ಕೆಂಪುಕೋಟೆಗೆ ಐದು ಕೋಟಿ ರೂಪಾಯಿ ಹೊಂದಿಸಲಾಗದಷ್ಟು ದಾರಿದ್ರವೇ?

Update: 2018-05-03 18:39 GMT

ಮಾನ್ಯರೇ,

ದೇಶ ಸ್ವಾತಂತ್ರ್ಯವಾದಂದಿನಿಂದ ಈ ವರೆಗೆ ಪ್ರತೀ ವರ್ಷವೂ ನಮ್ಮ ತಿರಂಗಾ ಆರೋಹಣ ಮಾಡುತ್ತಿದ್ದ ಐತಿಹಾಸಿಕ ಸ್ಮಾರಕವಾದ ಕೆಂಪುಕೋಟೆಯನ್ನು ಕೇವಲ ವಾರ್ಷಿಕ ಐದು ಕೋಟಿ ರೂಪಾಯಿಗಳಿಗೆ ಮೋದಿ ಗಿರವಿ ಇಟ್ಟಿದ್ದಾರೆ. ಪ್ರಸ್ತುತ ಕೆಂಪುಕೋಟೆಯನ್ನು ಸಂದರ್ಶಿಸಲು ಬರುವ ಪ್ರವಾಸಿಗರ ಟಿಕೆಟ್‌ನಿಂದ ಸಂಗ್ರಹವಾಗುವ ಮೊತ್ತ ಹದಿನೆಂಟು ಕೋಟಿಗಳೆಂದು ಅಧಿಕೃತ ದಾಖಲೆಗಳು ಹೇಳುತ್ತವೆ. ಇನ್ನು ಇತರ ಕಾರ್ಯಕ್ರಮಗಳು, ಪಾರ್ಕಿಂಗ್, ಇತ್ಯಾದಿ ಬಾಡಿಗೆಗಳಿಂದ ಬರುವ ಮೊತ್ತ ಕಡಿಮೆಯೆಂದರೂ ಟಿಕೆಟ್‌ನಿಂದ ಸಂಗ್ರಹವಾಗುವ ಮೊತ್ತದ ದುಪ್ಪಟ್ಟು. ಆದರೆ ಕೆಂಪುಕೋಟೆಯನ್ನು ಸರಿಯಾಗಿ ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲವೆಂಬ ನೆಪ ನೀಡಿ ವಾರ್ಷಿಕ ಐದು ಕೋಟಿ ರೂಪಾಯಿಗಳಿಗೆ ಬಾಡಿಗೆಗೆ ನೀಡಲಾಗಿದೆ. ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲವೆಂಬುದನ್ನು ಕೇಂದ್ರ ಪ್ರವಾಸೋದ್ಯಮ ಸಚಿವ ಅಲ್ಫೋನ್ಸ್ ಅವರೇ ಹೇಳಿದ್ದಾರೆ. ನಿರ್ವಹಣೆ ಮಾಡಲಾಗುತ್ತಿಲ್ಲ ಎನ್ನುವುದೇ ಕೇಂದ್ರ ಸರಕಾರದ ದೌರ್ಬಲ್ಯವನ್ನು ತೋರಿಸುತ್ತದೆ.

ಯಾವುದೇ ಒಂದು ಬಾಡಿಗೆ ಸರಕು, ಸ್ಥಳ ಕಟ್ಟಡ ಇತ್ಯಾದಿಗಳಿಗೆ ಅದರಿಂದ ಹುಟ್ಟುವ ಆದಾಯದ ಆಧಾರದಲ್ಲೇ ಬಾಡಿಗೆ ನಿರ್ಧರಿಸಲಾಗುತ್ತದೆ. ಯಾವನೇ ಒಬ್ಬ ಕಾರ್ಪೊರೇಟ್ ಉದ್ಯಮಿ ಬಿಡಿ, ಸಾಮಾನ್ಯ ಜ್ಞಾನ ಇರುವವನು ಕೂಡಾ ಅದರಿಂದ ಬರುವ ಆದಾಯದ ಲೆಕ್ಕ ಹಾಕಿಯೇ ಬಾಡಿಗೆಗೆ ಪಡೆಯುತ್ತಾನೆ. ಆತನಿಗೆ ಬರಬಹುದಾದ ಲಾಭಕ್ಕಿಂತ ಹೆಚ್ಚು ನಿರ್ವಹಣಾ ವೆಚ್ಚ ತಗುಲುತ್ತದೆಂದರೆ ಲಾಭವಿಲ್ಲದ ವ್ಯವಹಾರಕ್ಕೆ ಆತ ಕೈ ಹಾಕಲಾರ. ಈ ಆಧಾರದಲ್ಲಿ ಕೇವಲ ಟಿಕೆಟ್‌ನಿಂದ ಸಂಗ್ರಹವಾಗುವ ಮೊತ್ತದಿಂದ ಅದನ್ನು ನಿರ್ವಹಿಸಲು ಸಾಧ್ಯ. ಅದರ ನಿರ್ವಹಣೆಗೆ ದೊಡ್ಡ ಮೊತ್ತ ಬೇಕೆಂದರೂ ಇಷ್ಟು ದೊಡ್ಡ ದೇಶಕ್ಕೆ ತನ್ನ ಪಾರಂಪರಿಕ, ಐತಿಹಾಸಿಕ ಸ್ಮಾರಕದ ನಿರ್ವಹಣೆಗೆ ಬೇಕಾಗುವ ಮೊತ್ತ ಹೊಂದಿಸಲು ಸಾಧ್ಯವಿಲ್ಲವೆಂದಾದರೆ ಅದಕ್ಕಿಂತ ದೊಡ್ಡ ನಾಚಿಕೆಗೇಡಿಲ್ಲ. ಇಲ್ಲಿ ಲಾಭ ನಷ್ಟದ ಪ್ರಶ್ನೆಯೇ ಉದ್ಭವವಾಗಬಾರದು. ಏಕೆಂದರೆ ಕೆಂಪುಕೋಟೆಯನ್ನು ಲಾಭ ನಷ್ಟದ ಲೆಕ್ಕಾಚಾರದಲ್ಲಿ ಅಳೆಯುವುದು ನಮ್ಮ ದೇಶಕ್ಕೆ ಮಾಡುವ ಅವಮಾನ. ಇದೇ ಸರಕಾರಕ್ಕೆ ಯಾವುದೇ ವಿಧದ ಲಾಭ ತರದ ಪ್ರತಿಮೆಗಳಿಗೆ ಮೂರು ಸಾವಿರ ಕೋಟಿ ಖರ್ಚು ಮಾಡಲು ದುಡ್ಡಿದೆ. ನಮ್ಮ ಐತಿಹಾಸಿಕ ಸ್ಮಾರಕವನ್ನು ನಿರ್ವಹಿಸಲು ದುಡ್ಡಿಲ್ಲ.

ವಾಸ್ತವದಲ್ಲಿ ಇದು ಹಣಕಾಸಿನ ವಿಚಾರ ಅಲ್ಲವೇ ಅಲ್ಲ. ಇದರ ಹಿಂದೆ ಯಾವುದೋ ಹಿಡನ್ ಅಜೆಂಡಾ ಇದ್ದೇ ಇದೆ. ಒಂದೊಂದು ಪುಟ್ಟ ಗ್ರಾಮದ ರಸ್ತೆ, ಚರಂಡಿ, ಬೀದಿ ದೀಪ, ನೀರು ಇತ್ಯಾದಿಗಳಿಗೇ ಕೋಟಿ ಕೋಟಿ ಬಜೆಟ್ ಇಡುವ ಈ ಕಾಲದಲ್ಲಿ ಒಂದು ಸ್ಮಾರಕದ ನಿರ್ವಹಣೆಗೆ ದುಡ್ಡಿಲ್ಲ ಎಂದರೆ ಇದನ್ನು ಪ್ರಾಥಮಿಕ ಶಾಲೆಯ ಮಕ್ಕಳೂ ನಂಬಲಾರರು.

Writer - -ಇಸ್ಮತ್ ಪಜೀರ್

contributor

Editor - -ಇಸ್ಮತ್ ಪಜೀರ್

contributor

Similar News