ಹಲೋ ಮಾಮಾ: ಮಾಮಂದಿರಿಗೆ ಪಂಗನಾಮ..!

Update: 2018-05-13 11:16 GMT
Editor : ಶಶಿಕರ

ಚಿತ್ರದ ಹೆಸರು ಮತ್ತು ಟ್ರೇಲರ್‌ಗಳ ಮೂಲಕ ಪಡ್ಡೆಗಳ ಗಮನ ಸೆಳೆಯುವಲ್ಲಿ ನಿರ್ದೇಶಕ ಎಸ್ ಮೋಹನ್ ಯಶಸ್ವಿಯಾಗಿದ್ದರು. ಆದರೆ ಅಂಥದೊಂದು ನಿರೀಕ್ಷೆಯಲ್ಲಿ ಚಿತ್ರ ಮಂದಿರಕ್ಕೆ ಬಂದವರಿಗೆ ಸಿಕ್ಕ ಸಿನೆಮಾ ಹೇಗಿತ್ತು ಎನ್ನುವ ಬಗ್ಗೆ ಎಲ್ಲರಿಗೂ ಕುತೂಹಲ ಸಹಜ.

ನಾಲ್ಕು ಮಂದಿ ಅವಿವಾಹಿತ ಸ್ನೇಹಿತರು ಒಂದೇ ಮನೆಯಲ್ಲಿ ವಾಸಿಸಿರುತ್ತಾರೆ. ಅವರಲ್ಲಿ ಒಬ್ಬಾತನ ಹೆಸರು ವಿಜಯ್. ಸಭ್ಯ ಯುವಕ. ಆದರೆ ಪರಿಸ್ಥಿತಿ ಆತನಿಂದ ಅಸಭ್ಯ ಕೆಲಸಗಳನ್ನು ಮಾಡಿಸುತ್ತದೆ. ವಿಜಯ್ ರಿಯಲ್ ಎಸ್ಟೇಟ್ ಸಂಸ್ಥೆಯೊಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿರುತ್ತಾನೆ. ಆದರೆ ಆತನ ಬಾಸ್ ವಿಜಯ್ ಮೂಲಕ ನಿತ್ಯವೂ ವೇಶ್ಯೆಯರನ್ನು ಕರೆಸುತ್ತಿರುತ್ತಾನೆ. ಹಾಗಾಗಿ ಆತನಿಗೆ ಮಾಮ ಎಂಬ ಹೆಸರು ಬೀಳುತ್ತದೆ. ಇದು ವಿಜಯ್‌ಗೆ ಇಷ್ಟವಿಲ್ಲದ ಕೆಲಸ. ಆದರೆ ಆ ಕೆಲಸ ಮಾಡದಿದ್ದರೆ ತಾನು ನೀಡಿರುವ ಹದಿನೈದು ಲಕ್ಷ ಸಾಲವನ್ನು ತಕ್ಷಣ ವಾಪಾಸು ನೀಡುವಂತೆ ಒತ್ತಾಯಿಸುತ್ತಿರುತ್ತಾನೆ ಬಾಸ್. ಆದರೆ ತಕ್ಷಣಕ್ಕೆ ಹಿಂದಿರುಗಿಸಲು ಅಷ್ಟು ದುಡ್ಡು ಇರದ ಕಾರಣ ಅನಿವಾರ್ಯವಾಗಿ ಅದೇ ಕೆಲಸದಲ್ಲಿ ಮುಂದುವರಿಯುತ್ತಾನೆ ವಿಜಯ್. ಅಂದ ಹಾಗೆ ತನ್ನ ಸಹೋದರಿಯ ಮದುವೆಗಾಗಿ ವಿಜಯ್ ಬಾಸ್‌ನ ಬಳಿ ಅಷ್ಟು ಮೊತ್ತದ ಸಾಲ ಮಾಡಿರುತ್ತಾನೆ ಎಂಬ ಸಾಫ್ಟ್ ಕಾರ್ನರ್ ಕೂಡ ಪ್ರೇಕ್ಷಕರಿಗೆ ವಿಜಯ್ ಮೇಲೆ ಇರುತ್ತದೆ. ಹೀಗೆ ಸಾಗುವ ಕತೆಯಲ್ಲಿ ವಿಜಯ್‌ಗೆ ಒಬ್ಬ ಹುಡುಗಿಯೊಂದಿಗೆ ಪ್ರೀತಿಯಾಗುತ್ತದೆ. ಸಂಪ್ರದಾಯಸ್ಥ ಮನೆತನದಿಂದ ಬಂದ ಹೆಣ್ಣಿನಂತೆ ತೋರುವ ಆ ಯುವತಿ ಕೂಡ ವಿಜಯ್‌ನ ಪ್ರೀತಿಯನ್ನು ಒಪ್ಪುತ್ತಾಳೆ. ಆದರೆ ಒಂದು ದಿನ ವಿಜಯ್‌ನ ಕಣ್ಣಿಗೆ ಆ ದೃಶ್ಯ ಬೀಳುತ್ತದೆ. ಬಾಸ್ ಮನೆಯಿಂದ ತಾನು ಪ್ರೀತಿಸಿದ ಹುಡುಗಿ ಹೊರಬರುವುದನ್ನು ಕಾಣುತ್ತಾನೆ. ಆಗ ಆಘಾತಕ್ಕೊಳಗಾಗುವ ವಿಜಯ್ ಮುಂದೆ ಯಾವ ರೀತಿ ವರ್ತಿಸುತ್ತಾನೆ ಎನ್ನುವುದೇ ಚಿತ್ರದ ಕ್ಲೈಮ್ಯಾಕ್ಸ್.

 ನಿಜವಾಗಿ ನೋಡಿದರೆ ಚಿತ್ರದ ಪ್ರಮುಖ ತಿರುಳೇ ಅಂಥದೊಂದು ತಿರುವಿನ ಬಳಿಕ ಅಡಗಿಕೊಂಡಿದೆ. ಅದೇನು ಎನ್ನುವುದಕ್ಕಾಗಿ ಥಿಯೇಟರ್‌ಗೆ ಹೋಗಿ ಚಿತ್ರ ನೋಡುವುದು ಖಂಡಿತವಾಗಿ ತಪ್ಪಲ್ಲ. ಟ್ರೇಲರ್ ಮೂಲಕ ಸಂಭಾಷಣೆ, ದೃಶ್ಯಗಳಲ್ಲಿ ದ್ವಂದ್ವಾರ್ಥ ತೋರಿಸಿ ಪ್ರೇಕ್ಷಕರನ್ನು ಆಕರ್ಷಿಸುವ ಪ್ರಯತ್ನ ಮಾಡಿದ್ದರು ಮೋಹನ್. ‘ಸಿಂಪಲ್ಲಾಗಿ ಒಂದು ಲವ್ ಸ್ಟೋರಿ’ ಚಿತ್ರದಲ್ಲಿ ಸುನಿ ಮಾಡಿದ್ದಂತಹ ಆ ಪ್ರಯೋಗ ಇಲ್ಲಿ ಯಶಸ್ವಿಯಾದಂತೆ ಕಾಣುತ್ತಿಲ್ಲ. ಮಾತ್ರವಲ್ಲ ಕತೆಯ ಮೊದಲಾರ್ಧ ಈ ಹಿಂದೆ ಕಳ್ಳ ಮಳ್ಳ ಸುಳ್ಳ ಮೊದಲಾದ ಚಿತ್ರಗಳಲ್ಲಿ ಕಂಡಂತಹ ಸವಕಲು ಸನ್ನಿವೇಶಗಳೇ ತುಂಬಿಕೊಂಡಿವೆ.

ಹಾಸ್ಯವೂ ಕೂಡ ವಿಶೇಷ ಎನಿಸುವುದಿಲ್ಲ. ಸಂಭಾಷಣೆಕಾರರಾಗಿ ಮೋಹನ್ ಕೆಲವೊಂದು ಗಂಭೀರ ಸಂಭಾಷಣೆಗಳ ಮೂಲಕ ಮನಗೆಲ್ಲುತ್ತಾರೆ. ಮುಖ್ಯವಾಗಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಯಾರೂ ಊಹಿಸಿರದಂಥ ಟ್ವಿಸ್ಟ್ ನೀಡುವ ಮೂಲಕ ಕತೆಗಾರರಾಗಿ ಮೋಹನ್ ಗೆದ್ದಿದ್ದಾರೆ. ಆ ಟ್ವಿಸ್ಟ್ ನ ಮೂಲಕ ನಟ ಅರವಿಂದ ರಾವ್ ಪಾತ್ರದ ತೂಕ ಹೆಚ್ಚಾಗಿದೆ. ಆದರೆ ವಿಜಯ್ ಪಾತ್ರದಲ್ಲಿ ಮೋಹನ್ ವಿಶೇಷ ಅನಿಸುವುದಿಲ್ಲ. ವಯಸ್ಸಾದ ಸ್ಟಾರ್‌ಗಳನ್ನು ನಾಯಕರಾಗಿ ಒಪ್ಪುವ ಪ್ರೇಕ್ಷಕರು ಇರುತ್ತಾರೆ. ಆದರೆ ಪೋಷಕ ನಟರಾಗಿ ನಟಿಸುವವರಿಗೆ ತುಸು ವಯಸ್ಸಾದರೂ ಅವರನ್ನು ಪ್ರೇಮ ದೃಶ್ಯಗಳಲ್ಲಿ ಒಪ್ಪಿಕೊಳ್ಳುವುದು ಕಷ್ಟವಾಗುತ್ತದೆ. ಆದರೆ ನಿರ್ದೇಶಕ ಮೋಹನ್ ಅದನ್ನು ಮರೆತ ಹಾಗಿದ್ದಾರೆ. ನಾಯಕಿಯ ಆಯ್ಕೆಯಲ್ಲಿಯೂ ಎಡವಿದಂತೆ ಕಾಣುತ್ತಾರೆ. ಆದರೆ ಅರವಿಂದ್ ಜೋಡಿಯಾಗಿ ಭೂಮಿಕಾ ನೆನಪಿರಿಸುವಂತಹ ನಟನೆ ನೀಡಿದ್ದಾರೆ. ಮೋಹನ್ ನಟನೆಯ ಪ್ರೇಮಗೀತೆಯೊಂದು ಮಾಧುರ್ಯದಿಂದ ಮನ ಸೆಳೆಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ವೇಶ್ಯೆಯರನ್ನೇ ಪ್ರಮುಖವಾಗಿಸಿ ಚಿತ್ರ ಮಾಡಿದ್ದರೂ ಒಂದು ಹಂತ ದಾಟಿದಂಥ ದೃಶ್ಯಗಳನ್ನಾಗಲೀ, ಐಟಂ ಡ್ಯಾನ್ಸ್ ಗಳನ್ನಾಗಲೀ ತುರುಕಿ ಚಿತ್ರವನ್ನು ಕುಲಗೆಡಿಸಿಲ್ಲ ಎಂಬುವುದಕ್ಕಾಗಿಯಾದರೂ ತಂಡದ ಪ್ರಯತ್ನವನ್ನು ಮೆಚ್ಚಬೇಕು.

ತಾರಾಗಣ: ಎಸ್. ಮೋಹನ್, ಅರವಿಂದ್
ನಿರ್ದೇಶನ: ಎಸ್. ಮೋಹನ್
ನಿರ್ಮಾಣ: ಬಿ.ಕೆ. ಚಂದ್ರಶೇಖರ್

Writer - ಶಶಿಕರ

contributor

Editor - ಶಶಿಕರ

contributor

Similar News