ಮಕ್ಕಳ ಬಲಿಯ ಅತೀ ದೊಡ್ಡ ಪ್ರಕರಣ ಬೆಳಕಿಗೆ!

Update: 2018-05-03 09:29 GMT

ಜಗತ್ತಿನಲ್ಲಿ ಒಂದೇ ಬಾರಿಗೆ ಅತ್ಯಧಿಕ ಸಂಖ್ಯೆಯಲ್ಲಿ ಮಕ್ಕಳ ಬಲಿ ನೀಡಿದ ಕುರುಹನ್ನು ಪುರಾತತ್ವ ಶಾಸ್ತ್ರಜ್ಞರು ಪೆರುವಿನಲ್ಲಿ ಪತ್ತೆ ಮಾಡಿದ್ದಾರೆ. ಸುಮಾರು 550 ವರ್ಷಗಳ ಹಿಂದೆ ಆಚರಣೆಯ ಒಂದು ಭಾಗವಾಗಿ 200 ಇಲಮಾ (ಒಂದು ಜಾತಿಯ ಪ್ರಾಣಿ)ಗಳ ಜೊತೆಗೆ 140 ಮಕ್ಕಳನ್ನು ಬಲಿ ನೀಡಲಾಗಿದೆ ಎಂದು ನ್ಯಾಶನಲ್ ಜಿಯೋಗ್ರಫಿ ಘೋಷಿಸಿದೆ.

ಉತ್ತರವಲಯದ ಲಾ ಲಿಬೆರ್ಟಡ್‌ನ ಅತೀ ಎತ್ತರದ, ಪೆಸಿಫಿಕ್ ಸಾಗರಕ್ಕೆ ಮುಖಮಾಡಿರುವ ಬೃಹತ್ ಬಂಡೆಯ ಮೇಲೆ ಈ ನಿವೇಶನ ಇದೆ. ಚಿಮು ನಾಗರಿಕತೆ ಹುಟ್ಟಿಕೊಂಡಿರುವುದೇ ಇಲ್ಲಿ. ಕೊಲಂಬಿಯನ್ ಪೂರ್ವದ ಜನರಾಗಿರುವ ಇವರು ಚಂದ್ರನನ್ನು ಆರಾಧಿಸುತ್ತಿದ್ದರು. ಪೆರುವಿನ ಎರಡನೇ ಅತಿ ದೊಡ್ಡ ನಗರವಾದ ಟ್ರುಜಿಲ್ಲೊದ ವಾಯುವ್ಯ ಕರಾವಳಿ ನಗರದ ಹೊರಭಾಗದಲ್ಲಿ ಈ ಬೃಹದಾಕಾರದ ಬಂಡೆ ಇದೆ.

ಅಜ್‌ಟೆಕ್, ಮಾಯಾ ಹಾಗೂ ಇಂಕಾ ಸಂಸ್ಕೃತಿಗಳಲ್ಲಿ ನಡೆದ ನರ ಬಲಿ ವಸಾಹತು ಯುಗದ ಸ್ಪಾನಿಶ್ ಕಾಲಾನುಕ್ರಮಣಿಕೆಯಲ್ಲಿ ಹಾಗೂ ಆಧುನಿಕ ವೈಜ್ಞಾನಿಕ ಉತ್ಖನನಗಳಲ್ಲಿ ದಾಖಲಾಗಿದೆ. ಕೊಲಂಬಿಯ ಪೂರ್ವ ಚಿಮು ನಾಗರಿಕತೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮಕ್ಕಳ ಬಲಿ ನಡೆದಿರುವುದು ಅಮೆರಿಕದಲ್ಲೇ ಅಭೂತಪೂರ್ವ ಎಂದು ನ್ಯಾಷನಲ್ ಜಿಯೋಗ್ರಫಿ ಹೇಳಿದೆ. ಟ್ರುಜಿಲ್ಲೊದ ವಿಶ್ವವಿದ್ಯಾನಿಲಯದ ನ್ಯಾಷನಲ್ ಜಿಯೋಗ್ರಫಿಯ ಪೆರುವಿನ ಸಂಶೋಧಕ ಗ್ಯಾಬ್ರಿಯಲ್ ಪ್ರಿಯೆಟೊ ಹಾಗೂ ನ್ಯೂ ಓರ್ಲಿಯನ್ಸ್‌ನ ಟುಲಾನೆ ರಾಷ್ಟ್ರೀಯ ವಿಶ್ವವಿದ್ಯಾನಿಲಯದ ಪ್ರಾಕೃತಿಕ ಮಾನವ ಶಾಸ್ತ್ರಜ್ಞ ನೇತೃತ್ವದ ಅಂತರ್‌ರಾಷ್ಟ್ರೀಯ ತಂಡ ಈ ಸಂಶೋಧನೆ ನಡೆಸಿದೆ.

ಜಗತ್ತಿನ ಇತಿಹಾಸದಲ್ಲೇ ಅಮೆರಿಕದಲ್ಲಿ ಒಂದೇ ಬಾರಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಬಲಿ ನೀಡಿದ ಈ ಘಟನೆಯನ್ನು ಈ ತಂಡ ಬೆಳಕಿಗೆ ತಂದಿದೆ. ‘‘ನಾನು ಇದನ್ನು ಎಂದಿಗೂ ನಿರೀಕ್ಷಿಸಿರಲಿಲ್ಲ’’ ಎಂದು ಜಾನ್ ವೆರಾನೊ ಹೇಳಿದ್ದಾರೆ.
 

Writer - -ವಿಸ್ಮಯ

contributor

Editor - -ವಿಸ್ಮಯ

contributor

Similar News