ತ್ರಿದೋಷದ ಗುಣದಿಂದ ನಾನಾ ಬಹುತಾಪತ್ರಯ

Update: 2018-05-11 18:37 GMT

ತ್ರಿದೋಷದ ಗುಣದಿಂದ ನಾನಾ ಬಹುತಾಪತ್ರಯದ

ವ್ಯಾಧಿಯ ಚಿಕಿತ್ಸೆಯನಾರು ಅರಿಯರಲ್ಲಾ!

ತನುವಿಂಗೆ ವಾತ, ಪೈತ್ಯ, ಶ್ಲೇಷ್ಮ; ಆತ್ಮಂಗೆ ಆಣವ, ಮಾಯಾ, ಕಾರ್ಮಿಕ.

ಇಂತೀ ತ್ರಿವಿಧ ಮಲತ್ರಯದ ರೋಗರುಜೆಯಡಸಿ

ಬಂಧನದಲ್ಲಿ ಸಾವುತ್ತಿದೆ ಅಂಗ.

ಆರೋಗ್ಯ ನಿರೋಗವಹುದಕ್ಕೆ ನಾ ಮೂರು ಬೇರ ತಂದೆ.

ಒಂದು ಅಂಗದಲ್ಲಿ ಮರ್ದಿಸಿ, ಒಂದು ಆತ್ಮನಲ್ಲಿ ಮಥನಿಸಿ,

ಒಂದು ಅರಿವಿನಲ್ಲಿ ಪಾನವ ಮಾಡಿ, ಈ ರೋಗ ಹರಿವುದು.

ಇದಕ್ಕನುಪಾನ ಇದಿರೆಡೆಯಿಲ್ಲ,

ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ಸಾಕ್ಷಿಯಾಗಿ.

 -ವೈದ್ಯ ಸಂಗಣ್ಣ

ವಾತ, ಪಿತ್ತ ಮತ್ತು ಕಫಗಳೆಂಬ ತ್ರಿದೋಷಗಳು ಶರೀರಕ್ಕೆ ರೋಗವನ್ನು ಆಹ್ವಾನಿಸುತ್ತವೆ. ಆಣವ, ಮಾಯಾ ಮತ್ತು ಕಾರ್ಮಿಕ ಎಂಬ ಮಲತ್ರಯಗಳು ಆತ್ಮಕ್ಕೆ ಹಾನಿಯನ್ನುಂಟುಮಾಡುತ್ತವೆ. ವಚನಕಾರರ ದೇವರು ನಿರಾಕಾರ ಆದರೆ ನಿರ್ಗುಣನಲ್ಲ. ಶಕ್ತಿ ಅವನ ಗುಣ. ಆತನ ಶಕ್ತಿ ಮೂರು ಪ್ರಕಾರಗಳಲ್ಲಿ ವ್ಯಕ್ತವಾಗುವುದು. ಸೃಷ್ಟಿಸಬೇಕೆಂಬ ಇಚ್ಛಾಶಕ್ತಿ, ಯಾವರೀತಿ ಸೃಷ್ಟಿಸಬೇಕೆಂಬ ಜ್ಞಾನಶಕ್ತಿ, ಇಚ್ಛೆ ಮತ್ತು ಜ್ಞಾನಕ್ಕನುಗುಣವಾಗಿ ಕಾರ್ಯೋನ್ಮುಖವಾಗುವುದೇ ಕ್ರಿಯಾಶಕ್ತಿ. ಈ ಮೂರೂ ಶಕ್ತಿಗಳು ಮಾನವನಲ್ಲಿ ಇದ್ದರೂ ಅವಿದ್ಯೆಯ ಕಾರಣ ಆತ ಇಚ್ಛಾಶಕ್ತಿಯನ್ನು ಕಳೆದುಕೊಂಡು ತನ್ನನ್ನು ಅಣು (ಅಲ್ಪ) ಎಂದು ತಿಳಿದಿದ್ದಾನೆ. ಅವಿದ್ಯೆ ಎಂದರೆ ತನ್ನೊಳಗೆ ದೇವರಿದ್ದಾನೆ ಎಂಬುದರ ಮರೆವು. ಹೀಗೆ ತನ್ನನ್ನು ಕನಿಷ್ಠ ಎಂದು ತಿಳಿಯುವುದೂ ಒಂದು ಮಲವೇ. ಈ ಮಲಕ್ಕೆ ‘ಆಣವಮಲ’ ಎನ್ನುವರು. ಸಂಕುಚಿತ ಭಾವದಿಂದ ತನ್ನ ಜ್ಞಾನಶಕ್ತಿಯನ್ನು ಅರಿಯದೆ ತಾನು, ತನ್ನ ಜನ, ತನ್ನ ಜಾತಿ, ತನ್ನ ಧರ್ಮ ಎಂದು ಮೋಹಕ್ಕೆ ಒಳಗಾಗುವುದಕ್ಕೆ ‘ಮಾಯಾಮಲ’ ಎನ್ನುವರು. ಕ್ರಿಯಾಶಕ್ತಿಯನ್ನು ಕುಂಠಿತಗೊಳಿಸುವ ಮಲಕ್ಕೆ ಕಾರ್ಮಿಕ ಮಲ ಎನ್ನುವರು. ಈ ದೋಷಗಳಿಂದ ರೋಗರುಜಿನಗಳು ಬಂದು ಶರೀರವು ಅವುಗಳಿಂದ ಬಂಧನಕ್ಕೊಳಗಾಗಿ ಸಾವಿನ ದಾರಿ ಹಿಡಿಯುವುದು. ಆರೋಗ್ಯವನ್ನು ಕಾಪಾಡುವುದಕ್ಕಾಗಿ ಮೂರು ಬೇರು ತಂದೆ. ಕ್ರಿಯಾಚಾರವೆಂಬ ಬೇರನ್ನು ಶರೀರಕ್ಕೆ ತಿಕ್ಕಿದಾಗ ಕಾಮನೆಗಳು ನಾಶವಾಗಿ ಇಚ್ಛಾಶಕ್ತಿ ಬರುವುದು. ಭಾವಾಚಾರವೆಂಬ ಬೇರಿನಿಂದ ಆತ್ಮಮಥನ ಮಾಡಿದಾಗ ಮಾಯೆ ಹರಿದು ಜ್ಞಾನಶಕ್ತಿ ಬರುವುದು. ಜ್ಞಾನಾಚಾರವೆಂಬ ಬೇರನ್ನು ಅರಿವಿನಲ್ಲಿ ಕೂಡಿಸಿ ಕುಡಿದಾಗ ಕರ್ಮ ಹರಿದು ಕ್ರಿಯಾಶಕ್ತಿ ಬರುವುದು. ಇದಕ್ಕೆ ಪಥ್ಯವಿಲ್ಲ ಎಂದು ದೇವರ ಸಾಕ್ಷಿಯಾಗಿ ವೈದ್ಯ ಸಂಗಣ್ಣನವರು ಹೇಳಿದ್ದಾರೆ.

ಪರಿಶುದ್ಧವಾದ ಮನಸ್ಸು ಪರಿಶುದ್ಧವಾದ ದೇಹವನ್ನು ಹೊಂದುವುದು. ಹೀಗೆ ಶರೀರಕ್ಕೆ ಬರುವ ತ್ರಿದೋಷಗಳ ಮೂಲವು ಮಲತ್ರಯಗಳಿಂದ ಕೂಡಿದ ಮನಸ್ಥಿತಿಯಲ್ಲೇ ಇದೆ ಎಂಬ ರಹಸ್ಯವನ್ನು ಭೇದಿಸಿದವರು ಬಸವಣ್ಣನವರ ಸಮಕಾಲೀನರಾದ ವೈದ್ಯ ಸಂಗಣ್ಣನವರು. ಆರೋಗ್ಯಪೂರ್ಣ ಮನಸ್ಸು ಆರೋಗ್ಯಪೂರ್ಣ ಶರೀರವನ್ನು ಬಯಸುತ್ತದೆ. ದುರ್ಬಲ ಮನಸ್ಸು ಶರೀರವನ್ನು ದುರ್ಬಲಗೊಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News