ಪರಿತ್ಯಕ್ತನನ್ನು ಕುಟುಂಬದೊಂದಿಗೆ ಸೇರಿಸಿದ ಯೂ ಟ್ಯೂಬ್ ಹಾಡು
ಭಾರತೀಯ ವ್ಯಕ್ತಿಯೋರ್ವ ಯು ಟ್ಯೂಬ್‌ನಲ್ಲಿ ಹಾಡಿದ ಬಾಲಿವುಡ್‌ನ ಜನಪ್ರಿಯ ಹಾಡು ಆನ ಕುಟುಂಬವನ್ನು ಒಂದು ಮಾಡಿದೆ.
1978ರಲ್ಲಿ ತನ್ನ ಮನೆ, ಕುಟುಂಬ ತ್ಯಜಿಸಿ ಬಂದಿದ್ದ ಖೋಮದ್ರಾಮ್ ಗಂಭೀರ್ ಸಿಂಗ್ ಮಣಿಪುರದ ಇಂಫಾಲದಲ್ಲಿರುವ ತನ್ನ ಕುಟುಂಬವನ್ನು ಮತ್ತೆ ಸೇರಿದ್ದಾರೆ. ಸಿಂಗ್ ಅವರನ್ನು ಕಂಡ ಅವರ ಕುಟುಂಬದ ಸದಸ್ಯರು ಆನಂದಬಾಷ್ಪಗೈದಿದ್ದಾರೆ. 66ರ ಹರೆಯದ ಗಂಭೀರ್‌ಗೆ ಪುಷ್ಪ ಹಾರ ಹಾಕಿ ಸ್ವಾಗತಿಸಿದ್ದಾರೆ. ‘‘ನಾನು ಅನೇಕ ಬಾರಿ ಮನೆಗೆ ಹಿಂದಿರುಗಲು ಪ್ರಯತ್ನಿಸಿದೆ. ಆದರೆ, ಅವಕಾಶ ಇರಲಿಲ್ಲ.’’ ಎಂದು ಸಿಂಗ್ ಹೇಳಿದ್ದಾರೆ.
ಮನೆ ಬಿಟ್ಟು ಹೋದ ಮೇಲೆ ನಾಲ್ಕು ದಶಕಗಳ ಕಾಲ ಸಿಂಗ್ ಬಗ್ಗೆ ಕುಟುಂಬಕ್ಕೆ ಯಾವುದೇ ಮಾಹಿತಿ ಇರಲಿಲ್ಲ. ಗಡ್ಡದ ವ್ಯಕ್ತಿಯೋರ್ವ ಮುಂಬೈ ಬೀದಿಯಲ್ಲಿ ಬಾಲಿವುಡ್ ಹಾಡೊಂದನ್ನು ಹಾಡುತ್ತಿರುವುದು ಯೂ ಟ್ಯೂಬ್‌ನಲ್ಲಿ ಪ್ರಸಾರವಾದ ಬಳಿಕ ಸಿಂಗ್ ಬದುಕಿದ್ದಾರೆ ಎಂದು ಕುಟುಂಬದವರಿಗೆ ತಿಳಿಯಿತು.
ಈಗ ಕ್ಲೀನ್ ಶೇವ್ ಮಾಡಿಕೊಂಡಿರುವ ಸಿಂಗ್, ಜೀವನ ನಿರ್ವಹಣೆಗಾಗಿ ಮುಂಬೈಯಲ್ಲಿ ಹಲವು ಕೆಲಸ ಮಾಡಿದೆ ಎಂದಿದ್ದಾರೆ. ಆದರೆ, ಕಳೆದ 26 ವರ್ಷಗಳಿಂದ ಕುಟುಂಬವನ್ನು ಬಿಟ್ಟು ದೂರ ಇದ್ದುದು ಯಾಕೆ ಎಂಬುದಕ್ಕೆ ಅವರು ಉತ್ತರಿಸುತ್ತಿಲ್ಲ.
ಸಿಂಗ್ ಕುಟುಂಬದೊಂದಿಗೆ ಮತ್ತೆ ಸೇರಿರುವ ಸಂತಸವನ್ನು ಹೇಗೆ ಅಭಿವ್ಯಕ್ತಿಸಬೇಕು ಎಂಬುದೇ ಗೊತ್ತಾಗುತ್ತಿಲ್ಲ ಎಂದು ಸಿಂಗ್‌ನ ಕಿರಿಯ ಸಹೋದರ ಕುಲಚಂದ್ರ ಸಿಂಗ್ ಹೇಳಿದ್ದಾರೆ.