ಸಿರಿಯ ನೆಚ್ಚಿ ಕೆಡಬೇಡ

Update: 2018-05-07 18:31 GMT

ಆನೆ ಕುದುರೆ ಭಂಡಾರವಿರ್ದಡೇನೊ?
ತಾನುಂಬುದು ಪಡಿಯಕ್ಕಿ, ಒಂದಾವಿನ ಹಾಲು, ಮಲಗುವುದರ್ಧ ಮಂಚ.
ಈ ಹುರುಳಿಲ್ಲದ ಸಿರಿಯ ನೆಚ್ಚಿ ಕೆಡಬೇಡ ಮನುಜಾ.
ಒಡಲು ಭೂಮಿಯ ಸಂಗ, ಒಡವೆ ತಾನೇನಪ್ಪುದೊ?
ಕೈವಿಡಿದ ಮಡದಿ ಪರರ ಸಂಗ, ಪ್ರಾಣ ವಾಯುವಿನ ಸಂಗ.
ಸಾವಿಂಗೆ ಸಂಗಡವಾರೂ ಇಲ್ಲ ಕಾಣಾ, ನಿಃಕಳಂಕ ಮಲ್ಲಿಕಾರ್ಜುನಾ.
                                                               -ಮೋಳಿಗೆ ಮಾರಯ್ಯ

  ಕಾಶ್ಮೀರದಲ್ಲಿನ ಸವಾಲಾಕ್ಷದ ದೊರೆ ಮಹಾದೇವ ಭೂಪಾಲ, ಬಸವಣ್ಣನವರ ನವಸಮಾಜದ ಪರಿಕಲ್ಪನೆಗೆ ಮನಸೋತು, ಪತ್ನಿ ಗಂಗಾದೇವಿ (ಮಹಾದೇವಿ) ಜೊತೆ ಕಲ್ಯಾಣಕ್ಕೆ ಬಂದು ಕಟ್ಟಿಗೆ ಮಾರುವ ಕಾಯಕ ಕೈಗೊಂಡ ಕಾರಣ ಮೋಳಿಗೆ (ಕಟ್ಟಿಗೆ ಹೊರೆ) ಮಾರಯ್ಯನವರೆಂದು ಪ್ರಸಿದ್ಧರಾದರು. ಮೋಳಿಗೆ ಮಾರಯ್ಯನವರ ಕೆಲ ವಚನಗಳಲ್ಲಿ ಕಲ್ಯಾಣದ ಕೊನೆಯ ದಿನಗಳ ತುಮುಲದ ಛಾಯೆ ಇದೆ. ಕಲ್ಯಾಣದಲ್ಲಿ ಶರಣರ ಹತ್ಯಾಕಾಂಡ ನಡೆದ ನಂತರ ಬೀದರ್ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಮೋಳಕೇರಾ ಗ್ರಾಮದಲ್ಲಿ ಮೋಳಿಗೆ ಮಾರಯ್ಯನವರು ಪತ್ನಿ ಜೊತೆ ಕೊನೆಯ ದಿನಗಳನ್ನು ಕಳೆದರು. ಅಲ್ಲಿ ಮೋಳಿಗೆ ಮಾರಯ್ಯನವರ ಗವಿ ಇಂದಿಗೂ ಸುಸ್ಥಿತಿಯಲ್ಲಿದೆ. ರಾಜ ರಾಣಿಯರು ಅರಮನೆ ಬಿಟ್ಟು ಗವಿಯಲ್ಲಿ ವಾಸಿಸುವಷ್ಟು ಮಾನಸಿಕವಾಗಿ ಬೆಳವಣಿಗೆ ಹೊಂದಿದ್ದರು. ಕಾಯಕದಲ್ಲಿ ಅವರು ಅರಸೊತ್ತಿಗೆಗಿಂತ ಹೆಚ್ಚಿನ ಶಾಂತಿ ಸಮಾಧಾನಗಳನ್ನು ಹೊಂದಿದ್ದರು. ಮೇಲಿನ ವಚನ ಮೋಳಿಗೆ ಮಾರಯ್ಯನವರ ಜೀವನದರ್ಶನದ ಪ್ರತೀಕವಾಗಿದೆ.
ಭಾರೀ ಅರಮನೆ, ಬೆಳ್ಳಿ, ಬಂಗಾರ, ಮುತ್ತು, ರತ್ನ, ವಜ್ರ, ವೈಢೂರ್ಯ ಮತ್ತು ಚಿನ್ನದ ನಾಣ್ಯಗಳಿಂದ ತುಂಬಿದ ಖಜಾನೆ, ಆನೆ, ಅಶ್ವಗಳಿಂದ ಕೂಡಿದ ಸೈನ್ಯ, ಸಾವಿರಾರು ಎಕರೆ ಜಮೀನು ಹೀಗೆ ಏನೆಲ್ಲ ಇರಬಹುದು. ಆದರೆ ಇಷ್ಟೆಲ್ಲ ಇದ್ದವನಿಗೆ ಊಟಕ್ಕೆ ಬಹಳವಾದರೆ ಅರ್ಧಸೇರು ಅಕ್ಕಿ ಬೇಕು. ಒಂದು ಹಸುವಿನ ಹಾಲು ಸಾಕು. ಮಲಗಲು ಅರ್ಧ ಮಂಚ ಹೆಚ್ಚಾಯಿತು. ಉಳಿದ ಸಂಪತ್ತು ಹೆಸರಿಗೆ ಮಾತ್ರ. ಆದ್ದರಿಂದ ಅರ್ಥಹೀನ ಶ್ರೀಮಂತಿಕೆಯನ್ನು ನಂಬಿ ಹಾಳಾಗಬೇಡಿ ಎಂದು ಮೋಳಿಗೆ ಮಾರಯ್ಯನವರು ಮಾನವ ಜನಾಂಗಕ್ಕೆ ಸಾರಿದ್ದಾರೆ.
 ಈ ದೇಹ ಒಂದು ದಿನ ಮಣ್ಣುಪಾಲಾಗುವುದು. ಸಂಪತ್ತು ಯಾರ ಪಾಲಾಗುವುದೋ ಗೊತ್ತಿಲ್ಲ. ಹೆಂಡತಿ ಇನ್ನೊಬ್ಬರ ಪಾಲಾಗುವಳು. (ಹಿಂದಿನ ಕಾಲದಲ್ಲಿ ಅಲ್ಲಲ್ಲಿ ಈ ಸ್ಥಿತಿ ಇತ್ತೆಂಬುದನ್ನು ಅನೇಕ ವಚನಕಾರರು ಸೂಚಿಸಿದ್ದಾರೆ.) ನಮ್ಮ ಜೀವ ಗಾಳಿಯ ಪಾಲಾಗುವುದು. ಹೀಗೆಲ್ಲ ಘಟನೆಗಳು ಘಟಿಸಿದ ಮೇಲೆ ಸತ್ತವನ ಜೊತೆ ಹೋಗುವವರು ಯಾರು? ಸಾವಿನಲ್ಲಿ ಯಾರೂ ಸಂಗಾತಿಗಳಿರುವುದಿಲ್ಲ ಎಂದು ಹೇಳುವಲ್ಲಿ ಮೋಳಿಗೆ ಮಾರಯ್ಯನವರು ವಾಸ್ತವವನ್ನು ತೆರೆದಿಡುತ್ತಾರೆ. ಬದುಕಿನ ಅನಿವಾರ್ಯ ಸಮಸ್ಯೆಗಳನ್ನು ಯಾವ ಭ್ರಮೆಗಳಿಲ್ಲದೆ ಎದುರಿಸುವ ಕಲೆಯನ್ನು ಮೋಳಿಗೆ ಮಾರಯ್ಯನವರು ಈ ವಚನದ ಮೂಲಕ ಕಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News