದೂ ಸಮಾಜಕ್ಕೆ ಅವರ ಸಂಖ್ಯೆಯ ಪ್ರಮಾಣದಲ್ಲಿ ಹಕ್ಕುಗಳನ್ನು ಕೊಡಬೇಕು ಅನ್ನುವ ಪ್ರಶ್ನೆಗಳ ಬಗ್ಗೆ ಬ್ರಿಟಿಷ್ ಸರಕಾರದ ಬಳಿ ನ್ಯಾಯ ಕೇಳುವುದನ್ನು ಬಿಟ್ಟರೆ ಈ ಸಂಸ್ಥೆ ಯಾವುದೇ ವಿಶೇಷ ಕೆಲಸ ಮಾಡಲಿಲ್ಲ. ಏನಿಲ್ಲವೆಂದರೂ ಅಸ್ಪಶ್ಯತೆ ನಿವಾರಣೆಗಾಗಿ ಕೇವಲ ಜನಮತ ತಿಳಿಯಲೆಂದು ಒಂದು ಪತ್ರಿಕೆಯನ್ನು ಹೊರಡಿಸಿದ್ದರಷ್ಟೆ. ಪಟೇಲರ ಅಂತರ್ಜಾತಿ ವಿವಾಹದ ಮಸೂದೆಯನ್ನವರು ವಿರೋಧಿಸಿದ್ದು ನೋಡಿದರೆ ಅಸ್ಪಶ್ಯತೆ ನಿವಾರಣೆಯ ಬಗ್ಗೆ ಇವರಿಂದ ಯಾವುದೇ ಕೆಲಸವಾಗಲಾರದು ಅಂದುಕೊಂಡರೆ ತಪ್ಪಾಗಲಾರದು.

1918ರಲ್ಲಿ ಈ ಸಭೆಯು ಐದನೆಯ ಹಾಗೂ ಕಡೆಯದಾಗಿ ಕಾಂಗ್ರೆಸ್ ಜೊತೆ ದಿಲ್ಲಿಯಲ್ಲಿ ರಾಜಾರಾಮ್‌ಪಾಲ್ ಅವರ ಅಧ್ಯಕ್ಷತೆಯಲ್ಲಿ ಸೇರಿತು. ಅಲ್ಲಿ ಕೂಡ ವಾಚಾಳಿತನ ಬಿಟ್ಟರೆ ಬೇರೆ ಯಾವ ಮಾತೂ ಆಗಲಿಲ್ಲ. ಜಾತಿ ಆಧಾರಿತ ಪ್ರತಿನಿಧಿಗಳ ತತ್ವಕ್ಕೆ ವಿರೋಧ, ಗೋಹತ್ಯೆಗೆ ಕಾನೂನಿನ ಪ್ರಕಾರ ಬಂದಿ. ಜರ್ಮನಿ ಯುದ್ಧದಲ್ಲಿ ಹಿಂದೂ ಜನರು ಮಾಡಿದ ಸಹಾಯದ ಬಗ್ಗೆ, ಇಲ್ಲಿಂದ ಬ್ರಿಟನ್‌ಗೆ ಹೋದ ಹಳೆಯ ಸಂಸ್ಕೃತ ಗ್ರಂಥ ಹಾಗೂ ಹಳೆಯ ವಸ್ತುಗಳನ್ನು ಭಾರತಕ್ಕೆ ಮರಳಿ ತರುವ ಬಗ್ಗೆ, ಇಂತಹ ವಿಷಯಗಳ ಬಗ್ಗೆ ಸರಕಾರಕ್ಕೆ ವಿನಂತಿಸುವುದು ಹಾಗೂ ಆಯುರ್ವೇದದ ಬಗ್ಗೆ ತಳೆದ ಉದಾಸೀನತೆಯ ಬಗ್ಗೆ ಸರಕಾರವನ್ನು ಬಡಿದೆಬ್ಬಿಸುವುದು ಅನ್ನುವಂತಹ ಅದರ ಕಾರ್ಯ ಹಾಗೂ ಅವತಾರ ಇವೆರಡು ಕೊನೆಯಾದವು. ಮುಂದಿನ ಎರಡು ವರ್ಷಗಳವರೆಗೆ ಇವರು ರೌಲತ್ ಬಿಲ್ ಹಾಗೂ ಖಿಲಾಫತ್ ಚಳವಳಿಯ ಅಕ್ಕಪಕ್ಕ ಸುತ್ತಾಡುವುದರಲ್ಲೇ ಕಳೆದರು. ಮುಂದೆ 1921ರಲ್ಲಿ ಹರಿದ್ವಾರದಲ್ಲಿ ಏರ್ಪಡಿಸಿದ್ದ ಅಧಿವೇಶನದಲ್ಲಿ ಸರ್ವದೇಶದ ಹಿಂದೂಸಭೆಯ ರೂಪಾಂತರ ಹಿಂದೂ ಮಹಾಸಭೆಯ ರೂಪದಲ್ಲಿ ಪ್ರಕಟವಾಯಿತು.

ಈ ಹಿಂದೂ ಮಹಾಸಭೆಯ ಸಣ್ಣಪುಟ್ಟ ಅಧಿವೇಶನಗಳಾದ ಮೇಲೆ ಎಲ್ಲಕ್ಕಿಂತ ದೊಡ್ಡ ಅಧಿವೇಶನವನ್ನು ಬನಾರಸ್‌ನಲ್ಲಿ 1923ರ ಆಗಸ್ಟ್ ತಿಂಗಳಿನಲ್ಲಿ ಏರ್ಪಡಿಸಲಾಯಿತು. ಈ ಅಧಿವೇಶನದಲ್ಲಿ ಭಾರತದ ಯಾವ ಯಾವ ರೋಗ (ದೊಡ್ಡ ಪ್ರಶ್ನೆಗಳು)ಗಳ ಮೇಲೆ ಯಾವ ಯಾವ ಉಪಾಯಗಳನ್ನು ರೂಪಿಸಬೇಕು ಅನ್ನುವುದನ್ನು ಮಸೂದೆಯ ಮೂಲಕ ನಿರ್ಧರಿಸಲಾಯಿತು. ರಾಷ್ಟ್ರೀಯ ಕಾಂಗ್ರೆಸ್ ಸಾಮಾಜಿಕ ಸುಧಾರಣೆಯ ಪ್ರಶ್ನೆಯನ್ನು ಎತ್ತಿಹಿಡಿಯಲಿಲ್ಲ ಅನ್ನುವ ಬಗ್ಗೆ ಎಲ್ಲ ಅಸ್ಪಶ್ಯ ವರ್ಗಕ್ಕೆ ಬೇಸರವಿತ್ತು ಹಾಗೂ 1917ರ ಕಾಂಗ್ರೆಸ್ ಮಸೂದೆಯಲ್ಲೂ ಯಾರಿಗೂ ಸಮಾಧಾನವಿರಲಿಲ್ಲ. ಕೇವಲ ಅಳುವವರ ಕಣ್ಣೀರನ್ನು ಒರೆಸುವ ಉದ್ದೇಶ ಬಿಟ್ಟರೆ ಈ ಮಸೂದೆಯಲ್ಲಿ ಬೇರೇನೂ ಇರಲಿಲ್ಲ ಅನ್ನುವುದು ಎಲ್ಲರಿಗೂ ಗೊತ್ತಿತ್ತು. ಆದರೆ 1923ರಿಂದ ಕಾಂಗ್ರೆಸ್‌ನ ಬೇಜವಾಬ್ದಾರಿ ವೃತ್ತಿಯ ಬಗ್ಗೆ ದಲಿತರಿಗೆ ದುಃಖವಾಗುವುದು ನಿಂತಿತು. ಹಿಂದೂ ಮಹಾಸಭೆಯೇ ನಮ್ಮ ಪ್ರಶ್ನೆಗಳನ್ನೀಗ ಎತ್ತಿಹಿಡಿದಿರುವಾಗ ಕಾಂಗ್ರೆಸ್ ಸಾಯಲಿ ಅಂದುಕೊಂಡು ಅನೇಕ ದಲಿತರಿಗೆ ಧೈರ್ಯ ಬಂತು. ಮಾಲವೀಯರಂತಹ ಕಟ್ಟರ್ ಧರ್ಮಾಭಿಮಾನಿಗಳು ದುಃಖದ ಕಣ್ಣೀರಿಡುತ್ತ ಹಿಂದೂ ಮಹಾಸಭೆಯ ಪ್ರತಿನಿಧಿಗಳಿಗೆ ಅಸ್ಪಶ್ಯತೆ ನಿವಾರಣೆಯ ಕೆಲಸಕ್ಕೆ ಚಾಲನೆ ಕೊಟ್ಟಿರುವಂತಹ ಈ ಮಹಾಸಭೆಯು ದಲಿತರ ಅಸ್ಪಶ್ಯರ ಪ್ರಶ್ನೆಗಳನ್ನು ಪರಿಹರಿಸುತ್ತದೆ ಅನ್ನುವ ಭರವಸೆಯಿರುವುದು ಸಹಜ. ಆದರೆ ಹಿಂದೂ ಮಹಾಸಭೆಯ ಪರಿಸ್ಥಿತಿ ಕೂಡ ಹೇಳಿಕೊಳ್ಳುವಷ್ಟೇನೂ ಒಳ್ಳೆಯದಿರಲಿಲ್ಲ ಹಾಗೂ ಅದರ ಕಾರ್ಯ ಕೂಡ ಅದರ ಮಾತಿಗಿಂತಹೆಚ್ಚಿಗೆ ಇರಲಾರದು ಎಂದು ಹೇಳಲು ಅಡ್ಡಿಯಿಲ್ಲ ಅನ್ನುವಂತಹ ಆರೋಪವನ್ನು ಸ್ವಾಮಿ ಶ್ರದ್ಧಾನಂದರೇ ಮಾಡಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಹಿಂದೂ ಮಹಾಸಭೆಯ ನಿಷ್ಕ್ರಿಯತೆಗೆ ಬೇಸತ್ತು ಕೊಟ್ಟ ರಾಜೀನಾಮೆಯಲ್ಲಿ ಅವರು ಸ್ಪಷ್ಟವಾಗಿ, ‘‘ಹಿಂದೂ ಮಹಾಸಭೆಗೆ ತನ್ನ ಮಸೂದೆಗಳನ್ನು ಮಂಜೂರು ಮಾಡಿಸಿಕೊಳ್ಳುವ ತವಕವೇ ಕಾಣುತ್ತಿಲ್ಲ, ಅಷ್ಟೇ ಅಲ್ಲದೆ ಮಸೂದೆಗಳನ್ನು ಮಂಜೂರು ಮಾಡಿಸಿಕೊಳ್ಳಲಿಚ್ಛಿಸುವ ಸಭಾಸದರ ದಾರಿಯಲ್ಲಿ ಮಹಾಸಭೆ ಅಡ್ಡಗಾಲು ಹಾಕುತ್ತದೆ’’ ಎಂದು ಹೇಳಿದ್ದಾರೆ.

ಈ ಪರಿಯ ನಿರಾಸೆ ಸಹನೆಗೆ ಮೀರಿದ್ದು. ಪ್ರಾಚೀನ ಸಮಾಜ ಸುಧಾರಕರ ಕೈಯಿಂದ ಅಸ್ಪಶ್ಯತೆ ನಿವಾರಣೆಯ ಕೆಲಸವಾಗದಿದ್ದರೂ ಅವರನ್ನು ಕ್ಷಮಿಸಬಹುದು, ಅವರು ಕೇವಲ ಮನುಷ್ಯತ್ವದ ಸ್ವಯಂಸಿದ್ಧತೆಗೆ ಒತ್ತು ಕೊಟ್ಟು ಅಸ್ಪಶ್ಯತೆಯನ್ನು ನಷ್ಟ ಮಾಡುವ ದಾರಿ ಹಿಡಿದಿದ್ದರು. ಆಧುನಿಕ ಕಾಲದ ಪರಿಷತ್ತಿನವರು ಅಸ್ಪಶ್ಯತೆಯನ್ನು ಉಪೇಕ್ಷಿಸಿದ ಕಾರಣಗಳನ್ನು ಮೇಲೆ ಕೊಟ್ಟಿದ್ದೇನೆ, ಆದರೆ ಅಸ್ಪಶ್ಯತೆಯನ್ನು ನಿವಾರಿಸುವ ತಳಮಳವಿದ್ದು ಕೂಡ ಆಧುನಿಕ ಕಾಲದ ಪರಿಷತ್ತಿನವರು ತಟಸ್ಥರಾಗಿದ್ದರೂ ಅವರ ಕೆಲಸ ದೂಷಣಾಸ್ಪದವಾಗಿರುತ್ತಿರಲಿಲ್ಲ, ಹೆಚ್ಚೆಚ್ಚು ಅಂದರೆ ಅಸ್ಪಶ್ಯತೆ ಸ್ವಾಂತ್ರಕ್ಕೆ ಅಡ್ಡಿಯಾದೀತು ಅನ್ನುವ ಭಯ ಅವರಿಗಿತ್ತು. ಆದರೆ ಈ ಭಯದಿಂದಾಗಿ ಅವರು ಅಸ್ಪಶ್ಯತೆಯನ್ನು ನಿವಾರಿಸದಿದ್ದಿದ್ದರೆ ತಾವು ಕಟ್ಟರ್ ಸ್ವಾತಂತ್ರವಾದಿಗಳಲ್ಲ ಅನ್ನುವುದನ್ನವರು ಒಪ್ಪಿಕೊಳ್ಳಬೇಕಾಗುತ್ತಿತ್ತು. ಅದರಲ್ಲಿ ನಾಚಿಕೆಪಡುವಂತಹದ್ದೇನೂ ಇರಲಿಲ್ಲ! ಏಕೆಂದರೆ ಹಾಗೇನಾದರೂ ಇದ್ದರೆ ನಮಗೆ ಸ್ವಾತಂತ್ರವೇ ಬೇಡ ಎಂದು ಹೇಳುವ ಅಸಂಖ್ಯ ಜನ ಇಂದು ಕೂಡ ಇದ್ದಾರೆ. ಪಾರತಂತ್ರದಿಂದ ಹೇಳಿಕೊಳ್ಳುವಂತಹ ತೊಂದರೆಯೇನೂ ಇಲ್ಲ, ಹಾಗಾಗಿ ಅದಕ್ಕಾಗಿ ಇಷ್ಟೊಂದು ತ್ಯಾಗ ಮಾಡಲು ಆಧುನಿಕ ಸುಧಾರಕರು ಸಿದ್ಧರಾಗದಿದ್ದಲ್ಲಿ ಅದರಲ್ಲಿ ಅವರ ವಿಶೇಷ ಅಪರಾಧವಿದೆ ಎಂದು ಹೇಳಲಾಗುವುದಿಲ್ಲ.

(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ನಾಸ್ತಿಕ ಮದ