ದಿಲ್ಲಿ ದರ್ಬಾರ್
ಸ್ಮತಿ ಪ್ಲಾನ್ ಏನು?
ಮಾಹಿತಿ ಮತ್ತು ಪ್ರಸಾರ ಖಾತೆಯ ಮಾಜಿ ಸಚಿವೆ ಸ್ಮತಿ ಇರಾನಿ, ಕೇನ್ಸ್ ಅಂತರ್‌ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾರತೀಯ ನಿಯೋಗ ಮುನ್ನಡೆಸಲು ತುದಿಗಾಲಲ್ಲಿ ನಿಂತಿದ್ದರು ಎಂಬ ವಿಷಯ ಇದೀಗ ಬಹಿರಂಗವಾಗಿದೆ. ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲೊಂದು. ಟ್ವಿಸ್ಟ್ ಇರುವುದೇ ಇಲ್ಲಿ. ಭಾರತೀಯ ಚಿತ್ರರಂಗವನ್ನು ವಿಶ್ವಮಟ್ಟದಲ್ಲಿ ಪ್ರತಿನಿಧಿಸುತ್ತಿರುವುದು ಸಚಿವೆಗೆ ಹೆಮ್ಮೆಯ ಸಂಗತಿ. ಆದರೆ ಇರಾನಿಯವರಿಗೆ ಇದು ಸಾಧ್ಯವಾಗಲಿಲ್ಲ. ಇದರ ಬದಲಾಗಿ, ದಿಲ್ಲಿಯಲ್ಲಿ ನಡೆದ ಏಶ್ಯಾ ಮಾಧ್ಯಮಶೃಂಗದಲ್ಲಿ ಭಾಗವಹಿಸುವಂತೆ ಅವರಿಗೆ ಸೂಚಿಸಲಾಗಿತ್ತು. ಕೆಲ ಮೂಲಗಳ ಪ್ರಕಾರ ಈ ಸೂಚನೆ ಬಂದದ್ದು ಖುದ್ದು ಪ್ರಧಾನಿ ಕಚೇರಿಯಿಂದಲೇ. ಇದು ಇರಾನಿಯವರಿಗೆ ಪಥ್ಯವಾಗಲಿಲ್ಲ. ಆದರೆ ಅದಕ್ಕಿಂತ ದೊಡ್ಡ ದುರಂತವೆಂದರೆ, ಕೆಲ ದಿನಗಳ ಬಳಿಕ, ಕೇವಲ ಜವಳಿ ಸಚಿವಾಲಯದ ಬಗ್ಗೆಯೇ ಪೂರ್ಣ ಗಮನ ಹರಿಸುವಂತೆ ಮೋದಿ ಸೂಚಿಸಿದರು. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಂಪೂರ್ಣ ಹೊಣೆಯನ್ನು ರಾಜ್ಯವರ್ಧನ್ ರಾಥೋಡ್ ಅವರಿಗೆ ವಹಿಸಲಾಯಿತು. ಇನ್ನು ಸ್ಮತಿ ಇರಾನಿ ನಮ್ಮ ಸಚಿವೆಯಲ್ಲ ಎಂದು ತಿಳಿದ ಸಚಿವಾಲಯ ಸಿಬ್ಬಂದಿ ಬಹುಶಃ ಕೇಕ್ ಕತ್ತರಿಸಿ ಸಂಭ್ರಮಿಸಿರಬೇಕು.
ಕಮಲ್‌ನಾಥ್‌ಗೆ ವಯಸ್ಸಾಯಿತೇ?
ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷರಾಗಿ ಹೊಸದಾಗಿ ನೇಮಕಗೊಂಡ ಕಮಲ್‌ನಾಥ್ ಅವರಿಗೆ ವಯಸ್ಸಾಗಿತ್ತು ಎನ್ನುವುದನ್ನೇ ಬಿಜೆಪಿ ಪ್ರಚಾರ ಮಾಡುತ್ತಿರುವ ಬಗ್ಗೆ ನಿಜಕ್ಕೂ ಅಚ್ಚರಿಯಾಗಿದೆ. ನಾಥ್ ಅವರಿಗೆ ಈಗ 71. ಆದರೆ ತಾವಿನ್ನೂ ಯುವಕರು ಅಂದುಕೊಳ್ಳಲು ಖಂಡಿತಾ ಕಾರಣಗಳಿವೆ. ಒಂಬತ್ತು ಬಾರಿ ಚಿದ್ವಾರ ಕ್ಷೇತ್ರದಿಂದ ಆಯ್ಕೆಯಾಗಿರುವ ನಾಥ್ ಅವರ ಕಡುಗಪ್ಪುಕೂದಲು ಅವರ ತಾರುಣ್ಯಕ್ಕೆ ಹಿಡಿದ ಕನ್ನಡಿ ಎನ್ನುವುದು ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರ ವಾದ. ಅಷ್ಟು ಮಾತ್ರವಲ್ಲದೇ ನಾಥ್ ದಿನಕ್ಕೆ 16 ಗಂಟೆ ಕೆಲಸ ಮಾಡುವುದಕ್ಕೂ ಹೆಸರುವಾಸಿ. ಎಡೆಬಿಡದ ಪ್ರಚಾರ ಸಂದರ್ಭದಲ್ಲಿ ಕೇವಲ ಕಾಫಿ ಮತ್ತು ಚ್ಯೂಯಿಂಗ್ ಗಮ್ ಸವಿಯುತ್ತಾ ದೀರ್ಘಕಾಲದವರೆಗೂ ಇರಬಲ್ಲರು. ರಾಜ್ಯದಲ್ಲಿ ಕಾಂಗ್ರೆಸಿಗರಿಗೆ ವೃದ್ಧಾಪ್ಯಗೃಹ ನಿರ್ಮಿಸುವ ಸಲುವಾಗಿ ಅವರಿಗೆ ಅಧ್ಯಕ್ಷ ಪಟ್ಟ ಕಟ್ಟಲಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ಲೇವಡಿ ಮಾಡಿದ್ದಾರೆ. ಇಂಥ ಹಲವು ಅಣಕಗಳು ರಾಜ್ಯದಲ್ಲಿ ಹರಿದಾಡುತ್ತಿವೆ. ನಿರೀಕ್ಷೆಯಂತೆ ನಾಥ್ ಅವರು ಇಂಥ ಪ್ರಶ್ನೆಗಳನ್ನು ಎದುರಿಸಲೇಬೇಕಾಗಿದೆ. ವಾಸ್ತವವೆಂದರೆ, ಇಂಥ ಪ್ರಶ್ನೆಗಳಿಗೆ ಉತ್ತರಿಸಿಯೇ ಅವರು ಸುಸ್ತಾಗಿದ್ದಾರೆ!
ಜೈರಾಮ್ ಪುನರಾಗಮನ
ಮೈಕೊಡವಿಕೊಂಡು ಕಾಂಗ್ರೆಸ್ ಪಕ್ಷ ಮುಂದಿನ ಸಾರ್ವತ್ರಿಕ ಚುನಾವಣೆಗೆ ದೊಡ್ಡ ರೀತಿಯಲ್ಲಿ ಸಜ್ಜಾಗುತ್ತಿದೆ. 2019ರ ಮಹಾಯುದ್ಧಕ್ಕಾಗಿ ಈಗಾಗಲೇ ಹಲವು ಸಮಿತಿ, ನಿಯೋಗಗಳನ್ನು ರಚಿಸಲಾಗಿದೆ. ಹಳೆಹುಲಿಗಳಿಗೆ ಬುಲಾವ್ ನೀಡಲಾಗಿದೆ. ಅಂಥವರಲ್ಲಿ ಜೈರಾಂ ರಮೇಶ್ ಕೂಡಾ ಒಬ್ಬರು. 2004 ಮತ್ತು 2009ರ ಸಾರ್ವತ್ರಿಕ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವಲ್ಲಿ ಪ್ರಧಾನ ಪಾತ್ರವನ್ನು ಇವರು ನಿರ್ವಹಿಸಿದ್ದರು. ‘ಕಾಂಗ್ರೆಸ್ ಕಾ ಹಾಥ್, ಆಮ್ ಆದ್ಮಿ ಕಾ ಸಾಥ್’ನಂಥ ಆಕರ್ಷಕ ಘೋಷಣೆಗಳು ಜೈರಾಂ ಕೊಡುಗೆ. ಮುಂದಿನ ಮಹಾಯುದ್ಧಕ್ಕಾಗಿ ಅವರನ್ನು ಸಂಯೋಜಕರಾಗಿ ನೇಮಕ ಮಾಡಲಾಗಿದೆ. ಪಕ್ಷದ ಯುದ್ಧ ಕೊಠಡಿಯನ್ನು ಗುರುದ್ವಾರ ರಕಬ್‌ಗಂಜ್ ಮಾರ್ಗದ ಕೊಠಡಿ ಸಂಖ್ಯೆ 15ರಲ್ಲಿ ಆರಂಭಿಸಲು ಅವರಿಗೆ ಹಸಿರು ನಿಶಾನೆಯೂ ದೊರಕಿದೆ. ಕಾಂಗ್ರೆಸ್ ಪಕ್ಷದ ಮೇಲೆ ದಾಳಿಗಾಗಿ ಬಿಜೆಪಿಗೆ ಅಸ್ತ್ರವನ್ನು ಒದಗಿಸಿಕೊಡುತ್ತಾರೆ ಎಂಬ ಆಪಾದನೆಯೂ ಅವರ ಮೇಲಿದೆ. ಆದರೆ ಅವರು ಬಾಯಿ ಮುಚ್ಚಿಕೊಂಡು ಕೆಲಸ ಮಾಡುತ್ತಾರೆಯೇ ಅಥವಾ ಮಾತನಾಡುತ್ತಾ ಕೆಲಸ ಮಾಡುತ್ತಾರೆಯೇ ಎಂದು ಕಾದುನೋಡಬೇಕಾಗಿದೆ.
ಸಿಂಘ್ವಿ ಕಾಂಗ್ರೆಸ್‌ನ ‘ಏಸ್’
ಕರ್ನಾಟಕದಲ್ಲಿ ಸರಕಾರ ರಚನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸಮರ್ಥ ರಾಜಕೀಯ ಮತ್ತು ಕಾನೂನು ಹೋರಾಟ ನಡೆಸಿದೆ. ಅನಿರೀಕ್ಷಿತ ಸೋಲಿನಿಂದ ನೈತಿಕ ಬಲ ಕಳೆದುಕೊಂಡಿರುವ ಪಕ್ಷದ ಕಾರ್ಯಕರ್ತರಲ್ಲಿ ಮತ್ತೆ ಹೋರಾಟದ ಕೆಚ್ಚು ಮೂಡಿಸಲು ಬಿಜೆಪಿ ಒದಗಿಸಿಕೊಟ್ಟ ಅವಕಾಶ ಎಂದೇ ಚುನಾವಣಾ ನಂತರದ ಘಟನಾವಳಿಗಳನ್ನು ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟಕ್ಕೆ ಸರಕಾರ ರಚನೆಗೆ ಆಹ್ವಾನ ನೀಡದ ರಾಜ್ಯಪಾಲರ ಕ್ರಮದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಸಿದ್ಧರಾಗಿರುವಂತೆ ಅಭಿಷೇಕ್ ಸಿಂಘ್ವಿ ನೇತೃತ್ವದ ಕಾನೂನು ತಜ್ಞರ ತಂಡಕ್ಕೆ ಸೂಚನೆ ನೀಡಿದ ಬೆನ್ನಲ್ಲೇ, ಬಿಜೆಪಿಯನ್ನು ಸೋಲಿಸಲು ಪಕ್ಷ ವಿಫಲವಾದ ಹಿನ್ನೆಲೆಯಲ್ಲಿ, ಸುಲಲಿತವಾಗಿ ಅಧಿಕಾರ ಹಸ್ತಾಂತರ ಮಾಡಬೇಕಿತ್ತು ಎಂಬ ಅಭಿಪ್ರಾಯವನ್ನು ಹಲವು ಮುಖಂಡರು ವ್ಯಕ್ತಪಡಿಸಿದ್ದಾರೆ. ಕಾನೂನಾತ್ಮಕ ಹೋರಾಟದ ಮೂಲಕ ಕಾರ್ಯಕರ್ತರ ಮುಳುಗುವ ಭಾವನೆಯನ್ನು ಮತ್ತಷ್ಟು ಆಳಗೊಳಿಸಲಾಗಿದೆ ಎಂಬ ಅಭಿಪ್ರಾಯ ಹಿರಿಯ ಮುಖಂಡರದ್ದು. ಆದರೆ ಕಾಂಗ್ರೆಸ್‌ನ ಚುನಾವಣಾ ಕಾರ್ಯತಂತ್ರಗಳ ಬಗ್ಗೆ ಹೊಂದಿದ್ದ ಆತಂಕ ತಕ್ಷಣವೇ ಮಾಯವಾಯಿತು. ಯಾವ ವಿಳಂಬಕ್ಕೂ ಅವಕಾಶವಿಲ್ಲದಂತೆ ಸಿಂಘ್ವಿ ಸುಪ್ರೀಂಕೋರ್ಟ್‌ನ ಕದ ತಟ್ಟಿದ್ದು ಕಾರ್ಯಕರ್ತರಲ್ಲಿ ಮಿಂಚಿನ ಸಂಚಲನಕ್ಕೆ ಕಾರಣವಾಯಿತು. ಪಕ್ಷ ಹೋರಾಡದೆ ಸೋಲುವುದಿಲ್ಲ ಎನ್ನುವುದನ್ನು ಪಕ್ಷದ ಮುಖಂಡರಿಗೆ ದೃಢಪಡಿಸಿತು. ಸಂವಿಧಾನದ ಯಾವುದೇ ಪುಟಗಳನ್ನಾದರೂ ಭಿತ್ತಿಪಟದಲ್ಲಿ ಅಚ್ಚೊತ್ತಿಕೊಂಡಿರುವ ಹೆಗ್ಗಳಿಕೆ ಸಿಂಘ್ವಿಯವರದ್ದು. ಕೆಲ ವರ್ಷಗಳಿಂದ ಮಬ್ಬುಗೊಳ್ಳುತ್ತಿರುವ ಅವರ ವರ್ಚಸ್ಸು ಮತ್ತೆ ಪ್ರಖರವಾಗುತ್ತಿದೆ.
ಆದಿತ್ಯನಾಥ್ ಬೇಸರ
ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಮಂಗಳವಾರ ಬರಲಾರಂಭಿಸಿದಾಗ, ಬಹುಮತದತ್ತ ಬಿಜೆಪಿ ದಾಪುಗಾಲು ಹಾಕುತ್ತದೆ ಎಂಬ ಸುಳಿವು ಕಂಡುಬಂದಿತ್ತು. ಪಕ್ಷದ ಉತ್ತರ ಪ್ರದೇಶ ಘಟಕ ಭಾರೀ ಸಂಭ್ರಮಾಚರಣೆಯನ್ನೂ ಘೋಷಿಸಿತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡಾ ಇದರಲ್ಲಿ ಪಾಲ್ಗೊಳ್ಳುತ್ತಾರೆ ಎಂಬ ಸುದ್ದಿ ಹಬ್ಬಿತು. ಏಕೆಂದರೆ ಅವರು ಕೂಡಾ ಬಿಜೆಪಿಯ ಸ್ಟಾರ್ ಪ್ರಚಾರಕರಲ್ಲಿ ಸೇರಿದ್ದರು. ಆದ್ದರಿಂದ ವಿಜಯದಲ್ಲಿ ತಮ್ಮ ಪಾತ್ರವೂ ಇದೆ ಎಂದು ಏಕೆ ಪ್ರತಿಪಾದಿಸಿಕೊಳ್ಳಬಾರದು? ಪಟಾಕಿ, ಸಿಹಿ ಮತ್ತು ಹಾರಗಳನ್ನು ಕೂಡಾ ತರಲಾಯಿತು. ಆದರೆ ಕೆಲವೇ ಗಂಟೆಗಳಲ್ಲಿ ಈ ಸಂಭ್ರಮಾಚರಣೆಯನ್ನು ರದ್ದುಪಡಿಸಲಾಯಿತು. ಅರ್ಧದಷ್ಟು ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿ, ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಸರಕಾರ ರಚನೆಗೆ ಬೆಂಬಲ ನೀಡುವುದಾಗಿ ಘೋಷಿಸಿತು. ಆದ್ದರಿಂದ ಸಂಭ್ರಮ ಮನೆ ಮಾಡಿದ್ದ ಬಿಜೆಪಿ ಪಾಳಯದಲ್ಲಿ ಸೂತಕದ ಛಾಯೆ ಆವರಿಸಿತು. ಇಂಥದ್ದೇ ಘಟನೆ ದಿಲ್ಲಿಯಲ್ಲೂ ನಡೆಯಿತು. ದೊಡ್ಡ ಮಟ್ಟದ ಸಂಭ್ರಮಾಚರಣೆ ರಾಜಧಾನಿಯಲ್ಲೂ ಆರಂಭವಾಯಿತು. ಬ್ಯಾಂಡ್ ಬಾರಿಸುವ ತಂಡಗಳೂ ಆಗಮಿಸಿದವು. ಪರಿಸ್ಥಿತಿ ಹದಗೆಡುತ್ತಿದ್ದಂತೆ, ವಿಜಯಗೀತೆ ನುಡಿಸದೇ, ಬ್ಯಾಂಡ್‌ವಾಲಾಗಳು ಹಿಂದಿರುಗಿದರು.
***